ಬೆಂಗಳೂರು: ರಾಜ್ಯಾದ್ಯಂತ ಇನ್ನೊಂದು ವಾರ ಕಾಲ ಮಳೆಯು (Rain News) ಆರ್ಭಟಿಸಲಿದೆ. ಮೇ 31ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ಇನ್ನೂ ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಲಘು ಮಳೆಯಾಗಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಗಾಳಿ ವೇಗವು 30-40 kmph ಬೀಸಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಇನ್ನೂ ಮೇಲ್ಮೈ ಮಾರುತಗಳು 40-50 ಕಿ.ಮೀ ವರೆಗೆ ಎಲ್ಲಾ ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.
ತಾಪಮಾನದ ಮುನ್ಸೂಚನೆ
ಮುಂದಿನ 72 ಗಂಟೆಗಳ ಕಾಲ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಯಿಲ್ಲ. ಆದರೆ ಆ ನಂತರ ರಾಜ್ಯಾದ್ಯಂತ 2-3 ಡಿ.ಸೆ ನಷ್ಟು ಕ್ರಮೇಣ ಕುಸಿಯಲಿದೆ.
ಬೆಂಗಳೂರಲ್ಲಿ ಪ್ರಬಲ ಗಾಳಿ
ಬೆಂಗಳೂರು ನಗರ ಮತ್ತು ಸುತ್ತಮುತ್ತದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಮೇಲ್ಮೈ ಗಾಳಿಯು ಪ್ರಬಲವಾಗಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಮತ್ತು 22 ಡಿ.ಸೆ ಇರಲಿದೆ.
ಇದನ್ನೂ ಓದಿ: Love Case : ಪ್ರೇಮಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕೇಸ್; ಯುವತಿ ತಂದೆ ಅರೆಸ್ಟ್
ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ
ಚಳಿಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮೂಗಿನಲ್ಲಿ ರಕ್ತಸ್ರಾವ ಆಗುವುದು ಸಾಮಾನ್ಯ. ಆದರೆ ಹಾಗೇಕಾಗುತ್ತದೆ? ಹಾಗೆ ಆಗದಂತೆ ತಡೆಯುವುದಕ್ಕೆ ಸಾಧ್ಯವಿಲ್ಲವೇ- ಈ ಎಲ್ಲ ಮಾಹಿತಿಗಳ ಜೊತೆಗೆ ಅದನ್ನು ತಡೆಯುವ ಸರಳ (Nosebleeds In Summer) ಉಪಾಯಗಳು ಇಲ್ಲಿವೆ. ಬೇಸಿಗೆಯಲ್ಲಿ ಕಾಡುವ ಹಲವು ರೀತಿಯ ಆರೋಗ್ಯ ಸಮಸ್ಯೆಗಳ ಪೈಕಿ ಮೂಗಿನಲ್ಲಿ ರಕ್ತ ಸೋರುವುದೂ ಒಂದು. ಅತಿ ಬಿಸಿಯಾದ ಮತ್ತು ಶುಷ್ಕ ವಾತಾವರಣವಿದ್ದಾಗ ಈ ಸಮಸ್ಯೆ ಕಾಡುವುದು ಹೆಚ್ಚು. ಅತಿಯಾದ ಚಳಿಯ ಜೊತೆಗಿನ ಒಣ ಹವೆ ಇದ್ದರೂ ಈ ತೊಂದರೆ ಕಾಡಬಹುದು. ಆದರೆ ಹೆಚ್ಚಿನ ಜನ ಬೇಸಿಗೆಯಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಅಲ್ಪಸ್ವಲ್ಪ ರಕ್ತ ಸೋರುತ್ತಿದ್ದರೆ ಇದನ್ನು ತಡೆಯುವುದಕ್ಕೆ ಕೆಲವು ಮನೆಮದ್ದುಗಳು ಸಹಾಯ ಮಾಡಬಹುದು. ಆದರೆ ಮೂಗಿನಲ್ಲಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ವೈದ್ಯರನ್ನು ಕಾಣಬೇಕಾದೀತು. ಮೂಗಿನಲ್ಲಿ ರಕ್ತ ಸೋರುವುದಕ್ಕೆ ಕಾರಣಗಳನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಒಣಗಿದ ಬಿಸಿ ಹವೆಯಿಂದಾಗಿ ಮೂಗಿನ ಒಳ ಭಾಗದಲ್ಲಿರುವ ಸೂಕ್ಷ್ಮ ರಕ್ತನಾಳಗಳು ಒಡೆದಾಗ ಉಂಟಾಗುವ ಸಮಸ್ಯೆಯಿದು. ಕೆಲವೊಮ್ಮೆ ಸೋಂಕಿನಿಂದಲೂ ಈ ಸಮಸ್ಯೆ ಕಾಣಬಹುದು. ಅತಿಯಾಗಿ ರಕ್ತಸ್ರಾವ ಆಗುತ್ತಿದ್ದರೆ, ಬೇರೆಯದೇ ಸಮಸ್ಯೆಯನ್ನಿದು ಸೂಚಿಸಬಹುದು. ಆದರೆ ಬೇಸಿಗೆಯ ಕಾರಣದಿಂದಲೇ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ, ಕೆಲವು ಮನೆಮದ್ದುಗಳು ಇದಕ್ಕೆ ಉಪಶಮನ ನೀಡುತ್ತವೆ.
