ರಮೇಶ ದೊಡ್ಡಪುರ, ಬೆಂಗಳೂರು
ಭಾರತ್ ಜೋಡೊ ಯಾತ್ರೆ ಕರ್ನಾಟಕ ಪ್ರವೇಶಿಸುತ್ತಲೇ ಕಾಂಗ್ರೆಸ್ ತನ್ನ ನೆಲೆಯನ್ನು ಭದ್ರಗೊಳಿಸಿಕೊಳ್ಳಲು ಮುಂದಾಗಿದೆ. ಆದರೆ ಈ ಸಮಯದಲ್ಲಿ ಲೈಮ್‌ಲೈಟ್‌ನಲ್ಲಿರುವ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಉಳಿದವರತ್ತ ಗಮನಹರಿಸಿದರೆ ಪರಿಸ್ಥಿತಿಯ ವಸ್ತುಸ್ಥಿತಿ ಅರಿವಾಗುತ್ತದೆ.
ರಾಮಾಯಣದಲ್ಲಿ ರಾಮ-ರಾವಣರ ಯುದ್ಧದ ಸನ್ನಿವೇಶವೊಂದಿದೆ. ವಾಲ್ಮೀಕಿ ಮಹರ್ಷಿಗಳು ಈ ಯುದ್ಧವನ್ನು ಹೀಗೆ ವರ್ಣಿಸಿದ್ದಾರೆ. ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ, ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ. ಅಂದರೆ “ಬಾನಿಗೆ ಬಾನೇ ಹೋಲಿಕೆ, ಕಡಲಿಗೆ ಕಡಲೇ ಹೋಲಿಕೆ; ರಾಮ-ರಾವಣರ ಸಂಗ್ರಾಮಕ್ಕೆ ರಾಮ-ರಾವಣರ ಸಂಗ್ರಾಮವೇ ಹೋಲಿಕೆ” ಎಂದರ್ಥ. ಇಂತಹ ಯುದ್ಧ ನಡೆಯುತ್ತಿರುವಾಗ ಆಗಸದಲ್ಲಿದ್ದ ದೇವತೆಗಳು ಏನು ಮಾಡುತ್ತಿದ್ದರು?
ಇಬ್ಬರೂ ಪರಾಕ್ರಮಿಗಳು, ಇಂತಹ ಯುದ್ಧ ನಡೆಯುತ್ತಿರುವಾಗ ಯಾರು ಗೆಲ್ಲುತ್ತಾರೊ ಹೇಳಲಾಗದು. ನಾವೇನಾದರೂ ರಾಮ ಗೆಲ್ಲುತ್ತಾನೆ ಎಂದುಕೊಂಡು, ರಾಮನಿಗೆ ಜೈಕಾರ ಹಾಕಿದ ನಂತರ ರಾವಣ ಗೆದ್ದರೆ? ಆಗ ಅವನು ನಮ್ಮನ್ನು ಸುಮ್ಮನೆ ಬಿಡುತ್ತಾನೆಯೇ? ಇನ್ನು, ರಾವಣನಿಗೆ ಜೈ ಎಂದು ರಾಮ ಗೆದ್ದುಬಿಟ್ಟರೆ ಅದೂ ಕಷ್ಟ. ಹೀಗಾಗಿ ಯಾವುದಕ್ಕೂ ಸೇಫರ್ ಸೈಡ್ ಇರಲಿ ಎಂದು ರಾ.. ರಾ.. ಜೈ ಎನ್ನುತ್ತಿರೋಣ. ಕೊನೆಗೆ ಯಾರು ಗೆದ್ದರೂ, ನಾನು ನಿನಗೇ ಜೈಕಾರ ಹಾಕುತ್ತಿದ್ದೆ ಎಂದು ಹೇಳಿ ಬಚಾವ್ ಆಗಬಹುದು ಎಂದು ಆಲೋಚಿಸಿದ್ದರಂತೆ!
