ಚಿತ್ರ: ಕೆಜಿಎಫ್ ಚಾಪ್ಟರ್-2.
ನಿರ್ದೇಶಕ: ಪ್ರಶಾಂತ್ ನೀಲ್.
ನಿರ್ಮಾಪಕ: ವಿಜಯ್ ಕಿರಗಂದೂರ್
ಬ್ಯಾನರ್: ಹೊಂಬಾಳೆ ಫಿಲ್ಮ್ಸ್
ಸಂಗೀತ: ರವಿ ಬಸ್ರೂರ್
ತಾರಾಗಣ: ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್ತ್, ರವೀನಾ ಟಂಡನ್, ಅಚ್ಯುತ್ ಕುಮಾರ್, ಪ್ರಕಾಶ್ ರಾಜ್. ಮಾಳವಿಕಾ ಅವಿನಾಶ್,ಅರ್ಚನಾ ಜೋಯ್ಸ್, ಅಯ್ಯಪ್ಪ ಪಿ ಶರ್ಮಾ, ಹರೀಶ್ ರೈ, ದಿನೇಶ್ ಮಂಗಳೂರು.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಅತ್ಯತ್ತಮ ಸಿನಿಮಾ ಎಂದು ಹೆಸರು ಮಾಡಿತ್ತು. ಚಿತ್ರದ ಯಶಸ್ಸಿಗೆ ಅವರು ಆಯ್ದುಕೊಂಡ ಕಥೆ, ತಾರಾಗಣ, ಪ್ರಬಲವಾದ ಚಿತ್ರತಂಡ ಪ್ರಮುಖ ಪಾತ್ರವಹಿಸಿತ್ತು. ಕೆಜಿಎಫ್ 1 ಮುಗಿಯುವ ಹೊತ್ತಿಗೆ ಎರಡನೇ ಭಾಗದಲ್ಲಿ ಏನು ಹೊಸತನ್ನು ಕಾಣಬಹುದು ಎಂಬ ಕುತೂಹಲ ಕೆರಳಿಸಿತ್ತು. ರಾಕಿ ಭಾಯ್ ಗರುಡನನ್ನು ಕೊಂದ ಮೇಲೆ ಕೆಜಿಎಫ್‌ನ ಸುಲ್ತಾನನಾಗಿ ಪಟ್ಟಕ್ಕೆ ಏರ್ತಾರಾ? ರೀನಾ ಮತ್ತು ರಾಕಿ ಭಾಯ್ ಒಂದಾಗ್ತಾರಾ? ರಮಿಕಾ ಸೇನ್ ರಾಕಿ ವಿರುದ್ಧ ಏನು ಕ್ರಮ ಕೈಗೊಳ್ತಾರೆ? ಗುರುಪಾಂಡ್ಯನ್ ಸೇರಿದಂತೆ ಉಳಿದವರ ಕಥೆ ಏನಾಗುತ್ತೆ? ಇನಾಯತ್ ಖಲೀಲ್ ಹಡಗುಗಳು ಭಾರತದ ಪೋರ್ಟ್ ಪ್ರವೇಶ ಪಡೆಯುತ್ತಾ? ಅಧೀರ ಕೆಜಿಎಫ್‌ಗೆ ಆಗಮಿಸಿದರೆ ರಾಕಿ ಏನು ಮಾಡಬಹುದು?
ಕೆಜಿಎಫ್ 1 ಹೀಗೆ ಹಲವಾರು ಪ್ರಶ್ನೆಗಳನ್ನು ಪ್ರೇಕ್ಷಕರ ಮನದಲ್ಲಿ ಹುಟ್ಟು ಹಾಕಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಇದಕ್ಕೆ ಉತ್ತರವಾಗಿ ಎರಡನೇ ಭಾಗ ಬರಲಿದೆ ಎಂದು ಭರವಸೆ ನೀಡಿದ್ದರು. ರಾಕಿ ತನ್ನ ತಾಯಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವದರಲ್ಲಿ ಹೇಗೆ ಯಶಸ್ವಿಯಾದರೋ ಅದೇ ರೀತಿ ಪ್ರಶಾಂತ್ ಕೂಡ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಕೆಜಿಎಫ್ ಮೊದಲ ಭಾಗಕ್ಕೆ ಸೂಕ್ತ ಅಂತ್ಯವನ್ನು ಕೆಜಿಎಫ್ ಚಾಪ್ಟರ್ 2ನಲ್ಲಿ ನೀಡಲಾಗಿದೆ ಎಂದು ಹೇಳಬಹುದು.
