Site icon Vistara News

ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ

rama narayana yaji

ಋಣದ ಅರಿವಿನಲ್ಲಿ ಹೊಣೆಗಾರಿಕೆ ನಿಭಾಯಿಸಿದ ಕರ್ತವ್ಯ ಪ್ರಜ್ಞೆ

ರಾಮನಾಮೈವ ನಾಮೈವ ನಾಮೈವ ಮಮ ಜೀವನಮ್ I
ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಯಥಾ II

“ಶ್ರೀ ರಾಮನಾಮವೇ ಜಯರಾಮನಾಮವೇ ಜಯ ಜಯ ರಾಮನಾಮವೇ ನನ್ನ ಜೀವನವು. ಕಲಿಯುಗದಲ್ಲಿ ಪರಮಗತಿಯನ್ನು ಹೊಂದಲು ಬೇರೆ ಯಾವ ಉಪಾಯವೂ ಇಲ್ಲ, ಇಲ್ಲ, ಇಲ್ಲವೇ ಇಲ್ಲ”

ವಾಲ್ಮೀಕಿ ರಾಮಾಯಣದ ಮೊದಲು ಬರುವ ರಾಮಾಯಣದ ಮಹಿಮೆಯಲ್ಲಿ ಬರುವ ಶ್ಲೋಕವಿದು. ರಾಮನೆನ್ನುವ ಶಬ್ದ ಒಂದು ಪ್ರಜ್ಞಾ ಪ್ರವಾಹವಾಗಿ ಯುಗ ಯುಗಗಳಿಂದ ಹರಿದು ಬಂದಿದೆ. ಈ ವಾಚಕಶಬ್ದ ಬದುಕಿಗೊಂದು ಸ್ಫೂರ್ತಿಯಾಗಿದೆ. ರಾಮನೆಂದಾಗ ಆತನನ್ನು ಕುಟುಂಬವತ್ಸಲನೆಂದೋ, ಸಮರ್ಥ ರಾಜನೆಂದೋ ಹೇಳುವುದರ ಜೊತೆಗೆ ಆತನು ಆದರ್ಶ ಪುರುಷನೂ ಆಗಿದ್ದಾನೆ. ಕನ್ನಡಿಗೂ ಆದರ್ಶವೆನ್ನುವ ಹೆಸರಿದೆ. ಆದರ್ಶವೆಂದರೆ ನಮ್ಮ ಮುಖಾವಲೋಕನವನ್ನು ಮಾಡಿಕೊಳ್ಳುವುದು.

ರಾಮ ಕಾಡಿಗೆ ಹೋಗುವಾಗ ತಂದೆಯಾದ ದಶರಥ ತನ್ನ ಸಂಗಡ ಒಂದು ಹೊತ್ತಿನ ಊಟವನ್ನಾದರೂ ಮಾಡಿ ಹೋಗು ಎಂದರೆ, ಯಾವಾಗ ಕೈಕೆಯಿ ನ್ಯಾಸವಾಗಿಟ್ಟ ವರಗಳನ್ನು ಪಡೆದುಕೊಂಡಳೋ, ಆ ಕ್ಷಣದಿಂದಲೇ ತಾನು ಈ ರಾಜ್ಯದಲ್ಲಿರುವುದು ಉಚಿತವಲ್ಲವೆಂದು ನಯವಾಗಿಯೇ ತಿರಸ್ಕರಿಸಿ ವನಕ್ಕೆ ಹೊರಟವನ ಮನಸ್ಸಿನಲ್ಲಿ ಇದ್ದಿರುವುದು ಕರ್ತವ್ಯದ ಕುರಿತು ನಿಷ್ಠೆಯೇ ಹೊರತು ಬೇರೇನೂ ಅಲ್ಲ. ಭರತನಿಗೆ ರಾಜ್ಯವನ್ನು ಕೊಡಬೇಕು ಮತ್ತು ನೀನು ಅರಣ್ಯಕ್ಕೆ ಹೋಗಬೇಕೆಂದು ಹೇಳಿದಾಗ ಆತ ಮೊದಲು ಆತಂಕಿತನಾಗಿದ್ದು ತನ್ನ ತಂದೆ ಆಘಾತದಿಂದ ಕುಳಿತಿರುವುದರ ಕುರಿತು. ಆ ಹೊತ್ತಿನಲ್ಲಿ ತನ್ನ ತಂದೆ ಕಳವಳಗೊಂಡು ತಲೆತಗ್ಗಿಸಿ ಮೌನವಾಗಿ ಕುಳಿತಿರುವ ಘಟನೆ ಆತನಿಗೆ ಎಲ್ಲವನ್ನೂ ಹೇಳಿತ್ತು. ರಾಮ ಕೈಕೆಯಿಗೆ “ಅಮ್ಮಾ ನೀನು ನನ್ನ ಸ್ವಭಾವವನ್ನು ಈ ಮೊದಲು ಕಂಡಿಲ್ಲವೇ. ನೀನು ಈ ಮಾತುಗಳನ್ನು ನನಗೇ ನೇರವಾಗಿ ಹೇಳಬಹುದಿತ್ತಲ್ಲ. ನಿನಗೆ ಅಧಿಕಾರವಿತ್ತಲ್ಲವೆ? ನೀನು ಈ ವಿಷಯದಲ್ಲಿ ರಾಜನಾಗಿರುವ ನನ್ನ ತಂದೆಯನ್ನು ನಿರ್ಬಂಧಿಸಿ ಕೇಳಬೇಕಾದ ಅವಶ್ಯಕತೆಯೇನಿತ್ತು” ಎನ್ನುತ್ತಾ ಮುಂದುವರೆದು “ನೂನಂ ಮಯಿ ಕೈಕಯಿ! ಕಿಞ್ಚಿದಾಶಂಸಸೇ ಗುಣಮ್”. ನಿಸ್ಸಂಶಯವಾಗಿ ಇಷ್ಟು ವರ್ಷ ನಿನ್ನ ಹತ್ತಿರ ಇದ್ದರೂ ನಿನ್ನಲ್ಲಿರುವ ಈ ಗುಣಗಳು ನನಗೆ ತಿಳಿಯದೇ ಹೋಯಿತು!” ಎನ್ನುವ ಮಾತುಗಳು ಬಹುಶಃ ಕೈಕೆಯ ಎದೆಯಲ್ಲಿಯೂ ನಡುಕ ಹುಟ್ಟಿಸಿರಲೂ ಸಾಕು.

