ಮಾತು ಮರೆತ ದಶರಥ
ವಿಪ್ರೋಷಿತಶ್ಚ ಭರತೋ ಯಾವದೇವ ಪುರಾದಿತಃ.
ತಾವದೇವಾಭಿಷೇಕಸ್ತೇ ಪ್ರಾಪ್ತಕಾಲೋ ಮತೋ ಮಮ৷৷ಅ.4.25৷৷
ಮೇಲಾಗಿ ಭರತನು ಈ ಸಮಯದಲ್ಲಿ ಪಟ್ಟಣದಿಂದ ದೂರವಿರುವನು. ನನ್ನ ಅಭಿಪ್ರಾಯದಂತೆ (ಆತನು ಹಿಂತಿರುಗಿ ಬರುವುದರೊಳಗಾಗಿ) ಈ ಸಮಯವೇ ನಿನ್ನ ಪಟ್ಟಾಭಿಷೇಕಕ್ಕೆ ಯೋಗ್ಯ ಪ್ರಾಪ್ತಕಾಲವಾಗಿದೆ.
ರಾಮಾಯಣದಲ್ಲಿ ದಶರಥನ ಮೇಲೆ ಇರುವ ಬಹುದೊಡ್ಡ ಆಪಾದನೆ ಎಂದರೆ ಆತ ಕೈಕೇಯಿಯನ್ನು ಮದುವೆಯಾಗುವ ಮೊದಲು ಆಕೆಯ ತಂದೆಯಾದ ಅಶ್ವಪತಿ ಮಹಾರಾಜನಿಗೆ “ಕೈಕೇಯಿಯ ಮಕ್ಕಳಿಗೆ ಕೋಸಲ ರಾಜ್ಯವನ್ನು ಕನ್ಯಾಶುಲ್ಕವಾಗಿ ಕೊಡುತ್ತೇನೆ” ಎನ್ನುವ ಭಾಷೆಯನ್ನು ಕೊಟ್ಟು ಮದುವೆಯಾಗಿದ್ದಾನೆ. ಅದನ್ನು ಮರೆಮಾಚಿ ರಾಮನಿಗೆ ಪಟ್ಟವನ್ನು ಕಟ್ಟಲು ಹೊರಟಿದ್ದಾನೆ. ಭಾಷೆಯ ವಿಷಯ ಆತನ ನಂಬಿಗಸ್ಥ ಮಂತ್ರಿಯಾದ ಸುಮಂತ್ರನಿಗೂ ಗೊತ್ತಿತ್ತು. ವಂಚನೆಯಿಂದ ಹೂಡಿದ ಈ ಕಾರಣಕ್ಕಾಗಿಯೇ ರಾಮನಿಗೆ ಪಟ್ಟಾಭಿಷೇಕದ ಯೋಗ ಮುರಿದು ಕಾಡಿಗೆ ಹೋಗಬೇಕಾಗಿ ಬಂತು. ರಾಮನಿಗೆ ಪಟ್ಟಗಟ್ಟುವ ನಿರ್ಣಯವನ್ನು ತೆಗೆದುಕೊಂಡಾಗ ದಶರಥ ಮೇಲೆ ಉಲ್ಲೇಖಿಸಿರುವ ಶ್ಲೋಕವನ್ನು ತನ್ನ ಮಗ ರಾಮನಲ್ಲಿ ಹೇಳಿರುವುದು. “ಭರತನೇನಾದರೂ ಕೇಕಯದಿಂದ ಬಂದುಬಿಟ್ಟರೆ ಕಷ್ಟವಾಗಿಬಿಡುತ್ತದೆ. “ಭವನ್ತಿ ಬಹು ವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಮಹಾಕಾರ್ಯಗಳಾಗಬೇಕಾದರೆ ಬಹುವಿಧವಾದ ವಿಘ್ನಗಳು ಎದುರಾಗುತ್ತವೆ. ಹಾಗಾಗಿ ಭರತನ ವಿಷಯದಲ್ಲಿ ಆಲೋಚನೆ ಮಾಡದೇ ನೀನು ನಾಳೆಯೇ ಪಟ್ಟವನ್ನು ಏರಲೇ ಬೇಕು ಎನ್ನುವ ಜಾಗರೂಕತೆಯ ಮಾತುಗಳು ಇಲ್ಲಿವೆ.