ಏನು ಕಥೆ?
ಕೆಜಿಎಫ್ 2 ಮೊದಲ ಭಾಗದ ಮುಂದುವರೆದ ಕಥೆಯಾಗಿದೆ. ಮೊದಲ ಭಾಗದ ಕಥೆಗೆ ಸೂಕ್ತವಾದ ಅಂತ್ಯವನ್ನು ಎರಡನೇ ಭಾಗದಲ್ಲಿ ನೀಡಲಾಗಿದೆ ಎಂದು ಹೇಳಬಹುದು. ಈಗಾಗಲೇ ಟ್ರೇಲರ್‌ನಲ್ಲಿ ತೋರಿಸಿದ ಹಾಗೆ ರಾಕಿ ತನ್ನ ತಾಯಿಗೆ ರಾಜನಂತೆ ಬಾಳುವ ಮಾತು ಕೊಟ್ಟಿದ್ದ. ಆ ಮಾತನ್ನು ಉಳಿಸಿಕೊಳ್ಳಲು ಕೆಜಿಎಫ್ ಮೇಲೆ ರಾಜ್ಯಭಾರ ಮಾಡಬೇಕೆಂಬುದು ರಾಕಿ ಆಸೆ. ಕೆಜಿಎಫ್ ತನ್ನ ಹಿಡಿತಕ್ಕೆ ಪಡೆಯುವ ಮೂಲಕ ಇಡೀ ದೇಶದ ಮೇಲೆ ಹುಕೂಮತ್ ನಡೆಸಬೇಕು ಎಂಬ ರಾಕಿಯ ಹಂಬಲ. ಯಾರಿಗೂ ಭಯಪಡದೇ ಒಂಟಿಯಾಗಿ ಎಲ್ಲರನ್ನೂ ಎದುರಿಸಿ ತನ್ನ ಸಾಮ್ಯಜ್ಯವನ್ನು ಕಟ್ಟುವುದರಲ್ಲಿ ರಾಕಿ ಸಫಲತೆಯನ್ನು ಕಾಣ್ತಾರೆ. ಆದರೆ ಕೆಜಿಎಫ್ ಜಾಗದ ಮೇಲೆ ಉಳಿದವರೂ ಕಣ್ಣು ಹಾಕಿರುತ್ತಾರೆ ಎಂದು ಈಗಾಗಲೇ ಮೊದಲ ಭಾಗದಲ್ಲಿ ತಿಳಿಸಿದ್ದಾರೆ. ಆದರೆ, ಕೆಜಿಎಫ್ ವಶಪಡಿಸಿಕೊಳ್ಳುವ ಸಮರದಲ್ಲಿ ಯಾರು ಯಾರೊಂದಿಗೆ ಕೈ ಮಿಲಾಯಿಸಿ, ಯಾರ ವಿರುದ್ಧ ಯುದ್ಧ ಮಾಡಲು ಸಿದ್ಧರಾಗುತ್ತಾರೆ ಎಂಬುದೇ ಸ್ವಾರಸ್ಯ. ಒಂದು ಜಾಗಕ್ಕೆ, ಒಂದು ಪಟ್ಟಕ್ಕಾಗಿ ನಡೆಯುವ ರಾಜಕೀಯ ತಂತ್ರಗಳು, ಕೊಲೆಗಳು, ರಕ್ತಪಾತಗಳು, ಎಲ್ಲವೂ ಸೇರಿ ಕೊನೆಗೆ ಕೆಜಿಎಫ್‌ನಲ್ಲಿ ಏನಾಗುತ್ತದೆ? ಎಂಬುದೇ ಈ ಚಿತ್ರದ ಕಥೆ.
ಚಿತ್ರದಲ್ಲಿ ಆಕರ್ಷಿಸುವ ಅಂಶಗಳು:
- ಈವರೆಗೆ ಹಾಲಿವುಡ್‌ನಲ್ಲಿ ಡಾರ್ಕ್ ಥೀಮ್ ಇಟ್ಟುಕೊಂಡು ಅನೇಕ ಸಿನಿಮಾಗಳನ್ನು ಮಾಡಲಾಗಿದೆ. ಆದರೆ, ಕನ್ನಡದಲ್ಲಿ ಈ ರೀತಿಯ ಒಂದು ಪ್ರಯತ್ನ ಅಪರೂಪ. ಡಾರ್ಕ್ ಶೇಡ್ ಇಟ್ಟು ಚಿತ್ರವನ್ನು ನಿರ್ದೇಶಿಸಿ ಪ್ರೇಕ್ಷಕರ ಮನಮುಟ್ಟುವುದು ಸುಲಭದ ಕಾರ್ಯವಲ್ಲ ಆದರೆ ಕೆಜಿಎಫ್ ಇದರಲ್ಲಿ ಗೆದ್ದಿದೆ ಎಂದು ಹೇಳಬಹುದು.
