:: ಪ್ರಸಾದ್ ಶೆಣೈ ಆರ್.ಕೆ.
ನವನೀತ, ಸೋಮೇಶ್ವರ ಪೇಟೆ ದಾಟಿ ಆಗುಂಬೆ ಘಾಟಿಯ ಮೊದಲನೇ ಹೇರ್ ಪಿನ್ ತಿರುವಿಗೆ ತಲುಪಿದಾಗ ಆಕಾಶದಲ್ಲಿ ಮೋಡಗಳು ಮಳೆ ಸುರಿಸಲು ಕಾತರಿಸಿ ನಿಂತಿದ್ದವು. ಆಗುಂಬೆಯ ಒಂದಷ್ಟು ಕಾಡುಗಳು ಅಭಿವೃದ್ದಿ ಮಂತ್ರಕ್ಕೆ ಬಲಿಬಿದ್ದಿದ್ದರೂ, ಆಗುಂಬೆಯ ಮುಗಿಲಲ್ಲಿ ಮೋಡಗಟ್ಟಿ ಅದು ಕಪ್ಪಾಗುವುದನ್ನು ನೋಡಬೇಕು, ಮಳೆ ಬರುವ ಮೊದಲು ಶೀತಲ ಗಾಳಿ ಬೀಸಿ ಅದೊಮ್ಮೆ ನಮ್ಮ ಮೈ ಸೋಕಿಬಿಡಬೇಕು. ಕೊನೆಗೆ ಪುಟ್ಟ ಮಗು ಜೋರು ಅಳು ಶುರು ಮಾಡುವ ಮೊದಲು ಮುಖ ಸಿಂಡರಿಸಿ ಕೆಂಪೇರಿ ಬೊಗಸೆಗಣ್ಣುಗಳಲ್ಲಿ ಹನಿ ಮೂಡಿಸುವ ಹಾಗೆ ಆಗುಂಬೆಯ ಕಾಡುಗಳಲ್ಲಿ ಪಟ ಪಟ ಮಳೆ ಹನಿ ಉದುರುವುದನ್ನು ಕೇಳುತ್ತಿದ್ದರೆ ನರನಾಡಿಗಳಲ್ಲಿ ತಂಪೇರುತ್ತದೆ. ಹಾಗೆ ಪಟ ಪಟ ಎದ್ದು ಸದ್ದು ಮಾಡುತ್ತ ಮಳೆ ಹನಿಗಳೆಲ್ಲಾ ಅದುವರೆಗೆ ಧೂಳು ಧೂಳಾದ ಬಸ್ಸಿನ ಮಂಡೆಯ ಮೇಲೆ, ಬಳಕುವ ಸೊಂಟದಂತಿರುವ ಅಷ್ಟೂ ತಿರುವುಗಳ ಮೇಲೆ, ಬೆಳಗ್ಗಿನಿಂದ ಬಿಸಿಲಿನ ಶಾಖಕ್ಕೆ ಗರಿಗರಿಯಾಗಿದ್ದ ಹುಲ್ಲು, ಗಂಟೆ ಹೂವಿನ ಗಿಡಗಳ ಮೇಲೆ ಬಿದ್ದಾಗ ಬೇರೆಯದ್ದೇ ಆದ ಹೊಸ ಶ್ರುತಿಯೊಂದು ಅಲ್ಲಿ ಮೂಡಿ ಬರುತ್ತದೆ. ಆ ಶ್ರುತಿ ನವನೀತನಿಗೆ ತುಂಬಾ ಇಷ್ಟ.
ಇವತ್ತೂ ನವನೀತನಿಗೆ ಹಾಗೇ ಆಯಿತು, ಸಂಜೆಯಾಗುತ್ತಲೇ ಬೈಕೇರಿ ಆಗುಂಬೆ ಕಾಡುಗಳಲ್ಲಿ ಅಡ್ಡಾಡುದನ್ನೇ ಹವ್ಯಾಸ ಮಾಡಿಕೊಂಡವನಿಗೆ, ಆಗುಂಬೆ ಫಾಟಿಯ ಮೊದಲ ತಿರುವಲ್ಲಿ ಬರುವಷ್ಟರಲ್ಲಿ ಸಣ್ಣ ಮಳೆ ಹನಿಗಳು ದೂರದಿಂದ ಟಿಪ್ ಟಿಪ್ ಎನ್ನುತ್ತಾ ನಡೆದು ಬರುವ ಸದ್ದು ಕೇಳಿಸಿ ಅವನು ತುಂಬಿಕೊಂಡು ಬಿಟ್ಟ. ಆಗುಂಬೆಯ ಮಳೆಯ ಪುಟ್ಟ ಅಳು, ನಗು, ಕಾಡಿನ ದಿವ್ಯ ಸುಗಂಧ, ನೂರಾರು ಮರಗಳ ವಿಶಾಲ ಬಾಹುಗಳು ಇವೆಲ್ಲ ನವನೀತನಿಗೆ ಹೊಸತೇನನ್ನೋ ಕಲಿಸಿಕೊಡುತ್ತಿತ್ತು. ಚೆಂದ ಚೆಂದ ಕತೆಗಳು ಇಲ್ಲೇ ಹುಟ್ಟುತ್ತಿತ್ತು, ಮತ್ತದು ಬ್ರಹ್ಮರಾಕ್ಷಸನಂತೆ ಬೆಳೆಯುತ್ತಿತ್ತು. ಇಲ್ಲಿನ ದಿವ್ಯ ಮೌನದಲ್ಲಿ ಅವನ ಮನದಲ್ಲಿದ್ದ ಕತಾ ಪಾತ್ರಗಳು ಜೀವಪಡೆದುಕೊಂಡು ಆಗುಂಬೆಯ ತಿರುವಿನಲ್ಲೊಂದು, ಮರದಲ್ಲೊಂದು, ದೂರದಲ್ಲಿ ಕಾಣುತ್ತಿರುವ ಜಲಪಾತದಲ್ಲೊಂದು ಪಾತ್ರಗಳು ಕೂತುಬಿಟ್ಟ ಹಾಗೆ ಅನ್ನಿಸಿ ನವನೀತ, ನಿಜಕ್ಕೂ ನವನೀತದಂತೆ ಕರಗಿ ಹೋಗುತ್ತಿದ್ದ.
ಆಗುಂಬೆ ಘಾಟಿಯಲ್ಲಿ ಒಂದಷ್ಟು ಸಣ್ಣ ಸಣ್ಣ ತರಕಾರಿ ಮೂಟೆ, ಅಕ್ಕಿ, ಹಣ್ಣುಗಳ ಮೂಟೆಗಳನ್ನು ಹೇರಿಕೊಂಡು ಒಮ್ಮೆ ಉಬ್ಬಸ ಬಂದಂತೆ, ಮತ್ತೊಮ್ಮೆ ಗಂಟಲೆಲ್ಲಾ ಶುದ್ಧವಾದಂತೆ, ಮತ್ತೊಮ್ಮೆ ದೀರ್ಘವಾದ ಏದುಸಿರು ಬಿಟ್ಟಂತೆ ಘಟ್ಟ ಏರುತ್ತಿರುವ ಪಿಕಪ್, ಲಾರಿ,ವ್ಯಾನ್ ಗಳ ಸದ್ದುಗಳನ್ನು ಘಾಟಿ ರಸ್ತೆ ತನ್ನ ಪ್ರತೀ ದಿನದ ಹೃದಯಗೀತೆಯಂತೆ ಕೇಳುತ್ತಾ,ಅನುಭವಿಸುತ್ತಾ ಸುಖಿಸುತ್ತಿತ್ತು. ಈ ಯಾಂತ್ರಿಕ ಸದ್ದುಗಳನ್ನು ಹೊರತುಪಡಿಸಿ ಮೇಲೆ ನಿಂತಿರುವ ಚೂಪು ಮೂತಿಯ ಬೆಟ್ಟಗಳಲ್ಲಿ, ಆಳವಾದ ಕಳಿವೆಗಳಲ್ಲಿ, ಗೌವ್ವೆನ್ನುವ ಮೌನವಿತ್ತು.
ತೀರ್ಥಹಳ್ಳಿ-ಶಿವಮೊಗ್ಗ-ಸಾಗರಕ್ಕೆ ಹೋಗುವ ನವದುರ್ಗಾ ಎನ್ನುವ ಮಿನಿಬಸ್ಸು ಆಗುಂಬೆ ಕಾಡಿಗೂ, ಘಾಟಿಯ ತಿರುವಿನ ಮಗ್ಗುಲಲ್ಲಿ ಹಸಿದು ಕೂತಿರುವ ಸಿಂಗಳೀಕಗಳಿಗೂ ತನ್ನ ಎಂದಿನ ಪರಿಚಯ ಇದ್ದೇ ಇದೆ ಎನ್ನುವಂತೆ ಹಾರ್ನು ಹೊಡೆದು ಕಣ್ಣು ಮಿಟುಕಿಸುತ್ತಾ ಮುಂದಕ್ಕೆ ಸಾಗಿತ್ತು. ಆ ಬಸ್ಸಿನಲ್ಲಿರುವ ಪ್ರಯಾಣಿಕರಲ್ಲಿ ಕೆಲವರು ಆಗುಂಬೆ ಮಳೆ ನೋಡಲು ಕಾತರಿಸಿದರು. ಮತ್ತೆ ಕೆಲವರು ಈ ಘಾಟಿಯಲ್ಲಿ ತಮಗೆ ವಾಂತಿಯಾಗೇ ಆಗುತ್ತದೆ ಎಂದು ಖಾತ್ರಿ ಮಾಡಿಕೊಂಡು, ಪ್ಲಾಸ್ಟಿಕ್ಕು ತೊಟ್ಟೆ ಸಿದ್ದ ಮಾಡಿಕೊಂಡರು.
