Site icon Vistara News

ಮೊಗಸಾಲೆ ಅಂಕಣ | ಏಳು ಸುತ್ತಿನ ಕೋಟೆಯೊಳಗೆ ಮಲ್ಲಿಕಾರ್ಜುನ ಖರ್ಗೆ

mallikarjun kharge

ಮೂರು ವರ್ಷದಿಂದ ಚರ್ಚೆಯಲ್ಲಿದ್ದ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಅಂತೂಇಂತೂ ಎಂಬಂತೆ ಸುಖಾಂತ್ಯ ಕಂಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಿರೀಕ್ಷೆಯಂತೆ ಎಂ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಸಿದ್ದವ್ವನಹಳ್ಳಿ ನಿಜಲಿಂಗಪ್ಪ ತರುವಾಯದಲ್ಲಿ ಪ್ರತಿಷ್ಟಿತ ಹುದ್ದೆಗೆ ಏರಿರುವ ಎರಡನೇ ಕನ್ನಡಿಗ ಖರ್ಗೆ. ಕರ್ನಾಟಕದವರಿಗೆಲ್ಲ ಇದು ಸಹಜ ಹೆಮ್ಮೆಯ ವಿಚಾರ. ನಿಜಲಿಂಗಪ್ಪನವರು ಅಧ್ಯಕ್ಷರಾದಾಗ ಎದುರಿಸಿದ ಬಿಕ್ಕಟ್ಟು ಖರ್ಗೆ ಮುಂದೆ ಇಲ್ಲ. ಆದರೆ ಭಿನ್ನ ಬಗೆಯ ಒಳಸುಳಿಗಳು ಅಧ್ಯಕ್ಷರನ್ನು ಕಟ್ಟಿ ಹಾಕುವ ಅಪಾಯ ಇದ್ದೇ ಇದೆ. ಅನಿರೀಕ್ಷಿತ ಮೂಲೆಗಳಿಂದ, ಮೂಲಗಳಿಂದ ಧುತ್ತೆಂದು ಎದುರಾಗುವ ನೂರೆಂಟು ವಿಘ್ನಗಳು ಒಡ್ಡುವ ಸವಾಲನ್ನು ಎದುರಿಸುವುದಕ್ಕೆ ಯಾವ ರೀತಿಯ ಮಾನಸಿಕ ಸಿದ್ಧತೆ ಖರ್ಗೆಯವರಲ್ಲಿದೆ ಮತ್ತು ಸಮಸ್ಯೆಗಳನ್ನೆಲ್ಲ ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಆಧಾರದ ಮೇಲೆ ನೂತನ ಅಧ್ಯಕ್ಷಗಿರಿಯ ಯಶಸ್ಸು ಅಥವಾ ಸೋಲು ನಿರ್ಧಾರವಾಗಲಿದೆ.