ಇಂದು ಕಾಂಗ್ರೆಸ್ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಭಾರತ್ ಜೋಡೊ ಯಾತ್ರೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಕರ್ನಾಟಕದ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಯಾತ್ರೆ ಹಾದುಹೋಗುತ್ತದೆ. ಇಡೀ ಯಾತ್ರೆಯ ನೇತೃತ್ವವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದಾರೆ. ಅವರು ಈ ಯಾತ್ರೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಅವರು ಕ್ಯಾಮೆರಾಗಳ ಮುಂದೆ ಮಾತನಾಡುವಾಗ ಗೊತ್ತಾಗುತ್ತದೆ. ಯಾತ್ರೆಯ ತಯಾರಿಯಲ್ಲಿ ಡಿಕೆಶಿ ಸಾಕಷ್ಟು ಬಳಲಿದ್ದಾರೆ.
ಇದು ಹುಂಬತನವೇ?
ಕಾಂಗ್ರೆಸ್ ಪಕ್ಷ ಎಂದಿಗೂ ನಾಯಕರನ್ನು ಆಧರಿಸಿದ ಸಂಘಟನೆ. ಹಳ್ಳಿಹಳ್ಳಿಯಲ್ಲೂ ತಾನು ಕಾಂಗ್ರೆಸಿಗ ಎಂದುಕೊಳ್ಳುವ ಜನರಿದ್ದಾರೆ. ಬಹುಶಃ ಕರ್ನಾಟಕದಲ್ಲಿ ಈ ಪಕ್ಷಕ್ಕೆ ಇರುವಷ್ಟು ರೀಚ್ ಇನ್ಯಾವ ಪಕ್ಷಕ್ಕೂ ಇಲ್ಲ. ಆದರೆ ಇವರ‍್ಯಾರೂ ಪಕ್ಕಾ ಕಾಂಗ್ರೆಸ್ ಭಕ್ತರಲ್ಲ. ಎಲ್ಲರೂ ಕಾಂಗ್ರೆಸ್‌ನ ಒಬ್ಬರಲ್ಲ ಒಬ್ಬ ವ್ಯಕ್ತಿಯ ಕಾರಣಕ್ಕೆ ಒಲವಿರುವವರು. ಅನೇಕ ಹಿರಿಯರು ಇನ್ನೂ ರಾಜೀವ್ ಗಾಂಧಿ, ಇಂದಿರಾ ಗಾಂಧಿಯನ್ನೇ ನೆನಪಿಸಿಕೊಂಡು ಓಟ್ ಹಾಕುತ್ತಾರೆ. ಉಳಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರೇ ಅವರಿಗೆ ಹೈಕಮಾಂಡ್. ಅವರು ಹೋದ ಕಡೆಗೇ ಇವರೂ ಹೋಗುತ್ತಾರೆ. ಈ ನಾಯಕರು ರಾಜ್ಯಮಟ್ಟದಲ್ಲಿ ಒಬ್ಬ ನಾಯಕನ ಅನುಯಾಯಿಯಾಗಿರುತ್ತಾನೆ. ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ತಾಕತ್ತು ಇವತ್ತು ಇರುವುದು ಹೆಚ್ಚಿನಾಂಶ ಕಾಂಗ್ರೆಸಿಗರಿಗೆ ಮಾತ್ರ. ಏಕೆಂದರೆ ಇದು ನಾಯಕರ ಆಧಾರಿತ ಪಕ್ಷ. ಬಿಜೆಪಿಯಲ್ಲಿ ವೈಯಕ್ತಿಕ ಸಾಮರ್ಥ್ಯದ ಆಧಾರದಲ್ಲಿ ಗೆದ್ದು ಬರುವವರು ಇದ್ದಾರಾದರೂ ಅವರಲ್ಲಿ ಬಹಳಷ್ಟು ಜನರು ಒಂದೋ ಜನತಾ ಪರಿವಾರದಿಂದ, ಅಥವಾ ಕಾಂಗ್ರೆಸ್‌ನಿಂದಲೇ ಬಂದವರು. ಆದರೆ ಇದೇ ವಿಚಾರ ಕಾಂಗ್ರೆಸ್‌ಗೆ ದೌರ್ಬಲ್ಯವೂ ಆಗಿದೆ.