ರಾಮನ ಬದುಕಿನ ಆದರ್ಶವೇನೆಂದರೆ ಆತನ ಕರ್ತವ್ಯ ಪರಾಯಣತೆ. ಹಿರಿಯ ಮಗನಾಗಿ ತಾನು ತನ್ನ ತಂದೆಯನ್ನು ನೋಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನೂ ಆತ ಬಲ್ಲ. ಹಾಗಾಗಿ ಕೈಕೆಯಿಯ ಈ ಬೇಡಿಕೆಯನ್ನು ಅರಿತ ಮೇಲೆ ತನ್ನ ತಂದೆ ತಾಯಿಯ ಯೋಗಕ್ಷೇಮದ ಚಿಂತೆ ಅವನಿಗೆ ಸಹಜವಾಗಿಯೇ ಬಾಧಿಸಿದೆ. ಒಂದು ವೇಳೆ ಈ ತಾಯಿ ಮತ್ತು ಮಗ ಅವರನ್ನು ನಿರ್ಲಕ್ಷಿಸಿದರೆ ಎನ್ನುವ ಚಿಂತೆ ಆತನನ್ನು ಕಾಡಿದೆ. ಆಗ ಆತ ಕಠೋರವಾಗಿ ಕೈಕೆಯಿಗೆ ತನ್ನ ತಂದೆಯನ್ನು ನೋಡಿಕೊಳ್ಳಬೇಕಾದ ಆಕೆಯ ಕರ್ತವ್ಯದ ಕುರಿತು ಎಚ್ಚರಿಸುತ್ತಾನೆ. “ಭರತಃ ಪಾಲಯೇದ್ರಾಜ್ಯಂ ಶುಶ್ರೂಷೇಚ್ಚ ಪಿತುರ್ಯಥಾ৷ ತಥಾ ಭವತ್ಯಾ ಕರ್ತವ್ಯಂ ಸ ಹಿ ಧರ್ಮ ನಾತನಃ৷৷2.19.26৷৷ “ತನ್ನ ತಂದೆಯನ್ನು ಭರತ ಸರಿಯಾದ ಕ್ರಮದಲ್ಲಿ ಶುಶ್ರೂಷೆ ಮಾಡುವಂತೆ ನೋಡಿಕೊಳ್ಳಬೇಕಾದುದು ನಿನ್ನ ಹೊಣೆ. ಪಿತೃಶುಶ್ರೂಷೆಯೆನ್ನುವದಕ್ಕಿಂತ ಸನಾತನವಾದ ಧರ್ಮ ಮತ್ಯಾವುದೂ ಇಲ್ಲ” ಎನ್ನುವ ಮಾತುಗಳು ಬಲು ಮಹತ್ವದ್ದು.

