ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈಕೆ ಸಾಕ್ಷಿ. ಓದಿದ ತಕ್ಷಣ ಏನಾದರೊಂದು ಕೆಲಸ ಸಿಕ್ಕಬೇಕು, ಅದಕ್ಕಾಗಿ ಇಂಥದ್ದೇ ಓದಬೇಕು ಎಂಬ ಮನಸ್ಥಿತಿಯನ್ನೆಲ್ಲ ಈಕೆ ನಿವಾಳಿಸಿ ಎಸೆದು, ಮನಸ್ಸು, ಮಾಡಬಲ್ಲೆ ಎಂಬ ಆತ್ಮಸ್ಥೈರ್ಯ, ಒಂದಿಷ್ಟು ಪರಿಶ್ರಮ, ಜೊತೆಗೆ ಹೊಸದೇನನ್ನು ಮಾಡಬಹುದು ಎಂಬ ಕ್ರಿಯಾತ್ಮಕ ಆಲೋಚನೆ ಇದ್ದರೆ ಸಾಕು ಇಂದಿನ ಜಗತ್ತಿನಲ್ಲಿ ಏನು ಬೇಕಾದರೂ ಮಾಡಿ ಗೆಲ್ಲಬಹುದು ಎಂಬುದಕ್ಕೆ ಈಕೆ ಸಾಕ್ಷಿ. ಈಗ ಈಕೆ ದೆಹಲಿ ಪ್ರಮುಖ ಬೀದಿಗಳಲ್ಲಿ ʻಬಿಟೆಕ್ ಪಾನಿಪುರಿವಾಲಿʼ ಎಂದೇ ಪ್ರಸಿದ್ಧ.
ಈಕೆಯ ಹೆಸರು ತಾಪ್ಸಿ ಉಪಾಧ್ಯಾಯ. ಓದಿದ್ದು ಬಿಟೆಕ್. ವಯಸ್ಸು ೨೧. ಮಾಡುತ್ತಿರುವ ಕೆಲಸ ರಸ್ತೆಬದಿಯಲ್ಲಿ ಪಾನಿಪುರಿ ಗಾಡಿ! ಅಯ್ಯೋ, ಇವಳಿಗೇನಾಯಿತು ಅಷ್ಟು ಓದಿ ಈಗ ಅನ್ಯಾಯವಾಗಿ ಪಾನಿಪುರಿ ಮಾರುತ್ತಾಳಲ್ಲ ಎಂದು ನಗೆಯಾಡುವ, ಕನಿಕರ ತೋರುವ ಕೆಲಸ ಮಾಡಬೇಕಿಲ್ಲ. ಯಾಕೆಂದರೆ ಇದು ಈಕೆಯ ಕನಸು. ರಸ್ತೆ ಬದಿಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯಕರ ಪಾನಿಪುರಿ ಕಡಿಮೆ ದರದಲ್ಲಿ ಜನರಿಗೆ ಸಿಗುವಂತಾಗಬೇಕು ಹಾಗೂ ಅಂಥದ್ದೊಂದು ಸ್ಟಾರ್ಟಪ್ ಉದ್ಯಮ ತಾನು ಆರಂಭಿಸಬೇಕು ಎಂಬುದು.
ಈಕೆ ಹೇಳುವಂತೆ ಈಕೆಯ ಹೆತ್ತವರಿಗೆ ತನ್ನ ಮಗಳು ಓದಿ ಐಎಎಸ್‌ಗೆ ತಯಾರಿ ನಡೆಸಿ, ಒಳ್ಳೆಯ ಕೆಲಸ ಮಾಡುವಂತಾಗಲಿ ಎಂದೇ ಅಂದುಕೊಂಡಿದ್ದರು. ಆದರೆ, ಈಕೆ ನಾಗರಿಕ ಸೇವಾ ಪರೀಕ್ಷೆಗೆ ತನ್ನ ಬಿಟೆಕ್ ಜೊತೆಜೊತೆಗೇ ತಯಾರಿ ನಡೆಸುತ್ತಿರುವಾಗ ಐದಾರು ತಿಂಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಕೆಲವು ವರ್ಷಗಳ ಕಾಲ ತಾನು ಒಂದೇ ಗುರಿಯಲ್ಲಿ, ಯಾವ ಬೇರೆ ಆಲೋಚನೆಗಳನ್ನೂ ಮಾಡದೆ ಓದಿ ತಯಾರಾಗಬೇಕಾಗುತ್ತದೆ. ಆದರೆ, ಅಷ್ಟರವರೆಗೆ ಆರ್ಥಿಕವಾಗಿ ಹೆತ್ತವರನ್ನೇ ಅವಲಂಬಿಸುವುದು ನನಗೆ ಸಾಧ್ಯವಿಲ್ಲವೆನಿಸಿತು. ಹೀಗಾಗಿ ಐಎಎಸ್ ಕನಸು ಕೈಬಿಟ್ಟೆ. ನನ್ನದೇ ಆದ ಉದ್ಯಮ ಆರಂಭಿಸಬೇಕೆಂಬ ಯೋಚನೆ ಇತ್ತು. ಅದಕ್ಕೆ ಓದುತ್ತಿರುವಾಗಲೇ ಸಂಜೆಯ ಹೊತ್ತು ಇದನ್ನು ಯಾಕೆ ಆರಂಭಿಸಬಾರದು ಎಂಬ ಯೋಚನೆ ಬಂತು ಹೀಗಾಗಿ ಆರಂಭಿಸಿದೆ ಎನ್ನುತ್ತಾರೆ ತಾಪ್ಸಿ.
