Site icon Vistara News

ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ

bendre and kuvempu

ಯುಗಾದಿ ಹಬ್ಬ: ಬೇಂದ್ರೆ ಮತ್ತು ಕುವೆಂಪು ತೋರಿಸಿದ ದರ್ಶನ

ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ್ ಪ್ರಥಮೇsಹನಿ |
ಶುಕ್ಲಪಕ್ಷೇ ಸಮಗ್ರೇ ತು ತದಾ ಸೂರ್ಯೋದಯೆ ಸತಿ

ಚೈತ್ರಮಾಸದ ಮೊದಲ ಹಗಲು ಬ್ರಹ್ಮ ಪ್ರಜಾಪತಿ ಜಗತ್ತನ್ನು ನಂತರ ಎಲ್ಲಾ ಜೀವಿಗಳನ್ನು ಸೃಷ್ಟಿಮಾಡಿದ. ಈ ದಿವಸದಿಂದಲೇ ಸಂವತ್ಸರದ ಗಣನೆ ಪ್ರಾರಂಭವಾಯಿತು.

ಭಾರತೀಯ ಹಬ್ಬಗಳ ಪೈಕಿ ಯುಗಾದಿ ಹಬ್ಬಕ್ಕೆ ವಿಶಿಷ್ಟ ಸ್ಥಾನವಿದೆ. ಹಳ್ಳಿಗಳಲ್ಲಿ ಯುಗಾದಿ ಬಂತೆಂದರೆ ಮೊದಲು ಗಮನ ಹರಿಸುವುದು ಪಂಚಾಂಗ ಶ್ರವಣಕ್ಕಾಗಿ. ಬರುವ ವರ್ಷ ಮಳೆ ಬೆಳೆ ಹೇಗೆ, ದೇವಮಾನದ ಕೊಳಗದಲ್ಲಿ ಈ ಸಾರೆ ಎಷ್ಟು ಮಳೆ ಬರಬಹುದು, ಯುಗಾದಿಪುರುಷ ಈ ವರ್ಷ ಯಾವ ವಾಹನದ ಮೇಲೆ ಕುಳಿತು, ಯಾವ ದಿಕ್ಕಿನತ್ತ ಮುಖ ಮಾಡಿ ಹೊರಟಿದ್ದಾನೆ, ಆತನ ಮುಖಭಾವವೇನು, ಅವ ಹೊರಟ ದಿಕ್ಕು ನಮ್ಮೂರಿಗಂತೂ ಇಲ್ಲ ತಾನೆ, ಎನ್ನುವ ಚರ್ಚೆ ಮಳೆ ಬಂದು ಬಿತ್ತನೆಯ ಕಾರ್ಯದವರೆಗೂ ನಡೆಯುತ್ತಿತ್ತು. ಬೇರೆ ಎಲ್ಲಾ ಹಬ್ಬಗಳೂ ಸಂಭ್ರಮದ ಹಬ್ಬವಾದರೆ ಯುಗಾದಿಯ ವಿಶಿಷ್ಟತೆಯಿರುವುದು ಭವಿಷ್ಯದ ಆಶಾಗೋಪುರದ ಮೇಲೆ. ಸುಮಾರು ಅದುತನಕವೂ ಕೇಳದೇ ಇದ್ದ ಕೋಗಿಲೆಯ ಕುಹೂ ಇದ್ದಕ್ಕಿದ್ದಂತೆ ಕೇಳತೊಡಗಿದಾಗ ಬಿರು ಬೇಸಿಗೆಯಲ್ಲಿಯೂ ಮನಸ್ಸಿನಲ್ಲಿ ಹರ್ಷ ಮೂಡುತ್ತದೆ. ಹೂವು ಅರಳಿದಾಗ ಬೇಂದ್ರೆ ಅಜ್ಜ ನೆನಪಾಗುತ್ತಾರೆ. ಅವರ ಯುಗ ಯುಗಾದಿ ಕಳೆದರೂ ಎನ್ನುವ ಕವನವನ್ನು ಕೇಳಿಯೇ ಬೆಳೆದವರು ನಾವೆಲ್ಲ.

ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ಮುಂದಿನ ನಮ್ಮ ಬದುಕಿನಲ್ಲಿ ಸಿಗುವ ಆನಂದದೆಡೆಗೆ ಹೋಗುವ ಆಶಾವಾದವನ್ನು ಮೂಡಿಸಿಬಿಡುತ್ತದೆ. ಯುಗಾದಿಯ ದಿನ ಪಂಚಾಂಗದಲ್ಲಿ ಬರುವ ಮಳೆ ಬೆಳೆಗಳ ಭವಿಷ್ಯವನ್ನು ಕೇಳುವಾಗ ಆಗುವ ಆತಂಕವನ್ನೆಲ್ಲ ಸುಮ್ಮನೆ ಆಚೆ ದೂಡಿ ನಮ್ಮನ್ನು ಜೀವನ್ಮುಖಿಯಾಗಿ ಮಾಡುವ ಅಮೃತಸಿಂಚನ ಬೇಂದ್ರೆಯವರ ಈ ಕವನಕ್ಕಿದೆ. ಅವರ ಇನ್ನೊಂದು ಕವನ ʼಈ ಯುಗಾದಿʼ ಬದುಕಿನ ಪಕ್ವತೆಯನ್ನು ಸಾರುವ ಕವನ. ಅವರ ಎಪ್ಪತ್ತೈದನೆಯ ವಯಸ್ಸಿನಲ್ಲಿ ಬದುಕಿನಲ್ಲಿನ ಎಲ್ಲ ಏಳುಬೀಳುಗಳನ್ನು ನೋಡಿ ನೋವುಗಳ ಸಾಮ್ರಾಜ್ಯದ ಮೇಲೆ ಸಂತೃಪ್ತಿಯ ಬದುಕನ್ನು ಕಟ್ಟಿಕೊಂಡ ಹೊತ್ತು ಅದು. ಮಾನ ಸಮ್ಮಾನದ ಅಲೆಯಲ್ಲಿ ತೇಲಿ ಹೋಗದೇ,

“ಅವರವರಿಗೆ ಅವರ ಹಾದಿ I ನಿನಗೆ ನನಗೆ ಒಂದೆ ದಾದಿ I ಯುಗದ ಮಧ್ಯಬಿಂದು ಒಂದು IIʼ

ವೇದಾಂತವನ್ನಿಲ್ಲಿ ಅನಾವರಣಗೊಳಿಸುತ್ತಾರೆ. ಸಮಗ್ರ ಬ್ರಹ್ಮಾಂಡವೇ ಚಕ್ರದಂತೆ ತಿರುಗುತ್ತಿದೆ. ಅದರ ಯಾವುದೋ ಬಿಂದುವಿನಲ್ಲಿ ನಿಂತಿರುವ ನಾವುಗಳೆಲ್ಲರೂ ನಮ್ಮಿಂದಲೇ ಈ ಪ್ರಪಂಚ ಪ್ರಾರಂಭವಾಯಿತೆಂದುಕೊಳ್ಳುತ್ತೇವೆ. ಚಕ್ರದ ಪರಿಧಿಯ ಎಲ್ಲ ಬಿಂದುಗಳೂ ಆದಿ ಮತ್ತು ಅಂತ್ಯವೂ ಆಗಿರುತ್ತದೆ. ಯಾವ ಹಾದಿಯಲ್ಲಿಯೇ ಸಾಗಲಿ, ಕೊನೆಗೆ ತಲುವುವ ತಾಣ ಮಾತ್ರ ಒಂದೇ ಎನ್ನುವುದನ್ನು ಈ ಕವನದಲ್ಲಿ ಕವಿ ನಭವನ್ನು ದಿಟ್ಟಿಸಿ ಹೇಳುತ್ತಿದ್ದಾರೆ. ಬೇಂದ್ರೆಯವರ ಯುಗಾದಿ ಮತ್ತು ಈ ಯುಗಾದಿ ಎರಡೂ ಕವನಗಳಿಗೆ ಮುವತ್ತ್ನಾಲ್ಕು ವರ್ಷಗಳ ಅಂತರವಿದೆ. ಈ ಮಹಾನ್ ಕವಿಯ ಬದುಕಿನ ಕಥೆಗಳನ್ನೆಲ್ಲ ಕೇಳುವಾಗ ಅವರು ಅನುಭವಿಸಿದ ನೋವು, ಸಾಲಾಗಿ ಮಕ್ಕಳನ್ನು ಕಳೆದುಕೊಂಡ ದುಃಖ ಕಾವ್ಯವಾಗಿ “ನೀ ಹೀಂಗ ನೋಡಬೇಡ ನನ್ನ” ಎಂದು ಸ್ಫೋಟವಾಗಿ ಹೊರಬಂದಾಗಿನ ಸಂಗತಿ ಮೂಕರನ್ನಾಗಿಸುತ್ತದೆ; ಕ್ರೌಂಚಪಕ್ಷಿಯ ವಿರಹ ವಾಲ್ಮೀಕಿಯ ಬಾಯಲ್ಲಿ ಕಾವ್ಯವಾಗಿ ಹೊರಬಂದ ರೀತಿಯಂತೆ.