ಆ ಬಸ್ಸಿನೊಳಗಿಂದ ರಸ್ತೆಗೂ ಕೇಳಿಸುತ್ತಿರುವ ಕೇಕೆ, ನಗು, ಸಪ್ಪಳ ಮೊದಲಾದವುಗಳನ್ನು ಕೇಳುತ್ತ ಅನುಭವಿಸುತ್ತಾ ನವನೀತ ಬಸ್ಸಿನ ತುಸು ಹಿಂದಕ್ಕೆ ಬೈಕೇರಿಸಿಕೊಂಡು ಬರುತ್ತಿದ್ದ. ಬಸ್ ಅನ್ನು ಸೀದಾ ಓವರ್ ಟೇಕ್ ಮಾಡಿ ಹೋಗಲು ಅವನಿಗೆ ಇಷ್ಟವಾಗಲಿಲ್ಲ. ಅಂತಹ ಅರ್ಜೆಂಟೆನೂ ಅವನಿಗಿರಲಿಲ್ಲ ಮತ್ತು ಮಿನಿಸುಂದರಿಯಂತಿರುವ ಮಲೆನಾಡಿನ ಬಸ್ಸುಗಳನ್ನು ಹಿಂಬಾಲಿಸಿಕೊಂಡು ಹೋಗುವುದು ನವನೀತನಿಗೆ ಅವ್ಯಕ್ತ ಪುಳಕ ಕೊಡುತ್ತಿತ್ತು. ಆದರೆ ಆ ಬಸ್ಸು ತುಂಬಾ ಹಗುರನೇ ಹೋಗುತ್ತಿದ್ದುದರಿಂದ, ಒಂದೇ ಸಮನೆ ಕಪ್ಪು ಕಪ್ಪು ಹೊಗೆ ಉಗುಳುತ್ತಿದ್ದುದರಿಂದ ಮತ್ತು ತಾನು ಹಿಂದೆ ಹೋದರೆ ಯಾರಾದರೂ ಪ್ರಯಾಣಿಕರು ಕಿಟಕಿಯಿಂದ ವಾಂತಿ ಮಾಡಿ ತನಗೆ ಅವಭೃತ ಸ್ನಾನವಾಗುವುದು ಬೇಡ ಎನ್ನುವ ಎಚ್ಚರದಿಂದ ನವನೀತ ಅದನ್ನು ಓಪರ್ ಟೇಕ್ ಮಾಡಿ ಮುಂದೆ ಹೋಗಲೇಬೇಕಾಯ್ತು.
ಹೇಗೋ ಅದನ್ನು ಓಪರ್ ಟೇಕ್ ಮಾಡಿ ಆಗುಂಬೆಯ ಕೊನೆಯ ತಿರುವಿನ ಮೂಲೆಯಲ್ಲಿ ಬೈಕ್ ನಿಲ್ಲಿಸಿ ಅಲ್ಲಿನ ಕಟ್ಟೆಯ ಮೇಲೆ ನಿಂತು ದೂರದಿಂದ ಕೆನೆಮೊಸರಿನಂತೆ ಇಳಿಯುತ್ತಿದ್ದ ಬರ್ಕಣ ಜಲಪಾತ ನೋಡುತ್ತ ಪ್ರಕೃತಿ ಅದೆಷ್ಟು ಚಂದ, ಈ ಬಣ್ಣ, ಈ ಹಸುರು, ಈ ಸದ್ದು, ಈ ಚೆಲುವು, ಈ ಮೌನ ಎಲ್ಲವೂ ಅದೆಷ್ಟು ವಿಸ್ಮಯ ಎನ್ನುವಂತೆ ಅನುಭವಿಸುತ್ತಾ ನಿಂತ. ಆಗುಂಬೆಗೆ ಈ ವರೆಗೆ ಎಷ್ಟು ಸಲ ಬಂದಿದ್ದಾನೋ ಅವನಿಗೆ ಗೊತ್ತಿಲ್ಲ, ಇವನು ಆಗುಂಬೆ ನೋಡಿದ್ದಷ್ಟು ಬೇರೆಯವರು ನೋಡಿದ್ದರೆ “ಅಯ್ಯೋ ಅಲ್ಲೆಂತ ಇದೆ ಮಣ್ಣು?ಎಂದು ಸಸಾರ ಮಾಡಿ ಆಗುಂಬೆಯ ಬಗ್ಗೆಯೇ ವೈರಾಗ್ಯ ತಾಳುತ್ತಿದ್ದರೇನೋ, ಆದರೆ ನವನೀತನಿಗೆ ಅದನ್ನು ಎಷ್ಟು ಸಲ ನೋಡಿದ್ದರೂ ಅದು ಹೊಚ್ಚ ಹೊಸತು. ಪ್ರತೀ ಸಲವೂ ಅವನು ಆಗುಂಬೆಯನ್ನು ತಾನು ಮೊದಲ ಬಾರಿ ನೋಡುತ್ತಿದ್ದೇನೆ ಎನ್ನುವಂತೆ ಅಚ್ಚರಿಯಿಂದ ಕಣ್ತುಂಬಿಕೊಳ್ಳುತ್ತಿದ್ದ. ನೋಟ ಹಳತಾಗಬಾರದು, ಅದರಲ್ಲಿಯೂ ಪರಿಸರ ಹಳತು ಅನ್ನಿಸಿ ಬೋರು ಹೊಡೆಸಬಾರದು ಅಂತವನು ತುಂಬಾ ಸಲ ವಿದ್ಯಾರ್ಥಿಗಳಿಗೆ ಹೇಳಿದ್ದ ಕೂಡ, ಹಾಗಾಗಿ ಅವನಿಗೆಂದೂ ಆಗುಂಬೆಯ ಶಾಂತತೆ, ಸೌಂದರ್ಯ ಬೋರು ಹೊಡೆಸುತ್ತಿರಲಿಲ್ಲ. ಪ್ರತೀ ಸಲ ಆಗುಂಬೆಗೆ ಬಂದಾಗ ಈ ತಿರುವಿನ ತಡೆಗೋಡೆಯೊಂದರ ಬಳಿ ನಿಂತು ದೂರದಿಂದ ಜಲಪಾತ ನೋಡುವುದು, ಹಾಗೇ ನೋಡುತ್ತ ಏನನ್ನೋ ಕಂಡುಕೊಳ್ಳುವುದು, ಆಗುಂಬೆಯ ಪ್ರತೀ ಬೆರಗಿನ ಚಟುವಟಿಕೆಗಳಿಗೂ ಸಾಕ್ಷಿಯಾಗುವುದು ಅವನ ತುಂಬಾ ನೆಚ್ಚಿನ ಕೆಲಸ, ಇವತ್ತು ಹಾಗೇ ಬರ್ಕಣ ಜಲಪಾತವನ್ನು ದೂರದಿಂದ ನೋಡುತ್ತಾ ನಿಂತುಬಿಟ್ಟ.
“ನಮ್ಮ ಕಾಲಕ್ಕೆ ಆ ಜಲಪಾತದಲ್ಲಿ ಅದೆಂತಹ ಹರಿವಿತ್ತು ಅದರ ಸುತ್ತ ಅದೆಷ್ಟು ಕಾಡಿತ್ತು, ಆದರೆ ಈಗ ನೋಡು “ಅಲ್ಲಿ ನಿಂಗೆ ಅಂತಹ ಕಾಡು ಕಾಣ್ಸುದಿಲ್ಲ ಜಲಪಾತಕ್ಕೂ ಅಂತಹ ಹರಿವಿಲ್ಲ, ಅಲ್ಲಿಯ ಮಳೆಗೂ ಅಂತಹ ಬಿರುಸಿಲ್ಲ” ಇನ್ನು ನಿಂಗೆ ಮಕ್ಕಳಾಗಿ ಅವು ದೊಡ್ಡದಾಗುವ ಕಾಲಕ್ಕೆ ಇದರ ಕತೆ ಹೇಗಿರುತ್ತದೋ”? ಎಂದು ಶಂಬಜ್ಜ ಹೇಳಿದ್ದು ಅವನಿಗೆ ನೆನಪಾಯ್ತು.
“ನೋಡಿ ನೀವು ಪ್ರಕೃತಿಯನ್ನು ಹಾಳು ಮಾಡ್ಬೇಡಿ. ನಾವು ಬದುಕಿರೋದೇ ಪ್ರಕೃತಿಯಿಂದ ಇಂದು ನೀವು ನೋಡಿ ಸಂಭ್ರಮಿಸುತ್ತಿರುವ ಪರಿಸರ ನದಿ, ಕೆರೆ ಬೆಟ್ಟ ನಾಳೆಯೂ ಉಳಿಯಬೇಕಾದರೆ ಇಂದು ಅದನ್ನು ನೀವು ಜೀವಂತವಾಗಿಡಲು ಶ್ರಮಿಸಬೇಕು, ನಾವು ಇಂದು ಬದುಕುವವರು, ನಾಳೆ ನಮ್ಮದ್ದಲ್ಲ ಅಂತ ಎಲ್ಲರೂ ಯೋಚಿಸಿ ಸುಮ್ಮನಿದ್ದಿದ್ದರೆ ಈ ಚೆಂದದ ಇಂದು ನಮಗೆ ಸಿಕ್ಕುತ್ತಲೇ ಇರಲಿಲ್ಲವೇನೋ?ಅಂದು ಅವರು ಮರ ದೊಡ್ಡದಾಗಲು ಇನ್ನೂ ಎಷ್ಟೋ ವರ್ಷ ಬೇಕು, ಅಂತ ನೆಡದೇ ಇದ್ದಿದ್ದರೆ ಇಂದು ಈ ಮರ, ಅದರ ನೆರಳು, ಗಾಳಿ ನಮಗೆ ಸಿಕ್ಕುತ್ತಲೇ ಇರಲಿಲ್ಲ, ನೀವೂ ಅಷ್ಟೇ ಇಂದನ್ನು ಮಾತ್ರ ಯೋಚಿಸುವುದಲ್ಲ, ನಾಳೆಗಳನ್ನೂ ಇಂದೇ ಯೋಚಿಸಿ” ಎಂದದ್ದು ಅವನಿಗೀಗ ಮತ್ತೆ ಮತ್ತೆ ಕಾಡತೊಡಗಿತು. ನವನೀತನ ಸೂಕ್ಷ್ಮಮತಿಗೆ ಇವೆಲ್ಲಾ ಕಾಡುವುದು ಬೇಗ, ಇಪ್ಪತ್ತೆಂಟು ತುಂಬಿ ಇನ್ನೇನು ಮದುವೆಯ ಕನಸಿನಲ್ಲಿರುವ ನವನೀತ ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ಪ್ರಾಧ್ಯಾಪಕನಾಗಿ ಸೇರಿ ಇಂದಿಗೆ ಒಂದೆರಡು ವರ್ಷವಾಗಿದೆ. ಆಗುಂಬೆ, ಇಲ್ಲಿನ ಜೀವವೈವಿದ್ಯ, ಇಲ್ಲಿನ ಪರಿಸರದ ಸಂಪತ್ತು ಮೊದಲಾದವುಗಳನ್ನು ಉಳಿಸಬೇಕು, ಮುಂದಿನ ಪೀಳಿಗೆಗೆ ನಾವೇನಾದ್ರೂ ಉಳಿಸುತ್ತೇವೆ ಅಂತಾದರೆ ಇದನ್ನೇ ಅಂತೆಲ್ಲಾ ಅವನು ತುಂಬಾ ಸಲ ವಿದ್ಯಾರ್ಥಿಗಳಿಗೆ ಭೋಧನೆ ಮಾಡುತ್ತಲೇ ಇದ್ದ, ಹಾಗೆ ಹೇಳುತ್ತಲೇ ಅವನು ಭಾವುಕನಾಗುತ್ತಿದ್ದ. ಆಗುಂಬೆಯ ಮೌನ, ಅದು ಕೊಡುವ ಚೈತನ್ಯ, ಜೀವನಸ್ಪೂರ್ತಿ, ಅದು ತನ್ನೊಳಗೆ ಮೂಡಿಸುವ ಅಂತಃಪ್ರೇರಣೆ ಇವೆಲ್ಲವನ್ನೂ ಅವನು ಗಾಢವಾಗಿ ಹೇಳುತ್ತಲೇ ಇದ್ದಾಗ ಅವನ ಕಣ್ಣಲ್ಲಿ ಹನಿಯ ಮಿಂಚು ಮೂಡುತ್ತಿತ್ತು.