ರಾಮ ಮಿತಭಾಷಿ, ಹೆಚ್ಚಿಗೆ ವಿವರಣೆ ಆತನಲ್ಲಿಲ್ಲ. ಅದನ್ನು ಮೀರಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆನ್ನುವ ಎಚ್ಚರಿಕೆ ಈ ಮಾತಿನಲ್ಲಿದೆ. ರಾಮನ ಬಾಯಲ್ಲಿ ವಾಲ್ಮೀಕಿ ಆಡಿಸುವ ಇಂತಹ ಮಾತುಗಳ ಮೂಲಕ ರಾಮನ ವ್ಯಕ್ತಿತ್ವವನ್ನು ಬೆಳೆಸುತ್ತಾ ಹೋಗುತ್ತಾರೆ. ವಿಶ್ವಾಮಿತ್ರರು “ಕರ್ತವ್ಯವೇ ನಿನ್ನ ಮುಂದಿನ ದೇವಪೂಜೆ. ಅದೇ ನಿನ್ನ ಧರ್ಮ” ಎಂದು ಉಪದೇಶಿಸಿರುವುದನ್ನು ಕಾಯಾ ವಾಚಾ ಮನಸಾ ಪಾಲಿಸುತ್ತಿರುವವ ಆತ. ಈ ಆದರ್ಶವೇ ಆತ ದೇವರಾಗಲು ಕಾರಣ.

ವಾಲ್ಮೀಕಿಯ ರಾಮ ಪ್ರಜೆಗಳಿಗೂ ಪ್ರೀತಿಪಾತ್ರನಾಗಿದ್ದ. ಅದರ ನಾಡಿಮಿಡಿತ ಅರಿತ ಧಶರಥ ಬಲು ದೀರ್ಘಕಾಲ ಈ ರಾಜ್ಯವನ್ನು ಆಳಿದ. ತನಗಿನ್ನು ಸಾಕು ಈ ಅಧಿಕಾರ, ಇನ್ನು ಮುಂದೆ ರಾಮನಿಗೆ ಪಟ್ಟಕಟ್ಟುವೆ ಎಂದು ನಿಶ್ಚಯಿಸುತ್ತಾನೆ. ಅಯೋಧ್ಯೆಯ ಜನಪದ ರಾಮನನ್ನು ಅಕ್ಕರೆಯಿಂದ ನೋಡುತ್ತಿದ್ದರು. ರಾಜಕುಟುಂಬದೊಡನೆ ಭಾವನಾತ್ಮಕವಾದ ಸಂಬಂಧವನ್ನು ಹೊಂದಿದ ಪ್ರಜೆಗಳು ಬಹುಕಾಲವರೆಗೆ ಮಕ್ಕಳಿಲ್ಲದ ಅರಮನೆಯಲ್ಲಿ ಜನಿಸಿದ ಮೊದಲ ಮಗನ ಕುರಿತು ಒಂದು ಭಾವನಾತ್ಮಕವಾದ ಪ್ರೀತಿಯನ್ನು ಹೊಂದಿರುತ್ತಾರೆ. ಈತ ತಮ್ಮನ್ನು ಮುಂದೆ ಆಳುವವ ಎನ್ನುವ ಒಂದು ಪ್ರಭಾವಳಿ ಆ ರಾಜಕುಮಾರನ ಮೇಲೆ ಬೆಳೆದಿರುತ್ತದೆ. ಭಾವನೆಯೆನ್ನುವುದು ಜಂಗಮ, ಅದು ಸ್ಥಾಯಿಯಾಗಬೇಕಾದರೆ ಸಮಾಜದ ಶೃತಿಗೆ ಸ್ಪಂದಿಸುವ ಶೃತಿ ನಿರಂತರವಾಗಿ ಮೀಟುತ್ತಲೇ ಇರಬೇಕಾಗುತ್ತದೆ.