ರಾಮನೂ ಮೌನವಾಗಿ ಈ ಮಾತುಗಳಿಗೆ ಅನುಮತಿಯನ್ನು ಸೂಚಿಸಿ ಮುಂದಿನ ಸಿದ್ಧತೆಗಾಗಿ ತೆರಳುತ್ತಾನೆ. ಈ ಸಂಭಾಷಣೆಗಳಿಗೆ ಅರ್ಥವನ್ನು ಹುಡುಕುವುದಾದರೆ ದಶರಥನ ರಾಜತ್ವದ ಹೊಣೆಯನ್ನು ಮತ್ತು ನಿಭಾಯಿಸಬೇಕಾದ ಕರ್ತವ್ಯಗಳನ್ನು ವಿವೇಚಿಸುವುದೊಳ್ಳೆಯದು. ಇಬ್ಬರು ರಾಣಿಯರನ್ನು ಮದುವೆಯಾದರೂ ಆತನಿಗೆ ಸಂತಾನ ಭಾಗ್ಯವಿರಲಿಲ್ಲ. ಬಹು ದೀರ್ಘಕಾಲ ರಾಜ್ಯವನ್ನಾಳಿದ ದಶರಥನಿಗೆ ಕೊನೆ ಕೊನೆಗೆ ರಾಜತ್ವದ ಹೊಣೆಯ ಕುರಿತು ಉದಾಸೀನ ಭಾವ ಬಂದುಬಿಟ್ಟಿತ್ತು. ಆತ ಕೊನೆಯ ಪ್ರಯತ್ನವೆನ್ನುವಂತೆ ಕೇಕಯ ರಾಜ ಅಶ್ವಪತಿಯಲ್ಲಿ ಹೋಗಿ ವಧುವನ್ನು ಬೇಡಿದ್ದ. ಪರಾಕ್ರಮಶಾಲಿ ಮತ್ತು ಪ್ರತಿಷ್ಠಿತ ಮನೆತನಕ್ಕೆ ಕನ್ಯೆಯನ್ನು ಕೊಡಲು ಅಶ್ವಪತಿಗೆ ಗೊಂದಲವುಂಟಾಗಿದೆ. ಇಲ್ಲ ಎನ್ನುವ ಹಾಗೆಯೂ ಇಲ್ಲ, ಕೊಟ್ಟರೆ ತನ್ನ ಮಗಳ ಭವಿಷ್ಯ ಹೇಗೋ ಎನ್ನುವ ಚಿಂತೆ.
ಹಾಗಾಗಿ ತಂದೆಯಾಗಿ ತನ್ನ ಮಗಳ ಸಂತಾನದ ಭದ್ರತೆಯ ಕುರಿತು ಪ್ರಶ್ನಿಸಿದ್ದರೆ ಅದು ಸಹಜ. ಹೇಗೂ ಮೊದಲ ಇಬ್ಬರ ಪತ್ನಿಯರಿಗೆ ಸಂತಾನ ಆಗಿಲ್ಲ. ಹಾಗಾಗಿ ಕೈಕೇಯಿಗೆ ಮಕ್ಕಳಾದರೆ ಸಹಜವಾಗಿಯೇ ಅವಳ ಮಕ್ಕಳಿಗೇ ದೊರೆತನ ಪ್ರಾಪ್ತವಾಗುತ್ತದೆ. ಸೂರ್ಯವಂಶದ ಅರಸು ಮನೆತನವಾಗಿರುವುದರಿಂದ, ಧರ್ಮಿಷ್ಟರಾದ ವಸಿಷ್ಠರು, ವಾಮದೇವ ಮುಂತಾದವರಿರುವುದರಿಂದ ರಾಜನಾಗಲು ಬೇಕಾಗಿರುವ ಅರ್ಹತೆಯ ವಿಷಯದಲ್ಲಿ ಯಥಾಯೋಗ್ಯವಾಗಿ ಅವರು ಸಿದ್ಧ ಮಾಡುತ್ತಾರೆ. ಹಾಗಾಗಿ ಕೋಸಲ ರಾಜ್ಯವನ್ನು ಕನ್ಯಾಶುಲ್ಕವಾಗಿ ದಶರಥ ಕೊಟ್ಟಿರುವುದು ಕಾಲೋಚಿತವಾಗಿ ಆಗಿರುವುದರಲ್ಲಿ ಯಾವ ಸಂದೇಹವೂ ಇಲ್ಲ. ಪ್ರಶ್ನೆ ಬಂದಿರುವುದು ರಾಮ ಪಟ್ಟಾಭಿಷೇಕದ ವಿಷಯದಲ್ಲಿ ದಶರಥ ತನ್ನ ಮಾತನ್ನು ಯಾಕೆ ನಡೆಸಿಲ್ಲವೆನ್ನುವುದು.
ಕಾವ್ಯವನ್ನು ವಿವೇಚಿಸಬೇಕಾದಾಗ ಕವಿಯ ಆಲೋಚನೆಯನ್ನು ಅಥವಾ ಆತ ಪಾತ್ರವನ್ನು ಸಮರ್ಥವಾಗಿ ನಿರೂಪಿಸಿಲ್ಲವೆಂದು ಟೀಕೆ ಮಾಡುವುದಲ್ಲ. ಕಾವ್ಯದ ತಿರುಳು ತರ್ಕದಲ್ಲಿ ಇರುವುದಿಲ್ಲ. ಬಿ. ಎಚ್. ಶ್ರೀಧರ ಅವರು ಸಾಹಿತ್ಯ ವಿಮರ್ಶೆಯ ಕುರಿತು “Logic of beauty-ರಸತರ್ಕವು ಪ್ರಸ್ತುತವಲ್ಲದೇ, Beauty of Logic-ಶುದ್ಧ ತರ್ಕದ ಸೌಂದರ್ಯವಲ್ಲ” ಎನ್ನುತ್ತಾರೆ. (ಕಾವ್ಯ ಸೂತ್ರ- ಬಿ. ಎಚ್. ಶ್ರೀಧರ) ರಾಮಾಯಣವನ್ನು ಆಸ್ವಾದಿಸಬೇಕಾದರೆ ಮೊದಲು ರಾಮನ ಪಟ್ಟಾಭಿಷೇಕದ ಸಂದರ್ಭವನ್ನು ಗಮನಿಸಬೇಕು. ಶ್ರೀರಾಮ ಪಟ್ಟಾಭಿಷೇಕವೆನ್ನುವುದು ರಾಮಯಣದ ಮಹತ್ವದ ಘಟ್ಟ. ಹಿರಿಯ ಮಗನಾಗಿ ರಾಮ ಪಟ್ಟವನ್ನೇರಿ ರಾಜನಾಗಿದ್ದರೆ ಸೂರ್ಯವಂಶದ ಮತ್ತೋರ್ವ ದೊರೆಯಾಗಿ ಮರೆಯಾಗುತ್ತಿದ್ದ. ರಾಮಾಯಣ ಕಾವ್ಯವೇ ಇರುತ್ತಿರಲಿಲ್ಲ. ರಾಮನ ಪಟ್ಟಾಭಿಷೇಕ ಭಂಗವಾಗಲೇ ಬೇಕಿತ್ತು. ಆದರೆ ಅದಕ್ಕಿರುವ ನಾಟಕೀಯ ತಿರುವು ಮಾತ್ರ ಯಾವ ಕಾಲಕ್ಕೂ ಪ್ರಸ್ತುತವಾದಂತವು.
