Site icon Vistara News

ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ

dhavala dharini king dasharatha

ಭಾಗ 2:

ಶ್ರೀರಾಮದರ್ಶನಕ್ಕೆ ಅಡ್ಡಿಯಾದ ಪುತ್ರವ್ಯಾಮೋಹ

ಧವಳ ಧಾರಿಣಿ ಅಂಕಣ: ಕೋಸಲ ಸೀಮೆಯ ಚಕ್ರವರ್ತಿಯಾದ ದಶರಥ ಘನತೆಯಿಂದ ರಾಜ್ಯವನ್ನಾಳುತ್ತಿದ್ದನು ಎನ್ನುವುದಕ್ಕೆ ವಾಲ್ಮೀಕಿಯಷ್ಟು ವಿವರವಾಗಿ ಬೇರೆ ಯಾರೂ ಕೊಡಲಿಲ್ಲ. ಕಾಳಿದಾಸನೂ ಸಹ ತನ್ನ ರಘುವಂಶದಲ್ಲಿ ದಿಲೀಪ, ರಘು ಅಜರಿಗೆ ಕೊಟ್ಟಷ್ಟು ಮಹತ್ವವನ್ನು ದಶರಥನಿಗೆ ನೀಡಿಲ್ಲ. ಸೂರ್ಯವಂಶದ ದೊರೆಗಳಲ್ಲಿ ಕಾಳಿದಾಸನ ಪ್ರಕಾರ ರಘುವಿನಷ್ಟು ಘನತೆಯುಳ್ಳ ದೊರೆಗಳು ಬೇರೆ ಯಾರೂ ಇಲ್ಲ. ಪಾತ್ರವನ್ನು ಭಂಜಿಸಿ ಪುನಃ ನವೀನವಾಗಿ ಕಟ್ಟುವುದು ಕಾವ್ಯದಲ್ಲಿ ಇರುವ ಒಂದು ಕ್ರಮ. ಆದರೆ ಇಂತಹ ಕ್ರಿಯೆಯಿಂದ ಮೂಲ ಪಾತ್ರದ ನಿರ್ವಚನೆವೇ ಸೂತ್ರ ತಪ್ಪಿಹೋಗುವಾಗ ಅದನ್ನು ಆಗಾಗ ನೆನಪಿಸಿಕೊಳ್ಳುವುದೂ ಸಹ ಅಷ್ಟೇ ಮುಖ್ಯವಾಗುತ್ತದೆ. ಜನಸಾಮಾನ್ಯರಲ್ಲಿ ಮೂಲಕಾವ್ಯದ ಪಾತ್ರಕ್ಕಿಂತ ಅದರಿಂದ ಹೊರಬಂದ ಟಿಸಿಲುಗಳು ಜನಪ್ರಿಯವಾಗಿವೆ. ಕೆಲವೊಂದು ರಾಮಾಯಣದಲ್ಲಿ ಪರಶುರಾಮ ಯುದ್ಧಕ್ಕೆ ಬಂದಾಗಲೆಲ್ಲ ದಶರಥ ಹೆಣ್ಣುಗಳ ನಡುವೆ ಇದ್ದ ಎನ್ನುವ ಕಥೆಯನ್ನೂ ಹೆಣೆದಿವೆ. ರಾಮಾಯಣ ದರ್ಶನದಲ್ಲಿ ಕುವೆಂಪು ದಶರಥನನ್ನು ಬಣ್ಣಿಸುವುದು ಹೀಗೆ:

ಚಕ್ರವರ್ತಿಯದಕ್ಕೆ ದಶರಥಂ ದೊರೆ ಸಗ್ಗದೊಡೆಯಂಗೆ. ಇಕ್ಷ್ವಾಕು
ರಘು ದೀಲೀಪರ ಕುಲಪಯೋಧಿ ಸುಧಾಸೂತಿ.
ರಾಜರ್ಷಿಯಾ ದೀರ್ಘದರ್ಶಿಯಾ ಸಮದರ್ಶಿ ತಾಂ…
…ಸರ್ವ ಪ್ರಜಾಮತಕೆ ತಾನು ಪ್ರತಿನಿಧಿಯೆಂಬ
ಮೇಣವರ ಹಿತಕೆ ಹೊಣೆಯೆಂದೆಂಬ ಬುಧರೊಲಿದ
ಸಮದರ್ಶನವನೊಪ್ಪಿ

ವಾಲ್ಮೀಕಿ ಕಟ್ಟಿದ ಪಾತ್ರದ ʼದರ್ಶನʼ ಕುವೆಂಪು ಅವರಿಗೆ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದಶರಥ ಅಪ್ರತಿಮ ಪರಾಕ್ರಮಿಯಾಗಿದ್ದ ಎನ್ನುವುದನ್ನು ಮತ್ತು ಆತನಿಗೆ ಶಬ್ಧವೇಧಿ ವಿದ್ಯೆ ಸಿದ್ಧಿಸಿತ್ತು. ಆತನ ಕಾಲದಲ್ಲಿ ರಾವಣನ ಪ್ರತಿರೋಧವನ್ನು ತಡೆಯಲಿಲ್ಲವೇ ಎನ್ನುವುದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ರಾವಣ ಅನರಣ್ಯನ ವಧೆಯನ್ನು ಮಾಡಿದ ನಂತರ ರಾವಣ ದಂಡಕಾರಣ್ಯದ ಆಚೆ ಬಂದಿರಲಿಲ್ಲ. ದಂಡಕಾರಣ್ಯದಲ್ಲಿ ರಾಮ ಖರನೊಡನೆ ಯುದ್ಧ ಮಾಡುವಾಗ,

ಪಾಪಮಾಚರತಾಂ ಘೋರಂ ಲೋಕಸ್ಯಾಪ್ರಿಯಮಿಚ್ಛತಾಮ್.
ಅಹಮಾಸಾದಿತೋ ರಾಜಾ ಪ್ರಾಣಾನ್ಹನ್ತುಂ ನಿಶಾಚರ৷৷ಅ.29.10৷৷

