ಮಹಿಳೆ
Motivation: ಬಿ ಟೆಕ್ ಪಾನಿಪುರಿವಾಲಿ: ದೆಹಲಿಯ ರಸ್ತೆಗಳಲ್ಲಿ 21ರ ಹುಡುಗಿಯ ಯಶಸ್ವಿ ಉದ್ಯಮ!
ಓದಿದ್ದು ಬಿಟೆಕ್. ವಯಸ್ಸು ೨೧. ಮಾಡುತ್ತಿರುವ ಕೆಲಸ ರಸ್ತೆಬದಿಯಲ್ಲಿ ಪಾನಿಪುರಿ ಗಾಡಿ! ಅಯ್ಯೋ, ಇವಳಿಗೇನಾಯಿತು ಅಷ್ಟು ಓದಿ ಈಗ ಅನ್ಯಾಯವಾಗಿ ಪಾನಿಪುರಿ ಮಾರುತ್ತಾಳಲ್ಲ ಎಂದು ನಗೆಯಾಡುವ, ಕನಿಕರ ತೋರುವ ಕೆಲಸ ಮಾಡಬೇಕಿಲ್ಲ. ಯಾಕೆಂದರೆ ಇದು ಈಕೆಯ ಕನಸು.
ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈಕೆ ಸಾಕ್ಷಿ. ಓದಿದ ತಕ್ಷಣ ಏನಾದರೊಂದು ಕೆಲಸ ಸಿಕ್ಕಬೇಕು, ಅದಕ್ಕಾಗಿ ಇಂಥದ್ದೇ ಓದಬೇಕು ಎಂಬ ಮನಸ್ಥಿತಿಯನ್ನೆಲ್ಲ ಈಕೆ ನಿವಾಳಿಸಿ ಎಸೆದು, ಮನಸ್ಸು, ಮಾಡಬಲ್ಲೆ ಎಂಬ ಆತ್ಮಸ್ಥೈರ್ಯ, ಒಂದಿಷ್ಟು ಪರಿಶ್ರಮ, ಜೊತೆಗೆ ಹೊಸದೇನನ್ನು ಮಾಡಬಹುದು ಎಂಬ ಕ್ರಿಯಾತ್ಮಕ ಆಲೋಚನೆ ಇದ್ದರೆ ಸಾಕು ಇಂದಿನ ಜಗತ್ತಿನಲ್ಲಿ ಏನು ಬೇಕಾದರೂ ಮಾಡಿ ಗೆಲ್ಲಬಹುದು ಎಂಬುದಕ್ಕೆ ಈಕೆ ಸಾಕ್ಷಿ. ಈಗ ಈಕೆ ದೆಹಲಿ ಪ್ರಮುಖ ಬೀದಿಗಳಲ್ಲಿ ʻಬಿಟೆಕ್ ಪಾನಿಪುರಿವಾಲಿʼ ಎಂದೇ ಪ್ರಸಿದ್ಧ.
ಈಕೆಯ ಹೆಸರು ತಾಪ್ಸಿ ಉಪಾಧ್ಯಾಯ. ಓದಿದ್ದು ಬಿಟೆಕ್. ವಯಸ್ಸು ೨೧. ಮಾಡುತ್ತಿರುವ ಕೆಲಸ ರಸ್ತೆಬದಿಯಲ್ಲಿ ಪಾನಿಪುರಿ ಗಾಡಿ! ಅಯ್ಯೋ, ಇವಳಿಗೇನಾಯಿತು ಅಷ್ಟು ಓದಿ ಈಗ ಅನ್ಯಾಯವಾಗಿ ಪಾನಿಪುರಿ ಮಾರುತ್ತಾಳಲ್ಲ ಎಂದು ನಗೆಯಾಡುವ, ಕನಿಕರ ತೋರುವ ಕೆಲಸ ಮಾಡಬೇಕಿಲ್ಲ. ಯಾಕೆಂದರೆ ಇದು ಈಕೆಯ ಕನಸು. ರಸ್ತೆ ಬದಿಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯಕರ ಪಾನಿಪುರಿ ಕಡಿಮೆ ದರದಲ್ಲಿ ಜನರಿಗೆ ಸಿಗುವಂತಾಗಬೇಕು ಹಾಗೂ ಅಂಥದ್ದೊಂದು ಸ್ಟಾರ್ಟಪ್ ಉದ್ಯಮ ತಾನು ಆರಂಭಿಸಬೇಕು ಎಂಬುದು.
ಈಕೆ ಹೇಳುವಂತೆ ಈಕೆಯ ಹೆತ್ತವರಿಗೆ ತನ್ನ ಮಗಳು ಓದಿ ಐಎಎಸ್‌ಗೆ ತಯಾರಿ ನಡೆಸಿ, ಒಳ್ಳೆಯ ಕೆಲಸ ಮಾಡುವಂತಾಗಲಿ ಎಂದೇ ಅಂದುಕೊಂಡಿದ್ದರು. ಆದರೆ, ಈಕೆ ನಾಗರಿಕ ಸೇವಾ ಪರೀಕ್ಷೆಗೆ ತನ್ನ ಬಿಟೆಕ್ ಜೊತೆಜೊತೆಗೇ ತಯಾರಿ ನಡೆಸುತ್ತಿರುವಾಗ ಐದಾರು ತಿಂಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಕೆಲವು ವರ್ಷಗಳ ಕಾಲ ತಾನು ಒಂದೇ ಗುರಿಯಲ್ಲಿ, ಯಾವ ಬೇರೆ ಆಲೋಚನೆಗಳನ್ನೂ ಮಾಡದೆ ಓದಿ ತಯಾರಾಗಬೇಕಾಗುತ್ತದೆ. ಆದರೆ, ಅಷ್ಟರವರೆಗೆ ಆರ್ಥಿಕವಾಗಿ ಹೆತ್ತವರನ್ನೇ ಅವಲಂಬಿಸುವುದು ನನಗೆ ಸಾಧ್ಯವಿಲ್ಲವೆನಿಸಿತು. ಹೀಗಾಗಿ ಐಎಎಸ್ ಕನಸು ಕೈಬಿಟ್ಟೆ. ನನ್ನದೇ ಆದ ಉದ್ಯಮ ಆರಂಭಿಸಬೇಕೆಂಬ ಯೋಚನೆ ಇತ್ತು. ಅದಕ್ಕೆ ಓದುತ್ತಿರುವಾಗಲೇ ಸಂಜೆಯ ಹೊತ್ತು ಇದನ್ನು ಯಾಕೆ ಆರಂಭಿಸಬಾರದು ಎಂಬ ಯೋಚನೆ ಬಂತು ಹೀಗಾಗಿ ಆರಂಭಿಸಿದೆ ಎನ್ನುತ್ತಾರೆ ತಾಪ್ಸಿ.
ಈ ಉದ್ಯಮ ಆರಂಭಿಸುವಾಗ ಸಾಕಷ್ಟು ವಿರೋಧ ಬಂತು. ನಿಜ ಹೇಳಬೇಕೆಂದರೆ ನಾನು ನನ್ನ ಹೆತ್ತವರಿಗೆ ಪಾನಿಪುರಿ ಉದ್ಯಮ ಆರಂಭಿಸುತ್ತೇನೆಂದು ಹೇಳಲೇ ಇಲ್ಲ. ಇದನ್ನು ಆರಂಭಿಸುವ ಮೊದಲು ಸಾಕಷ್ಟು ಈ ಬಗ್ಗೆ ಓದಿಕೊಂಡೆ. ಸಾಕಷ್ಟು ತಯಾರಿ ಮಾಡಿಕೊಂಡೆ. ಅವರಿಗೆ ಮೊದಲೇ ಹೇಳಿದರೆ, ಖಂಡಿತ ನನ್ನ ಯೋಚನೆಯ ಬಗ್ಗೆ ತಕರಾರು ಮಾಡುತ್ತಾರೆಂದು ಗೊತ್ತಿತ್ತು. ಹೀಗಾಗಿ ಹೇಳಲಿಲ್ಲ. ಆರಂಭಿಸಿದೊಂದು ವಾರ ಬಿಟ್ಟು ಅವರಿಗೆ ಹೇಳಿದೆ. ಅವರು ಆರಂಭದಲ್ಲಿ ʻಐಎಎಸ್ ಮಾಡುತ್ತೇನೆ ಎಂದು ನೀನು ದೆಹಲಿಗೆ ಬಂದೆ, ಅಲ್ಲಿಗೆ ಹೋಗಿ ಪಾನಿಪುರಿ ಮಾರ್ತಾ ಇದ್ದೀಯಾʼ ಎಂದು ಬೇಸರ ಮಾಡಿಕೊಂಡರು. ನಾನೇನು ಮಾಡುತ್ತೇನೆ, ನನ್ನ ಕೆಲಸ ಹೇಗಿದೆ, ಹಾಗೂ ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ನೋಡಿದ ಮೇಲೆ ನೀವು ಏನೇ ಹೇಳುವುದಿದ್ದರೂ ಹೇಳಿ ಎಂದೆ. ಆಮೇಲೆ ಅವರು ಕೆಲ ದಿನ ನನ್ನ ಜೊತೆಗಿದ್ದು ನನ್ನ ಕೆಲಸ ನೋಡಿದ ಮೇಲೆ ಸರಿಯಾದರು ಎನ್ನುತ್ತಾಳೆ ಈಕೆ.
