ಸದ್ಯದ ಎಲ್ಲ ವೃತ್ತಿಪರ ಉದ್ಯೋಗಿಗಳ ಮಾತುಗಳು ಒಂದು ವಿಷಯದ ಸುತ್ತ ಸುರುಳಿ ಸುತ್ತುತ್ತಿದೆ. ಅದು-ವರ್ಕ್ ಫ್ರಮ್ ಹೋಮ್. “ನಿಮ್ಮ ಆಫೀಸ್ ತೆರೆದಿದೆಯೇ?” “ಎಷ್ಟು ದಿನ ಹೈಬ್ರಿಡ್ ಮಾಡೆಲ್ ಜಾರಿಯಲ್ಲಿ ಇರುತ್ತದೆ?” “ನೀವೇ ಸ್ವತಃ ಯಾವಾಗ ಆಫೀಸ್‌ಗೆ ಹೋಗಬಹುದು ಎಂದು ನಿರ್ಧರಿಸಬಹುದೇ?” ಹೀಗೆ.
ಕೋವಿಡ್ ಬೆನ್ನಲ್ಲೇ ಬಂದ ಲಾಕ್‌ಡೌನ್ ಸರಿಸುಮಾರು ಎಲ್ಲ ಉದ್ಯಮಗಳ ಕೆಲಸ ಮಾಡುವ, ಕಾರ್ಯನಿರ್ವಹಿಸುವ ರೂಪುರೇಷೆಗಳನ್ನು ಒಂದೇ ರಾತ್ರಿಯಲ್ಲಿ ತಲೆ ಕೆಳಗೆ ಮಾಡಿದ್ದು ನಮಗೆಲ್ಲ ತಿಳಿದೇ ಇದೆ. ಎಲ್ಲರ ಸುರಕ್ಷತೆ ದೃಷ್ಟಿಯಿಂದ ಬೇಗನೆ ಅಳವಡಿಸಿದ ಪರಿಹಾರವೇ ವರ್ಕ್ ಫ್ರಮ್ ಹೋಮ್.
ಆಶ್ಚರ್ಯ ಅನ್ನಿಸಬಹುದು, ಆದರೆ ಈ ವರ್ಕ್ ಫ್ರಮ್ ಹೋಮ್ ಅನ್ನೋ ಕಾನ್ಸೆಪ್ಟ್ ಹೊಸದೇನಲ್ಲ. ೧೯೭೩ ಆಸುಪಾಸಿನಲ್ಲಿ ಅಮೇರಿಕಾದಲ್ಲಿ ಇಂಧನ ತೈಲದ ಬೆಲೆ ಗಗನ ಮುಟ್ಟಿದಾಗ ಹಲವಾರು ಕಂಪನಿಗಳು ತನ್ನ ಉದ್ಯೋಗಿಗಳಿಗೆ ತಮ್ಮ ಮನೆಗಳಲ್ಲೇ ಆಫೀಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿಕೊಂಡು ಕೆಲಸ ಮಾಡಲು ಅಥವಾ ತಮ್ಮ ಹತ್ತಿರದ ಕಾಫಿ ಶಾಪ್‌ಗಳಲ್ಲಿ, ಕಮ್ಯೂನಿಟಿ ಲೈಬ್ರರಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಿದವು. ಇದರ ನಿಮಿತ್ತ ಅಮೇರಿಕಾ ತನ್ನ ಉದ್ಯೋಗ ಸಂಬಂಧಿತ ನೀತಿಗಳನ್ನೂ ಬದಲಿಸಿದ್ದು ಗಮನಾರ್ಹ.
೨೦೦೦ ಮುಂದಕ್ಕೆ ಇದರ ಮುಂದುವರಿದ ರೂಪ ನಮಗೆ ಗೋಚರವಾಗುತ್ತದೆ. ಪರ್ಸನಲ್ ಕಂಪ್ಯೂಟರ್, ಇಂಟರ್ನೆಟ್, ಇಮೇಲ್, ಸೆಲ್ ಫೋನ್, ಕ್ಲೌಡ್ ಕಂಪ್ಯೂಟಿಂಗ್, ವಿಡಿಯೋ ಟೆಲಿಫೋನ್ ಇದಕ್ಕೆ ಪ್ರಮುಖ ಕಾರಣಗಳು. ಭಾರತಕ್ಕೆ ಈ ಎಲ್ಲದರ ಪ್ರವೇಶ ತಡವಾಗಿ ಆದರೂ ಇಲ್ಲಿನ ಕಂಪನಿಗಳು ಇವೆಲ್ಲವನ್ನೂ ಅತ್ಯಂತ ವೇಗವಾಗಿ ಅನ್ವಯ ಮಾಡಿಕೊಂಡವು.
