Site icon Vistara News

ನನ್ನ ದೇಶ ನನ್ನ ದನಿ ಅಂಕಣ | ವಿಷಸರ್ಪಗಳನ್ನು ಓಲೈಸುವ ರಾಜಕಾರಣ ಇನ್ನು ಬೇಕಿಲ್ಲ

vistara column

ಪ್ರಕೃತಿಯು ಮುನಿಸಿಕೊಂಡಿದ್ದು ಭಾರತವು ಅತಿವೃಷ್ಟಿಯಿಂದ ತತ್ತರಿಸುತ್ತಿದೆ. ಕುಡಿಯುವ ನೀರಿಗೇ ತತ್ವಾರ ಎನ್ನುವಂತಹ ಕಡೆಯೂ ವಿನಾಶಕಾರಿ ಪ್ರವಾಹದಿಂದ ಹಾನಿಯುಂಟಾಗಿದೆ. ಚೀನಾ ದೇಶವು ವಿದ್ಯುತ್ ಕೊರತೆ, ಅತಿ ಶಾಖದ ಬಿರುಗಾಳಿ, ಅನಾವೃಷ್ಟಿ ಮತ್ತು ಜಲಕ್ಷಾಮಗಳಿಂದ ಕಂಗೆಟ್ಟುಹೋಗಿದೆ. ಪ್ರಜಾಪ್ರಭುತ್ವವಿಲ್ಲದ ಅಂತಹ ರಕ್ಕಸ ದೇಶಗಳಲ್ಲಿ ಜನರು ಹೇಗಿದ್ದಾರೆ, ವಾಸ್ತವದಲ್ಲಿ ಎಂತಹ ಪರಿಸ್ಥಿತಿಯಿದೆ ಎಂಬುದು ಸಹ ಸರಿಯಾಗಿ ತಿಳಿಯುವುದಿಲ್ಲ. ಪಾಕಿಸ್ತಾನದ್ದು ಇನ್ನೊಂದು ಅತಿರೇಕ. ಕಂಡು ಕೇಳರಿಯದ ಅತಿವೃಷ್ಟಿ, ಪ್ರವಾಹಗಳಿಂದ ಪಾಕಿಸ್ತಾನವು ಹೈರಾಣಾಗಿದೆ. ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ವಿನಾಶದ ದೃಶ್ಯ-ಚಿತ್ರಗಳು ಮನ ಕಲಕುವಂತಿವೆ. ಪಾಕಿಸ್ತಾನದ ಬಹುಕಾಲದ ಮಿತ್ರರಾಷ್ಟ್ರವಾದ ಅಮೆರಿಕಾ ಮೂರು ಕೋಟಿ ಡಾಲರ್ ನೆರವು ಘೋಷಿಸಿದೆ. ಪ್ರವಾಹದಿಂದ ತನಗೆ ಸಹಸ್ರ ಕೋಟಿ ಡಾಲರ್ ಪ್ರಮಾಣದ ನಷ್ಟವಾಗಿದೆಯೆಂದು ಪಾಕಿಸ್ತಾನ ಹಲುಬುತ್ತಿದೆ. ಪಾಕಿಸ್ತಾನಕ್ಕೆ ಈಗಾಗಲೇ ಐಎಂಎಫ್ ೧೧೦ ಕೋಟಿ ಡಾಲರ್ ಸಾಲ ಘೋಷಿಸಿದೆ.

ದೇಶದೊಳಗೇ ಇರುವ ಭಾರತ-ವಿರೋಧೀ ಶಕ್ತಿಗಳ ಆಕ್ರಂದನವು ಸದ್ಯಕ್ಕೆ ಒಂದಿಷ್ಟು ದುರ್ಬಲವಾಗಿದೆ. ಇಲ್ಲವಾಗಿದ್ದರೆ, ಮಾನವೀಯ ದೃಷ್ಟಿಯಿಂದ ಪಾಕಿಸ್ತಾನಕ್ಕೆ ನೆರವು ನೀಡಬೇಕೆಂದು, ಅವು ಇಷ್ಟರಲ್ಲಿ ಮುಗಿಲು ಮುಟ್ಟುವಂತೆ ಹುಯಿಲಿಡುತ್ತಿದ್ದವು. ಭಾರತ- ಪಾಕ್ ನಡುವಿನ ಸಮರ ಸಂಘರ್ಷಗಳ ಇತಿಹಾಸವನ್ನು ಅವಲೋಕಿಸದೆ, ವಿಶ್ಲೇಷಿಸದೆ ಭಾರತ ಸರ್ಕಾರವು ಮಾಡುವ ಯಾವುದೇ ಉಪಕ್ರಮವು ಆತ್ಮಹತ್ಯಾತ್ಮಕವಾಗುತ್ತದೆ.

