ಕೊಡಗು/ಕೊಪ್ಪಳ/ಬೆಂಗಳೂರು: ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆಯು (Rain News) ಅಬ್ಬರಿಸುತ್ತಿದೆ. ಗುರುವಾರದಂದು ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ (Karnataka Weather Forecast) ಮಳೆಯಾಗಿದೆ. ಕಳೆದೆರಡು ದಿನಗಳಿಂದ ಸಂಜೆಯಾಗುತ್ತಿದ್ದಂತೆ ಮಳೆಯ ಸಿಂಚನವಾಗುತ್ತಿದೆ. ಮುಂಜಾನೆ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಬ್ಬರದೊಂದಿಗೆ ಮಳೆ ಸುರಿಯುತ್ತಿದೆ. ಮಳೆಯಿಂದ ಕೊಡಗಿನ ರೈತರು ಹಾಗೂ ಸಾರ್ವಜನಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಮಡಿಕೇರಿ ಸಮೀಪ ನಿಲ್ಲಿಸಿದ್ದ ಕಾರಿನ ಮೇಲೆ ಭಾರಿ ಗಾಳಿಗೆ ಮರವು ಧರೆಗುರುಳಿದೆ. ಮಡಿಕೇರಿಯ ಸುದರ್ಶನ ಅಥಿತಿಗೃಹದ ಬಳಿ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನೊಳಗೆ ಯಾರು ಇರಲಿಲ್ಲ.
ಇತ್ತ ಕೊಪ್ಪಳ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಬಿಸಿಲನಿಂದ ಕಂಗೆಟ್ಟ ಜನರಿಗೆ ಗಾಳಿ ಸಹಿತ ಮಳೆಯು ಅಬ್ಬರಿಸಿದೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನಲ್ಲಿ ಜೋರಾಗಿ ಮಳೆಯಾಗಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಏರ್‌ಪೋರ್ಟ್‌ನಲ್ಲೂ ಉತ್ತಮ ಮಳೆಯಾಗಿದೆ. ಬೆಳಗ್ಗೆನಿಂದ ಬಿಸಿಲಿಗೆ ಕಂಗೆಟ್ಟಿದ್ದ ಏರ್‌ಪೋರ್ಟ್ ಪ್ರಯಾಣಿಕರು, ಟ್ಯಾಕ್ಸಿ ಚಾಲಕರು ಮಳೆ ಆಗಮನದಿಂದ ಖುಷಿಯಾದರು. ಮಳೆಗೆ ವಾತಾವರಣವು ಕೂಲ್ ಆಗಿತ್ತು.
ವಿಜಯನಗರದಲ್ಲಿ ಮಳೆಗೆ ಉರುಳಿದ ಬಾಳೆ ಬೆಳೆ
ಹಂಪಿ ಪರಿಸರದಲ್ಲಿ ಸುರಿದ ಮಳೆಗೆ ಬಾಳೆ ಬೆಳೆ ಉರುಳಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಗಾಳಿ, ಮಳೆಗೆ ಸಾವಿರಾರು ಬಾಳೆಗಿಡಗಳು ನೆಲಕ್ಕುರುಳಿವೆ. ರೈತಾಪಿ ವರ್ಗ ವರ್ಷದ ಮೊದಲ ದೊಡ್ಡ ಮಳೆ ಎಂದೇ ಕೊಂಡಾಡಿದ್ದಾರೆ. ವೆಂಕಟಾಪುರ ಮಾಗಣೆ, ನಿಂಬಾಪುರ, ಬುಕ್ಕಸಾಗರ ಮಾಗಣೆ ಗ್ರಾಮಗಳಲ್ಲಿ ಬಾಳೆ ಬೆಳೆ ನೆಲಕ್ಕೆ ಬಿದ್ದಿದೆ.