ಆದರೆ ಇದ್ಯಾವುದರ ಕುರಿತು ಆಸಕ್ತಿ ಇಲ್ಲದ ಈಗಿನ ಸ್ಮಾರ್ಟ್ ಫೋನ್ ಕಾಲದ ಹುಡುಗ ಹುಡುಗಿಯರಿಗೆ ಈ ಲೌಕಿಕ ಸಂಗತಿಗಳೆಲ್ಲಾ ಒಣ ವೇದಾಂತದಂತೆ ಕಾಣಿಸಿ ಅವರು ಉತ್ಸಾಹ ಕಳೆದುಕೊಳ್ಳುತ್ತಿದ್ದರು. ಇವನದನ್ನು ಎಷ್ಟೇ ರಸವತ್ತಾಗಿ ಹೇಳಿದರೂ ಆ ವಿದ್ಯಾರ್ಥಿಗಳಿಗೆ ಕೇಳುವ ತಾಳ್ಮೆ ಇರುತ್ತಿರಲಿಲ್ಲ. ಮುಖ ಅಡ್ಡ ಇಟ್ಟುಕೊಂಡು ಆಕಳಿಸುತ್ತಿದ್ದರು. ತಾನು ಅವರಿಗೆ ದಕ್ಕುತ್ತಿಲ್ಲವೋ, ಅವರು ತನಗೆ ದಕ್ಕುತ್ತಿಲ್ಲವೋ ಎಂದು ವಿದ್ಯಾರ್ಥಿಗಳ ಬಗ್ಗೆ ನವನೀತನಿಗೆ ಬೇಸರವೆನ್ನಿಸುತ್ತಿತ್ತು, ತಾನು ಇಷ್ಟೊಂದು ಚೆನ್ನಾಗಿ ಔಟ್ ಆಫ್ ಸಿಲೆಬಸ್ ವಿಷಯವನ್ನು ಹೇಳುತ್ತಿದ್ದರೂ ಇವರಿಗದು ಬೇಡ, ಇವರ ಕಣ್ಣಿಗೆ ತಾನು ತೀರಾ ಪ್ರಾಯವಾದ ಉಪನ್ಯಾಸಕನಂತೆ ಕಂಡು ಅಪ್ರಸ್ತುತವೆನ್ನಿಸುತ್ತಿದ್ದೇನೋ ಎನ್ನಿಸಿ ಅವನಿಗೆ ಚಿಂತೆಯಾಗುತ್ತಿತ್ತು. ಆದರೆ ಅವನು ಭೂತದ ಕತೆಗಳು, ರೋಚಕ ಅನ್ನಿಸುವಂತಹ ಕಟ್ಟುಕತೆಗಳನ್ನು ಕಟ್ಟಿ, ಅಪರೂಪಕ್ಕೊಮ್ಮೆ ಹುಡುಗ ಹುಡುಗಿಯರ ಹೃದಯಸೂರೆಗೊಳ್ಳುವಂತಹ ಪ್ರೀತಿ ಪ್ರೇಮ ಮಿಶ್ರಿತ ಕತೆಗಳನ್ನು ಹೇಳುತ್ತಿದ್ದರೆ ಎಲ್ಲರೂ ಕಿವಿ ಬಾಯಿ ಬಿಟ್ಟು ಕೇಳುತ್ತಿದ್ದರು. ಆ ಸಂಗತಿಗಳಲ್ಲಿ ಅವರಿಗಿರುತ್ತಿದ್ದ ಆಸಕ್ತಿ, ಆ ಸಂಗತಿಗಳನ್ನು ಕೇಳುತ್ತಿದ್ದಾಗ ಅವರಿಗಿರುತ್ತಿದ್ದ ತಾಳ್ಮೆ, ಆಗ ಕವಿಯುತ್ತಿದ್ದ ಮೌನ ಇವೆಲ್ಲಾ ಕಂಡು ನವನೀತ “ಅಬ್ಬಾ ಈಗಿವರ ಏಕಾಗ್ರತೆಯೋ”! ಎಂದು ಅಚ್ಚರಿಪಡುತ್ತಿದ್ದ, ತನ್ನ ಬದುಕಿನಲ್ಲಿಯೂ ಹೊಸ ಹೊಸ ಘಟನೆಗಳು ನಡೆಯುತ್ತಿರಬೇಕು, ತಾನದನ್ನು ವಿದ್ಯಾರ್ಥಿಗಳಿಗೆ ಪೋಣಿಸಿ, ಒಂದಷ್ಟು ಮಸಾಲೆ ಬೆರೆಸಿ ರಸವತ್ತಾಗಿ ನಿರೂಪಿಸಬೇಕು ಎಂದು ನವನೀತನಿಗೆ ಆಗಾಗ ಅನ್ನಿಸುತ್ತಿತ್ತು. ಅಪರೂಪಕ್ಕೆ ಕತೆ, ಪ್ರಬಂಧ, ಕವನ ಅಂತೆಲ್ಲಾ ಬರೆಯುವ ಹವ್ಯಾಸವಿದ್ದ ನವನೀತನಿಗೆ ತಾನು ಕಂಡದ್ದನ್ನು ಮಕ್ಕಳಿಗೆ ಕತೆಯಂತೆ ಹೇಳುತ್ತಿದ್ದಾಗ ತುಂಬಾ ಸಲ, ತಾನಿದ್ದನ್ನು ಬರೆಯಬೇಕು ಅಂತಲೂ ಅನ್ನಿಸುತ್ತಿದ್ದರಿಂದ ಅವನು ವಿದ್ಯಾರ್ಥಿಗಳಿಗೆ ಇಷ್ಟವಾದುದುನ್ನು ಹೇಳಲು ತಪ್ಪಿಸಿಕೊಳ್ಳುತ್ತಿರಲಿಲ್ಲ.
ಆಗುಂಬೆಯ ಹನ್ನೊಂದನೇ ತಿರುವಿನಲ್ಲಿ “ಇಲ್ಲೆಲ್ಲಾ ಸ್ಟಾಪ್ ಕೊಡಲ್ಲ ಮಾರಾಯ. ಸುಮ್ಮನೆ ಬಸ್ ಹತ್ತಿ ಯಾಕೆ ನಮ್ಗೆ ಉಪದ್ರ ಕೊಡ್ತೀ. ಇಳಿ ಇಳಿ ಬೇಗ” ಎಂದು ಕಂಡಕ್ಟರ್ ಯಾರಿಗೋ ಬೈದು ಬಸ್ಸು ನಿಲ್ಲಿಸಿದ. ಬಸ್ಸು ಘಾಟಿಯ ಮೌನದಲ್ಲಿ ಅಯ್ಯಬ್ಬಾ ಎಂದು ಒಮ್ಮೆ ನಿಟ್ಟುಸಿರಿಟ್ಟು ನಿಂತು, ಮತ್ತೆ ಆಗುಂಬೆಯ ಮರವನ್ನು ಸುರು ಸುರು ಏರುತ್ತಿದ್ದ ಸಿಂಗಳೀಕನ ಹಾಗೆ ಅಲ್ಲೇ ನಿಂತಿದ್ದ ನವನೀತನನ್ನು ದಾಟಿ ಘಾಟಿ ಏರಿ ಹೋಯ್ತು. ಆ ಬಸ್ನಿಂದ ವ್ಯಕ್ತಿಯೊಬ್ಬ ಇಳಿದು ಕಂಡಕ್ಟರ್ ಬೈದದ್ದು ತನಗೇ ತಾಗೇ ಇಲ್ಲ ಎನ್ನುವಂತೆ ಯಾವುದೋ ಗುಂಗಿನಲ್ಲಿ ನಡೆದುಕೊಂಡು ನವನೀತನಿದ್ದ ಕಡೆಗೇ ಬರತೊಡಗಿದ.