ವರ್ಕ್ ಫ್ರಮ್ ಹೋಮ್‌ನ ಅತ್ಯಂತ ಲಾಭದಾಯಕ ಸಂಗತಿಯೆಂದರೆ ಕೆಲಸಗಾರರಿಗೆ ಅದು ಒದಗಿಸುವ ನಮ್ಯತೆ/ ಫ್ಲೆಕ್ಸಿಬಿಲಿಟಿ. ತಮಗೆ ಸೂಕ್ತ ಎನ್ನಿಸುವ ಊರುಗಳಿಗೆ ತೆರಳಿ ಅಲ್ಲಿನಿಂದಲೇ ಕೆಲಸ ಮಾಡುವ ಅವಕಾಶ. ಇದಲ್ಲದೆ ತಮ್ಮ ಪ್ರೀತಿ ಪಾತ್ರರ ಸನಿಹವೇ ಇರುವ ಸದವಕಾಶ. ಮಿಲೇನಿಯಲ್ಸ್ ಎಂದು ಕರೆಯಲ್ಪಡುವ ಈಗಿನ ಪೀಳಿಗೆ “ಡಿಜಿಟಲ್ ನೋಮಾಡ್” ಆಗಿ ಪ್ರಪಂಚದ ವಿವಿಧ ಜಾಗಗಳನ್ನು ಅನ್ವೇಷಿಸಿ ಅಲ್ಲಿಂದ ಕೆಲಸ ಮಾಡುವುದನ್ನು ಬಹಳಷ್ಟು ಇಷ್ಟ ಪಡುತ್ತಿದ್ದಾರೆ.
ಇದನ್ನೇ ಮನದಲ್ಲಿಟ್ಟುಕೊಂಡು ಎಷ್ಟೋ ದೇಶಗಳು, ಉದಾಹರಣೆಗೆ ಎಸ್ಟೋನಿಯಾ ಹಾಗು ಬಾರ್ಬೆಡೋಸ್, ತಮ್ಮ ದೇಶಗಳಿಗೆ ವಿಶ್ವದಾದ್ಯಂತ ಜನರು ಬಂದು ಕೆಲಸ ಮಾಡಲು ವೀಸಾಗಳನ್ನೂ ಘೋಷಿಸಿದ್ದಾರೆ. ಮತ್ತೊಂದು ನೇರ ಲಾಭವೆಂದರೆ ಕಾಸ್ಟ್ ಆಫ್ ಲಿವಿಂಗ್/ಜೀವನ ವೆಚ್ಚ. ಮಹಾನಗರಗಳನ್ನು ಹೊರತುಪಡಿಸಿ ತಮ್ಮ ನಗರಗಳಿಗೆ ಮರಳುವ ವಿಚಾರ ಜೀವನಕ್ಕೆ ತಗಲುವ ವೆಚ್ಚವನ್ನು ಕಮ್ಮಿ ಮಾಡುತ್ತದೆ. ಇದರ ನೇರ ಲಾಭ ಪಡೆದಿರುವ ಸಾಕಷ್ಟು ಮಂದಿ ತಮ್ಮ ಉಳಿತಾಯದ ಜತೆಗೆ ಮತ್ತಿತರ ವ್ಯವಸ್ಥೆಗಳಲ್ಲಿ ಹೂಡಿಕೆಯನ್ನು ಶುರು ಮಾಡಿದ್ದಾರೆ.
ಒಂದೆಡೆ ಕಂಪನಿಗಳಿಗೂ ಅನುಕೂಲವಾಗಿದೆ. ಮೊದಲಾದರೆ ಆಯಾ ಪ್ರಾಜೆಕ್ಟ್ ಅನುಗುಣವಾಗಿ ಆಯಾ ಜಾಗಗಲ್ಲಿ ಸೂಕ್ತ ಜನರನ್ನು ನೇಮಕ ಮಾಡಬೇಕಿತ್ತು. ಇದರಲ್ಲಿ ವರ್ಕ್ ಲೊಕೇಶನ್ ಅನುಗುಣವಾಗಿ ಸೂಕ್ತ ಅರ್ಹತೆ ಇರುವ ಜನರು ಸಿಗದೇ ಇರುವ ಸಾಧ್ಯತೆಗಳು ಹೆಚ್ಚಿದ್ದವು. ಅದಲ್ಲದೆ ಸ್ಪರ್ಧಾತ್ಮಕ ಪೈಪೋಟಿ ತೀವ್ರವಾಗಿತ್ತು. ಈಗ ಪ್ರತಿಭಾವಂತರ ಸಂಖ್ಯೆ ದೊಡ್ಡದಿರುವ ಕಾರಣ ಲೊಕೇಶನ್ ಬೇಸ್ಡ್ ನೇಮಕ ಹೊರತುಪಡಿಸಿ ಯಾವ ಪ್ರಾಜೆಕ್ಟ್ ಯಾವುದೇ ಜಾಗದಲ್ಲಿದ್ದರೂ ದೂರಸ್ಥ ಬೆಂಬಲ/ ರಿಮೋಟ್ ಸಪೋರ್ಟ್ ಕೊಡಬಹುದು. ಇದನ್ನೇ ದೇಶದ ಅತ್ಯಂತ ದೊಡ್ಡ ಐಟಿ ಕಂಪನಿ ಟಿಸಿಎಸ್ ಸೆಕ್ಯೂರ್ ಬಾರ್ಡರ್‌ಲೆಸ್ ವರ್ಕ್‌ಸ್ಪೇಸ್ ಎಂದು ಕರೆಯುತ್ತದೆ.