ರಾಮಾಯಣ ಮನುಷ್ಯನ ಸಿಟ್ಟು, ಈರ್ಷ್ಯೆ, ಸೆಡವು, ದುಃಖ, ಸಂತಸಗಳನ್ನೆಲ್ಲವನ್ನು ಒಳಗೊಂಡಿದೆ. ಮಾನವ ಸಹಜವಾದ ದೌರ್ಬಲ್ಯ ಕಾವ್ಯಕುಂಚದಲ್ಲಿ ಕಲಾತ್ಮಕವಾಗಿ ಅರಳಿದೆ. ಎಲ್ಲವೂ ಸಹಜವಾಗಿ ನಡೆಯಿತು ಎನ್ನುವಾಗ ಅನಿರೀಕ್ಷಿತವಾದ ತಿರುವುಗಳು ರಾಮಾಯಣದಲ್ಲಿ ಬರುವಷ್ಟು ಬೇರೆ ಕಾವ್ಯದಲ್ಲಿ ಬರುವುದಿಲ್ಲ. ಮಹಾಭಾರತದ ಕಷ್ಟಗಳೆಲ್ಲವೂ ಮನುಷ್ಯನ ದೌರ್ಬಲ್ಯದ ಮೂಲದವು. ಅಲ್ಲಿ ಯಾರೂ ಆದರ್ಶರಾಗಿ ಕಾಣಿಸುವುದಿಲ್ಲ. ಅನುಕರಣೀಯರೂ ಆಲ್ಲ. “ರಾಮನ ನಡೆಯನ್ನು ಅನುಸರಿಸು, ಕೃಷ್ಣನ ತತ್ತ್ವವನ್ನು ಅರಿತು ಅನುಸರಿಸು” ಎನ್ನುವ ಗಾದೆ ರೂಢಿಯಲ್ಲಿದೆ. ರಘುಕುಲದ ಘನತೆಯ ದೊರೆ ಮಕ್ಕಳಿಲ್ಲದೇ ಬಹಳಕಾಲ ನೊಂದು ನಂತರ ಮಕ್ಕಳನ್ನು ಪಡೆದ. ಯಜ್ಞದಲ್ಲಿ ಮಹಾಪುರುಷನೇ ದೇವನಿರ್ಮಿತ ಪಾಯಸವನ್ನು ತಂದು ಕೊಟ್ಟಮೇಲೆ ತನ್ನಮಕ್ಕಳು ದೈವಾಂಶ ಸಂಭೂತರು ಎನ್ನುವ ಅರಿವು ದಶರಥನಿಗೆ ಆಗಬೇಕಿತ್ತು. ಅದಾಗಲಿಲ್ಲ. ತಾನೋರ್ವ ದೊರೆ ಎನ್ನುವುದನ್ನು ಮರೆತು ಲೋಕದ ಸಾಮಾನ್ಯ ತಂದೆಯಂತೆ ವರ್ತಿಸುತ್ತಿದ್ದ. ಅಶ್ವಮೇಧ ಯಾಗದಲ್ಲಿ ಎಲ್ಲವನ್ನೂ ದಾನಮಾಡಿ ಜಿತೇಂದ್ರಿಯತ್ವವನ್ನು ಪಡೆದಿರಬೇಕಾದ ರಾಜನಲ್ಲಿ ಮಕ್ಕಳ ಅದರಲ್ಲಿಯೂ ರಾಮನ ಮೇಲಿನ ಮೋಹವನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ.
ಶಿವಧನುಸ್ಸನ್ನು ರಾಮ ಮುರಿಯುವಾಗ ದಶರಥ ಅಲ್ಲಿ ಇರಲಿಲ್ಲ. ಪರಶುರಾಮರು ಎದುರಾದಾಗ ವೈಷ್ಣವ ಧನಸ್ಸನ್ನು ಭಂಗಿಸಿದ ರಾಮನ ಪರಾಕ್ರಮವನ್ನು ಅಲ್ಲೇ ಇದ್ದೂ ಸಹ ದಶರಥ ನೋಡಲಿಲ್ಲ. ರಾಮನ ದಿವ್ಯ ರೂಪವನ್ನು ನೋಡುವ ಭಾಗ್ಯ ದಶರಥನಿಗೆ ಇಲ್ಲದೇ ಹೋಯಿತು. ಆತ ತನ್ನ ಕುಲದ ಅಭ್ಯುದಯಕ್ಕೆ ಮಕ್ಕಳನ್ನು ಬಯಸಿದ್ದ. ಹಾಗಾಗಿ ರಾಮನನ್ನು ಆತ ಕೇವಲ ಮುಪ್ಪಿನ ಕಾಲದಲ್ಲಿ ದೊರೆತ ಅಪೂರ್ವ ನಿಧಿಯಾಗಿ, ಪುನ್ನಾಮ ನರಕದಿಂದ ತಪ್ಪಿಸುವ ಪುತ್ರನಾಗಿ ನೋಡಿದನೇ ಹೊರತು ವಸಿಷ್ಠರಾಗಲಿ, ವಿಶ್ವಾಮಿತ್ರರಾಗಲಿ, ಅಗಸ್ತ್ಯರಾಗಲಿ ರಾಮನಲ್ಲಿ ಕಂಡ ಪರಮಧಾಮ ದೊರೆಗೆ ಬದುಕಿರುವಾಗ ಅರಿವಾಗಲೇ ಇಲ್ಲ. ಆತನ ಮಂತ್ರಿಯಾದ ಸುಮಂತ್ರನಿಗೆ ರಾಮ ಸಾಮಾನ್ಯನಲ್ಲ, ವಿಭೂತಿಪುರುಷ ಎನ್ನುವ ಅರಿವಿತ್ತು.