“ನಿಶಾಚರನೇ ಘೋರವಾದ ಪಾಪಗಳನ್ನು ಮಾಡುವವರ ಮತ್ತು ಜನರಿಗೆ ಅಹಿತವನ್ನು ಬಯಸುವವರ ಸಂಹಾರಕ್ಕಾಗಿಯೇ ರಾಜನಾದ (ದಶರಥ) ನಿಂದ ನಿಯುಕ್ತನಾಗಿ ಇಲ್ಲಿಗೆ ಬಂದಿರುತ್ತೇನೆ” ಎನ್ನುವ ಮಾತುಗಳನ್ನು ವಿಮರ್ಶಿಸುವುದಾದರೆ ದಶರಥ ರಾಕ್ಷಸರನ್ನು ಹಿಮ್ಮೆಟ್ಟಿಸುವತ್ತ ಸದಾ ಪ್ರಯತ್ನವನ್ನು ನಡೆಸುತ್ತಿದ್ದ ಎನ್ನುವುದು ಸ್ಪಷ್ಟವಗುತ್ತದೆ. ಜಟಾಯು ಮತ್ತು ಸಂಪಾತಿ ಎನ್ನುವ ಪಕ್ಷಿಗಳು ದಶರಥನ ಶೌರ್ಯತನಕ್ಕೊಲಿದು ಆತನ ಸ್ನೇಹವನ್ನು ಸಂಪಾದಿಸಿದ್ದವು. ಅವು ಇರುವುದೂ ಸಹ ದಂಡಕಾರಣ್ಯದಲ್ಲಿಯೇ. ಶಂಭರನನ್ನು ನಿಗ್ರಹಿಸಿರುವುದೂ ಸಹ ದಂಡಕಾರಣ್ಯದಲ್ಲಿಯೇ. ಶಂಭರರೆಂದರೆ ರಾಕ್ಷಸರ ಒಂದು ಪ್ರಬೇಧ. ಧಶರಥನ ಕಾಲದಲ್ಲಿ ಇದ್ದವ ತಿಮಿದ್ವಜ ಎನ್ನುವಾತ. ಆತ ದಂಡಕಾರಣ್ಯದ ನಡುವೆ ವೈಜಯಂತಪುರ ಎನ್ನುವಲ್ಲಿ ತನ್ನ ರಾಜ್ಯವನ್ನು ನಿರ್ಮಿಸಿಕೊಂಡಿದ್ದ. ಇಂದ್ರನ ಕೋರಿಕೆಯ ಮೇರೆಗೆ ದಶರಥ ದಕ್ಷಿಣದಲ್ಲಿರುವ ದಂಡಕಾರಣ್ಯದ ನಡುವೆ ಇರುವ ತಿಮಿಧ್ವಜನನ್ನು ಎದುರಿಸಲು ಹೋದಾಗ ಯುದ್ಧದಲ್ಲಿ ಕ್ಷತ-ವಿಕ್ಷತವಾಗಿ ರಥದಲ್ಲಿ ಮೂರ್ಚಿತನಗಿದ್ದ ಕಾಲದಲ್ಲಿ ಆತನ ಸಂಗಡವೇ ಇದ್ದ ಕೈಕೆ ಆತನನ್ನು ಯುದ್ಧರಂಗದಿಂದ ದೂರ ಒಯ್ದು ರಕ್ಷಿಸಿದ್ದಳು. ಬಹುಶಃ ಆ ಸಮಯದಲ್ಲಿ ಕೈಕೆ ದಶರಥನ ಸಾರಥಿ ಆಗಿರಬೇಕು. ಸಾರಥಿ ಮಾತ್ರವೇ ತನ್ನ ರಥಿಕನ ಪ್ರಾಣವನ್ನು ಇಂಥ ಹೊತ್ತಿನಲ್ಲಿ ಕಾಪಾಡಬಲ್ಲನೆಂದು ಮಹಾಭಾರತ ಯುದ್ಧದಲ್ಲಿ ಅನೇಕ ಕಡೆ ಬರುತ್ತದೆ.

ತನ್ನ ಜೀವವನ್ನು ಉಳಿಸಿದವಳೆನ್ನುವ ಕಾರಣಕ್ಕೆ ದಶರಥ ಕೈಕೆಗೆ ಎರಡು ವರವನ್ನು ಕೊಟ್ಟಿರುವುದು ಗೊತ್ತಿರುವ ಸಂಗತಿಯೇ ಆಗಿದೆ. ರಾಮಾಯಣದಲ್ಲಿ ಮತ್ತೆ ಈ ತಿಮಿಧ್ವಜನ ಪ್ರಕರಣ ಎಲ್ಲಿಯೂ ಬರುವುದಿಲ್ಲ ಬಹುಶಃ ಮೂರ್ಛೆಯಿಂದ ಎದ್ದ ನಂತರ ದಶರಥ ತಿಮಿಧ್ವಜನನ್ನು ನಿಗ್ರಹಿಸಿರಬೇಕೆನ್ನುವುದು ಖರನಲ್ಲಿ ರಾಮ ಹೇಳುವ ಮೇಲಿನ ಮಾತುಗಳಿಂದ ಸ್ಪಷ್ಟವಾಗುತ್ತದೆ. ಆ ನಂತರದಲ್ಲಿ ರಾವಣನಿಂದ ನಿಯುಕ್ತರಾಗಿ ಖರ ದೂಷಣರು ದಂಡಕಾರಣ್ಯದಲ್ಲಿ ತಮ್ಮ ರಾಜ್ಯವನ್ನು ನಿರ್ಮಿಸಿಕೊಂಡಿರಬಹುದು. ಹಾಗಾದರೆ ಸಿದ್ಧಾಶ್ರಮಕ್ಕೆ ತಾಟಕಿ ಮತ್ತು ಆಕೆಯ ಮಕ್ಕಳು ಬಂದಿರುವ ಘಟನೆಯನ್ನು ಪರಿಶೀಲಿಸುವುದಾದರೆ ಅವರು ಅಲ್ಲಿ ವಾಸ ಮಾಡುತ್ತಿರಲಿಲ್ಲ. ಆಕಾಶಮಾರ್ಗದಿಂದ ಬಂದು ತಪಸ್ಸನ್ನು ಕೆಡಿಸಿ ಹೋಗುತ್ತಿದ್ದರು. ಆ ಕಾಲಕ್ಕೆ ದಶರಥ ವೃದ್ಧನೂ ಆಗಿರುವುದರಿಂದ ಮತ್ತು ಮಕ್ಕಳಾಗದಿರುವುದರಿಂದ ಆತ ಕೊನೆ ಕೊನೆಗೆ ಅನ್ಯಮನಸ್ಕನಾಗಿದ್ದ ಎಂತಲೂ ಊಹಿಸಬಹುದಾಗಿದೆ.

