Site icon Vistara News

ಸ್ವಾತಂತ್ರ್ಯದ ಅಮೃತ ಮಹೋತ್ಸವ | ಕರ್ನಾಟಕದಲ್ಲಿ ರಾಷ್ಟ್ರಧ್ವಜ ಸತ್ಯಾಗ್ರಹಗಳು

flag
ಡಾ. ಎಸ್.ಬಿ. ಬಸೆಟ್ಟಿ

ಭಾರತದಲ್ಲಿ ಧ್ವಜ ಸತ್ಯಾಗ್ರಹ ಎಂಬುದು ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಶಾಂತಿಯುತ ನಾಗರಿಕ ಅಸಹಕಾರದ ಅಭಿಯಾನವಾಗಿದ್ದು, ರಾಷ್ಟ್ರೀಯತಾವಾದಿ ಧ್ವಜವನ್ನು ಹಾರಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಚಲಾಯಿಸುವುದರ ಮೇಲೆ ಕೇಂದ್ರೀಕರಿಸಿತು. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಧ್ವಜಗಳನ್ನು ಹಾರಿಸುವುದನ್ನು ನಿಷೇಧಿಸುವ ಕಾನೂನುಗಳಿದ್ದವು. ಧ್ವಜ ಸತ್ಯಾಗ್ರಹಗಳನ್ನು ೧೯೨೩ರಲ್ಲಿ ಜಬಲ್ಪುರ ಮತ್ತು ನಾಗ್ಪುರ ಸೇರಿದಂತೆ ಭಾರತದ ಅನೇಕ ಭಾಗಗಳಲ್ಲಿ ನಡೆಸಲಾಯಿತು.

ಖಾಸಗಿ ಮತ್ತು ಸಾರ್ವಜನಿಕ ಕಟ್ಟಡಗಳ ಮೇಲೆ ರಾಷ್ಟ್ರೀಯತಾವಾದಿ ಧ್ವಜಗಳನ್ನು ಹಾರಿಸುವುದು(ಕೆಲವೊಮ್ಮೆ ಸರ್ಕಾರಿ ಕಟ್ಟಡಗಳನ್ನು ಒಳಗೊಂಡಂತೆ) ಸಾಮಾನ್ಯ. ರಾಷ್ಟ್ರೀಯತಾವಾದಿ ನಾಯಕರಾದ ಬಿಪಿನ್ ಚಂದ್ರ ಪಾಲ್ ಮತ್ತು ಲಾಲಾ ಲಜಪತ್ ರಾಯ್ ಅವರ ಉದಯದೊಂದಿಗೆ ಇಂತಹ ಪ್ರತಿಭಟನೆಗಳು ಭಾರತದಾದ್ಯಂತ ವೇಗ ಗಳಿಸಿದವು. ಧ್ವಜ ಸತ್ಯಾಗ್ರಹ ಎಂಬುದು ಧ್ವಜಾರೋಹಣದ ಮೇಲೆ ಬ್ರಿಟಿಷರು ಹೇರಿದ ನಿರ್ಬಂಧಗಳ ವಿರುದ್ದ ಮತ್ತು ಒಟ್ಟಾರೆಯಾಗಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಮಾಡಿದ ಕಾರ್ಯತಂತ್ರ. ಅಸಹಕಾರ ಚಳವಳಿ (೧೯೨೦-೧೯೨೨), ಉಪ್ಪಿನ ಸತ್ಯಾಗ್ರಹ(೧೯೩೦) ಮತ್ತು ಕ್ವಿಟ್ ಇಂಡಿಯಾ ಚಳವಳಿ(೧೯೪೨)ಯ ಸಮಯದಲ್ಲಿ ಪ್ರವರ್ಧಮಾನಕ್ಕೆ ಬಂದ ಈ ದಂಗೆಯ ವಿಧಾನ ಸತ್ಯಾಗ್ರಹದ ತಂತ್ರದೊಂದಿಗೆ ರಾಷ್ಟ್ರೀಯವಾದಿ ಧ್ವಜವನ್ನು ಹಾರಿಸುವುದನ್ನು ಸಂಯೋಜಿಸಿದವು. ರಾಷ್ಟ್ರೀಯವಾದಿಗಳು ಕಾನೂನನ್ನು ಉಲ್ಲಂಘಿಸಲು ಮತ್ತು ಬಂಧನವನ್ನು ವಿರೋಧಿಸದೆ ಅಥವಾ ಪೊಲೀಸರ ವಿರುದ್ಧ ಪ್ರತೀಕಾರ ಮಾಡದೆ ಧ್ವಜವನ್ನು ಹಾರಿಸಲು ಪ್ರೋತ್ಸಾಹಿಸಲಾಯಿತು.