ಕೆರೆಮನೆ ಶಂಭು ಹೆಗಡೆಯವರು ನಿರ್ಯಾಣದ ರಾಮನಾಗಿ “ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು, ಮತ್ತಿನ್ನೇನು ಫಲವಿದೆ ನೀತಿಯೊಂದೆ ದೇವನೆನಿಸಿತು ಎನ್ನನು ಜಗದಲಿ” ಎಂದು ಅಭಿನಯಿಸುವಾಗ ರಾಮನ ಬದುಕಿನ ನೋವು ನಲಿವು ಎರಡರ ವಿಶ್ಲೇಷಣೆಯನ್ನು ಮಾಡುವ ಮತ್ತು ಈ ಅನುಭವಗಳನ್ನು ದಾಟಿ ತಲುಪುವ ಸ್ಥಿತಪ್ರಜ್ಞತೆಯ ಮನಸ್ಥಿತಿಯನ್ನು ವರ್ಣಿಸುತ್ತಿರುವಾಗ ಆ ಪಕ್ವತೆ ಬೇಂದ್ರೆಯವರಲ್ಲಿ ಕಾಣಬಹುದಾಗಿದೆ. ಈ ಪ್ರಪಂಚದಲ್ಲಿ ಜನಿಸಿರುವುದೆಲ್ಲವೂ ಎರಡು ಹಂತಗಳನ್ನು ಹೊಂದುತ್ತವೆ. ಒಂದನೆಯದು ಜೀವಿಸುವುದು. ಉಸಿರು ತುಂಬಿದಲ್ಲಿಂದ ಉಸಿರು ನಿಲ್ಲುವ ಕ್ಷಣದ ತನಕದ ಸವೆಸುವುದು. ಇನ್ನೊಂದು ಬದುಕುವುದು. ಬದುಕಿನಲ್ಲಿಯೂ ಜೀವವಿರುತ್ತದೆ. ಆದರೆ ಇಲ್ಲಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕಾಗುತ್ತದೆ. ಹಾಗೆ ಕಟ್ಟಿಕೊಂಡ ಬದುಕಿನಿಂದ ನಾವೇನಾಗುತ್ತೇವೆ ಎನ್ನುವುದು ಲೋಕ ನಮ್ಮನ್ನು ಗುರುತಿಸುವ ಕ್ರಮದಿಂದಾಗಿ.

ಈಗ ಹುಟ್ಟುಹಬ್ಬವನ್ನು ಆಚರಿಸುವುದರಿಂದ ಕಳೆದ ಆಯುಷ್ಯದ ನೆನಪಾಗುತ್ತದೆ. ಮೊದಲು ಯುಗಾದಿಯೇ ವ್ಯಕ್ತಿಗತ ಆಯುಷ್ಯವನ್ನೂ ಅಳೆಯುವ ಮಾನವಾಗಿತ್ತು. ಸಮಷ್ಟಿಯ ಬದುಕಿನ ಸುಖ ದುಃಖಗಳ ಆತ್ಮಾವಲೋಕನದ ಕಾಲ ಈ ಯುಗಾದಿ. ಇಳೆ ತನ್ನೊಡಲು ಬರಿದಾಯಿತು ಎಂದು ಯಾವತ್ತಿಗೂ ಅಳಲುವುದಿಲ್ಲ. ತನ್ನನ್ನಾಶ್ರಯಿಸಿ ಬದುಕಿರುವ ಪ್ರಾಣಿಗಗಳನ್ನು ಹೇಗೆ ಪೋಷಿಸಬೇಕೆನ್ನುವುದರ ಅರಿವು ನಿಸರ್ಗಕ್ಕಿದೆ. ಶಿಶಿರ ಋತುವಿನ ಚಳಿಗೆ ಹೆದರಿ ಎಲೆಗಳನ್ನೆಲ್ಲ ಕಳೆದುಕೊಂಡು ಬೋಳಾಗಿ ನೀರವ ಮೌನದಲ್ಲಿರುವಾಗ ಇದ್ದಕ್ಕಿದ್ದಂತೆ ಯಾವುದೋ ಚೇತನ ಅದರೊಳಗೆ ರಸವನ್ನು ಉಕ್ಕಿಸಿಬಿಡುತ್ತದೆ. ತನ್ನದೇ ಎಲೆಯನ್ನು ಹಣ್ಣಾಯಿತೆಂದು ಉದುರಿಸಿಕೊಂಡು ಅದನ್ನೇ ಗೊಬ್ಬರವನ್ನಾಗಿಸಿ ಚಿಗುರಿಗೆ ಪೋಷಣೆಯಾಗುವಿಕೆಯೇ ಚಿರಂಜೀವತ್ವ. ಇದೊಂದು ಋತುಚಕ್ರವೂ ಹೌದು. ಎಳೆಯ ಚಿಗುರಿನಲ್ಲಿ ಮರಕ್ಕೆ ಉಸಿರಾಗುವ ಜವ್ವನದಲ್ಲಿ ಆಹಾರ ಕೊಡುವ ಎಲೆಗಳು ಸೂರ್ಯನ ಕಿರಣಗಳನ್ನು ಹೀರಿ ಹೂವನ್ನು ಕಾಂಡವನ್ನು ರಕ್ಷಿಸಿ ಹೂವರಳಿಸಿ ನಂತರ ಅವಧಿ ಮುಗಿಯುವಾಗ ನಿರ್ಭಾವುಕವಾಗಿ ಮಣ್ಣಾಗುವ ಕ್ರಿಯೆಯಿದೆಯಲ್ಲ, ಅದೇ ಯುಗಾದಿ ನಮಗೆ ಕಲಿಸಿಕೊಡುವ ಪಾಠ. ಹೂವಿನಿಂದ ಮೊಗ್ಗು, ಮೊಗ್ಗಿನಿಂದ ಫಲ, ಫಲದೊಳಗಿನ ಬೀಜ, ಬೀಜದೊಳಗಿನ ಮರವೆನ್ನುವ ಇಲ್ಲಿ ಆದಿ ಅಂತ್ಯಗಳಿಲ್ಲ. ಇದನ್ನೇ ಬೇಂದ್ರೆಯವರು “ಯುಗದ ಮಧ್ಯಬಿಂದು ಒಂದು” ಎಂದು ವರ್ಣಿಸಿರುವುದು.

