Site icon Vistara News

ವಿಸ್ತಾರ Explainer | ಏನಿದು ಝಿಕಾ ವೈರಸ್? ಬರದಂತೆ ಹೇಗೆ ತಡೆಯಬಹುದು?

Zika Virus

Mumbai Sees Second Zika Virus Infection; How is it dangerous for us? What are the precautions?

ರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಐದು ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಸಾಮಾನ್ಯರಲ್ಲಿ ಒಂದಿಷ್ಟು ಆತಂಕವಂತೂ ಹೆಚ್ಚಿದೆ. ಈಗಿನ್ನೂ ಕೋವಿಡ್‌ನ ಕರಿನೆರಳು ಪೂರ್ಣ ಮಾಸಿಲ್ಲ. ದಡಾರ ಸಾಕಷ್ಟು ಕಡೆಗಳಲ್ಲಿ ಅವಾಂತರ ಸೃಷ್ಟಿಸುತ್ತಿದೆ. ಹಾಗಿರುವಾಗ ಇದೇನು ಹೊಸದೊಂದು ಗಂಟು ಬಿತ್ತಲ್ಲ ಎಂದು ಆತಂಕಗೊಳ್ಳುವುದು ಸಹಜವೇ. ಇದೇನು ಹೊಸ ರೋಗವಲ್ಲ, 1950ರ ದಶಕದಲ್ಲೇ ಇದು ಮಾನವರಲ್ಲಿ ಪತ್ತೆಯಾಗಿತ್ತು. ಇದೀಗ ಅಮೆರಿಕ, ಆಫ್ರಿಕ, ಏಷ್ಯಾ ಮತ್ತು ಫೆಸಿಫಿಕ್‌ ದ್ವೀಪಗಳಲ್ಲಿ ಈ ವೈರಸ್‌ ಪತ್ತೆಯಾಗಿದೆ. ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಜೀಕಾ ವೈರಸ್‌ ಸೋಂಕಿಗೆ ತುತ್ತಾಗುವುದನ್ನು ಖಂಡಿತ ತಡೆಯಬಹುದು. ಏನಿದು ವೈರಸ್‌ ಮತ್ತು ಇದು ಬಾರದಂತೆ ನಾವೇನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ(ವಿಸ್ತಾರ Explainer).

ಸೊಳ್ಳೆಯೇ ದೊಡ್ಡ ಶತ್ರು
ಪ್ರಧಾನವಾಗಿ, ಏಡಿಸ್‌ ಸೊಳ್ಳೆಯಿಂದ ಹರಡುವ ರೋಗವಿದು- ಥೇಟ್‌ ಡೆಂಗೆ, ಚಿಕುನ್‌ ಗುನ್ಯಾ ಅಥವಾ ಹಳದಿ ಜ್ವರದ ಮಾದರಿಯಲ್ಲಿ. ಈ ಸೊಳ್ಳೆಗಳು ಹೆಚ್ಚಾಗಿ ದಾಳಿ ಮಾಡುವುದು ಹಗಲು ಹೊತ್ತಿನಲ್ಲಿ. ಹಾಗೆಂದು ಅವು ರಾತ್ರಿಯ ಹೊತ್ತು ಕಚ್ಚದೇ ಕರುಣೆ ತೋರುತ್ತವೆ ಎಂದಲ್ಲ! ಇವು ಮನೆಯ ಒಳಗೆ-ಹೊರಗೆ ಎಂಬ ಭೇದವಿಲ್ಲದೆ, ಎಲ್ಲೆಂದರಲ್ಲಿ ಇರುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೆ ಸೊಳ್ಳೆಯ ಕಡಿತಕ್ಕೆ ಒಳಗಾಗುವಂತಿಲ್ಲ. ಹಾಗೆಂದು ಸೋಂಕು ಹರಡುವುದಕ್ಕೆ ಇದೊಂದೇ ಮಾರ್ಗವೂ ಅಲ್ಲ. ತಾಯಿಯಿಂದ ಹೊಟ್ಟೆಯಲ್ಲಿರುವ ಮಗುವಿಗೆ, ಎದೆಹಾಲಿನಿಂದ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ರೋಗ ಹರಡುತ್ತದೆ. ರಕ್ತಪೂರಣದಿಂದ ಹರಡುವ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ ಖಂಡಿತವಾಗಿಯೂ ಕೋವಿಡ್‌ನಂತೆ ಕೆಮ್ಮು, ಸೀನಿನಿಂದೆಲ್ಲ ಹರಡುವ ರೋಗವಲ್ಲ ಇದು.

