Site icon Vistara News

Actor Darshan : ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು; ಸೆರೆವಾಸದಲ್ಲಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ಗೆ ಸಿಗುತ್ತಾ ಬೇಲ್‌!

actor darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Actor Darshan) ಜೈಲುಪಾಲಾಗಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ನ ನ್ಯಾಯಾಂಗ ಬಂಧನ ಅವಧಿ ಸೆ.9ಕ್ಕೆ ಮುಕ್ತಾಯವಾಗಲಿದೆ. ಸೋಮವಾರ 24ನೇ ಎಸಿಎಂಎ ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಜೈಲಿನಿಂದ ಎಲ್ಲ ಆರೋಪಿಗಳು ಹಾಜರಾಗಲಿದ್ದಾರೆ.

ಸೋಮವಾರ ಎಲ್ಲ 16 ಆರೋಪಿಗಳ ಕೈಗೆ ಚಾರ್ಜ್ ಶೀಟ್ ಸೇರಲಿದ್ದು, ಚಾರ್ಜ್ ಶೀಟ್ ಸಿಗುತ್ತಿದ್ದಂತೆ ಕೆಲವು ಆರೋಪಿಗಳಿಂದ ಜಾಮೀನಿಗೆ ಅರ್ಜಿ ಸಾಧ್ಯತೆ ಇದೆ. ಮುಖ್ಯವಾಗಿ ಎ2 ಆರೋಪಿ ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಚಾರ್ಜ್ ಶೀಟ್ ಸಿಕ್ಕ ನಂತರ ಸೆಷನ್ಸ್ ಕೋರ್ಟ್‌ನಲ್ಲಿ ಬಹುತೇಕ ನಾಳೆಯೇ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.

ಜೈಲುಪಾಲಾಗಿ ಇಂದಿಗೆ ಮೂರು ತಿಂಗಳು

ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನ್ಯಾಪ್‌ ಮತ್ತು ಕೊಲೆ ಆಗಿ ಇಂದಿಗೆ ಬರೋಬ್ಬರಿ ಮೂರು ತಿಂಗಳಾಗಿದೆ. ರಾಜನಂತೆ ಬಂಗಲೆಯಲ್ಲಿದ್ದ ನಟ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಏನೆಲ್ಲ ಆಯಿತು ಎಂಬ ಮಾಹಿತಿ ಇಲ್ಲಿದೆ.

-ಜೂನ್ 8ರ ಬೆಳಗ್ಗೆ 11 ಗಂಟೆ ಸುಮಾರಿಗೆ ಡಿ ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದರು.

-ಆ ದಿನ ಮಧ್ಯಾಹ್ನ ಪಟ್ಟಣಗೇರೆ ಶೆಡ್‌ನಲ್ಲಿ ರೇಣಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಕರೆಂಟ್ ಶಾಕ್ ನೀಡಿ ಬರ್ಬರವಾಗಿ ಕೊಲೆ ಮಾಡಿದ್ದರು.

-ಜೂ.8ರ ಸಂಜೆ 6 ಗಂಟೆಗೆ ರೇಣುಕಾಸ್ವಾಮಿ ಮೃತಪಟ್ಟ ವಿಚಾರ ಕೇಳಿ ಶಾಕ್ ಆಗಿದ್ದ ದರ್ಶನ್

-ಶವವನ್ನು ಸಾಗಿಸಲು ಪ್ಲಾನ್ ಮಾಡಿದ್ದ ಗ್ಯಾಂಗ್‌ಗೆ ನಟನ ಆಪ್ತರಾದ ವಿನಯ್ ಮತ್ತು ಪ್ರದೂಷ್‌ಗೆ 30 ಲಕ್ಷ ಹಣ ಸುಪಾರಿ ನೀಡಿದ್ದ.

-ಕೊಲೆ ನಾವೇ ಮಾಡಿರುವುದಾಗಿ ಹೇಳಿ ಸರೆಂಡರ್ ಆಗಲು ನಾಲ್ಕು ಜನರನ್ನು ದರ್ಶನ್ ಆಪ್ತರು ನೇಮಿಸಿದ್ದರು.

-ನಿಖಿಲ್ ನಾಯ್ಕ ,ರಾಘವೇಂದ್ರ, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ಈ ನಾಲ್ವರಿಂದ ಶವ ಸಾಗಿಸಿ, ಸುಮನಹಳ್ಳಿ ರಾಜಕಾಲುವೆ ಬಳಿ ಶವ ಎಸೆದಿದ್ದರು.

-ಜೂನ್ 9 ರಂದು ಬೆಳಗ್ಗೆ 8 ಗಂಟೆಗೆ ಅಪರಿಚಿತ ಶವ ಎಂಬಂತೆ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು.

-ಅಪರಿಚಿತ ಶವವೆಂದು ಪ್ರಕರಣ ದಾಖಲಿಸಿ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ಶುರು ಮಾಡಿದ್ದರು.

-ಜೂನ್ 10 ರಂದು ಪ್ಲ್ಯಾನ್ ಪ್ರಕಾರ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಹಾಜರಾಗಿ ನಾಲ್ವರು ಶರಣಾಗಿದ್ದರು. ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡಿದ್ದರು.