ನನ್ನ ಪಾನಿಪುರಿಯನ್ನು ಗೋಧಿಯಿಂದಲೇ ಮಾಡಿದ್ದು ಹಾಗೂ ಎಣ್ಣೆಯಲ್ಲಿ ಹುರಿದದ್ದಲ್ಲ. ಪೂರಿಯನ್ನು ಏರ್‌ಫ್ರೈ ಮಾಡಿದ್ದಾಗಿದ್ದು, ಇದು ಎಣ್ಣೆರಹಿತ ಪೂರಿಯಾಗಿದೆ. ಇದರಲ್ಲಿ ಬಳಸುವ ಇಪ್ಪು ಕೂಡಾ ಹಿಮಾಲಯನ್ ಪಿಂಕ್ ಉಪ್ಪು. ಸಿಹಿ ಚಟ್ನಿಗೂ ಕೂಡಾ ಸಕ್ಕರೆ ಹಾಕದೆ, ಕೇವಲ ಆರ್ಗ್ಯಾನಿಕ್ ಬೆಲ್ಲ, ಖರ್ಜೂರ ಹಾಗೂ ಹುಣಸೆಹಣ್ಣನ್ನು ಹಾಕಿ ಮಾಡಿದ್ದಾಗಿದೆ. ಇದು ಆರೋಗ್ಯಕರ ಪಾನಿಪುರಿ ಎಂಬ ಭರವಸೆ ನಾನು ಕೊಡಬಲ್ಲೆ ಎನ್ನುತ್ತಾರೆ ಆಕೆ.
ಇದನ್ನೂ ಓದಿ: Namakwali: ʻನಮಕ್‌ವಾಲಿʼ ಮಹಿಳೆಯರ ವಿಶೇಷ ಸ್ವಾದದ ಉತ್ತರಾಖಂಡದ ಉಪ್ಪು ವಿದೇಶದಲ್ಲೂ ಜನಪ್ರಿಯ!
ವಾರದ ಎಲ್ಲಾ ದಿನಗಳ ಒಂದೊಂದು ದಿನ ಒಂದೊಂದು ಮಾರುಕಟ್ಟೆಯ ಗಲ್ಲಿಯಲ್ಲಿ ಈಕೆ ತನ್ನ ಪಾನಿಪುರಿ ಗಾಡಿ ತರುತ್ತಿದ್ದು, ದೆಹಲಿಯ ಏಳು ಪ್ರಮುಖ ಮಾರುಕಟ್ಟೆಗಳಲ್ಲಿ ಈಕೆಯ ಕೈರುಚಿ ಸವಿಯಬಹುದು. ಐದು ಪೂರಿಗಳ್ನು ಒಂದು ಪ್ಲೇಟ್‌ನಲ್ಲಿ ಈಕೆ ಕೊಡುತ್ತಿದ್ದು ಇದಕ್ಕೆ ೩೦ ರೂಪಾಯಿಗಳ ದರ ನಿಗದಿ ಪಡಿಸಲಾಗಿದೆ. ಈಕೆಯ ಪಾನಿಪುರಿಯನ್ನು ಬಹಳ ಮಂದಿ ಸವಿದಿದ್ದು, ಒಮ್ಮೆ ಸವಿದವರು ಮತ್ತೆ ಈಕೆಯಲ್ಲಿಗೆ ಬರದೇ ಇರುವುದಿಲ್ಲವಂತೆ.
ಎಲ್ಲ ಬಗೆಯ ಜನರೂ ಗ್ರಾಹಕರಾಗಿ ಬರುತ್ತಾರೆ. ಆದರೆ, ನನಗೆ ಬಹಳಷ್ಟು ಮಂದಿ ಪ್ರೋತ್ಸಾಹದ ಮಾತನ್ನಾಡಿದ್ದಾರೆ. ನನ್ನ ಪಾನಿಪುರಿ ತಿಂದು ರುಚಿಯನ್ನು ಹೊಗಳಿದ್ದಾರೆ. ಒಳ್ಳೆಯದಾಗಲಿ ಎಂದಿದ್ದಾರೆ. ಹಾಗಾಗಿ ನಾನು, ನನ್ನನ್ನು ಕಾಲೆಳೆಯುವ ಮಂದಿಯ ಮಾತನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ಈ ಉದ್ಯಮವನ್ನು ಮುಂದಿನ ದಿನಗಳಲ್ಲಿ ವಿಸ್ತರಿಸುವ ಯೋಚನೆಯೂ ಇದೆ ಎಂದು ಕನಸಿನ ಬಗ್ಗೆ ಭರವಸೆಯ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ ತಾಪ್ಸಿ.
ಇದನ್ನೂ ಓದಿ: Women achievers | ನೈಕಾ, ಝಿವಾಮೆ ಆನ್‌ಲೈನ್ ಉದ್ದಿಮೆಯ ಹಿಂದಿನ ಇಬ್ಬರು ಮಹಿಳೆಯರ ಸ್ಫೂರ್ತಿ ಕತೆ!
ಆರೋಗ್ಯ
Health Tips: ಪ್ರತಿ ಮಹಿಳೆಯನ್ನೂ ಮೌನವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿವು! ನಿರ್ಲಕ್ಷ್ಯ ಬೇಡ
ಪುರುಷರ ಆರೋಗ್ಯಕ್ಕಿಂತ ಮಹಿಳೆಯ ಆರೋಗ್ಯ ಕೊಂಚ ಭಿನ್ನ. ಆಕೆಯಲ್ಲಿ ಹಾರ್ಮೋನಿನ ವೈಪರೀತ್ಯ ಸೇರಿದಂತೆ ಸಂತಾನೋತ್ಪತ್ತಿಯ ಪ್ರಮುಖ ಜವಾಬ್ದಾರಿಯೂ ಇರುವುದರಿಂದ ಆಕೆಯ ದೇಹಾರೋಗ್ಯ ಕಾಲಕಾಲಕ್ಕೆ ಬದಲಾವಣೆ ಕಾಣುತ್ತದೆ. ಹಾಗಾಗಿ, ಅವುಗಳ ಬಗ್ಗೆ ಗಮನ ಅತೀ ಅಗತ್ಯ.