ಕಾಂಗ್ರೆಸ್ ಬರಬರುತ್ತ ಯಾವ ಮಟ್ಟಿಗೆ ವ್ಯಕ್ತಿ ಕೇಂದ್ರಿತವಾಗಿದೆಯೆಂದರೆ, ಪಕ್ಷ ಎನ್ನುವುದು ತಾವು ಬಳಸಿ ಬಿಸಾಡುವ ವಸ್ತು ಎಂದುಕೊಂಡವರೂ ಇದ್ದಾರೆ. ಹೈಕಮಾಂಡ್ ಎನ್ನುವುದನ್ನು ತಾನೇ ಆಡಿಸಬಹುದು ಎಂದು ಹೇಳುವವರೂ ಇದ್ದಾರೆ. ಹಿಂದೆಲ್ಲ ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದಕನಾಗಿದ್ದ ಕಾಂಗ್ರೆಸ್, ಪ್ರಾದೇಶಿಕ ನಾಯಕರ ಮೇಲೆಯೇ ಜೋತು ಬಿದ್ದಿದ್ದರಿಂದ ಅನೇಕ ಬಾರಿ ಪ್ರಾದೇಶಿಕ ಪಕ್ಷದಂತೆ ವರ್ತನೆ ಮಾಡಿದ್ದೂ ಇದೆ. ಇದಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಉದಾಹರಣೆ. ಹಿಂದಿ ಭಾಷಿಕರು, ಆರ್ಯ-ದ್ರಾವಿಡರ ಕುರಿತು ಸಿದ್ದರಾಮಯ್ಯ ಅವರ ಮಾತಿಗೂ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್, ಜನಾರ್ದನ ಪೂಜಾರಿ ಅಂಥವರ ಮಾತಿಗೂ ಅಜಗಜಾಂತರ ಇರುವುದು ಕಾಣುತ್ತದೆ.
ರಾಷ್ಟ್ರೀಯತೆ ಹಾಗೂ ಸಂಘಟನೆಯಲ್ಲಿ ಮಾಡಿಕೊಂಡ ರಾಜಿಯಿಂದಾಗಿಯೇ ಕಾಂಗ್ರೆಸ್ ಇಂದು ದೇಶಾದ್ಯಂತ ನೆಲಕಚ್ಚಿದೆ ಎಂಬ ಪ್ರಬಲ ನಂಬಿಕೆಯನ್ನು ರಾಹುಲ್ ಗಾಂಧಿ ಮತ್ತು ತಂಡ ಹೊಂದಿದೆ. ಅದಕ್ಕಾಗಿ ರಾಹುಲ್ ತಂಡದಲ್ಲಿರುವ ಕೆ.ಸಿ. ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೆವಾಲಾ ಮುಂತಾದವರು ಈ ಕಾಂಗ್ರೆಸ್ ಪಕ್ಷವನ್ನು ನಾಯಕರ ಆಧಾರಿತ ಪಕ್ಷದಿಂದ ಕಾರ್ಯಕರ್ತ ಆಧಾರಿತ ಪಕ್ಷವಾಗಿ ಬದಲಾಯಿಸುವ ಮಹತ್ತರ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಇಡೀ ದಿಕ್ಕನ್ನು ಸಂಘಟನೆಯತ್ತ ತಿರುಗಿಸಬೇಕೆಂಬ ಟಾಸ್ಕ್ ಇದೀಗ ತಮ್ಮ ಮೇಲೆಯೇ ಬಿದ್ದಿದೆ ಎನ್ನುವಂತೆ ಡಿ.ಕೆ. ಶಿವಕುಮಾರ್ ಆವಾಹನೆ ಮಾಡಿಕೊಂಡಿದ್ದಾರೆ. ಅವರ ಉದ್ದೇಶದಲ್ಲಿ ಯಾವ ತಪ್ಪೂ ಇಲ್ಲ. ಭಾರತ್ ಜೋಡೊ ಯಾತ್ರೆಗೆ ಪೂರ್ವಭಾವಿಯಾಗಿ ನಡೆಸುತ್ತಿರುವ ಸಭೆಯಲ್ಲಿ, ಎಲ್ಲಿಯೂ ನನ್ನ ಪೋಸ್ಟರ್ ಹಾಕಬೇಡಿ ಎನ್ನುತ್ತಾರೆ. ಇಲ್ಲಿ ಯಾರೂ ಮುಖ್ಯ ಅಲ್ಲ. ದೇಶವೇ ಮುಖ್ಯ, ಪಕ್ಷವೇ ಮುಖ್ಯ ಎನ್ನುತ್ತಾರೆ. ಡಿ.