ಬೇಂದ್ರೆಯವರಿಗಿಂತ ಕುವೆಂಪು ಯುಗಾದಿಯನ್ನು ಗಮನಿಸುವ ಬಗೆ ಬೇರೆ ರೀತಿಯಲ್ಲಿ. ಕುವೆಂಪು ರಸಋಷಿ. ಬೇಂದ್ರೆ ಇಲ್ಲಿಂದ ಆಚೆಯ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. ನಾನು ನೀನು ಆನು ತಾನುಗಳಲ್ಲವೂ ಒಂದಾಗುವ ಏಕತ್ರ ಸ್ಥಿತಿ ಅವರದ್ದು. ಆದರೆ ಕುವೆಂಪು ಈ ಲೋಕದಲ್ಲಿನ ಬದುಕನ್ನು ಸಂಭ್ರಮಿಸುತ್ತಾರೆ. ಈ ಲೋಕ ನಶ್ವರವೆಂದು ಅವರಿಗೆ ಗೊತ್ತಿದೆ. ಆದರೂ ಇರುವಷ್ಟು ಕಾಲ ಇಲ್ಲಿ ಬದುಕಬೇಕು, ಜೀವಿಸುವುದಲ್ಲ ಎನ್ನುತ್ತಾರೆ. ಅವರ ಕಾವ್ಯವೆಂದರೆ ಅದು ದರ್ಶನ. ರಾಮಾಯಣದಲ್ಲಿನ ಮಂಥರೆಗೆ ಹೊಸ ರೂಪವನ್ನು ತೋರಿದವರು ಅವರು. ರಚ್ಚೆಹಿಡಿದು ಅಳುತ್ತಿದ್ದ ರಾಮನಿಗೆ ಕನ್ನಡಿಯೊಳಗಿನ ಚಂದ್ರನನ್ನು ತೋರಿಸಿ ನಗಿಸಿದವಳು. ಆಗ ನಕ್ಕ ರಾಮ ನಂತರ ಅಳಲೇ ಇಲ್ಲ. ರಾಮನ ನಗುವಿನ ಹಿಂದೆ ಇರುವುದು ಮಂಥರೆಯೆನ್ನುವ ಹೊಸ ಹೊಳವು ರಾಮಾಯಣ ದರ್ಶದಲ್ಲಿದೆ. ಬದುಕಿನಲ್ಲಿನ ನಶ್ವರತೆಯ ಅರಿವಿದ್ದೂ ಅದನ್ನು ಶಾಶ್ವತವೆನ್ನುವ ರೀತಿಯಲ್ಲಿ ಅನುಭವಿಸಬೇಕು ಎಂದು ಕುವೆಂಪು ಸಾರಿದ್ದಾರೆ. ಅದು ಸಾಲ ಮಾಡಿಯಾದರೂ ತುಪ್ಪ ತಿನ್ನುವ ಕ್ರಿಯೆಯಲ್ಲ; ಮನಸ್ಸಿನ ಶುದ್ಧತೆಯಿಂದ ಸಂಕಲ್ಪ ಮಾಡಿ ದೊರೆತಿರುವುದನ್ನು ಅನುಭವಿಸುವುದು. ಕುಡಿಯುವ ನೀರಿಗೆ ಗಂಗೋದಕವೆನ್ನುತ್ತಾರೆ. ಪೂಜೆಯಲ್ಲಿಯೂ ಅಭಿಷೇಕ ಮಾಡುವಾಗ ಗಂಗಾ, ಯಮುನಾ, ಗೋದಾವರಿ, ಸರಸ್ವತಿಯನ್ನು ಆಹ್ವಾನಿಸಿದ ಹಾಗೆ. ನೀನು ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದಂತೆ ಹಬ್ಬದ ದಿನ ನಾವು ಸ್ನಾನ ಮಾಡುವ ನೀರು ಅದು ಸುರಲೋಕದ ನದಿಯೇ ಆಗುತ್ತದೆ.

ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು

ಹೊಸ ಸಂವತ್ಸರ ಭೂಮಿಗೆ ಬಂದಾಗ ಮೈಮರೆಯಬೇಡ ಇದು ನಮಗೆ ದಕ್ಕಿರುವ ಭೋಗ ಎಂದು ಸಂತೋಷಪಡುವುದೇ ಬದುಕು. ಮನುಷ್ಯ ಬದುಬೇಕಾದರೆ ಹೃದಯವನ್ನು ತೆರೆದಿಡಬೇಕು. ಗೀತೆಯ ಘೋಷವೆನ್ನುವುದು ಅನೇಕ ಅರ್ಥಗಳನ್ನು ಕೊಡುತ್ತದೆ. ಅತಿಥಿಯೆಂದರೆ ಕರೆಯದೇ ಅಕಸ್ಮಾತಾಗಿ ಬರುವವನು, ಆತನನ್ನು ನೀನೆ ಕರೆ, ಕರ್ತವ್ಯವನ್ನು ಮಾಡು. ಫಲವಪೇಕ್ಷಿಸಬೇಡ ಎನ್ನುವುದಾಗಿದೆ. ಬರುವವ ಯಾರು ಎಂದು ಯೋಚಿಸದೇ ಹೃದಯವನ್ನು ಬಿಚ್ಚಿಡು. ನಿನ್ನ ನೀನು ಅರಿತುಕೊಂಡರೆ ಅದು ನಿನಗೆ ಅರ್ಥವಾದೀತು ಎನ್ನುತ್ತಾರೆ. ಸುರಲೋಕದ ಸಂಪತ್ತಿಗೆ ಶ್ರೀ ಎಂದು ಹೆಸರು. ಆ ಸಂಪತ್ತು ಬೇಕಾದರೆ ಇಲ್ಲಿ ಅನಿಕೇತರಾಗಬೇಕು. ರಸ ಸಿದ್ಧಿಯಾಗಬೇಕಾದರೆ ದೈವತ ಸಿದ್ಧಿ ಮತ್ತು ಮಾನುಷಿ ಸಿದ್ಧಿ ಎನ್ನುವ ಎರಡನ್ನೂ ಮೀರಬೇಕಾಗುತ್ತದೆ. ʼರಸೋ ವೈ ಸಃʼ ಎನ್ನುವುದು ಕುವೆಂಪು ಅವರ ಮೆಚ್ಚಿನ ವಿಷಯವೂ ಹೌದು.