ರಾಮ ಮೋಹಿತ:
ಚತುರ್ಣಾಮಾತ್ಮಜಾನಾಂ ಹಿ ಪ್ರೀತಿ:ಪರಮಿಕಾ ಮಮ৷৷
ಜ್ಯೇಷ್ಠಂ ಧರ್ಮಪ್ರಧಾನಂ ಚ ನ ರಾಮಂ ನೇತುಮರ್ಹಸಿ. ৷৷ಅ-20-11 ৷৷

ಈ ನಾಲ್ವರು ಮಕ್ಕಳಲ್ಲಿ ನನಗೆ ಅತ್ಯಂತ ಪ್ರಿಯನಾದವನು ರಾಮನೇ. ಇವನು ಜ್ಯೇಷ್ಠಪುತ್ರನಾಗಿದ್ದಾನೆ; ಧರ್ಮರಕ್ಷಕನಾಗಿರುವನು. ಆದುದರಿಂದ ನೀವು ರಾಮನನ್ನು ಒಯ್ಯುವುದು ಖಂಡಿತವಾಗಿಯೂ ಯುಕ್ತವಾದುದಲ್ಲ.

ದಶರಥನ ರಾಮನ ಮೇಲಿನ ಅತಿಯಾದ ವ್ಯಾಮೋಹಕ್ಕೆ ಈ ಮೇಲಿನ ಶ್ಲೋಕವೊಂದು ಸಾಕು. ಮಕ್ಕಳೇ ಆಗುವುದಿಲ್ಲ ಎನ್ನುವ ಹೊತ್ತಿಗೆ ದಶರಥನಿಗೆ ಪಾಯಸದ ಅನುಗ್ರಹದಿಂದ ಮಕ್ಕಳಾದರು. ರಾಮ, ಭರತ, ಲಕ್ಷ್ಮಣ ಮತ್ತು ಶತೃಘ್ನರು ಕ್ರಮವಾಗಿ ಪುನರ್ವಸು , ಪುಷ್ಯ ಮತ್ತು ಆಶ್ಲೇಷಾ ನಕ್ಷತ್ರಗಳಲ್ಲಿ ಜನಿಸಿದ್ದಾರೆಂದು ವಾಲ್ಮೀಕಿ ತಿಳಿಸುತ್ತಾನೆ. ಬಹುಕಾಲದ ನಂತರ ಅರಮನೆಯಲ್ಲಿ ಮಕ್ಕಳ ಗಜ್ಜೆಗಳ ಸದ್ದು ಸಹಜವಾಗಿಯೇ ತಂದೆತಾಯಿಗಳಲ್ಲಿ ಸಂತಸವನ್ನು ಉಕ್ಕೇರಿಸಿದೆ. ಅದಕ್ಕೂ ಮೊದಲು ಅರಮನೆಯ ಬಿಡಿಸಿದ ರಂಗೋಲಿ ಮಾರನೆಯ ದಿನ ಹೊಸ ರಂಗೋಲಿ ಹಾಕುವವರೆಗೂ ನಳಿನಳಿಸುತ್ತಿರುತ್ತಿತ್ತು, ಈಗ ಚಿತ್ರಿಸಿದ ಮರುಕ್ಷಣದಲ್ಲಿಯೇ ಮಕ್ಕಳು ಕ್ಷಣಮಾತ್ರದಲ್ಲಿ ಅದನ್ನು ಅಳಿಸಿ ಹಾಕಿಬಿಡುವುದನ್ನು ನೋಡಿ ತಾಯಿಯಂದಿರು ಸಂಭ್ರಮದಿಂದ ದಾಸಿಯರ ಸಂಗಡ ಕುಣಿದು ಕುಪ್ಪಳಿಸುತ್ತಿದ್ದರಂತೆ. ದಶರಥನಿಗೆ ಮಕ್ಕಳಾಗಿರುವ ಸಂತಸ ಸಹಜವಾಗಿ ಆಗಿರುವುದು ಒಂದು ಕಡೆ ಆದರೆ ಹಿರಿಯ ಮಗನಾದ ರಾಮನ ಮೇಲೆ ಎಲ್ಲಕ್ಕಿಂತ ಹೆಚ್ಚಿನ ಪ್ರೀತಿಯುಂಟಾಗಿ ಅದು ವ್ಯಾಮೋಹಕ್ಕೆ ತಿರುಗಿಬಿಟ್ಟಿತ್ತು.

