Site icon Vistara News

ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!

cyber secutrity

ಅಗರ್ತಲಾದ ಇಕ್ಫಾಯಿ (ICAFI) ಯೂನಿವರ್ಸಿಟಿಯಿಂದ ಹೊರಡ್ತಾ ಇದ್ದೆ. ಆಗ ನನ್ನ ಫೇಸ್‌ಬುಕ್ ಗೆಳೆಯರೊಬ್ಬರು ಕರೆ ಮಾಡಿ ಅವರ ಪರಿಚಿತರೊಬ್ಬರು ಸೈಬರ್ ವಂಚನೆಗೀಡಾಗಿದ್ದಾರೆ. ಅವರಿಗೆ ನಿಮ್ಮ ಸಲಹೆ, ಮಾರ್ಗದರ್ಶನ ಬೇಕು, ನಿಮ್ಮ ನಂಬರ್ ಕೊಡಬಹುದಾ ಎಂದರು. ಅವರಿಗೆ ಒಪ್ಪಿಗೆ ಕೊಟ್ಟು ಏರ್‌ಪೋರ್ಟ್ ತಲುಪಿದೆ. ಅಲ್ಲಿ ಲಗೇಜ್ ಚೆಕ್ಇನ್, ಸೆಕ್ಯೂರಿಟಿ ಚೆಕ್ಇನ್ ಮುಗಿಸುವಷ್ಟರಲ್ಲಿ ಒಂದು ಅಪರಿಚಿತ ನಂಬರ್‌ನಿಂದ ಪೋನ್ ರಿಂಗಣಿಸಿತು. ನನ್ನ ಸ್ನೇಹಿತರ ಪರಿಚಿತರಿರಬಹುದೆಂದು ಉತ್ತರಿಸಿದೆ. ಅವರೇ ಕರೆ ಮಾಡಿದ್ದರು.

ʼನಾನು ಚಕ್ರಪಾಣಿ (ಹೆಸರು ಬದಲಾಯಿಸಿದ್ದೇನೆ), ನಿಮ್ಮ ಫೇಸ್‌ಬುಕ್ ಸ್ನೇಹಿತರು ಹೇಳಿದ್ರಲ್ಲ, ನಾನೇʼ ಅಂದರು. ಅವರು ಯಾವುದೋ ಕೆಲಸದಲ್ಲಿದ್ದಾಗ ಅವರ ಬ್ಯಾಂಕಿನಿಂದ ಒಂದು SMS ಬಂತಂತೆ. ಅದರಲ್ಲಿ ಅವರ KYC ನವೀಕರಿಸದಿದ್ದರೆ ಅಕೌಂಟ್ ಬ್ಲಾಕ್ ಆಗುತ್ತೆ ಅಂತ ಇತ್ತಂತೆ. ತಕ್ಷಣ ನವೀಕರಿಸುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ ಎಂದು ಒಂದು ಲಿಂಕ್ ಕೊಟ್ಟಿದ್ರಂತೆ. ಕೆಲಸದ ನಡುವೆ ಬಂದ ಈ SMSಗೆ ಗಾಬರಿಯಿಂದ ಗಡಿಬಿಡಿಯಲ್ಲಿ ಕ್ಲಿಕ್ ಮಾಡಿ ತಮ್ಮ ಮಾಹಿತಿಯನ್ನು ಕೊಟ್ಟರಂತೆ. ಸ್ವಲ್ಪ ಹೊತ್ತಿನಲ್ಲೇ ಅವರ ಅಕೌಂಟಿನಿಂದ ತೊಂಬತ್ತು ಸಾವಿರ ರೂಪಾಯಿ ಡೆಬಿಟ್ ಆಗಿದೆ ಎಂದು ಇನ್ನೊಂದು ಮೆಸೇಜ್ ಬಂತಂತೆ. OTP ಕೂಡ ಬರದೇ ಅಕೌಂಟಿನಿಂದ ಹಣ ಹೋಗಿದೆ, ಏನು ಮಾಡೋದು ಅಂತ ಅಲವತ್ತುಕೊಂಡರು. ಅವರಿಗೆ ಧೈರ್ಯ ಹೇಳಿ ಮೊಟ್ಟಮೊದಲು ಕೈಗೊಳ್ಳಬೇಕಾದ ಕಾರ್ಯಗಳನ್ನು ತಿಳಿಸಿ, ನಾನು ಬೆಂಗಳೂರಿನ ವಿಮಾನ ಹತ್ತಿದೆ.