ಆಗುಂಬೆ ಘಾಟಿಯಲ್ಲಿ ಯಾವ ಬಸ್ಸುಗಳಿಗೂ ಸ್ಟಾಪು ಕೊಡುತ್ತಿರಲಿಲ್ಲ. ಯಾರೂ ಅಷ್ಟಾಗಿ ಅಲ್ಲಿ ಇಳಿಯುತ್ತಲೂ ಇರಲಿಲ್ಲ. ಸೂರ್ಯಾಸ್ತ ವೀಕ್ಷಣೆಗೆ ಬರುವವರಿಗೂ ಆಗುಂಬೆ ಚೆಕ್ಪೋಸ್ಟ್ ನಲ್ಲಿ ಸ್ಟಾಪು ಕೊಡುತ್ತಾರೆ ಬಿಟ್ಟರೆ ಘಾಟಿಯಲ್ಲಿ ಬಿಲ್ಕುಲ್ ಕೊಡುತ್ತಿರಲಿಲ್ಲ. ಅಂತಹದರಲ್ಲಿ ಈ ಪುಣ್ಯಾತ್ಮ ಯಾಕೆ ಇಳಿದಿರಬಹುದು? ಎನ್ನುವ ಸಾಮಾನ್ಯ ಕುತೂಹಲ ನವನೀತನಿಗಾಯಿತು. ಅವನು ಅಲ್ಲಿ ನಿಲ್ಲಿಸಿದ ಅವನ ಬೈಕ್ ನ ಕನ್ನಡಿಯಲ್ಲಿ ಆ ವ್ಯಕ್ತಿ ಬರುತ್ತಿರುವುದು ಕಾಣಿಸುತ್ತಿತ್ತು. ಮುಖಕ್ಕೆ ಮುಖಕೊಟ್ಟು ನೋಡುವುದು ಸರಿಯಾಗದೇ, ಅವನನ್ನು ನೋಡುವುದನ್ನು ಬಿಟ್ಟುಕೊಡಲು ಆಗದೇ ನವನೀತ ಅವನನ್ನು ಬೈಕ್ ನ ಕನ್ನಡಿಯಲ್ಲಿ ಆದಷ್ಟು ನೋಡಿದ. ಆ ವ್ಯಕ್ತಿ ಮೊದಲು ತೀರಾ ಸಹಜ ಹುಡುಗನಂತೆ ಕಂಡ, ಅವನ ಗುಂಗುರು ಗುಂಗುರು ಕೆಂಚು ಕೂದಲು ಸಾಯಂಕಾಲದ ಬಿಸಿಲಿಗೆ ಹೊಳೆಯುತ್ತಿತ್ತು. ಬೂದು ಬಣ್ಣದ ಬರ್ಮುಡಾ, ಕೊಳಕಾದ ಅರ್ಧ ತೋಳಿನ ಬಿಳಿಶರ್ಟಿನಲ್ಲಿ ಅವನು ಡಾಮರು ಕೆಲಸ ಮಾಡುವ ಹುಡುಗನಂತೆ ಕಂಡ. ಅವನ ನಡಿಗೆಯಲ್ಲಿ ಸಹಜತೆಯಿದ್ದರೂ ಮುಖದಲ್ಲಿ ಯಾವ ಕುತೂಹಲವೂ ಇದ್ದಂತೆ ಕಾಣಿಸಲಿಲ್ಲ.
ಆದರೆ ಇನ್ನೂ ಹತ್ತಿರತ್ತಿರ ಬರುತ್ತಿದ್ದಂತೆಯೇ ಅವನ ಮುಖ ಬೈಕಿನ ಕನ್ನಡಿಯಲ್ಲಿ ಸ್ಟಷ್ಟವಾಗಿ ಕಂಡಿತು. ಆ ಸ್ಪಷ್ಟತೆ ನೋಡಿ ನವನೀತ ಅರೆಕ್ಷಣ ದಂಗಾಗಿ ಹೋದ.
“ಯೋಗೀಶ” ನವನೀತ ಅಚ್ಚರಿ ಎಂಬಂತೆ ಉದ್ಗಾರ ತೆಗೆದ. ಆ ವ್ಯಕ್ತಿಯ ಸುತ್ತ ಆಳವಾದ ಪ್ರಪಾತ, ಮೇಲೆ ಪಾಚಿಗಟ್ಟಿದ್ದ ದೊಡ್ಡ ದೊಡ್ಡ ಬೆಟ್ಟಗಳು, ಬೆಟ್ಟದ ಮೇಲೆ ಕೂತು ಎಲ್ಲವನ್ನೂ ಧೇನಿಸುತ್ತ ಆಗುಂಬೆಯ ಕಾಡಿನ ಸಕಲ ಸೂಕ್ಷ್ಮಗಳನ್ನೂ ಗಮನಿಸುತ್ತಿರುವ ಸಿಂಗಳೀಕಗಳು, ಅವುಗಳ ಮುನ್ನಲೆಯಲ್ಲಿ ಈ ವ್ಯಕ್ತಿ ತಣ್ಣಗೇ ನಗುವಂತೆ ಸಹಜವಾಗಿ ನಿಂತಿದ್ದ.
“ಇವನೇ ಅಲ್ಲವಾ ನಾನು ಬಾಲ್ಯದಲ್ಲಿ ಕಂಡ ಯೋಗೀಶ? ನವನೀತ ಬೈಕ್ ಕನ್ನಡಿಯಿಂದ ಮುಖ ಹಿಂತೆಗೆದು ನೇರವಾಗಿ ಅವನ ಮುಖವನ್ನು ನೋಡಿದ ಆ ಮುಖದಲ್ಲಿಷ್ಟು ಗಡ್ಡ ಮೀಸೆ ಬೆಳೆದಿತ್ತು. ವಿಲಕ್ಷಣ ನಗುವಿತ್ತು, “ಹೌದು ಇವನೇ”ಎಂದು ನವನೀತನಿಗೆ ಖಾತ್ರಿಯಾಯಿತು.
ತಾನು ನಾಲ್ಕನೇ ಕ್ಲಾಸೋ ಐದನೇ ಕ್ಲಾಸೋ ನೆನಪಿಲ್ಲ, ತನಗಿಂತ ದೊಡ್ಡವನು, ತನಗಿಂತ ಮುಂದಿನ ಕ್ಲಾಸ್ ನಲ್ಲಿ ಇರುವವನು ಎಂದಷ್ಟೇ ನೆನಪಿರುವ ಈ ಯೋಗೀಶ ಆಗೊಮ್ಮೆ ಈಗೊಮ್ಮೆ ಮನೆ ದಾರಿಯಲ್ಲಿ ಸಿಕ್ಕಿದಾಗ ಅವನ ಗಂಭೀರ ಮುಖ ನೋಡಿ ತನಗೆ ಹೆದರಿಕೆಯಾಗುತ್ತಿತ್ತು. ಆದರೆ ಯೋಗೀಶ ಮಾತ್ರ ಸದಾ ನಗುತ್ತಿರುವ ಹಾಗೇ ಕಾಣುತ್ತಿದ್ದ, ಅವನು ಯಾವಾಗಲೂ ಹಾಗೇ ವಿಚಿತ್ರವಾಗಿ ನಗುತ್ತಿರುವುದನ್ನು, ಮತ್ತು ಅವನು ಎಷ್ಟೇ ಮುಂದೆ ಹೋದರೂ ಮತ್ತೆ ಹಿಂತಿರುಗಿಸಿ ಸಣ್ಣಗೆ ನಕ್ಕು ಒಂದು ದಾರಿ ಕಾಣೆಯಾಗುವವರೆಗೂ ತನ್ನನ್ನೇ ಹಿಂಬಾಲಿಸಿ ನೋಡುತ್ತಿದ್ದಾಗಂತೂ ತನಗೆ ಭಯವೇ ಆಗುತ್ತಿತ್ತು. ಒಂದು ದಿನವೂ ತಾನು ಅವನ ಬಳಿ ಮಾತಾಡಿಲ್ಲ, ಆದರೆ ಅವನ ನಸು ನಗು, ವಿಲಕ್ಮಣತೆ, ಆ ಕೂದಲು, ಅವನ ನಿಲುವು, ಭುಜವನ್ನು ಅಲ್ಲಾಡಿಸಿ ಅಲ್ಲಾಡಿಸಿ ಸಾಗುತ್ತಿರುವ ಅವನ ನಡಿಗೆ ಆ ದಿನಗಳಲ್ಲಿ ಅದೆಷ್ಟು ವಿಚಿತ್ರವನ್ನಿಸುತ್ತಿತ್ತು ತನ್ನ ಬಾಲ್ಯದ ಕಣ್ಣಿಗೆ, ಚೂರು ದೊಡ್ಡವನಾದ ಮೇಲೆ ಅವನನ್ನು ನೋಡುವುದೇ ಹಿಂಸೆ ಅನ್ನಿಸುತ್ತಿತ್ತು. ಅವನು ಬೊದ್ದು, ಸರಿಯಿಲ್ಲ, ಅವನಿಗೆ ಏನು ಕಲಿಸಿದರೂ ಮಂಡೆಗೆ ಹೋಗುದಿಲ್ಲ, ಪೆದ್ದ ಅಂದರೆ ಬರೀ ಪೆದ್ದ, ಎಲ್ಲದರಲ್ಲಿ ಫೈಲ್ ಅವನು” ಎಂದವನ ಗೆಳೆಯರು ಹೇಳುತ್ತಿದ್ದರು. ಅವನು ಬರೀ ಪೆದ್ದನೇ, ಅವನಿಗೆ ತಲೆಯೇ ಇಲ್ಲ ಎನ್ನುವಂತೆ ಬೈದು, ಶಾಲೆಯಲ್ಲಿ ಅವನಿಗೆ ಏನೇನೋ ಶಿಕ್ಷೆ ಕೊಟ್ಟು, ಕಪ್ಪೆಯಂತೆ ಓಡಿಸುವ ಪನಿಶ್‌ಮೆಂಟ್ ಕೊಟ್ಟಾಗ ನನಗೆ ಖುಷಿ ಎನ್ನಿಸುತ್ತಿತ್ತಲ್ಲವೇ? ಆದರೆ ಎಷ್ಟೊಂದು ಮಂದಿ ಶಿಕ್ಷಕರು ಅವನ ಮನೆಯಿಂದ ಬಾಳೆಹಣ್ಣಿನ ಗೊನೆ, ಮಾವಿನ ಹಣ್ಣು, ಹಲಸಿನ ಹಣ್ಣು, ತೆಂಗಿನ ಕಾಯಿ, ಪತ್ರೊಡೆ ಎಲೆ, ಬಿಂಬಲಿ ಹಣ್ಣು, ತರಿಸುತ್ತಿದ್ದರಲ್ಲವೇ? ನಂಗೆ ತಾವರೆ ಅಂದರೆ ಇಷ್ಟ ತಾವರೆ ಎಲ್ಲಾದ್ರೂ ಸಿಕ್ಕರೆ ತಾ ಎಂದು ಸರೋಜ ಮೇಡಮ್ ಹೇಳಿದಾಗ ಆನೆಕೆರೆಯೋ, ಸಿಗಡಿಕೆರೆಯೋ, ಎಲ್ಲಿಯೋ ಹೋಗಿ ಗೋಣಿ ತುಂಬಾ ತಾವರೆ ಹೂವುಗಳನ್ನು ತುಂಬಿಸಿ ಶಾಲೆಗೆ ತಂದವನು ಇವನೇ ಅಲ್ಲವೇ? ಸದಾಶಿವ ಮಾಸ್ಟ್ರು ಕಣಿಲೆ ಇದ್ರೆ ತಾ ಮನೆಯವರಿಗೆ ಕಣಿಲೆ ಪದಾರ್ಥ ಭಾರೀ ಇಷ್ಟ ಅಂದಾಗ, ಮರುದಿನವೇ ಬುಟ್ಟಿ ತುಂಬಾ ಕಣಿಲೆ ತಂದವನು, ಜಾನಕೀರಾಮ ಮಾಸ್ಟ್ರಿಗೆ ಮದ್ದಿಗೆ ಕಾಡು ಜೇನು ಬೇಕು ಅಂದಾಗ ರುಚಿಕಟ್ಟಾದ ಕಾಡು ಜೇನು ತಟ್ಟಿ ತಂದವನು ಇವನೇ ಅಲ್ಲವಾ? ನವನೀತ ಅವನನ್ನೇ ನೋಡತೊಡಗಿದ, ಯೋಗೀಶ ಅದ್ಯಾವುದು ತನಗೆ ನೆನಪೇ ಇರದು ಎನ್ನುವಂತೆ ತಣ್ಣಗೇ ನಿಂತಿದ್ದ. ಅವನ ನಸು ನಗು ಬಾಲ್ಯದಂತೆಯೇ ಮಿಂಚುತ್ತಿತ್ತು.