ಕೆ. ಶಿವಕುಮಾರ್‌ಗೆ ಜೈ ಎಂದ ಕಾರ್ಯಕರ್ತರನ್ನು ತಡೆದು, ರಾಹುಲ್ ಗಾಂಧಿಗೆ ಜೈ, ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದು ಕೂಗುತ್ತಾರೆ. ರಾಷ್ಟ್ರಭಕ್ತಿಯಲ್ಲಿ, ದೇಶಕ್ಕೆ ಪ್ರಾಣ ನೀಡುವಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿಲ್ಲ ಎನ್ನುವುದನ್ನು ತಿಳಿಸುತ್ತಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ʼಬಲಿದಾನಗಳನ್ನುʼ ಉದಾಹರಿಸುತ್ತಾರೆ. ಈ ಮೂಲಕ, ಪಕ್ಷದ ಕಾರ್ಯಕರ್ತರು ಇಲ್ಲಿನ ಸ್ಥಳೀಯರ ಬದಲಿಗೆ ಪಕ್ಷದ ಸಿದ್ಧಾಂತದ ಜತೆಗೆ ಬೆಸೆದುಕೊಳ್ಳಬೇಕೆಂದು ಬಯಸಿದ್ದಾರೆ. ಆದರೆ…
ಪಕ್ಷದೊಳಗೆ ಮೂಡಿದ ಸಂಚಲನ
ಕಾಂಗ್ರೆಸ್ ಪಕ್ಷದ ಎಲ್ಲರೂ ದುಡಿಯಬೇಕು. ಟಿಕೆಟ್ ನೀಡುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಹೇಳಿದರು. ಒಬ್ಬ ರಾಜ್ಯ ಘಟಕದ ಅಧ್ಯಕ್ಷನಾಗಿ ಈ ಮಾತು ಸಹಜವೇ ಆಗಿತ್ತು. ಆದರೆ ಇದಕ್ಕೆ ಅನೇಕರು ತಲ್ಲಣಿಸುವಂತಾಯಿತು. ಪಕ್ಷಕ್ಕೆ ದುಡಿಯುವವರಿಗೇ ಮಣೆ ಹಾಕಿದರೆ ತಮ್ಮ, ತಮ್ಮ ಕುಟುಂಬದವರ ಗತಿಯೇನು ಎಂದುಕೊಂಡವರೇ ಮಾಧ್ಯಮಗಳ ಮುಂದೆ ಆತಂಕ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ಪಕ್ಷ, ಒಬ್ಬರೇ ಹೇಳಿದ್ದು ನಡೆಯುವುದಿಲ್ಲ ಎಂದು, ಮುಖ್ಯವಾಗಿ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡವರು ಹೇಳಿದರು. ಡಿ.ಕೆ. ಶಿವಕುಮಾರ್ ಜತೆಯಲ್ಲೇ ಗುರುತಿಸಿಕೊಂಡ ʼಮೂಲ ಕಾಂಗ್ರೆಸಿಗʼರೂ, ಅಧ್ಯಕ್ಷರು ಹೇಳಿದ್ದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಆಮೇಲೆ ನೋಡೋಣ ಎಂದರು.
ಜಾತಿ ಬಲದಿಂದ ದೂರವಾದರೆ?