ರಾಮನಲ್ಲಿಯೂ ಪ್ರಜೆಗಳ ಕುರಿತು ಅಷ್ಟೇ ವಾತ್ಸಲ್ಯವಿತ್ತು. ಅಯೋಧ್ಯೆಯ ಪ್ರಜೆಗಳ ವಿಶೇಷವೆಂದರೆ ರಾಜ ತಪ್ಪುಮಾಡಿದರೆ ಅದನ್ನು ನಿರ್ಭೀತಿಯಿಂದ ಹೇಳಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಸೂರ್ಯವಂಶದ ರಾಜಮನೆತನ ನಿರಂತರವಾಗಿ ಕೋಸಲದೇಶವನ್ನು ಆಳುತ್ತಾ ಬಂದಿದ್ದರೂ ಅವರು ನಿರಂಕುಶರಾಗಿರಲಿಲ್ಲ. ಅರಮನೆಯಿಂದ ತಪ್ಪುಗಳು ಘಟಿಸಿದಾಗ ನೇರವಾಗಿ ರಾಜನಿಗೇ ದೂರು ಕೊಡಬಹುದಾಗಿತ್ತು. ಮಾಂಧಾತನ ಮಗ ದಂಡಕ, ಇಕ್ಷ್ವಾಕುವಿನ ಮಗ ಶಶಾದ ಇವರೆಲ್ಲರೂ ತಪ್ಪು ಮಾಡಿದಾಗ ಅವರನ್ನು ನಿರ್ದಾಕ್ಷಿಣ್ಯವಾಗಿ ಕಾಡಿಗೆ ಅಟ್ಟಿರುವುದನ್ನು ಗಮನಿಸಬಹುದಾಗಿದೆ. ಸಗರನ ಮಗ ‘ಅಸಮಞ್ಜ’ ಎನ್ನುವವ ಕ್ರೂರಿಯಾಗಿದ್ದ. ಆತ ಅಯೋಧ್ಯೆಯ ಚಿಕ್ಕಮಕ್ಕಳನ್ನು ಸರಯೂ ನದಿಯಲ್ಲಿ ಮುಳುಗಿಸಿ ಅವರು ಅಳುವುದನ್ನು ನೋಡಿ ವಿಕೃತಾನಂದವನ್ನು ಹೊಂದುತ್ತಿದ್ದ. ಈ ಕ್ರೌರ್ಯವನ್ನು ಸಹಿಸಲಾರದ ಅಯೋಧ್ಯೆಯ ಪ್ರಜೆಗಳು ಸಗರನಿಗೆ ದೂರು ಕೊಟ್ಟು ಅವನನ್ನು ಶಿಕ್ಷಿಸಲು ಹೇಳಿದಾಗ ತಡಮಾಡದೇ ದೊರೆ ಆತನನ್ನು ತ್ಯಜಿಸಿ ಅರಣ್ಯಕ್ಕೆ ಕಳುಹಿಸಿದ. ಈ ಪರಂಪರೆ ರಾಮನ ಕಾಲದಲ್ಲಿಯೂ ಇತ್ತು. ಸೀತೆ ರಾವಣನಲ್ಲಿ ಇದ್ದು ಬಂದಿರುವ ಕಾರಣದಿಂದ ಜನಸಾಮಾನ್ಯರು ನಗರಗಳಲ್ಲಿ, ಹಳ್ಳಿಗಳಲ್ಲಿ, ಓಣಿ ಓಣಿಗಳಲ್ಲಿ ಆಕೆಯ ಶೀಲದ ಕುರಿತು ಆಡಿಕೊಳ್ಳುತ್ತಿದ್ದರು. ರಾಮನ ಗೂಢಚಾರರಲ್ಲಿ ಓರ್ವನಾದ ಭದ್ರನೆನ್ನುವವ ತನ್ನ ಇತರ ಸಂಗಾತಿಗಳೊಡನೆ ಈ ಸಂಗತಿಯನ್ನು ರಾಮನಿಗೆ ತಿಳುಹಿದ. ನಂತರ ಇದೇ ವಿಷಯವನ್ನು ವಿಜಯ, ಮಧುಮತ್ತ, ಕಾಶ್ಯಪ, ಪಿಂಗಲ, ಕುಟಿ, ಸುರಾಜ, ಕಾಲಿಯ ದಂತವಕ್ತ್ರ ಮತ್ತು ಸುಮಾಗಧರೆನ್ನುವ ಇತರರೂ ರಾಮನಿಗೆ ಅರುಹುತ್ತಾರೆ. ಈ ಸಾರ್ವತ್ರಿಕ ಜನಪವಾದದ ಕಾರಣ ರಾಮ ಸೀತೆಯನ್ನು ತ್ಯಜಿಸಿದ. ಇಲ್ಲಿ ರಾಮ ಸೀತೆಯನ್ನು ಬಿಟ್ಟಿರುವುದನ್ನು ಸಮರ್ಥನೆಗೂ ಅಥವಾ ವಿರೋಧಕ್ಕೂ ಈ ಸಂಗತಿಗಳನ್ನು ಪ್ರಸ್ತಾಪಿಸಿಲ್ಲ. ಆ ಕಾಲದಲ್ಲಿ ಅಯೋಧ್ಯೆಯ ಪ್ರಜೆಗಳಿಗೆ ರಾಜಮನೆತನವನ್ನೂ ಟೀಕಿಸುವಷ್ಟು ವಾಕ್-ಸ್ವಾತಂತ್ರ್ಯವಿತ್ತೆನ್ನುವುದನ್ನು ತಿಳಿಸಲಿಕ್ಕಷ್ಟೇ ಈ ಸಂಗತಿಯನ್ನು ಪ್ರಸ್ತಾಪಿಸಿರುವುದು.

