ಕೆಲವೊಮ್ಮೆ ಹೊಸತೇನನ್ನಾದರೂ ನಾವೇ ಮಾಡಬೇಕು ಎಂಬ ಹಠ ನಮ್ಮನ್ನು ಸಾಧನೆಯತ್ತ ಕೊಂಡೊಯ್ಯುತ್ತದೆ. ಮಾಡಬೇಕು ಎಂಬ ಛಲ, ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ, ಹೊರಟ ಹಾದಿಯಲ್ಲಿ ಬದ್ಧತೆ ಇದ್ದರೆ ನಮ್ಮನ್ನು ಹಿಡಿಯುವವರೇ ಇಲ್ಲ ಎಂದು ತೋರಿಸಿಕೊಟ್ಟವರು ಈ ಅಕ್ಕ ತಂಗಿ ಯಶೋದಾ ಹಾಗೂ ರಿಯಾ! ನಮ್ಮ ಕೈಯಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕೂರುವ ಮಂದಿಗಿವರು ಸ್ಪೂರ್ತಿಕತೆ.
ಬೆಂಗಳೂರಿನಲ್ಲಿ ನೆಲೆಸಿರುವ ಯಶೋದಾ ಕರೂತರಿ ಹಾಗೂ ರಿಯಾ ಕರೂತರಿ ಎಂಬ ಅಕ್ಕತಂಗಿಯರು ಆರಂಭಿಸಿದ್ದು ಹೂವಿನ ಬ್ಯುಸಿನೆಸ್ಸು. ಆದರೆ, ಇವರು ಯೋಚಿಸಿದ್ದು ಕೊಂಚ ಭಿನ್ನ. ಉಡುಗೊರೆಯಾಗಿ ನೀಡಲು, ಮದುವೆ, ಸಮಾರಂಭಗಳ ಅಲಂಕಾರಕ್ಕೆಂದು ಇರುವ ಹೂವಿನ ಮಾರುಕಟ್ಟೆ ಸಾಕಷ್ಟು ಬೆಳೆದಿದೆ, ಆದರೆ, ಪೂಜೆಯ ಹೂವಿನ ಮಾರುಕಟ್ಟೆಗೊಂದು ನಿರ್ದಿಷ್ಟ ಆಕಾರವಿಲ್ಲ. ಯಾಕೆ ನಾವು ಮನೆಮನೆಗೆ ಹಾಲು, ಪೇಪರ್ ಪೂರೈಕೆ ಮಾಡುವ ಮಾದರಿಯಲ್ಲೇ ದೇವರಿಗೆ ನಿತ್ಯ ಅರ್ಪಿಸುವ ಹೂವಿನ ಬ್ಯುಸಿನೆಸ್ ಮಾಡಬಾರದು ಎಂಬ ಯೋಚನೆ ಅಕ್ಕತಂಗಿಗೆ ಬಂದಿದ್ದೇ ತಡ, ೧೦ ಲಕ್ಷ ರೂಪಾಯಿ ಬಂಡವಾಳ ಹಾಕಿ ಸಣ್ಣದೊಂದು ಬ್ಯುಸಿನೆಸ್ ಆರಂಭಿಸಿಯೇ ಬಿಟ್ಟರು. ೨೦೧೯ರಲ್ಲಿ ʻಹೂವುʼ ಎಂಬ ಹೆಸರನ್ನೇ ಇಟ್ಟುಕೊಂಡು ಶುರುಮಾಡಿದ ಈ ಸಂಸ್ಥೆಯೀಗ ನಾಲ್ಕೈದು ವರ್ಷಗಳೊಳಗೆ ಎಂಟು ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಸಂಸ್ಥೆಯಾಗಿ ಬೆಳೆದಿದೆ.
ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಯಶೋದಾ ಹಾಗೂ ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ರಿಯಾಗೆ ಈ ಹೂವಿನ ಬ್ಯುಸಿನೆಸ್ ಐಡಿಯಾ ಬಂದ್ದು ಹೇಗೆ ಎಂಬುದಕ್ಕೂ ಹಿನ್ನೆಲೆಯಿದೆ. ಇವರಿಬ್ಬರಿಗೂ ಹೂವಿನ ಮಾರುಕಟ್ಟೆ ಹೊಸತಲ್ಲ. ಅಪ್ಪ ರಾಮ್ ಕರೂತರಿ ಅವರಿಗೆ ಕಿನ್ಯಾ, ಇಥಿಯೋಪಿಯಾ ಹಾಗೂ ಭಾರತದಲ್ಲಿ ಗುಲಾಬಿ ಹೂವಿನ ತೋಟವಿದೆಯಂತೆ. ೯೦ರ ದಶಕದಲ್ಲಿ ಕಿನ್ಯಾದಲ್ಲಿದ್ದ ಇವರ ತೋಟ ವಿಶ್ವದಲ್ಲೇ ಅತ್ಯಂತ ಗುಲಾಬಿ ತೋಟವೆಂದು ಗುರುತಿಸಲ್ಪಟ್ಟಿತ್ತಂತೆ. ಹೀಗಾಗಿ ಸಣ್ಣ ವಯಸ್ಸಿನಿಂದಲೂ ಅಪ್ಪನ ಮೂಲಕ ಹೂವಿನ ಮಾರುಕಟ್ಟೆ ನೋಡುತ್ತಲೇ ಇವರಿಬ್ಬರೂ ಬೆಳೆದಿದ್ದಾರೆ. ಆದರೆ, ಭಾರತದಂತಹ ದೇಶದಲ್ಲಿ ಜನರು ಭಕ್ತಿಯಿಂದ ದೇವರಿಗೆ ಹೂಗಳನ್ನು ನಿತ್ಯವೂ ಅರ್ಪಿಸಲು, ಮನೆಗಳಲ್ಲಿ ಪೂಜೆ ಮಾಡಲು, ತಮ್ಮ ವಾಹನಗಳಲ್ಲಿ ಮಾಲೆಯನ್ನು ನೇತಾಡಿಸಲು ಹೂವಿನ ಪೂರೈಕೆಗೆ ಸರಿಯಾದ ವ್ಯವಸ್ಥೆಗಳಿಲ್ಲ ಅನಿಸಿತ್ತು. ಹೀಗಾಗಿ ಈ ಯೋಚನೆಯೊಂದು ಹೂವು ಎಂಬ ಸಂಸ್ಥೆಯ ರೂಪ ತಳೆಯಿತು ಎಂಬುದುದ ಈ ಅಕ್ಕತಂಗಿಯರ ವಿವರಣೆ.
ಅಲಂಕಾರಿಕ ಹೂವಿನ ಮಾರುಕಟ್ಟೆ ಬಹಳ ಬೆಳೆದಿದೆ. ಆದರೆ, ಪೂಜೆಯ ಹೂವಿನ ಮಾರುಕಟ್ಟೆ ಹಾಗೆಯೇ ಇದೆ ಎಂದು ಅಭಿಪ್ರಾಯಪಡುವ ಇವರು, ಮಾರುಕಟ್ಟೆಯ ಅಧ್ಯಯನವನ್ನು ನಡೆಸಿ ಈ ಹೊಸ ಸ್ಟಾರ್ಟಪ್ ಅನ್ನು ಆರಂಭಿಸಿದರಂತೆ. ಅವರು ಹೇಳುವಂತೆ, ಇಲ್ಲಿ ಬಹಳಷ್ಟು ಹೂಗಳು ವೇಸ್ಟಾಗಿ ಬಿಡುತ್ತವೆ. ಇದಕ್ಕೆ ಸರಿಯಾದ ವ್ಯವಸ್ಥಿತವಾದ ರೂಪುರೇಷೆಗಳಿಲ್ಲ. ಬೇರೆ ಬೇರೆ ಸ್ತರಗಳಲ್ಲಿ ಹೂಗಳು ಕಟಾವು ಮಾಡಿದ ಮೇಲೆ ಅದು ಜನರನ್ನು ತಲುಪುವ ವೇಳೆಗಾಗಲೇ ಅದು ತನ್ನ ತಾಜಾತನವನ್ನು ಕಳೆದುಕೊಂಡಾಗಿರುತ್ತದೆ. ಹೀಗಾಗಿ ವ್ಯಾಪಾರಿಗಳಿಗೂ ನಷ್ಟವಾಗುತ್ತದೆ. ಇವೆಲ್ಲವನ್ನೂ ಗಮನಿಸಿ ನಾವು, ಈ ಉದ್ದಿಮೆಯಲ್ಲಿ ಹೊಸತೊಂದು ಬದಲಾವಣೆ ತರಬೇಕೆಂದು ಇದನ್ನು ಆರಂಭಿಸಿದೆವು ಎನ್ನುತ್ತಾರೆ.
