ಧಾರವಾಡ/ದಾವಣಗೆರೆ: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಮಳೆ (Rain News) ಬಂದರು ಕಷ್ಟ ಬಾರದೆ ಇದ್ದರೂ ನಷ್ಟ ಎನ್ನುವಂತಾಗಿದೆ. ಮಳೆಯಿಂದಾಗಿ (karnataka Weather Forecast) ಅವಾಂತರವೇ ಸೃಷ್ಟಿಯಾಗಿದ್ದು, ಸಾವು-ನೋವು ಸಂಭವಿಸಿದೆ. ಧಾರವಾಡದಲ್ಲಿ ಭಾರಿ ಮಳೆಗೆ ಸಾರಿಗೆ ಬಸ್‌ನಲ್ಲಿ ನೀರು ಸೋರುತ್ತಿದ್ದ ಕಾರಣಕ್ಕೆ, ಚಾಲಕರೊಬ್ಬರು ಒಂದು ಕೈಯಲ್ಲಿ ಛತ್ರಿ ಹಿಡಿದು ಮತ್ತೊಂದು ಕೈಯಲ್ಲಿ ಬಸ್ ಡ್ರೈವಿಂಗ್ ಮಾಡಿದ್ದಾರೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಗೆ ಗ್ರಾಮಕ್ಕೆ ಸಂಚರಿಸುವ ಸಾರಿಗೆ ಬಸ್ ಇದಾಗಿದ್ದು, ಭಾರಿ ಮಳೆಗೆ ಎಲ್ಲ ಕಡೆಯು ನೀರು ಸೋರಿದೆ. ಮಳೆಯಿಂದ ರಕ್ಷಣೆ ಪಡೆಯುವ ಸಲುವಾಗಿ ಚಾಲಕ ಛತ್ರಿ ಹಿಡಿದುಕೊಂಡು ಬಸ್ ಅನ್ನು ಚಾಲನೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಚಾಲಕ ಛತ್ರಿ ಹಿಡಿದ ದೃಶ್ಯವನ್ನು ನಿರ್ವಾಹಕಿ ವಿಡಿಯೊ ಮಾಡಿದ್ದಾರೆ ಎನ್ನಲಾಗಿದೆ.
ದಾವಣಗೆರೆಯಲ್ಲಿ ಕುಸಿದು ಬಿದ್ದ ಮಾಳಿಗೆ ಮನೆ
ಭಾರಿ ಮಳೆಗೆ ಮಾಳಿಗೆ ಮನೆಯೊಂದು ಕುಸಿದು ಬಿದ್ದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಸುರಿದ ಮಳೆಯಿಂದ ಮಾಳಿಗೆ ಮನೆ ಕುಸಿದಿದೆ. ಕುಟುಂಬಸ್ಥರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಚ್ಚವ್ವನಹಳ್ಳಿ ಗ್ರಾಮದ ಸನಾವುಲ್ಲಾ ಎಂಬುವರಿಗೆ ಸೇರಿದ ಮಾಳಿಗೆ ಮನೆಯಲ್ಲಿ ಮಕ್ಕಳು ಪಾರಾಗಿದ್ದು, ಸನಾವುಲ್ಲಾ ಅವರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಚಿಕಿತ್ಸೆಗಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: Karnataka Rain : ಸಿಡಿಲಾಘಾತಕ್ಕೆ ವಿದ್ಯಾರ್ಥಿ ಬಲಿ; ಗಾಳಿ-ಮಳೆಗೆ ಮರ ಮುರಿದು ಬಿದ್ದು ಜಾನುವಾರು ಸಾವು
ಹಾಸನದಲ್ಲಿ ಮಳೆ ಗಾಳಿಗೆ ರಸ್ತೆಗೆ ಬಿದ್ದ ಮರ
ಹಾಸನ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಸತತ ಒಂದು ಗಂಟೆಗಳ ಕಾಲ ಸುರಿದ ಗಾಳಿ ಮಳೆಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಇದರಿಂದಾಗಿ ಒಂದು ಕಾರು ಜಖಂ ಆಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹಾಸನ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಈ ಘಟೆನೆ ನಡೆದಿದೆ. ಇತ್ತ ನಗರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿತ್ತು. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಚಿಕ್ಕಬಳ್ಳಾಪುರದಲ್ಲಿ ಧರೆಗುರುಳಿದ 50 ವರ್ಷದ ಅರಳಿ ಮರ
ಬಿರುಗಾಳಿ ಸಹಿತ ಮಳೆಗೆ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅರಳಿಕಟ್ಟೆಯಲ್ಲಿದ್ದ 50 ವರ್ಷಗಳಿಗೂ ಹಳೆಯ ಅರಳಿ ಮರ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಯಾರು ಇಲ್ಲದ ಕಾರಣಕ್ಕೆ ಅಪಾಯವೊಂದು ತಪ್ಪಿದೆ. ಇಶಾ ಫೌಂಡೇಶನ್ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಬಿರುಗಾಳಿಗೆ ಜಾಹೀರಾತು ಫಲಕಗಳು ನೆಲಕ್ಕೆ ಬಿದ್ದಿವೆ. ಚಿಕನ್ ಹಾಗೂ ಚಾಟ್ಸ್ ಅಂಗಡಿ ಮೇಲೆ ಫಲಕ ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