ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಶುಷ್ಕ ವಾತಾವರಣವೇ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಈ ನಡುವೆ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನ ತೀವ್ರ ಮಟ್ಟದಲ್ಲಿ ಏರಿಕೆ (temperature rising) ಆಗುತ್ತಿದೆ. ಬೆಂಗಳೂರು ನಗರ ಸಹ ಇದಕ್ಕೆ ಹೊರತಾಗಿಲ್ಲ. ಈಗಾಗಲೇ ಗರಿಷ್ಟ ತಾಪಮಾನ 34-35 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದು, ಜನರು ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಸನ್ ಸ್ಟ್ರೋಕ್ ಅಥವಾ ಹೀಟ್ ಸ್ಟ್ರೋಕ್ ಪ್ರಕರಣಗಳು (heat stroke) ಸಹ ಹೆಚ್ಚಳ ಆಗುತ್ತಿದ್ದು, ಮುಂಜಾಗ್ರತೆ ವಹಿಸುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಬೇಸಿಗೆ ತೀವ್ರತೆಯು ಗರಿಷ್ಠ ಮಟ್ಟ ತಲುಪುತ್ತಿದ್ದು, ಸಾರ್ವಕಾಲಿಕ ದಾಖಲೆಯತ್ತ ಸಾಗಿದೆ. ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ಬಿಸಿಲ ಬೇಗೆಯ ಪರಿಣಾಮ ದಾಖಲಾಗುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ಹಾಗೂ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Theft Case : ವೃದ್ಧರೇ ಎಚ್ಚರ.. ನಿಮ್ಮನ್ನು ನೋಡಿಕೊಳ್ಳುವ ನೆಪದಲ್ಲಿ ಕನ್ನ ಹಾಕ್ತಾರೆ ಖತರ್ನಾಕ್ ಲೇಡಿಸ್
ಹೀಟ್ ಸ್ಟ್ರೋಕ್‌ನ ಲಕ್ಷಣಗಳಿವು
- ದೇಹದ ಉಷ್ಣಾಂಶದಲ್ಲಿ ಹಠಾತ್ ಏರಿಕೆ (104 F/ 40 ಡಿಗ್ರಿ ಸೆಲ್ಸಿಯಸ್)
- ವಿಪರೀತ ಬೆವರುವುದು
- ಉಸಿರಾಟದಲ್ಲಿ ಏರಿಳಿತ
- ವಾಕರಿಕೆ ಮತ್ತು ವಾಂತಿ
- ತೀವ್ರ ತಲೆನೋವು
- ಹೃದಯ ಬಡಿತ ಹೆಚ್ಚಳ
- ತೀವ್ರ ರಕ್ತದೊತ್ತಡ (ಹೈ ಬಿಪಿ)
- ಮೂರ್ಛೆ ಹೋಗುವುದು
ಸನ್ ಸ್ಟ್ರೋಕ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ?
⦁ ಹೊರಾಂಗಣ ವ್ಯಾಯಾಮವನ್ನು ಮಿತಿಗೊಳಿಸುವುದು
⦁ ತಿಳಿ ಬಣ್ಣದ ಹಾಗೂ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು
⦁ ಹೆಚ್ಚಿನ ಪ್ರಮಾಣ ನೀರು ಹಾಗೂ ಹಣ್ಣುಗಳ ಸೇವನೆ
⦁ ಮಧ್ಯಾಹ್ನ 12ರಿಂದ 3ರವರೆಗೆ ಓಡಾಟ ಕಡಿಮೆ ಮಾಡುವುದು
⦁ ಬೆಳಗ್ಗೆ 6ರಿಂದ 12ರವರೆಗೆ ಎಲ್ಲಾ ಕೆಲಸ ಮುಗಿಸಿಕೊಳ್ಳುವುದು ಒಳ್ಳೆಯದು
ಹೀಟ್ ಸ್ಟ್ರೋಕ್ ದೇಹದ ಉಷ್ಣತೆಯ ಹೆಚ್ಚಳದಿಂದ ಉಂಟಾಗುವ ಕಾಯಿಲೆಯಾಗಿದೆ. ನಿರ್ಲಕ್ಷ್ಯ ತೋರಿದರೆ ಅಪಾಯ ಕಟ್ಟಿಟ್ಟಬುತ್ತಿ. ಜನಸಾಮಾನ್ಯರು ಆದಷ್ಟು ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ಕನಿಷ್ಠ-ಗರಿಷ್ಟ ತಾಪಮಾನ ಏರಿಕೆ
ಸೋಮವಾರ ರಾಜ್ಯಾದ್ಯಂತ ಒಣ ಹವೆ ಇತ್ತು. ಗರಿಷ್ಠ ಉಷ್ಣಾಂಶ 38.4 ಡಿ.ಸೆ ಕಲಬುರಗಿಯಲ್ಲಿ ದಾಖಲಾದರೆ, ಕನಿಷ್ಠ ಉಷ್ಣಾಂಶ 19.8 ಡಿ.ಸೆ ಮಂಡ್ಯದಲ್ಲಿ ದಾಖಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