Site icon Vistara News

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Rain Effect In karnataka

ನೆಲಮಂಗಲ: ಮಳೆ ಜತೆಗೆ ರಭಸವಾಗಿ ಬೀಸಿದ ಬಿರುಗಾಳಿಗೆ (Rain Effect) ಮನೆಯ ಗೇಟ್ ಕಿತ್ತು ಬಂದಿದ್ದು,ಇದೇ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದ 7 ವರ್ಷದ ಬಾಲಕಿ ಮೇಲೆ ಗೇಟ್‌ ಬಿದ್ದಿದೆ. ಪರಿಣಾಮ ಬಾಲಕಿ ಯಲ್ಲಮ್ಮ (7) ಎಂಬಾಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ವಾಜರಹಳ್ಳಿಯಲ್ಲಿ ಘಟನೆ ನಡೆದಿದೆ.

ನಿನ್ನೆ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಗೇಟ್ ಕಟ್ ಆಗಿ ಈ ದುರ್ಘಟನೆ ಸಂಭವಿಸಿದೆ. ರಾಯಚೂರು ಜಿಲ್ಲೆಯ ದೇವದುರ್ಗದ ಮೂಲದ ಮುಕ್ಕಣ್ಣ ಹಾಗೂ ಬಾಲಮ್ಮರ ದಂಪತಿ ಕೂಲಿ ಕೆಲಸ ಮಾಡಿಕೊಂಡು ಬೆಂಗಳೂರಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಮಳೆಯು ಮುದ್ದು ಮಗಳನ್ನು ಕಸಿದುಕೊಂಡಿದೆ.

ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬಳ್ಳಾರಿಯಲ್ಲಿ ಸಿಡಿಲು ಬಡಿದು ಎತ್ತುಗಳು ಸಾವು

ಗುರುವಾರ ಸಂಜೆ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ. ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದಲ್ಲಿ ಸಂಜೆ ವೇಳೆ ಸಿಡಿಲು, ಗುಡುಗು ಸಹಿತ ಮಳೆ ಸುರಿದಿದೆ. ನಾಯಕರ ದೊಡ್ಡಬಸಪ್ಪ ಎಂಬುವವರಿಗೆ ಸೇರಿದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ತಲಾ ಒಂದು ಲಕ್ಷ ರೂ. ಮೌಲ್ಯದ ಎರಡು ಎತ್ತುಗಳು ಮೃತಪಟ್ಟಿದ್ದಕ್ಕೆ ರೈತ ಕಂಗಲಾಗಿದ್ದರು. ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ: Dog Bite : ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ಅಟ್ಯಾಕ್‌

ಸ್ವಲ್ಪ ಯಾಮಾರಿದರೂ ಹಾರಿಹೋಗುತ್ತಿತ್ತು ನಾಲ್ವರ ಪ್ರಾಣ ಪಕ್ಷಿ

ಬೆಂಗಳೂರಿನ ನಾಗರಭಾವಿಯ ಎನ್‌ಜಿಎಫ್‌ ಲೇಔಟ್‌ನಲ್ಲಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸ್ವಲ್ಪ ಯಾಮಾರಿದರೂ ನಾಲ್ವರ ಪ್ರಾಣ ಪಕ್ಷಿ ಹಾರಿಹೋಗುತ್ತಿತ್ತು. ಶಿವು ಎಂಬುವವರು ರಾಯಚೂರಿನಿಂದ ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು.

ಶೆಡ್‌ವೊಂದರಲ್ಲಿ ಶಿವು ದಂಪತಿ ಮತ್ತು ಇಬ್ಬರು ಮಕ್ಕಳು ವಾಸಿಸುತ್ತಿದ್ದರು. ನಿನ್ನೆ ಬುಧವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಬೃಹತ್‌ ಮರ ಹಾಗೂ ವಿದ್ಯುತ್‌ ಕಂಬ ಧರೆಗೆ ಉರುಳಿದ್ದವು. ವಿದ್ಯುತ್ ಕಂಬದ ಮೇಲೆ ಬೃಹತ್ ಮರ ಬಿದ್ದು, ಶೆಡ್‌ಗೆ ಉರುಳಿತ್ತು. ಅದೃಷ್ಟವಶಾತ್‌ ಆ ಸಮಯದಲ್ಲಿ ಶೆಡ್‌ನಲ್ಲಿ ಯಾರು ಇರಲಿಲ್ಲ. ಹೀಗಾಗಿ ಅನಾಹುತವೊಂದು ತಪ್ಪಿತ್ತು. ಮೊನ್ನೆ ಮರ ಬಿದ್ದ ಬಗ್ಗೆ ಬಿಬಿಎಂಪಿಗೆ ದೂರು ನೀಡಿದರೂ ಪಾಲಿಕೆ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಯಾವುದೇ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ನಡೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಮನೆಗಳಿಗೆ ನುಗ್ಗಿದ ಚರಂಡಿ ಮಿಶ್ರಿತ ಮಳೆ ನೀರು