ಹೇಳಿದ ಕೂಡಲೇ ಮೌನದಿಂದಲೇ ಸಮ್ಮತಿಸಿ ಎಲ್ಲವನ್ನೂ ತಂದುಕೊಡುತ್ತಿದ್ದ ಯೋಗೀಶನನ್ನು ಯಾಕೆ ಎಲ್ಲಾ ಮೇಸ್ಟ್ರರು ಪೆದ್ದ, ಹೆಡ್ಡ ಎನ್ನುತ್ತಿದ್ದರು?” ಹಾಗೆ ಹೇಳುವವರು ಯಾಕೆ ಅವನಿಂದ ತಾವರೆ, ಜೇನು, ಕಣಿಲೆ ಎಲ್ಲಾ ತರಿಸುತ್ತಿದ್ದರು, ಅವನು ತಂದುಕೊಟ್ಟಾಗ ಅವನ ಮೇಲೆ ಚೂರು ಮಮತೆ ತೋರಿಸದೇ, ಪೆದ್ದ ಹುಡುಗನಾದರೇನಂತೆ ಇವನನ್ನು ಮತ್ತೆ ಮತ್ತೆ ಪೆದ್ದು ಪೆದ್ದು ಎಂದು ಹೀಗಳೆಯದೇ ಅವನ ತಲೆಗೆ ಅರ್ಥವಾದಷ್ಟು ಪಾಠ ಮಾಡೋಣ, ಅವನ ಕಷ್ಟಗಳನ್ನು ಕೇಳೋಣ, ಹೇಳಿದ್ದನ್ನೆಲ್ಲಾ ಇಷ್ಟು ಪ್ರೀತಿಯಿಂದ ತಂದುಕೊಡುವ ಈ ಹುಡುಗ, ತಾವು ಪ್ರೀತಿಯಿಂದ ಪಾಠ ಅರ್ಥವಾಗುವಂತೆ ಹೇಳಿಕೊಟ್ಟರೆ ಖಂಡಿತ ಬುದ್ಧಿವಂತನಾದಾನು ಎಂದು ಯಾಕೆ ಯಾವ ಮಾಸ್ಟ್ರಿಗೂ ಹೊಳೆಯಲಿಲ್ಲ? ಅಷ್ಟೊಂದು ಸ್ವಾರ್ಥಿಗಳಾಗಿದ್ದರಲ್ವಾ ನಮ್ಮ ಬಾಲ್ಯದ ಮೇಸ್ಟ್ರುಗಳು, ಅವನು ಅವರು ಹೇಳಿದ್ದನ್ನು ಎಷ್ಟು ಕಷ್ಟಪಟ್ಟು ತರುತ್ತಿದ್ದನೋ? ಅವನ ಮನೆ ಸ್ಥಿತಿ ಹೇಗಿತ್ತೋ? ಎಂದು ತಿಳಿಯದೇ ಅವನು ತಂದದ್ದಕ್ಕೆ ಒಂಚೂರು ಕೃತಜ್ಞತೆಯನ್ನೂ ಹೇಳದೇ ಕೊನೆಗೂ ಅವನನ್ನು ಎಲ್ಲರೂ ಹೆಡ್ಡನಂತಯೇ ಕಂಡರಲ್ಲ, ಅವನನ್ನು ಹೆಡ್ಡನನ್ನಾಗಿ ಮಾಡಿದ್ದು, ಅವನು ಶಾಲೆ ಬಿಡುವವರೆಗೂ ಹೆಡ್ಡನಾಗಿಯೇ ಉಳಿಯುವಂತೆ ನೋಡಿಕೊಂಡಿದ್ದು, ಇವರೇ ಅಲ್ಲವಾ? ಅಂತನ್ನಿಸಿ ನವನೀತ ನೊಂದುಕೊಂಡ.
ನವನೀತ ಶಾಲೆ ಬಿಟ್ಟ ಬಳಿಕ ಯೋಗೀಶನನ್ನು ಜಾತ್ರೆಯ ಪಾಪ್ ಕಾರ್ನ್ ಅಂಗಡಿಯಲ್ಲೋ, ಮಿಠಾಯಿ ಅಂಗಡಿಯಲ್ಲೋ, ಫಾಸ್ಟ್ ಫುಡ್ ಸ್ಟಾಲಿನಲ್ಲೋ ಕೆಲಸ ಮಾಡುವುದನ್ನು ಎಷ್ಟೋ ವರ್ಷಗಳ ಹಿಂದೆ ನೋಡಿದ್ದ, ಆಗ ಅವನೇನು ಕಾಡಿರಲಿಲ್ಲ, ಅದಾದ ಬಳಿಕ ನವನೀತ ಈಗಲೇ ಅವನನ್ನು ನೋಡುತ್ತಿರುವುದು. ಇರಲಿ ಈಗಲಾದರೂ ತಾನು ಬಾಲ್ಯದ ಮುಖವೊಂದನ್ನು ಎಷ್ಟೋ ಕಾಲದ ಬಳಿಕ ಎದುರುಗೊಳ್ಳುತ್ತಿದ್ದೆನಲ್ಲವಾ? ಬಾಲ್ಯದ ಒಂದು ವ್ಯಕ್ತಿಯನ್ನು ಮಾತನಾಡಿಸುವುದು ಎಂದರೆ ಇಡೀ ಬಾಲ್ಯವನ್ನೇ ಹಿಡಿದು ನಿಲ್ಲಿಸಿ ಕೈಕೊಡವಿ ಮಾತಾಡಿಸಿದಂತೆ ಅನ್ನಿಸಿ ನವನೀತನಿಗೆ ಖುಷಿಯಾಯಿತು.
ಯೋಗೀಶ ನವನೀತನತ್ತ ಬಂದ. ಸುಮ್ಮನೇ ಅವನನ್ನು ನಿರುಕಿಸಿದ. ಇಬ್ಬರ ಕಣ್ಣೂ ಮೊದಲ ಸಂವಾದಕ್ಕೆ ಅಣಿಯಾಗುವಂತೆ ಗಾಢವಾಗಿ ಒಂದಾಯಿತು. ನವನೀತ ಅವನಂತೆಯೇ ಸೌಮ್ಯವಾಗಿ ನಕ್ಕ. ಅವನು ಇನ್ನೂ ಸುಂದರವಾಗಿ ನಕ್ಕ. ಬಾಲ್ಯದ ನಿಜ ಪಾತ್ರವೊಂದನ್ನು ತಾನು ಮಾತಾಡಿಸುತ್ತಿದ್ದೇನೆ, ಅದೂ ಈ ಮೌನ ತುಂಬಿದ ಆಗುಂಬೆಯಲ್ಲಿ, ಬದುಕಿನ ಗಾಢತೆ, ನೆನಪು, ಎಲ್ಲವೂ ತೀಕ್ಣವಾಗಬಹುದಾದ ಈ ಜಾಗದಲ್ಲಿ ಬಾಲ್ಯವನ್ನೇ ತಾನು ಮಾತಾಡಿಸುತ್ತಿದ್ದೇನೆ ಎನ್ನುವ ಸಂಗತಿಯೇ ನವನೀತನಲ್ಲಿ ರೋಚಕತೆ ಹುಟ್ಟಿಸಿತು.
ಯೋಗೀಶನ ಕಣ್ಣು ಹೊಳೆದಂತೆ ಕಾಣುತ್ತಿದ್ದರೂ ಅದು ಬಾಡಿತ್ತು, ಅಲ್ಲೇನೋ ಸಾತ್ವಿಕತೆ ಇತ್ತು, ಆವನು ಮೌನವಾಗಿ ನಿಂತು ನವನೀತನನ್ನು ಮೇಲಿನಿಂದ ಕೆಳಗಿನವರೆಗೂ ನೋಡಿದ, ನವನೀತನೂ ನೋಡಿದ. ಮಾಸಿ ಹೋದ ಅವನ ಶರ್ಟು, ಏನೇನೋ ಕಲೆಯಾಗಿ ಅರ್ಧಮರ್ಧ ಹರಿದು ಹೋದ ಬರ್ಮುಡಾ, ಗುಂಗುರು ಗುಂಗುರಾದ ಕೂದಲುಗಳ ನಡುವೆ ಕೆಂಪಾಗಿ ಮನೆಕಟ್ಟಿದ್ದ ಧೂಳಿನ ಕಣಗಳು. ಪೊದೆಯಂತೆ ತುಂಬಿಕೊಂಡಿದ್ದ ಗಡ್ಡ, ಉದ್ದಗೇ, ಸಪೂರನೇ ಇದ್ದ ದೇಹ, ಕೈಗೆ ಸುತ್ತಿಕೊಂಡಿದ್ದ ದೇವರದಾರಗಳು, ಅವನ ಈ ವೇಷ ನೋಡಿ, ಇವನು ತಾನು ಬಾಲ್ಯದಿಂದಲೇ ಕಾಣುತ್ತ ಬಂದ ವ್ಯಕ್ತಿ ಹೌದೋ? ಅಲ್ಲವೋ? ಎನ್ನುವ ಅನುಮಾನ ಶುರುವಾಯ್ತು ನವನೀತನಿಗೆ. ಜನರು ನಡೆದುಕೊಂಡು ಹೋಗದ ಈ ದಾರಿಯಲ್ಲಿ ಇವನು ಯಾಕಾದರೂ ಬಂದ? ಎಂದೆಲ್ಲಾ ಅನುಮಾನವೂ ಅವನಿಗೆ ಶುರುವಾಯ್ತು.