ಮಹಿಳೆ ಪ್ರತಿ ಕುಟುಂಬದ ಕಣ್ಣು. ಕುಟುಂಬದ ಪ್ರತಿ ಸದಸ್ಯನ ಆರೋಗ್ಯದ ಉಸ್ತುವಾರಿ, ಕೀಲಿಕೈ ಆಕೆಯ ಜವಾಬ್ದಾರಿಯೂ ಆಗಿರುತ್ತದೆ. ಆದರೆ ಆಕೆಯ ಆರೋಗ್ಯವನ್ನು ಗಮನಿಸುವವರಾರು ಎಂಬ ಪ್ರಶ್ನೆ ಇಲ್ಲಿ ಬರದೇ ಇರುವುದಿಲ್ಲ. ಹಾಗೆ ನೋಡಿದರೆ, ಪ್ರತಿ ಮಹಿಳೆಯ ಆರೋಗ್ಯವೂ ಆಕೆಯ ಜೀವಿತಾವಧಿಯಲ್ಲಿ ಬದಲಾವಣೆ ಕಾಣುತ್ತಾ ಹೋಗುತ್ತದೆ. ಆರೋಗ್ಯದ ವಿಚಾರಕ್ಕೆ ಬಂದರೆ, ಪ್ರತಿ ದಶಕವೂ ಆಕೆಯ ಜೀವನದ ಮೈಲಿಗಲ್ಲು. ಇಂದು ಸುಶಿಕ್ಷಿತ ಮಹಿಳೆಗೆ ತನ್ನ ಆರೋಗ್ಯದ ಬಗ್ಗೆ ಯಾವೆಲ್ಲ ವಯಸ್ಸಿನಲ್ಲಿ ಕಾಳಜಿ ತೆಗೆದುಕೊಳ್ಳಬೇಕೆಂಬ ಅರಿವಿದೆ. ಆದರೆ, ಆಕೆಯೂ, ಕುಟುಂಬದ ಆರೋಗ್ಯದ ಜೊತೆಗೆ ವೃತ್ತಿ ಬದುಕನ್ನೂ ಹೆಗಲ ಮೇಲೆ ಹೊತ್ತುಕೊಂಡು ತನ್ನ ಆರೋಗ್ಯವನ್ನು ಕಡೆಗಣಿಸುತ್ತಾಳೆ. ಆದರೆ, ಮಹಿಳೆ ಕುಟುಂಬದ ಆರೋಗ್ಯದ ಜೊತೆಗೆ ಮುಖ್ಯವಾಗಿ ತನ್ನ ಆರೋಗ್ಯದ ಬಗ್ಗೆ ಗಮನ (health tips) ಕೊಡಬೇಕಿದೆ. ಪುರುಷರ ಆರೋಗ್ಯಕ್ಕಿಂತ ಮಹಿಳೆಯ ಆರೋಗ್ಯ ಕೊಂಚ ಭಿನ್ನ. ಆಕೆಯಲ್ಲಿ ಹಾರ್ಮೋನಿನ ವೈಪರೀತ್ಯ ಸೇರಿದಂತೆ ಸಂತಾನೋತ್ಪತ್ತಿಯ ಪ್ರಮುಖ ಜವಾಬ್ದಾರಿಯೂ ಇರುವುದರಿಂದ ಆಕೆಯ ದೇಹಾರೋಗ್ಯ ಕಾಲಕಾಲಕ್ಕೆ ಬದಲಾವಣೆ ಕಾಣುತ್ತದೆ. ಹಾಗಾಗಿ, ಅವುಗಳ ಬಗ್ಗೆ ಗಮನ ಅತೀ ಅಗತ್ಯ. ಒಳ್ಳೆಯ ಜೀವನಶೈಲಿ, ಪೋಷಕಾಂಶಯುಕ್ತ ಆಹಾರ ಆಕೆಗೆ ಅತ್ಯಂತ ಅಗತ್ಯ. ನಿರ್ಲಕ್ಯ್ಷ ಮಾಡಿದರೆ, ಆಕೆಯನ್ನು ಸದಾ ಮೌನವಾಗಿ ಕಾಡುವ ಅನಾರೋಗ್ಯಗಳು ಇವು.
1. ರಕ್ತಹೀನತೆ: ಇದು ಕೇಳಲು ಬಹು ಸರಳವಾದ ಸಮಸ್ಯೆ. ಸಮಸ್ಯೆಯೇ ಅಲ್ಲ ಎಂಬಂತೆ ಮಹಿಳೆಯರು ನಡೆದುಕೊಳ್ಳುವುದುಂಟು. ಕಿಶೋರಾವಸ್ಥೆಗೆ ಕಾಲಿಟ್ಟ ತಕ್ಷಣ ಹುಡುಗಿಯರ ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಯ ಸಮಯದಲ್ಲಿ ಸಾಕಷ್ಟು ಪೋಷಕಾಂಶಗಳು ದೇಹಕ್ಕೆ ಲಭ್ಯವಾಗದಿದ್ದರೆ ಅಂಥ ಸಮಯದಲ್ಲಿ ಬಹುವಾಗಿ ಕಾಡುವ ಸಮಸ್ಯೆ. ಇದರಿಂದ ನಿಃಶಕ್ತಿ ಉಂಟಾಗುತ್ತದೆ. ಹಾಗಾಗಿ ಮಹಿಳೆಯರು ಬಲವರ್ಧನೆಗೆ ಸರಿಯಾದ ಪೋಷಕಾಂಶಯುಕ್ತ ಆಹಾರವನ್ನು ಎಲ್ಲ ವಯಸ್ಸಿನಲ್ಲೂ ಸೇವಿಸಬೇಕು. ಎಲ್ಲ ಬಗೆಯ ತರಕಾರಿ, ಹಣ್ಣುಗಳು, ಕಬ್ಬಿಣಾಂಶಯುಕ್ತ ಆಹಾರ ಸೇವಿಸಬೇಕು.
2. ತಿನ್ನುವ ಸಮಸ್ಯೆ: ಕಿಶೋರಾವಸ್ಥೆ ಬಂದ ಕೂಡಲೇ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ. ಹಾರ್ಮೋನಿನ ಸಮಸ್ಯೆಯಿಂದಾಗಿ ಚರ್ಮದ ಸಮಸ್ಯೆ ಸೇರಿದಂತೆ ಸೌಂದರ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೆಚ್ಚಾದ ತೂಕ, ಬದಲಾಗುವ ಚರ್ಮ ಎಲ್ಲದಕ್ಕೆ ಸಮಾಜದಿಂದ ಎದುರಾಗುವ ಮಾತಿನ ಬಗ್ಗೆ ಹೆಚ್ಚು ಚಿಂತೆ ಆರಂಭವಾಗುತ್ತದೆ. ಅದಕ್ಕಾಗಿಯೇ ಹೆಣ್ಣುಮಕ್ಕಳಿಗೆ ಪಾಸಿಟಿವ್ ಮನಸ್ಥಿತಿಯನ್ನು ಈ ವಯಸ್ಸಿನಿಂದಲೇ ಕಲಿಸಬೇಕಿದೆ. ಜೊತೆಗೆ ಈ ಎಲ್ಲ ಆರೋಗ್ಯವನ್ನು ಸಾಧಿಸಲು ಸಣ್ಣ ವಯಸ್ಸಿನಲ್ಲಿಯೇ ಒಳ್ಳೆಯ ಆಹಾರ, ತಾಜಾ ಹಣ್ಣು ತರಕಾರಿಗಳ ಸೇವನೆಯೂ ಬಹಳ ಮುಖ್ಯವಾಗುತ್ತದೆ.
3. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್/ಡಿಸೀಸ್ (ಪಿಸಿಒಡಿ): ಸಮಸ್ಯೆ ಮೊದಲಿನಿಂದಲೇ ಅನೇಕರಿಗೆ ಇದ್ದರೂ ಬಹಳಷ್ಟು ಮಂದಿಗೆ ಅರಿವಿಗೆ ಬರುವುದು ಮದುವೆಯ ನಂತರವೇ. ಮದುವೆಯಾಗಿ ಮಕ್ಕಳಾಗುವಲ್ಲಿ ಸಮಸ್ಯೆಗಳು ಅರಿವಿಗೆ ಬಂದಾಗ ಬಹಳಷ್ಟು ಮಂದಿಗೆ ಈ ಸಮಸ್ಯೆಗೆ ಮೂಲ ಕಾರಣ ಪಿಸಿಒಡಿ ಎಂಬುದು ಗೊತ್ತಾಗುತ್ತದೆ. ಇದರಿಂದ ಬೊಜ್ಜು ಬರುವುದು, ಹಾರ್ಮೋನಿನ ಸಮಸ್ಯೆ, ಮೂಡು ಏರುಪೇರು, ಅತಿಯಾದ ಮೊಡವೆ ಸಮಸ್ಯೆ, ಋತುಚಕ್ರದಲ್ಲಿ ಏರುಪೇರು ಇತ್ಯಾದಿ ಸಮಸ್ಯೆಗಳು ಬರುತ್ತದೆ. ಇದಕ್ಕಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಹಾಗೂ ಜಂಕ್‌ನಿಂದ ದೂರವಿರುವುದು, ಉತ್ತರ ಜೀವನಪದ್ಧತಿ ಒಳ್ಳೆಯದು.