ಸದ್ಯಕ್ಕೆ ಹೂವು ಸಂಸ್ಥೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಾದ್ಯಂತ ಸುಮಾರು ೫೦ಕ್ಕೂ ಹೆಚ್ಚು ರೈತರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ತಾಜಾ ಹೂವುಗಳನ್ನು ನೇರವಾಗಿ ಅವರಿಂದ ಪಡೆದು ಅದನ್ನು ಗ್ರಾಹಕರ ಮನೆಬಾಗಿಲಿಗೆ ನಿತ್ಯ ತಲುಪಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ. ನೇರವಾಗಿ ರೈತರ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ ಇಲಿ ಮಧ್ಯವರ್ತಿಗಳ ಹಾಗೂ ಸುಮಾರು ಸಮಯ ಹಾಳಾಗುವುದೂ ತಪ್ಪುತ್ತದೆ. ಹೂವು ತಾಜಾ ಆಗಿ ಗ್ರಾಹಕರ ಕೈ ಸೇರುತ್ತದೆ ಎಂಬುದು ಹೂವು ಸಂಸ್ಥೆಯ ಮುಖ್ಯ ಕಾರ್ಯವೈಖರಿ.
ಹೂವು ಸಂಸ್ಥೆ ಪ್ರತಿ ತಿಂಗಳಿಗೆ ಸುಮಾರು ೧,೫೦,೦೦೦ ಆರ್ಡರ್‌ಗಳನ್ನು ಪಡೆಯುತ್ತದಂತೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಗುರುಗ್ರಾಮ, ನೋಯ್ಡಾ, ಮುಂಬೈ, ಪುಣೆ, ಮೈಸೂರು ನಗರಗಳಲ್ಲಿ ತನ್ನ ಸೇವೆಯನ್ನು ಹೊಂದಿದೆ. ಇವರು ಅಗರಬತ್ತಿಯನ್ನೂ ಇತ್ತೀಚೆಗೆ ಸೇರಿಸಿದ್ದೂ ಅದೂ ಕೂಡಾ ಯಶಸ್ಸನ್ನೇ ಕಾಣುತ್ತಿದೆ.
ಇದನ್ನೂ ಓದಿ | Business success | ಜ್ಯೋತಿಷ್ಯ ನಂಬಿರದ ಯುವಕನ ಭವಿಷ್ಯ ರೂಪಿಸಿದ ಆನ್‌ಲೈನ್ ಆಸ್ಟ್ರಾಲಜಿ ಸ್ಟಾರ್ಟಪ್!