ಧ್ವಜ ಸತ್ಯಾಗ್ರಹಗಳು ಹೋರಾಟದ ಉದ್ದಕ್ಕೂ ಗಾಂಧಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯವಾದಿ ದಂಗೆಗಳ ಸಮಯದಲ್ಲಿ ನಡೆದ ಸಾಮಾನ್ಯ ಕ್ರಿಯೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಧ್ವಜವನ್ನು ದೊಡ್ಡ ಮೆರವಣಿಗೆಗಳು ಮತ್ತು ರಾಷ್ಟ್ರೀಯವಾದಿ ಜನಸಮೂಹದಿಂದ ನಿಯಮಿತವಾಗಿ ಹಾರಿಸಲಾಯಿತು. ೩೧ ಡಿಸೆಂಬರ್ ೧೯೨೯ರಂದು ಕಾಂಗ್ರೆಸ್ ಅಧ್ಯಕ್ಷ ಜವಾಹರಲಾಲ ನೆಹರು ಅವರು ರಾವಿ ನದಿಯ ದಡದಲ್ಲಿ ಧ್ವಜವನ್ನು ಹಾರಿಸುವುದರೊಂದಿಗೆ ಪೂರ್ಣ ಸ್ವರಾಜ್ ಸ್ವಾತಂತ್ರ್ಯ ಘೋಷಣೆಯನ್ನು ಅಂಗೀಕರಿಸಿದರು. ೧೯೪೨ರ ಅಗಸ್ಟ್ ೭ರಂದು ಮುಂಬೈ(ಆಗಿನ ಬಾಂಬೆ)ನಲ್ಲಿರುವ ಗೋವಾಲಿಯಾ ಟ್ಯಾಂಕ್‌ನಲ್ಲಿ ಕ್ವಿಟ್ ಇಂಡಿಯಾ ದಂಗೆಯ ಪ್ರಾರಂಭದಲ್ಲಿ ಧ್ವಜವನ್ನು ಹಾರಿಸಲಾಯಿತು.

ಇದನ್ನೂ ಓದಿ: Amrit Mahotsav | ಪಾಲಿಸ್ಟರ್‌ ರಾಷ್ಟ್ರಧ್ವಜ: ಖಾದಿ ನೇಕಾರರ ಕೊರಳಿಗೆ ಸರ್ಕಾರದ ಉರುಳು