4. ಎಲುಬಿನ ತೊಂದರೆ: 30 ದಾಟಿದ ಕೂಡಲೇ ಮಹಿಳೆಯರ ಮೂಳೆ ಶಕ್ತಿಗುಂದಲು ಆರಂಭಿಸುತ್ತದೆ. ಹೀಗಾಗಿ ಕ್ಯಾಲ್ಶಿಯಂ ಅಗತ್ಯ ಮಹಿಳೆಗಿದೆ. ಹಾಲು, ಪನೀರ್, ಮೊಸರು ಇತ್ಯಾದಿ ಡೈರಿ ಉತ್ಪನ್ನಗಳ ಸೇವನೆ ಮಹಿಳೆಗೆ ಅತ್ಯಂತ ಅಗತ್ಯ. 40, 50 ಆಗುತ್ತಿದ್ದಂತೆ ಏಲುಬಿನ ಸವೆತದಂತಹ ತೊಂದರೆಗಳು ನಿಚ್ಚಳವಾಗಿ ಕಾಣತೊಡಗುತ್ತದೆ.
5. ತೂಕದಲ್ಲಿ ಹೆಚ್ಚಳ: ಮಹಿಳೆಯರ ದೇಹದಲ್ಲಿ ಪುರುಷರ ದೇಹಕ್ಕಿಂತ ಹೆಚ್ಚು ಕೊಬ್ಬು ಶೇಖರಣೆಯಾಗುತ್ತದೆ. ಇದರಿಂದಾಗಿಯೇ ಅಧಿಕ ರಕ್ತದೊತ್ತಡ, ಹೃದಯದ ತೊಂದರೆಗಳು, ಮಧುಮೇಹದಂತಹ ಸಮಸ್ಯೆ ಆಕೆಯನ್ನು ಕಾಡುತ್ತವೆ. ಹಾಗಾಗಿ ನಿಯಮಿತ ವ್ಯಾಯಾಮ ಆಕೆಗೆ ಅತ್ಯಂತ ಅಗತ್ಯ.
6. ಋತುಬಂಧ: ಮೆನೋಪಾಸ್ ಅಥವಾ ಋತುಬಂಧ ಮಹಿಳೆಯನ್ನು ಕಾಡುವ ಇನ್ನೊಂದು ಸಮಸ್ಯೆ. ಈ ಸಮಯದಲ್ಲಿ ಆಕೆಯಲ್ಲಾಗುವ ಹಾರ್ಮೋನ್ ವೈಪರೀತ್ಯದಿಂದಾಗಿ ಆಕೆಯ ಆರೋಗ್ಯ ಕುಸಿಯುತ್ತದೆ. ಶಕ್ತಿ ಕುಂದುತ್ತದೆ. ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ.
ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!
7. ಹೃದಯದ ತೊಂದರೆ: ಋತುಬಂಧದ ನಂತರ ಮಹಿಳೆಯಲ್ಲಿ ಹೃದಯದ ಸಮಸ್ಯೆಗಳು ಉಂಟಾಗುವ ಸಂಭವ ಹೆಚ್ಚು. ತೂಕದಲ್ಲಾಗುವ ಹೆಚ್ಚಳವೂ ಇದಕ್ಕೆ ಕಾರಣ. ಪ್ರತಿದಿನವೂ ವ್ಯಾಯಾಮ, ನಡಿಗೆ, ಉತ್ತಮ ಆಹಾರ ಸೇವನೆ ಬಹಳ ಮುಖ್ಯ.
8 ಮಧುಮೇಹ: ಋತುಬಂಧ ನೇರವಾಗಿ ಮಧುಮೇಹಕ್ಕೆ ಕಾರಣವಲ್ಲದಿದ್ದರೂ, ಈ ವಯಸ್ಸಿನ ನಂತರ ದೇಹದಲ್ಲಾಗುವ ಬದಲಾವಣೆ, ತೂಕದ ಹೆಚ್ಚಳ, ರಕ್ತದೊತ್ತಡ ಇತ್ಯಾದಿಗಳು ಮಧುಮೇಹಕ್ಕೆ ಕಾರಣವಾಗುತ್ತದೆ. ಸರಿಯಾದ ಸಮಯಕ್ಕೆ ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ.
9. ಮಾನಸಿಕ ಸಮಸ್ಯೆಗಳು: ಖಿನ್ನತೆ ಹಾಗೂ ಒತ್ತಡ ಮಹಿಳೆಯರು ಎದುರಿಸುವ ಸಾಮಾನ್ಯ ಮಾನಸಿಕ ಸಮಸ್ಯೆಗಳು. ವಯಸ್ಸಾಗುತ್ತಿದ್ದಂತೆ ಕಂಡುಬರುವ ಸಮಸ್ಯೆಗಳಿವು. ಆಂಟಿ ಆಕ್ಸಿಡೆಂಟ್‌ಯುಕ್ತ ಆಹಾರಗಳ ಸೇವನೆ ಇದಕ್ಕೆ ಬಹಳ ಮುಖ್ಯ. ಕಾರ್ಬೋಹೈಡ್ರೇಟ್‌ಯುಕ್ತ ಆಹಾರ ಕೂಡಾ ಅಷ್ಟೇ ಮುಖ್ಯ. ಇವು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಅಗತ್ಯ.
ಇದನ್ನೂ ಓದಿ: Health Tips: ಗ್ಯಾಸ್, ಹೊಟ್ಟೆಯುಬ್ಬರ ಸಮಸ್ಯೆಯ ನಿಯಂತ್ರಣಕ್ಕೆ ಸುಲಭೋಪಾಯಗಳು!
ಫ್ಯಾಷನ್
Fashion Super Womens: ಇವರೆಲ್ಲ ಫ್ಯಾಷನ್ ಲೋಕದಲ್ಲಿನ ಸೂಪರ್ ವಿಮೆನ್ಸ್!
ಸಮಾನತೆ, ಹಕ್ಕು, ಸ್ವಾತಂತ್ರ್ಯ ಎಂಬ ಸದ್ದು-ಗದ್ದಲವಿಲ್ಲದೆ ಫ್ಯಾಷನ್ ಲೋಕದ ಕ್ವೀನ್ಸ್ ಮೇಕರ್ಸ್, ಮಹಿಳೆಯರನ್ನು ರ್ಯಾಂಪ್ ಮೇಲೆ ಮುನ್ನೆಡೆಸುತ್ತಾ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಫ್ಯಾಷನ್ ಲೋಕದಲ್ಲಿ ಮಹಿಳೆಯರ ಪಾತ್ರ, ದೊರೆಯುತ್ತಿರುವ ಸ್ಥಾನ ಮಾನ ಕುರಿತಂತೆ, ಆಯ್ದ ನಾಲ್ಕು ಫ್ಯಾಷನ್ ಲೋಕದ ಸೆಲೆಬ್ರೆಟಿಗಳು ತಮ್ಮಅಭಿಪ್ರಾಯವನ್ನು ಮಂಡಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ರ್ಯಾಂಪ್‌ನಲ್ಲಿ ಹೆಜ್ಜೆ ಇಟ್ಟು ಮುನ್ನಡೆಯುವ ಪ್ರತಿ ಮಹಿಳೆಯೂ ಇಲ್ಲಿ ಸೂಪರ್ ವಿಮೆನ್ಸ್ ಲಿಸ್ಟ್‌ಗೆ ಸೇರುತ್ತಾರೆ. ನಾಚಿಕೆ-ಬಿನ್ನಾಣ-ಬಿಗುಮಾನಕ್ಕೆ ಈ ಕ್ಷೇತ್ರದಲ್ಲಿ ಅವಕಾಶವಿಲ್ಲ. ಸೌಂದರ್ಯದೊಂದಿಗೆ ಒಂದಿಷ್ಟು ಟ್ಯಾಲೆಂಟ್ ಇದ್ದರಂತೂ ಫ್ಯಾಷನ್ ಜಗತ್ತನ್ನೇ ಆಳಬಲ್ಲ ತಾಕತ್ತು ಫ್ಯಾಷನ್ ಲೋಕ್ಕಕೆ ಇದೆ ಎನ್ನುತ್ತಾರೆ. ಹೌದು. ಸಮಾನತೆ, ಹಕ್ಕು, ಸ್ವಾತಂತ್ರ್ಯ ಎಂಬ ಸದ್ದು-ಗದ್ದಲವಿಲ್ಲದೇ ಫ್ಯಾಷನ್ ಲೋಕದಲ್ಲಿ ಭವಿಷ್ಯದ ತಾರೆಯರನ್ನು ಹುಟ್ಟು ಹಾಕುವ ಕ್ವೀನ್ ಮೇಕರ್ಸ್‌ಗಳಿವರು. ಮಹಿಳಾ ದಿನಾಚರಣೆ ಅಂಗವಾಗಿ ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಇವರೆಲ್ಲಾ ಫ್ಯಾಷನ್ ಲೋಕದ ಮಹಿಳೆಯರು ಯಾವುದರಲ್ಲೂ ಕಡಿಮೆಯೇನಿಲ್ಲ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.