ಘಾಟಿಯಲ್ಲಿ ವಾಹನಗಳ ಓಡಾಟ ಕಡಿಮೆಯಾಗಿತ್ತು, ಹನಿಯುತ್ತಿದ್ದ ಮಳೆ ಚೂರು ನಿಂತಿತು. ಸೂರ್ಯಾಸ್ತ ವೀಕ್ಷಣಾ ಗೋಪುರದಲ್ಲಿ ಸಂಜೆ ಸೂರ್ಯ ಚೂರೇ ಚೂರು ಕಂಡು ಆಗುಂಬೆಗೊಮ್ಮೆ ಕಣ್ಣು ಹೊಡೆದಂತೆ ಮಾಯವಾದ. ಆದರೆ ಸೂರ್ಯನ ಅಸ್ತಿತ್ವ, ಅವನ ಮೈ ಗೆಂಪು ಬಾನಿಗೆಲ್ಲಾ ಹರಡಿ ಹಸಿರು ಬೆಟ್ಟಗಳೂ ಬಾನಿನ ಬಿಂಬದಲ್ಲಿ ಸ್ನಾನ ಮಾಡಿ ಮೈ ಒಣಗಿಸಲು ನಿಂತಂತೆ ಕಂಡವು. ಸಿಂಗಳೀಕಗಳು ಕೊಂಬೆಯಿಂದ ಕೊಂಬೆಗೆ ಹಾರಿದ ಸದ್ದು, ಕಾಡು ಮೈನಾಗಳು ಪುರ್ ಪುರ್ ರೆಕ್ಕೆಯಾಡಿಸಿ ದಿಗಂತದಲ್ಲಿ ಲೀನವಾದ ಸದ್ದು, ಕೊನೆಗೆಲ್ಲಾ ಮೌನವಾಗಿ ಆಗುಂಬೆಯ ತಿರುವಿನಲ್ಲಿ ಮುಸ್ಸಂಜೆಯ ನಿಶ್ಚಲತೆಯೊಂದು ಆವರಿಸಿಕೊಂಡಿತು. ಇವೆಲ್ಲದವರ ನಡುವೆ ಅವನು ನವನೀತನನ್ನು ಮೌನದಿಂದಲೇ ನಿರುಕಿಸುತ್ತ ನಗುತ್ತಿದ್ದ ಬಿಟ್ಟರೆ ಮಾತೇ ಆಡಲಿಲ್ಲ. ಕೊನೆಗೆ ನವನೀತನೇ ಮೌನಮುರಿದು “ನನ್ನ ಗುರ್ತಾ ಆಯ್ತಾ ನಿಮಗೆ? ಎಂದು ಕೇಳಿದ.
“ಇಲ್ಲ” ಎಂದವನು ತಲೆಯಾಡಿಸಿದ. ಹಾಗೆ ತಲೆ ಅಲ್ಲಾಡಿಸಿದಾಗಲೂ ಮುಖದಿಂದ ಜಾರದ ಆ ನಿಶ್ಚಲ ನಗು.
“ನೀವು ಕಲ್ತ ಶಾಲೆಲೇ ನಾನು ಕಲ್ತದ್ದು, ನಿಮ್ಮನ್ನು ಶಾಲೆಲಿ ನೋಡಿದ್ದು ನೆನಪು” ಎಂದ. ಅವನು ಏನೂ ಉತ್ತರಿಸಲಿಲ್ಲ. ಮುಖದಲ್ಲೂ ಉತ್ತರದ ಭಾವನೆಯಿಲ್ಲ. ನವನೀತನಿಗೆ ನಿರಾಶೆಯಾಯಿತು. ಅವನಿಗೆ ತನ್ನ ನೆನಪಿದ್ದರೆ ಬಾಲ್ಯದ ನೆನಪುಗಳ ಸುರಂಗಕ್ಕೆ ಇಳಿಯಬಹುದಿತ್ತು, ಆದರೆ ಅವನಿಗೆ ತನ್ನ ನೆನಪಿಲ್ಲದೇ ನಾನು ಅವನ ನೆನಪನ್ನು ಹೇಳುವುದು ಸರಿಯಲ್ಲ ಎನ್ನಿಸಿ “ಏನು ಮಾಡ್ತಿರೋದು ನೀವು” ಎಂದು ಕೇಳಿದ.
“ಕೆಲಸ” ಎಂದ. “ಏನ್ ಕೆಲಸ, ಎಲ್ಲಿ”
ಸೋಮೇಶ್ವರದ ಹೋಟೇಲ್ನಲ್ಲಿ” ಎಂದ.
ಯಾವ ಹೊಟೇಲಿನಲ್ಲಿ ಎಂದು ನವನೀತ ಕೇಳಿದ್ದಕ್ಕೆ, ಎಲ್ಲಾ ಹೊಟೇಲ್‌ನಲ್ಲಿ ಅಂತೇನೋ ಅಸ್ಪಷ್ಟವಾಗಿ ಹೇಳಿದ.
“ಎಲ್ಲಾ ಹೊಟೇಲಲ್ಲಿಯೂ ಕೆಲಸ ಮಾಡ್ತೀರಾ?” ನವನೀತ ಅಚ್ಚರಿಯಾದ.
ಅದಕ್ಕವನು ಮಾಡ್ತೇನೆ ಹೊಟೇಲ್ನಲ್ಲಿ, ಎಲ್ಲಾ ಕೆಲಸ ಮಾಡ್ತೇನೆ ಅಂತ ಏನೇನೋ ಹೇಳಿದ. ಕನ್ನಡದ ಜೊತೆ ತುಳುವಿನಲ್ಲಿ ಏನೇನೋ ಮಾತಾಡಿದ, ಅವನ ತೊದಲು ಮಾತು ಒಂದಕ್ಕೊಂದು ಸಂಬಂಧವಿರದ ವಾಕ್ಯಗಳಿಂದ ನವನೀತನಿಗೆ ಏನೂ ತಿಳಿಯಲಿಲ್ಲ. ಮುಂದಕ್ಕೇನು ಮಾತಾಡುವುದು ಎಂದು ಮೌನವಾದ. ಅಷ್ಟೊತ್ತಿಗೆ ಯೋಗೀಶ ಇನ್ನೂ ನವನೀತನ ಹತ್ತಿರಕ್ಕೆ ಬಂದ. ಅವನ ಕಾಲಿಗೆ ತನ್ನ ಕೈ ಸೇರಿಸಿ ಅವನ ಪ್ಯಾಂಟ್ನ ಅಂದ ಚಂದವನ್ನು ನೋಡುವವನಂತೆ ಪ್ಯಾಂಟ್ನ ಬೆನ್ನನ್ನು ನಯವಾಗಿ ನೇವರಿಸತೊಡಗಿದ. ಅಷ್ಟೊತ್ತು ಸಹಜವಾಗಿದ್ದ ನವನೀತ ಒಮ್ಮೆಲೇ ಕಂಗಾಲಾಗಿ ಇದೇನು ಕತೆ ಎನ್ನುವಂತೆ ಅವನಿಂದ ಚೂರೇ ದೂರ ಹೋಗತೊಡಗಿದ. ಅವನ ಆ ನೇವರಿಕೆಯಲ್ಲಿ ಬಾಲ್ಯವಿದ್ದಂತೆ ಕಂಡಿತು. ಆದರೂ ಭಯವಾಯಿತು, ಅವನು ಚೂರು ನೂಕಿಬಿಟ್ಟರೆ ಕೆಳಗೆ ಪ್ರಪಾತ, ತನ್ನನ್ನೇ ನಿರುಕಿಸುತ್ತ “ಕೆಳಗೆ ಬರ್ತಿಯೇನೋ ನೀನೀಗ” ಎನ್ನುವ ಅನುಮಾನದಲ್ಲೇ ನೋಡುತ್ತಿರುವ ಚೂಪು ಚೂಪು ಮೂತಿಯ ಬಂಡೆಗಳು, ಬಾಲ್ಯ, ನೆನಪು ಅಂತೆಲ್ಲಾ ಹೋಗಿ ನಾನು ನನ್ನನ್ನೇ ಕಳೆದುಕೊಂಡುಬಿಟ್ಟರೆ ಅಂತನ್ನಿಸಿ ನಿಶ್ಚಲವಾದ ನವನೀತ. ಕಾಲನ್ನು ಗಟ್ಟಿಯಾಗಿ ನೆಲಕ್ಕೂರತ್ತ ಏನು ಮಾಡ್ತಾನೋ ನೋಡೇ ಬಿಡುವ ಎನ್ನುವ ಧೈರ್ಯದಲ್ಲಿ ಅವನೆದುರು ನಿಂತ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಪರಸೆ
ಅವನಿಂದ ಸ್ವಲ್ಪ ದೂರ ನಿಂತು“ಅಲ್ಲಾ ಇದೇನು ನೀವು ಬಸ್ಸಿಂದ ಇಲ್ಲಿ ಇಳ್ದದ್ದು? ಎಲ್ಲಿಗೆ ಹೊರಟದ್ದು ಎಂದು ಕೇಳಿದ.