೧೯೨೩ರಲ್ಲಿ ನಾಗ್ಪುರ ಮತ್ತು ಜಬಲ್ಪುರದ ಧ್ವಜ ಸತ್ಯಾಗ್ರಹವು ಹಲವಾರು ತಿಂಗಳು ನಡೆಯಿತು. ಧ್ವಜ ಹಾರಿಸುವ ಹಕ್ಕನ್ನು ಒತ್ತಾಯಿಸುವ ರಾಷ್ಟ್ರೀಯವಾದಿ ಪ್ರತಿಭಟನಾಕಾರರ ಬಂಧನವು ಭಾರತದಾದ್ಯಂತ ನಡೆದು, ಜನರ ಆಕ್ರೋಶಕ್ಕೆ ಕಾರಣವಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್, ಜಮ್ನಾಲಾಲ್ ಬಜಾಜ್, ಚಕ್ರವರ್ತಿ ರಾಜಗೋಪಾಲಾಚಾರಿ, ಡಾ. ರಾಜೇಂದ್ರ ಪ್ರಸಾದ್ ಮತ್ತು ವಿನೋಬಾ ಭಾವೆ ಮುಂತಾದ ರಾಷ್ಟ್ರೀಯವಾದಿ ನಾಯಕರು ದಂಗೆಯನ್ನು ಸಂಘಟಿಸಿದರು. ದಕ್ಷಿಣದ ತಿರುವಾಂಕೂರ್ ರಾಜ್ಯ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಾವಿರಾರು ಜನರು ನಾಗಪುರ ಮತ್ತು ಇತರ ಭಾಗಗಳಿಗೆ ಪ್ರಯಾಣಿಸಿದರು. ಕೇಂದ್ರ ಪ್ರಾಂತ್ಯಗಳ(ಈಗ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಲ್ಲಿದೆ) ನಾಗರಿಕ ಅಸಹಕಾರದಲ್ಲಿ ಭಾಗವಹಿಸಿದರು. ಕೊನೆಯಲ್ಲಿ, ಬ್ರಿಟಿಷರು ಪಟೇಲ್ ಮತ್ತು ಇತರ ಕಾಂಗ್ರೆಸ್ ನಾಯಕರೊಂದಿಗೆ ಒಪ್ಪಂದ ಮಾಡಿಕೊಂಡರು. ಮೆರವಣಿಗೆಗೆ ಅನುಮತಿ ನೀಡಿದರು ಮತ್ತು ಬಂಧಿತರೆಲ್ಲರ ಬಿಡುಗಡೆ ಮಾಡಿದರು.

ಕರ್ನಾಟಕದಲ್ಲಿ ರಾಷ್ಟ್ರಧ್ವಜ ಸತ್ಯಾಗ್ರಹಗಳು

(೧) ಆಗಸ್ಟ್‌ ೧೯೩೨ರಲ್ಲಿ ಶಂಕರ ಕುರ್ತಕೋಟಿ ಮುಂಬಯಿಯ ಸೆಕ್ರೆಟರಿಯೇಟ್‌ ಮೇಲೆ ಧ್ವಜ ಹಾರಿಸಿದರು. ಗದಗ ತಾಲೂಕ ಸಮೀಪದ ಹಳ್ಳಿ ಕುರ್ತಕೋಟಿಯ ಲಿಂಗೋ ರಾಮಚಂದ್ರ ಕುರ್ತಕೋಟಿಯವರ ಪುತ್ರ ಶಂಕರ. ಲಿಂಗೇಗೌಡರು ಅವರನ್ನು ೧೯೨೦ರಲ್ಲಿ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಶಂಕರ ಅವರಿಗೆ ಸ್ವಾತಂತ್ರ್ಯ ಹೋರಾಟದ ಅನುಭವವಾಯಿತು. ೧೯೩೨ರಲ್ಲಿ ಕಾಯಿದೆ ಭಂಗ ಚಳವಳಿ ಜೋರಾಯಿತು. ಮುಂಬಯಿಯಲ್ಲಿ ಶಂಕರ ಅದನ್ನು ನೋಡಿಕೊಳ್ಳುತ್ತಿದ್ದರು. ಆಗಸ್ಟ್‌ ೧೯೩೨ರಲ್ಲಿ ಇಂಗ್ಲೆಂಡಿನಿಂದ ಸಂಸತ್‌ ಸದಸ್ಯರ ಒಂದು ನಿಯೋಗ ಭಾರತಕ್ಕೆ ಬಂತು. ಅಹಿಂಸಾತ್ಮಕ ಆಂದೋಲನ ನೋಡಲು ಬಂದ ನಿಯೋಗದೆದುರು ಸೆಕ್ರೆಟರಿಯೇಟ್‌ ಮೇಲೆ ಧ್ವಜ ಏರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಯಿತು. ಸೆಕ್ರೆಟರಿಯೇಟ್‌ ಬಳಿ ಇಪ್ಪತ್ತು ಸಾವಿರ ಜನ ಸೇರಿದ್ದರು. ಅನೇಕರ ಕೈಯಲ್ಲಿ ಧ್ವಜ. ಇಂಥ ಒಂದು ಗುಂಪಿಗೆ ಶಂಕರರು ಮುಖ್ಯಸ್ಥರಾಗಿದ್ದರು. ಧ್ವಜ ಏರಿಸಲು ನಾ ಮುಂದು ನೀ ಮುಂದು ಎಂದು ಗುಂಪುಗಳು ನುಗ್ಗಿದವು. ಪೊಲೀಸರು ಅವರನ್ನು ಹಿಡಿದು ಹೊಡೆದು ಬಡಿದು ಲಾಕಪ್ಪಿಗೆ ಹಾಕುತ್ತಿದ್ದರು. ಶಂಕರನನ್ನು ಗುಂಪಿನ ಮುಖಂಡನೆಂದು ಲಾಕಪ್ಪಿಗೆ ಹಾಕಿದರು. ವಿಚಾರಣೆಯ ನಂತರ ಶಂಕರರಿಗೆ ಒಂಬತ್ತು ತಿಂಗಳ ಸಶ್ರಮ ಶಿಕ್ಷೆ ಎರಡುನೂರು ರೂಪಾಯಿ ದಂಡ ಅಥವಾ ಮತ್ತೆ ಮೂರು ತಿಂಗಳ ಸಶ್ರಮ ಶಿಕ್ಷೆಯಾಗಿ ಜೈಲಿಗೆ ಕಳಿಸಲಾಯಿತು.