೧೯೪೮, ೧೯೬೫, ೧೯೭೧ ಮತ್ತು ೧೯೯೯ಗಳಲ್ಲಿ ಪಾಕಿಸ್ತಾನವು ನಮ್ಮ ಮೇಲೆ ಬೃಹತ್ ಪ್ರಮಾಣದ ಆಕ್ರಮಣಗಳನ್ನೇ ಮಾಡಿದೆ. ಈ ಯುದ್ಧಗಳ ಫಲಿತಾಂಶವೇನೇ ಇರಲಿ, ಅದರ ವಿನಾಶಕಾರಿ ಆಕ್ರಮಣಶೀಲತೆಯ ಮಾನಸಿಕತೆಯಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಆಗುವುದೂ ಇಲ್ಲ. ಭಾರತೀಯ ಸೇನೆಯ ಅಧಿಕಾರಿಗಳೇ ಹೇಳುವ ಹಾಗೆ, ಈ ನಾಲ್ಕು ಸಂಘರ್ಷಗಳು ಯುದ್ಧಗಳೆಂದು ಅಧಿಕೃತವಾಗಿ ವರ್ಗೀಕೃತವಾಗಿದ್ದರೂ, ಕಳೆದ ೭೫ ವರ್ಷಗಳಿಂದ ಪಾಕಿಸ್ತಾನದ ಘೋಷಿತ-ಅಘೋಷಿತ ಯುದ್ಧ ನಿಂತೇ ಇಲ್ಲ. ಇಂದಿಗೂ ಪ್ರತಿನಿತ್ಯ ನಮ್ಮ ಗಡಿಗಳಲ್ಲಿ ಪಾಕಿಸ್ತಾನದ ದಾಳಿಗಳು ಆಗುತ್ತಲೇ ಇವೆ.

ಒಂದೆಡೆ ಭಾರತ ಪಾಕಿಸ್ತಾನಗಳ ನಡುವೆ ಕ್ರಿಕೆಟ್ ಆಟ ನಡೆಯುತ್ತಿದ್ದರೆ, ಗಡಿಗಳಲ್ಲಿ ನಮ್ಮ ಸೈನಿಕರು ಪಾಕ್ ಆಕ್ರಮಣಗಳಿಗೆ ಜೀವ ತೆರುತ್ತಿದ್ದರು. ಗಡಿಯ ಒಳಗೆ ಸಹಾ ಕಾಶ್ಮೀರದ ದೇಶದ್ರೋಹಿ ಜಿಹಾದಿಗಳು ಕಲ್ಲುಗಳನ್ನು ಎಸೆದು ಹಾನಿಯುಂಟುಮಾಡುತ್ತಿದ್ದರು. ಕೆಲ ಸಮಯದ ಹಿಂದೆ ಕಾಶ್ಮೀರದಲ್ಲಿ ಪ್ರವಾಹಕ್ಕೆ ಸಿಲುಕಿದ ಜಿಹಾದಿಗಳನ್ನು ಭಾರತೀಯ ಸೇನೆಯು ರಕ್ಷಿಸಿ ಕಾಪಾಡಿತ್ತು. ತದನಂತರ ಅದೇ ಜಿಹಾದಿಗಳು ಸೈನಿಕರ ಮೇಲೆ ಕಲ್ಲುಗಳನ್ನು ಎಸೆದು ಅಪಾರ ಹಾನಿಯುಂಟುಮಾಡುತ್ತಿದ್ದ ವಿಡಿಯೋಗಳು ದೇಶದಲ್ಲಿ ಕ್ರೋಧ- ವಿಷಾದಗಳ ದೊಡ್ಡ ಅಲೆಯನ್ನೇ ಉಂಟುಮಾಡಿದವು. ಬಹಳ ಜನ ಹೀಗೂ ಉಂಟೆ ಎಂದು ದಿಗ್ಭ್ರಮೆಗೆ ಒಳಗಾದರು. ಜಿಹಾದಿಗಳು ಇರುವುದೇ ಹಾಗೆ.

