ಸೈಬರ್ ಸೇಫ್ಟಿ ಅಂಕಣ: ಸೈಬರ್ (cyber world) ಜಗತ್ತಿನಲ್ಲಿ ಸರ್ವೈವ್ ಆಗಲು ಅರಿವೊಂದೇ ದಾರಿ. ಜಾಣರಾಗಿ ಮತ್ತು ಜಾಗ್ರತರಾಗಿರಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೂಡ ಹೇಳೋದು ಇದನ್ನೇ. ಈ ರೀತಿಯ ಎಚ್ಚರಿಕೆಯನ್ನು ಸರ್ಕಾರ, ವಿವಿಧ ವಾಣಿಜ್ಯ ವಲಯಗಳ ನಿಯಂತ್ರಕರು, ಕಾನೂನು ಪಾಲಕರೂ ಹೇಳುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಸಾವಣ್ಣ ಎಂಟರ್‌ಪ್ರೈಸರ್ಸ್ ಪ್ರಕಾಶನದಲ್ಲಿ ಇತ್ತೀಚೆಗೆ ಬಂದ ಪುಸ್ತಕ ಸತೀಶ್ ವೆಂಕಟಸುಬ್ಬು ಅವರ ʼಸೈಬರ್ ಕ್ರೈಮ್- ತಡೆಗಟ್ಟುವುದು ಹೇಗೆʼ ಎಂಬ ಉಪಶೀರ್ಷಿಕೆಯನ್ನು ಹೊಂದಿರುವ ಈ ಪುಸ್ತಕಕ್ಕೆ ಖ್ಯಾತ ಲೇಖಕ, ಅಂಕಣಕಾರ ಮತ್ತು ಆರ್ಥಿಕ ಸಲಹೆಗಾರರಾದ ರಂಗಸ್ವಾಮಿ ಮೂಕನಹಳ್ಳಿಯವರ ಬೆನ್ನುಡಿ ಇದೆ.
ಅವರು ಹೇಳ್ತಾರೆ “ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಗಳು ಕಳ್ಳತನದ ವ್ಯಾಖ್ಯಾನವನ್ನು ಬದಲಿಸಿದೆ. ಹಿಂದೆ ಕಳ್ಳರು ಮನೆಗೆ ನುಗ್ಗಿ ಅಥವಾ ದಾರಿಯಲ್ಲಿ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಈಗ ನಮ್ಮ ಅಜಾಗರೂಕತೆಯಿಂದ ಕೊಟ್ಟ ಅನುಮತಿಯಿಂದ, ಅಥವಾ ನಮ್ಮ ಅನುಮತಿಯಿಲ್ಲದೆ ಕ್ರೈಮ್ ಸಂಭವಿಸುತ್ತಿದೆ. ನಮ್ಮ ಗಳಿಕೆ, ಉಳಿಕೆಗಳು ಕ್ಷಣಾರ್ಧದಲ್ಲಿ ಮಾಯವಾಗುತ್ತಿದೆ. ಹೀಗೆ ಆದಾಗ ಯಾರ ಸಹಾಯ ಪಡೆಯಬೇಕು? ಏನು ಮಾಡಬೇಕು? ಕಾನೂನಿನಲ್ಲಿ ಇದಕ್ಕೆ ಇರುವ ದಾರಿಗಳೇನು? ಕಳೆದುಕೊಂಡಿರುವುದನ್ನು ಮರಳಿ ಪಡೆಯಬಹುದೇ? ಎನ್ನುವ ಪ್ರಶ್ನೆಗಳಿಗೆ ಸೈಬರ್ ಕ್ರೈಮ್ ಪುಸ್ತಕದಲ್ಲಿ ಉತ್ತರವಿದೆ. ಕನ್ನಡಿಗರಿಗೆ ಸೈಬರ್ ಕ್ರೈಮ್‌ಗೆ ಸಂಬಂಧಿಸಿದ ಒಂದು ಅತ್ಯವಶ್ಯಕ ಕೈಪಿಡಿಯಂತಿದೆ ಈ ಪುಸ್ತಕ.