ಇದನ್ನೂ ಓದಿ: ಅಮೃತಮಹೋತ್ಸವ | ಆ. 15ರಂದು ಬಿಎಂಟಿಸಿಯಲ್ಲಿ ದುಡ್ಡೇ ಕೊಡದೆ ಫ್ರೀ ಆಗಿ ಓಡಾಡೋ ಸ್ವಾತಂತ್ರ್ಯ!

(೨) ಸ್ವಾಭಿಮಾನದ ಶಿವಪುರ ರಾಷ್ಟ್ರಧ್ವಜ ಸತ್ಯಾಗ್ರಹ

ಏಪ್ರಿಲ್ ೧೯೩೮ರಲ್ಲಿ ಸಿದ್ಧಲಿಂಗಯ್ಯ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರ ತಾಲೂಕ ಶಿವಪುರ ಗ್ರಾಮದ ಶಿಂಷಾ ನದಿ ದಂಡೆ ಮೇಲೆ ಮೈಸೂರು ಕಾಂಗ್ರೆಸ್ ಮೊದಲನೇ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ನಾಯಕರು ಧ್ವಜವಂದನೆ ಆಯೋಜಿಸಿದ್ದರು. ಮೈಸೂರು ಮಹಾರಾಜರ ಪ್ರಭುತ್ವಕ್ಕೆ ಕುಂದು ಬರುವುದೆಂದು ಭಾವಿಸಿ ಮೈಸೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಧ್ವಜಾರೋಹಣ ನಿಷೇಧಿಸಿದರು. ೧೧, ೧೨, ೧೩ನೇ ಏಪ್ರಿಲ್ ೧೯೩೮ರಂದು ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾವ್ ನೇತೃತ್ವದಲ್ಲಿ ಮೈಸೂರು ಯೂತ್ ಲೀಗ್ ಸಮಾವೇಶ ನಡೆಯಿತು. ಮರುದಿನ ಸಿದ್ಧಲಿಂಗಯ್ಯ ಧ್ವಜಾರೋಹಣ ಮಾಡಿದ ತಕ್ಷಣವೇ ದಸ್ತಗಿರಿ ಮಾಡಲಾಯಿತು. ಎಚ್.ಸಿ. ದಾಸಪ್ಪ ಅಧ್ಯಕ್ಷತೆ ಸ್ವೀಕರಿಸಿದರು. ಆಜ್ಞೆ ಉಲ್ಲಂಘಿಸಿದ ಕಾರಣಕ್ಕೆ ಪುರುಷರನ್ನು ದಸ್ತಗಿರಿ ಮಾಡಿದಾಗ ಮಹಿಳೆಯರು ತಮ್ಮನ್ನು ದಸ್ತಗಿರಿ ಮಾಡುವಂತೆ ಧೈರ್ಯ ಮೆರೆದರು.

