Site icon Vistara News

Karnataka Weather: 34 – 35 ಡಿಗ್ರಿ ಸೆಲ್ಸಿಯಸ್‌ ತಲುಪಿದ ತಾಪಮಾನ; ಈ ಜಿಲ್ಲೆಗಳು ಸೆಕೆಯ ತಾಣ!

Temperature reached 34 to 35 degrees Celsius Karnataka Weather

ಬೆಂಗಳೂರು: ರಾಜ್ಯದಲ್ಲಿ ಮುಂದಿನ 48 ಗಂಟೆಯಲ್ಲಿ (ಗುರುವಾರ ಮತ್ತು ಶುಕ್ರವಾರ) ಸೆಕೆಯ ವಾತಾವರಣ ಮುಂದುವರಿಯಲಿದೆ. ಬಿಸಿಲು ಹೆಚ್ಚಾಗಿ ಇರುವುದರಿಂದ ಭಾರಿ ಪ್ರಮಾಣದಲ್ಲಿ ಸೆಕೆ ಉಂಟಾಗಲಿದೆ. ಅದರಲ್ಲೂ ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ, ಗದಗ, ಚಿತ್ರದುರ್ಗ ಸೇರಿದಂತೆ ಹಲವು ಕಡೆ ಈಗಾಗಲೇ ಗರಿಷ್ಠ ತಾಪಮಾನವು 34 – 35 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಇನ್ನೂ ಒಂದೆರಡು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿ (Karnataka Weather Forecast) ಪ್ರಕಾರ, ಗರಿಷ್ಠ ತಾಪಮಾನದಲ್ಲಿ (Maximum Temperature) ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಉತ್ತರ ಕನ್ನಡ, ಶಿವಮೊಗ್ಗದ ಹವಾಮಾನ ಹೀಗಿದೆ

ಹವಾಮಾನ ಇಲಾಖೆಯ ವರದಿಯನ್ವಯ, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮುಂದಿನ ಆರು ದಿನಗಳ ಕಾಲ 34 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಇರಲಿದೆ. ಇದು ಒಂದೆರಡು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಲೂಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಫೆಬ್ರವರಿ 20ರವರೆಗೆ ಈ ವಾತಾವರಣ ಇರಲಿದೆ. ಅದೇ ಕನಿಷ್ಠ ತಾಪಮಾನವು 21-22 ಡಿಗ್ರಿ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಿದೆ. ಮಲೆನಾಡು ಶಿವಮೊಗ್ಗದಲ್ಲಿಯೂ ಇನ್ನೊಂದು ವಾರ 34-35 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎನ್ನಲಾಗಿದೆ.

ಈ ಜಿಲ್ಲೆಗಳಲ್ಲಿ ಹೆಚ್ಚಿನ ತಾಪಮಾನ

ಚಿತ್ರದುರ್ಗದಲ್ಲಿ ಮುಂದಿನ ಆರು ದಿನಗಳ ಕಾಲ 33-34 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಇರಲಿದೆ. ಇದು ಸಹ ಒಂದೆರಡು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಲೂಬಹುದು ಎಂದು ಅಂದಾಜಿಸಲಾಗಿದೆ. ಕನಿಷ್ಠ ತಾಪಮಾನವು 17 ಡಿಗ್ರಿ ಇರಲಿದೆ. ಅದೇ ಗದಗ ಜಿಲ್ಲೆಯಲ್ಲಿ 34-35 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಇರಲಿದೆ ಎನ್ನಲಾಗಿದ್ದು, ಕನಿಷ್ಠ ತಾಪಮಾನವು 16-17 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಇನ್ನು ಕಲಬುರಗಿಯಲ್ಲಿ ಇನ್ನೊಂದು ವಾರ 35 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಇರಲಿದೆ. ಇದು ಹೆಚ್ಚಾಗಲೂ ಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಎಲ್ಲ ಕಡೆ ಹೆಚ್ಚಿನ ಸಮಯದಲ್ಲಿ ಬಿಸಿಲು ಹಾಗೂ ಸೆಕೆ ಹೆಚ್ಚಿನ ಪಾಲನ್ನು ತೆಗೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚು

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಬಿಸಿಲು ಹೆಚ್ಚಾಗಿದೆ. ಕನಿಷ್ಠ ಹಾಗೂ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲೂ ಏರಿಕೆ

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಮತ್ತು ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗದಲ್ಲಿ ಶುಷ್ಕ ವಾತಾವರಣ ಇರಲಿದೆ.

ಬೆಂಗಳೂರಲ್ಲಿ ಇನ್ನೊಂದು ವಾರ ಹೇಗೆ?

ಬೆಂಗಳೂರಿನಲ್ಲಿ ಈಗಾಗಲೇ ಸೆಕೆ ಹೆಚ್ಚಿದ್ದು, ಇನ್ನೂ ಒಂದು ವಾರ ಇದರಲ್ಲಿ ಯಾವುದೇ ಬದಲಾವಣೆ ಆಗುವ ಸೂಚನೆಗಳು ಇಲ್ಲ. ಏಕೆಂದರೆ ಇನ್ನೊಂದು ವಾರ 31ರಿಂದ 32 ಡಿಗ್ರಿ ಸೆಲ್ಸಿಯಸ್‌ನಲ್ಲಿ ರಾಜಧಾನಿಯ ವಾತಾವರಣ ಇರಲಿದೆ. ಗುರುವಾರದಂದು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಗರಿಷ್ಠ ಉಷ್ಣಾಂಶವು 31 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ.

ಇದು ಉತ್ತರ ಒಳನಾಡಿನ ಸ್ಥಿತಿ

ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್‌ ಹೆಚ್ಚಿರಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: HSRP Number Plate ಅವಧಿ ಮತ್ತೆ 3 ತಿಂಗಳು ವಿಸ್ತರಣೆ; ವಿಧಾನ ಪರಿಷತ್‌ನಲ್ಲಿ ಸರ್ಕಾರ ಘೋಷಣೆ

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 32 ಡಿ.ಸೆ -17 ಡಿ.ಸೆ
ಮಂಗಳೂರು: 35 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 34 ಡಿ.ಸೆ – 18 ಡಿ.ಸೆ
ಗದಗ: 35 ಡಿ.ಸೆ – 17 ಡಿ.ಸೆ
ಹೊನ್ನಾವರ: 34 ಡಿ.ಸೆ- 23 ಡಿ.ಸೆ
ಕಲಬುರಗಿ: 35 ಡಿ.ಸೆ – 21 ಡಿ.ಸೆ
ಬೆಳಗಾವಿ: 34 ಡಿ.ಸೆ – 16 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ

Exit mobile version