ಮಿಸೆಸ್ ಏಷಿಯಾ ಫೆಸಿಫಿಕ್ ಪ್ರತಿಭಾ ಸೌಂಶೀಮಠ್ ಹೇಳುವುದೇನು?
ಮಹಿಳೆ ಎಂದರೆ ಗಂಡ-ಮನೆ-ಮಕ್ಕಳು ಎಂಬಂತಾಗಿದ್ದ ಮಾತನ್ನು ಇಂದು ಫ್ಯಾಷನ್ ಲೋಕ ಸುಳ್ಳು ಮಾಡಿದೆ. ಗ್ಲಾಮರ್ ಕ್ಷೇತ್ರ ಎಂದಷ್ಟೇ ಸೀಮಿತವಾಗಿದ್ದ ಈ ಜಗತ್ತು ಇದೀಗ ಹೆಣ್ಣಿನ ಅಸ್ತಿತ್ವ ಕಂಡುಕೊಳ್ಳಲು ಸಾಕಷ್ಟು ಸಹಕರಿಸಿದೆ. ಅಷ್ಟು ಮಾತ್ರವಲ್ಲ, ಪ್ರತಿ ಮಹಿಳೆಯು ತನ್ನ ಬಗ್ಗೆ ಯೋಚಿಸಲು ಸದಾವಕಾಶ ಮಾಡಿಕೊಟ್ಟಿದೆ. ರ್ಯಾಂಪ್ ಕನಸು ಕಾಣುವ ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಿದೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಮಿಸೆಸ್ ಇಂಡಿಯಾ ಕರ್ನಾಟಕ ರಿಜಿನಲ್ ಡೈರೆಕ್ಟರ್ ಹಾಗೂ ಮಿಸೆಸ್ ಏಷಿಯಾ ಫೆಸಿಫಿಕ್ ಟೈಟಲ್ ವಿಜೇತರಾಗಿರುವ ಪ್ರತಿಭಾ ಸೌಂಶಿಮಠ್.
ಮಿಸೆಸ್ ಇಂಡಿಯಾ ಗ್ಲೋಬ್ ವೀಣಾ ಜೈನ್ ಮಾತು…
ಸ್ತ್ರೀ ಸ್ವಾತಂತ್ರ್ಯ, ಸಮಾನತೆ ಎಂದೆಲ್ಲಾ ಹೊರಗಿನ ಪ್ರಪಂಚದಲ್ಲಿ ಹೋರಾಟ ನಡೆಯುತ್ತಿದ್ದರೂ, ಸೈಲೆಂಟಾಗಿ ರ್ಯಾಂಪ್ ಲೋಕ ಮಾತ್ರ ಮಹಿಳೆಯರಿಗೆ ಸಂತಸದಿಂದಲೇ ಸದಾ ರೆಡ್‌ಕಾರ್ಪೆಟ್ ಹಾಸುತ್ತಾ ಬಂದಿದೆ. ಇಲ್ಲಿ ಮಹಿಳೆಯರು ದನಿ ಎತ್ತುವುದಿಲ್ಲ, ಬದಲಿಗೆ ಭವಿಷ್ಯದ ಕನಸು ಕಾಣುತ್ತಾ ಕಷ್ಟಪಟ್ಟು ಯಶಸ್ವಿಯಾಗಿ ಮುನ್ನೆಡೆಯುತ್ತಾಳೆ. ಇದು ಖುಷಿ ನೀಡುವ ವಿಚಾರ ಎನ್ನುತ್ತಾರೆ ಮಿಸೆಸ್ ಇಂಡಿಯಾ ಗ್ಲೋಬ್ ವೀಣಾ ಜೈನ್.
ಮಾಡೆಲ್‌ಗಳಿಗೆ ಆತ್ಮವಿಶ್ವಾಸ ತುಂಬುವ ಜಯಂತಿ ಬಲ್ಲಾಳ್
ಮೈಸೂರು ಫ್ಯಾಷನ್ ವೀಕ್ ಹಾಗೂ ಮಾಡೆಲ್ ಹಂಟ್‌ಗಳ ಮೂಲಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುವ ಹುಡುಗಿಯರಲ್ಲಿ ಪ್ರತಿ ಹೆಜ್ಜೆಯಲ್ಲೂ ಆತ್ಮವಿಶ್ವಾಸ ತುಂಬಿಸಿ ಗ್ರೂಮಿಂಗ್ ಮಾಡುವ ನಮಗೆ ಫ್ಯಾಷನ್ ಕ್ಷೇತ್ರದ ಬಗ್ಗೆ ಹೆಮ್ಮೆಯಿದೆ. ಫ್ಯಾಷನ್ ಕ್ಷೇತ್ರ ಕೂಡ ಹುಡುಗಿಯರು ಸ್ವಾವಲಂಬಿಗಳಾಗಲು ಸಾಥ್ ನೀಡುತ್ತಿದೆ ಎನ್ನುತ್ತಾರೆ ಫ್ಯಾಷನ್ ಸೆಲೆಬ್ರೆಟಿ ಹಾಗೂ ಸೆಲೆಬ್ರೆಟಿ ಡಿಸೈನರ್ ಜಯಂತಿ ಬಲ್ಲಾಳ್.
ಜ್ಯೋತ್ಸ್ನಾ ವೆಂಕಟೇಶ್ ರ್ಯಾಂಪ್ ಟಾಕ್
ಜೀವನದಲ್ಲಿ ಮಾತ್ರವಲ್ಲ, ರ್ಯಾಂಪ್ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದ್ದೇನೆ ಎಂದು ಧೈರ್ಯವಾಗಿ ಹೇಳಲು ಬಯಸುತ್ತೇನೆ. ಇನ್ನು ಫ್ಯಾಷನ್ ಕ್ಷೇತ್ರದಲ್ಲಿ ಸಮಾನತೆಗಾಗಿ ನಾವು ಕೂಗಬೇಕಿಲ್ಲ! ಹಕ್ಕಿಗಾಗಿ ಹೋರಾಡಬೇಕಿಲ್ಲ, ಗ್ಲಾಮರ್ ಜತೆಜತೆಗೆ ತಮ್ಮದೇ ಆದ ಐಡೆಂಟಿಟಿ ಸೃಷ್ಟಿಸಿಕೊಳ್ಳಬಹುದಾದ ಜಗತ್ತಿದು.