(೩) ವೀರರ ರಾಷ್ಟ್ರಧ್ವಜಾರೋಹಣ ವಿದುರಾಶ್ವತ್ಥ ಗ್ರಾಮ

ಪೌರಾಣಿಕ ಹಿನ್ನೆಲೆ ಹೊಂದಿರುವ ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟದಿಂದ ಗಮನ ಸೆಳೆದಿದ್ದು, ಕರ್ನಾಟಕದ ಜಲಿಯನ್ ವಾಲಾಬಾಗ್ ಎಂತಲೇ ಹೆಸರುವಾಸಿ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ವಿದುರಾಶ್ವತ್ಥ ಇದೆ. ಶಿವಪುರ ರಾಷ್ಟ್ರಧ್ವಜ ಸತ್ಯಾಗ್ರಹದಿಂದ ಪ್ರೇರಣೆಗೊಂಡ ಹೋರಾಟಗಾರರು ಇಲ್ಲಿ ೨೫ನೇ ಏಪ್ರಿಲ್ ೧೯೩೮ರಂದು ರಾಷ್ಟ್ರಧ್ವಜ ಸತ್ಯಾಗ್ರಹ ಹೋರಾಟ ಕೈಗೊಂಡಿದ್ದರು. ಆದರೆ ಇದಕ್ಕೆ ಅನುಮತಿ ನೀಡದ ಬ್ರಿಟಿಷ್ ಸರ್ಕಾರ ನಿಷೇಧಾಜ್ಞೆ ಘೋಷಿಸಿತ್ತು. ಇದಕ್ಕೆ ಜಗ್ಗದ ದೇಶಭಕ್ತರು ವಂದೇ ಮಾತರಂ ಘೋಷಣೆಗಳೊಂದಿಗೆ ಧ್ವಜಾರೋಹಣ ನೆರವೇರಿಸಿ ಸತ್ಯಾಗ್ರಹ ನಡೆಸಿದರು. ಇದರಿಂದ ಕೆರಳಿದ ಬ್ರಿಟಿಷ್ ಪೊಲೀಸರು ವಿವೇಚನಾ ರಹಿತರಾಗಿ ಗೋಲಿಬಾರ್ ನಡೆಸಿದಾಗ ೩೨ ಮಂದಿ ಬಲಿಯಾಗಿ ಹಲವರು ಗಾಯಗೊಂಡರು. ಈ ಪ್ರಕರಣ ಪಂಜಾಬ್‌ನ ಜಲಿಯನ್ ವಾಲಾಬಾಗ್ ಮಾದರಿಯಲ್ಲೇ ನಡೆದದ್ದರಿಂದ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆ ಆಯಿತು. ಗಾಂಧಿ ಸೂಚನೆಯಂತೆ ಇಲ್ಲಿಗೆ ಸರ್ದಾರ್ ವಲ್ಲಭಭಾಯ್ ಪಟೇಲ್, ಆಚಾರ್ಯ ಕೃಪಲಾನಿ ಭೇಟಿ ನೀಡಿದರು. ಹೋರಾಟಗಾರರ ನೆನಪಿಗಾಗಿ ಇಲ್ಲಿ ವೀರಸೌಧ, ಸ್ಥೂಪ, ವೀರಗಲ್ಲು ನಿರ್ಮಿಸಲಾಗಿದೆ.

