ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy murder case) ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆ್ಯಂಡ್ ಗ್ಯಾಂಗ್‌ಗೆ (Actor Darshan) ಸೆ. 30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ. ಮಂಗಳವಾರ ತನಿಖಾಧಿಕಾರಿ ಚಂದನ್ ಅವರು ನ್ಯಾಯಾಲಯಕ್ಕೆ ಹಾರ್ಡ್ ಡಿಸ್ಕ್‌ಗಳಲ್ಲಿ ಟೆಕ್ನಿಕಲ್ ಎವಿಡೇನ್ಸ್ ಹಾಗೂ 17 ಪ್ರತಿಗಳನ್ನು ಸಲ್ಲಿಕೆ ಮಾಡಿದರು.
ಈ ವೇಳೆ ಸಿಎಫ್‌ಎಸ್‌ಎಲ್ ವರದಿಯನ್ನು ತೆರೆಯಲು ವಕೀಲರು ಅನುಮತಿ ಕೋರಿದರು. ಸಿಎಸ್‌ಎಫ್‌ಎಲ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿದ್ದೇವೆ. ನೀವು ಅನುಮತಿ ಕೊಟ್ಟರೆ ಪ್ರಕರಣದ 17 ಆರೋಪಿಗಳಿಗೂ ಸೀಲ್ ಓಪನ್ ಮಾಡಿ ಜೆರಾಕ್ಸ್ ಮಾಡಿ ಕಾಪಿ ಕೊಡುತ್ತೇವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದರು. ಈ ವೇಳೆ ಮುಂದಿನ ವಿಚಾರಣೆಯ ಒಳಗೆ ಸಿಎಸ್‌ಎಫ್‌ಎಲ್ ಜೆರಾಕ್ಸ್ ಪ್ರತಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು.
ವಿನಯ್ ಮೊಬೈಲ್ ಮತ್ತೊಮ್ಮೆ ಎಫ್‌ಎಸ್‌ಎಲ್‌ಗೆ ರವಾನೆ
ಬಳಿಕ A10 ಆರೋಪಿ ವಿನಯ್ ಅವರ ಮೊಬೈಲ್ ಅನ್ನು ಮತ್ತೊಮ್ಮೆ ಎಫ್‌ಎಸ್‌ಎಲ್‌ಗೆ ಕಳುಹಿಸಲು ಕೋರ್ಟ್‌ಗೆ ತನಿಖಾಧಿಕಾರಿ ಮನವಿ ಮಾಡಿದರು. ಮೊಬೈಲ್‌ನಲ್ಲಿ ಇನ್ನು ಕೆಲ ಸಾಕ್ಷ್ಯಗಳ ಸಂಗ್ರಹ ಆಗಬೇಕಿದೆ ಎಂದಾಗ ನ್ಯಾಯಾಧೀಶರು ಮನವಿಗೆ ಸಮ್ಮತಿಸಿದರು.
ನಟ ದರ್ಶನ್‌ಗೆ ಬೆನ್ನು ನೋವು
ನಟ ದರ್ಶನ್‌ಗೆ ತುಂಬಾ ಬೆನ್ನು ನೋವು ಇದೆ. ನೆಲದ ಮೇಲೆ ಕೂರಲು ಆಗುತ್ತಿಲ್ಲ. ಚೇರ್ ಕೊಡುವಂತೆ ಕೇಳಿದ್ದರೂ ಚೇರ್ ಕೊಟ್ಟಿಲ್ಲ. ದಯವಿಟ್ಟು ಪ್ಲ್ಯಾಸ್ಟಿಕ್ ಚೇರ್ ವ್ಯವಸ್ಥೆ ಮಾಡಿಕೊಡಿ ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು. ಈ ಸಂಬಂಧ ಜೈಲಾಧಿಕಾರಿಗಳ ಬಳಿಯೇ ಮನವಿ ಮಾಡಿ ಎಂದು ನ್ಯಾಯಾಧೀಶರು ತಿಳಿಸಿದರು. ಜೈಲಾಧಿಕಾರಿಗಳಿಗೆ ಮನವಿ ಮಾಡಿದರೂ ಅವರು ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದು ದರ್ಶನ್ ಪರ ವಕೀಲರು ಉತ್ತರಿಸಿದಾಗ, ಜೈಲಿನ ಮ್ಯಾನುವಲ್ ಪ್ರಕಾರ ಕೊಡುತ್ತಾರೆ ಬಿಡಿ ಎಂದು ನ್ಯಾಯಾಧೀಶರು ತಿಳಿಸಿದರು.