ಹೌದು. ಇಲ್ಲಿಕೇವಲ ಗ್ಲಾಮರ್‌ಗಷ್ಟೇ ಅಲ್ಲ, ಟ್ಯಾಲೆಂಟ್‌ಗೂ ಬೆಲೆ ಇದೆ. ಸಂತಸದ ವಿಚಾರವೆಂದರೇ, ಮಹಿಳೆಗೆ ಇಲ್ಲಿಗುರಿಗೆ ಕೊನೆಯೆಂಬುದಿಲ್ಲ ಎನ್ನುತ್ತಾರೆ ಫ್ಯಾಷನ್-ಫಿಟ್ನೆಸ್ ಸೆಲೆಬ್ರೆಟಿ ದಿವಾ ಜ್ಯೋತ್ಸ್ನಾ ವೆಂಕಟೇಶ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Women’s Day Fashion : ವಿಮೆನ್ಸ್ ಡೇ ಸ್ಪೆಷಲ್ ಇಮೇಜ್‌ಗೆ ಸಾಥ್ ನೀಡುವ ಫೆಮಿನೈನ್ ಲುಕ್ ಔಟ್‌ಫಿಟ್ಸ್
ಪ್ರವಾಸ
Women’s Day 2023: ಪ್ರವಾಸ ಮಾಡುವ ಮಹಿಳೆಯರಿಗಾಗಿ ಇಲ್ಲಿವೆ ಟಾಪ್ 10 ಸ್ಥಳಗಳು
ಅತ್ಯಂತ ಆಪ್ತ ಎನಿಸುವ ದೇಶದ ಪ್ರಮುಖ ಪ್ರವಾಸಿ ಸ್ಥಳಗಳ ಕಿರು ಪರಿಚಯ ಇಲ್ಲಿದೆ. ಒಮ್ಮೆ ನೋಡಿ ಬನ್ನಿ…
ಹೆಣ್ಣು ಕೂಡ ಗಂಡಿನಂತೆ ಸ್ವತಂತ್ರವಾಗಿ ಬದುಕುವ ಸಮಾಜದಲ್ಲಿ ಇಂದು ನಾವಿದ್ದೇವೆ. ಹೀಗಿರುವಾಗ ನೀವೊಬ್ಬರೇ ಅಥವಾ ನಿಮ್ಮ ಸ್ನೇಹಿತೆಯರೆಲ್ಲ ಸೇರಿಕೊಂಡು ಎಲ್ಲಾದರೂ ಲೇಡೀಸ್ ಟ್ರಿಪ್, ಗರ್ಲ್ಸ್ ಟ್ರಿಪ್ ಮಾಡಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಈ ಸ್ಥಳಗಳನ್ನೊಮ್ಮೆ ನೋಡಿ ಬನ್ನಿ.
ಪಾಂಡಿಚೆರಿ
ಗರ್ಲ್ಸ್ ಟ್ರಿಪ್ ಅಥವಾ ಲೇಡೀಸ್ ಟ್ರಿಪ್ ಎಂದಾಕ್ಷಣ ಮೊದಲು ಬರುವ ಹೆಸರೇ ಪಾಂಡಿಚೆರಿ. ಅತ್ಯಂತ ಸುಂದರವಾಗಿರುವ ಈ ನಗರದ ಫ್ರೆಂಚ್ ಶೈಲಿಯ ಕಾಲೋನಿಗಳು ಹೆಂಗಳೆಯರ ಮನಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ. ವರ್ಣಮಯವಾಗಿರುವ ಈ ಸ್ಥಳ ಫೋಟೋಶೂಟ್‌ಗೂ ಹೇಳಿ ಮಾಡಿಸಿರುವುದು.
ರಿಷಿಕೇಶ
ಪ್ರವಾಸ ಸ್ವಲ್ಪ ಧಾರ್ಮಿಕವಾಗಿಯೂ ಇರಲಿ ಎನ್ನುವವರು ಉತ್ತರಾಖಂಡದ ರಿಷಿಕೇಶಕ್ಕೆ ತೆರಳಬಹುದು. ಒಂದತ್ತ ಎತ್ತರದ ಹಿಮಾಲಯ ಪರ್ವತ ಶ್ರೇಣಿ ಇನ್ನೊಂದತ್ತ ಗಂಗಾ ಮಾತೆಯನ್ನು ಹೊಂದಿರುವ ಈ ನಗರ ದೈವೀಕ ಭಾವನೆಯನ್ನು ನಿಮ್ಮಲ್ಲಿ ತುಂಬುತ್ತದೆ. ಯೋಗ ಮತ್ತು ಧ್ಯಾನಕ್ಕೂ ಈ ನಗರ ಹೆಸರುವಾಸಿ.
ಉದಯ್‌ಪುರ
ಇತಿಹಾಸ, ಕಲೆ ಮತ್ತು ಅದ್ಧೂರಿತನವನ್ನು ಇಷ್ಟಪಡುವವರು ಉದಯ್‌ಪುರಕ್ಕೆ ಹೋಗಬಹುದು. ರಜಪೂತ ಶೈಲಿಯ ಈ ನಗರದಲ್ಲಿ ದೊಡ್ಡ ಅರಮನೆ, ಮಾನವ ನಿರ್ಮಿತ ಸರೋವರಗಳು ಸೇರಿದಂತೆ ಹಲವಾರು ರೀತಿಯ ವಿಶೇಷತೆಯಿದೆ. ಈ ನಗರ ನಿಮ್ಮನ್ನು ರಾಜರ ಕಾಲಕ್ಕೆ ಕರೆದೊಯ್ಯುವುದರಲ್ಲಿ ಅನುಮಾನವಿಲ್ಲ.
ಹಂಪಿ
ಇತಿಹಾಸ, ಐತಿಹಾಸಿಕ ಸ್ಮಾರಕಗಳೆಂದರೆ ಅದರಲ್ಲಿ ಮೊದಲು ನಿಲ್ಲುವುದು ನಮ್ಮ ಕರ್ನಾಟಕದ ಹಂಪಿ. ಈ ಸ್ಥಳದಲ್ಲಿ ಅಡ್ಡಾಡಿ ಬಂದರೆ ಮನಸ್ಸಿನ ದುಗುಡವೆಲ್ಲ ದೂರಾಗಿ ಒಂದು ರೀತಿಯ ಶಾಂತಿ, ನೆಮ್ಮದಿ ನಿಮ್ಮನ್ನಾವರಿಸಿಕೊಳ್ಳುತ್ತದೆ. ಹಿಂದಿನ ಕಾಲದ ಶಿಲ್ಪಿಗಳ ಬಗ್ಗೆ ಉದ್ಘಾರ ತೆಗೆಯುವಂತೆ ಮಾಡುತ್ತದೆ ನಮ್ಮ ಹಂಪಿ.
ರಾಧಾನಗರ ಬೀಚ್
ಅನೇಕ ಹೆಣ್ಣು ಮಕ್ಕಳಿಗೆ ಬೀಚ್ ಎಂದರೆ ಪಂಚ ಪ್ರಾಣವಾಗಿರುತ್ತದೆ. ಅಂಥವರಿಗೆ ಹೇಳಿ ಮಾಡಿಸಿರುವುದು ಈ ರಾಧಾನಗರ ಬೀಚ್. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ರಾಧಾನಗರ ಏಷ್ಯಾದಲ್ಲಿಯೇ ಅತ್ಯಂತ ಸುಂದರವಾದ ಬೀಚ್‌ಗಳಲ್ಲಿ ಒಂದು. ಮಾಲ್ಡೀವ್ಸ್ ಬದಲು ಇಲ್ಲಿಗೇ ಪ್ರಯಾಣ ಬೆಳೆಸಿ ಎಂಜಾಯ್ ಮಾಡಬಹುದು.
ಮಡಿಕೇರಿ
ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ಹೇಳಿ ಮಾಡಿಸಿರುವ ಮತ್ತೊಂದು ತಾಣವೆಂದರೆ ಅದು ಮಡಿಕೇರಿ. ಬೆಟ್ಟ, ಗುಟ್ಟ, ಜಲಪಾತಗಳು, ಹೀಗೆ ಎಲ್ಲೆ ನೋಡಿದರೂ ಹಸಿರೇ ತುಂಬಿರುವ ತಾಣವದು. ನಿಸರ್ಗವನ್ನು ಇಷ್ಟಪಡುವವರು ಮಡಿಕೇರಿಗೆ ತೆರಳಿ ಖುಷಿಯಿಂದ ಕಾಲ ಕಳೆಯಬಹುದಾಗಿದೆ.
