ಆಧಾರ್ ನಮ್ಮ ದಿನನಿತ್ಯದ ವಹಿವಾಟಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಗುರುತಿನ ಚೀಟಿಯಾಗಿ, ಅಡ್ರಸ್ ಫ್ರೂಫ್ ಆಗಿ, ಮುಖ್ಯವಾಗಿ ಭಾರತೀಯ ಪೌರತ್ವವನ್ನು ದೃಢೀಕರಿಸುವ ದಾಖಲೆಯಾಗಿ ಬಳಕೆಯಲ್ಲಿದೆ. ಆಧಾರ್ ಒಂದು ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದ್ದು, ಇದನ್ನು 2009ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಇದು ಭಾರತದ ಎಲ್ಲಾ ಪ್ರಜೆಗಳಿಗೆ ಅವರ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಡೇಟಾವನ್ನು ಆಧರಿಸಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸುತ್ತದೆ. ವೈಯಕ್ತಿಕ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯ ಮೇಲಿನ ಕಾಳಜಿಯಿಂದಾಗಿ, ಆರಂಭದಲ್ಲಿ ಆಧಾರ್ ಬಳಕೆಯ ಬಗ್ಗೆ ಅನೇಕ ಅನುಮಾನಗಳಿದ್ದವು. ಅದೇ ಸಮಯದಲ್ಲಿ ಬಂದ ವರ್ಲ್ಡ್ ಎಕನಾಮಿಕ್ ಫೋರಂನ 2019ರ ಜಾಗತಿಕ ರಿಸ್ಕ್ ವರದಿಯ ಪ್ರಕಾರ, 2018ರಲ್ಲಿ ಆದ ಆಧಾರ್‌ನ ಮಾಹಿತಿ ಸೋರಿಕೆ ಪ್ರಪಂಚದಲ್ಲೇ ಅತಿ ದೊಡ್ಡ ಮಾಹಿತಿ ಸೋರಿಕೆ. ಆಗಸ್ಟ್ 2017 ಮತ್ತು ಜನವರಿ 2018ರ ನಡುವೆ, ಸುಮಾರು 110 ಕೋಟಿ ಭಾರತೀಯರ ಆಧಾರ್ ಸಂಖ್ಯೆಗಳು, ಹೆಸರುಗಳು, ಇಮೇಲ್ ವಿಳಾಸಗಳು, ಭೌತಿಕ ಸ್ಥಳಗಳು, ಫೋನ್ ಸಂಖ್ಯೆಗಳು ಮತ್ತು ಛಾಯಾಚಿತ್ರಗಳು ಡೇಟಾ ಉಲ್ಲಂಘನೆಗೆ ಗುರಿಯಾಗಿತ್ತು ಎಂದು ವಿಶ್ವದ ದೊಡ್ಡ ಆಂಟಿವೈರಸ್ ಸಂಸ್ಥೆಗಳಲ್ಲಿ ಒಂದಾದ ಅವಾಸ್ಟ್ ತನ್ನ ವರದಿಯಲ್ಲಿ ಹೇಳಿದೆ.
ಈ ಕಳವಳಗಳಿಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು 2019ರಲ್ಲಿ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯನ್ನು ಪರಿಚಯಿಸಿತು. ಇದು ಭಾರತದಲ್ಲಿ ವೈಯಕ್ತಿಕ ಡೇಟಾದ ಸಂಗ್ರಹಣೆ, ಬಳಕೆ ಮತ್ತು ವರ್ಗಾವಣೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಮಸೂದೆಯು ಪ್ರಸ್ತುತ ಪರಿಶೀಲನೆಯಲ್ಲಿದೆ ಮತ್ತು ಇನ್ನೂ ಕಾನೂನಾಗಿ ಅಂಗೀಕಾರವಾಗಲಿಲ್ಲ. ಅದನ್ನು ಪರಿಷ್ಕರಿಸಿ 2022ರಲ್ಲಿ ಸರ್ಕಾರ ಹೊಸದಾಗಿ ಮಸೂದೆಯನ್ನು ಮಂಡಿಸಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸರ್ಕಾರಿ ವಿಭಾಗಗಳಿಂದ ಮಾಹಿತಿ ಸೋರಿಕೆಯು ಕ್ರಮವಾಗಿ 2020ರಲ್ಲಿ 10, 2021ರಲ್ಲಿ 5 ಮತ್ತು 2022ರಲ್ಲಿ 7 ಎಂದು ಮಿನಿಸ್ಟರಿ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (MeitY)ಯ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನ ಎರಡನೆಯ ವಾರದಲ್ಲಿ ನೀವೂ ಒಂದು ವರದಿ ಓದಿರಬಹುದು. ದೆಹಲಿ ಪೊಲೀಸರು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್ ವ್ಯವಸ್ಥೆಯಲ್ಲಿನ ಹಲವಾರು ದೋಷಗಳನ್ನು ವಂಚಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಸೂಚನೆ ನೀಡಿದ್ದಾರೆ. ಬ್ಯಾಂಕ್ ವಂಚನೆ ಸೇರಿದಂತೆ ಕೆಲವು ಪ್ರಕರಣಗಳ ತನಿಖೆಯಲ್ಲಿ, ಆಧಾರ್ ಐಡಿಗಳನ್ನು ರಚಿಸುವಾಗ ಮುಖದ ಬಯೋಮೆಟ್ರಿಕ್‌ಗಳನ್ನು ಹೊಂದಿಕೆ ಮಾಡುತ್ತಿಲ್ಲ ಎಂಬ ಅಂಶ ತಿಳಿದುಬಂತು ಎಂದು ಹೇಳಿದ್ದಾರೆ. ಇದರಿಂದ ಆಧಾರ್‌ನಲ್ಲಿರುವ ಜನರ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿಲ್ಲ ಎಂಬ ಚರ್ಚೆ ಮತ್ತೆ ಹೊಗೆ ಆಡುತ್ತಿದೆ.
ಆಧಾರ್ ಆಧಾರಿತ ಫಿಂಗರ್‌ಪ್ರಿಂಟ್ ದೃಢೀಕರಣ ಮತ್ತು ವಂಚನೆಯ ಪ್ರಯತ್ನಗಳನ್ನು ವೇಗವಾಗಿ ಪತ್ತೆಹಚ್ಚಲು ಎಐ/ಎಂಎಲ್ ಆಧಾರಿತ ಹೊಸ ಭದ್ರತಾ ತಂತ್ರಜ್ಞಾನವನ್ನು ಆಂತರಿಕವಾಗಿ ಅಭಿವೃದ್ಧಿಪಡಿಸಿದೆ.
ಈಗ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬೇಕಾಗಿರುವುದರಿಂದ, ಆಧಾರ್‌ನ ಸುರಕ್ಷತಾ ನ್ಯೂನತೆಗಳು ಸೈಬರ್ ಕ್ರಿಮಿನಲ್‌ಗಳಿಗೆ ಪ್ಯಾನ್ ಮಾಹಿತಿಯನ್ನೂ ಬಹಿರಂಗಗೊಳಿಸುವ ಅಪಾಯವಿದೆ. ಈ ಸಂದರ್ಭದಲ್ಲಿ ನಿಮಗೆ ಸುಪ್ರೀಂ ಕೋರ್ಟಿನ ಒಂದು ತೀರ್ಪಿನ ಬಗ್ಗೆ ನೆನಪಿಸುತ್ತೇನೆ. ಸುಪ್ರೀಂ ಕೋರ್ಟ್‌ನ ಪ್ರಕಾರ ಯಾರೂ ಆಧಾರ್‌ಗೆ ಬೇಡಿಕೆ ಇಡುವಂತಿಲ್ಲ, ಬ್ಯಾಂಕ್‌ಗಳಿಗೂ ಬೇಡ. ನೀವು ಬೇರೆ ಯಾವುದೇ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗಳನ್ನು ಬಳಸಬಹುದು. DBT (ನೇರ ಲಾಭ ವರ್ಗಾವಣೆ) ಫಲಾನುಭವಿಯ ಹೊರತು ನೀವು ಆಧಾರ್ ಅನ್ನು ಹಂಚಿಕೊಳ್ಳಬೇಕಾಗಿಲ್ಲ ಎಂದು UIDAI ಹೇಳುತ್ತದೆ. ಅಷ್ಟು ಬೇಕಾದರೆ, ನೀವು ನಿಮ್ಮ ಆಧಾರ್‌ನ ಮಧ್ಯದ ಎಂಟು ಅಂಕೆಗಳನ್ನು ಮಸಕುಗೊಳಿಸಿ ಹಂಚಿಕೊಳ್ಳಬಹುದು. ಯಾರಾದರೂ ಒತ್ತಾಯಿಸಿದರೆ, ಇದರ ಬಗ್ಗೆ UIDAI ಏನು ಹೇಳುತ್ತದೆ (https://uidai.gov.in/kn/) ಎಂಬುದನ್ನು ಅವರಿಗೆ ತಿಳಿಸಿ ಹೇಳಿ.