ಇದನ್ನೂ ಓದಿ | ವಾಕಿಂಗ್ ಚಿತ್ರಗಳು ಅಂಕಣ | ಕೋಪದಿಂದ ಮೂಗು ಕೊಯ್ದುಕೊಂಡರೆ ಅಪಾಯವಿಲ್ಲ!
ಇದರ ನೇರ ಉಪಯೋಗ ಮತ್ತೊಂದಿದೆ- ಜಗತ್ತಿನ ಯಾವುದೇ ಜಾಗದಿಂದಲೂ ಕೆಲಸ ಮಾಡಬಲ್ಲ ಅತ್ಯಂತ ಅಪರೂಪ ಕೌಶಲ್ಯ/ ನಿಶ್ ಸ್ಕಿಲ್ಸ್ ಇರುವ ವ್ಯಕ್ತಿಗಳನ್ನು ಹಲವಾರು ಕಂಪನಿಗಳು ಈಗಲೇ ಆಕರ್ಷಿಸಿವೆ. ಹಲವಾರು ಆಂತರಿಕ ಸಂಶೋಧನೆಗಳ ಪ್ರಕಾರ ವರ್ಕ್ ಫ್ರಮ್ ಹೋಮ್‌ನಿಂದ ಉತ್ಪಾದಕತೆ /ಪ್ರೊಡಕ್ಟಿವಿಟಿ ಶೇಕಡಾ ೧೪% ಹೆಚ್ಚಿದೆ ಹಾಗು ಸ್ವಯಂಚಾಲಿತ ಬಿಡುಗಡೆ/ ಆಟ್ರಿಷನ್ ಶೇಕಡಾ ೧೮% ತಗ್ಗಿದೆ. ಆಫೀಸಿಗೆ ಹೋಗುವ ಪ್ರಯಾಣ ತಗ್ಗಿರುವುದರಿಂದ ನೇರ ಪ್ರಕೃತಿಯ ಮೇಲೂ ಇದರ ಪರಿಣಾಮ ಸಾಕಷ್ಟಿದೆ. ವಾಯುಮಾಲಿನ್ಯ ಹಾಗು ಕಾರ್ಬನ್ ಎಮಿಶನ್ ಕಡಿತಗೊಂಡಿದೆ ಹಾಗು ಗ್ಲೋಬಲ್ ವಾರ್ಮಿಂಗ್ ಎಂಬ ಗಣನೀಯ ವಿಚಾರದಲ್ಲಿ ಧನಾತ್ಮಕ/ಪಾಸಿಟಿವ್ ಆಗಿ ಹೊರಹೊಮ್ಮಿದೆ.
ಇಷ್ಟು ಲಾಭದಾಯಕ ವಿಷಯಗಳಾದರೆ ಉದ್ಯಮಗಳು ಲಾಭದಾಯಕವಲ್ಲದ ಕೆಲ ವಿಷಯಗಳನ್ನೂ ಎದುರಿಸುತ್ತಿವೆ. ವರ್ಷಾನುವರ್ಷಗಳಿಂದ ನಡೆದು ಬಂದ ಕೆಲಸ ಮಾಡುವ ಶೈಲಿ/ ವರ್ಕಿಂಗ್ ಸ್ಟೈಲ್ ಧಿಡೀರನೆ ಬದಲಾದದ್ದು ಕಳವಳಗೊಳಿಸಿದೆ. ಏಕೆಂದರೆ ಆಯಾ ಕಂಪೆನಿಗಳಲ್ಲಿ ಅದರದೇ ಆದ ವರ್ಕಿಂಗ್ ಕಲ್ಚರ್ ಇರುತ್ತದೆ. ಅದು ಇಷ್ಟು ವರ್ಷ ಭೌತಿಕವಾಗಿ ಆಫೀಸ್ ಪರಿಸರದಲ್ಲಿ ನೆಲೆಯೂರಿತ್ತು. ಆದರೆ ಈಗ ಅದನ್ನು ವರ್ಚುಯಲ್ ಆಗಿ ಪಸರಿಸಲು ತೊಂದರೆ ಆಗಿದೆ.