ಮಾರಣಾಂತಿಕವಲ್ಲ
ಸೋಂಕಿತ ಸೊಳ್ಳೆಯಿಂದ ಕಚ್ಚಿಸಿಕೊಂಡ ಏಳು ದಿನಗಳ ಒಳಗೆ ರೋಗ ಲಕ್ಷಣಗಳು ಆರಂಭವಾಗುತ್ತವೆ. ಆದರೆ ಸೋಂಕಿತರಲ್ಲಿ ಶೇ. ೨೫ರಷ್ಟು ಜನರಿಗೆ ಮಾತ್ರವೇ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಮಸ್ಯೆಯೆಂದರೆ, ಮೇಲ್ನೋಟಕ್ಕೆ ಲಕ್ಷಣರಹಿತರಾಗಿರುವ ಇಂಥವರನ್ನು ಕಚ್ಚಿದ ಸೊಳ್ಳೆಗಳು ಆರೋಗ್ಯವಂತರನ್ನು ಕಚ್ಚಿದರೆ, ಅವರಿಗೂ ಸೋಂಕು ಅಂಟಿಕೊಳ್ಳುತ್ತದೆ. ಜ್ವರ, ಮೈಕೈ ನೋವು, ತಲೆನೋವು, ಗಂಟು ನೋವು, ಚರ್ಮದ ಮೇಲೆ ಗುಳ್ಳೆಗಳು, ಕಣ್ಣು ಕೆಂಪಾಗುವುದು- ಇವೇ ಮುಂತಾದವು ಈ ಸೋಂಕಿನ ಲಕ್ಷಣಗಳು. ಮೊದಲ ವಾರದ ನಂತರ ಸಾಮಾನ್ಯವಾಗಿ ಈ ಸೋಂಕಿನ ತೀವ್ರತೆ ಕಂಡುಬರುವುದಿಲ್ಲ. ಇಷ್ಟಕ್ಕೂ ಝಿಕಾ ಸೋಂಕು ತೀವ್ರಗೊಂಡು ಆಸ್ಪತ್ರೆಗೆ ದಾಖಲಾಗುವ ಸಂಭವ ಕಡಿಮೆ. ಕಾರಣ, ಈ ರೋಗ ಮಾರಣಾಂತಿಕವೇನಲ್ಲ. ಆದರೆ ಗರ್ಭಿಣಿ ಮಹಿಳೆಯರ ಪಾಲಿಗೆ ಖಂಡಿತಾ ಅಪಾಯಕಾರಿ.

ಗರ್ಭಿಣಿಯರಿಗೆ ಅಪಾಯ
ತಾಯಿಯ ಜೀವಕ್ಕೆ ಈ ರೋಗದಿಂದ ಅಪಾಯವಿಲ್ಲದಿದ್ದರೂ, ಗರ್ಭಸ್ಥ ಶಿಶುವಿನಲ್ಲಿ ಗಂಭೀರವಾಗ ಜನನ ದೋಷಗಳನ್ನು ಈ ವೈರಸ್‌ ಉಂಟುಮಾಡುತ್ತದೆ. ಮೈಕ್ರೊಸೆಫಾಲಿ ಎಂಬ ದೋಷವನ್ನು ಹೊತ್ತ ಮಕ್ಕಳು ಜನಿಸುತ್ತದೆ. ಹುಟ್ಟಿದ ಮಕ್ಕಳ ತಲೆಯ ಗಾತ್ರ ಸಣ್ಣದಿರುತ್ತದೆ ಮತ್ತು ಅವುಗಳ ಮೆದುಳಿನ ಬೆಳವಣಿಗೆ ಅಪೂರ್ಣವಾಗಿರುತ್ತದೆ. ಮಾತ್ರವಲ್ಲ, ಶ್ರವಣ ದೋಷ, ದೃಷ್ಟಿದೋಷದಂಥ ನಾನಾ ರೀತಿಯ ಸಮಸ್ಯೆಗಳು ಮಕ್ಕಳಲ್ಲಿ ಉಂಟಾಗುತ್ತವೆ. ಕೆಲವೊಮ್ಮೆ ಗರ್ಭಪಾತಕ್ಕೂ ಈ ವೈರಸ್‌ ಕಾರಣವಾಗುತ್ತದೆ. ಬೆವರು, ಕಣ್ಣೀರಿನಂಥ ದೇಹದ ಇನ್ಯಾವುದೇ ದ್ರವಗಳಿಗಿಂತಲೂ, ಪುರುಷರ ವೀರ್ಯದಲ್ಲಿ ದೀರ್ಘಕಾಲದವರೆಗೆ ಈ ವೈರಸ್‌ ಕ್ರಿಯಾಶೀಲವಾಗಿ ಇರುತ್ತದೆ. ಹಾಗಾಗಿ ಝಿಕಾ ವೈರಸ್‌ ಹಬ್ಬಿರುವ ಪ್ರದೇಶಗಳಿಗೆ ಪ್ರಯಾಣ ಮಾಡಿದವರು ಕನಿಷ್ಟ ಮೂರು ತಿಂಗಳವರೆಗೆ ಗರ್ಭ ಧರಿಸುವುದನ್ನು ಮುಂದೂಡಿ ಮತ್ತು ಗರ್ಭಿಣಿಯರು ಇಂಥಾ ಸ್ಥಳಗಳಿಗೆ ಹೋಗಲೇಬೇಡಿ ಎನ್ನುತ್ತದೆ ವೈದ್ಯವಿಜ್ಞಾನ.