- ಅಬ್ಬರಿಸುವ ರೌಡಿಗಳ ನಡುವೆ ತಾಯಿಯ ಸೆಂಟಿಮೆಂಟ್ ನೀಡಿದ್ದು ಚಿತ್ರವನ್ನು ಮತ್ತೊಂದು ಮಟ್ಟಕ್ಕೆ ಕರೆದೊಯ್ಯುತ್ತದೆ. ಹೌದು ಅನ್ನಿಸುವ ಕಥೆ, ಚಿತ್ರಕಥೆ ಚಿತ್ರದ ಗೆಲುವು.
- ರೌಡಿಸಂ ಕಥೆಯನ್ನು ಆಧರಿಸಿ ಹಲವಾರು ಚಿತ್ರಗಳು ಬಂದಿದೆ. ಕೆಜಿಎಫ್ ಇದೇ ಕೆಟಗರಿಗೆ ಸೇರಿಯೂ ಸ್ವಲ್ಪ ವಿಭಿನ್ನವಾಗಿ ನಿಲ್ಲುತ್ತದೆ. ಒಂದು ಚೂರು ಕ್ಲಾಸ್, ಸ್ವಲ್ಪ ಮಾಸ್, ಸ್ವಲ್ಪ ಕಲ್ಟ್ ಸಿನಿಮಾದ ವಿಭಾಗಕ್ಕೆ ಸೇರುತ್ತದೆ. ಇದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಅದ್ಭುತ ಪ್ರಯತ್ನ. ಚಿತ್ರದ ಸೆಟ್, ಹಾಗೂ ಮೇಕಿಂಗ್ ಗಮನಸೆಳೆಯುತ್ತದೆ.
- ತೆರೆಯ ಹಿಂದೆ ಕೆಲಸ ಮಾಡಿದ ತಂಡದ ಪರಿಶ್ರಮ ತೆರೆಯ ಮೇಲೆ ಕಾಣುತ್ತದೆ. ಛಾಯಗ್ರಾಹಕ ಭುವನ್ ಗೌಡ ತಮ್ಮ ಕೆಜಿಎಫ್ 1 ಚಿತ್ರದಲ್ಲೇ ಸಾಮರ್ಥ್ಯವನ್ನು ತೋರಿದ್ದರು. ಅವರು ಅದ್ಭುತವಾಗಿ ಕ್ಯಾಮೆರಾ ಹಿಂದೆ ಕೆಲಸ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
- ಚಿತ್ರದಲ್ಲಿ ಹೊಸತನಬೇಕು ಎಂಬ ನಿಟ್ಟಿನಲ್ಲಿ ಹೊಸ ಟಕ್ನೀಶಿಯನ್ ಹಾಗೂ ಎಡಿಟರ್‌ಗಳಿಗೆ ಅವಕಾಶ ನೀಡಲಾಗಿದೆ. ಉದಾಹರಣೆಗೆ ಎಡಿಟಿಂಗ್ ಮಾಡಲು 18 ವರ್ಷದ ಯುವಕರೊಬ್ಬರಿಗೆ ಅವಕಾಶ ನೀಡಿದ್ದು ಅದ್ಭುತ ಕಾರ್ಯವನ್ನು ಮಾಡಿದ್ದಾರೆ.
- ರವಿ ಬಸ್ರೂರ್ ನೀಡಿದ ಹಿನ್ನಲೆ ಸಂಗೀತ ಚಿತ್ರದ ದೃಶ್ಯಗಳಿಗೆ ಪೂರಕವಾಗಿದೆ. ಭಾವಕ್ಕೆ ತಕ್ಕ ಸಂಗೀತ ನಿಡಿದ್ದಾರೆ.