ನಿಯತಿಕೃತ ನಿಯಮರಾಹಿತ್ಯ, ರಸಾನುಭವದ ಅಲೌಕಿಕತೆ, ಸಾಹಿತ್ಯದಲ್ಲಿ ಪ್ರತಿಮಾ, ಭೂಮಾನುಭೂತಿ ಮತ್ತು ಭವ್ಯತಾ ಅನುಭವದ ಮೀಮಾಂಸೆ, ರಸೋ ವೈ ಸಃ ಎನ್ನುವ ಕುವೆಂಪು ಬರೆದ ಐದು ಪ್ರಬಂಧಗಳನ್ನು ಓದಿದರೆ ಅವರ ಪ್ರತಿಯೊಂದು ಶಬ್ದಕ್ಕೂ ಹೊಸ ಹೊಸ ಅರ್ಥ ಹೊರಹೊಮ್ಮುತ್ತದೆ. ನೂತನ ಸಾಹಸವೆನ್ನುವುದು ಬದುಕಿನಲ್ಲಿಯ ಸೃಜನಶೀಲತೆಯನ್ನು ತೋರಿಸುತ್ತದೆ. ಕಳೆದು ಹೋದ ಭೂತವನ್ನು ನೆನಪಿಸಿ ಕೊರಗಬಾರದು. ಭೂತವೆನ್ನುವುದು ಅನುಭವಕ್ಕಷ್ಟೇ ಸೀಮಿತವಾಗಿರಲಿ, ಭವಿಷ್ಯವೆನ್ನುವುದು ಸಂಭವ; ಹೀಗಾದರೆ ಹಾಗಾಗಬಹುದೆನ್ನುವ ಆಶಾವಾದ, ಈ ಎರಡರೆ ನಡುವೆ ಗತದ ಅನುಭವದ ನೆಲೆಯಲ್ಲಿ ಪಾಪ ಪುಣ್ಯವನ್ನು ನಮ್ಮಂತರಂಗದಲ್ಲಿ ಶೋಧಿಸಿ ನಾವೇ ಅದನ್ನು ಸುಟ್ಟುಬಿಡಬೇಕು. ನೀರು ತೊರೆಯಾಗಿ ಹರಿಯುವಾಗ ಕೊಳೆಯನ್ನೆಲ್ಲ ಕೊಚ್ಚಿ ಶುದ್ಧವಾಗುತ್ತಾ ಹೋಗುವಂತೆ ಅಪಮಾನವನ್ನು ಮರೆತುಬಿಡು, ಇದು ಹಾವು ಪೊರೆಯನ್ನು ಬಿಡುವಂತೆ ಅಲ್ಲ; ಅದು ಲೌಕಿಕ, “ವಾಸಾಸಿ ಜೀರ್ಣಾನಿ ಯಥಾ ವಿಹಾಯ” ಎನ್ನುವ ಗೀತೆಯ ಸೂಕ್ತದ ಆಶಯವಿದು. ಯಾವುದೂ ನಾನಲ್ಲ; ನನಗೆ ಯಾವುದೂ ಇಲ್ಲವೆನ್ನುವಾಗ, ಅವರಲ್ಲಿನ ರಾಮಕೃಷ್ಣಾಶ್ರಮದ ಪ್ರಭಾವವನ್ನು ಗಮನಿಸಬಹುದು. ನವ ವತ್ಸರದಲ್ಲಿ ನವ ಬಾಳನ್ನು ಬಾಳಬೇಕೆನ್ನುವ ಸತ್-ಚಿಂತನೆ ಇಲ್ಲಿದೆ.

ಅವರ ಕಾವ್ಯದಲ್ಲಿ ಮಾರ್ಗದ ನಡೆ ತೂಗಿ ತೊನೆದಾಡುತ್ತಿರುವಾಗ ತಾನು ನೆಲದ ಕವಿಯೆನ್ನುವುದನ್ನು ಅವರು ಮರೆಯುವುದಿಲ್ಲ. ದೇಸಿ ನುಡಿಗಟ್ಟನ್ನೂ ಅವರು ಇದೇ ಗೇಯತೆಯಲ್ಲಿ ತರಬಲ್ಲರು. ಅದನ್ನೇ ಇಲ್ಲಿ “ಉರಿಯಲಿ ಸತ್ಯದ ಊದಿನ ಕಡ್ಡಿ I ಚಿರ ಸೌಂದರ್ಯದ ಹಾಲ್ಮಡ್ಡಿ IIʼʼ ಎಂದಿದ್ದಾರೆ. ಊದಿನ ಕಡ್ಡಿ ಸರಳ ಭಕ್ತಿಯ ಪ್ರತೀಕವಾದರೆ ಹಾಲು ಮತ್ತು ಮಡ್ಡಿ ಜನಸಾಮಾನ್ಯರ ಅನ್ನ. ಬೇಂದ್ರೆಯವರೂ ಪ್ರಕೃತಿ ಹೊಸ ವರುಷಕೆ ಹೊಸ ಹರುಷವನ್ನು ತರುತ್ತದೆ ಎನ್ನುತ್ತಾ ಸಂಭ್ರಮಿಸುತ್ತಾರೆ. ಅವರು ತಮ್ಮನ್ನೇ ತೆರೆದಿಟ್ಟುಕೊಳ್ಳುತ್ತಾ ನಾನೇರುವ ಎತ್ತರಕ್ಕೆ ನೀನೇರು ಎನ್ನುವಂತೆ ಬೆಳೆಯುತ್ತಾ ಹೋಗುತ್ತಾರೆ. ಇನ್ನೇನು ಬೇಂದ್ರೆ ಕೈಗೆ ಸಿಕ್ಕಿದರೂ ಎನ್ನುವಾಗ ನಮಗೆ ದಕ್ಕದೇ ಹತ್ತಂಗುಲದಾಚೆ ಬೆಳೆಯುತ್ತಾರೆ. ಕುವೆಂಪುವಿನ ಸೆಲೆಯೂ ಹಾಗೇ ಆಳವನ್ನು ಹುಡುಕುವಾಗ ಅದರಾಚೆಯೇ ಇರುತ್ತಾರೆ. ಈ ಇಬ್ಬರನ್ನೂ ಅಳೆಯುವದೆಂದರೆ ಅದು ಬ್ರಹ್ಮ ಮತ್ತು ವಿಷ್ಣು ಶಿವಲಿಂಗವನ್ನು ಅಳೆದಂತೆ. ಪಾತಾಳದಾಚೆ, ಬ್ರಹ್ಮಾಂಡವನ್ನು ದಾಟಿ ಇಬ್ಬರೂ ನಿಲ್ಲುತ್ತಾರೆ.