ಕೈಕೆಯನ್ನು ಮದುವೆಯಾದ ಮೇಲೆ ದಶರಥನಿಗೆ ತನ್ನ ಇನ್ನಿಬ್ಬರು ರಾಣಿಯರನ್ನು ಅಲಕ್ಷ್ಯ ಮಾಡಿದ್ದ. ಆದರೆ ಕೌಸಲ್ಯೆಯ ಮಗನಾದ ಶ್ರೀ ರಾಮನೆಂದರೆ ಹುಚ್ಚು ಕಕ್ಕುಲತೆಯಾಗಿತ್ತು. ರಾಮಾಯಣವನ್ನು ಬರೆದ ಎಲ್ಲಾ ಕವಿಗಳೂ ದಶರಥನ ಈ ಪುತ್ರವ್ಯಾಮೋಹವನ್ನೇ ಪ್ರಧಾನವಾಗಿ ಬಣ್ಣಿಸಿದ್ದಾರೆ. ಅದರಲ್ಲಿಯೂ ಭಾಸ ತನ್ನ ಪ್ರತಿಮಾ ನಾಟಕದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಶರಥ ರಾಮನನ್ನು ಸರಿಯಾಗಿ ನೋಡಲೇ ಇಲ್ಲವೆನ್ನುವ ರೀತಿಯಲ್ಲಿ ಚಿತ್ರಿಸುತ್ತಾನೆ. ರಾಮ ರಾಜಸಭೆಗೆ ಬಂದು ದಶರಥನಿಗೆ ನಮಸ್ಕರಿಸಿದಾಗ ಧಶರಥನಿಗೆ ಆನಂದ ಭಾಷ್ಪದಿಂದ ಹರಿದ ಕಣ್ಣೀರು ರಾಮನ ನೆತ್ತಿಯನ್ನು ತೋಯಿಸಿತಂತೆ. ತಂದೆಯ ಇಂತಹ ಪ್ರೀತಿಯನ್ನು ಅನುಭವಿಸಿದ ರಾಮನ ಆನಂದಭಾಷ್ಪ ದಶರಥನ ಪಾದವನ್ನು ತೋಯಿಸಿತಂತೆ. ಭಾಸನ ಪ್ರಕಾರ ಯಾವಾಗಲೂ ದಶರಥನಿಗೆ ರಾಮನನ್ನು ಸರಿಯಾಗಿ ನೋಡಲು ಆತನ ಆನಂದಭಾಷ್ಪ ಅಡ್ಡಿಬರುತ್ತಿತ್ತೆಂದು ವಿಮರ್ಶಕರು ಹೇಳುತ್ತಾರೆ. ರಾಮ ಮಹಾತೇಜಸ್ವಿಯೂ, ಸತ್ಯವಾದ ಪರಾಕ್ರಮಿಯೂ, ಪ್ರಜೆಗಳಿಗೆ ಪ್ರಿಯನಾಗಿಯೂ ಇದ್ದನು. ದಶರಥನಿಗಂಟೂ ರಾಮ ತನ್ನ ವಂಶದ ಕಲಶಪ್ರಾಯನಾಗಿಬಿಟ್ಟಿದ್ದ. ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಹದಿನೈದು ವರ್ಷಗಳಾದಾಗ ಒಂದು ದಿವಸ ವಿಶ್ವಾಮಿತ್ರರು ರಾಜಸಭೆಗೆ ಆಗಮಿಸಿ ಸಿದ್ಧಾಶ್ರಮದಲ್ಲಿ ನಡೆಸಲಿರುವ ಯಜ್ಞಗಳಿಗೆ ತಾಟಕಿ ಮತ್ತು ಆಕ್ಯೆಯ ಮಕ್ಕಳಾದ ಸುಭಾಹು ಮಾರೀಚರೆನ್ನುವ ರಾಕ್ಷಕರ ಕಾಟ ವಿಪರೀತವಾಗಿದೆ. ಅವರನ್ನು ನಿಗ್ರಹಿಸಲು ರಾಮನನ್ನು ತನ್ನೊಡನೆ ಕಳುಹಿಸಬೇಕು ಎಂದಾಗ ದಶರಥನಿಗೆ ಆಘಾತವುಂಟಾಯಿತು. ಮೂರ್ಛಿತನಾಗಿ ಬಿಟ್ಟ. ರಾಕ್ಷಸರ ವಿರುದ್ಧ ಹೋರಾಡಲು ಸಹಾಯವನ್ನು ಯಾಚಿಸುವಂತಹ ಪರಾಕ್ರಮಿಯಾಗಿದ್ದ ದಶರಥನ ಜಂಘಾಬಲವೇ ಉಡುಗಿಹೋಯಿತು.

ವಿಶ್ವಾಮಿತ್ರರು ರಾಮನನ್ನು ಕೇವಲ ಹತ್ತುದಿನಗಳ ಮಟ್ಟಿಗೆ ಕಳುಹಿಸು ಎನ್ನುತ್ತಾರೆ. ಅದು ತನಕ ರಾಮನ ರಥಯುದ್ಧ ಕೌಶಲವನ್ನೂ, ಆನೆ ಅಶ್ವಗಳ ಸವಾರಿಯ ಚಾಕಚಕ್ಯತೆಯನ್ನೂ ಬಿಲ್ಲು ವಿದ್ಯೆಯ ನಿಪುಣತೆಯನ್ನೂ ನೋಡಿ ಆನಂದಿಸುತ್ತಿದ್ದ ದಶರಥ ಏಕಾಏಕಿಯಾಗಿ ಮಾರೀಚ ಸುಭಾಹು ಮತ್ತು ರಾವಣನಂತವರನ್ನು ಎದುರಿಸಲು ತಾನು ಅಸಮರ್ಥ, ರಾಮನಿಗೆ ಬಿಲ್ಲು ವಿದ್ಯೆಯ ಪರಿಪೂರ್ಣತೆ ಆಗಿಲ್ಲ, ಅವನಿನ್ನೂ ಎಳೆಸು, ರಾಮನ ಬದಲು ತಾನು ಬಂದು ಹೋರಾಡುತ್ತೇನೆ, ಆದರೆ ಯುದ್ಧದಲ್ಲಿ ತನ್ನ ಪ್ರಾಣವೇ ಹೋಗಬಹುದು. ಆದರೂ ಚಿಂತೆಯಿಲ್ಲ ಎಂದೆಲ್ಲಾ ಹೇಳುತ್ತಾ ಅಳುತ್ತಾನೆ. ಆತ ಈಗ ಮೊದಲಿನ ದಶರಥನಾಗಿ ಉಳಿಯದೇ ತನ್ನ ಮಗ ರಾಮನನ್ನು ಕಳುಹಿಸಲು ಮನಸ್ಸಿಲ್ಲದೇ ಆತ ವಯಸ್ಸಿನ ಕಾರಣಕ್ಕೆ ಮತ್ತು ತನ್ನಲ್ಲಿನ ವೃದ್ಧಾಪ್ಯದ ಕಾರಣಕ್ಕೆ ರಾಕ್ಷಸರನ್ನು ಎದುರಿಸುವ ಬಲ ತನ್ನಲ್ಲಿ ಈಗ ಉಳಿದಿಲ್ಲ ಎನ್ನುವ ಸುಳ್ಳುಗಳನ್ನೂ ಹೇಳುತ್ತಾನೆನ್ನುವ ಎನ್ನುವುದು ವಿಶ್ವಾಮಿತ್ರರಿಗೆ ತಿಳಿಯಿತು. ಒಂದರ್ಥದಲ್ಲಿ ಇದು ವಶಿಷ್ಠರು ಕಲಿಸಿದ ವಿದ್ಯೆಗೂ ಅವಮಾನ ಎನ್ನುವುದನ್ನು ರಾಜ ಮರೆತು ಬಿಟ್ಟಿದ್ದ. ತಾನೋರ್ವ ಹೇಡಿ ಎನ್ನುವ ಭಾವ ಬರುವ ಮಾತುಗಳನ್ನೂ ಆಡಿದ ಕೇಳಿದ ವಿಶ್ವಾಮಿತ್ರರಿಗೆ ಕ್ರೋಧ ಬಂತು. ಮಕ್ಕಳನ್ನು ಕಳುಹಿಸಲಾರೆ ಎನ್ನುವ ಕಾರಣಕ್ಕೆ ಕ್ರೋಧ ಬಂದಿಲ್ಲ. ದಶರಥ ಮಗನ ಮೇಲಿನ ಮೋಹದಿಂದ ಸೂರ್ಯವಂಶದ ತೇಜಸ್ಸನ್ನೇ ಅವಮಾನ ಮಾಡುತ್ತಿದ್ದಾನೆ (ನರಪತಿಜಲ್ಪನಾತ್) ಎನ್ನುವ ಕಾರಣಕ್ಕಾಗಿ.