ತಾವು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಎನ್ನುವುದು ಡಿ.ಕೆ. ಶಿವಕುಮಾರ್ ಬ್ರ್ಯಾಂಡ್ ಆಗಿಬಿಟ್ಟಿದೆ. ಆದರೆ ಚುನಾವಣೆ ವಿಚಾರಕ್ಕೆ ಬಂದರೆ ಈ ಸಮುದಾಯಕ್ಕೆ ಡಿ.ಕೆ. ಶಿವಕುಮಾರ್ ಈಗ ಎರಡನೇ ಪ್ರಾಶಸ್ತ್ಯ. ದೇವೇಗೌಡರ, ಎಚ್.ಡಿ. ಕುಮಾರಸ್ವಾಮಿಯವರ ನಂತರದ ಆಯ್ಕೆ ಡಿ.ಕೆ. ಶಿವಕುಮಾರ್. ಹೀಗಾಗಿ ಚುನಾವಣೆಯಲ್ಲಿ ಇಡೀ ಸಮುದಾಯವನ್ನು ತಮ್ಮತ್ತ ಸೆಳೆಯುವುದು ಈ ಚುನಾವಣೆ ಮಟ್ಟಿಗಂತೂ ಸಾಧ್ಯವಿಲ್ಲ. ಕರ್ನಾಟಕದ ಐತಿಹಾಸಿಕ ಕಾರಣಗಳಿಂದಾಗಿ, ಒಕ್ಕಲಿಗ ಮುಖಂಡ ಎಂದ ಕೂಡಲೆ ಉತ್ತರ ಕರ್ನಾಟಕದಲ್ಲಿ ಸಿಗುವ ಸ್ವಾಗತ ಅಷ್ಟಕ್ಕಷ್ಟೆ. ಇದೆಲ್ಲವನ್ನೂ ಅರಿತಿರುವ ಶಿವಕುಮಾರ್, ತಮ್ಮನ್ನು ಜಾತಿಯನ್ನು ಮೀರಿದ ನಾಯಕ ಎಂದು ಬಿಂಬಿಸಿಕೊಳ್ಳುವ ಅತ್ಯಂತ ಸರಿಯಾದ ಹೆಜ್ಜೆ ಇಟ್ಟಿದ್ದಾರೆ.
ಒಕ್ಕಲಿಗ ಸಮಾವೇಶಗಳಲ್ಲಿ ಮಾತನಾಡುತ್ತ, ತಮಗೂ ಒಂದು ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತಾರಾದರೂ ಅದನ್ನು ಮುಕ್ತವಾಗಿ ಹೇಳುವುದಿಲ್ಲ. ಇನ್ನು ಒಕ್ಕಲಿಗ ಜಿಲ್ಲೆಗಳಲ್ಲಿ ಅನಿರೀಕ್ಷಿತವೆಂಬಂತೆ ಬಿಜೆಪಿಯ ಡಾ. ಸಿ.ಎನ್. ಅಶ್ವತ್ಥನಾರಾಯಣ ಪೈಪೋಟಿಗೆ ಇಳಿದಿದ್ದಾರೆ. ಎಚ್.ಡಿ. ಕುಮಾರಸ್ವಾಮಿಯವರು ಡಿ.ಕೆ. ಶಿವಕುಮಾರ್‌ಗಿಂತಲೂ ಹೆಚ್ಚಾಗಿ ಅಶ್ವತ್ಥನಾರಾಯಣ ವಿರುದ್ಧವೇ ಹರಿಹಾಯುತ್ತಿದ್ದಾರೆ. ಅದಕ್ಕೆ ಇತ್ತೀಚೆಗೆ ಬಿಎಂಎಸ್ ಟ್ರಸ್ಟ್ ವಿಚಾರವೇ ಸಾಕ್ಷಿ. ಅಂದರೆ ಕುಮಾರಸ್ವಾಮಿ ಅವರೂ ತಮ್ಮ ಮೊದಲ ವಿರೋಧಿ ಎಂದು ಶಿವಕುಮಾರ್ ಬದಲಿಗೆ ಅಶ್ವತ್ಥನಾರಾಯಣ ಅವರನ್ನು ಪರಿಗಣಿಸಿದಂತಿದೆ. ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಗಳಿಂದ ಹೊರಬಂದ ಕೂಡಲೆ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರೀಯವಾದಿಯಾಗಿ ವರ್ತನೆ ಮಾಡುತ್ತಾರೆ. ಹೀಗಾಗಿ ಇಲ್ಲಿಯೂ ಡಿ.ಕೆ. ಶಿವಕುಮಾರ್ ತುಸು ಗೊಂದಲದಲ್ಲಿರುವಂತೆ ತೋರುತ್ತಾರೆ.