ರಾಮನ ಮೇಲೆ ದಶರಥನಿಗೆ ಮೋಹ ಉಂಟಾಗಲು ಕಾರಣ ಆತ ಹಿರಿಯ ಮಗನೆನ್ನುವುದು ಒಂದಾದರೆ ಇನ್ನೊಂದು ಆತನ ಗುಣಗಳು. ಅದರಲ್ಲಿಯೂ ಪರಶುರಾಮರನ್ನು ರಾಮ ಭಂಗಿಸಿದ ನಂತರ ಆತನ ಮೇಲಿನ ಅಭಿಮಾನವೇ ಅತಿಮೋಹವಾಗಿ ಪರಿಣಮಿಸಿತ್ತು. ತನ್ನ ಕುಲವನ್ನು ಕ್ಷತ್ರಿಯ ವೈರಿಯಿಂದ ರಕ್ಷಿಸಿದ ಮಹಾಶೂರ ಎನ್ನುವುದು ಕಾರಣವೂ ಇದ್ದಿರಬಹುದು. ಮಿಥಿಲೆಯಿಂದ ಅಯೋಧ್ಯೆಗೆ ಬಂದ ನಂತರ ರಾಜನ ಮನಸ್ಸಿನಲ್ಲಿ ಯಾವುದೋ ಒಂದು ಚಿಂತೆ ಕಾಡುತ್ತಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಆತ ಭರತನನ್ನು ಕರೆದು ಕೇಕಯದಿಂದ “ನಿನ್ನ ಸೋದರಮಾವ ಯುಧಾಜಿತ್ತನೆನ್ನುವವ ಬಂದಿದ್ದಾನೆ. ಆತನ ಸಂಗಡ ನೀನು ನಿನ್ನ ಅಜ್ಜನ ಮನೆಗೆ ಹೋಗಬೇಕು” ಎನ್ನುವ ಮಾತುಗಳನ್ನು ಆಡುತ್ತಾನೆ. ಅದಕ್ಕೆ ಕೊಡುವ ಕಾರಣ ಮಕ್ಕಳೆಲ್ಲರ ಮದುವೆಯ ಸಂದರ್ಭದಲ್ಲಿ ಅವರ ಸಂಬಂಧಿಕರೂ ಮಿಥಿಲೆಗೆ ಬಂದಿದ್ದರು. ಸಹಜವಾಗಿ ಕೇಕಯದಿಂದ ಯುಧಾಜಿತ್ತ ಬಂದಿದ್ದಾನೆ. ಅವನ ತಂದೆ ಅಶ್ವಪತಿ ಬಹುಶಃ ವೃದ್ಧಾಪ್ಯದ ಕಾರಣದಿಂದ ಬಂದಿರಲಿಕ್ಕಿಲ್ಲ. ಆತ ತನ್ನ ಮೊಮ್ಮಗನನ್ನು ನೋಡುವ ಇಚ್ಛೆಯನ್ನು ವ್ಯಕ್ತಪಡಿಸಿರಬೇಕು. ಮಿಥಿಲೆಯಲ್ಲಿ ಸೇರಿದ್ದ ಮಹರ್ಷಿಗಳ ಮುಂದೆ ಯುಧಾಜಿತ್ ಭರತನನ್ನು ತನ್ನ ಜೊತೆ ಕಳುಹಿಸಿಕೊಡು ಎಂದು ಹೇಳಿದ್ದ. “ಪ್ರಾರ್ಥಿತಸ್ತೇನ ಧರ್ಮಜ್ಞ ಮಿಥಿಲಾಯಾಮಹಂ ತಥಾ”. ಅಯೋಧ್ಯೆಗೆ ಹೋದ ಮೇಲೆ ನೊಡೋಣ, ಈಗ ಬೇಡ ಎಂದು ರಾಜ ಹೇಳಿರಬೇಕು.
