Site icon Vistara News

Explainer: Cannes Film Festival ಮಿಂಚುತ್ತಿರುವ ಭಾರತ, ಏನಿದರ ವಿಶೇಷತೆ?

cannes film festival

ಈ ಬಾರಿಯ Cannes film festival‌ ಬಾಲಿವುಡ್‌ ಫಿಲಂ ಇಂಡಸ್ಟ್ರಿಗೆ ಅನೇಕ ಕಾರಣಗಳಿಗಾಗಿ ವಿಶೇಷ ಎನಿಸಿಕೊಂಡಿದೆ. ಮೊದಲನೆಯದಾಗಿ, ಮಿಂಚುಕಂಗಳ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಈ ವರ್ಷದ ಚಿತ್ರೋತ್ಸವದ ಜ್ಯೂರಿ ಆಗಿರುವುದು. ಎರಡನೆಯದು, ಕ್ಯಾನ್‌ನ ಮಾರ್ಷ್‌ ದು ಫಿಲಂ ಸಂಘಟನೆ ಭಾರತವನ್ನು ʼಕಂಟ್ರಿ ಆಫ್‌ ಆನರ್‌ʼ ಎಂದು ಕರೆದು ಗೌರವಿಸಿರುವುದು.

ಇದಲ್ಲದೇ ಈ ಸಲ ಭಾರತದಿಂದ ಭಾಗವಹಿಸಿರುವ ತಾರೆಗಳ ದೊಡ್ಡ ಪಟ್ಟಿಯೇ ಇದೆ- ಐಶ್ವರ್ಯಾ ರೈ ಬಚ್ಚನ್‌, ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ, ಊರ್ವಶಿ ರೌಟೇಲಾ, ಹೀನಾ ಖಾನ್‌, ಹೆಲ್ಲಿ ಶಾ ಮುಂತಾದವರು ರೆಡ್‌ ಕಾರ್ಪೆಟ್‌ನಲ್ಲಿ ನಡೆದಿದ್ದಾರೆ.

ಕ್ಯಾನ್‌ನಲ್ಲಿ ಭಾರತದ ನಿಯೋಗ: ವಾಣಿ ತ್ರಿಪಾಠಿ, ನವಾಜುದ್ದೀನ್‌ ಸಿದ್ದಿಕಿ, ಪ್ರಸೂನ್‌ ಜೋಶಿ, ಶೇಖರ ಕಪೂರ್‌, ಅನುರಾಗ್‌ ಠಾಕೂರ್‌, ರಿಕಿ ಕೇಜ್‌, ರೆಹಮಾನ್‌, ಮಾಧವನ್‌, ಮೇಮ್‌ ಖಾನ್.‌

ಎ.ಆರ್.ರೆಹಮಾನ್‌, ಆರ್.ಮಾಧವನ್‌, ನವಾಜುದ್ದೀನ್‌ ಸಿದ್ದಿಕಿ, ಕಮಲಹಾಸನ್‌ ಮೊದಲಾದವರು ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ.
ಭಾರತದಿಂದ ಹೋದ ನಿಯೋಗದಲ್ಲಿ ಸಂಗೀತ ನಿರ್ದೇಶಕ ಪ್ರಸೂನ್‌ ಜೋಶಿ, ರಿಕಿ ಕೇಜ್‌, ಮಾಹಿತಿ ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ನಿರ್ಮಾಪಕ ಶೇಖರ್‌ ಕಪೂರ್‌, ವಾಣಿ ತ್ರಿಪಾಠಿ ಮುಂತಾದವರಿದ್ದಾರೆ. ʼಇಂಡಿಯಾ ಪೆವಿಲಿಯನ್‌ʼ ಉದ್ಘಾಟನೆಯ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ʼʼಒಂದಲ್ಲ ಒಂದು ದಿನ ಕ್ಯಾನ್‌ ಫೆಸ್ಟಿವಲ್‌ ಭಾರತದಲ್ಲಿ ನಡೆಯಲಿದೆ ಎಂಬುದರಲ್ಲಿ ನಂಗೆ ಅನುಮಾನವಿಲ್ಲʼʼ ಎಂದಿರುವುದೂ ಸುದ್ದಿಯಾಗಿದೆ.