ಸಿಟ್ಟುಗೊಂಡು “ಆಯಿತು, ಸತ್ಯಪ್ರತಿಜ್ಞರ ಮಹಾ ವಂಶದಲ್ಲಿ ಮಿಥ್ಯಾವಾದಿಯೋರ್ವ ಹುಟ್ಟಿದನು” ಎನ್ನುವ ಅಪವಾದ ನಿನಗೆ ಬರುತ್ತದೆ, ತಾನಿನ್ನು ಹೊರಡುತ್ತೇನೆ ಎಂದು ಸಿಟ್ಟಿನಿಂದ ಹೊರಡಲುದ್ಯುಕ್ತನಾದ. ತಪಸ್ವಿಯಾದ ವಿಶ್ವಾಮಿತ್ರರಿಗೆ ತಾವೇ ರಾಕ್ಷಸರನ್ನು ನಿಗ್ರಹಿಸುವ ಶಕ್ತಿಯಿತ್ತು. ಆದರೆ ಅವರೀಗ ಬ್ರಹ್ಮರ್ಷಿಗಳಾಗಿದ್ದಾರೆ. ತಪಸ್ಸನ್ನು ಪುಣ್ಯಕ್ಕಾಗಿ ಉಪಯೋಗಿಸಬೇಕು, ರಕ್ಕಸರ ನಿರ್ಮೂಲನೆಗೆ ಕ್ಷತ್ರಿಯರ ದಂಡು ಸಿದ್ಧವಾಗಬೇಕು ಎನ್ನುವ ಸಂಕಲ್ಪದಿಂದ ಬಂದಿದ್ದರು. ದೇರಾಜೆ ಸೀತಾರಾಮನವರ “ರಾಮ ರಾಜ್ಯದ ರುವಾರಿ” ಎನ್ನುವ ಕೃತಿಯನ್ನು ಓದಿದರೆ ಇದರ ಸಂಪೂರ್ಣ ವಿವರ ಸಿಗುತ್ತದೆ. ತನ್ನ ಯೌವನದ ಕಾಲದಲ್ಲಿ ಇಂದ್ರನಿಗೆ ಸಮನಾದ ಶೌರ್ಯವಂತನಾಗಿದ್ದ ದಶರಥನಿಗೆ ಪುತ್ರಮೋಹವೆನ್ನುವುದು ಆತನ ಎಲ್ಲ ಘನತೆ ಮತ್ತು ಗುಣಗಳನ್ನು ಮರೆಮಾಚಿ ಬಿಟ್ಟಿತ್ತು. ಮಕ್ಕಳ ಮೇಲಿನ ಅತಿಯಾದ ಮೋಹದಿಂದ ಅನೇಕ ಪಾಲಕರು ತಮ್ಮಮಕ್ಕಳಿಗೆ ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ ಎನ್ನುವ ರೀತಿಯಲ್ಲಿ ವರ್ತಿಸುವದನ್ನು ಇಂದಿಗೂ ಕಾಣಬಹುದು. ದಶರಥ ಹೀಗೆ ತನ್ನ ಮಕ್ಕಳ ಕುರಿತು ಅದರಲ್ಲಿಯೂ ವಿಶೇಷವಾಗಿ ರಾಮನ ವಿಷಯದಲ್ಲಿ ಮೋಹಪರವಶನಾಗಿದ್ದ.