ವೈರಸ್‌ ಪತ್ತೆ ಹೇಗೆ?
ರಕ್ತಪರೀಕ್ಷೆಯಿಂದ ದೇಹದಲ್ಲಿ ವೈರಸ್‌ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು. ಒಂದೊಮ್ಮೆ ಪರೀಕ್ಷೆಯಲ್ಲಿ ಝಿಕಾ ವೈರಸ್‌ ಸೋಂಕು ಖಾತ್ರಿಯಾದರೆ, ವೈದ್ಯರನ್ನು ಸಂಪರ್ಕಿಸಿ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಕೋವಿಡ್‌ ರೋಗಿಗಳಂತೆ ಅವರನ್ನು ೧೪ ದಿನಗಳ ವ್ಯಷ್ಟಿಯಲ್ಲಿ ಇಡಬೇಕಾದ ಅಗತ್ಯವಿಲ್ಲ. ಸಾಕಷ್ಟು ದ್ರವಾಹಾರ, ವಿಶ್ರಾಂತಿ ಕಡ್ಡಾಯವಾಗಿ ರೋಗಿಗಳಿಗೆ ಬೇಕು. ಮನೆಯ ಎಲ್ಲರೂ ಸೊಳ್ಳೆಪರದೆಯನ್ನು ಬಳಸುವುದು ಅತ್ಯಗತ್ಯ.

ಲಸಿಕೆ ಇದೆಯೇ?
ಇಲ್ಲ. ರೋಗಕ್ಕೆಂದು ನಿರ್ದಿಷ್ಟವಾದ ಯಾವ ಚಿಕಿತ್ಸೆಯೂ ಇಲ್ಲ. ರೋಗಿಗಳಲ್ಲಿರುವ ಸೋಂಕಿನ ಲಕ್ಷಣಗಳ ಪ್ರಕಾರ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಅಷ್ಟಕ್ಕೂ ಸೋಂಕಿತರೆಲ್ಲರಿಗೆ ಲಕ್ಷಣಗಳು ಕಾಣಿಸಿಕೊಳ್ಳುವುದೂ ಇಲ್ಲ. ಆದರೆ ಗರ್ಭಿಣಿಯರು ಮಾತ್ರ ಈ ಸೋಂಕಿಗೆ ಸಿಲುಕುವುದು ಶಿಶುವಿನ ಪಾಲಿಗೆ ಅಪಾಯಕಾರಿ ಆಗಬಹುದು.

ಏನು ಮಾಡಬಹುದು?

ಜೀಕಾ ನಿರ್ವಹಣೆಗೆ ಸರ್ಕಾರ ಸಿದ್ಧ: ಆರೋಗ್ಯ ಸಚಿವ ಸುಧಾಕರ್
ಪುಣೆ ಲ್ಯಾಬ್ ರಿಪೋರ್ಟ್ ಪ್ರಕಾರ ರಾಜ್ಯದಲ್ಲಿ 5 ವರ್ಷದ ಒಂದು ಹೆಣ್ಣು ಮಗುವಿಗೆ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಹಾಗಾಗಿ, ಮುಂಜಾಗೃತಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ರಾಜ್ಯದಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಸರ್ಕಾರ ಇದನ್ನು ಬಹಳ ಎಚ್ಚರದಿಂದ ಗಮನಿಸುತ್ತಿದೆ ಮತ್ತು ಅದನ್ನು ನಿರ್ವಹಿಸಲು ಸಜ್ಜಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Zika virus | ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ರಾಯಚೂರಿನಲ್ಲಿ ಪತ್ತೆ; 5 ವರ್ಷದ ಬಾಲಕಿಗೆ ಪಾಸಿಟಿವ್‌

Exit mobile version