ಈ ಬಾರಿ ಕ್ಯಾನ್‌ ಫೆಸ್ಟಿವಲ್‌ನ ಇಂಡಿಯಾ ಪೆವಿಲಿಯನ್‌ನಲ್ಲಿ ಆರು ಭಾರತದ ಫಿಲಂಗಳು ಪ್ರದರ್ಶನಗೊಳ್ಳುತ್ತಿವೆ- ಮಾಧವನ್‌ ಅವರ ʼರಾಕೆಟ್ರಿ ದಿ ನಂಬಿ ಎಫೆಕ್ಟ್‌ʼ (ಇಂದು ಕೇರಳದ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್‌ ಜೀವನ ಆಧರಿಸಿದ ಸಿನಿಮಾ), ನಿಖಿಲ್‌ ಮಹಾಜನ್‌ ಅವರ “ಗೋದಾವರಿʼ, ಜಯರಾಜ್‌ ಅವರ ʼಟ್ರೀ ಫುಲ್‌ ಆಫ್‌ ಪ್ಯಾರೆಟ್ಸ್‌ʼ, ಅಚಲ್‌ ಮಿಶ್ರಾ ಅವರ “ಧುಯಿನ್‌ʼ, ವಿಶ್ವಜಿತ್‌ ಬೋರಾ ಅವರ “ಬೂಂಬಾ ರೈಡ್‌ʼ ಮತ್ತು ಶಂಕರ್‌ ಶ್ರೀಕುಮಾರ್‌ ಅವರ “ಆಲ್ಫಾ ಬೀಟಾ ಗಾಮಾʼ. ಇವು ಜ್ಯೂರಿ ವೀಕ್ಷಣೆಯ ಭಾಗವಾಗಿರುವ ಚಿತ್ರಗಳಲ್ಲ.
ಜ್ಯೂರಿ ವೀಕ್ಷಣೆಗೆ ಇರುವ ಭಾರತೀಯ ಡಾಕ್ಯುಮೆಂಟರಿ ಶೌನಕ್‌ ಸೇನ್‌ ಅವರ ʼಆಲ್‌ ದೇಟ್‌ ಬ್ರೀದಸ್.‌ʼ ಇದಲ್ಲದೆ ಎರಡು ಹಳೆಯ ಚಿತ್ರಗಳಾದ ಸತ್ಯಜಿತ್‌ ರೇ ಅವರ ʼಪ್ರತಿಧ್ವನಿʼ ಹಾಗೂ ಜಿ.ಅರವಿಂದನ್‌ ಅವರ ʼಥಂಪ್.‌ʼ

ಕ್ಯಾನ್‌ನಲ್ಲಿ ಮಿಂಚಿದ ತಮನ್ನಾ ಭಾಟಿಯಾ

ಕ್ಯಾನ್‌ಗೇಕೆ ಅಷ್ಟೊಂದು ಜನಪ್ರಿಯತೆ?‌
ಕ್ಯಾನ್‌ ಫಿಲಂ ಫೆಸ್ಟಿವಲ್‌ ಜಗತ್ತಿನ ಪ್ರತಿಷ್ಠಿತ ಚತ್ರೋತ್ಸವಗಳಲ್ಲಿ ಒಂದು. ಇದು ಫ್ರಾನ್ಸ್‌ಗೆ ಸೇರಿದ ಒಂದು ಪರ್ಯಾಯ ದ್ವೀಪಭಾಗ. 1946ರಲ್ಲಿ ʼಪಲಾಯಿಸ್‌ ಡೆಸ್‌ ಫೆಸ್ಟಿವಲ್ಸ್‌ ಎಟ್‌ ಡೆಸ್‌ ಕಾಂಗ್ರೆಸ್‌ʼ ಹೆಸರಿನಿಂದ ಆರಂಭವಾಯಿತು. ಪ್ರತಿವರ್ಷ 20 ಫಿಲಂಗಳು ಸ್ಪರ್ಧೆಯಲ್ಲಿರುತ್ತವೆ. ಇವುಗಳಲ್ಲಿ ಗೆದ್ದ ಒಂದು ಚಿತ್ರ “ಗೋಲ್ಡನ್‌ ಪಾಮ್‌ʼ ಪುರಸ್ಕಾರ ಪಡೆಯುತ್ತದೆ. ಇದಲ್ಲದೇ ಇತರ ಕ್ಯಾಟಗರಿಗಳಲ್ಲಿ ಏಳು ಪ್ರಶಸ್ತಿಗಳೂ ಇವೆ.