ಪ್ರಬಲವಾಗುತ್ತಿರುವ ಸಿದ್ದರಾಮಯ್ಯ
ಈಗಾಗಲೆ ಹೇಳಿದಂತೆ, ಕಾಂಗ್ರೆಸ್ ಎನ್ನುವುದು ನಾಯಕರ ಆಧಾರಿತ ಪಕ್ಷ. ಆ ನಾಯಕರು ನಿರ್ದಿಷ್ಟ ಜಾತಿ, ಉಪ ಜಾತಿಗಳನ್ನೇ ತಮ್ಮ ದಾಳಗಳನ್ನಾಗಿ ಮಾಡಿಕೊಂಡವರು. ಈ ರೀತಿ ಜಾತಿ ಮುಖಂಡರನ್ನು ಒಟ್ಟಿಗೆ ಇಟ್ಟುಕೊಂಡವರೇ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕರಾಗುತ್ತಾರೆ. ಇದೇ ಮಾನದಂಡದಲ್ಲಿ ಕಳೆದ ಚುನಾವಣೆ ನಂತರ, ಮೂಲ ಕಾಂಗ್ರೆಸಿಗರ ಬದಲಿಗೆ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾದರು. ಈಗಲೂ ಸಿದ್ದರಾಮಯ್ಯ ಅನೇಕ ಜಾತಿ ಸಮಾವೇಶಗಳಿಗೆ ತೆರಳುತ್ತಿದ್ದಾರೆ. ಸಣ್ಣ ಸಣ್ಣ ಸಮುದಾಯಗಳನ್ನೂ ತಮ್ಮತ್ತ ಸೆಳೆಯುತ್ತಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವವೇ, ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಹೊಂದಿರುವ ವರ್ಚಸ್ಸಿಗೆ ಸಾಕ್ಷಿ.
ಪದೇಪದೆ ತನಿಖಾದಳಗಳ ಸಂಕಷ್ಟ
2017ರಲ್ಲಿ ಗುಜರಾತ್‌ನ ಶಾಸಕರನ್ನು ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಂಡಿದ್ದ ವೇಳೆ ಡಿ.ಕೆ. ಶಿವಕುಮಾರ್‌ಗೆ ಸಂಬಂಧಿತ ಸ್ಥಳಗಳ ಮೇಳೆ ಸಿಬಿಐ ದಾಳಿ ನಡೆಯಿತು. ಆ ಸಮಯದಲ್ಲಿ ಇಡೀ ಪಕ್ಷವೇ ಶಿವಕುಮಾರ್ ಬೆನ್ನಿಗೆ ನಿಂತಿತ್ತು. ಇದು ಇಡೀ ಕಾಂಗ್ರೆಸ್ ಪಕ್ಷದ ವಿರುದ್ಧ ನಡೆದ ದಾಳಿ ಎನ್ನುವಂತೆ ಎಲ್ಲರೂ ಹರಿಹಾಯ್ದಿದ್ದರು. ಆದರೆ ಆನಂತರದಲ್ಲಿ ಡಿ.ಕೆ. ಶಿವಕುಮಾರ್ ಬಂಧನಕ್ಕೊಳಗಾದರು. ಇತ್ತೀಚೆಗಂತೂ ಡಿ.ಕೆ. ಶಿವಕುಮಾರ್ ಆಗಿಂದಾಗ್ಗೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಬುಧವಾರವಷ್ಟೆ ಸಿಬಿಐ ತಂಡ ಡಿ.ಕೆ. ಶಿವಕುಮಾರ್ ಅವರ ಆಸ್ತಿಪಾಸ್ತಿಗಳನ್ನು ಸರ್ವೇ ಮಾಡಿಕೊಂಡು ಹೋಗಿದೆ. ಡಿ.ಕೆ. ಶಿವಕುಮಾರ್ ಮೇಲೆ ಸಿಬಿಐ, ಇಡಿ ದಾಳಿ ಕುರಿತು ಕಾಂಗ್ರೆಸ್‌ನಲ್ಲಿ ಈಗ ಅಷ್ಟೊಂದು ಸೆಂಟಿಮೆಂಟ್ ಉಳಿದುಕೊಂಡಿಲ್ಲ.