ಈ ಉದ್ಯಮ ಆರಂಭಿಸುವಾಗ ಸಾಕಷ್ಟು ವಿರೋಧ ಬಂತು. ನಿಜ ಹೇಳಬೇಕೆಂದರೆ ನಾನು ನನ್ನ ಹೆತ್ತವರಿಗೆ ಪಾನಿಪುರಿ ಉದ್ಯಮ ಆರಂಭಿಸುತ್ತೇನೆಂದು ಹೇಳಲೇ ಇಲ್ಲ. ಇದನ್ನು ಆರಂಭಿಸುವ ಮೊದಲು ಸಾಕಷ್ಟು ಈ ಬಗ್ಗೆ ಓದಿಕೊಂಡೆ. ಸಾಕಷ್ಟು ತಯಾರಿ ಮಾಡಿಕೊಂಡೆ. ಅವರಿಗೆ ಮೊದಲೇ ಹೇಳಿದರೆ, ಖಂಡಿತ ನನ್ನ ಯೋಚನೆಯ ಬಗ್ಗೆ ತಕರಾರು ಮಾಡುತ್ತಾರೆಂದು ಗೊತ್ತಿತ್ತು. ಹೀಗಾಗಿ ಹೇಳಲಿಲ್ಲ. ಆರಂಭಿಸಿದೊಂದು ವಾರ ಬಿಟ್ಟು ಅವರಿಗೆ ಹೇಳಿದೆ. ಅವರು ಆರಂಭದಲ್ಲಿ ʻಐಎಎಸ್ ಮಾಡುತ್ತೇನೆ ಎಂದು ನೀನು ದೆಹಲಿಗೆ ಬಂದೆ, ಅಲ್ಲಿಗೆ ಹೋಗಿ ಪಾನಿಪುರಿ ಮಾರ್ತಾ ಇದ್ದೀಯಾʼ ಎಂದು ಬೇಸರ ಮಾಡಿಕೊಂಡರು. ನಾನೇನು ಮಾಡುತ್ತೇನೆ, ನನ್ನ ಕೆಲಸ ಹೇಗಿದೆ, ಹಾಗೂ ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ನೋಡಿದ ಮೇಲೆ ನೀವು ಏನೇ ಹೇಳುವುದಿದ್ದರೂ ಹೇಳಿ ಎಂದೆ. ಆಮೇಲೆ ಅವರು ಕೆಲ ದಿನ ನನ್ನ ಜೊತೆಗಿದ್ದು ನನ್ನ ಕೆಲಸ ನೋಡಿದ ಮೇಲೆ ಸರಿಯಾದರು ಎನ್ನುತ್ತಾಳೆ ಈಕೆ.