ವಿಶ್ವಾಮಿತ್ರರು ಬಂದಾಗ ಅವರಿಗೆ ಯಾವ ಸಹಾಯ ತನ್ನಿಂದ ಬೇಕು ಅದನ್ನು “ಕರ್ತಾ ಚಾಹಮಶೇಷೇಣ ದೈವತಂ ಹಿ ಭವಾನ್ಮಮ” ‘ಎಂತಹ ಕ್ಲಿಷ್ಟವಾದ ಕಾರ್ಯವನ್ನಾದರೂ ಅದನ್ನು ಮರುಮಾತಿಲ್ಲದೇ ನಡೆಸಿಕೊಡುತ್ತೇನೆ. ನೀವೇ ನನಗೆ ಪರದೈವ’ ಎಂದು ಮಾತುಕೊಟ್ಟ ದೊರೆ ಪುತ್ರ ವ್ಯಾಮೋಹದಿಂದ ಅದನ್ನು ಈಡೇರಿಸಲು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿರುವುದನ್ನು ನೋಡಲು ವಶಿಷ್ಠರಿಂದಾಗಲಿಲ್ಲ. ದಶರಥನಿಗೆ “ರಾಮನನ್ನು ವಿಶ್ವಾಮಿತ್ರರ ಸಂಗಡ ಕಳುಹಿಸು, ಆತನ ಶ್ರೇಯೋಭಿವೃದ್ದಿಗೆ ಇದು ನಾಂದಿಯಾಗುತ್ತದೆ. ಒಂದುವೇಳೆ ಕಲುಹಿಸದಿದ್ದರೆ ನೀನು ಇದುತನಕ ಮಾಡಿದ ಅಶ್ವಮೇದ ಯಾಗದ ಫಲ, ವಾಪಿ-ಕೂಪ-ತಟಾಕಾದಿಗಳನ್ನು ನಿರ್ಮಿಸಿದ ಫಲಗತಿಗಳೆಲ್ಲ ನಾಶವಾಗುತ್ತದೆ ಎಂದು ಎಚ್ಚರಿಸಿದರೋ ಆಗ ಅಂತೂ ಅನ್ಯಮನಸ್ಕನಾಗಿಯೇ ರಾಮನನ್ನು ವಿಶ್ವಾಮಿತ್ರರ ಜೊತೆಯಲ್ಲಿ ಯಜ್ಞರಕ್ಷಣೆಗಾಗಿ ಕಳುಹಿಸಿಕೊಟ್ಟ. ಕೇವಲ ಹತ್ತು ದಿನಗಳ ಮಟ್ಟಿಗೆ ಕರೆದುಕೊಂಡು ಹೋಗುತ್ತೇನೆಂದು ಹೋದ ವಿಶ್ವಾಮಿತ್ರರು ಯಜ್ಞ ಮುಗಿದ ಮೇಲೆ ಅಲ್ಲಿಂದ ಮಿಥಿಲೆಗೆ ಕರೆದುಕೊಂಡು ಹೋಗಿ ರಾಮ ಶಿವಧನಸ್ಸನ್ನು ಮುರಿದು ಸೀತೆಯನ್ನು ಮದುವೆಯಾಗುವ ಸಂಗತಿ ದಶರಥನಿಗೆ ತಿಳಿಯುವ ತನಕ ಆತ ಎಷ್ಟು ಒದ್ದಾಡಿದ್ದನೋ ಏನೋ! ದಶರಥನನ್ನು ಮಿಥಿಲೆಗೆ ಆಹ್ವಾನಿಸಲು ಹೋದ ದೂತರು ಅಯೋಧ್ಯೆಯನ್ನು ತಲುಪಲು ನಾಲ್ಕು ದಿನಗಳನ್ನು ತೆಗೆದುಕೊಂಡಿದ್ದರು. ರಾಮನಿಗೆ ಮದುವೆಯ ವಿಷಯ ಕೇಳಿದ ದಶರಥ ಸಂತಸಪಟ್ಟಿದ್ದು ಓರ್ವ ತಂದೆಯಾಗಿ ಸಹಜದ ಕ್ರಿಯೆ. ಮದುವೆಯೆಲ್ಲ ಸಾಂಗವಾಗಿ ಮುಗಿದು ನಾಲ್ವರೂ ಮಕ್ಕಳು ಮತ್ತು ಸೊಸೆಯೊಂದಿಗೆ ಅಯೋಧ್ಯೆಗೆ ಬರುವಾಗ ಬೀಸಿತೊಂದು ಭಯಂಕರ ಬಿರುಗಾಳಿ.

ರಾಮ ಮರ್ಧಿಸಿದ ಮಹಾಧನುಸ್ಸೆರಡನ್ನೂ ನೋಡಲಿಲ್ಲ ದೊರೆ:

ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||

ಇದ್ದಕ್ಕಿಂತ ಸುಂಟರಗಾಳಿ ಬೀಸಿ ಮಹಾವೃಕ್ಷಗಳನ್ನೆಲ್ಲ ಬುಡಮೇಲು ಮಾಡತೊಡಗಿತು. ಭೂಮಿಯಿಂದ ಎದ್ದ ಧೂಳು ಸೂರ್ಯನನ್ನೇ ಮರೆಮಾಚಿತು. ದಿಕ್ಕುಗಳೇ ಕಾಂತಿಹೀನವಾಯಿತು. ಎಲ್ಲರೂ ತಮ್ಮ ಜೀವದ ಆಶೆಯನ್ನೇ ತೊರೆದರು. ವಸಿಷ್ಠರು ದಶರಥ ಆವನ ಮಕ್ಕಳು ಮಾತ್ರ ಈ ಬಿರುಗಾಳಿಗೆ ಹೆದರದೇ ಇದ್ದರು. ಆ ಅಂಧಕಾರದಿಂದ ಭಯಂಕರ ಪ್ರಕಾಶದಿಂದ ಕೂಡಿದ, ಜಟಾಮಂಡಲಧಾರಿಯಾದ ಕ್ಷತ್ರಿಯಕುಲವಿಧ್ವಂಸಕನಾದ ಪರಶುರಾಮರ ಆಕೃತಿ ಗೋಚರವಾಯಿತು.