(೪) ಏಸೂರು ಕೊಟ್ಟರೂ ಈಸೂರು ಕೊಡೆವು

೧೯೪೨ರಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟ ರೂಪುಗೊಂಡಾಗ ಮೊದಲು ಸ್ಪಂದಿಸಿದ್ದು ಶಿಕಾರಪುರ ತಾಲೂಕಿನ ಈಸೂರು ಗ್ರಾಮಸ್ಥರು, ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಘೋಷಣೆಯೊಂದಿಗೆ ಆ ಪುಟ್ಟ ಗ್ರಾಮದ ಜನರು ಬ್ರಿಟಿಷ್ ಸಾಮ್ರಾಜ್ಯಶಾಹಿಗೇ ಸೆಡ್ಡು ಹೊಡೆದರು. ಶಿಕಾರಿಪುರ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಶಾನುಭೋಗರು, ಪಟೇಲರನ್ನು ಇಲ್ಲಿನ ಜನ ಬಹಿಷ್ಕರಿಸಿ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಕಡತಗಳನ್ನು ಸುಟ್ಟು ಹಾಕಿದರು. ಗ್ರಾಮದ ವೀರಭದ್ರಸ್ವಾಮಿ ದೇವಾಲಯ ಎದುರು ರಾಷ್ಟ್ರಧ್ವಜ ಹಾರಿಸಿ ಪ್ರತ್ಯೇಕ ಸರ್ಕಾರ, ಸಂವಿಧಾನ ಘೋಷಿಸಿಕೊಂಡರು. ಕಂದಾಯ ಪಾವತಿಗೆ ನಿರಾಕರಿಸಿದ ಪರಿಣಾಮ ಅಮಲ್ದಾರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಈಸೂರಿಗೆ ಬಂದು ರಾಷ್ಟ್ರಧ್ವಜವನ್ನು ಕಾಲಿನಿಂದ ಒದ್ದು ಅಪಮಾನಿಸಿದರು. ರೊಚ್ಚಿಗೆದ್ದ ಜನ ಅಧಿಕಾರಿಗಳನ್ನು ಥಳಿಸಿದರು. ಬಿಟ್ರಿಷ್ ಅಧಿಕಾರಿಗಳಿಗೆ ೫೦೦ ರೂ. ದಂಡ ಹಾಕಿದರು. ಒಂಟಿ ಕಾಲಿನಲ್ಲಿ ನಿಲ್ಲಿಸಿದರು. ಗೋಲಿಬಾರ್‌ಗೂ ಅಂಜದೇ ಹಲ್ಲೆ ನಡೆಸಿದ್ದರಿಂದ ಅಧಿಕಾರಿಗಳಿಬ್ಬರು ಸಾವಿಗೀಡಾದರು. ಈ ಘಟನೆ ದೇಶವ್ಯಾಪಿ ಕಾಡ್ಗಿಚ್ಚಿನಂತೆ ಹರಡಿತು. ಅಧಿಕಾರಿಗಳನ್ನು ಸಾಯಿಸಿದವರ ವಿರುದ್ಧ ಪ್ರತೀಕಾರಕ್ಕೆ ಬ್ರಿಟಿಷ್ ಆಡಳಿತ ಮುಂದಾಯಿತು. ಪೊಲೀಸರು ಊರಿಗೆ ನುಗ್ಗಿ ಸಿಕ್ಕವರ ಮೇಲೆ ಹಲ್ಲೆ ನಡೆಸಿದರು. ಲಾಠಿ ಏಟಿಗೂ ಅಳುಕದೇ ಇಲ್ಲಿನ ಜನ ಹೋರಾಡಿದರು. ಅಧಿಕಾರಿಗಳಿಬ್ಬರ ಹತ್ಯೆ ಆರೋಪದಲ್ಲಿ ೨೪ ಜನರನ್ನು ಬಂಧಿಸಿ, ಐವರಿಗೆ ಗಲ್ಲು, ೧೯ ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು.‌

(೫) ಆಗಷ್ಟ್ ೧೯೪೨ರಲ್ಲಿ ಡಾ. ಪಾಟೀಲ್ ಪುಟ್ಟಪ್ಪನವರಿಂದ ರಾಷ್ಟ್ರಧ್ವಜಾರೋಹಣ

೧೨ನೇ ಅಗಸ್ಟ್ ೧೯೪೨ರಂದು ಹಳ್ಳಿಕೇರಿ ಗುದ್ಲೆಪ್ಪನವರನ್ನು ಸರಕಾರ ಬಂಧಿಸಿತು. ಪಾಪು ಅವರು ಇದನ್ನು ವಿರೋಧಿಸಿ ಕಾಲೇಜಿನ ಗೋಪುರಕ್ಕಿದ್ದ ಯುನಿಯನ್ ಜಾಕ್‌ನ ಧ್ವಜ ಕೆಳಗೆ ಇಳಿಸಿ ನಮ್ಮ ರಾಷ್ಟ್ರಧ್ವಜ ಮೇಲೆ ಏರಿಸಿದರು.