ರಾತ್ರಿ ಪೂರ್ತಿ ಸುರಿದ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರಿನ ಉಲ್ಲಾಳದಲ್ಲಿರುವ ಮನೆಗಳಿಗೆ ನೀರು ನುಗ್ಗಿತ್ತು. ಪರಿಣಾಮ ನಿವಾಸಿಗಳು ಜಾಗರಣೆ ಇದ್ದು, ರಾತ್ರಿಯಿಡೀ ನೀರು ತೆಗೆಯುವ ಕಾರ್ಯದಲ್ಲಿ ಮಗ್ನರಾಗಿದ್ದರು. ಇತ್ತ ಚಾಮರಾಜಪೇಟೆಯ ಜೆಜೆಆರ್ ನಗರದ ಮನೆಗಳಿಗೆ ಭಾರಿ ಮಳೆಗೆ ಕೊಳಚೆ ನೀರು ನುಗ್ಗಿತ್ತು ಈ ಹಿನ್ನೆಲೆಯಲ್ಲಿ ನಿವಾಸಿಗಳ ಆಕ್ರೋಶ ಹೊರಹಾಕಿದರು. ಮಳೆಗಾಲದಲ್ಲಿ ಬಿನ್ನಿ ಮಿಲ್ ಮುಖ್ಯ ರಸ್ತೆಯಲ್ಲಿರುವ ಸಲಾರ್ಪುರಿಯ ಅಪಾರ್ಟ್ಮೆಂಟ್‌ನಿಂದ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ ಎಂದು ನಿವಾಸಿಗಳು ಆಕ್ರೋಶಿಸಿದರು. ನಿನ್ನೆ ಬುಧವಾರ ಸ್ಥಳೀಯರು ಅಪಾರ್ಟ್‌ಮೆಂಟ್ ಎದುರು ಪ್ರತಿಭಟನೆಯನ್ನೂ ನಡೆಸಿದ್ದರು.

ಏರ್‌ಪೋರ್ಟ್‌ಗೂ ನುಗ್ಗಿದ ನೀರು

ದೇವನಹಳ್ಳಿ ಸುತ್ತಮುತ್ತ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ನೀರು ನುಗ್ಗಿತ್ತು. ಮೇಲ್ಚಾವಣಿಯಿಂದ ಟರ್ಮಿನಲ್ ಒಳಗಡೆಗೆ ನೀರು ಸೋರುತ್ತಿದ್ದು, ಲಗೇಜ್ ಬೇ ಬಳಿ ನೀರು ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಪರದಾಡಬೇಕಾಯಿತು. ಇನ್ನೂ ರನ್ ವೇ ಕ್ಲಿಯರೆನ್ಸ್ ಇಲ್ಲದ ಕಾರಣ 18ಕ್ಕೂ ಅಧಿಕ ವಿಮಾನಗಳು ಬೇರೆಡೆಗೆ ಡೈವರ್ಟ್ ಮಾಡಲಾಯಿತು.

ಉದ್ಘಾಟನೆಗೂ ಮುನ್ನವೇ ಮುಳುಗಿದ ಅಂಡರ್ ಪಾಸ್

ಮೈಸೂರು ರಸ್ತೆಯ ಆರ್‌ವಿ ಕಾಲೇಜ್ ಮುಂಭಾಗದ ಅಂಡರ್ ಪಾಸ್ ಉದ್ಘಾಟನೆಗೂ ಮುನ್ನವೇ ಮುಳುಗಿತ್ತು. ರೈಲ್ವೆ ಟ್ರ್ಯಾಕ್ ಕೆಳಗೆ ನೂತನವಾಗಿ ನಿರ್ಮಾಣ ಆಗಿರುವ ಅಂಡರ್ ಪಾಸ್‌ನಲ್ಲಿ ಮಳೆ ನೀರು ನಿಲ್ಲುವಂತಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version