ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ರಾಜ್ಯದಲ್ಲಿ ಶುಷ್ಕ ವಾತಾವರಣವು (Dry Weather) ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ಮುಂದಿನ 3 ದಿನಗಳಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಬಹಳಷ್ಟು (temperature rising) ಸಾಧ್ಯತೆಯಿದೆ. ಜತೆಗೆ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಷ್ಣ ಅಲೆಯ ಪರಿಸ್ಥಿತಿ ಮುಂದುವರಿಯಲಿದೆ.
ಬೆಂಗಳೂರಲ್ಲಿ ಗರಿಷ್ಠ ಉಷ್ಣಾಂಶ ದಾಖಲು
ಮುಂದಿನ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 36 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಲಬುರಗಿಯಲ್ಲಿ ಮುಂದುವರಿದ ತಾಪಮಾನ ಏರಿಕೆ
ರಾಜ್ಯಾದ್ಯಂತ ಒಣಹವೆ ಮುಂದುವರಿದಿದ್ದು, ಕಲಬುರಗಿ ಜಿಲ್ಲೆಯು ಕಾದ ಕೆಂಡವಾಗುತ್ತಿದೆ. ದಿನದಿಂದ ದಿನಕ್ಕೆ ಗರಿಷ್ಠ ತಾಪಮಾವು ಏರಿಕೆ ಆಗುತ್ತಿದೆ. ರಾಜ್ಯದಲ್ಲಿ ಶುಕ್ರವಾರದಂದು ಗರಿಷ್ಠ ಉಷ್ಣಾಂಶ 41.8 ಡಿ.ಸೆ ಕಲಬುರಗಿಯಲ್ಲಿ ದಾಖಲಾಗಿತ್ತು. ಕನಿಷ್ಠ ಉಷ್ಣಾಂಶ 18.8 ಡಿ.ಸೆ ಚಾಮರಾಜನಗರದಲ್ಲಿ(ಎ ಡಬ್ಲ್ಯೂ ಎಸ್) ದಾಖಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 17.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 42.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ರಾಮನಗರ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ನಿಂದ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ರಾಯಚೂರು, ವಿಜಯಪುರ, ಉತ್ತರ ಕನ್ನಡ, ಕೊಪ್ಪಳ, ಕಲಬುರಗಿ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ನಿಂದ 44 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಸಿದೆ.
ಇದನ್ನೂ ಓದಿ: Namma Metro: ಅಡಚಡಣೆಗಾಗಿ ಕ್ಷಮಿಸಿ; ಮೆಟ್ರೋ ಕಾಮಗಾರಿಗಾಗಿ ಈ ರೂಟ್‌ನಲ್ಲಿ 1 ವರ್ಷ ವಾಹನ ಓಡಾಟವಿಲ್ಲ
ಬೇಸಿಗೆ ಎಫೆಕ್ಟ್; ಹೆಚ್ಚಿದ ಬೆಂಕಿ ಅವಘಡ
ರಾಯಚೂರಿನ 220 ಕೆವಿ ವಿದ್ಯುತ್ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನಗರದ ಲಿಂಗಸೂಗೂರು ರಸ್ತೆಯಲ್ಲಿ ಇರುವ ವಿದ್ಯುತ್ ಕೇಂದ್ರದಲ್ಲಿ ಈ ದುರ್ಘಟನೆ ಮಾ.29ರಂದು ನಡೆದಿದೆ. ಬೆಂಕಿ ಕೆನ್ನಾಲಿಗೆ ವಿದ್ಯುತ್ ತಂತಿಗಳು ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ವಿದ್ಯುತ್ ಕೇಂದ್ರದಲ್ಲಿ ಬೆಂಕಿ ಅವಘಡದಿಂದ ರಾಯಚೂರು ಸಿಟಿ ಪೂರ್ತಿ ಕರೆಂಟ್ ಕಟ್ ಆಗಿತ್ತು. ಬೇಸಿಗೆಯ ಸೆಕೆ ತಾಳಲಾರದೇ ಜನರು ಜೆಸ್ಕಾಂ ವಿರುದ್ಧ ಆಕ್ರೋಶ ಹೊರಹಾಕಿದರು.
ಹೊತ್ತಿ ಉರಿದ ಬಿಆರ್‌ಟಿ ಅರಣ್ಯ ಪ್ರದೇಶ
ಬಿಆರ್‌ಟಿಯ ಬೈಲೂರು ಅರಣ್ಯ ವಲಯದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರಕ್ಕೂ ಹೆಚ್ಚು ಬಾರಿ ಬೆಂಕಿ ಕಾಣಿಸಿಕೊಂಡಿದೆ. ಬೈಲೂರು ಅರಣ್ಯ ವ್ಯಾಪ್ತಿಯ ಕೆ ಕೆ ಡ್ಯಾಂ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