ಪವಿತ್ರಗೌಡ ಪರ ವಕೀಲರು ಕುಟುಂಬ ಸದಸ್ಯರಿಗೆ ಭೇಟಿಯಾಗಲು ಜೈಲಾಧಿಕಾರಿಗಳು ಬಿಡುತ್ತಿಲ್ಲ ಎಂದು ಗಮನಕ್ಕೆ ತಂದರು. ಆ ಸಂಬಂಧ ಎಲ್ಲ ಸರಿ ಮಾಡೋಣಾ ಬಿಡಿ, ಊಟ-ತಿಂಡಿಗೆ ಏನಾದರೂ ಸಮಸ್ಯೆ ಇದೇಯಾ ಎಂದು ಕೇಳಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಲಾಯಿತು.
ರೇಣುಕಾಸ್ವಾಮಿ ಕೊಲೆ ಕೇಸ್‌ನ A13 ಆರೋಪಿ ಶಾಸಕ ಮುನಿರತ್ನ ಸಂಬಂಧಿ!
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರ್‌ಆರ್ ನಗರ ಶಾಸಕ ಮುನಿರತ್ನ ಹೆಸರು ಕೇಳಿ ಬಂದಿದೆ. ಮುನಿರತ್ನ ಸಂಬಂಧಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ13ನೇ ಆರೋಪಿ ಆಗಿದ್ದಾನೆ. ದರ್ಶನ್ ಗ್ಯಾಂಗ್‌ನ ಎ13 ಆರೋಪಿ ದೀಪಕ್ ಎಂಬಾತ ಶಾಸಕ ಮುನಿರತ್ನರ ಸಂಬಂಧಿಯಾಗಿದ್ದಾನೆ.
ಆರೋಪಿ ದೀಪಕ್ ರೇಣುಕಾಸ್ವಾಮಿ ಹತ್ಯೆ ಮಾಡಿದ ಬಳಿಕ ವಿಡಿಯೊ ಮಾಡಿ ಅದನ್ನು ಶಾಸಕ ಮುನಿರತ್ನ ಅವರಿಗೆ ಕಳಿಸಿದ್ದ ಎನ್ನಲಾಗಿದೆ. ಅದೇ ವಿಡಿಯೊವನ್ನು ಶಾಸಕರ ಸೂಚನೆ ಮೇರೆಗೆ ಕೇಂದ್ರ ಸಚಿವರಿಗೆ ರವಾನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಳಿಕ ಕೇಂದ್ರ ಸಚಿವರನ್ನ ಬಳಸಿಕೊಂಡು ನಗರ ಪೊಲೀಸ್ ಆಯುಕ್ತರಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎನ್ನಲಾಗಿದೆ. ಶಾಸಕ ಮುನಿರತ್ನ ಅವರ ವೈಯಕ್ತಿಕ ಲಾಭಕ್ಕೆ ದಯಾನಂದ್ ಅವರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ.
ಸಿಬಿಐ ಹೆಸರು ಹೇಳಿ ಅವರಿಂದ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರಂತೆ. ಈ ಮೂಲಕ ನಗರ ಪೊಲೀಸರನ್ನು ಬೆದರಿಸಿದ್ದರಂತೆ. ರೇಣುಕಾಸ್ವಾಮಿ ಹತ್ಯೆಯ ಬಗ್ಗೆ ಗೊತ್ತಿದ್ದರೂ ಕಾನೂನು ಕ್ರಮದ ಬಗ್ಗೆ ಶಾಸಕರು ಒತ್ತಾಯ ಮಾಡಿದ್ದರಂತೆ. ತನ್ನ ವೈಯಕ್ತಿಕ ವಿಚಾರ ಇತ್ಯಾರ್ಥ ಪಡಿಸಿಕೊಳ್ಳಲು ನಗರ ಪೊಲೀಸರಿಗೆ ಬೆದರಿಕೆ ಹಾಗೂ ತನ್ನ ಸಂಬಂಧಿ ದೀಪಕ್‌ನನ್ನು ಪ್ರಕರಣದಿಂದ ಕೈ ಬಿಡಲು 5 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದರಂತೆ. ಈ ಬಗ್ಗೆ ಬಂದ ಮೌಖಿಕ ಮಾಹಿತಿ ಆಧಾರಿತವಾಗಿ ದೂರು ದಾಖಲಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಕೈವಾಡದ ಬಗ್ಗೆ ತನಿಖೆ ನಡೆಸುವಂತೆ ವಕೀಲ ಜಗದೀಶ್ ಅವರಿಂದ ನಗರ ಪೊಲೀಸ್ ಆಯುಕ್ತರಿಂದ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