ಆಗ ದಶರಥನಿಗೆ ಮಕ್ಕಳೆಲ್ಲರ ಮೇಲೆ ಮೋಹವಿತ್ತು. ಆ ಮೋಹ ಈಗ ರಾಮನ ಮೇಲೆ ಮಾತ್ರ ತಿರುಗಿಬಿಟ್ಟಿತ್ತು. ಮಕ್ಕಳಲ್ಲಿಯೂ ಲಕ್ಷ್ಮಣ ಸದಾ ರಾಮನೊಂದಿಗೆ ಇರುತ್ತಿದ್ದರೆ, ಶತ್ರುಘ್ನ ಭರತನನ್ನು ಅಗಲಿ ಇರುತ್ತಿರಲಿಲ್ಲ. ನಾಲ್ಕು ದೇಹ ಎರಡು ಜೀವವಾಗಿ ಮಕ್ಕಳ ಆಟೋಟಗಳಿದ್ದವು. ಸೂಕ್ಷ್ಮವಾಗಿ ರಾಜ ಮಕ್ಕಳ ಈ ಸ್ವಭಾವವನ್ನು ಗಮನಿಸಿದ. ಅದೇ ಹೊತ್ತಿಗೆ ಯುಧಾಜಿತ್ತ ಅಯೋಧ್ಯೆಗೆ ಬಂದು ಭರತನನ್ನು ಕೇಕಯಕ್ಕೆ ಕರೆದೊಯ್ಯಲು ಬಂದಿದ್ದಾನೆ. ಅಜ್ಜನ ಮನೆಯ ನೆಪ ಸಿಕ್ಕಿದ್ದೇ ಭರತನಿಗೆ “ನಿನ್ನ ಮಾವನನ್ನು ಇಚ್ಛೆಯನ್ನು ನಡೆಸಬೇಕಾಗಿರುವುದು ನಿನ್ನ ಧರ್ಮ- ತಸ್ಯ ತ್ವಂ ಪ್ರೀತಿಂ ಕರ್ತುಮಿಹಾರ್ಹಸಿ” ಎಂದು ಹೇಳುತ್ತಾನೆ. ಭರತ ತನ್ನ ತಂದೆಗೆ ವಿಧೇಯನಾಗಿ ತನ್ನೊಟ್ಟಿಗೆ ಶತ್ರುಘ್ನನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ನಮಸ್ಕರಿಸಿ ಹೊರಟುಬಿಟ್ಟ. ಅಜ್ಜನ ಆಶೀರ್ವಾದವನ್ನು ಪಡೆಯಲು ಅವರ ಜೊತೆ ಪತ್ನಿಯರಾದ ಮಾಂಡವೀ ಮತ್ತು ಶ್ರುತಕೀರ್ತಿಯರು ಹೊರಟಿದ್ದಾರೆಂದು ಊಹಿಸಬಹುದು.
ದಶರಥ ಈಗ ನಿರುಮ್ಮಳನಾಗಿದ್ದಾನೆ. ಆತನ ಹೆಂಡತಿಯರಾದ ಸುಮಿತ್ರೆ, ಕೈಕೇಯಿ ಇಬ್ಬರೂ ಆಶೀರ್ವದಿಸಿ ಮಕ್ಕಳನ್ನು ಕಳುಹಿಸಿದರು. ಕೈಕೆ ಮುಗ್ಧಳೇನೂ ಅಲ್ಲ, ರಾಜಕಾರಣದಲ್ಲಿ ಅನಾಸಕ್ತಳೂ ಅಲ್ಲ. ಆಕೆಗೆ ಯುದ್ಧವಿದ್ಯೆ, ರಾಜನೀತಿಗಳ ಅರಿವು ಚನ್ನಾಗಿಯೇ ಇತ್ತು. ಯುದ್ಧ ಕೌಶಲ್ಯಕ್ಕೆ ಕೇಕಯ ರಾಜ್ಯ ಏಕೆ ಎನ್ನುವುದಕ್ಕೆ ಆಗಿನ ಕಾಲದ ಭೌಗೋಳಿಕ ಪರಿಸ್ಥಿತಿಯನ್ನು ಗಮನಿಸಿದರೆ ಈಗಿನ ಬಿಯಾಸ್ ಮತ್ತು ಗಾಂಧಾರ ದೇಶದ ನಡುವೆ ಕೇಕಯ ರಾಜ್ಯವಿತ್ತು. ಅಲ್ಲಿನ ದೊರೆ ಅಶ್ವಪತಿಗೆ ಪ್ರಾಣಿಗಳ ಭಾಷೆ ಅರ್ಥವಾಗುತ್ತಿತ್ತೆಂದು ಸುಮಂತ್ರ ಹೇಳುತ್ತಾನೆ. ಅಧ್ಯಾತ್ಮಿಕವಾಗಿ ಅಶ್ವಪತಿ ದೊರೆ ಬಹಳಷ್ಟು ಸಾಧನೆಯನ್ನು ಗೈದಿದ್ದ. ಉದ್ಧಾಲಕ ಮಹರ್ಷಿಗೆ ಪ್ರಾಚೀನಶಾಲಾ, ಬುಡಿಲ ಇನ್ನಿತರರು ವೈಶ್ವಾನರ ವಿದ್ಯೆಯನ್ನು ಕಲಿಯಲು ಬಂದಾಗ ತನಗೆ ಆ ಕುರಿತು ತಿಳಿದಿಲ್ಲ. ಕೇಕಯದ ರಾಜ ಅಶ್ವಪತಿ ಅದನ್ನು ಅರಿತಿದ್ದಾನೆ. ಅವನ ಹತ್ತಿರವೇ ಕಲಿಯೋಣವೆಂದು ಬಂದು ವೈಶ್ವಾನರ ವಿದ್ಯೆಯನ್ನು ಕಲಿತು ಲೋಕಕ್ಕೆ ನೀಡಿದ ಎಂದು ಛಾಂದೋಗ್ಯ ಉಪನಿಷತ್ತು ಹೇಳುತ್ತದೆ.