ಹೂವು ಸಂಸ್ಥೆಯ ಮೂಲಕ ಗ್ರಾಹಕರು ಬಿಡಿ ಹೂವುಗಳು, ತುಳಸಿ, ಧರ್ಬೆ ಸೇರಿದಂತೆ ಬಗೆಬಗೆಯ ಮಾಲೆಗಳು, ಹಾಗೂ ಹಲವು ಬಗೆಯ ಪ್ರಾಡಕ್ಟ್‌ಗಳನ್ನೂ ಕೊಳ್ಳಬಹುದು. ಪ್ರತಿನಿತ್ಯ ಮನೆಗೆ ಹಾಕಿಸಿಕೊಳ್ಳುವ ಯೋಜನೆ ಬೇಡವೆಂದರೆ ಬೇಕಾದಾಗ ಮಾತ್ರ ಕೊಳ್ಳುವ ಯೋಜನೆಯೂ ಇದರಲ್ಲಿದೆ. ಗ್ರಾಹಕರು ತಮಗೆ ಬೇಕಾದ ಯೋಜನೆಯನ್ನು ಆಯ್ಕೆ ಮಾಡಬಹುದು. ಕೇವಲ ಹೂವು ವೆಬ್‌ಸೈಟ್ ಮಾತ್ರವಲ್ಲದೆ, ಬಿಗ್ ಬಾಸ್ಕೆಟ್, ಗ್ರೋಫರ್ಸ್, ಸೂಪರ್ ಡೈಲಿ, ಜೊಮ್ಯಾಟೋ, ಮಿಲ್ಕ್‌ಬಾಸ್ಕೆಟ್, ಎಫ್‌ಟಿಎಚ್ ಡೈಲಿ, ಝೆಪ್ಟೋ ಮತ್ತಿತರ ಹಲವು ಆನ್‌ಲೈನ್ ಪ್ಲಾಟ್‌ಫಾರಂಗಳ ಮೂಲಕವೂ ಖರೀದಿಸಬಹುದು.
ಹೂವನ್ನು ಸ್ವಚ್ಛಗೊಳಿಸಿ ಬ್ಯಾಕ್ಟೀರಿಯಾ ಮುಕ್ತವನ್ನಾಗಿಸಿ ತೇವಾಂಶವನ್ನು ತೆಗೆದು ಉತ್ತಮ ಪ್ಯಾಕಿಂಗ್ ಮಾಡಿ ಗ್ರಾಹಕರಿಗೆ ತಲುಪಿಸುವುದರಿಂದ ಹೂವಿನ ತಾಜಾತನ ಕೆಲವು ದಿನಗಳವರೆಗೆ ಹಾಗೆಯೇ ಉಳಿಯುತ್ತದೆ. ಹೀಗಾಗಿ ನಮ್ಮ ಹೂವನ್ನು ೧೫ ದಿನಗಳವರೆಗೆ ಶೇಖರಿಸಿ ಗ್ರಾಹಕರು ಇಟ್ಟುಕೊಂಡರೂ ಹಾಳಾಗುವುದಿಲ್ಲ ಎನ್ನುತ್ತಾರೆ ಇವರು.
ಕನಸು ಕಂಡರೆ ನನಸಾಗಿಸಲು ಕಠಿಣ ಶ್ರಮ ಹಾಗೂ ಶ್ರದ್ಧೆ, ಅಚಲ ವಿಶ್ವಾಸ ಇದ್ದರೆ ಎಂಥ ಕನಸನ್ನೂ ಕಾಣಬಹುದು ಎಂಬುದಕ್ಕೆ ಈ ಅಕ್ಕತಂಗಿಯರ ಕತೆಯನ್ನು ಪ್ರತಿಯೊಬ್ಬರೂ ಸ್ಪೂರ್ತಿಯಾಗಿ ಕಾಣಬಹುದು!
ಇದನ್ನೂ ಓದಿ | Startup policy | ಬೆಂಗಳೂರಿನಿಂದಾಚೆಗೂ ಟೆಕ್ ಕ್ರಾಂತಿ, 2027ರ ವೇಳೆಗೆ 25,000 ಸ್ಟಾರ್ಟಪ್‌ಗಳನ್ನು ಬೆಳೆಸುವ ಗುರಿ