ಬೆಂಗಳೂರಿಗೆ ಬಂದು ಒಂದೆರಡು ದಿನಗಳ ನಂತರ ಮತ್ತೆ ಚಕ್ರಪಾಣಿಯವರಿಗೆ ಕರೆ ಮಾಡಿ ಮಾತನಾಡಿದೆ. ಅವರೂ ಕೂಡ ಅವರ ಊರಿನ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದರು. ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (https://www.cybercrime.gov.in/) ನಲ್ಲೂ ಅವರ ದೂರು ದಾಖಲಿಸಲು ಸಲಹೆ ನೀಡಿದೆ. ಮತ್ತು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರೊ. ಅನಂತ ಪ್ರಭು ಅವರ ನೆರವನ್ನೂ ಪಡೆದುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದೆ. ಅದೇ ರೀತಿ ಅನಂತ ಪ್ರಭುಗಳಿಗೂ ಮೆಸೇಜ್ ಮಾಡಿ ಚಕ್ರಪಾಣಿಯವರಿಗೆ ಬೇಕಾದ ಸಹಾಯ ಮಾಡಲು ಕೇಳಿಕೊಂಡೆ.

ಕಳೆದ ವಾರ, ಚಕ್ರಪಾಣಿಯವರು ಕರೆ ಮಾಡಿ ಹಣ ಪುನಃ ಅಕೌಂಟಿನಲ್ಲಿ ಬಂದಿದೆ ಎಂದು ಬಹಳ ಸಂತೋಷದಿಂದ ಹೇಳಿದರು. ಆದರೆ ಸದ್ಯಕ್ಕೆ ಬ್ಲಾಕ್ ಆಗಿದೆ. ಕೆಲವು ದಿನಗಳಲ್ಲಿ ವ್ಯವಹಾರಕ್ಕೆ ಸಿಗಬಹುದು ಅಂತ ಹೇಳಿದರು. ಸಕಾಲಿಕ ಸಲಹೆಗಳಿಗೆ ಧನ್ಯವಾದಗಳನ್ನೂ ಹೇಳಿದರು. ನಾನು ಅವರಿಗೆ ರಿಸರ್ವ್ ಬ್ಯಾಂಕಿನ ಸೈಬರ್ ಸೆಕ್ಯೂರಿಟಿಯ ಧ್ಯೇಯ ವಾಕ್ಯದಿಂದ “ಜಾಣರಾಗಿ, ಜಾಗರೂಕರಾಗಿರಿ” ಎಂದು ಹಾರೈಸಿದೆ.

ಕೋವಿಡ್ ಮಹಾಮಾರಿಯ ಸಮಯದಿಂದ ನಮ್ಮೆಲ್ಲರ ಆನ್ಲೈನ್ ವಹಿವಾಟು ಜಾಸ್ತಿ ಆಗಿದೆ. ಈ ಸಂದರ್ಭದಲ್ಲಿ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಕೋವಿಡ್ ಕಾಲದಲ್ಲಿ ರೋಗ ಬಾರದಂತೆ ಹೇಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೆವೋ ಹಾಗೆ ಸೈಬರ್ ಲೋಕದಲ್ಲಿ ವ್ಯವಹರಿಸುವಾಗಲೂ ಕೆಲವು ಅತಿ ಮುಖ್ಯವಾದ ಸುರಕ್ಷತಾ ಸಲಹೆಗಳನ್ನು ಪಾಲಿಸಿದರೆ ನಮ್ಮ ಆನ್ಲೈನ್ ಜೀವನವೂ ನಿರಾತಂಕವಾಗಿರುತ್ತದೆ.