-ಬಳಿಕ ಪೊಲೀಸರು ತಮ್ಮದೆ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಿದಾಗ ಪವಿತ್ರಗೌಡ ಹಾಗೂ ದರ್ಶನ್ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದರು. ಸತ್ಯ ತಿಳಿದು ಪೊಲೀಸರಿಗೆ ಶಾಕ್ ಆಗಿತ್ತು.

-ರೇಣುಕಾಸ್ವಾಮಿ ಕೊಲೆ ಹಿಂದೆ ನಟ ದರ್ಶನ್ ಕೈವಾಡ ಇದೆ ಎಂಬ ಸತ್ಯ ಹೊರಬಂದಿತ್ತು. ನಟ ದರ್ಶನ್ ಜೂನ್ 11ರಂದು ಮೈಸೂರಲ್ಲಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ದರ್ಶನ್ ಹಾಗೂ ಪವಿತ್ರ ಮಾತಾಡಿದ್ದು ಜಸ್ಟ್‌ 16 ಸೆಕೆಂಡ್!

-ಪ್ರಕರಣದಲ್ಲಿ ದರ್ಶನ್ ಭಾಗಿ ಬಗ್ಗೆ ತಿಳಿದ ಪೊಲೀಸರು ಮೈಸೂರಿಗೆ ಪ್ರಯಾಣ ಬೆಳೆಸಿದ್ದರು. ಎಸಿಪಿ ಚಂದನ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆದಿತ್ತು. ನಟ ದರ್ಶನ್‌ನನ್ನು ಜೂನ್ 11ರಂದು ಬಂಧಿಸಿ ಎಸಿಪಿ ಚಂದನ್ ಮತ್ತು ತಂಡ ಬೆಂಗಳೂರಿಗೆ ಕರೆತಂದಿತ್ತು.

-ದರ್ಶನ್ ಬಂಧಿಸಿ ಬೆಳಗ್ಗೆ 11 ಗಂಟೆ ಸುಮಾರಿಗೆ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಗೆ ಕರೆತರಲಾಗಿತ್ತು. ಒಂದೇ ದಿನದಲ್ಲಿ‌ 17 ಜನ ಆರೋಪಿಗಳನ್ನು ಬಂಧಿಸಿ ಕರೆತರಲಾಗಿತ್ತು. ಜೂನ್ 11ರಂದು ಕೋರ್ಟ್‌ಗೆ ಹಾಜರು ಪಡೆಸಿದ ಪೊಲೀಸರು 4 ದಿನ‌ ಕಸ್ಟಡಿಗೆ ಪಡೆದಿದ್ದರು.

-ಜೂನ್ 15ಕ್ಕೆ ಮತ್ತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಪುನಃ 5 ದಿನ ಕಸ್ಟಡಿಗೆ ಪಡೆದಿದ್ದ ತಂಡ ತೀವ್ರ ವಿಚಾರಣೆ ನಡೆಸಿತ್ತು. ಜೂನ್ 20ಕ್ಕೆ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿತ್ತು. ಈ ವೇಳೆ ದರ್ಶನ್, ವಿನಯ್‌, ಪ್ರದೂಷ್, ರಾಘವೇಂದ್ರ ಇವರನ್ನು ಹೆಚ್ಚುವರಿ ತನಿಖೆಗಾಗಿ ಎರಡು ದಿನ ಕಸ್ಟಡಿಗೆ ಪಡೆಯಲಾಗಿತ್ತು.

-ಮತ್ತೆ ಎರಡು ದಿನ ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು ಜೂನ್ 22ರಂದು ಕೋರ್ಟ್‌ಗೆ ಹಾಜರು ಪಡಿಸಿದ್ದರು. ರೇಣುಕಾಸ್ವಾಮಿ ಕೇಸ್‌ನಲ್ಲಿ 14 ದಿನಗಳ‌ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತ್ತು.

-ಈ ಮಧ್ಯೆ ನಟ ದರ್ಶನ್‌ ಮನೆ ಊಟಕ್ಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆಯೆ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಬಯಲಾಗಿತ್ತು. ರಾಜಾತಿಥ್ಯ ಪಡೆಯುತ್ತಿದ್ದ ಆರೋಪದ ಮೇಲೆ ರೇಣುಕಾಸ್ವಾಮಿ ಕೊಲೆ ಆರೋಪಿಗಳು ದಿಕ್ಕಾಪಾಲಾಗಿದ್ದರು.

-ಎಲ್ಲ ಆರೋಪಿಗಳನ್ನು ರಾಜ್ಯದ ವಿವಿಧ ಜೈಲಿಗಳಿಗೆ ಕಾರಗೃಹ ಅಧಿಕಾರಿಗಳು ರವಾನಿಸಿದ್ದರು. ದರ್ಶನ್ ಬಿಸಿಲು ನಾಡು ಬಳ್ಳಾರಿ ಜೈಲಿಗೆ ಶಿಫ್ಟ್ಆದರು. ಇದಾದ ಬಳಿಕ ಸೆಪ್ಟೆಂಬರ್ 3 ರಂದು 24 ಎಸಿಎಂಎಂ ಕೋರ್ಟ್‌ಗೆ ತನಿಖಾಧಿಕಾರಿ ಎಸಿಪಿ ಚಂದನ್ ನೇತೃತ್ವದ ತಂಡ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version