ಆಧಾರ್‌ಗೆ ಸಂಬಂಧಿಸಿದ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳಿಗೆ ಸಂಭಾವ್ಯ ಪರಿಹಾರವಾಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ. ಈ ಬ್ಲಾಕ್ ಚೈನ್ ತಂತ್ರಜ್ಞಾನ ಎಂದರೇನು?
ಬ್ಲಾಕ್‌ಚೈನ್ ವಿಕೇಂದ್ರೀಕೃತ ಡಿಜಿಟಲ್ ಲೆಡ್ಜರ್ ಆಗಿದ್ದು ಅದರಲ್ಲಿ ಡೇಟಾವನ್ನು ಸುರಕ್ಷಿತ ಮತ್ತು ಟ್ಯಾಂಪರ್-ಪ್ರೂಫ್ ರೀತಿಯಲ್ಲಿ ಸಂಗ್ರಹಿಸಬಹುದು. ಮುಖ್ಯವಾಗಿ, ಬ್ಲಾಕ್‌ಚೈನ್ ಬಳಸುವ ಮೂಲಕ, ಆಧಾರ್‌ನಲ್ಲಿ ಸಂಗ್ರಹವಾಗಿರುವ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಬಹುದು ಮತ್ತು ಹ್ಯಾಕಿಂಗ್ ಮತ್ತು ಟ್ಯಾಂಪರಿಂಗ್‌ಗೆ ನಿರೋಧಕವಾದ ರೀತಿಯಲ್ಲಿ ಸುರಕ್ಷಿತಗೊಳಿಸಬಹುದು.
ಇದನ್ನೂ ಓದಿ: ಹೊಸ ಅಂಕಣ: ಸೈಬರ್ ಸೇಫ್ಟಿ: ಜಾಣರಾಗಿ, ಜಾಗರೂಕರಾಗಿರಿ!
ಒಬ್ಬ ವ್ಯಕ್ತಿಯ ಆಧಾರ್‌ನಲ್ಲಿ ಅಡಕವಾಗಿರುವ ವೈಯಕ್ತಿಕ ಮಾಹಿತಿ ಬ್ಲಾಕ್‌ಚೈನಿನಲ್ಲಿದ್ದರೆ ಆ ಸಂಗ್ರಹವನ್ನು ಭೇದಿಸಲು ಮತ್ತು ಬದಲಾಯಿಸಲು ಹ್ಯಾಕರ್‌ಗಳಿಗೆ ಬಹಳ ಕಷ್ಟವಾಗಿರುತ್ತದೆ. ಮಾಹಿತಿಯ ಸೋರಿಕೆ, ಡೇಟಾ ಉಲ್ಲಂಘನೆ ಮತ್ತು ಗುರುತಿನ ಕಳ್ಳತನದ ಅಪಾಯವನ್ನು ಸಮರ್ಥವಾಗಿ ಕಡಿಮೆ ಮಾಡುತ್ತದೆ. ಆಧಾರ್‌ನಲ್ಲಿ ಸಂಗ್ರಹವಾಗಿರುವ ಡೇಟಾಗೆ ಮಾಡಿದ ಬದಲಾವಣೆಗಳ ಬಗ್ಗೆ ಬ್ಲಾಕ್‌ಚೈನ್ ಟ್ಯಾಂಪರ್-ಪ್ರೂಫ್ ದಾಖಲೆಯನ್ನು ರಚಿಸುವ ಮೂಲಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.