ನೇರವಾಗಿ ರಾಮನನ್ನು ಉದ್ಧೇಶಿಸಿ ಅವರು “ರಾಮ! ದಾಶರಥೇ! ವೀರ! ನೀನು ಇದುತನಕ ಗೈದ ಪರಾಕ್ರಮಗಳಾದ ತಾಟಕಾವಧೆಯಿಂದ ಹಿಡಿದು ಇತ್ತೀಚೆಗೆ ಶಿವಧನುರ್ಭಂಗದವರೆಗಿನ ಎಲ್ಲವನ್ನೂ ಕೇಳಿದ್ದೇನೆ. ನಿಜವಾಗಿಯೂ ನೀನು ಅಷ್ಟೊಂದು ಪರಾಕ್ರಮಿಯೇ ಹೌದಾದರೆ ನನ್ನ ಕೈಯಲ್ಲಿರುವ ಈ ವೈಷ್ಣವ ಧನಸ್ಸನ್ನು ನೋಡು. ಈ ಮಹಾಧನಸ್ಸಿಗೆ ನೀವು ಮೌರ್ವಿಯನ್ನು ಬಿಗಿದು ತೋಲನ-ಪೂರಣ-ಶರಸಂಧಾನದಿಗಳನ್ನು ಮಾಡಿದರೆ ನಾನು ನಿನಗೆ ವೀರ್ಯಶ್ಲಾಘ್ಯವಾದ ದ್ವಂದ್ವಯುದ್ಧವನ್ನು ಕೊಡುತ್ತೇನೆ” ಎಂದು ತನ್ನ ಕಂಚಿನ ಕಂಠದ ಧ್ವನಿಯಲ್ಲಿ ಹೇಳಿದನು. ಈ ಮಾತನ್ನು ಕೇಳಿದ ದಶರಥನಿಗೆ ಜಂಘಾಬಲವೇ ಉಡುಗಿಹೋಯಿತು. ಪರಶುರಾಮನ ಹತ್ತಿರ ಅಳಲಿಕ್ಕೇ ಮೊದಲಾಗುತ್ತಾನೆ. ರಾಮನಿಗೇನಾದರೂ ಆದರೆ ತಾವ್ಯಾರೂ ಬದುಕುವುದಿಲ್ಲ ಎಂದು ಗೋಳಿಡುತ್ತಾನೆ. ತಾನೋರ್ವ ಕ್ಷತ್ರಿಯ, ಮಹಾಪ್ರರಾಕ್ರಮಿಯಾದವ ಎನ್ನುವುದಕ್ಕಿಂತಲೂ ರಾಮನಿಗೆ ಏನಾದರೂ ಆಗಿಬಿಟ್ಟರೆ ಎನ್ನುವ ಕಲ್ಪನೆಯೇ ಆತನಲ್ಲಿ ಭೀತಿಯನ್ನು ಹುಟ್ಟಿಸಿತು. ಸಾಲದ್ದಕ್ಕೆ ಪರಶುರಾಮ ದಶರಥನ ಮಾತಿಗೆ ಲಕ್ಷ್ಯವನ್ನೇ ಕೊಡದೇ ರಾಮನಲ್ಲಿ ಪಂಥಾಹ್ವಾನವನ್ನು ಕೊಟ್ಟಾಗ ರಾಮ ಅದನ್ನು ಧೈರ್ಯದಿಂದಲೇ ಸ್ವೀಕರಿಸಿದ. ದಶರಥ ಇನ್ನು ಕಥೆ ಮುಗಿಯಿತು ಎಂದವನೇ ಕಣ್ಣುಮುಚ್ಚಿ ಗಡಗಡ ನಡುಗುತ್ತ ಹೆಣ್ಣುಗಳ ಹಿಂದೆ ಅಡಗಿಕೊಳ್ಳಲು ಜಾಗ ಹುಡುಕಿದ.

ರಾಮ ಮರು ಮಾತಾಡದೇ ತನ್ನ ಕಾಲಿನಲ್ಲಿ ಬಿಲ್ಲಿನ ಪಾದವನ್ನು ಹಿಡಿದು ಬಗ್ಗಿಸಿ ನಾಣನ್ನು ಕಟ್ಟಿದವನೇ ಬಾಣವನ್ನು ಹೂಡಿ ಪರಶುರಾಮನತ್ತ ತಿರುಗಿ ಗಂಬೀರಸ್ವರದಲ್ಲಿ “ನೀನು ಗೌರವಾನ್ವಿತನಾದವ ಮತ್ತು ನನ್ನ ಗುರು ವಿಶ್ವಾಮಿತ್ರರ ಜ್ಞಾತಿಬಂಧುವಾಗಿರುವೆ. ಈ ಕಾರಣದಿಂದ ನಿನ್ನ ಮೇಲೆ ಶರಪ್ರಯೋಗ ಮಾಡಲಾರೆ. ಎಲ್ಲೆಂದರಲ್ಲಿ ಸಾಗುವ ಸ್ವೇಚ್ಛಾಗಮನಕ್ಕೆ ಬಾಣವನ್ನು ಬಿಡಲೇ ಇಲ್ಲವೇ ತಪಸ್ಸಿನಿಂದ ಗಳಿಸಿರುವ ನಿನ್ನ ಅಪ್ರತಿಮ ಪುಣ್ಯದ ರಾಶಿಗೆ ಬಿಡಲೇ” ಎಂದು ಗಂಭೀರಸ್ವರದಲ್ಲಿ ಕೇಳಿದ.. ಪರಶುರಾಮ ಪ್ರಪಂಚದಲ್ಲಿಯೇ ಎರಡನೆಯದಿಲ್ಲದ ವೈಷ್ಣವ ಧನಸ್ಸನ್ನು ರಾಮ ಲೀಲಾಜಾಲವಾಗಿ ಹೆದೆಯೇರಿಸಿ ತನ್ನೆಡೆಗೇ ಗುರಿಯಿಟ್ಟ. ಪರಶುರಾಮ ರಾಮನ ಕಣ್ಣಿನ ತೇಜಸ್ಸನ್ನು ನೋಡಿದ. ಅರ್ಥವಾಯಿತು! “ಹಿಂದೆ ತಾನು ಗೆದ್ದ ಈ ಭೂಮಿಯನ್ನು ಕಶ್ಯಪರಿಗೆ ದಾನವಾಗಿ ಕೊಟ್ಟಮೇಲೆ ಇದು ತನ್ನದಲ್ಲ. ಹಾಗಾಗಿ ತಾನು ಇಲ್ಲಿ ಹೆಚ್ಚುಹೊತ್ತು ಇರಲಾರೆ. ತನ್ನ ಸ್ವೇಚ್ಛಾಗಮನಕ್ಕೆ ಹಾನಿ ಮಾಡಬೇಡ. ದಿವ್ಯಲೋಕಗಳಿಗೆ ಹೋಗಬಹುದಾದ ಸಾಮರ್ಥ್ಯವನ್ನು ಗಳಿಸಿರುವ ತನ್ನ ಪುಣ್ಯರಾಶಿಯ ಮೇಲೆಯೇ ಬಾಣಪ್ರಯೋಗ ಮಾಡು. ಆ ಶಕ್ತಿ ತನ್ನಿಂದ ಹ್ರಾಸವಾದರೂ ತೊಂದರೆಯಿಲ್ಲ” ಎಂದು ಹೇಳಿದನು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