ನೀರು ಕುಡಿಯಿರಿ
ಇದಕ್ಕಿರುವ ಅತ್ಯಂತ ಸರಳವಾದ ಮದ್ದೆಂದರೆ ನೀರು ಕುಡಿಯುವುದು. ಹೆಚ್ಚಿನ ನೀರು ದೇಹ ಸೇರಿದಂತೆ ಕೋಶಗಳಲ್ಲಿರುವ ಶುಷ್ಕತೆ ಕಡಿಮೆಯಾಗುತ್ತದೆ. ಇದರಿಂದ ಮೂಗಿನಲ್ಲಿರುವ ಮ್ಯೂಕಸ್ ಕೋಶಗಳು ಸಹ ತಮ್ಮ ತೇವವನ್ನು ಕಾಪಿಟ್ಟುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಅಂದರೆ, ಒಣ ಹವೆಯ ಪ್ರತಿಕೂಲ ಪರಿಣಾಮ ಬೀರದಂತೆ ತಡೆಯುವುದಕ್ಕೆ ಇದು ಸುಲಭದ ಉಪಾಯ.
ಹ್ಯುಮಿಡಿಫಯರ್
ಬೇಸಿಗೆಯ ನೆವದಿಂದ ಎಷ್ಟೋ ಬಾರಿ ಅತಿಯಾಗಿ ಫ್ಯಾನ್ ಅಥವಾ ಎಸಿ ಬಳಸುತ್ತೇವೆ. ಇದರಿಂದ ಮನೆಯ ಅಥವಾ ಕಚೇರಿಯ ವಾತಾವರಣದಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ನೈಸರ್ಗಿಕವಾದ ಬಿಸಿ ಗಾಳಿಯ ಜೊತೆಗೆ ಇದೂ ಸಹ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ ವಾತಾವರಣದ ತೇವಾಂಶವನ್ನು ಹೆಚ್ಚಿಸುವಂಥ ಹ್ಯುಮಿಡಿಫಯರ್ ಬಳಸುವುದು ಇನ್ನೊಂದು ಮಾರ್ಗ. ಇದರಿಂದ ಮೂಗಿನ ಅಂಗಾಂಶಗಳು ಹಾನಿಗೊಳ್ಳುವುದನ್ನು ತಡೆಯಬಹುದು.
ಮಾಯಿಶ್ಚರೈಸರ್ ಬಳಕೆ
ಮೂಗಿನ ಒಳ ಭಾಗ ಒಣಗಿ ಬಿರಿಯದಂತೆ ತಡೆಯಲು ಮಾಯಿಶ್ಚರೈಸರ್ ಬಳಕೆ ಮಾಡುವುದು ಉಪಯುಕ್ತ. ಇದಕ್ಕಾಗಿ ಇರುವ ಜೆಲ್ ಇಲ್ಲವೇ ಸ್ಟ್ರೇ ಬಳಸಬಹುದು. ಸಾಲೈನ್ ಸ್ಪ್ರೇ ಬಳಕೆಯೂ ಉಪಯುಕ್ತವಾದೀತು. ಇವನ್ನೆಲ್ಲ ಹೊಸದಾಗಿ ಖರೀದಿಸಿ ತರುವಷ್ಟು ವ್ಯವಧಾನ ಇಲ್ಲದಿದ್ದರೆ, ಸರಳವಾಗಿ ಕೊಬ್ಬರಿ ಎಣ್ಣೆಯನ್ನು ಮೂಗಿನ ಒಳಭಾಗದ ಅಂಗಾಂಶಗಳಿಗೆ ಹೆಚ್ಚಿ. ಇದು ಪರಿಣಾಮಕಾರಿಯಾಗಿ ತೇವವನ್ನು ಹಿಡಿದಿಡುತ್ತದೆ.