ಬ್ಲಾಕ್‌ಚೈನ್ ತಂತ್ರಜ್ಞಾನ ಹಸ್ತಚಾಲಿತ ಪರಿಶೀಲನೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಡೇಟಾದಲ್ಲಿನ ದೋಷಗಳು ಮತ್ತು ಅಸಂಗತತೆಗಳ ಅಪಾಯವನ್ನು ಕಡಿಮೆ ಮಾಡಿ ಆಧಾರ್‌ನ ದಕ್ಷತೆ, ನಿಖರತೆಯನ್ನು ಹೆಚ್ಚಿಸುತ್ತದೆ.
ಆಧಾರ್‌ಗೆ ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರವನ್ನು ಕೊಡಲು ಪರಿಗಣಿಸಬೇಕಾದ ಕೆಲವು ಅಂಶಗಳು:
- ಇದಕ್ಕೆ ಹೊಸ ಪ್ರೋಟೋಕಾಲ್‌ಗಳು ಮತ್ತು ಬೇಕಾದ ಮೂಲಸೌಕರ್ಯಗಳ ಅಭಿವೃದ್ಧಿಯ ಅವಶ್ಯಕತೆ ಮತ್ತು ಭಾರತ ಸರ್ಕಾರ, ಖಾಸಗಿ ಕಂಪನಿಗಳು ಮತ್ತು ನಾಗರಿಕರ ಸಹಕಾರದ ಅಗತ್ಯವಿರುತ್ತದೆ.
- ಬ್ಲಾಕ್‌ಚೈನ್ ತಂತ್ರಜ್ಞಾನದ ವಿಸ್ತರತೆ (scalability) ಮತ್ತು ಕಾರ್ಯಕ್ಷಮತೆ, ವಿಶೇಷವಾಗಿ ಆಧಾರ್‌ನಷ್ಟು ದೊಡ್ಡ ವ್ಯವಸ್ಥೆಯಲ್ಲಿ ಇದುವರೆಗೂ ಯಾರೂ ಪರೀಕ್ಷಿಸಿಲ್ಲ.
- ಆಧಾರ್‌ಗಾಗಿ ಬ್ಲಾಕ್‌ಚೈನ್ ಅನ್ನು ಬಳಸಲು ಕಾನೂನು ಮತ್ತು ನಿಯಂತ್ರಕಗಳ ವ್ಯಾಪ್ತಿ ಮತ್ತು ಪರಿಣಾಮಗಳು, ಜೊತೆಗೆ ಮುಖ್ಯವಾಗಿ ಡೇಟಾ ರಕ್ಷಣೆ ಮತ್ತು ಗೌಪ್ಯತೆ ಕಾನೂನುಗಳಿಗೆ ಸಂಬಂಧಿಸಿದಂತೆ ಖಚಿತಪಡಿಸಬೇಕು.
ಇದೆಲ್ಲಾ ಕಾರ್ಯರೂಪಕ್ಕೆ ಬರುವವರೆಗೆ UIDAIಯ mAadhaar ಆಪ್ ಬಳಸಿಕೊಳ್ಳಿ. ಆಂಡ್ರಾಯ್ಡ್ ಮತ್ತು ಐಫೋನುಗಳಿಗೆ ಲಭ್ಯ. ಅನವಶ್ಯಕವಾಗಿ ಎಲ್ಲೆಂದರಲ್ಲಿ ಆಧಾರ್ ಬಳಸಬೇಡಿ. ನಿಮ್ಮ ಜಾಗ್ರತೆಯಲ್ಲಿ ನೀವಿರಿ.
ಇದನ್ನೂ ಓದಿ: ಗ್ಲೋಕಲ್ ಲೋಕ ಅಂಕಣ: ಎಐ ಇದೆ, ಚಾಟ್ ಜಿಪಿಟಿ ಬಂದಿದೆ, ಮುಂದೇನು?