ಯುಧಾಜಿತ್ ಯುದ್ಧವಿದ್ಯೆಯಲ್ಲಿಯೂ ನಿಪುಣನಾಗಿದ್ದ. ಪ್ರಬುದ್ಧ ಅರಸು ಮನೆತನವಾದ ಕೇಕಯದಲ್ಲಿ ರಾಜಕುಮಾರರಿಗೆ ಬೇಕಾಗಿರುವ ಎಲ್ಲಾವಿಧವಾದ ವಿದ್ಯೆಗಳೂ ಸಿಗುವುದರಲ್ಲಿ ಯಾವ ಅನುಮಾನವೂ ಇಲ್ಲದ ಕಾರಣದಿಂದ ಕೈಕೇಯಿಗಾಗಲೀ ಇನ್ನಿತರರಿಗಾಗಲೀ ಮಕ್ಕಳನ್ನು ಅಗಲುವಿಕೆಯ ನೋವು ಇಲ್ಲವಾಗಿತ್ತು. ಇತ್ತ ರಾಮಲಕ್ಷ್ಮಣರು ತಂದೆ ತಾಯಿಗಳ ಯೋಗಕ್ಷೇಮವನ್ನು ಚನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಅತ್ತ ಭರತ ಶತ್ರುಘ್ನರೂ ಸಹ ಅಜ್ಜನ ಮನೆಯಲ್ಲಿ ಸುಖವಾಗಿದ್ದರೂ ವೃದ್ಧನಾಗಿರುವ ತಮ್ಮ ತಂದೆ ತಾಯಿಗಳ ಸೇವೆಯನ್ನು ತಮಗೆ ಮಾಡಲು ಆಗುತ್ತಿರಲಿಲ್ಲವಲ್ಲಾ ಎನ್ನುವ ಕೊರಗು ಅವರನ್ನು ಆಗಾಗ ಕಾಡುತ್ತಿತ್ತು. ಕೆಲವೊಂದು ರಾಮಾಯಣದಲ್ಲಿ ಭರತ ಮತ್ತು ಶತ್ರುಘ್ನರು ವೃದ್ಧನಾಗಿರುವ ತಮ್ಮ ತಂದೆ ರಾಜ್ಯವನ್ನು ಹೇಗೆ ನಿರ್ವಹಿಸುತ್ತಾನೋ ಏನೋ! ಈಗಲಾದರೂ ರಾಮನನ್ನು ಯುವರಾಜನನ್ನಾಗಿ ಮಾಡಿರಬಹುದೇ ಎಂದು ಆಗಾಗ ಹೇಳಿಕೊಳ್ಳುತ್ತಿದ್ದರು ಎಂದಿದೆ. ಇದು ಪುಣೆಯ ಬಂಢಾರಕಾರ್ಸ್ ಇವರ ಸಂಶೋಧನೆಯಲ್ಲಿಲ್ಲ.
ಅಯೋಧ್ಯೆಯಲ್ಲಿ ದಶರಥ ಮಾತ್ರ ನಿರಾಳವಾಗಿದ್ದ. ಆದರೂ ಸಿಂಹಾಸನದ ವಾರಸುದಾರರ ಚಿಂತೆ ಆತನನ್ನು ಕಾಡುತ್ತಿತ್ತು. ಮದುವೆಯ ಕಾಲಕ್ಕೆ ಕೊಟ್ಟ ಕನ್ಯಾಶುಲ್ಕ ಅವನಿಗೆ ನೆನಪಿತ್ತು. ಪ್ರಾಚೀನ ಭಾರತದಲ್ಲಿ ಸೂರ್ಯವಂಶದ ದೊರೆತನವೆನ್ನುವುದು ವಂಶಪರಂಪರೆಯಾದರೂ ಅದಕ್ಕೆ ಮಾಂಡಲಿಕರ, ಋಷಿಗಳ, ಪ್ರಜಾಜನರ ಒಪ್ಪಿಗೆ ಬೇಕಿತ್ತು. ಯಜುರ್ವೇದದಲ್ಲಿ ರಾಜನಾದವನಿಗೆ ಇರಬೇಕಾದ ಗುಣಗಳನ್ನು ಅನೇಕ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಯಜುರ್ವೇದದ 6ರಿಂದ 10ನೇಯ ಅಧ್ಯಾಯಗಳಲ್ಲಿ ಬರುವ ವಿವರಣೆಗಳ ಸಾರದಂತೆ ರಾಜನಾಗಿರುವವನಿಗೆ “ಪರಾಕ್ರಮದಲ್ಲಿ ಆತ ಇಂದ್ರನಿಗೆ ಸಮನಾಗಿರಬೇಕು. ಯಮ ಸೂರ್ಯ ಅಗ್ನಿ ವರುಣ ಚಂದ್ರ ಮತ್ತು ಕುಬೇರ ಇವರುಗಳ ಗುಣಗಳು ಆತನಲ್ಲಿರಬೇಕು. ಧುರಭಿಮಾನಿಗಳಾದ ಶತ್ರುಗಳನ್ನು ಗಿಡುಗಪಕ್ಷಿ ಹೇಗೆ ಶತ್ರುಗಳ ಮೇಲೆ ಬಿದ್ದು ಅವುಗಳನ್ನು ನಿಗ್ರಹಿಸುತ್ತದೆಯೋ ಅದೇ ರೀತಿ ಪರಾಕ್ರಮವನ್ನು ಹೊಂದಿದವನಾಗಿರಬೇಕು. “ರಾಯಸ್ಪೋಷದೇ” ಪ್ರಜೆಗಳಿಗೆಲ್ಲರಿಗೂ ಧನಸಮೃದ್ಧಿಯನ್ನು ಉಂಟುಮಾಡುವವ ಆತನಾಗಿರಬೇಕು. ಇಂತಹ ಗುಣಗಳು ಯಾರಲ್ಲಿ ಇರುತ್ತದೆಯೋ, ಅಂತಹ ಸಮರ್ಥನನ್ನು ಎಲ್ಲ ಪ್ರಜೆಗಳು ಸೇರಿ ಅಂಗೀಕರಿಸಲು ಬಯಸುತ್ತೇವೆ” ಎನ್ನುವ ವಿವರಣೆಗಳಿವೆ.
