ಬೆಂಗಳೂರು: ರಾಜ್ಯಾದ್ಯಂದ ಬಿಡುವು ಕೊಟ್ಟ ಮಳೆರಾಯ ಮತ್ತೆ ಅಬ್ಬರಿಸಲು ಸಜ್ಜಾಗುತ್ತಿದ್ದಾನೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಸಂಜೆ ಆಗುತ್ತಿದ್ದಂತೆ ಮಳೆಯು ಧರೆಗಿಳಿದಿತ್ತು. ಬೆಂಗಳೂರು (Benagluru Rains), ದೇವನಹಳ್ಳಿ, ಏರ್‌ಪೋರ್ಟ್ ಸುತ್ತಮುತ್ತ ಜೋರು ಗಾಳಿಯೊಂದಿಗೆ ಮಳೆ ಶುರುವಾಯಿತು. ಆಗಾಗ ಗುಡುಗು ಸಿಡಿಲು ಬಂದು ಹೋಗಿತ್ತು. ಇನ್ನೊಂದು ವಾರ ಬಿರುಗಾಳಿ ಜತೆಗೆ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸಚನೆಯನ್ನು (Karnataka Weather Forecast) ನೀಡಿದೆ.
ಆನೇಕಲ್‌ನ ವಣಕನಹಳ್ಳಿ, ಸೋಲೂರು ಗೊಮ್ಮಾಳಾಪುರ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಕಳೆದ ಅರ್ಧ ಗಂಟೆಯಿಂದ ಮಳೆಯು ಸುರಿಯುತ್ತಿದ್ದು, ಕಾದ ಕೆಂಡವಾಗಿದ್ದ ವಾತಾವರಣ ತಂಪಾಗಿದೆ. ಬೆಂಗಳೂರು ನಗರದ ವಿಧಾನಸೌಧ, ಚಾಲುಕ್ಯ ಸರ್ಕಲ್, ಆನಂದ್ ರಾವ್ ಸರ್ಕಲ್, ಮೆಜೆಸ್ಟಿಕ್ ಸೇರಿ ಶಿವಾಜಿನಗರ, ಕೆಂಗೇರಿ ಅಸುಪಾಸು ಮಳೆಯಾಗುತ್ತಿದೆ. ಇನ್ನೂ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಮಳೆಯಲ್ಲಿ ಸಿಲುಕಿಕೊಂಡರು. ಇತ್ತ ದಿಢೀರ್ ಮಳೆಗೆ ಬಸ್ ನಿಲ್ದಾಣ, ಸೇತುವೆ ಕೆಳಗೆ ಆಶ್ರಯಿಸಿದರು.
ಇದನ್ನೂ ಓದಿ: Summer Holiday Fashion: ಸೀಸನ್ ಟ್ರೆಂಡ್‌ನ ಟಾಪ್ ಲಿಸ್ಟ್‌ನಲ್ಲಿ ಸಮ್ಮರ್ ಹಾಲಿಡೇ ಫ್ಯಾಷನ್
ದೇವನಹಳ್ಳಿ ಸುತ್ತಮುತ್ತ ತುಂತುರು ಮಳೆ
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನತೆಗೆ ಸ್ವಲ್ಪ ಮಟ್ಟಿಗೆ ವರುಣ ತಂಪೆರದಿದ್ದಾನೆ. ಮಳೆ ಆರಂಭವಾಗುತ್ತಿದ್ದಂತೆ ಜನರು ತಮ್ಮ ಮೊಬೈಲ್‌ಗಳಲ್ಲಿ ಮಳೆ ಸೆರೆ ಹಿಡಿಯಲು ಮುಂದಾದ ದೃಶ್ಯ ಕಂಡು ಬಂತು.
ಮೇ 10ರವರೆಗೆ ಮಳೆಯಾರ್ಭಟ
ಚಾಮರಾಜನಗರ ಮತ್ತು ರಾಮನಗರದಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಒಂದು ಅಥವಾ ಎರಡು ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಮೈಸೂರು ಮತ್ತು ಮಂಡ್ಯದಲ್ಲೂ ಕೆಲವೆಡೆ ವ್ಯಾಪಕ ಮಳೆಯಾಗಲಿದೆ.
ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯೊಂದಿಗೆ ಗುಡುಗು ಸಾಥ್ ನೀಡಲಿದೆ.
ಮತದಾನಕ್ಕೆ ಮಳೆ ಅಡ್ಡಿ
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಹೀಗಾಗಿ ಮತದಾನಕ್ಕೆ ಮಳೆರಾಯ ಅಡ್ಡಿಯಾಗಲಿದ್ದನ್ನಾ ಎಂಬ ಅನುಮಾನವಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