ಬಹುಶಃ ಮುಂದೆ ಏನು ಬೇಕಾದರೂ ಆಗಬಹುದು ಎನ್ನುವ ಮನಃಸ್ಥಿತಿಯನ್ನು ಅನೇಕ ಕಾಂಗ್ರೆಸಿಗರು ಹೊಂದಿದ್ದಾರೆ. ತಾವು ಶಿವಕುಮಾರ್ ಬೆನ್ನಿಗೆ ನಿಂತು, ನಾಳೆ ಇನ್ನೇನಾದರೂ ಅನಿರೀಕ್ಷಿತ ಬೆಳವಣಿಗೆ ನಡೆದರೆ ತಮ್ಮ ಗತಿಯೇನು? ಸಿದ್ದರಾಮಯ್ಯ ತಮ್ಮನ್ನು ಒಪ್ಪಿಕೊಳ್ಳದಿದ್ದರೆ ರಾಜಕೀಯ ಭವಿಷ್ಯವೇ ಮುಕ್ತಾಯವಾಗುತ್ತದೆ ಎನ್ನುವ ಆತಂಕದಲ್ಲಿದ್ದಾರೆ. ಯಾವುದಕ್ಕೂ ಸೇಫರ್ ಸೈಡ್‌ಗೆ ಇರಲಿ ಎಂದು ಒಂದು ಬಾರಿ ಶಿವಕುಮಾರ್ ಜತೆ, ಮತ್ತೊಮ್ಮೆ ಸಿದ್ದರಾಮಯ್ಯ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮೋತ್ಸವ ನಂತರ ಈ ಪ್ರವೃತ್ತಿ ಮತ್ತಷ್ಟು ಹೆಚ್ಚಾಗಿದೆ.
ಹಿಡಿದಿರುವ ಆಧಾರವೇ ಅಭದ್ರ
ಕಾಂಗ್ರೆಸ್‌ನ ಸಂಘಟನೆಯನ್ನು ಬಲಪಡಿಸಲು ಡಿ.ಕೆ. ಶಿವಕುಮಾರ್ ಹಿಡಿದಿರುವ ಆಧಾರವೆಂದರೆ ರಾಹುಲ್ ಗಾಂಧಿ. ಈ ಆಧಾರವೇ ಎಷ್ಟು ಅಸ್ಥಿರ ಎನ್ನುವುದನ್ನು ಇಡೀ ದೇಶ ನೋಡುತ್ತಿದೆ. ಪಕ್ಷವನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕೊಂಡೊಯ್ಯಲು, ಪಕ್ಷದಲ್ಲಿರುವ ಪ್ರಬಲ ಶಕ್ತಿಗಳನ್ನು ನಿರ್ವಹಣೆ ಮಾಡುವಲ್ಲಿ ರಾಹುಲ್ ಪದೇಪದೆ ಎಡವುತ್ತಿದ್ದಾರೆ. ರಾಜಸ್ಥಾನ ಕಾಂಗ್ರೆಸ್ ವಿಚಾರವನ್ನು ನಿಭಾಯಿಸುವಷ್ಟರಲ್ಲಿ ಸಾಕುಸಾಕಾಗಿದ್ದಾರೆ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, “ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ” ಎನ್ನುವ ಪರಿಸ್ಥಿತಿ ರಾಹುಲ್ ಗಾಂಧಿ ಅವರದ್ದು. ಮೂಲ ಕಾಂಗ್ರೆಸಿಗರು, ನೆಹರೂ ಕುಟುಂಬದ ನಿಷ್ಠರು, ಪಕ್ಷದ ನಿಷ್ಠಾವಂತ ಕಾಂಗ್ರೆಸಿಗ ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಮೇಲೆ ಅಪಾರ ಪ್ರೀತಿ. ಆದರೆ ಜನರನ್ನು