ಯೋಗೀಶ ಮಾತಾಡಲೇ ಇಲ್ಲ, ಅವನು ನವನೀತನ ಮಿರಿ ಮಿರಿ ಹೊಳೆಯುತ್ತಿದ್ದ ನೀಲಿ ಜೀನ್ಸು ಪ್ಯಾಂಟು ನೋಡುತ್ತಲೇ ಇದ್ದ. ಮಾತಾಡಲು ಹೋದರೂ ಅವ ಮಾತಾಡಲೇ ಇಲ್ಲ. ಮುಖದಲ್ಲಿ ಅದೇ ಸೌಮ್ಯ ನಗು. ಮೋಸ, ವಂಚನೆ, ಕಪಟತೆ, ಕ್ರೌರ್ಯ ಏನೂ ಆ ನಗುವಲ್ಲಿರಲಿಲ್ಲ. ನವನೀತನ ಪ್ಯಾಂಟ್ ನೇವರಿಸಿದಾಗ ಅವನ ಮುಖದಲ್ಲಿ ಸಂಭ್ರಮದ ನಗು ಹೊಮ್ಮಿತ್ತು.
ಪುಟ್ಟ ಮಗುವೊಂದು ತನ್ನಿಷ್ಟದ ವಸ್ತು ನೋಡುವಂತೆ ಅವನು ಆ ಪ್ಯಾಂಟ್ ಅನ್ನು ನೋಡುತ್ತಿದ್ದ. ಆಕಾಶದಲ್ಲಿ ಅಲ್ಲಲ್ಲಿ ಕಾಣಿಸತೊಡಗಿದ್ದ ಕೆಂಬಣ್ಣವೆಲ್ಲಾ ಮಾಯವಾಗಿ ಇಡೀ ಆಕಾಶ ಕಪ್ಪಗಾಗಿ ಸಣ್ಣ ಹನಿ ಜಿನುಗತೊಡಗಿತು. ಸಂಜೆ ಆರುವರೆಯಾದರೂ ಅವನ ಮುಖ ನವನೀತನಿಗೆ, ನವನೀತನ ಮುಖ ಅವನಿಗೆ ಕಾಣಿಸುವಷ್ಟು ಬೆಳಕಿತ್ತು. ಅವನು ಮಾತ್ರ ನವನೀತನ ಪ್ಯಾಂಟ್ ಅನ್ನೇ ನೋಡುತ್ತಿದ್ದ ಅದನ್ನು ನೋಡಿ ಅವನಿಗೇನೋ ಸಂಭ್ರಮವಾಗುತ್ತಿತ್ತು.
ಇವನೆಂತಕ್ಕೆ ಹೀಗೆ ಮಾಡುತ್ತಿದ್ದಾನೆ, ಇವನಿಗೆಂತಕ್ಕೆ ಪ್ಯಾಂಟ್ ಮೇಲೆ ಕಣ್ಣು ಎಂದು ಸಿಟ್ಟು ಬಂದರೂ, ಅವನು ಉಟ್ಟಿದ್ದ ಹಳೆಯ ಬರ್ಮುಡಾ ನೋಡಿ ಜೀವಮಾನದಲ್ಲಿ ಇವನು ಪ್ಯಾಂಟೇ ಮುಟ್ಟಿರಲಿಕ್ಕಿಲ್ಲವಾ? ಹಾಗಾಗಿ ಪ್ಯಾಂಟ್ ಕಂಡ ಕೂಡಲೇ ಅದು ತನಗೂ ಬೇಕು ಅನ್ನುವ ಭಾವ ಇವನೊಳಗೆ ಮೂಡಿತಾ? ಎಂದುಕೊಂಡ ನವನೀತ.
ಅಲ್ಲೇ ನಿಂತಿದ್ದ ಯೋಗೀಶ ಹಗುರನೇ ಅಂಗಿ ಕಿಸೆಯಿಂದ ಒಂದು ಚೀಟಿ ತೆಗೆದು ನವನೀತನಿಗೆ ಕೊಟ್ಟ, ಬೆಳಕಿಗೊಡ್ಡಿ ಆ ಚೀಟಿ ನೋಡಿದರೆ “ಅದರಲ್ಲಿ ಮುಖವೇ ಇಲ್ಲದ ವ್ಯಕ್ತಿಯ ಚಿತ್ರವಿತ್ತು, ಆ ಚಿತ್ರದಲ್ಲಿ ವ್ಯಕ್ತಿಯ ಪ್ಯಾಂಟು ಎದ್ದು ಕಾಣುತ್ತಿತ್ತು. ಚೀಟಿಯ ಮಧ್ಯದಲ್ಲಿ “ಪ್ಯಾಂಟು” ಎಂದು ಕನ್ನಡದಲ್ಲಿ ಅಂಕುಡೊಂಕಾಗಿ ಬರೆದಿತ್ತು. ನವನೀತನಿಗೊಂದೂ ಅರ್ಥವಾಗಲಿಲ್ಲ. ಅವನು ಅವನದ್ದೇ ಕಲ್ಪನೆಯಲ್ಲಿ ಯೋಗೀಶನ ಬಗ್ಗೆ ಏನೇನೋ ಯೋಚಿಸತೊಡಗಿದ.ಇವನ ಪ್ಯಾಂಟ್ ಕಳೆದುಹೋಗಿದ್ಯಾ? ಇವನಿಗೆ ಪ್ಯಾಂಟ್ ಅಂದ್ರೆ ಇಷ್ಟವಾ?ಅಥವಾ ಪ್ಯಾಂಟಿನ ಬಗ್ಗೆ ಹುಚ್ಚು ಹಿಡಿದಿದೆಯಾ?ನನ್ನ ಪರಿಚಯವೇ ಇಲ್ಲ ಎಂದ. ಹಾಗಿದ್ದರೂ ಸೀದಾ ಬಂದು ಪ್ಯಾಂಟ್ ಮುಟ್ಟುವಷ್ಟು ಧೈರ್ಯ ಸಹಜ ಮನಸ್ಥಿತಿ ಇದ್ದವರಿಗೆ ಸಾಧ್ಯವಿಲ್ಲ, ಹಾಗಾದರೆ ಇವನು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾನಾ? ಹೀಗೆ ಪ್ರಶ್ನೆಗಳ ಮಳೆಯಲ್ಲಿ ನೆನೆದುಹೋದ ನವನೀತ.
“ಏನಿದು ಪ್ಯಾಂಟ್ ಚಿತ್ರ? ಪ್ಯಾಂಟ್ ಅಂದ್ರೆ ಇಷ್ಟವಾ ನಿಮ್ಗೆ?” ಎಂದು ಕೇಳಿದ, ಯೋಗೀಶ ಏನೂ ಮಾತಾಡದೇ ಮತ್ತದೇ ಸೌಮ್ಯ ನಗುವಿನಿಂದ ನವನೀತನನ್ನು ಸರಿದು ಮುಂದಕ್ಕೆ ನಡೆಯತೊಡಗಿದ.
“ಇನ್ನೇನ್ ಕತ್ತಲಾಗ್ತದೆ ಎಲ್ಲಿಗೆ ಹೋಗ್ತಿರಿ, ನಾನೇ ಬಿಡ್ತೇನೆ ಎಲ್ಲಿಗೆ ಬಿಡ್ಬೇಕು ಎಂದು ಗಟ್ಟಿಯಾಗಿ ಕೂಗಿ ನಿಲ್ಲು ಎನ್ನುವಂತೆ ನವನೀತ ಕರೆಯತೊಡಗಿದ.
“ಇಲ್ಲ ಚೆಕ್ ಫೋಸ್ಟ್ ನಾನೇ ಹೋಗ್ತೇನೆ ಎಂದವನು ಚೆಕ್ ಫೋಸ್ಟ್ ದಾರಿಯತ್ತ ನಡೆಯತೊಡಗಿದ. ಯೋಗೀಶ, ಹರಕು ಚಪ್ಪಲಿ ಹಾಕಿಕೊಂಡು ತಲೆ ಅಲ್ಲಾಡಿಸುತ್ತ ಕತ್ತಲಲ್ಲಿ ಕರಗಿ ಹೋಗುವವರೆಗೂ ನವನೀತ ನೋಡಿದ. ಮುಸ್ಸಂಜೆ ಕವಿದು ಆಗುಂಬೆ ಫಾಟಿ ನಿರ್ಜನವಾಗಿತ್ತು. ಒಂದೆರಡು ಬಸ್ ದಾಟಿತು ಬಿಟ್ಟರೆ ಮತ್ತೆಲ್ಲಾ ಮೌನ. ಈ ವ್ಯಕ್ತಿ ನಾನು ಬಾಲ್ಯದಲ್ಲಿ ಕಂಡವನೆಯಾ ಅಥವಾ ಬೇರೆಯೇ ವ್ಯಕ್ತಿಯಾ? ಅನ್ನುವ ಪ್ರಶ್ನೆಗಳ ತೊಳಲಾಟದಲ್ಲಿ ಬಳಲಿದ ನವನೀತ.
ಹೊಟೇಲ್ನಲ್ಲಿ ಅವನು ಪ್ಲೇಟ್ ತೊಳಿಯೋದು, ಬಡತನದ ಕತೆ ಹೇಳುವ ಅವನ ಅಂಗಿ, ಅವನ ವಿಚಿತ್ರ ಮಾತು ಎಲ್ಲಾ ಯೋಚಿಸಿದ. ನವನೀತನಿಗೆ ಎಲ್ಲಕ್ಕಿಂತಲೂ ಜಾಸ್ತಿ ಯೋಚನೆಯಾಗಿದ್ದು ಅವನು ತನ್ನ ಪ್ಯಾಂಟಿಗೆ ಕೊಟ್ಟ ಆ ನೇವರಿಕೆ. ನೂರಾರು ಜನರ ಪ್ಲೇಟಿನ ಎಂಜಲು ತೊಳೆದ ಅವನಿಗೆ ಪ್ಯಾಂಟ್ ಹಾಕುವ ಭಾಗ್ಯವಿರಲಿ, ಪ್ಯಾಂಟನ್ನು ನೇವರಿಸುವ ಭಾಗ್ಯವೂ ಸಿಕ್ಕೇ ಇರಲಿಲ್ಲವಾ? ಪ್ಲೇಟು ತೊಳೆದು ಗಡುಸಾದ ಆ ಬಡತನದ ಕೈಗಳಿಗೆ ತನ್ನ ಪ್ಯಾಂಟನ್ನು ಸ್ಪರ್ಶಿಸಿದಾಗ ಯಾವ ಭಾವನೆಯಾಗಿರಬೇಕು? ಆಗವನ ಮುಖದಲ್ಲಿ ಏನಿತ್ತು? ಸಾರ್ಥಕತೆಯಾ? ಪುಳಕವಾ? ಅಸಹಾಯಕತೆಯಾ? ನವನೀತನಲ್ಲಿ ಉತ್ತರವಿರಲಿಲ್ಲ. ಅವನ್ಯಾಕೆ ಇಲ್ಲಿ ಬಂದ? ಅವನ ಸೌಮ್ಯ ನಗುವಿನ ಹಿಂದಿನ ಕತೆ ಏನು? ಅದಕ್ಕೂ ಉತ್ತರ ಸಿಗಲಿಲ್ಲ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಕಸೂತಿ
ಮೇಡಮ್ ಹೇಳಿದಾಗ ರಾಶಿ ರಾಶಿ ತಾವರೆ ತಂದವನು, ಪಾತ್ರೆ ತುಂಬಾ ಜೇನು ತಂದವನು, ಏನೂ ತಾ ಎಂದರೂ ತರುತ್ತಿದ್ದವನು ಈಗ ಹೀಗ್ಯಾಕಾದ? ಪೆದ್ದ ಪೆದ್ದ ಕರೆಸಿಕೊಂಡೇ ಅವನೆಷ್ಟು ನೊಂದಿರಬೇಡ ಅನ್ನಿಸಿತು ನವನೀತನಿಗೆ.