- ನಿರ್ದೇಶಕ ಪ್ರಶಾಂತ್ ಬರೆದ ಸಂಭಾಷಣೆ ಚಿತ್ರದ ಶ್ರೀಮಂತಿಕೆ. ಪ್ರಶಾಂತ್ ಅವರ ಸಂಭಾಷಣೆ ಬರೆಯುವ ಶೈಲಿ ವಿಭಿನ್ನ. ದೀರ್ಘ ಸಂಭಾಷಣೆಯನ್ನು ಬರೆಯುವ ಹಾದಿಯನ್ನು ಆರಿಸಿಕೊಳ್ಳದೆ ವನ್ ಲೈನರ್ಸ್ ಮಾತುಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಈ ರೀತಿಯ ಪಂಚಿಗ್ ಲೈನ್ಸ್‌ಗಳು ಪ್ರೇಕ್ಷಕರ ಮನದಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಈ ಹಿಂದೆ ಕೂಡ ಉಗ್ರಂ ಹಾಗೂ ಕೆಜಿಎಫ್ 1 ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗ್‌ಗಳಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಹೇಗಿದೆ ಅಭಿನಯ?
- ರಾಕಿಂಗ್ ಸ್ಟಾರ್ ಯಶ್ ರಾಕಿ ಪಾತ್ರಕ್ಕೆ ಹೊಂದುತ್ತಾರೆ. ಅವರ ಮಾತುಗಳಲ್ಲಿ ಒಂದು ಹಾಸ್ಯಮಯವಾದ ಧಾಟಿ ಅಥವಾ ವ್ಯಂಗ್ಯವಾಗಿ ಟೀಕಿಸಿ ಎದುರಾಳಿಯನ್ನು ಕೆಣಕುವ ಧಾಟಿ ಸಹಜವಾಗಿಯೇ ಇದೆ. ಇದು ಸಣ್ಣ ಹಳ್ಳಿಯಿಂದ ಬಂದು, ಏನೂ ಅರಿಯದ ಮಾಸ್ ಲೀಡರ್ ಆಗಿ ಬೆಳೆದು ನಿಂತ ರಾಕಿ ಪಾತ್ರಕ್ಕೆ ಹೊಂದುತ್ತದೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿ ಕೂಡ ರೀನಾ ಪಾತ್ರಕ್ಕೆ ಒಪ್ಪುತ್ತಾರೆ. ಕೆಜಿಎಫ್ 1 ಚಿತ್ರದಲ್ಲಿ ಉತ್ತಮ ಅಭಿನಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ಕೂಡ ಅವರದ್ದು ಪ್ರಬುದ್ಧ ನಟನೆ.
- ಅಧೀರ ಹಾಗೂ ರಮಿಕಾ ಸೇನ್ ಗಮನ ಸೆಳೆಯುವ ಪ್ರಮುಖ ಪಾತ್ರಗಳು. ಅಧೀರನ ಪಾತ್ರದಲ್ಲಿ ಸಂಜಯ್ ದತ್ತ್ ಹಾಗೂ ರಮಿಕಾ ಸೇನ್ ಪಾತ್ರದಲ್ಲಿ ರವಿನಾ ಟಂಡನ್ ಇಬ್ಬರೂ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಅಭಿನಯಿಸಿದ್ದಾರೆ. ನಟಿ ರವಿನಾ ಟಂಡನ್ ಕೆಲವು ವರ್ಷಗಳ ಹಿಂದೆ ಬಾಲಿವುಡ್ನ ಉತ್ತಮ ನಟಿಯರಲ್ಲಿ ಒಬ್ಬರು ಆದರೆ ಇತ್ತೀಚೆಗೆ ಅವರು ಯಾವುದೇ ಸಿನಿಮಾಗಳನ್ನು ಮಾಡಿದ್ದು ಕಂಡುಬಂದಿಲ್ಲ. ಆದರೆ ಕೆಜಿಎಫ್ 2ರಲ್ಲಿ ಅವರ ಅಭಿನಯ ಶ್ಲಾಘನೀಯ.
- ನಟ ಸಂಜಯ್ ದತ್ತ್ ಮಾನ್‌ಸ್ಟರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ಬಾಲಿವುಡ್ನ ಅಗ್ನಿಪಥ್ ಸಿನಿಮಾದಲ್ಲಿ ನಿರ್ದಾಕ್ಷಿಣ್ಯವಾಗಿ ಜನರನ್ನು ಹತ್ಯೆ ಮಾಡುವ ರಾಕ್ಷಸನಂತಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದರು ಕೂಡ. ಅಧೀರ ಕೂಡ ಅದೇ ರೀತಿಯ ಒಂದು ಪಾತ್ರ. ಆ ಪಾತ್ರಕ್ಕೆ ಅವಶ್ಯಕತೆಯಿರುವ ಗತ್ತು, ಗಾಂಭೀರ್ಯತೆಯನ್ನು ಅಚ್ಚುಕಟ್ಟಾಗಿ ಅಳವಡಿಸಿಕೊಂಡಿದ್ದಾರೆ.