ಈ ಹಿಂದೆ ಪಲ್ಪ್‌ ಫಿಕ್ಷನ್, ಟ್ಯಾಕ್ಸಿ ಡ್ರೈವರ್‌, ಅಪೊಕ್ಯಾಲಿಪ್ಸೆ ನೌ- ಇಂಥ ಹಾಲಿವುಡ್‌ ಕ್ಲಾಸಿಕ್‌ ಫಿಲಂಗಳು ಕೂಡ ಕ್ಯಾನ್‌ನಲ್ಲಿ ಮೊದಲು ಪ್ರದರ್ಶನ ಕಂಡಿವೆ. ರಾಬರ್ಟ್‌ ಇ ನೀರೋ, ಮಾರ್ಟಿ ಸ್ಕಾರ್ಸೆಸ್‌, ಕೇಟ್‌ ಬ್ಲಾಂಚೆಟ್‌ ಅಂಥ ಮಹನೀಯರು ಕೂಡ ಇಲ್ಲಿ ಜ್ಯೂರಿಗಳಾಗಿ ಭಾಗವಹಿಸಿದ್ದು ಉಂಟು.

ಕ್ಯಾನ್‌ನ ಜನಪ್ರಿಯತೆ, ಖ್ಯಾತಿ ಇರುವುದು ಅದು ದೊಡ್ಡ ಸ್ಟಾರ್‌ಗಳನ್ನೂ ಒಳ್ಳೆಯ ಚಿತ್ರಗಳ್ನೂ ಒಂದೆಡೆ ಕೂಡಿಸುತ್ತದೆ ಎಂಬ ಕಾರಣಕ್ಕಾಗಿ. ಇಲ್ಲಿನ ರೆಡ್‌ ಕಾರ್ಪೆಟ್‌ ನಡಿಗೆ ಫೇಮಸ್‌. ಎಲ್ಲ ದೇಶಗಳ ತಾರೆಯಲ್ಲಿ ಇಲ್ಲಿ ಕಾಣಿಸಿಕೊಳ್ಳಲು ಹಾತೊರೆಯುತ್ತಾರೆ. ಉತ್ತಮ ಫಿಲಂಗಳ ಪ್ರದರ್ಶನ, ಮೀಟಿಂಗ್‌ಗಳು, ನೆಟ್‌ವರ್ಕಿಂಗ್‌, ಪಾರ್ಟಿಗಳೆಲ್ಲ ಚಿತ್ರೋತ್ಸವದ ಭಾಗ. ಅನೇಕ ದೊಡ್ಡ ಫಿಲಂಗಳು ಇಲ್ಲಿ ಮೊದಲು ಕಾಣಿಸಿಕೊಂಡಿವೆ. ಕ್ವೆಂಟಿನ್‌ ಟರಂಟಿನೊ, ಸ್ಟೀವನ್‌ ಸೊಡರ್‌ಬರ್ಗ್‌ನಂಥ ಫಿಲಂ ಮೇಕರ್‌ಗಳು ಇಲ್ಲಿಂದಲೇ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇಲ್ಲಿ ಕಾಣಿಸಿಕೊಂಡ ಯುವ ಪ್ರತಿಭೆಗಳ ಕೆರಿಯರ್‌ ಉಜ್ವಲವಾಗುವುದಂತೂ ಗ್ಯಾರಂಟಿ ಎನ್ನಬಹುದು. ಹೀಗಾಗಿ ಇದು ಪ್ರತಿಷ್ಠಿತ ಸ್ಥಾನ ಗಳಿಸಿಕೊಂಡಿದೆ.