ಪಾಕಿಸ್ತಾನವು ನಿರ್ಮಾಣವಾಗಿದ್ದೇ ಇಸ್ಲಾಮೀ ಪ್ರತ್ಯೇಕತಾವಾದದ ಅಂಗವಾದ ಜಿಹಾದಿನ ಭಾಗವಾಗಿ. ಸ್ವಾತಂತ್ರ್ಯ ಹೋರಾಟದ ಮಹಾಪರ್ವದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಮೊದಲುಗೊಂಡು, ಮುಸ್ಲಿಂ ಲೀಗಿನ ಯಾವ ನಾಯಕರೂ ಸೆರೆಮನೆಯನ್ನೇ ನೋಡದಿದ್ದರೂ ಅವಿಭಜಿತ ಭಾರತದ ಮೂರನೆಯ ಒಂದು ಭಾಗ ಬಹಳ ಸುಲಭವಾಗಿ ಪಾಕಿಸ್ತಾನಕ್ಕೆ ಸೇರಿಹೋಗಿತ್ತು. ಅದಕ್ಕೇ ಆ ಕಾಲದಲ್ಲಿಯೇ ಅವರು “ಹಸಕೇ ಲಿಯಾ ಪಾಕಿಸ್ತಾನ್, ಲಡಕೇ ಲೇಂಗೇ ಹಿಂದೂಸ್ತಾನ್” ಎಂಬ ಘೋಷಣೆಗಳನ್ನು ರಸ್ತೆ ರಸ್ತೆಯಲ್ಲಿ ಕೂಗುತ್ತಿದ್ದರು.

ಸ್ವಾತಂತ್ರ್ಯೋತ್ತರ ಭಾರತವನ್ನು ಈವರೆಗೆ ಆಳಿದ ಬಹುಪಾಲು ರಾಜಕಾರಣಿಗಳು ದುರ್ಬಲ ಮನಸ್ಸಿನವರು. ಯುದ್ಧ, ಆಕ್ರಮಣಗಳ ಪರಾಕಾಷ್ಠೆಯ ಕಾಲಘಟ್ಟದಲ್ಲಿಯೂ ಭಾಕ್ರಾನಂಗಲ್ ಅಣೆಕಟ್ಟಿನಿಂದ ಹೊರಹರಿಯುವ ನೀರು ನಿಲ್ಲಿಸಿ, ಪಾಕಿಸ್ತಾನವನ್ನು ಶಿಕ್ಷಿಸುವ ಉಪಕ್ರಮಕ್ಕೆ ಯಾರೂ ಕೈಹಾಕಲಿಲ್ಲ.

ಪಾಕಿಸ್ತಾನದ ಅಘೋಷಿತ ಸಮರವು ಇತ್ತೀಚಿನ ದಶಕಗಳಲ್ಲಿ ಅನೇಕ ಆಯಾಮಗಳನ್ನು ಪಡೆದಿದೆ. ಪಾಕಿಸ್ತಾನವು ಅವ್ಯಾಹತವಾಗಿ ಶಸ್ತ್ರಾಸ್ತ್ರಗಳನ್ನು, ಮಾದಕ ದ್ರವ್ಯಗಳನ್ನು, ಭಯೋತ್ಪಾದಕರನ್ನು ಭಾರತಕ್ಕೆ ಕಳ್ಳಸಾಗಾಣಿಕೆ ಮಾಡುತ್ತಲೇ ಇದೆ. ಪ್ರತ್ಯೇಕತಾವಾದಕ್ಕೆ, ಖಲಿಸ್ತಾನ್ ಉಗ್ರರಿಗೆ ಅನೂಚಾನವಾಗಿ ಬೆಂಬಲ ನೀಡುತ್ತಲೇ ಬಂದಿದೆ.

ಪಾಕಿಸ್ತಾನದ್ದು, ಅಲ್ಲಿನ ಸೇನೆಯದ್ದು, ರಾಜಕಾರಣಿಗಳದ್ದು, ಅಲ್ಲಿನ ಎಲ್ಲ ಜಿಹಾದಿಗಳದ್ದು ವಿಕೃತ ಮನಸ್ಥಿತಿ. ೧೯೯೯ರಲ್ಲಿ ಕಾರ್ಗಿಲ್ ಸಂಘರ್ಷದ ವೇಳೆ ಸೆರೆಸಿಕ್ಕ ನಮ್ಮ ಸೇನೆಯ ಸೌರಭ್ ಕಾಲಿಯಾ ಮತ್ತು ಇತರ ಸೈನಿಕರನ್ನು ಪಾಕಿಸ್ತಾನವು ನಡೆಸಿಕೊಂಡಿದ್ದು ಅದರ ಮಾನಸಿಕತೆಯ ಪ್ರತೀಕವಾಗಿದೆ. ಈ ನತದೃಷ್ಟರು ಬದುಕಿದ್ದಾಗಲೇ ಅವರ ಕಣ್ಣು, ಕಿವಿ, ತುಟಿ, ಶಿಶ್ನಗಳನ್ನು ಕತ್ತರಿಸಲಾಯಿತು, ಛೇದಿಸಲಾಯಿತು. ಹಲ್ಲು, ಮೂಳೆಗಳನ್ನು ಮುರಿದುದು ಸಾಲದೆಂದು ತಲೆಬುರುಡೆಗಳನ್ನು ಜಜ್ಜಿಹಾಕಲಾಯಿತು. ಸಿಗರೇಟುಗಳಿಂದ ದೇಹಗಳನ್ನು ಚುಚ್ಚಿ ಸುಡಲಾಗಿತ್ತು. ಆದರೂ ನಮ್ಮ ರಾಜಕಾರಣಿಗಳು ಎಲ್ಲವನ್ನೂ “ಮರೆತು” ತಮ್ಮ ವಿನಾಶಕಾರಿ ಓಲೈಕೆಯನ್ನು ಮುಂದುವರಿಸಿದರು.

೨೦೦೫ರಲ್ಲಿ ಪಾಕಿಸ್ತಾನದಲ್ಲಿ ಭೂಕಂಪವಾದಾಗ, ನಮ್ಮ ದೇಶದ ಒಳಗೇ ಇರುವ ಭಾರತ-ವಿರೋಧೀ ಶಕ್ತಿಗಳ ಅರಚಾಟಕ್ಕೆ ಸ್ಪಂದಿಸಿ ಅಂದಿನ ಯುಪಿಎ ಸರ್ಕಾರವು ನಾಚಿಕೆಯಿಲ್ಲದೆ ನೆರವು ಘೋಷಿಸಿತು. ೨೦೧೦ರಲ್ಲಿ ಪಾಕಿಸ್ತಾನವು ಅತಿವೃಷ್ಟಿ, ಪ್ರವಾಹಗಳಿಗೆ ತುತ್ತಾದಾಗ ಇನ್ನೊಮ್ಮೆ ನೆರವಿನ ಪ್ರವಾಹವೇ ಹರಿಯಿತು. ಪಾಪ, ಯಾರಿಗೂ ದೇಶವಿಭಜನೆಯ ದುರಂತ ಅಧ್ಯಾಯಗಳಿರಲಿ, ಸೌರಭ್ ಕಾಲಿಯಾ ಮತ್ತು ಇತರ ಸೈನಿಕರ ಮೇಲಿನ ಹಿಂಸಾಕಾಂಡದ ನೆನಪೂ ಆಗಲಿಲ್ಲ!

ಮಾನವೀಯ ದೃಷ್ಟಿ, ಸ್ನೇಹಹಸ್ತ ಇವುಗಳಿಗೆ ಪಾಕಿಸ್ತಾನವು ಅಪಾತ್ರ ಎಂಬುದು ರುಜುವಾತಾಗಿದ್ದರೂ, ಸ್ವಾಭಿಮಾನ-ಶೂನ್ಯ ಭಾರತವು ಸದಾ ತನ್ನ ಕೈಗಳನ್ನು ಚಾಚಿಯೇ ಇರುವುದು ವಿಚಿತ್ರವೇ!

ಆಗಸ್ಟ್ ೨೦೧೯ರಲ್ಲಿ ಸಂವಿಧಾನದ ಅನುಚ್ಛೇದ ೩೭೦ ರದ್ದಾದಾಗ ಪಾಕಿಸ್ತಾನವು ಭಾರತದೊಂದಿಗಿನ ವ್ಯಾಪಾರ-ವ್ಯವಹಾರಗಳನ್ನು ನಿಲ್ಲಿಸಿತು. ಮತ್ತೆ ಈ ಅನುಚ್ಛೇದ ೩೭೦ ಜಾರಿ ಆಗುವವರೆಗೆ ಭಾರತದೊಂದಿಗಿನ ವಾಣಿಜ್ಯವೇ ಬೇಡ ಎಂದು ಕಿರುಚಾಡಿತು. ಇಷ್ಟು ಸಾಲದೆಂದು ಕಳೆದ ವರ್ಷ ಅಂದರೆ ೨೦೨೧ರ ನವೆಂಬರಿನಲ್ಲಿ “ಮಾನವೀಯ ದೃಷ್ಟಿಯಿಂದ” (ತಾಲಿಬಾನಿಗಳಿಗೆ!) ಭಾರತವು ಆಹಾರ ಧಾನ್ಯಗಳನ್ನು, ಔಷಧಿಗಳನ್ನು ಕಳುಹಿಸಲು ಉದ್ದೇಶಿಸಿದಾಗ ಪಾಕಿಸ್ತಾನದ ಮೂಲಕ ಸರಬರಾಜು ಆಗುವ ಪ್ರಸ್ತಾವಕ್ಕೆ ನೂರೆಂಟು ನಿರ್ಬಂಧಗಳನ್ನು ಒಡ್ಡಿದ್ದು ಅದರ ದುಷ್ಟ ಸ್ವಭಾವಕ್ಕೆ ಅನುಗುಣವಾಗಿಯೇ ಇತ್ತು. ತಾಲಿಬಾನಿಗಳಿಗೆ ಅನೇಕ ದಶಕಗಳಿಂದ ನೆರವು ನೀಡಿ, ತರಬೇತಿ ನೀಡಿ, ಎಲ್ಲ ದುಷ್ಕೃತ್ಯಗಳಲ್ಲಿ ಸಹಯೋಗ ನೀಡಿದ ಪಾಕಿಸ್ತಾನವು, ನಾವು ಆಹಾರ ಕಳುಹಿಸುತ್ತೇವೆ ಎಂದಾಗ ನಮ್ಮೊಂದಿಗೆ ವರ್ತಿಸಿದ್ದು ಹೀಗೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಸ್ತುತ ದುಃಸ್ಥಿತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಗತ ಇತಿಹಾಸದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಮಾನವೀಯ ದೃಷ್ಟಿಯಿಂದ ನೆರವು ನೀಡಬೇಕೆಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ದುರಭಿಮಾನಿ ಪಾಕಿಸ್ತಾನವು ತಾನಾಗಿ ಭಾರತವನ್ನೇನೂ ಬೇಡುತ್ತಿಲ್ಲ. ಏಕೆಂದರೆ, ಪಾಕಿಸ್ತಾನದ ಸಾಮಾನ್ಯ ಜನರ ಹಿತ, ಕ್ಷೇಮಗಳು ಅಲ್ಲಿನ ಆಡಳಿತದ ಆದ್ಯತೆಯನ್ನು ಎಂದಿಗೂ ಪಡೆದಿಲ್ಲ. ಜನ ಸಾಯಲಿ, ತನಗೇನು ಎಂಬುದೇ ಅದರ ಮನೋಭಾವ.

ನಮ್ಮ ಪರಂಪರೆಯಲ್ಲಿ ಅನುಭವಜನ್ಯವಾದ ಮತ್ತು ಅದ್ಭುತವಾದ ನುಡಿಮುತ್ತುಗಳಿವೆ. ಅದರಲ್ಲೊಂದು ಹೀಗೆ ಹೇಳುತ್ತದೆ:

ಉಪಕಾರೋಪಿ ನೀಚಾನಾಂ
ಅಪಕಾರಾಯ ಕಲ್ಪತೇ
ಪಯಃಪಾನಂ ಭುಜಂಗಾನಾಂ
ಕೇವಲಂ ವಿಷವರ್ಧನಂ

ನೀಚರಿಗೆ ಉಪಕಾರವನ್ನು ಮಾಡಿದರೂ ಅವರು ಅಪಕಾರವನ್ನೇ ಮಾಡುತ್ತಾರೆ. ವಿಷಸರ್ಪಕ್ಕೆ ಹಾಲು ಉಣಿಸಿದರೆ, ಅದರ ವಿಷ ಮಾತ್ರ ಹೆಚ್ಚಾಗುತ್ತದೆ (ವಿಷ ಕಕ್ಕುವ ಅದರ ಸ್ವಭಾವದಲ್ಲಿ ಬದಲಾವಣೆಯಿರುವುದಿಲ್ಲ).

ನಿಜ. ಪಾಕಿಸ್ತಾನ ಜಿಹಾದ್ ವಿಷ ತುಂಬಿಕೊಂಡ ವಿಷಸರ್ಪ. ಅವರಿಗೆ ಮಾಡುವಂತಹ ಸಹಾಯ ಭಾರತಕ್ಕೆ ಆತ್ಮಹತ್ಯಾತ್ಮಕ. ಮಾನವೀಯ ದೃಷ್ಟಿಯ ಪರಿಕಲ್ಪನೆಗಳಿಗೆ ಪಾಕಿಸ್ತಾನ ಎಂದೆಂದಿಗೂ ಅಪಾತ್ರ. ನಮ್ಮ ಪ್ರಧಾನ ಮಂತ್ರಿಯವರ ಸಂತಾಪ, ಸಹಾನುಭೂತಿಗಳು ಬರಿಯ ಸಂದೇಶದ ಮಟ್ಟಕ್ಕೆ ಮಾತ್ರ ಸೀಮಿತವಾದರೆ ಬಹಳ ಒಳ್ಳೆಯದು. ಪ್ರವಾಹವನ್ನೇ ಕಂಡರಿಯದ ಅನೇಕ ಕಡೆ ಭಾರತದ ಜನ ಪರಿತಪಿಸುತ್ತಿದ್ದಾರೆ, ಸಂಕಟಕ್ಕೆ ತುತ್ತಾಗಿದ್ದಾರೆ. ಭಾರತ ಸರ್ಕಾರದ ಸಹಾನುಭೂತಿ ಈ ದೇಶಕ್ಕೆ ಮಾತ್ರ ಸೀಮಿತವಾದರೆ ಒಳ್ಳೆಯದು. ವಿಷಸರ್ಪಗಳನ್ನು ಓಲೈಸುವ ಶತಮಾನದಷ್ಟು ಹಳೆಯ ಅಪಾಯಕಾರಿ ರಾಜಕಾರಣ ಈಗಲಾದರೂ ಕೊನೆಗೊಳ್ಳಲಿ.

(ಲೇಖಕರು ಹಿರಿಯ ಅಂಕಣಕಾರರು ಹಾಗೂ ನವದೆಹಲಿ ಮೂಲದ ಪ್ರಕಾಶನ ಸಂಸ್ಥೆ ʼವಾಯ್ಸ್‌ ಆಫ್‌ ಇಂಡಿಯಾʼ ಸರಣಿಯ ಗೌರವ ಸಂಪಾದಕರು. ರಾಷ್ಟ್ರೀಯತೆ, ಇತಿಹಾಸಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅಪಾರ ಅಧ್ಯಯನ ನಡೆಸಿದ್ದಾರೆ. ಈ ಲೇಖನದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ವೈಯಕ್ತಿಕ.)

Exit mobile version