ಇನ್ನೇನು ನಾಳೆ ರಾಮನ ಪಟ್ಟಾಭಿಷೇಕ, ತಮ್ಮ ದೊರೆಯಾಗಬೇಕಾಗಿದ್ದವ ತಮ್ಮ ವಿಶ್ವಾಸಕ್ಕೆ ಮತ್ತು ಒಲವಿಗೆ ಪಾತ್ರನಾದವ ಅರಣ್ಯಕ್ಕೆ ಹೋಗುತ್ತಿದ್ದಾನೆಂದು ತಿಳಿದಾಗ ಸಹಜವಾಗಿ ಅವರಲ್ಲಿ ಭಾವಾವೇಶದ ಕಟ್ಟೆ ಒಡೆಯಿತು. ರಾಮನಿಲ್ಲದ ಅಯೋಧ್ಯೆ ತಮಗೂ ಬೇಡವೆನ್ನುತ್ತಾ ಪ್ರಜೆಗಳು ರಾಮನನ್ನು ಅನುಸರಿಸಿ ಅರಣ್ಯಕ್ಕೆ ಬರುತ್ತೇವೆ ಎನ್ನುವ ಸಮೂಹ ಸನ್ನಿ ಪಟ್ಟಣದಲ್ಲಿ ಹರಡಿತು. ಅವರೆಲ್ಲರೂ ರಾಮನನ್ನು ನೋಡಬೇಕೆಂದು ಹಾತೊರೆಯುತ್ತಿದ್ದರಂತೆ. ವಾಲ್ಮೀಕಿ ಅವರ ಈ ಭಾವಾವೇಶವನ್ನು ವರ್ಣಿಸುವುದು ಹೀಗೆ:

ಸಂಯುಚ್ಛ ವಾಜಿನಾಂ ರಶ್ಮೀನ್ಸೂತ ಯಾಹಿ ಶನ್ಯೆಃ ಶನ್ಯೇಃ ৷
ಮುಖಂ ದ್ರಕ್ಷ್ಯಾಮ ರಾಮಸ್ಯ ದುರ್ದಶಂ ನೋ ಭವಿಷ್ಯತಿ ৷৷2.40-22৷৷

“ಸೂತ! ಕುದುರೆಗಳ ಕಡಿವಾಣವನ್ನು ಎಳೆದು ಬಿಗಿಯಾಗಿ ಹಿಡಿದುಕೊ. ಮೆಲ್ಲ ಮೆಲ್ಲಗೆ ಹೋಗು. ಶ್ರೀರಾಮನ ಮುಖವನ್ನು ನೋಡುತ್ತೇವೆ. ಮುಂದೆ ಬಹಳ ಕಾಲದವರೆಗೆ ಇವನ ಸುಂದರವಾದ ಮುಖಾರವಿಂದವು ನೋಡಲು ಲಭಿಸದು”. ರಾಮನಿಗೆ ಈ ದುಃಸ್ಥಿತಿಯನ್ನು ತಂದ ದಶರಥನನ್ನು ಕೈಕೆಯಿಯನ್ನು ಬಯ್ಯುತ್ತಿದ್ದರು. ಹೆಚ್ಚೇನು, ಆತನ ತಾಯಿಯಾದ ಕೌಸಲ್ಯೆಯನ್ನೂ ಸಹ ಇಂತಹ ಮಗನನ್ನು ಕಾಡಿಗೆ ಕಳುಹಿಸುವ ಮನಸ್ಸು ಆ ತಾಯಿಗೆ ಬಂತೆಂದರೆ ಅವಳ ಹೃದಯ ನಿಸ್ಸಂಶಯವಾಗಿ ಕಬ್ಬಿಣದ್ದೇ ಆಗಿರಬೇಕೆಂದು ದೂಷಿಸುತ್ತಿದ್ದರು. ಆದರೆ ರಾಮ ಮಾತ್ರ ನಿರ್ಲಿಪ್ತನಾಗಿ “ಯಾಹಿ ಸೂತ! ಶೀಘ್ರಂ ಯಾಹಿ- ಸೂತನೇ ಬೇಗ ಹೋಗು, ತಡಮಾಡಬೇಡ” ಎನ್ನುತ್ತಾ ರಥವನ್ನು ಹಾರಿಸಿಕೊಂಡು ಹೋದನಂತೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ

ದಶರಥ, ಕೌಸಲ್ಯೆ ಮತ್ತು ಸುಮಿತ್ರೆಯನ್ನು ಬಿಟ್ಟುಬರುವಾಗ ರಾಮ ಕಠಿಣಹೃದಯಿಯಾಗಿ ಕಾಣಿಸಿದರೂ ಅವನಿಗೆ ಅವರ ಸ್ಥಿತಿಯನ್ನು ನೆನೆದು ದುಃಖ ಒಳಗೊಳಗೇ ಇತ್ತು. ಅದನ್ನು ಹೊರಗೆ ತೋರಿಸಿಕೊಂಡಿಲ್ಲ. ಅವರು ತಮಸಾ ನದಿತೀರಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆಯಲು ನಿರ್ಧರಿಸುತ್ತಾರೆ. ರಾಮನ ರಥ ಎಷ್ಟೇ ವೇಗವಾಗಿ ಚಲಿಸಲಿ, ಅವನನ್ನು ಅನುಸರಿಸಿಕೊಂಡು ಅನೇಕ ಪ್ರಜಾವರ್ಗದವರೂ ಓಡುತ್ತಾ, ಕುದುರೆಯನ್ನೇರಿ, ಹೇಗೋ ಹೇಗೋ ಬಂದುಬಿಟ್ಟಿದ್ದರು. ಅವರೆಲ್ಲರೂ ರೋದಿಸುತ್ತಿದ್ದರು. ಆಗ ರಾಮನಿಗೆ ತನ್ನ ತಂದೆ, ತಾಯಿಯನ್ನು ನೆನೆದು ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಯೋಧ್ಯೆಯ ಪ್ರಜೆಗಳು ಸದ್ಗುಣ ಸಂಪನ್ನನಾದ ತಮ್ಮ ರಾಜನನ್ನು ಬಹಳವಾಗಿ ಪ್ರೀತಿಸುತ್ತಾರೆ. ಹಾಗಾಗಿ ತನಗೆ ತನ್ನ ತಮ್ಮಂದಿರಾದ ಭರತ ಮತ್ತು ಶತ್ರುಘ್ನರ ಕುರಿತು ಚಿಂತೆಯಿಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಿರುವಾಗ ಅವನಿಗೆ ತನ್ನ ತಂದೆ ಮತ್ತು ತಾಯಿಯ ನೆನಪಾಗುತ್ತದೆ. “ಏನು ಮಾಡಲಿ ಹೇಳು, ನನಗೆ ನನ್ನ ತಂದೆ ಮತ್ತು ಯಶಸ್ವಿನಿಯಾದ ನನ್ನ ಅಮ್ಮ ಕೌಸಲ್ಯೆಯ ನೆನಪಾಗುತ್ತದೆ. ನಮ್ಮ ಅಗಲುವಿಕೆಯ ನೋವಿನಿಂದ ಅವರು ಬಾರಿ ಬಾರಿಗೂ ಅತ್ತೂ ಅತ್ತೂ ವಿರಹದ ವ್ಯಥೆಯಲ್ಲಿ ಕಣ್ಣು ಇಂಗಿ ಕುರುಡರಾಗಿಬಿಡುತ್ತಾರೇನೋ” ಎನ್ನುತ್ತಾ ಬಿಕ್ಕುತ್ತಾನೆ.

ಪಿತರಂ ಚಾನುಶೋಚಾಮಿ ಮಾತರಂ ಚ ಯಶಸ್ವಿನೀಮ್৷
ಅಪಿ ವಾನ್ಧೌ ಭವೇತಾಂ ತು ರುದನ್ತೌ ತಾವಭೀಕ್ಷ್ಣಶಃ৷৷2.46.6৷৷