ರೈತರು ಹೆಚ್ಚಾಗಿ ಸುಗಂದಿ, ಏಲಕ್ಕಿ, ಸಕ್ಕರೆ ಬಾಳೆಯನ್ನು ಬೆಳೆದಿದ್ದರು. ವೆಂಕಟಾಪುರ ಮಾಗಣೆಯಲ್ಲಿ ಗ್ರಾಮದಲ್ಲಿ ಬಾಳೆಗಿಡಗಳಿಗೆ ಹೆಚ್ಚಿನ ಹಾನಿಯಾಗಿದೆ. ಎಕರೆಗೆ 900 ಗಿಡಗಳು ನೆಟ್ಟಿದರೆ ಕೆಲವೆಡೆ 300 ರಿಂದ 400 ಬಾಳೆ ಗಿಡ ನೆಲಸಮವಾಗಿವೆ. ಕೆಲವೆಡೆ ಎಕೆರೆಗಟ್ಟಲೇ ಗಿಡಗಳು ನೆಲಕ್ಕುರುಳಿವೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಳೆ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರದ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಇನ್ನೂ ಹಲವು ತಿಂಗಳಿಂದ ತುರ್ತಾ, ಬಸವಣ್ಣ, ರಾಯ ಕಾಲುವೆಗಳಲ್ಲಿ ನೀರಿಲ್ಲದೇ ಬರಿದಾಗಿತ್ತು. ಇದೀಗ ಮಳೆಗೆ ಕಾಲುವೆಗಳಲ್ಲೂ ನೀರು ಹರಿದಿದ್ದು, ರೈತರಲ್ಲೂ ಕೊಂಚ ಸಂತಸಗೊಂಡಿದ್ದಾರೆ.
ತುಮಕೂರಲ್ಲಿ ಮಳೆಗಾಗಿ ಮಕ್ಕಳಿಗೆ ಮದುವೆ
ಕೆಲವೆಡೆ ಮಳೆಯು ಅಬ್ಬರಿಸುತ್ತಿದ್ದರೆ ಇತ್ತ ಮಳೆಗಾಗಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಮಳೆಗಾಗಿ ತುಮಕೂರಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ತೀವ್ರ ಬರ ಹಿನ್ನೆಲೆಯಲ್ಲಿ ಬೆಳದಿಂಗಳು ಹಬ್ಬ ಆಚರಣೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಚಿಕ್ಕ ಮಕ್ಕಳಿಗೆ ವಧು-ವರರಂತೆ ಸಿಂಗಾರಿಸಿ, ಅಲಂಕಾರಿಸಿ ಮದುವೆ ಮಾಡಿ ವಿಶೇಷ ಆಚರಣೆ ಮಾಡಿದ್ದಾರೆ. ತುಮಕೂರಿನ ಜಯಪುರ ಬಡಾವಣೆಯಲ್ಲಿ ಘಟನೆ ನಡೆದಿದೆ. ಮಳೆಗಾಗಿ ಜನರು ಹಲವು ಆಚರಣೆಗಳ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: SSLC Result 2024: ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ
ಭಾರಿ ಮಳೆಯೊಂದಿಗೆ ರಭಸವಾಗಿ ಬೀಸಲಿದೆ ಗಾಳಿ
ಮೇ 10ರಂದು ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಕೆಲವು ಸ್ಥಳಗಳಲ್ಲಿ ಗಾಳಿಯು 40-50 ಕಿ.ಮೀ ವೇಗದಲ್ಲಿ ಬೀಸಲಿದೆ.
ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ದಕ್ಷಿಣ ಒಳನಾಡಿನಲ್ಲಿ ತುಮಕೂರು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗಾಳಿಯೊಂದಿಗೆ (40-50 kmph) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಕೆಲವೆಡೆ ಬಿರುಸಿನ ಗಾಳಿಯೊಂದಿಗೆ ಗುಡುಗು ಸಹಿತ ಮಧ್ಯಮ ಮಳೆಯಾಗಲಿದೆ. ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರದಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ಗರಿಷ್ಠ ತಾಪಮಾನವು 2-4 ಡಿ.ಸೆ ಕಡಿಮೆಯಾಗುವ ಸಾಧ್ಯತೆ ಇದೆ.
ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿಗೆ ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶವು ಕ್ರಮವಾಗಿ 34-22 ಡಿ.ಸೆ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