ಇಲ್ಲಿ ಸಾಮಾನ್ಯ ಪ್ರೇಕ್ಷಕರಿಗೆ ಪ್ರವೇಶವಿಲ್ಲ. ಟೆಕೆಟ್‌ ದೊರೆಯುವುದಿಲ್ಲ. ಇದು ಏನಿದ್ದರೂ ಫಿಲಂ ಇಂಡಸ್ಟ್ರಿಯವರಿಗೆ ಮೀಸಲು. ಕಾಣಿಸಿಕೊಳ್ಳುವವರೂ ಅವರೇ, ನೋಡುವವರೂ ಅವರೇ. ಹೀಗಾಗಿ ಇದೊಂದು ವ್ಯವಹಾರೀ ವರ್ತುಲ ಎಂದೂ ಹೇಳಬಹುದು. ದೊಡ್ಡ ನಿರ್ಮಾಪಕರು, ಇಂಡಸ್ಟ್ರಿಗೆ ಸಂಬಂಧಿಸಿದ ಉದ್ಯಮಿಗಳು ಇಲ್ಲಿ ಠಳಾಯಿಸುತ್ತಿರುತ್ತಾರೆ. ಪಾರ್ಟಿಗಳನ್ನು ಸಂಘಟಿಸುತ್ತಾರೆ. ಉತ್ಸವ ನಡೆಯುವ ಸ್ಥಳದ ಕಡಲ ತೀರದಲ್ಲಿ ಶ್ರೀಮಂತ ಉದ್ಯಮಿಗಳ ಯಾಚ್‌ಗಳು ಲಂಗರು ಹಾಕಿರುತ್ತವೆ.

ಕ್ಯಾನ್‌ನಲ್ಲಿ ಭಾರತ
ಭಾರತದಿಂದ ನಂದಿತಾ ದಾಸ್‌, ಶರ್ಮಿಳಾ ಟಾಗೋರ್‌, ಶೇಖರ ಕಪೂರ್‌, ವಿದ್ಯಾ ಬಾಲನ್‌, ಆರಂಧತಿ ರಾಯ್‌ ಈ ಹಿಂದೆ ಜ್ಯೂರಿಗಳಾಗಿದ್ದರು. ಭಾರತದಿಂದ ಜ್ಯೂರಿ ಆದ ಮೊತ್ತ ಮೊದಲಿಗ (1982) ಎಂದರೆ ಚಿತ್ರ ನಿರ್ದೇಶಕ ಮೃಣಾಲ್‌ ಸೇನ್‌. ಮೊತ್ತ ಮೊದಲ ಭಾರತೀಯ ಮಹಿಳಾ ಜ್ಯೂರಿಯಾಗಿದ್ದವಳು ಐಶ್ವರ್ಯಾ ರೈ- 2003ರಲ್ಲಿ.

1946ರಲ್ಲಿ, ತಾನು ಭಾಗವಹಿಸಿದ ಮೊದಲ ವರ್ಷದಲ್ಲಿಯೇ, ಭಾರತದ ಫಿಲಂ ಕ್ಯಾನ್‌ ಚಿತ್ರೋತ್ಸವದಲ್ಲಿ ಮೊದಲ ಸ್ಥಾನ ಪಡೆಯಿತು. ಚೇತನ ಆನಂದ್‌ ಅವರ “ನೀಚಾ ನಗರ್‌ʼ ಗ್ರ್ಯಾಂಡ್‌ ಪ್ರಿಕ್ಸ್‌ ಅವಾರ್ಡ್‌ ಪಡೆಯಿತು. ಬಿಮಲ್‌ ರಾಯ್‌ ಅವರ ʼದೋ ಬಿಘಾ ಜಮೀನ್‌ʼ 1954ರಲ್ಲಿ, ಸತ್ಯಜಿತ್‌ ರೇ ಅವರ ʼಪಥೇರ್‌ ಪಾಂಚಾಲಿʼ 1956ರಲ್ಲಿ ಪ್ರಶಸ್ತಿ ಗಳಿಸಿಕೊಂಡವು.