ನನ್ನ ಪಾನಿಪುರಿಯನ್ನು ಗೋಧಿಯಿಂದಲೇ ಮಾಡಿದ್ದು ಹಾಗೂ ಎಣ್ಣೆಯಲ್ಲಿ ಹುರಿದದ್ದಲ್ಲ. ಪೂರಿಯನ್ನು ಏರ್‌ಫ್ರೈ ಮಾಡಿದ್ದಾಗಿದ್ದು, ಇದು ಎಣ್ಣೆರಹಿತ ಪೂರಿಯಾಗಿದೆ. ಇದರಲ್ಲಿ ಬಳಸುವ ಇಪ್ಪು ಕೂಡಾ ಹಿಮಾಲಯನ್ ಪಿಂಕ್ ಉಪ್ಪು. ಸಿಹಿ ಚಟ್ನಿಗೂ ಕೂಡಾ ಸಕ್ಕರೆ ಹಾಕದೆ, ಕೇವಲ ಆರ್ಗ್ಯಾನಿಕ್ ಬೆಲ್ಲ, ಖರ್ಜೂರ ಹಾಗೂ ಹುಣಸೆಹಣ್ಣನ್ನು ಹಾಕಿ ಮಾಡಿದ್ದಾಗಿದೆ. ಇದು ಆರೋಗ್ಯಕರ ಪಾನಿಪುರಿ ಎಂಬ ಭರವಸೆ ನಾನು ಕೊಡಬಲ್ಲೆ ಎನ್ನುತ್ತಾರೆ ಆಕೆ.
ಇದನ್ನೂ ಓದಿ: Namakwali: ʻನಮಕ್‌ವಾಲಿʼ ಮಹಿಳೆಯರ ವಿಶೇಷ ಸ್ವಾದದ ಉತ್ತರಾಖಂಡದ ಉಪ್ಪು ವಿದೇಶದಲ್ಲೂ ಜನಪ್ರಿಯ!
ವಾರದ ಎಲ್ಲಾ ದಿನಗಳ ಒಂದೊಂದು ದಿನ ಒಂದೊಂದು ಮಾರುಕಟ್ಟೆಯ ಗಲ್ಲಿಯಲ್ಲಿ ಈಕೆ ತನ್ನ ಪಾನಿಪುರಿ ಗಾಡಿ ತರುತ್ತಿದ್ದು, ದೆಹಲಿಯ ಏಳು ಪ್ರಮುಖ ಮಾರುಕಟ್ಟೆಗಳಲ್ಲಿ ಈಕೆಯ ಕೈರುಚಿ ಸವಿಯಬಹುದು. ಐದು ಪೂರಿಗಳ್ನು ಒಂದು ಪ್ಲೇಟ್‌ನಲ್ಲಿ ಈಕೆ ಕೊಡುತ್ತಿದ್ದು ಇದಕ್ಕೆ ೩೦ ರೂಪಾಯಿಗಳ ದರ ನಿಗದಿ ಪಡಿಸಲಾಗಿದೆ. ಈಕೆಯ ಪಾನಿಪುರಿಯನ್ನು ಬಹಳ ಮಂದಿ ಸವಿದಿದ್ದು, ಒಮ್ಮೆ ಸವಿದವರು ಮತ್ತೆ ಈಕೆಯಲ್ಲಿಗೆ ಬರದೇ ಇರುವುದಿಲ್ಲವಂತೆ.
ಎಲ್ಲ ಬಗೆಯ ಜನರೂ ಗ್ರಾಹಕರಾಗಿ ಬರುತ್ತಾರೆ. ಆದರೆ, ನನಗೆ ಬಹಳಷ್ಟು ಮಂದಿ ಪ್ರೋತ್ಸಾಹದ ಮಾತನ್ನಾಡಿದ್ದಾರೆ. ನನ್ನ ಪಾನಿಪುರಿ ತಿಂದು ರುಚಿಯನ್ನು ಹೊಗಳಿದ್ದಾರೆ. ಒಳ್ಳೆಯದಾಗಲಿ ಎಂದಿದ್ದಾರೆ. ಹಾಗಾಗಿ ನಾನು, ನನ್ನನ್ನು ಕಾಲೆಳೆಯುವ ಮಂದಿಯ ಮಾತನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ಈ ಉದ್ಯಮವನ್ನು ಮುಂದಿನ ದಿನಗಳಲ್ಲಿ ವಿಸ್ತರಿಸುವ ಯೋಚನೆಯೂ ಇದೆ ಎಂದು ಕನಸಿನ ಬಗ್ಗೆ ಭರವಸೆಯ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ ತಾಪ್ಸಿ.
ಇದನ್ನೂ ಓದಿ: Women achievers | ನೈಕಾ, ಝಿವಾಮೆ ಆನ್‌ಲೈನ್ ಉದ್ದಿಮೆಯ ಹಿಂದಿನ ಇಬ್ಬರು ಮಹಿಳೆಯರ ಸ್ಫೂರ್ತಿ ಕತೆ!