ಮೇಘಾಲಯ
ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮೇಘಾಲಯ ಹೆಣ್ಣು ಮಕ್ಕಳ ಪ್ರವಾಸಕ್ಕೆ ಸರಿಹೊಂದುವ ರಾಜ್ಯ. ಜಲಪಾತಗಳು, ಬೆಟ್ಟ, ಗುಡ್ಡಗಳಿಂದ ತುಂಬಿರುವ ರಾಜ್ಯವಿದು. ಇಲ್ಲಿನ ಉಮಿಯಂ ಸರೋವರ ಮತ್ತು ಮರೈ ಗುಹೆ ಪ್ರವಾಸಿಗರೆಲ್ಲರನ್ನು ಆಕರ್ಷಿಸುವಂತಹ ಸ್ಥಳಗಳಾಗಿವೆ.
ಮೈಸೂರು
ಮಹಿಳೆಯರ ಒಂದು ಅಥವಾ ಎರಡು ದಿನದ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾದವೆಂದರೆ ಅದು ನಮ್ಮ ಮೈಸೂರು. ಅರಮನೆ, ಕೆ.ಆರ್.ಎಸ್, ಮೃಗಾಲಯ ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಸ್ವಚ್ಛ ನಗರವೆಂಬ ಖ್ಯಾತಿ ಪಡೆದಿರವ ಮೈಸೂರಿನಲ್ಲಿ ಹೆಂಗಳೆಯರು ಅರಾಮವಾಗಿ ಸುತ್ತಾಡಬಹುದಾಗಿದೆ.
ಗೋಕರ್ಣ
ಗೋವಾ ಎಲ್ಲರ ಕನಸು. ಆದರೆ ಬರೀ ಹೆಣ್ಣು ಮಕ್ಕಳಿಗೆ ಅದು ಸುರಕ್ಷಿತ ಪ್ರವಾಸಿ ತಾಣವಲ್ಲ ಎನ್ನುವಂತವರು ಗೋಕರ್ಣದತ್ತ ಮುಖ ಮಾಡಬಹುದು. ದೇವಸ್ಥಾನದಲ್ಲಿ ದೇವರ ದರ್ಶನ, ಬೀಚ್‌ನ ನೀರಿನಲ್ಲಿ ಆಟ, ಮಾರ್ಕೆಟ್‌ನಲ್ಲಿ ಶಾಪಿಂಗ್ ಮಾಡಬಹುದು. ಹಲವಾರು ರೆಸಾರ್ಟ್, ರೆಸ್ಟೋರೆಂಟ್‌ಗಳು ಇಲ್ಲಿವೆ.
ಸಕಲೇಶಪುರ
ಕರ್ನಾಟಕದಲ್ಲಿ ಸಕಲೇಶಪುರ ಕೂಡ ಹೆಣ್ಣು ಮಕ್ಕಳ ಪ್ರವಾಸಕ್ಕೆ ಉತ್ತಮ ತಾಣವಾಗಿದೆ. ನಿಸರ್ಗವನ್ನು ಇಷ್ಟಪಡುವವರು ಈ ಸ್ಥಳದತ್ತ ಹೋಗಬಹುದು. ಬೆಟ್ಟ, ಗುಡ್ಡ, ಜಲಪಾತಗಳು ಇಲ್ಲಿ ಪ್ರಸಿದ್ಧ. ಈ ಸ್ಥಳಕ್ಕೆ ಹತ್ತಿರದಲ್ಲಿ ಇನ್ನೂ ಹಲವು ಪ್ರವಾಸಿ ತಾಣಗಳಿರುವುದರಿಂದ ಪ್ರವಾಸದ ಮಜ ಇನ್ನಷ್ಟು ಹಚ್ಚುತ್ತದೆ.
ಇದನ್ನೂ ಓದಿ: International Women’s Day: ಕೊರೊನಾ ಕಾಲದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದು ಹೋರಾಡಿದ ಮಹಿಳೆಯರು
ಆರೋಗ್ಯ
Women’s Day 2023: ಮಹಿಳೆಯರನ್ನು ಸದ್ದಿಲ್ಲದೆ ಕಾಡುವ 5 ಕಾಯಿಲೆಗಳಿವು
ಸಮಸ್ಯೆ ಇದೆ ಎಂಬುದು ತಿಳಿಯುವಷ್ಟರಲ್ಲಿ ರೋಗ ಸಾಕಷ್ಟು ಉಲ್ಭಣಿಸಿರುತ್ತದೆ. ಕೆಲವೊಮ್ಮೆ ಪ್ರಾಣಘಾತಕವೂ ಆಗಬಹುದು. ಹೀಗೆ ಗೊತ್ತಾಗದಂತೆ ಮಹಿಳೆಯರನ್ನು (Women’s Day 2023) ಕಾಡುವ ಐದು ರೋಗಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮಲ್ಟಿಟಾಸ್ಕಿಂಗ್ ಎಂಬುದು ಇತ್ತೀಚಿನ ಹೆಸರು. ಹಾಗೆಂದು ಹಲವಾರು ಕೆಲಸಗಳನ್ನು ಒಟ್ಟೊಟ್ಟಿಗೆ ನಿಭಾಯಿಸುವ ಕಲ್ಪನೆ ಹೊಸದಲ್ಲ. ಆಫೀಸಿನ ಕೆಲಸ, ಮನೆಯಲ್ಲಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುವ ಹೊಣೆಗಾರಿಕೆ, ತಾಯ್ತನ ಜವಾಬ್ದಾರಿಗಳು, ಸಾಮಾಜಿಕ ಒತ್ತಡಗಳು- ಇವೆಲ್ಲ ಮಹಿಳೆಯರ ಪಾಲಿಗೆ ಎಂದಿನಿಂದಲೋ ಇದ್ದಂಥವು- ಮಲ್ಟಿಟಾಸ್ಕಿಂಗ್ ಎಂಬ ಪದ ಹುಟ್ಟುವ ಮೊದಲಿನಿಂದಲೇ.
ಹೀಗೆ ಎಲ್ಲದರ ಹೊಣೆ ಹೊರುವವರಿಗೆ ತಮ್ಮ ಬಗೆಗಿನ ಕಾಳಜಿಗೆ ಸಮಯವೇ ದೊರೆಯುದೆ ಹೋಗುವುದು ಎಲ್ಲರಿಗೂ ಗೊತ್ತಿರುವ ರಹಸ್ಯ. ರಕ್ತದೊತ್ತಡ, ಮಧುಮೇಹದಂಥ ಹಲವಾರು ಸಮಸ್ಯೆಗಳು ಸದ್ದಿಲ್ಲದೆ ಬಂದು ಅಮರಿಕೊಳ್ಳುತ್ತವೆ. ಸಮಸ್ಯೆ ಇದೆ ಎಂಬುದು ತಿಳಿಯುವಷ್ಟರಲ್ಲಿ ರೋಗ ಸಾಕಷ್ಟು ಉಲ್ಭಣಿಸಿರುತ್ತದೆ, ರೋಗಿ ನರಳುವಂತಾಗುತ್ತದೆ. ಕೆಲವೊಮ್ಮೆ ಪ್ರಾಣಘಾತುಕವೂ ಆಗಬಹುದು. ಹೀಗೆ ಗೊತ್ತಾಗದಂತೆ ಬಂದೆರಗುವ ಐದು ರೋಗಗಳ ಬಗ್ಗೆ ಇಲ್ಲಿದೆ ಮಾಹಿತಿ. ಇವುಗಳ ಬಗ್ಗೆ ಎಚ್ಚರ ವಹಿಸಿ, ಆರೋಗ್ಯ ರಕ್ಷಿಸಿಕೊಳ್ಳಿ.