ವಂಶಪಾರಂಪರ್ಯ ಅರಸು ಪದ್ಧತಿ ಇರುವ ರಾಜ್ಯಗಳೂ ಅಂದು ಇದ್ದವು. ಇಂಗ್ಲೆಂಡಿನಲ್ಲಿಯೂ ರಾಜತ್ವ ವಂಶಪಾರಂಪರ್ಯವಾಗಿದೆ. ಹಾಗಂತ ರಾಜಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ರಾಜರಾಗಲು ಸಾಧ್ಯವಿಲ್ಲ. ಅಲ್ಲಿಯೂ ಕೆಲವೊಂದು ಅನುಸರಿಸಲೇಬೇಕಾದ ಕಠಿಣ ನಿಯಮಗಳಿವೆ. ಈ ಹಿನ್ನೆಲೆಯಲ್ಲಿ ದಶರಥ ಆಲೋಚಿಸಿರುವ ಸಾಧ್ಯತೆಗಳು ಹೆಚ್ಚಿವೆ. ವೃದ್ಧಾಪ್ಯದಲ್ಲಿ ಮಕ್ಕಳಾಗಿರುವುದರಿಂದ ದೊರೆಗೆ ಮಕ್ಕಳ ಮೇಲೆ ಮೋಹ ವಿಪರೀತವಾಗಿತ್ತು. ಅದರಲ್ಲಿಯೂ ರಾಮನ ಮೇಲಿನ ಮೋಹ ಇನ್ನುಳಿದ ಮೋಹವನ್ನು ಅಡಗಿಸಿಬಿಡುತ್ತಿತ್ತು. ಭರತ ಮತ್ತು ಶತ್ರುಘ್ನರ ಅಗಲಿಕೆ ಆತನನ್ನು ಆಗಾಗ ಬಾಧಿಸುತ್ತಿದ್ದರೂ ರಾಮನನ್ನು ನೋಡಿದ ತಕ್ಷಣ ಅದು ಪರಿಹಾರವಾಗುತ್ತಿತ್ತು. ತಮ್ಮನಾದ ಲಕ್ಷ್ಮಣನೊಂದಿಗೆ ರಾಮ ರಾಜ್ಯದ ಸಮಸ್ತ ಜವಾಬುದಾರಿಯನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ. ರಾಮನ ಕಡುಚಲುವು ಆತನ ಮನಸ್ಸನ್ನು ಸೆಳೆಯುತ್ತಿತ್ತು. ಅವನನ್ನು ನೊಡಿದವನಿಗೇ ಲೋಕವೇ ಮರೆತು ಹೋಗುತ್ತಿತ್ತು. ನಿರೋಗಕಾಯ, ತರುಣ, ವಾಗ್ಮಿ, ದೇಶಕಾಲವನ್ನು ತಿಳಿದವನು. ಯಾವ ಕಾಲದಲ್ಲಿ ಯಾವ ಸ್ಥಳದಲ್ಲಿ ಯಾವ ಯಾವ ಕೆಲಸವನ್ನು ಮಾಡಬೇಕೆನ್ನುವುದರ ವಿವೇಚನೆಯುಳ್ಳವನು. ಪರೇಂಗಿತಜ್ಞನು. ಅಪಕಾರಿಗಳ ವಿಷಯದಲ್ಲಿಯೂ ಪ್ರತಿಕ್ರಿಯೆ ತೋರದೇ ಸದ್ಭಾವದಿಂದಿರುವವನು. ಈ ಎಲ್ಲ ಗುಣಗುಳುಳ್ಳ ಏಕೈಕ ಪುರುಷನನ್ನು ಬ್ರಹ್ಮ ನಿರ್ಮಿಸಿದ್ದರೆ ಅದು ರಾಮರೂಪದಲ್ಲಿ ಎಂದು ಪ್ರಜೆಗಳು ಮಾತಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ
ಆತ ಲಕ್ಷ್ಮಣನೊಡಗೂಡಿ ರಾಜ್ಯದ ಸೀಮೆಯನ್ನು ಬಲಪಡಿಸಿದ್ದಲ್ಲದೇ ಶತ್ರುಗಳನ್ನು ಯುದ್ಧದಲ್ಲಿ ಜಯಿಸಿದ್ದನು. ಕೋಸಲ ಸೀಮೆ ರಾಮನ ನೇತೃತ್ವದಲ್ಲಿ ಮತ್ತಷ್ಟು ಬಲಿಷ್ಠವಾಯಿತು. ಸುಮಾರು ಹತ್ತು ವರ್ಷಗಳ ಕಾಲ ಕೋಸಲ ಸೀಮೆಯನ್ನು ರಾಮ ಲಕ್ಷ್ಮಣರು ಭದ್ರಪಡಿಸಿದ್ದರು. ರಾಮನಿಗೆ ಆಗ ಇಪ್ಪತ್ತೈದು ವರ್ಷವಾಗಿತ್ತು. ವಿಶ್ವಾಮಿತ್ರರ ಸಂಗಡ ರಾಮನನ್ನು ಕಳುಹಿಸುವಾಗ ರಾಮನಿಗೆ ಹದಿನೈದು ವರ್ಷಗಳಾಗಿತ್ತು. ಅರಣ್ಯಕ್ಕೆ ಹೋಗುವಾಗ ಅವನಿಗೆ ಇಪ್ಪತ್ತೈದು ವರ್ಷಗಳಾಗಿದ್ದವು ಎಂದು ಅರಣ್ಯಕಾಂಡದಲ್ಲಿ ಸೀತೆಯೇ ಸ್ವತಃ ರಾವಣನಿಗೆ ಹೇಳುತ್ತಾಳೆ. ದಿನನಿತ್ಯವೂ ರಾಮನ ಈ ಗುಣಗಳನ್ನು ನೋಡುತ್ತಿದ್ದಂತೆ ದಶರಥನ ಮನಸ್ಸಿನಲ್ಲಿ ಅದುಮಿಟ್ಟಿದ್ದ ಆಸೆಯೊಂದು ಎದ್ದು ಬಂತು. ಪ್ರಜೆಗಳ ಮನಸ್ಸನ್ನು ಗೆಲ್ಲುವ ಅವಕಾಶವನ್ನು ವಿಪುಲವಾಗಿ ಮಾಡಿಕೊಟ್ಟಿದ್ದ. ಮಂತ್ರಿ ಸುಮಂತ್ರ, ಗುರು ವಸಿಷ್ಠರ ಸಹಕಾರವೂ ಇದರೊಂದಿಗಿತ್ತು. ಈ ಎಲ್ಲದರ ಪರಿಣಾಮ ಅದ ಸಹಜವಾಗಿಯೇ ರಾಜನಿಗೆ ರಾಮನನ್ನು ರಾಜನನ್ನಾಗಿ ಪಟ್ಟಕ್ಕೆ ಏರಿಸಬೇಕೆಂದು ಮನಸಾದರೆ ಅದು ಸಹಜ. ಯಜುರ್ವೇದದಲ್ಲಿ ಹೇಳಿದ ಹೋಲಿಕೆಗೂ ರಾಮನ ಗುಣಗಳಿಗೂ ಹೋಲಿಕೆಯಾಗುವ ಶ್ಲೋಕವನ್ನು ವಾಲ್ಮೀಕಿ ಹೇಳುವುದು ಹೀಗೆ:
ಯಮಶಕ್ರಸಮೋ ವೀರ್ಯೇ ಬೃಹಸ್ಪತಿಸಮೋ ಮತೌ৷৷
ಮಹೀಧರಸಮೋ ಧೃತ್ಯಾಂ ಮತ್ತಶ್ಚ ಗುಣವತ್ತರಃ ৷৷ಅ.1.38৷৷
ಪರಾಕ್ರಮಗಳಲ್ಲಿ ಯಮ ಮತ್ತು ಇಂದ್ರರಿಗೆ ಸಮಾನನು, ಬುದ್ಧಿಯಲ್ಲಿ ಬೃಹಸ್ಪತಿಗೆ ಸಮಾನನು. ಪ್ರಜೆಗಳ ಧಾರಣ-ಪೋಷಣೆಯಲ್ಲಿ ಪರ್ವತಕ್ಕೆ ಸಮಾನನು. ಗಣದಲ್ಲಂತೂ ನನಗಿಂತಲೂ ಹೆಚ್ಚಿನವನು.
ಮೊದಲು ಪ್ರಜೆಗಳ ಮನಸ್ಸನ್ನು ತನ್ನ ಗುಣಗಳ ಮೂಲಕ ಗೆಲ್ಲುವ ಅವಕಾಶವನ್ನು ರಾಮನಿಗೆ ಕೊಟ್ಟ ದಶರಥನ ಮನಸ್ಸಿನಂತೆ ರಾಮನಲ್ಲಿ ಗುಣಗಳಿತ್ತು. ಸಹಜವಾಗಿಯೇ ಆತ ಮಳೆಗರೆಯುವ ಮೋಡವು ಹೇಗೆ ಪ್ರಿಯವಾಗುವುದೋ ಅದೇರೀತಿ ಪ್ರಜೆಗಳ ಮನಸ್ಸನ್ನು ಗೆದ್ದಿದ್ದನು. ಇದೇ ಸಮಯ ಎಂದುಕೊಂಡ ರಾಜನಿಗೆ ಒಮ್ಮೆ ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಾಗ ಕಪ್ಪಾದ ತಲೆಕೂದಲಿನಲ್ಲಿ ಒಂದು ಬಿಳಿಯದಾದ ಕೂದಲು ಕಾಣಿಸಿತಂತೆ!? ತಡಮಾಡುವುದಲ್ಲ ಎಂದುಕೊಂಡವನೇ ಅವಸರವಸರವಾಗಿ ಸಭೆಯನ್ನು ಕರೆಯಲು ಮಂತ್ರಿಗಳಿಗೆ ಸೂಚನೆಯನ್ನು ನೀಡಿದ. ರಾಮನನ್ನು ಪಟ್ಟಕ್ಕೇರಿಸಲು ಆತನಿಗೆ ಒಂದು ನೆವ ಸಿಕ್ಕಂತಾಯಿತು.
ಪಟ್ಟಾಭಿಷೇಕದ ಈ ಹಿನ್ನೆಲೆಯಲ್ಲಿ ರಾಮ ಪಟ್ಟಾಭಿಷೇಕದ ವಿವರಣೆ ಮುಂದಿನ ಭಾಗದಲ್ಲಿ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