ಮತ್ತೊಂದು ತೊಂದರೆ ಎಂದರೆ ಸಂವಹನ/ಕಮ್ಯುನಿಕೇಷನ್. ಒಗ್ಗೂಡಿ ಯೋಚಿಸುವ ಹಾಗು ಕೆಲಸದಲ್ಲಿ ಅಡಚಣೆಗಳನ್ನು (ಬ್ರೈನ್ ಸ್ಟೋರ್ಮಿಂಗ್ ಹಾಗು ಪ್ರಾಬ್ಲಮ್ ಸಾಲ್ವಿಂಗ್) ಎದುರಿಸುವ ಪ್ರವೃತ್ತಿ ವಾಸ್ತವ ಆಫೀಸಿನಲ್ಲಿ ಸುಲಭವಾಗಿ ಮಾಡಬಹುದಿತ್ತು. ಆದರೆ ರಿಮೋಟ್ ವರ್ಕಿಂಗ್ ಮಾಡೆಲ್‌ನಲ್ಲಿ ಅದರದೇ ಆದ ತೊಡಕುಗಳಿವೆ.
ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ | ಫ್ಯಾಮಿಲಿ ಮೆಕ್ಯಾನಿಕ್ ಕಥೆ
ಅತ್ಯಂತ ಸವಾಲಿನ ವಿಷಯ ಮತ್ತೊಂದಿದೆ. ಅದುವೇ ಸೈಬರ್ ಸೆಕ್ಯೂರಿಟಿ. ತಮ್ಮ ಕಂಪನಿಗಳ ಡೇಟಾ ಇತರೆ ಸ್ಪರ್ಧಾತ್ಮಕ ಕಂಪನಿಗಳ ಕೈಯಲ್ಲಿ ಬೀಳದಿರುವ ಹಾಗೆ ಮಾಡುವುದು ಹಾಗು ಡೇಟಾ ಕಳ್ಳತನ ತಡೆಯುವುದು. ನಿರಂತರವಾಗಿ ಸವಾಲೆನಿಸಿದ್ದ ಈ ಸಂಗತಿ ವರ್ಕ್ ಫ್ರಮ್ ಹೋಮ್ ದೃಷ್ಟಿಯಿಂದ ಮತ್ತಷ್ಟು ಕ್ಲಿಷ್ಟವೆನ್ನಿಸಿದೆ. ಆದರೂ ಡೇಟಾ ದೃಶ್ಯೀಕರಣ/ ವಿಶುವಲೈಸೆಷನ್ ಹಾಗು ಕೃತಕ ಬುದ್ಧಿವಂತಿಕೆ (ಎಐ) ಮೂಲಕ ತಡೆಗಟ್ಟಲು ಪ್ರಯತ್ತಿಸುತ್ತಿವೆ.
ಕೊನೆಯದಾಗಿ, ಕೋವಿಡ್ ಪಿಡುಗು ಜ್ಞಾನಕೇಂದ್ರಿತ/ ನಾಲೆಜ್ ಬೇಸ್ಡ್ ಕಂಪನಿಗಳು ವರ್ಕ್ ಫ್ರಮ್ ಹೋಮ್ ಮಾಡಲ್ ಅನುಸರಿಸಲು ವೇಗವಾಗಿಸಿದ್ದಂತೂ ನಿಜ. ಬರುವ ದಿನಗಳಲ್ಲಿ ಇರುವ ಸಮಸ್ಯೆಗಳಿಗೆ ಪರ್ಯಾಯ ಟೆಕ್ನಾಲಜಿ ಬಳಸಿ ಮತ್ತಷ್ಟು ಉದ್ಯಮಗಳು ರಿಮೋಟ್ ವರ್ಕಿಂಗ್ ಕಡೆಗೆ ಅಥವಾ ಹೈಬ್ರಿಡ್ ಮಾಡೆಲ್ ಕಡೆಗೆ ಹೆಜ್ಜೆ ಇಡುವುದರಲ್ಲಿ ಯಾವುದೇ ಅನುಮಾನವಿಲ್ಲ.
(ಲೇಖಕರು ಐಟಿ ಉದ್ಯೋಗಿ. ʼಗಾಂಚಲಿ ಬಿಡಿ ಕನ್ನಡ ಮಾತಾಡಿʼ ಗುಂಪಿನ ಮೂಲಕ ಕಾರ್ಪೊರೇಟ್ ವಾತಾವರಣದಲ್ಲಿ ಕನ್ನಡ ಹೆಚ್ಚಿಸಲು ಯತ್ನಿಸುತ್ತಿದ್ದಾರೆ.)