- ಆನಂದ್ ಇಂಗಳಗಿ ಅವರ ಮಗನಾಗಿ ರಾಕಿಯ ಕಥೆಯನ್ನು ಹೇಳುವ ವಿಜಯೇಂದ್ರ ಇಂಗಳಗಿ ಪಾತ್ರವನ್ನು ಪ್ರಕಾಶ್ ರೈ ನಿರ್ವಹಿಸಿದ್ದಾರೆ. ಅವರ ವಿಶಿಷ್ಟ ಡೈಲಾಗ್ ಹೇಳುವ ರೀತಿಯಿಂದ ಆಕರ್ಷಿಸಿದ್ದಾರೆ.
- ಇನ್ನು ಉಳಿದಂತೆ ಎಲ್ಲಾ ಸಹಾಯಕ ಪಾತ್ರಗಳನ್ನು ನಿರ್ವಹಿಸಿದ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಬಹುದು.
ಉತ್ತಮಗೊಳಿಸಬಹುದಾಗಿದ್ದ ಅಂಶಗಳು:
- ಚಿತ್ರದಲ್ಲಿ ಬರುವ ಹಾಡುಗಳು ವಿಶೇಷ ಅಂತನಿಸುವುದಿಲ್ಲ. ಕೆಜಿಎಫ್ 1ರ ಚಿತ್ರದ ಹಾಡುಗಳಿಗೆ ಹೋಲುತ್ತಿರುವದಕ್ಕೆ ಏಕತಾನತೆಯ ರೂಪ ಪಡೆದುಕೊಂಡಂತಿದೆ.
- ಪ್ರಕಾಶ್ ರೈ ಉತ್ತಮವಾಗಿ ಅಭಿನಯಿಸಿದ್ದರೂ ಪ್ರೇಕ್ಷಕರು ರಾಕಿ ಕಥೆಯನ್ನು ಆನಂದ್ ಇಂಗಳಗಿ ಬಾಯಲ್ಲಿ ಕೇಳಿದರೆ ಹೆಚ್ಚು ಖುಷಿಯಾಗುತ್ತಿತ್ತು. ಅನಂತ್‌ನಾಗ್ ಅವರನ್ನು ತೆರಯ ಮೇಲೆ ಕಾಣದೇ ನಿರಾಸೆ ಉಂಟುಮಾಡುತ್ತದೆ.
ಕೊನೆಯದಾಗಿ:
ರಾಕಿ ಪಾತ್ರಕ್ಕೆ ಬಿಲ್ಡಪ್ ಕೊಟ್ಟಿದ್ದು ಹೆಚ್ಚಾಯಿತು ಅಂತ ಅನ್ನಿಸಬಹುದು. ಆದರೆ, ಒಬ್ಬ ಸುಲ್ತಾನಂತೆ ರಾಜ್ಯಭಾರ ಮಾಡುವ ಗ್ಯಾಂಗ್‌ಸ್ಟರ್‌ಗೆ ಅಷ್ಟು ಬಿಲ್ಡಪ್ ಕೊಡುವ ವಿನಾಯಿತಿ ಇರುತ್ತದೆ. ಅದು ಕಥೆಗೆ ಎಲ್ಲೂ ಅಡಚಣೆ ಉಂಟುಮಾಡುವುದಿಲ್ಲ. ಕಾಲಕಾಲಕ್ಕೆ ಸರಿಯಾಗಿ ತಿರುವುಗಳನ್ನು ನೀಡಲಾಗಿದ್ದು, ಎಲ್ಲೂ ಬೋರ್ ಹೊಡೆಸದ ಅದ್ಧೂರಿ ಸಿನಿಮಾ ಎಂದು ಹೇಳಬಹುದು.
ಈ ಚಿತ್ರದ ಅಂತ್ಯದಲ್ಲಿ ಏನಾಗುತ್ತದೆ ಎಂದು ಪ್ರೇಕ್ಷಕರ ಊಹೆಗೆ ಬಿಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಕೆಜಿಎಫ್ ಚಾಪ್ಟರ್ 3 ಬರಬಹುದಾ? ಎಂಬ ಕುತೂಹಲವನ್ನು ಈ ಪ್ರೇಕ್ಷಕರ ಮನದಲ್ಲಿ ಹುಟ್ಟುಹಾಕಿದೆ.