ಬಾಲಿವುಡ್‌ ಫಿಲಂ ಕ್ಯಾನ್‌ನಲ್ಲಿ ಕಾಣಿಸಿಕೊಂಡದ್ದೇ 2002ರಲ್ಲಿ- ಸಂಜಯ್‌ ಲೀಲಾ ಬನ್ಸಾಲಿ ಅವರ ʼದೇವದಾಸ್‌ʼ. 2013ರಲ್ಲಿ ಅಮಿತಾಭ್‌ ಬಚ್ಚನ್‌ ಅವರಿಗೆ ಕ್ಯಾನ್‌ ಚಿತ್ರೋತ್ಸವ ಉದ್ಘಾಟನೆಗೆ ಸಿಕ್ಕ ಗೌರವ, ಇದುವರೆಗಿನ ಮಹೋನ್ನತ ಮನ್ನಣೆ. ಅದೇ ವರ್ಷ ಅವರು ʼದಿ ಗ್ರೇಟ್‌ ಗ್ಯಾಟ್ಸ್‌ಬಿʼ ಇಂಗ್ಲಿಷ್‌ ಫಿಲಂನಲ್ಲಿ ಕ್ಯಾಮಿಯೊ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಕ್ಯಾನ್‌ನಲ್ಲಿ ಪ್ರಶಸ್ತಿ ಗಳಿಸಿದ ಕೊಟ್ಟಕೊನೆಯ ಭಾರತೀಯ ಚಿತ್ರ ಎಂದರೆ ನೀರಜ್‌ ಗೇವಾನ್‌ ಅವರ ʼಮಸಾನ್ʼ. 2015ರಲ್ಲಿ ಇದು ಪ್ರಾಮಿಸಿಂಗ್‌ ಫ್ಯೂಚರ್‌ ಗೌರವ ಗಳಿಸಿತ್ತು.

ಇದನ್ನೂ ಓದಿ: ಆರ್‌ಆರ್‌ಆರ್‌ ನಂತರ ಈಗ NTR 30: ಬ್ಲ್ಯಾಕ್‌ ಷೇಡ್‌ನಲ್ಲಿ ಮತ್ತೊಂದು ಸಿನಿಮಾ?

ಬೂ ಮತ್ತು‌ ಹೈ ಹೀಲ್
ಕ್ಯಾನ್‌ನಲ್ಲಿ ಕೆಲವು ವಿಚಿತ್ರ ರೂಢಿಗಳಿವೆ. ಉದಾಹರಣೆಗೆ ʼಬೂʼ ಎಂದು ಕಿರಿಚುವುದು. ತುಂಬಾ ಬೋರ್‌ ಹೊಡೆಸುವ, ತೀರಾ ಕಳಪೆಯಾಗಿರುವ ಸಿನಿಮಾಗಳಿಗೆ ಬೂ ʼಸಮ್ಮಾನʼ ಸಲ್ಲುತ್ತದೆ. ಕೆಲವೊಮ್ಮೆ ಎಕ್ಸ್ಟ್ರಾರ್ಡಿನರಿ ಎನ್ನಿಸುವ ಫಿಲಂಗಳೂ ಈ ಗೌರವ ಪಡೆಯುವುದುಂಟು. ಕ್ವೆಂಟಿನ್‌ ಟರಂಟಿನೋನ ಫಿಲಂಗಳೇ ಹೀಗೆ ಬೂ ಪಡೆದಿವೆ.

ಇನ್ನೊಂದು ರೂಢಿ ಎಂದರೆ ರೆಡ್‌ ಕಾರ್ಪೆಟ್‌ನಲ್ಲಿ ನಡೆಯುವ ತಾರೆಯರಲ್ಲಿ ಮಹಿಳೆಯರು ಹೈಹೀಲ್ಡ್‌ ಪಾದರಕ್ಷೆ ಧರಿಸಿರಬೇಕು. ಪುರುಷರು ಕಪ್ಪು ಟೈ ಧರಿಸಬೇಕು. ಹೆಚ್ಚಾಗಿ ರೆಡ್‌ ಕಾರ್ಪೆಟ್‌ನಲ್ಲಿ ನಡೆಯುವ ತಾರಾಮಣಿಯರು ತಮ್ಮ ವಿಶಿಷ್ಟ, ವಿಚಿತ್ರ ಡ್ರೆಸ್‌ಗಳಿಂದ ಲೋಕದ ಗಮನ ಸೆಳೆಯುವುದು ರೂಢಿ. ಈ ಡ್ರೆಸ್‌ ಕೋಡ್‌ನ್ನು ಆಕ್ಷೇಪಿಸಿ, ಬರಿಗಾಲಿನಲ್ಲಿ ನಡೆದ ತಾರೆಯರೂ ಇದ್ದಾರೆ. ಇಂಥ ಪ್ರತಿಭಟನೆಗಳೂ ಉತ್ಸವದ ಭಾಗವೇ ಆಗಿವೆ.

ಇದನ್ನೂ ಓದಿ: Mother’s Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು

Exit mobile version