ಮೂಲತತ್ತ್ವದ ಅಂಶವೇ ಆದ ಪರಶುರಾಮನಿಗೆ ಪಾಪ ಪುಣ್ಯಗಳ ಹಂಗಿಲ್ಲ. ಇಲ್ಲಿ ಶಿವ ಮತ್ತು ವೈಷ್ಣವ ಈ ಎರಡು ಶಕ್ತಿಯ ಸಂಕೇತಗಳು. ರಾಮನೆನ್ನುವವ ನಾಮರೂಪಾತ್ಮಕವಾದ ಎರಡನ್ನೂ ಅಂಶಗಳನ್ನು ಮೀರಿನಿಂತವ ಎನ್ನುವುದನ್ನು ವಾಲ್ಮೀಕಿ ರೂಪಕದಮೂಲಕ ವಿವರಿಸಿದ್ದಾನೆ. ರಾಮನೆನ್ನುವವ ಪರತತ್ತ್ವ. ಪರಾವಸ್ತು. ಸೃಷ್ಟಿಯ ಎಲ್ಲವೂ ರಾವಣನನ್ನು ಗೆಲ್ಲಲು ಸಮರ್ಥವಾಗಲಾರದು. ಅದನ್ನು ಮೀರಿದ ಪರವಸ್ತುವೇ ಮಾನವ ರೂಪ ತಾಳಿ ರಾವಣತ್ವದ ವಧೆಗೆ ಕಾರಣವಾಗಬೇಕು. ಅಮೂರ್ತವಾಗಿರುವ ಈ ತತ್ತ್ವವೇ ಮಾನವ ಮೂರ್ತಿಯಾಗಿ ವೈಷ್ಣವ ಧನಸ್ಸನ್ನು ಎತ್ತಿರುವ ಅಪರೂಪದ ದೃಶ್ಯವನ್ನು ನೋಡಲು ಸ್ವತಃ ಬ್ರಹ್ಮನೇ ಅಲ್ಲಿಗೆ ಬಂದುನೋಡಿ ಆನಂದಿಸಿದ. ಅವರೆಲ್ಲರೂ ನೋಡುತ್ತಿರುವಂತೆ ರಾಮ ಹೆದೆಯೇರಿಸಿ ಬಾಣವನ್ನು ಬಿಟ್ಟ. ಕ್ಷತ್ರಿಯರನ್ನು ನಿಗ್ರಹಿಸಿದ ಭಯಂಕರ ಮುನಿಯ ತೇಜಸ್ಸು ಕ್ಷಾತ್ರ ತೇಜಸ್ಸಿನಲ್ಲಿ ಸೇರಿಹೋಯಿತು. ರಾಮನಿಗೆ ಜೈಕಾರ ಹಾಕಿದ ಪರಶುರಾಮ ಅಲ್ಲಿಂದ ಮಹೇಂದ್ರಾಚಲಕ್ಕೆ ಹೊರಟ. ಕೊಡಲಿರಾಮನ ಪುಣ್ಯ ರಘುರಾಮನಿಗೆ ಹೀಗೆ ಕೊಡಲ್ಪಟ್ಟಿರುವುದನ್ನು ನೋಡಿ ಸಂತೋಷಪಡುವ ಭಾಗ್ಯ ದಶರಥನಿಗೆ ಇಲ್ಲವಾಗಿತ್ತು. ಆತ ಈ ಸನ್ನೀವೇಶ ಪ್ರಾರಂಭವಾದಾಗಿನಿಂದಲೂ ಭಯದಿಂದ ಕಣ್ಣುಮುಚ್ಚಿಕೊಂಡಿದ್ದ. ಪರಶುರಾಮ ಹೊರಟ ಎಷ್ಟೋ ಹೊತ್ತಿನನಂತರ ಆತ ಕಣ್ಣುಬಿಟ್ಟು ಈ ಎಲ್ಲ ಸಂಗತಿಗಳನ್ನು ತಿಳಿದುಕೊಂಡ. ಅಯೋಧ್ಯೆಗೆ ಹೊರಟ್ಟಿತು ರಾಮನ ದಂಡು.

ಮಕ್ಕಳಿಲ್ಲದೇ ಕೊರಗಿದ್ದ ದಶರಥ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದ. ರಾಜ್ಯವನ್ನು ಸಮರ್ಥರಾದ ಮಂತ್ರಿಗಳು ಆಳುತ್ತಿದ್ದ ಕಾರಣ ರಾಜಕಾರಣದ ಚಿಂತೆ ಇರಲಿಲ್ಲ. ಮಕ್ಕಳ ಸಲುವಾಗಿ ಕಣ್ಣೀರು ಹಾಕುತ್ತಾ ಇರುವವನಿಗೆ ರಾಮನಂತಹ ಮಕ್ಕಳನ್ನು ಕಂಡವನೇ ಇನ್ನುಳಿದ ಮಕ್ಕಳಿಗಿಂತ ರಾಮನೇ ಆತನನ್ನು ಸಂಪೂರ್ಣವಾಗಿ ಆವರಿಸಿದ್ದ. ಧೃತರಾಷ್ಟ್ರನದ್ದು ಕುರುಡು ಮೋಹವಾದರೆ ದಶರಥನದ್ದು ಹುಚ್ಚುಮೋಹ. ರಾಮನಿಗೆ ಏನೂ ಆಗಬಾರದೆನ್ನುವ ಕಾರಣಕ್ಕೆ ಆತ ತಾನೋರ್ವ ಪರಾಕ್ರಮಿಯಾದ ದೊರೆಯೆನ್ನುವುದನ್ನೂ ಮರೆತು ದೀನನಾಗಿ ರಾಮನನ್ನು ಉಳಿಸಿಕೊಳ್ಳಲು ವಿಶ್ವಾಮಿತ್ರರಲ್ಲಿ, ಪರಶುರಾಮರಲ್ಲಿ ವಸ್ತುತಃ ಯಾಚಿಸಿದ್ದ. ಮೊದಲಿನ ಘನತೆಯ ಚಕ್ರವರ್ತಿ ನಂತರ ಈ ಅಂಧಪ್ರೀತಿಯ ಕಾರಣದಿಂದ ಅಳುಮುಂಜಿಯಾಗಿ ಬದಲಾಗಿ ಮಕ್ಕಳಿಲ್ಲದ ವೇಳೆಯಲ್ಲಿ ಗಂಗೋದಕವನ್ನೂ ಹಾಕುವವರಿಲ್ಲದ ಸ್ಥಿತಿಯಲ್ಲಿ ಕೊರಗಿ ಕೊರಗಿ ಸಾಯಬೇಕಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ

Exit mobile version