ಅವನ ಬಡತನ ನೀಗಿಸಲು ತನ್ನಿಂದ ಸಾಧ್ಯವಿಲ್ಲ. ಆದ್ರೆ ಅವನಿಗೆನೋ ಇಷ್ಟವಿದೆ ಅಂತನ್ನಿಸುವ ಪ್ಯಾಂಟು ಕೊಳ್ಳಲು ಏನಾದರೂ ಹಣ ಕೊಡುವ ಎಂದು ನಿರ್ಧರಿಸಿ ತನ್ನನ್ನು ಅವನು ಸರಿದು ಹೋದ ಚೆಕ್ ಫೋಸ್ಟ್ ದಾರಿಯಲ್ಲೇ ಬೈಕೇರಿಸಿದ. ಆದರೆ ಎಲ್ಲೂ ಯೋಗೀಶ ಕಾಣಿಸಲಿಲ್ಲ. ಘಾಟಿಯ ಕಟ್ಟೆಗಳಲ್ಲಿ ಗಾಡಿಯ ಹೆಡ್ ಲೈಟ್ ಹೊಡೆದ, ಅಲ್ಲೂ ಯೋಗೀಶನ ಸುಳಿವಿಲ್ಲ. ಸುತ್ತಲೂ ಕತ್ತಲಾವರಿಸಿದ್ದರಿಂದ, ಎಲ್ಲಿ ಹೋದ ಇವನು ಎಂದು ಭಯವೂ ಆಗತೊಡಗಿತು ನವನೀತನಿಗೆ. ಹೆಡ್ ಲೈಟ್ ಅನ್ನು ಎಲ್ಲೆಡೆ ಹೊರಳಿಸಿದ. ಇಲ್ಲ, ಎಲ್ಲೂ ಸುಳಿವಿಲ್ಲ. ಬೈಕ್ ನಿಲ್ಲಿಸಿ ಹೆಡ್ ಲೈಟ್ ಉರಿಸಿ ರಸ್ತೆ ಸುತ್ತಲೆಲ್ಲಾ ನೋಡಿದ, ಅಷ್ಟೊತ್ತಿಗೆ ಪಕ್ಕದಲ್ಲಿದ್ದ ತುಸು ಆಳವಾದ ಪ್ರಪಾತದಲ್ಲಿ ಚೀರುತ್ತಿರುವ ಮನುಷ್ಯನ ಧ್ವನಿ ಕೇಳಿ ದಿಗಿಲಾಗಿ ನವನೀತ ಹೌಹಾರಿಹೋದ. ಇದು ಯೋಗೀಶನದ್ದೇ ಧ್ವನಿ ಎನ್ನಿಸಿತು ಒಮ್ಮೆ.
ಮತ್ತೊಮ್ಮೆ ಇಲ್ಲಿಲ್ಲ ಕೆಳಗೆ ಘಾಟಿಯಲ್ಲಿ ಬರುತ್ತಿರುವ ಯಾವುದೋ ಲಾರಿಯ ಡ್ರೈವರ್ ಸೈಡ್ ಕೊಡಲು ಸುಮ್ಮನೇ ಕೂಗಿರಬಹುದು ಎನ್ನಿಸಿತು. ಆದರೆ ಮತ್ತೆ ಚೀರುವಿಕೆ ಕೇಳಿದಾಗ ನಿಜಕ್ಕೂ ಕುಸಿದುಹೋದ. ಆ ಗಾಢ ಕತ್ತಲೆಯ ಪ್ರಪಾತದಲ್ಲಿ ಮಿಣುಕು ಭರವಸೆಯ ಮೊಬೈಲ್ ಟಾರ್ಚ್ ಹಾಕಿ ನೋಡಿದ, ಆ ಬೆಳಕನ್ನು ಕತ್ತಲು ನುಂಗಿ ಮಹಾ ಅಂಧಕಾರ ಕವಿದಂತನ್ನಿಸಿ ನವನೀತ ಬೆಚ್ಚಿದ.
ʼಯೋಗೀಶ ಯೋಗೀಶʼ ಎಂದು ಐದಾರು ಸಲ ಕೂಗಿದ, ಆಗ ನೂರು ಸಲ ಜೀರುಂಡೆ ಕೂಗಿದವು, ನತ್ತಿಂಗ ಹಕ್ಕಿ ʻಕೀಕೀʼ ಎಂದಿತು, ಮಳೆ ಮತ್ತೆ ಜಿಟಪಟ ಎಂದು ಜಿನುಗಲು ತೊಡಗಿದವು. ವಿದ್ಯಾರ್ಥಿಗಳಿಗೆ ಕತೆ ಹೇಳಬೇಕು, ತನ್ನ ಬದುಕಲ್ಲಿ ಹೊಸ ಹೊಸ ಸಂಗತಿಗಳೆಲ್ಲಾ ಘಟಿಸಬೇಕು ಎಂದು ಯಾವಾಗಲೂ ಯೋಚಿಸುತ್ತಿದ್ದವನಿಗೆ ಯೋಗೀಶ ಸಿಕ್ಕಿದ, ಕಾಡಿದ, ಈಗ ಸಿಗು ಅಂದರೂ ಅವನು ಸಿಗುತ್ತಿಲ್ಲ, ಅಯ್ಯೋ ಇದೆಂತ ಆಯ್ತು ಏನು ಮಾಡುವುದು ಈಗ ಎಂದು ಗೊತ್ತಾಗದೇ ನವನೀತ ಚಡಪಡಿಸಿದ. ಭಯಾನಕ ಆಳವಾದ ಆ ಪ್ರಪಾತದಲ್ಲಿ ಕತ್ತಲೆ ಬಿಟ್ಟು ಬೇರೇನೂ ಕಾಣಿಸಲಿಲ್ಲ. ಮಳೆ ಒಂಚೂರು ಜಾಸ್ತಿಯಾಗಿ ತನ್ನ ಕೈಯಲ್ಲಿದ್ದ ಯೊಗೀಶ ಕೊಟ್ಟಿದ್ದ ಚೀಟಿಯಲ್ಲಿ ಬರೆದಿದ್ದ “ಪ್ಯಾಂಟು” ಎನ್ನುವ ಅಕ್ಷರ ಆಗುಂಬೆ ಕಾಡಿನ ಗಾಢಾಂಧಕಾರದಲ್ಲಿ ನವನೀತನ ಕಣ್ಣಿಗೆ ಕಾಣದೇ ಕರಗಿಹೋಗುತ್ತಿತ್ತು. ಬರೀ ಮೌನವಾದ ಸೌಮ್ಯ ನಗುವಿನಲ್ಲೇ, ಮುಗ್ದತೆಯಲ್ಲೇ ಕಾಡಿದ, ತನ್ನ ದೈನಿಕದಲ್ಲಿ ನಿನ್ನೆಯವರೆಗೆ ಇರದೇ ಇದ್ದ, ನೆನಪಿನಲ್ಲಿದ್ದರೂ ಅಪ್ರಸ್ತುತವಾಗಿದ್ದ ಯೋಗೀಶ ಅನ್ನುವ ವ್ಯಕ್ತಿ ಈಗ ನನಗ್ಯಾಕೆ ಪ್ರಸ್ತುತವೆನ್ನಿಸಿ ಕಾಡುತ್ತಿದ್ದಾನೆ ಎಂದು ಗೊತ್ತಾಗದೇ ಕಣ್ಣಂಚಿನಲ್ಲಿ ಮೂಡಿದ್ದ ನೀರನ್ನು ಮಳೆ ನೀರಿನೊಂದಿಗೆ ತೇಲಿಸಿ, ಹುಡುಗನ್ನೊಬ್ಬ ಪ್ರಪಾತಕ್ಕೆ ಬಿದ್ದದ್ದನ್ನು ತಿಳಿಸಲು ಮುಂದಿದ್ದ ಆಗುಂಬೆ ಚೆಕ್ ಪೋಸ್ಟ್ ನತ್ತ ಬೈಕೇರಿಸಿದ. ಆಗ ಇನ್ನೊಂದು ಚೀರುವಿಕೆ ಕೇಳಿ ಕಾಡು ಮತ್ತೂ ಮೌನವಾಯ್ತು. ಇಡೀ ಆಗುಂಬೆಯ ಹೇರ್ ಪಿನ್ ತಿರುವುಗಳು ಗವ್ವನ್ನುವ ಕಾರ್ಗತ್ತಲ ಪ್ಯಾಂಟ್ ನ್ನು ತೊಟ್ಟುಕೊಂಡು “ಯೋಗೀಶ” ಎಂದು ಕಟ್ಟಕಡೆಯ ಬಾರಿ ಕರೆದಂತೆ ಕೇಳಿಸಿ ಹಗುರನೇ ನಿದ್ದೆಹೋದವು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಉರಿವ ರಾತ್ರಿ ಸುರಿದ ಮಳೆ