ವಿವಿಧ ದೇಶಗಳಲ್ಲಿ ಸುಮಾರು 20 ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್ ವೆಂಕಟಸುಬ್ಬು ಸ್ವಯಂ ನಿವೃತ್ತಿ ಪಡೆದು ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ನ್ಯಾಷನಲ್ ಲಾ ಸ್ಕೂಲಿನ ಸೈಬರ್ ಲಾ ಮತ್ತು ಸೈಬರ್ ಫೋರೆನ್ಸಿಕ್ಸ್ ಡಿಪ್ಲೊಮಾ ಮಾಡಿದ್ದಾರೆ. ಜೊತೆಗೆ ಮೈಸೂರಿನ JSS ಕಾನೂನು ಕಾಲೇಜಿನಲ್ಲಿ LLB ಕೋರ್ಸನ್ನು ಮುಗಿಸಿದ್ದಾರೆ. ಈ ಸಂಬಂಧವಾಗಿ ಮೈಸೂರಿನ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್‌ಠಾಣೆಯಲ್ಲಿ ಇಂಟರ್ನ್‌ಶಿಪ್ ಮಾಡಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಜೊತೆಯಲ್ಲಿ ಇವರು ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ‘ಸೈಬರ್‌ಮಿತ್ರ’ ಎಂಬ ಅಂಕಣವನ್ನೂ ಬರೆಯುತ್ತಾರೆ. ವಿವಿಧ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಅಂಕಣಬರಹಗಳ ಗುಚ್ಛವನ್ನು ಸೈಬರ್ ಕ್ರೈಮ್ ಪುಸ್ತಕವನ್ನಾಗಿ ಕನ್ನಡಿಗರಿಗೆ ಕೊಟ್ಟಿದ್ದಾರೆ.
ಸೈಬರ್ ಅಪರಾಧಗಳ ಕಿರು ಪರಿಚಯದೊಂದೆಗೆ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಸೋಶಿಯಲ್ ಇಂಜಿನಿಯರಿಂಗ್, ರಾನ್ಸಮ್‌ವೇರ್ ದಾಳಿ, ಆನ್‌ಲೈನ್ ಸಾಲದ ಆ್ಯಪ್ ವಂಚನೆ, ಸಿಮ್-ಸ್ವಾಪ್ ಅಪರಾಧಗಳು, ಆಧಾರ್ ಬಳಸಿಕೊಂಡು ನಡೆಯುತ್ತಿರುವ ಅಪರಾಧಗಳು, ಪ್ಯಾನ್ (PAN) ಬಳಸಿಕೊಂಡು ನಡೆಯುತ್ತಿರುವ ವಂಚನೆಗಳು, ಸೆಕ್ಸ್‌ಟಾರ್ಶನ್, ಆನ್‌ಲೈನ್ ಆಟಗಳ ಮೂಲಕ ಆಗುತ್ತಿರುವ ಮೋಸ, ಸೋಗು ಹಾಕುವಿಕೆ (impersonation), ಗುರುತಿನ ಕಳ್ಳತನ (identity theft), ಕ್ಯೂಆರ್ ಕೋಡು ಅಪರಾಧಗಳು, ಮನೆಯಿಂದಲೇ ಕೆಲಸ, ಆನ್ಲೈನ್ ಕೆಲಸದ ಆಮಿಷದ ಮೂಲಕ ನೆಡೆಯುತ್ತಿರುವ ಸೈಬರ್ ವಂಚನೆಗಳು, ಗ್ರಾಹಕ ಸಹಾಯವಾಣಿ, ಕೊರಿಯರ್ ಸಂಬಂಧಿತ ಅಪರಾಧಗಳು, ಮಹಿಳೆಯರು, ಹುಡುಗಿಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ನೆಡೆಸುವ ಸೈಬರ್ ಕ್ರೈಮ್‌ಗಳು, ಡೀಪ್‌ಫೇಕ್, ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್ ವಂಚನೆಗಳು, ಮುಂತಾದ ವೈವಿಧ್ಯಮಯ ಅಪರಾಧಗಳ ಬಗ್ಗೆ ಸರಳವಾಗಿ ಅರಿವು ಮೂಡಿಸಿದ್ದಾರೆ. ಲೇಖಕರು ಈ ಪುಸ್ತಕದಲ್ಲಿ ಜನಸಾಮಾನ್ಯರ ಮೇಲೆ ನೆಡೆಯುವ ಸೈಬರ್ ಅಪರಾಧಗಳನ್ನು ಅರ್ಥ ಮಾಡಿಕೊಳ್ಳುವ ಮಾಹಿತಿ ನೀಡಿದ್ದಾರೆ.
ಈ ಅಪರಾಧಗಳ ಕಾರ್ಯತಂತ್ರ, ಅದರಿಂದ ಪಾರಾಗುವ ಬಗೆ ಮತ್ತು ಅಕಸ್ಮಾತ್ತಾಗಿ ಆ ಸೈಬರ್ ಕ್ರೈಮಿನ ವಿಕ್ಟಿಮ್ ಆಗಿದ್ದರೆ ಕೈಗೊಳ್ಳಬೇಕಾದ ಕ್ರಮಗಳು ಜೊತೆಗೆ ಭಾರತದಲ್ಲಿ ಕಾನೂನುಬದ್ಧವಾಗಿ ಲಭ್ಯವಿರುವ ಪರಿಹಾರಗಳನ್ನೂ ಕೊಟ್ಟಿದ್ದಾರೆ.