ದೇವರು ನಾವಿರುವ ಭೂಮಿಯನ್ನು ಮತ್ತು ಜೀವ ವೈವಿಧ್ಯವನ್ನು ಸೃಷ್ಟಿಸಿದಂತೆ, ನಾವು ಸೈಬರ್‌ಸ್ಪೇಸ್ ಎಂಬ ಹೊಸ ಬ್ರಹ್ಮಾಂಡವನ್ನು ರಚಿಸಿದ್ದೇವೆ. ಎಲ್ಲದರಂತೆ ಅದರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇದೆ. ಈ ಹೊಸ ಆಯಾಮಗಳು ಅದ್ಭುತಗಳಿಗಿಂತ ಹೆಚ್ಚು ಅನಾಹುತಗಳನ್ನು ಹುಟ್ಟುಹಾಕುವುದೇ ಎಂದು ನಮಗೆ ಇನ್ನೂ ತಿಳಿದಿಲ್ಲ, ಆದರೆ ಹಿಂತಿರುಗಲು ತುಂಬಾ ತಡವಾಗಿದೆ.‌

ಇದನ್ನೂ ಓದಿ: ವಾಕಿಂಗ್‌ ಚಿತ್ರಗಳು: ಚಾಟ್‌ ಜಿಪಿಟಿ- ರೋಬಾಟ್ ಪರ್‌ಫೆಕ್ಟು, ಹಲವು ಎಡವಟ್ಟು

ನಾವು ತಂತ್ರಜ್ಞಾನ ಮತ್ತು ಇಂಟರ್ನೆಟ್ಟಿನ ಮೇಲೆ ಎಷ್ಟು ಅವಲಂಬಿತರಾಗಿದ್ದೇವಲ್ವಾ? ಬೆಳಿಗ್ಗೆ ಎದ್ದೊಡನೆ ಕಣ್ಮುಂದೆ ಬರೋದು ಮೊಬೈಲ್ ಮತ್ತು ಅದರಲ್ಲಿ ಬಂದ ಮೆಸೇಜುಗಳ ಅವಲೋಕನ. ಹೀಗಿರುವಾಗ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಲ್ವೇ? ಅದಕ್ಕಾಗಿ ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಬಹುದು. ಸುಖವಾದ ಸೈಬರ್ ಸರ್ಫ್‌ಗೆ ಹನ್ನೆರಡು ಸೂತ್ರಗಳು.