ಜೀವನದಲ್ಲಿ ಅದಿಲ್ಲ ಇದಿಲ್ಲ ಎಂದು ಕೊರಗುವುದಲ್ಲ, ಮುಂದೆ “ಮಾವಿನ ಬೇವಿನ ತೋರಣ ಕಟ್ಟು, ಬೇವುಬೆಲ್ಲಗಳನೊಟ್ಟಿಗೆ ಕುಟ್ಟು! ಜೀವನವೆಲ್ಲಾ ಬೇವೂಬೆಲ್ಲ; ಎರಡೂ ಸವಿವನೆ ಕಲಿ ಮಲ್ಲ!” ಎಂದಿದೆ. ಮಾವು ರಸದ ಸಂಕೇತ, ಬೇವು ಆರೋಗ್ಯದ ಸಂಕೇತ, ಹಾಗಾಗಿ ಸುಖ ದುಃಖಗಳನ್ನೆಲ್ಲ ಮೆಟ್ಟಿ ನಿಲ್ಲುವವನೇ ಕಲಿ ಆತನೇ ಮಲ್ಲ ಎನ್ನುವ ಹೊಸಪಥವನ್ನು ತೋರಿಸುತ್ತಾರೆ. ಮರದಲ್ಲಿ ಹೋವು ತುಂಬಿದ ಕೂಡಲೇ ಜೇನು ಬರುವುದು ಸಹಜದ ಕ್ರಿಯೆ. ಅದನ್ನು ನೋಡಿ ಆನಂದಿಸುವ ಮನಸ್ಸು ನಮಗಿರಬೇಕು. “ಮಧುವಾತಾ ಋತಾಯತೇ ಮಧುಕ್ಷರಂತಿ ಸಿಂಧವಃ” ಗಾಳಿ ಮಧುರವಾಗಿ ಬೀಸಲಿ, ನದಿಗಳೆಲ್ಲ ಮಧುರವಾಗಿ ಹರಿಯಲಿ ಎನ್ನುವ ಆರ್ಷೇಯದ ಆಶಯವಿಲ್ಲಿದೆ. ಭೂಮಿಯನ್ನು ಗಂಧವತಿ ಎನ್ನುತ್ತಾರೆ. ಈ ಗಂಧವತಿಯ ಎಲ್ಲವೂ ಮಧುಮಧುರವಾಗಿ ನಮ್ಮನ್ನು ಆಹ್ಲಾದಗೊಳಿಸಲಿ ಎನ್ನುವುದನ್ನು ಮುಂದಿನ ಸಾಲು “ಜೀವನವೆಂಬುದು ಹೂವಿನ ಬೀಡು; ಕವಿಯದೇ ಹೆಜ್ಜೇನಿನ ಬೀಡು” ವರ್ಣಿಸಲಾಗಿದೆ.