ತಮ್ಮತ್ತ ಸೆಳೆಯುವಲ್ಲಿ, ಸ್ವಲ್ಪ ಎಚ್ಚರ ತಪ್ಪಿದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತವನ್ನೇ ನೀಡಬಹುದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನೂ ಬಿಟ್ಟುಕೊಡುವಂತಿಲ್ಲ. ಇದೇ ಕಾರಣಕ್ಕೆ, ಒಲ್ಲದ ಮನಸ್ಸಿನಿಂದಲೇ ಸಿದ್ದರಾಮೋತ್ಸವಕ್ಕೆ ಬಂದರು. ಇಬ್ಬರೂ ಒಂದಾಗಿ ಎಂದು ಕೈಸನ್ನೆ ಮೂಲಕ ತೋರಿಸಿ ಪ್ಯಾಚ್‌ಅಪ್ ಮಾಡಲು ಪ್ರಯತ್ನಿಸಿದರು.
ಇಂತಹ ಅಸ್ಥಿರ ಆಧಾರವನ್ನು ಹಿಡಿದುಕೊಂಡು ಡಿ.ಕೆ. ಶಿವಕುಮಾರ್ ಸಾಧಿಸುವುದು ಏನು ಎಂಬುದು ಪ್ರಶ್ನೆ. ಇನ್ನು, ಸಂಘಟನೆಯನ್ನು ಬಲಪಡಿಸಿ ತಳಮಟ್ಟದಿಂದ ನಾಯಕರನ್ನು ಬೆಳೆಸಿ ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿ ತಂತ್ರ. ಅದು ಸರಿಯಾದರೂ ತಕ್ಷಣಕ್ಕೆ 2023ರ ಚುನಾವಣೆಗೆ ಇದು ವರ್ಕೌಟ್ ಆಗುವ ಲಕ್ಷಣ ಕಡಿಮೆ. ಶಿವಕುಮಾರ್ ಅವರು ದೀರ್ಘಕಾಲದಲ್ಲಿ ಪಕ್ಷವನ್ನು ಸಂಘಟಿಸಿ ತಾವು ಅದಕ್ಕೆ ನಾಯಕರಾಗಲು ಬಯಸಿದ್ದರೆ ಈಗ ನಡೆಯುತ್ತಿರುವ ಮಾರ್ಗ ಬಹಳಷ್ಟು ಸರಿಯಾಗಿದೆ. ಆದರೆ 2023ರ ಚುನಾವಣೆಯಲ್ಲಿ ʼತಮಗೂ ಒಂದು ಅವಕಾಶʼವನ್ನು ಗಿಟ್ಟಿಸಿಕೊಳ್ಳಬೇಕಾದರೆ ಈಗಿನ ಮಾರ್ಗ ಎಷ್ಟು ಉಯೋಗಕ್ಕೆ ಬರುತ್ತದೆಯೋ ಸ್ಪಷ್ಟತೆ ಇಲ್ಲ. ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಚೆಂಡು ಈಗ ಡಿ.ಕೆ. ಶಿವಕುಮಾರ್ ಕೈಯಲ್ಲೇ ಇದೆ. ಯಾವ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ ಎನ್ನುವುದನ್ನು ತಿಳಿಯಲು ಇನ್ನು ಆರೇಳು ತಿಂಗಳು ಸಾಕು.
ಇದನ್ನೂ ಓದಿ | Bharat Jodo | ರಾಹುಲ್ ಗಾಂಧಿಗೆ ಭಾರತ್ ಜೋಡೊದಲ್ಲಿ ಹೆಜ್ಜೆ ಹಾಕಿದ ದಣಿವಿಗಿಂತ ಪಕ್ಷ ಬಿಕ್ಕಟ್ಟಿನ ದಣಿವೇ ಹೆಚ್ಚು!