ಮುಚ್ಚಿಕೊಳ್ಳಿ
ತೀವ್ರ ತಾಪದ ಹೊತ್ತಿನಲ್ಲಿ ಮನೆಯಿಂದ ಹೊರಗೆ ಹೋಗುವಾಗ ಮುಖಕ್ಕೆ ಮಾಸ್ಕ್ ಹಾಕುವುದು ಸಹಾಯಕ. ಇದರಿಂದ ಒಣ ಹವೆಯನ್ನು ಉಸಿರಾಡುವುದು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದು. ತಿಳಿ ಬಣ್ಣದ ದೊಡ್ಡ ಹ್ಯಾಟ್ ಧರಿಸುವುದರಿಂದ ಮುಖದ ಮೇಲೆ ಬಿಸಿಲು ನೇರವಾಗಿ ಬೀಳದಂತೆ ಮಾಡಬಹುದು. ಈ ಕ್ರಮಗಳೆಲ್ಲ ಸಣ್ಣವೇ ಆದರೂ, ಒಟ್ಟಾರೆಯಾಗಿ ಸಮಸ್ಯೆಯನ್ನು ದೂರ ಮಾಡುವಲ್ಲಿ ನೆರವಾಗುತ್ತವೆ.
ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!
ಮಾಡಬೇಡಿ
ಮೂಗನ್ನು ಶುಚಿಗೊಳಿಸುವ ನೆವದಲ್ಲಿ ನಾಸಿಕದ ಮೇಲೆ ಯಾವುದೇ ರೀತಿಯಲ್ಲೂ ತೀರಾ ಒತ್ತಡ ಹಾಕಬೇಡಿ. ಈಗಾಗಲೇ ಮೂಗಿನಲ್ಲಿ ರಕ್ತ ಸೋರುತ್ತಿದ್ದರಂತೂ ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿ. ಮೂಗಿನ ಮೇಲೆ ಒತ್ತಡ ಹಾಕಿದರೆ ಬಿರಿದ ಕೋಶಗಳು ದುರಸ್ತಿಯಾಗುವುದು ನಿಧಾನವಾಗುತ್ತದೆ ಅಥವಾ ಇನ್ನಷ್ಟು ಬಿರಿದು ಸಮಸ್ಯೆಯನ್ನೇ ಸೃಷ್ಟಿಸುತ್ತವೆ. ಅಲರ್ಜಿಗಳನ್ನು ಹತ್ತಿಕ್ಕಿ. ದಿನವಿಡೀ ಜೋರಾಗಿ ಸೀನುತ್ತಲೇ ಇದ್ದರೆ, ಮೂಗು ಸೋರುವಾಗ ರಕ್ತಸ್ರಾವ ಆಗುವುದು ಖಚಿತ.
ಆಹಾರ
ಆರೋಗ್ಯಕರವಾದ ಆಹಾರವನ್ನು ಕಡ್ಡಾಯವಾಗಿ ಪಾಲಿಸಿ. ಸೆಕೆಯ ನೆವವೊಡ್ಡಿ ಅತಿಯಾದ ತಣ್ಣಗಿನ ಪೇಯಗಳನ್ನು ಕುಡಿಯುವುದು, ಐಸ್‌ಕ್ರೀಮ್ ಮೆಲ್ಲುವುದು- ಇವೆಲ್ಲ ಮೂಗಿನ ಸಮಸ್ಯೆಗಳನ್ನು ಹೆಚ್ಚಿಸಬಹುದು; ಗಂಟಲಿನ ಸೋಂಕಿಗೆ, ಶೀತ-ನೆಗಡಿಗೆ ಕಾರಣವಾಗಬಹುದು. ವಿಟಮಿನ್ ಸಿ ಹೆಚ್ಚಿರುವ ಆಹಾರವನ್ನು ವಿಫುಲವಾಗಿ ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