ಅಂಡಾಶಯದ ಕ್ಯಾನ್ಸರ್
ಸುಮಾರು 75 ಮಹಿಳೆಯರಲ್ಲಿ ಒಬ್ಬರಿಗೆ ಈ ಅಪಾಯಕಾರಿ ರೋಗ ಕಾಣಿಸಿಕೊಳ್ಳುತ್ತಿದೆ. ರೋಗ ಉಲ್ಭಣಿಸುವವರೆಗೆ ತನ್ನ ಇರುವಿಕೆಯನ್ನೇ ತೋರಿಸಿಕೊಳ್ಳದಿರುವ ಈ ರೋಗ ಪತ್ತೆಯಾಗುವಷ್ಟರಲ್ಲಿ ಚಿಕಿತ್ಸೆಯೇ ಕಷ್ಟ ಎನ್ನುವಂತಾಗುತ್ತಿದೆ. ಪ್ರಾರಂಭದಲ್ಲಿ ಪತ್ತೆಯಾದರೆ ಮಹಿಳೆಯರು ಸಂಪೂರ್ಣ ಗುಣಮುಖರಾಗುವುದಕ್ಕೆ ಸಾಧ್ಯ. ಆದರೆ ರೋಗ ಮುಂದುವರಿದರೆ, ಮುಂದಿನ ಐದು ವರ್ಷ ಬದುಕುವ ಸಾಧ್ಯತೆಯೂ ಶೇ. 46ರಷ್ಟು ಮಾತ್ರ. ಈ ರೋಗದ ಲಕ್ಷಣಗಳು ಕೆಲವೊಮ್ಮೆ ಎಷ್ಟೊಂದು ಸೌಮ್ಯವಾಗಿರುತ್ತವೆ ಎಂದರೆ, ವೈದ್ಯರುಗಳನ್ನೂ ಯಾಮಾರಿಸುವಷ್ಟು! ಹಾಗಾಗಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ.
ಹೃದ್ರೋಗಗಳು
ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳನ್ನು ಗ್ರಹಿಸದಿರುವ ಅಥವಾ ಗ್ರಹಿಸಿದರೂ ನಿರ್ಲಕ್ಷ ಮಾಡುವ ಸ್ವಭಾವ ಮಹಿಳೆಯರದ್ದು. ಹಾಗಾಗಿ ಎದೆ ಅಥವಾ ಭುಜ ನೋವು, ಉಸಿರು ಹಿಡಿದಂತಾಗುವುದು, ಹೊಟ್ಟೆ ತೊಳೆಸುವುದು, ಆಯಾಸ- ಇಂಥ ಲಕ್ಷಣಗಳನ್ನು ನಿರ್ಲಕ್ಷಿಸುವಂತಿಲ್ಲ. ಅದರಲ್ಲೂ ಕುಟುಂಬದ ಹತ್ತಿರದ ಸಂಬಂಧಿಗಳಲ್ಲಿ ಇಂಥ ಕಾಯಿಲೆಗಳಿದ್ದರೆ ಎಚ್ಚರ ವಹಿಸುವುದು ಸೂಕ್ತ.
ಲೂಪಸ್
ಇದೊಂದು ಆಟೊಇಮ್ಯೂನ್ ಕಾಯಿಲೆ. ಆಟೊಇಮ್ಯೂನ್ ಕಾಯಿಲೆಯೆಂದರೆ, ತನ್ನದೇ ದೇಹದ ಅಂಗಗಳನ್ನು ಆಗಂತುಕನೆಂದು ತಿಳಿದ ದೇಹದ ಪ್ರತಿರೋಧಕ ವ್ಯವಸ್ಥೆ, ಅದರ ಮೇಲೆ ದಾಳಿ ಮಾಡುತ್ತದೆ. ಇಂಋ ಕಾಯಿಗೆಳಲ್ಲಿ ಸಾಮಾನ್ಯವಾಗಿ, ಶರೀರದ ಪ್ರತಿರೋಧಕ ಶಕ್ತಿಯನ್ನು ತಗ್ಗಿಸುವಂಥ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಲೂಪಸ್ ದೇಹದ ಯಾವುದೇ ಭಾಗವನ್ನು ಬಾಧಿಸಬಹುದಾದ, ಗುಣಪಡಿಸಲಾಗದ ರೋಗವಿದು. ಆಗಾಗ ಜ್ವರ, ಕೀಲು ನೋವು, ಬಾಯಿ ಹುಣ್ಣು, ಬಿಸಿಲಿಗೆ ಒಡ್ಡಿದ ಭಾಗಗಳಲ್ಲಿ ಕೆಂಪು ದದ್ದುಗಳು, ಮುಖದ ಮೇಲೆ ಚಿಟ್ಟೆಯಾಕಾರದ ದದ್ದುಗಳು, ಕೂದಲು ಉದುರುವುದು, ಮೈಗ್ರೇನ್- ಇವೆಲ್ಲಾ ಲೂಪಸ್‌ನ ಲಕ್ಷಣಗಳು. ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚಾಗಿ ನರಳಿಸುವ ರೋಗವಿದು.
ಮಧುಮೇಹ
ಇದಂತೂ ಆಬಾಲವೃದ್ಧರಾದಿಯಾಗಿ ಯಾರನ್ನೂ ಯಾವಾಗಲೂ ಬಾಧಿಸಬಹುದಾದ ರೋಗ. ಈ ಬಗ್ಗೆ ಎಲ್ಲೆಡೆ ಬೇಕಾದಷ್ಟು ಮತ್ತು ಬೇಕಾಬಿಟ್ಟಿ ಮಾಹಿತಿಗಳು ಲಭ್ಯವಿರುವುದರಿಂದ, ಸೂಕ್ತ ಚಿಕಿತ್ಸೆಯಂತೂ ದೊರೆಯದೆ ಹೋಗುವ ಪ್ರಶ್ನೆಯಿಲ್ಲ. ಆದರೆ ರೋಗದ ಲಕ್ಷಣಗಳನ್ನು ಪ್ರಾರಂಭದಲ್ಲೇ ಗ್ರಹಿಸಿದರೆ, ಮಧುಮೇಹ ಉಲ್ಭಣಿಸಿ ದೇಹದ ಇತರ ಅಂಗಗಳು ಜಖಂ ಆಗದಂತೆ ರಕ್ಷಿಸಿಕೊಳ್ಳುವುದು ಸಾಧ್ಯವಿದೆ. ಮಾತ್ರವಲ್ಲ, ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಧುಮೇಹವನ್ನು ಹತೋಟಿಯಲ್ಲಿ ಇಡುವುದು ಅಸಾಧ್ಯವಲ್ಲ.
ಪಾರ್ಕಿನ್ಸನ್ ಕಾಯಿಲೆ
ನರ ಸಂಬಂಧಿ ಸಂಕೀರ್ಣ ಕಾಯಿಲೆಯಿದು. ಒಮ್ಮೆ ಈ ಕಾಯಿಲೆ ಆರಂಭವಾದರೆ ಅದನ್ನು ಸರಿಪಡಿಸಲು ಸಾಧ್ಯವಾಗದು. ಕೈ, ಕಾಲು, ತಲೆಗಳೆಲ್ಲಾ ತಮ್ಮಷ್ಟಕ್ಕೆ ಕಂಪಿಸುವುದಕ್ಕೆ, ನಡುಗುವುದಕ್ಕೆ ಪ್ರಾರಂಭಿಸುತ್ತವೆ. ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ರೋಗಿಯ ಚಲನ-ವಲನ, ಸಂವಹನಕ್ಕೆ ಸಮಸ್ಯೆಯಾಗಬಹುದು. ಮೆದುಳಿನ ನರಗಳು ನಶಿಸುವುದಕ್ಕೆ ಪ್ರಾರಂಭವಾದಾಗ, ಮೊದಲಿಗೆ ಲಕ್ಷಣಗಳು ಸೌಮ್ಯವಾಗಿಯೇ ಇರುತ್ತವೆ. ಕ್ರಮೇಣ ಕೈಕಾಲುಗಳ ಕಂಪನ ವಿಷಮಿಸುತ್ತದೆ. ಆನುವಂಶಿಕವಾಗಿಯೂ ಬರಬಹುದಾದ ಇದನ್ನು ಗುಣಪಡಿಸುವಂಥ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ನಡುಕವನ್ನು ಹತೋಟಿಯಲ್ಲಿಟ್ಟು ರೋಗಿಯ ಬದುಕನ್ನು ಆದಷ್ಟೂ ಸಾಮಾನ್ಯಗೊಳಿಸುವಂಥ ಔಷಧಿಗಳು ಲಭ್ಯವಿದೆ.
ಇದನ್ನೂ ಓದಿ: International Women’s Day : ಕಾರ್ಪೋರೇಟ್ ವಲಯಕ್ಕೆ ಕಣ್ಮಣಿಗಳಾಗಿ ದೇಶಕ್ಕೆ ಕೀರ್ತಿ ಈ ಮಹಿಳಾ ಉದ್ಯಮಿಗಳು
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು