Site icon Vistara News

ತಾತಯ್ಯ ತತ್ವಾಮೃತಂ ಅಂಕಣ: ಭಕ್ತಜನಪೋಷ… ವೈಕುಂಠ ವಿಠ್ಠಲೇಶ…

kaivara tatayya12

ಪರಮಾತ್ಮ ಭಕ್ತವತ್ಸಲನೆಂಬ ಬಿರುದನ್ನು ಪಡೆದಿರುವವನು. ಕೈವಾರದ ತಾತಯ್ಯನವರು ತಮ್ಮ ಅಮರನಾರೇಯಣ ಶತಕದಲ್ಲಿ ಭಕ್ತಿತತ್ವದ ಹಲವಾರು ಬೋಧನೆಗಳನ್ನು ರಚಿಸಿದ್ದಾರೆ. ಪರಮಾತ್ಮನಲ್ಲಿ ತಾತಯ್ಯನವರು ಪ್ರಾರ್ಥಿಸುತ್ತಾ, ನನ್ನ ಕೈಬಿಡಬೇಡ, ಪ್ರತ್ಯಕ್ಷವಾಗಿ ಬಂದು ದರ್ಶನಭಾಗ್ಯವನ್ನು ನೀಡು, ಏಕೆಂದರೆ ನಾನು ನಿನ್ನನ್ನೇ ಆಶ್ರಯಿಸಿರುವ ಭಕ್ತ, ನೀನು ಭಕ್ತವತ್ಸಲನೆಂಬ ಬಿರುದು ಹೊತ್ತಿರುವ ಭಕ್ತಪೋಷ. ಆದ್ದರಿಂದ ನಿನ್ನನ್ನು ಬೇಡುವ ಅಧಿಕಾರ ನನಗಿದೆ. ನನ್ನ ಪ್ರಾರ್ಥನೆಯನ್ನು ಈಡೇರಿಸುವ ಹೊಣೆಯು ನಿನ್ನದೆ ಎನ್ನುತ್ತಾ ಪರಮಾತ್ಮನಲ್ಲಿ ಭಕ್ತಿಯ ನಿವೇದನೆಯನ್ನು ಈ ರೀತಿಯಾಗಿ ಮಾಡುತ್ತಿದ್ದಾರೆ.

ಪ್ರಸ್ತುತ ಪದ್ಯದಲ್ಲಿ ಭಗವಂತನು ಯಾವ ಯಾವ ರೀತಿಯಲ್ಲಿ ಭಕ್ತರನ್ನು ಕಾಪಾಡಿ ಭಕ್ತಪೋಷಕನಾದನೆಂಬ ವಿವರಗಳನ್ನು ತಾತಯ್ಯನವರು ಬಿನ್ನವಿಸಿಕೊಳ್ಳುತ್ತಿದ್ದಾರೆ.

ರಾವಣುನಿ ತಮ್ಮುನಿ ರಾಜು ಜೇಸಿನಯಟ್ಲು
ಅರ್ಕಸುತುನಕು ಅಭಯಮಿಚ್ಚಿನಟ್ಲು
ಆಂಜನೇಯುನಿ ಮೀದ ಅತಿ ಪ್ರೇಮ ವುನ್ನಟ್ಲು
ಅಕ್ರೂರಭಕ್ತುನಿ ಅದರಿಂಚಿನಟ್ಲು||

ಲಂಕಾಧಿಪತಿಯಾದ ರಾವಣನ ತಮ್ಮ ವಿಭೀಷಣ. ಹದಿನಾಲ್ಕು ಮಂದಿ ಪರಮ ಭಾಗವತೋತ್ತಮರಲ್ಲಿ ವಿಭೀಷಣ ಕೊನೆಯವನು. ಈತನು ಶರಣಾಗತ ಭಕ್ತ. ಧರ್ಮವನ್ನು ಎತ್ತಿಹಿಡಿಯುವುದಕ್ಕಾಗಿ ಅಣ್ಣನಾದ ರಾವಣನ ರಾಕ್ಷಸೀ ಗುಣವನ್ನು ಧಿಕ್ಕರಿಸಿ, ದೈವಿಗುಣಗಳನ್ನು ಹೊಂದಿದ್ದ ಶ್ರೀರಾಮನಲ್ಲಿಗೆ ಬಂದು ಶರಣಾಗಿ ಬಂದವನು ವಿಭೀಷಣ. ರಾವಣನಿಗೆ ಎದುರು ನಿಲ್ಲುವ ಧೈರ್ಯವನ್ನು ಮಾಡದಿದ್ದರೆ ವಿಭೀಷಣನು ಎಲ್ಲರಂತೆ ಮರಣವನ್ನು ಹೊಂದಬೇಕಾಗಿತ್ತು. ರಾವಣನ ತಮ್ಮಂದಿರು, ಮಕ್ಕಳು ಎಲ್ಲರೂ ಯುದ್ಧದಲ್ಲಿ ಮರಣವನ್ನು ಹೊಂದಿದರು. ಆದರೆ ವಿಭೀಷಣನ ಭಕ್ತಿಯ ದೂರದ ಆಲೋಚನೆಯಿಂದ ರಾಮನಲ್ಲಿಗೆ ಬಂದು ಶರಣಾದನು. ಕೊನೆಗೆ ರಾವಣನ ಮರಣದ ನಂತರ ಶ್ರೀರಾಮನು ಲಂಕೆಗೆ ವಾರಸುದಾರನಾದ ವಿಭೀಷಣನಿಗೆ ಪಟ್ಟಾಭಿಷೇಕವನ್ನು ಮಾಡುತ್ತಾನೆ. ಇದನ್ನೇ ತಾತಯ್ಯನವರು ಶ್ರೀರಾಮ ಅವತಾರವೆತ್ತಿ ಶರಣಾಗತನಾದ ವಿಭೀಷಣನ ರಕ್ಷಣೆ ಮಾಡಿದಂತೆ ನನ್ನನ್ನು ಕಾಪಾಡು ಎನ್ನುತ್ತಿದ್ದಾರೆ.

ಅರ್ಕಸುತನೆಂದರೆ ಸೂರ್ಯಪುತ್ರನಾದ ಸುಗ್ರೀವ. ವಾಲಿಯು ತಮ್ಮನಾದ ಸುಗ್ರೀವನ ಪತ್ನಿಯನ್ನು ಅಪಹರಿಸಿ, ರಾಜ್ಯದಿಂದ ಹೊರದೂಡಿದ ಪ್ರಸಂಗವು ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿದೆ. ಸೀತಾಪಹರಣವಾದ ನಂತರ ರಾಮಲಕ್ಷ್ಮಣರು ಋಷ್ಯಮೂಕ ಪರ್ವತಕ್ಕೆ ಬರುತ್ತಾರೆ. ಇಲ್ಲಿ ರಾಮನಿಗೂ ಸುಗ್ರೀವನಿಗೂ ಸ್ನೇಹವಾಗುತ್ತದೆ. ಸೀತಾಮಾತೆಯನ್ನು ಹುಡುಕಿಕೊಡುವಲ್ಲಿ ಸುಗ್ರೀವನು ತನ್ನ ವಾನರಸೈನ್ಯವನ್ನು ಅಣಿಗೊಳಿಸುತ್ತಾನೆ. ಶ್ರೀರಾಮನು ಸುಗ್ರೀವನಿಗೆ ಅಭಯವನ್ನು ನೀಡುತ್ತಾನೆ. ಅದರಂತೆ ವಾಲಿಯನ್ನು ಸಂಹಾರ ಮಾಡಿ, ಸುಗ್ರೀವನಿಗೆ ರಾಜ್ಯಪಟ್ಟಾಭಿಷೇಕವನ್ನು ಮಾಡಿಸುತ್ತಾನೆ. ಈ ಪ್ರಸಂಗವನ್ನು ತಾತಯ್ಯನವರು ಕೊಂಡಾಡುತ್ತಾ, ಸುಗ್ರೀವನಿಗೆ ದರ್ಶನ ಮತ್ತು ಅಭಯವನ್ನು ನೀಡಿದಂತೆ ನನಗೂ ಅಭಯವನ್ನು ನೀಡು ಎನ್ನುತ್ತಿದ್ದಾರೆ ತಾತಯ್ಯನವರು.

ಭಗವಂತನ ದರ್ಶನ-ಪ್ರೇಮ

ನಿಜವಾದ ಭಕ್ತನಿಗೆ ಏನು ಬೇಕು? ಪರಮಾತ್ಮನ ಪ್ರತ್ಯಕ್ಷ ದರ್ಶನ ಹಾಗೂ ಭಗವಂತನ ಪ್ರೇಮ. ಇದೆರಡನ್ನೂ ಪಡೆದವನೇ ರಾಮದೂತ ಆಂಜನೇಯ. ಇದನ್ನೇ ತಾತಯ್ಯನವರು “ಆಂಜನೇಯುನಿ ಮೀದ ಅತಿ ಪ್ರೇಮ ವುನ್ನಟ್ಲು” ಎಂದಿದ್ದಾರೆ. ಶ್ರೀರಾಮನಲ್ಲಿ ಆಂಜನೇಯನು ಹೊಂದಿದ್ದ ಪ್ರೇಮಭಕ್ತಿ ಅಪಾರವಾದುದು. ಶ್ರೀರಾಮನು ಆಂಜನೇಯನಿಗೆ ಧನ,ಕನಕ, ವಸ್ತು, ವಾಹನ ಯಾವುದನ್ನೂ ನೀಡಲಿಲ್ಲ. ಬದಲಾಗಿ ಪ್ರೀತಿಯಿಂದ ಬಾಚಿತಬ್ಬಿಕೊಂಡು “ಹನುಮ, ನೀನು ಮಾಡಿರುವ ಉಪಕಾರಕ್ಕೆ ನನ್ನ ಪಂಚಪ್ರಾಣಗಳನ್ನು ನೀಡಿದರೂ ಸರಿಹೊಂದುವುದಿಲ್ಲ. ಆಗಲೂ ನಾನು ನಿನಗೆ ಋಣಿಯಾಗಿರುತ್ತೇನೆ. ನಾನು ಋಣಿಯಾಗಿ ಉಳಿಯುವುದೇ ಲೇಸು. ಏಕೆಂದರೆ ಅಪತ್ಕಾಲದಲ್ಲಿ ಮಾತ್ರ ಉಪಕಾರ ಮಾಡುತ್ತಾರೆ. ನಿನಗೆ ಎಂದೆಂದಿಗೂ ಅಂತಹ ಅಪತ್ಕಾಲದ ಸಮಯ ಬರುವುದೇ ಬೇಡ” ಎಂದು ಅನುಗ್ರಹಿಸುತ್ತಾನೆ. ಆಂಜನೇಯನಿಗೆ ತೋರಿದ ಪ್ರೇಮ ಮತ್ತು ದರ್ಶನಭಾಗ್ಯವನ್ನು ನೀಡುವಂತೆ ತಾತಯ್ಯನವರು ಬೇಡಿದ್ದಾರೆ.

ಅಕ್ರೂರ ಚರಿತ್ರೆಯು ಭಾಗವತದ ದಶಮಸ್ಕಂಧದಲ್ಲಿ ಬರುತ್ತದೆ. ಅಕ್ರೂರ ಕಂಸನ ಮಂತ್ರಿ. ಆದರೆ ಶ್ರೀಕೃಷ್ಣನ ಅಂತರಂಗ ಭಕ್ತ. ಕಂಸನ ಆಜ್ಞೆಯಂತೆ ನಂದಗೋಕುಲಕ್ಕೆ ಬರುತ್ತಾನೆ. ಗೋಪಿಕೆಯರ ಕೃಷ್ಣಭಕ್ತಿಯನ್ನು ಕೇಳಿ ಭಕ್ತಿಪರವಶನಾಗುತ್ತಾನೆ. ಬಲರಾಮ, ಕೃಷ್ಣರನ್ನು ಮಧುರೆಗೆ ರಥದಲ್ಲಿ ಕರೆದುಕೊಂಡು ಹೋಗುವಾಗ ನಡುದಾರಿಯಲ್ಲಿ ಯಮುನಾ ನದಿಯಲ್ಲಿ ಸ್ನಾನಕ್ಕಾಗಿ ಇಳಿಯುತ್ತಾರೆ. ಆಗ ಅವನಿಗೆ ಕೃಷ್ಣಲೀಲೆಯ ಅನುಭವವಾಗುತ್ತದೆ. ಯಮುನಾ ನದಿಯ ನೀರಿನಲ್ಲೂ ಕೃಷ್ಣನನ್ನು ಕಾಣುತ್ತಾನೆ, ರಥದಲ್ಲೂ ಕೃಷ್ಣನನ್ನು ಕಾಣುತ್ತಾನೆ. ಆಗ ಭಾವಪರವಶನಾಗಿ ಭಕ್ತಿಯಿಂದ ಶ್ರೀಕೃಷ್ಣನ ಸ್ತೋತ್ರ ಮಾಡುತ್ತಾನೆ. ಆಗ ಶ್ರೀಕೃಷ್ಣನು ಅಕ್ರೂರನಿಗೆ ವಿಶ್ವರೂಪದರ್ಶನವನ್ನು ತೋರಿ ಅನುಗ್ರಹಿಸುತ್ತಾನೆ. ಈ ರೀತಿಯಾಗಿ ತನಗೂ ದರ್ಶನಕೊಟ್ಟು ಆದರಿಸು ಪರಮಾತ್ಮ ಎಂದು ತಾತಯ್ಯನವರು ವಿನಂತಿಸಿದ್ದಾರೆ.

ಗಜೇಂದ್ರ ಸ್ಮರಣೆ

ಮೊರಬೆಟ್ಟುಕೊನ್ನ ಯಾ ಕರಿನಿ ಗಾಚಿನಯಟ್ಲು
ಯದುಕುಲಂಬೆಲ್ಲ ಯೀಡೇರ್ಚಿನಟ್ಲು
ಅಮರೇಂದ್ರತನಯುನಕು ಆತ್ಮ ದೆಲಿಪಿನಯಟ್ಲು
ಪ್ರಹ್ಲಾದುನಕು ಪ್ರಸನ್ನಮೈನಯಟ್ಲು ||

ಮೊರೆಯಿಟ್ಟ ಕರಿರಾಜನನ್ನು ಕಾಪಾಡಿದ ಗಜೇಂದ್ರಮೋಕ್ಷ ವೃತ್ತಾಂತವನ್ನು ತಾತಯ್ಯನವರು ಸ್ಮರಿಸುತ್ತಿದ್ದಾರೆ. ವಿಷ್ಣುಭಕ್ತನಾದ ಇಂದ್ರದ್ಯುಮ್ನನೆಂಬ ರಾಜ ಅಗಸ್ತ್ಯಮುನಿಯ ಶಾಪದಿಂದಾಗಿ ಆನೆಯಾಗಿ ಹುಟ್ಟಿದನು. ಹೀಗೆಯೇ ಹೂಹೂ ಎಂಬ ಗಂಧರ್ವನು ದೇವಲಋಷಿಯ ಶಾಪದಿಂದ ಮೊಸಳೆಯಾಗಿ ಹುಟ್ಟಿದನು. ತ್ರಿಕೂಟಪರ್ವತದ ತಪ್ಪಲಿನ ಕೊಳದಲ್ಲಿ ಆನೆಯು ನೀರು ಕುಡಿದು ಜಲಕ್ರೀಡೆಯಲ್ಲಿರುವಾಗ, ನೀರಿನಲ್ಲಿದ್ದ ಮೊಸಳೆ ಆ ಆನೆಯ ಕಾಲನ್ನು ಹಿಡಿಯಿತು. ಆನೆಯು, ಮೊಸಳೆಯೊಂದಿಗೆ ಹೋರಾಡಿ, ಹೋರಾಡಿ ಸುಸ್ತಾಗಿ ಕೊನೆಗೆ ಪರಮಾತ್ಮನಲ್ಲಿ ಮೊರೆಯಿಟ್ಟಿತು. ಗರುಡಾರೂಢನಾಗಿ ಶ್ರೀಮಹಾವಿಷ್ಣುವು ಬಂದಾಗ ತನ್ನ ಸೊಂಡಿಲಿನಿಂದ ಕಮಲಪುಷ್ಪವನ್ನು ಎತ್ತಿ ಅರ್ಪಿಸಿತು. ಆಗ ಶ್ರೀವಿಷ್ಣುವು ತನ್ನ ಚಕ್ರದಿಂದ ಮೊಸಳೆಯನ್ನು ಕೊಂದು ಶಾಪವಿಮೋಚನೆಯನ್ನು ಮಾಡಿದನು. ಆನೆಯಾಗಿದ್ದ ಭಕ್ತನನ್ನು ವೈಕುಂಠಕ್ಕೆ ಕರೆದುಕೊಂಡುಹೋದನು. ಇದೇ ಗಜೇಂದ್ರಮೋಕ್ಷದ ಭಕ್ತಿತತ್ವ. ಗಜರಾಜನ ಮೊರೆ ಕೇಳಿ ಬಂದು ಕಾಪಾಡಿದ ಹಾಗೆ ನನಗೂ ಪ್ರತ್ಯಕ್ಷವಾಗಿ ಬಾ ಎಂದು ಪರಮಾತ್ಮನಲ್ಲಿ ತಾತಯ್ಯನವರು ಬೇಡಿದ್ದಾರೆ.

sri krishna janmashtami2

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಉತ್ತಮ ಗುರುಬೋಧೆಯ ಫಲ

ಕೃಷ್ಣಾವತಾರದ ಕೊನೆಯ ಘಟ್ಟದಲ್ಲಿ ಯದುಕುಲದವರನ್ನು ಉದ್ಧರಿಸಿದ ವೃತ್ತಾಂತವಿದೆ. ಶ್ರೀಕೃಷ್ಣನ ಆಶ್ರಯದಲ್ಲಿದ್ದ ಯದುವೀರರು ಕುಡಿತ ಮುಂತಾದ ಕೆಟ್ಟ ಚಟಗಳನ್ನು ರೂಢಿಸಿಕೊಂಡಿರುತ್ತಾರೆ. ಅವರನ್ನು ಎದುರಿಸುವವರು ಇರುವುದಿಲ್ಲ. ಇಂತಹ ಸಮಯದಲ್ಲಿ ಶ್ರೀಕೃಷ್ಣನು ಮಾಯಾಲೀಲೆಯನ್ನು ರಚಿಸಿ, ಅವರೆಲ್ಲರೂ ಅಯುಧಗಳಿಂದ ಹಾಗೂ ಜೊಂಡುಹುಲ್ಲಿನಿಂದ ತಮ್ಮ ಬಂಧುಗಳನ್ನು ತಾವೇ ಹೊಡೆದುಕೊಂಡು ಎಲ್ಲರೂ ಸಾಯುತ್ತಾರೆ. ಅವರೆಲ್ಲರೂ ಶ್ರೀಕೃಷ್ಣನ ದರ್ಶನ ಮತ್ತು ಆಶೀರ್ವಾದದಿಂದ ಮುಕ್ತರಾಗುತ್ತಾರೆ. ಸಾವಿನ ಸಂದರ್ಭದಲ್ಲೂ ಯದುಕುಲದವರನ್ನು ತನ್ನವರೆಂದು ತಿಳಿದು ಶ್ರೀಕೃಷ್ಣನು ಕರುಣಿಸಿದ್ದನ್ನು ತಾತಯ್ಯನವರು ಹೊಗಳುತ್ತಾ, ಅಂತಹ ಕರುಣೆಯನ್ನು ನನ್ನ ಮೇಲೂ ತೋರಿಸಿ ಭವಸಾಗರವನ್ನು ದಾಟಿಸು ಎಂದು ಪ್ರಾರ್ಥಿಸಿದ್ದಾರೆ.

ಅಮರೇಂದ್ರತನಯನೆಂದರೆ ಅರ್ಜುನ. ಕುಂತೀಗರ್ಭದಲ್ಲಿ ಇಂದ್ರನ ಅಂಶದಿಂದ ಜನಿಸಿದವನೇ ಅಮರೇಂದ್ರತನಯ, ಅರ್ಜುನ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಬಂಧು-ಗುರುಗಳ ಮೋಹದಿಂದ ಯುದ್ಧ ಮಾಡಿ ಕೊಲ್ಲಲು ಹಿಂಜರಿದ ಅರ್ಜುನನಿಗೆ ಪಾರ್ಥಸಾರಥಿಯಾಗಿ ರಥದಲ್ಲಿ ಕುಳಿತಿದ್ದ ಶ್ರೀಕೃಷ್ಣನು ವಿವೇಕ ಹೇಳುತ್ತಾನೆ. ಆಗ ಶ್ರೀಕೃಷ್ಣನು ಅರ್ಜುನನಿಗೆ ಗೀತಾಬೋಧನೆಯ ಮೂಲಕ ಆತ್ಮತತ್ವವನ್ನು ತಿಳಿಸಿಕೊಡುತ್ತಾನೆ. ಯಾವ ರೀತಿಯಾಗಿ ಅರ್ಜುನನಿಗೆ ಪ್ರತ್ಯಕ್ಷವಾಗಿ ಆತ್ಮತತ್ವವನ್ನು ಬೋಧಿಸಿ ಸಲುಹಿದೆಯೋ, ಅದೇ ರೀತಿಯಾಗಿ ನನ್ನನ್ನು ಸಲಹು ಎಂದು ತಾತಯ್ಯನವರು ಪರಮಾತ್ಮನಲ್ಲಿ ಮೊರೆಯಿಟ್ಟಿದ್ದಾರೆ.

ಪ್ರಹ್ಲಾದ ಚರಿತ್ರೆಯು ಭಾಗವತದ ಸಪ್ತಮಸ್ಕಂಧದಲ್ಲಿ ಬರುತ್ತದೆ. ವಿಷ್ಣುವಿನ ಭಕ್ತನಾದ ಪ್ರಹ್ಲಾದನು ತಂದೆಯಾದ ಹಿರಣ್ಯಕಶಿಪುವಿಗೆ ಭಗವಂತನು ಎಲ್ಲೆಲ್ಲೂ ಇರುವನೆಂದು ನುಡಿಯುತ್ತಾನೆ. ಕಂಬದಿಂದ ನರಸಿಂಹರೂಪಿಯಾಗಿ ಬಂದ ಪರಮಾತ್ಮ ಹಿರಣ್ಯಕಶಿಪುವನ್ನು ಸಂಹರಿಸಿ, ಅವನ ಕರುಳನ್ನು ಧರಿಸಿ ಉಗ್ರ ಸ್ವರೂಪವನ್ನು ತಾಳುತ್ತಾನೆ. ಕೊನೆಗೆ ಪ್ರಹ್ಲಾದನ ಸ್ತ್ರೋತ್ರದಿಂದಲೇ ಉಗ್ರತ್ವವನ್ನು ಬಿಟ್ಟು ಶಾಂತರೂಪವನ್ನು ತಾಳಿ ಪ್ರಹ್ಲಾದನಿಗೆ ಪ್ರಸನ್ನವಾದಂತೆ ನನಗೂ ಪ್ರಸನ್ನನಾಗು ಎಂದು ಪರಮಾತ್ಮನಲ್ಲಿ ತಾತಯ್ಯನವರು ಪ್ರಾರ್ಥಿಸುತ್ತಿದ್ದಾರೆ.

ವೇಗ ಪ್ರತ್ಯಕ್ಷಮೈ ರಮ್ಮು ಯೆವರು ದಿಕ್ಕು
ಭಕ್ತಜನಪೋಷ ವೈಕುಂಠವಿಟ್ಠಲೇಶ||

ಭಕ್ತ ಜನರನ್ನು ಪೋಷಿಸುವ, ವೈಕುಂಠದಲ್ಲಿ ವಾಸಿಸುವ ವಿಠ್ಠಲೇಶನೇ, ಬೇಗ ಪ್ರತ್ಯಕ್ಷವಾಗು, ನನಗೆ ಇನ್ಯಾರು ದಿಕ್ಕು ಎಂದು ತಾತಯ್ಯನವರು ಪರಿಪರಿಯಾಗಿ ಪರಮಾತ್ಮನಲ್ಲಿ ಪ್ರಾರ್ಥಿಸುತ್ತಾ ಭಕ್ತರಿಗೆ ಭಕ್ತಿಮಾರ್ಗದ ತತ್ವವನ್ನು ಉಪದೇಶ ಮಾಡಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

Exit mobile version