ಧ್ವಜ ಸಂಹಿತೆಗೆ ತಿದ್ದುಪಡಿ ಸಲ್ಲದು

ಪ್ರಸ್ತುತ ಕೇಂದ್ರ ಸರ್ಕಾರ ಧ್ವಜ ಸಂಹಿತೆ-೨೦೦೨ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೆ. ‘ರಾಷ್ಟ್ರಧ್ವಜ ಸಂಹಿತೆ’ ತಿದ್ದುಪಡಿ ಮಾಡಿ, ಖಾದಿ ಮತ್ತು ಹತ್ತಿಯ ಧ್ವಜಗಳಿಗೆ ಬದಲಾಗಿ ಪಾಲಿಸ್ಟರ್‌ ಧ್ವಜಗಳಿಗೆ ಆಸ್ಪದ ನೀಡಿರುವುದು, ಖಾದಿ ಉದ್ಯಮದ, ನೇಕಾರಿಕೆ ಮಾಡುವವರ ಹೊಟ್ಟೆಯ ಮೇಲೆ ಹೊಡೆದಂತೆ. ಇದು ಗಾಂಧಿ ತತ್ವ ಮತ್ತು ಆಶಯಗಳಿಗೆ ವಿರುದ್ಧದ ನಡೆ. ಗ್ರಾಮೋದ್ಯೋಗವನ್ನು ನಾಶ ಮಾಡಲು ಅಧಿಕಾರ ವರ್ಗ ಹಾತೊರೆಯುತ್ತಿದೆ. ಗ್ರಾಮ ಸ್ವರಾಜ್ಯದ ಸಂಕೇತವಾದ ಖಾದಿಯನ್ನು ತ್ಯಜಿಸುವ ಮಾತೇ ಇಲ್ಲ ಎಂದು ಮೈಸೂರಿನ ರಂಗಕರ್ಮಿ ಪ್ರಸನ್ನ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಖಾದಿಯಿಂದ ದೇಶದ ಆರ್ಥಿಕತೆಗೆ ಯಾವುದೇ ಲಾಭವಿಲ್ಲ. ನೀವು ಚರಕದಿಂದ ನೂತ ಖಾದಿ ನಮಗೆ ಬೇಕಿಲ್ಲವೆಂದು ಪರೋಕ್ಷವಾಗಿ ಸರ್ಕಾರ ಹೇಳಿದಂತಿದೆ. ಧ್ವಜದಿಂದಲೇ ಖಾದಿಯನ್ನು ಕಿತ್ತು ಹಾಕಲು ಸರ್ಕಾರ ಮುಂದಾಗಿದೆ. ಹೀಗೇ ಮುಂದುವರಿದರೆ ಶಿವಪುರ ಸತ್ಯಾಗ್ರಹದ ಚಳವಳಿ ಮಾದರಿಯಲ್ಲಿ ಬೆಂಗಳೂರು, ಧಾರವಾಡಗಳಲ್ಲಿ ಧ್ವಜ ಸತ್ಯಾಗ್ರಹದ ಚಳವಳಿ ಮಾಡುತ್ತೇವೆ” ಎಂದು ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ.

ಪಾಲಿಸ್ಟರ್ ರಾಷ್ಟ್ರಧ್ವಜದ ಉತ್ಪಾದನೆ ಮತ್ತು ಆಮದಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರದ ನಿರ್ಣಯ ವಿರೋಧಿಸಿ ಖಾದಿ ರಾಷ್ಟ್ರಧ್ವಜ ತಯಾರಿಕೆಗೆ ಖ್ಯಾತಿ ಪಡೆದ ಕರ್ನಾಟಕದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಜುಲೈ ೨೭ಕ್ಕೆ ಒಂದು ದಿನ ಸತ್ಯಾಗ್ರಹ ಮಾಡಿತ್ತು. ಸರಕಾರವೇ ಹೀಗೆ ಮಾಡಿದರೆ ನಾಳೆ ಖಾದಿ ಸಂಸ್ಕೃತಿಯನ್ನು ಕಾಪಾಡುವವರು ಯಾರು?

(ಲೇಖಕರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಗಾಂಧಿ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರು)

Exit mobile version