ಲೇಖಕರು ಇದನ್ನು ಸಂಪೂರ್ಣ ಕೈಪಿಡಿ ಅಲ್ಲ ಎಂದಿರುವುದು ಅವರ ನಮ್ರತೆಯನ್ನು ತೋರಿಸುತ್ತದೆ. ನಮ್ಮ ತಿಳುವಳಿಕೆ, ಅನುಭವವನ್ನು ಮೀರಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರ ಮತ್ತು ಅದಕ್ಕನುಗುಣವಾಗಿ ರೂಪುಗೊಳ್ಳುವ ಕ್ರಿಮಿನಲ್‌ಗಳ ಕುತಂತ್ರಗಳು ಹೊಸ ಬಗೆಯ ಸವಾಲುಗಳನ್ನು ಒಡ್ಡುತ್ತಿರುತ್ತದೆ. ಹಾಗಾಗಿ ಎಲ್ಲಾ ಪ್ರಕರಣಗಳಿಗೂ ಈ ಪುಸ್ತಕ ಒಂದನ್ನೇ ನೆಚ್ಚಿಕೊಳ್ಳುವುದು ಸಾಕಾಗಲಿಕ್ಕಿಲ್ಲ ಎಂದು ಡಿಸ್ಕ್‌ಕ್ಲೈಮರ್ ಕೂಡ ಕೊಟ್ಟಿದ್ದಾರೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅಂತರ್ಜಾಲದ ಅಲೆದಾಟದಲ್ಲಿ ಜಾಗರೂಕತೆಯಿಲ್ಲದಿದ್ದರೆ ಪರದಾಟ
ಮುಖ್ಯವಾಗಿ ಈ ಪುಸ್ತಕದಲ್ಲಿ ತಿಳಿಸಿರುವುದೇನೆಂದರೆ ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ https://cybercrime.gov.in/ ನಲ್ಲಿ ದೂರು ಸಲ್ಲಿಸಿ. ಮೋಸದಿಂದ ಕಳೆದುಕೊಂಡ ಹಣವನ್ನು ಫ್ರೀಜ್ ಮಾಡಲು ಸಂಬಂಧಿಸಿದ ಬ್ಯಾಂಕ್‌ಗೆ ಕರೆ ಮಾಡಿ ತಿಳಿಸಿ. ನಿಮ್ಮ ಆಧಾರ್ ಕಾರ್ಡ್‌ನ್ನು ಲಾಕ್‌ಮಾಡಿ. ನಿಮ್ಮ ಖಾತೆಗಳ ಪಾಸ್‌ವರ್ಡ್/ಪಿನ್‌ಗಳನ್ನು ಬದಲಾಯಿಸಿ. ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗೆ ಏನಾದರೂ ಮಾಲ್‌ವೇರ್ ಅಥವಾ ವೈರಸ್ ದಾಳಿಯ ಅನುಮಾನವಿದ್ದರೆ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.
ಸೈಬರ್ ಕಾನೂನುಗಳ ಬಗ್ಗೆಯೇ ಒಂದು ಪ್ರತ್ಯೇಕ ಅಧ್ಯಾಯವನ್ನು ಕೊಟ್ಟಿರೋದು ಎಲ್ಲರಿಗೂ ಭಾರತೀಯ ಸೈಬರ್ ಕಾನೂನುಗಳ ಬಗ್ಗೆ ಒಂದು ಅವಲೋಕನವನ್ನು ಕೊಡುವುದರ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆ 2000 – 2008, ಭಾರತೀಯ ದಂಡ ಸಂಹಿತೆ ಅಥವಾ ಇಂಡಿಯನ್ ಪೀನಲ್ ಕೋಡ್ 1860 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಬಗ್ಗೆ ಸರಳವಾಗಿ ವಿವರಿಸಿದ್ದಾರೆ.
ಅಂತರ್ಜಾಲದಲ್ಲಿ ಅಂತರ್ಗತವಾಗಿರುವ ವಿವಿಧ ಮೋಸ ವಂಚನೆಗಳ ಕಾರ್ಯತಂತ್ರ ಮತ್ತು ಅದರ ಪರಿಹಾರಗಳನ್ನು ನಿಮಗೆ ಒಂದೇ ಕಡೆ ಸಿಗುವಂತೆ ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಕ್ರಿಪ್ಟೋಗ್ರಫಿ ಮತ್ತು ಸೈಬರ್ ಭದ್ರತೆ