  1. ಕ್ಲಿಕ್ಕಿಸುವ ಮೊದಲು ಯೋಚಿಸಿ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಅಂತ ಗಾದೆನೇ ಇದೆ ಅಲ್ವಾ?
  2. ಸುಭದ್ರವಾದ ಮತ್ತು ವಿಭಿನ್ನವಾದ ಪಾಸ್‌ವರ್ಡ್‌ಗಳನ್ನು ಬಳಸಿ.
  3. ನಿಮ್ಮ ಎಲ್ಲಾ ಆನ್‌ಲೈನ್ ಅಕೌಂಟುಗಳಿಗೂ ಮಲ್ಟಿ-ಫ್ಯಾಕ್ಟರ್ ಅಥೆಂಟಿಫಿಕೇಷನ್ (MFA) ಅಥವಾ ಎರಡು ಫ್ಯಾಕ್ಟರ್ ಸೆಕ್ಯೂರಿಟಿ ಅಳವಡಿಸಿಕೊಳ್ಳಿ.
  4. ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್/ಡೆಸ್ಕ್‌ಟಾಪ್‌ಗಳ ಸಾಫ್ಟವೇರನ್ನು ನಿಯಮಿತವಾಗಿ ಅಪ್‌ಡೇಟ್ ಮಾಡ್ಕೊಳ್ತಿರಿ.
  5. ಫೈರ್ ವಾಲ್ ಮತ್ತು anti-ವೈರಸ್ ಬಳಸಿ.
  6. ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡನ್ನು ಆದಷ್ಟೂ ಕಡಿಮೆ ಬಳಸಿ.
  7. ಸೈಬರ್ ಜಗತ್ತಿನ ಸುರಕ್ಷತೆಯ ಬಗ್ಗೆ ಜಾಣರಾಗಿರಿ.
  8. ಅಪರಿಚಿತ ಮತ್ತು ಅಸುರಕ್ಷಿತ ಜಾಲತಾಣಗಳಿಗೆ ಭೇಟಿ ಮಾಡಬೇಡಿ.
  9. ಅನವಶ್ಯಕ ಡೌನ್‌ಲೋಡ್ ಮಾಡಬೇಡಿ.
  10. ನಿಮ್ಮ ಮುಖ್ಯವಾದ ದತ್ತಾಂಶ (data)ವನ್ನು ಬ್ಯಾಕಪ್ ಮಾಡ್ಕೊಳಿ.
  11. ಉಚಿತವಾಗಿ ಸಿಗುತ್ತೆ ಅಂತ ಸಾರ್ವಜನಿಕ ವೈಫೈ(WiFi) ಬಳಸಬೇಡಿ.
  12. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಏರ್ಪೋರ್ಟ್‌ಗಳಲ್ಲಿ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಚಾರ್ಜ್‌ಗೆ ಹಾಕುವಾಗ ಡೇಟಾ ಅಥವಾ ವೈಫೈ ಆಫ್ ಮಾಡಿಕೊಳ್ಳಿ. ನಿಮ್ಮ ಡಿವೈಸನ್ನು ಪೂರ್ತಿ ಆಫ್ ಮಾಡಿ ಚಾರ್ಜ್ ಮಾಡೋದು ಬಹಳ ಒಳ್ಳೆಯದು.

ವಿಶ್ವದಾದ್ಯಂತ ಸೈಬರ್ ವಂಚಕರು ನಮ್ಮ ಎರಡು ದುರ್ಬಲತೆಯನ್ನು ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಮೊದಲನೆಯದು ಭಯ, ಎರಡನೆಯದು ಆಸೆ (ದುರಾಸೆ). ಮೇಲಿನ ಘಟನೆಯಲ್ಲಿ ಬಳಕೆಯಾಗಿದ್ದು ಭಯ. ಎಲ್ಲಿ ತಮ್ಮ ಅಕೌಂಟ್ ಬ್ಲಾಕ್ ಆಗಿಬಿಡುವುದೋ ಎನ್ನುವ ಭಯದಲ್ಲಿ ಚಕ್ರಪಾಣಿಯವರು smsನಲ್ಲಿದ್ದ ಲಿಂಕ್ ಒತ್ತಿಬಿಟ್ಟರು. ಇನ್ನೊಂದು ರೀತಿಯ ವಂಚನೆಯಲ್ಲಿ ನಮ್ಮಲ್ಲಿ ಆಸೆ (ದುರಾಸೆ) ಹುಟ್ಟಿಸಿ ನಮ್ಮಿಂದ ಅವರಿಗೆ ಬೇಕಾದ ಮಾಹಿತಿ ಪಡೆಯುತ್ತಾರೆ.

ಹಾಗಾಗಿ, ಇಂದಿನ ಈ ಸೈಬರ್ ಬ್ರಹ್ಮಾಂಡದಲ್ಲಿ ವ್ಯವಹರಿಸುವಾಗ ಜಾಣರಾಗಿ, ಜಾಗರೂಕರಾಗಿರಿ.

(ಸೈಬರ್‌ ಸುರಕ್ಷತೆಯ ಬಗ್ಗೆ ಮನದಟ್ಟು ಮಾಡಿಕೊಡುವ ಈ ನೂತನ ಅಂಕಣ ಪ್ರತಿವಾರ ಪ್ರಕಟವಾಗಲಿದೆ)

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು

Exit mobile version