ಕೌಸಲ್ಯೆಯನ್ನು ‘ಯಶಸ್ವಿನಿ’ ಎಂದು ಕರೆಯುತ್ತಾನೆ. ಆ ಮಹಾತಾಯಿಯ ಕುರಿತು ರಾಮನ ಭಾವನೆಗಳೆಲ್ಲವೂ ಇದೊಂದೇ ಮಾತುಗಳಲ್ಲಿ ವ್ಯಕ್ತವಾಗಿವೆ. ಅಯೋಧ್ಯೆಯ ಭಾಗ್ಯಲಕ್ಷ್ಮಿ ಆಕೆ ಎನ್ನುತ್ತಾನೆ, ಕೊನೆಗೆ ಭರತ ದಯಾಗುಣದಿಂದ ಕೂಡಿದವನಾಗಿರುವುದರಿಂದ ಅತ ತಂದೆ ಮತ್ತು ತಾಯಿಯಯರನ್ನು ಧರ್ಮಾರ್ಥಕಾಮಸಹಿತವಾದ ಮಾತುಗಳಿಂದ ಸಂತೈಸುತ್ತಾನೆಂದು ತನ್ನಲ್ಲೇ ತಾನು ಸಮಾಧಾನ ಮಾಡಿಕೊಳ್ಳುತ್ತಾನೆ. ಹೊರಗಡೆ ನಿಷ್ಕರುಣೆಯಿಂದ ಕಾಣುವ ರಾಮನಲ್ಲಿ ಒಳಗಡೆ ದಯಾರ್ದೃವಾದ ಹೃದಯವಿತ್ತು. ಇನ್ನು ಅವನಿಗೆ ಬಂದಿರುವ ಸಮಸ್ಯೆಯೆಂದರೆ ತನ್ನನ್ನು ಅನುಸರಿಸಿಕೊಂಡು ಬಂದ ಪ್ರಜೆಗಳ ವಿಷಯದಲ್ಲಿ ಏನು ಮಾಡಬೇಕೆನ್ನುವುದು. ಮುಂದಿನ ನಿರ್ಜನವಾದ ಅರಣ್ಯಪ್ರದೇಶದಲ್ಲಿ ರಾಕ್ಷಸರು ಮತ್ತು ಕ್ರೂರ ಮೃಗಗಳ ಕಾಟವಿದೆ. ಇಂತಹ ಸನ್ನಿವೇಶದಲ್ಲಿ ಅವರೆಲ್ಲರ ರಕ್ಷಣೆ ಸುಲಭವೂ ಅಲ್ಲ. ಅದೂ ಅಲ್ಲದೇ ಅಲ್ಲಿ ತಪಸ್ಸನ್ನಾಚರಿಸುತ್ತಿರುವ ಋಷಿಮುನಿಗಳ ತಪಸ್ಸು ಭಂಗವಾಗಿಬಿಡುವ ಅಪಾಯವುಂಟು. ಮೊದಲೇ ಕೈಕೆಯಿ, ಪ್ರಜೆಗಳಿಲ್ಲದ ರಾಜ್ಯವೆಂದರೆ ಅದು “ಸುರೆಯನ್ನೆಲ್ಲ ಕುಡಿದು ಬಿಸಾಡುವ ಸೋರೆ ಬುರುಡೆಯಂತೆ” ಅಂತಹ ರಾಜ್ಯ ತನಗೆ ಬೇಡವೆಂದು ಹೇಳಿಬಿಟ್ಟಿದ್ದಾಳೆ. ಇಲ್ಲಿ ರಾಮ ಹೇಳುವ ರಾಜನೀತಿ ಮಾರ್ಮಿಕವಾಗಿದೆ. “ರಾಜನಾದವನು ಪ್ರಜೆಗಳನ್ನು ದೈವಿಕವಾದ (ಪ್ರಕೃತಿಯ ವಿಕೋಪಗಳು), ಅಥವಾ ತಾವಾಗಿಯೇ ಉಂಟುಮಾಡಿಕೊಂಡ ಅಂದರೆ ರೋಗರುಜಿನಗಳಿಂದ ತೊಂದರೆಯಾಗದಂತೆ ಕಾಪಾಡಬೇಕು. ಅಂದರೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿದರೆ ಇವೆಲ್ಲವನ್ನೂ ತಡೆಯಬಹುದೆನ್ನುವುದು ಇಲ್ಲಿನ ಮರ್ಮ. ಮತ್ತೆ ಒಂದು ವೇಳೆ ರಾಜನಿಗೇ ತೊಂದರೆ ಉಂಟಾದರೆ ಅದನ್ನು ಪ್ರಜೆಗಳಿಗೆ ಹಂಚಬಾರದು, ತಾನೊಬ್ಬನೇ ಅನುಭವಿಸಬೇಕು” ಎನ್ನುವ ಈ ಮಾತುಗಳು ಆದರ್ಶ ರಾಜ ಹೇಗಿರಬೇಕೆನ್ನುವುದಕ್ಕೆ ಉದಾಹರಣೆಯಾಗಿದೆ.

Ram Navami 2023

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸುವರ್ಚಲೆ: ಮದುವೆ ಎನ್ನುವುದು ಕನ್ಯೆಯದೇ ಆಯ್ಕೆ