ಯುಗಾದಿಯ ನಂತರ ಬರುವ ಚೈತ್ರ ಮತ್ತು ವೈಶಾಖವನ್ನು ಮಧುಮಾಸವೆಂದು ಕರೆಯುತ್ತಾರೆ. ಪ್ರಕೃತಿ ಒಣದಾಗಿದ್ದರೂ ಹೂವು ನಳನಳಿಸುತ್ತದೆ. ಹೀಗೆ ನಮ್ಮ ನಡೆ ನುಡಿಗಳೆಲ್ಲವೂ ಮಧುರವಾಗಿದ್ದರೆ ಲೋಕ ನಮ್ಮನ್ನು ತಾನೇ ತಾನಾಗಿ ಮೆಚ್ಚಿಕೊಳ್ಳುತ್ತದೆ. ಕಾಳಿದಾಸನ ಖಂಡಕಾವ್ಯ ಋತುಸಂಹಾರದಲ್ಲಿ ವಸಂತಋತುವಿನ ಕುರಿತು ಸುಂದರವಾದ ವರ್ಣನೆಯಿದೆ. ಪ್ರಣಯಿಗಳ ಮನಸ್ಸನ್ನು ಸೆರೆಹಿಡಿಯಲು ಮಾಂದಳಿರ ಬಾಣದೊಡನೆ ವಸಂತ ಬರುತ್ತಾನೆ ಎನ್ನುವ ಮೂಲಕ ಮಧುಮಾಸವನ್ನು ವಿವರಿಸುತ್ತಾನೆ. ಸಂಹಾರವೆಂದರೆ ಜೋಡಿಸುವುದು, ಹೆಣೆಯುವುದು ಎನ್ನುವ ಅರ್ಥವಿದೆ. ಹಿಂದಿನ ಋತುವಿನಿಂದ ಮುಂದಿನ ಋತುವಿಗೆ ಹೆಣೆದುಕೊಳ್ಳುವುದು ಎನ್ನುವ ಅರ್ಥವನ್ನೂ ಕುವೆಂಪು ತೆರೆದಿರಿಸುತ್ತಾರೆ.

ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!

ಕೊನೆಯ ನುಡಿಗಳನ್ನು ಗಮನಿಸಿ. ಇಲ್ಲಿ ಯುಗಾದಿಗೂ ಕವಿಗೂ ಇರುವ ಸಂಬಂಧದಿಂದಾಗಿ ಯುಗಾದಿಯೇ ಧನ್ಯವಾಗಬೇಕು; ಯಾಕೆಂದರೆ ಅದಕ್ಕೆ ಕವಿಯೊಲ್ಮೆಯಿರುವುದರಿಂದ. ಕವಿಯೆಂದರೆ ಮೇಧಾವಿ, ಕ್ರಾಂತದರ್ಶನವುಳ್ಳವನು ಎನ್ನುವ ಅರ್ಥಗಳಿವೆ. ಅಕ್ಷರಗಳ ಕ್ರಮಬದ್ಧ ಜೋಡಣೆ ಶಬ್ದ. ಧ್ವನ್ಯಾರ್ಥವಾಗಿ ಗೇಯತೆಯನ್ನು ಕೊಟ್ಟರೆ ಅದು ಕಾವ್ಯ. ಈ ಶಕ್ತಿ ಬರುವುದು ಕವಿಯಿಂದ ಮಾತ್ರ ಸಾಧ್ಯ. ಹಾಗಾಗಿ ಕವಿಯ ಒಲುಮೆ ಇಲ್ಲದೇ ಯಾವುದಕ್ಕೂ ಅರ್ಥ ಸಿಗಲಾರದು.

ಕಾವ್ಯವೆನ್ನುವುದೇ ರಸಸೃಷ್ಟಿ. ರಸ ಸೃಷ್ಟಿಯಲ್ಲಿ “ತನ್ನಾಶಸ್ಯ ನಾಶಸ್ಯ”ವೆನ್ನುವ ಮಾತಿದೆ. ಕವಿ ಕಾವ್ಯದಲ್ಲಿ ಮುಳುಗಿ ಹೋಗಕೂಡದು. ಆದರೆ ಕಾವ್ಯ ಕವಿಯನ್ನು ಮರೆಯಿಸಿಬಿಡಬೇಕು. ಕಾವ್ಯವನ್ನು ಬರೆದ ಕವಿ ಮತ್ತು ಓದುಗನ “ಆವರಣ ಭಂಗವಾಗಬೇಕು”. ದ. ರಾ. ಬೇಂದ್ರೆ ಮತ್ತು ಕುವೆಂಪು ಇಬ್ಬರೂ ಇಂಥ ಸಾಧ್ಯತೆಯನ್ನು ಮೀರಿನಿಂತ ಕವಿಗಳು.

ಯುಗಾದಿಯೆಂದರೆ ಕಾಲದ ಗಣನೆ ಪ್ರಾರಂಭವಾದ ದಿನ. ಆದರೆ ಕಾಲವನ್ನು ದೇಶವನ್ನೂ ದಾಟಿಸಿ ನಮ್ಮೊಳಗಿನ ತನನವನ್ನು ಈ ಇಬ್ಬರು ರಸಋಷಿಗಳು ನಾಡಿಗೆ ತಮ್ಮ ನುಡಿಗಳ ಮೂಲಕ ಹಂಚಿದ್ದಾರೆ.

Exit mobile version