ಈ ಎಲ್ಲಾ ಕಾರಣನಳಿಗಾಗಿ ಬಿಟ್ಟೂ ಬಿಡದೇ ಬೆನ್ನುಹತ್ತಿದ ಅಯೋಧ್ಯೆಯ ಜನರ ಕಣ್ತಪ್ಪಿಸಿ ಕಾಡಿಗೆ ಹೋಗಬೇಕಾಗಿದೆ. ಇದೀಗ ಕಾಡಿನ ಅಂಚಿನಲ್ಲಿದ್ದಾನೆ. ದಶರಥ ಸುಮಂತ್ರನ ಹತ್ತಿರ ರಥವನ್ನು ಕಾಡಿನವರೆಗೆ ಬಿಟ್ಟುಬರಲು ತಿಳಿಸಿದ್ದಾನೆ. ತಮಸಾ ನದಿಯ ದಡದಲ್ಲಿ ಪುರಜನರೆಲ್ಲರೂ ಆಯಾಸದಿಂದ ನಿದ್ರೆ ಮಾಡುತ್ತಿದ್ದಾರೆ. ರಾಮನೊಟ್ಟಿಗೆ ತಾವೂ ಕಷ್ಟಗಳನ್ನು ಸಹಿಸಲು ಅವರೆಲ್ಲರೂ ಅಡವಿಗೆ ಬರಲು ಸಿದ್ಧರಾಗಿಯೇ ಬಂದಿದ್ದಾರೆ. ಅಯೋಧ್ಯೆಯ ಹಿತದ ಮತ್ತು ಪ್ರಜೆಗಳ ಸುರಕ್ಷತಾ ದೃಷ್ಟಿಯಿಂದ ರಾಮ ಹೇಳಿದ ಮಾತುಗಳನ್ನು ಕೇಳಿದ ಕೂಡಲೇ ಇಂಗಿತಜ್ಞನಾದ ಲಕ್ಷ್ಮಣ ರಾಮನಿಗೆ “ಪ್ರಾಜ್ಞನೇ ನನಗೂ ಈ ವಿಚಾರ ಸರಿ ಎನಿಸುತ್ತಿದೆ. ಕೂಡಲೇ ರಥವನ್ನು ಹತ್ತು” ಎಂದು ಸುಮಂತ್ರನನ್ನು ಎಬ್ಬಿಸಿ ರಭಸದಿಂದ ಕೂಡಿದ ತಮಸಾ ನದಿಯ ಸುಳಿಗಳನ್ನು ತಪ್ಪಿಸಿ ನದಿಯನ್ನು ದಾಟಿದರು. ಹಾಗೇ ದಾಟಿದ ರಾಮ ಸುಮಂತ್ರನ ಹತ್ತಿರ “ರಥವನ್ನು ಉತ್ತರ ದಿಕ್ಕಿಗೆ ತೆಗೆದುಕೊಂಡು ಹೋಗಿ ಮತ್ತೆ ಆಚೇ ಈಚೇ ತಿರುಗಿಸಿ ನಾವು ಯಾವ ದಿಕ್ಕಿನ ಕಡೆ ಹೋದೆವೆಂದು ಭ್ರಾಂತಿಯುಂಟಾಗುವಂತೆ ಮಾಡಿಕೊಂಡು ಬಾ” ಎಂದು ಕಳಿಸಿ ಆತ ಹಾಗೇ ಮಾಡಿದ ಮೇಲೆ ರಥವನ್ನು ಕಾಡಿನೊಳಗೆ ತಿರುಗಿಸಿ ಒಳಹೊಕ್ಕನು. ಬೆಳಗಾದ ಮೇಲೆ ತಮಸಾನದಿ ತೀರದಲ್ಲಿ ಮಲಗಿರುವ ಪಟ್ಟಣಿಗರು ರಾಮನನ್ನು ಕಾಣಲಾರದೇ ಅವನಿಗಾಗಿ ಶೋಕಿಸುತ್ತಾ ತಮಸಾ ನದಿಯನ್ನು ದಾಟಿ ಅಲ್ಲಿ ರಥದ ಚಕ್ರದ ಗುರುತು ಅಳಿಸಿಹೋಗಿರುವುದನ್ನು ಕಂಡು ನಿರಾಸೆಗೊಂಡರಂತೆ. ರಾಮನಿಂದ ತಾವು ದೂರವಾಗುವುದಕ್ಕೆ ಕಾರಣವಾದ ತಮ್ಮ ನಿದ್ರೆಗೆ ಧಿಕ್ಕಾರವಿರಲಿ ಎನ್ನುತ್ತಾ ಅಳುತ್ತಾ ಪುನಃ ಅಯೋಧ್ಯೆಯೆಡೆಗೆ ಮರಳಿದರಂತೆ.

ಇಲ್ಲಿ ರಾಮನ ಪ್ರಜ್ಞೆಯ ದೂರದೃಷ್ಟಿಯನ್ನು ಕಾಣಬಹುದಾಗಿದೆ. ಹಾಗಂತ ರಾಮ ತನ್ನ ಈ ಕಾರ್ಯಕ್ಕಾಗಿ ಸಂತಸ ಪಟ್ಟಿಲ್ಲ. ಅಯೋಧ್ಯೆಯ ಪ್ರಜಾಸಮೂಹದ ರಾಜನಿಷ್ಟೆಯನ್ನು ಕಂಡು ಒಳಗೋಳಗೇ ಹೆಮ್ಮೆಪಟ್ಟಿದ್ದ. ಅಂತಹ ನಿಸ್ಪೃಹ ಪ್ರಜೆಗಳನ್ನು ವಂಚಿಸಿ ತಾನು ಅರಣ್ಯಕ್ಕೆ ಬರಬೇಕಾಯಿತೆಂದು ಅವನಿಗೆ ದುಃಖ ಉಮ್ಮಳಿಸಿಬಂತು ಎಂದು ವಾಲ್ಮೀಕಿ ವರ್ಣಿಸುತ್ತಾರೆ. ಪ್ರಜಾವತ್ಸಲ ರಾಮನೆನ್ನುವ ಬಿರುದು ರಾಮನಿಗೆ ಸಿಕ್ಕಿರುವುದು ಪ್ರಜೆಗಳಮೇಲೆ ಆತನಿಗಿರುವ ಇಂತಹ ಕಾಳಜಿಗಳಿಂದಾಗಿ.

ಕಾವ್ಯವೆಂಬ ಟೊಂಗೆಯ ಮೇಲೆ ಕುಳಿತು ರಾಮ ರಾಮ ಎಂದು ಸುಮಧುರವಾಗಿ ಕೂಗುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೃಷ್ಟಿಯ ಹಿಂದಿರುವ ಪೂರ್ಣತೆಯೇ ಅರ್ಧನಾರೀಶ್ವರತ್ವ

Exit mobile version