ಬರೋಬ್ಬರಿ ಒಂದು ದಶಕ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್/ಯುಪಿಎ ಸರ್ಕಾರ 2014ರಲ್ಲಿ ಕೈತಪ್ಪಿಹೋಯಿತು. ಈ ಮಾತಿಗೆ ಈಗ ಎಂಟು ವರ್ಷ. ಎಲ್ಲ ರಾಜ್ಯಗಳ ಭೌಗೋಳಿಕ, ಜನಸಂಖ್ಯಾ ಅಗತ್ಯ ಆಧರಿಸಿ ಒಂದೋ ಎರಡೋ ರ್ಯಾಲಿ ನಡೆಸಿ “ನಾವು ಸೋತಿದ್ದೇವೆ ನಿಜ, ಆದರೆ ಸತ್ತಿಲ್ಲ” ಎಂಬ ಸಂದೇಶವನ್ನು ದೇಶವಾಸಿಗಳಿಗೆ ಕಾಂಗ್ರೆಸ್ಸು ಆವಾಗಲೇ ರವಾನಿಸಬೇಕಿತ್ತು. ರಾಹುಲ್‍ರ ಅನಾಸಕ್ತಿ ಮೇಲುಗೈ ಪಡೆದು ಕಾರ್ಯಕ್ರಮ ರೂಪುಗೊಳ್ಳಲಿಲ್ಲ. ಜನರ ಮುಂದೆ ಹೋಗದೆ ಅನ್ಯ ಮಾರ್ಗವಿಲ್ಲ ಎಂಬ ತೀರ್ಮಾನಕ್ಕೆ ಪಕ್ಷ ಬರಲು ಅದರ ನಾಯಕರು ಇಷ್ಟು ವರ್ಷ ತೌಡು ಕುಟ್ಟಿದ ಬಳಿಕ ರೂಪುಗೊಂಡಿದ್ದು “ಭಾರತ್ ಜೋಡೋ” ಅಭಿಯಾನ. ಅಭಿಯಾನದ ಕಾರಣವಾಗಿ ಮರೆತುಹೋಗಿದ್ದ ಕಾಂಗ್ರೆಸ್ಸನ್ನು ಜನ ನೆನಪಿಸಿಕೊಳ್ಳುವಂತಾಗಿರುವುದು ಉತ್ತಮ ಬೆಳವಣಿಗೆ. ಅದು ಮೂಡಿಸಿರುವ ಸಂಚಲನ ಒಡೆದು ಕಾಣಿಸುತ್ತಿದೆ. ಸಮರ್ಥ ವಿರೋಧ ಪಕ್ಷ ಸಮರ್ಪಕ ಪ್ರಜಾಪ್ರಭುತ್ವದ ಬುನಾದಿ ಎಂಬ ಮಾತು ನಿಧಾನವಾಗಿ ಮತ್ತೆ ಪ್ರಚಲಿತಕ್ಕೆ ಬರುವ ಲಕ್ಷಣವೂ ಗೋಚರವಾಗುತ್ತಿದೆ. ಇದು ಖರ್ಗೆ ಪಾಲಿಗೂ ಸೈ; ಹೊಸದಾಗಿ ಅವರು ಸೂತ್ರಧಾರತ್ವ ವಹಿಸಿಕೊಂಡಿರುವ ಪಕ್ಷಕ್ಕೂ ಸೈ ಸಮಾಧಾನ ತರುವ ಬೆಳವಣಿಗೆ.

ಏಐಸಿಸಿಗೆ ರಾಹುಲ್ ಗಾಂಧಿಯವರನ್ನು ಅಧ್ಯಕ್ಷರನ್ನಾಗಿ ಕುಳ್ಳಿರಿಸುವ ಸೋನಿಯಾ ಗಾಂಧಿಯವರ ಯತ್ನಕ್ಕೆ ಭಾರೀ ಹಿನ್ನಡೆಯಾದ ನಂತರದಲ್ಲಿ ಸೋನಿಯಾರ ಮೊದಲ ಆಯ್ಕೆಯಾಗಿದ್ದವರು ಅಶೋಕ್ ಗೆಹ್ಲೋಟ್. ಆ ಯೋಚನೆ ಭ್ರೂಣಾವಸ್ಥೆಯಲ್ಲೇ ಗರ್ಭಪಾತಕ್ಕೊಳಗಾಯಿತು. ನಂತರದ ಆಯ್ಕೆ ಖರ್ಗೆ. ನಾಮಪತ್ರ ಸಲ್ಲಿಸಿದ ದಿವಸವೇ ಖರ್ಗೆ ಜಯವೂ ಖಚಿತವಾಗಿತ್ತು. ಶಶಿ ತರೂರ್ ಸ್ಪರ್ಧೆ ಒಂದು ಸಾಂಕೇತಿಕ ವಿರೋಧ ಮಾತ್ರವಾಗಿತ್ತು. ಶಶಿ, ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ. ಅದರ ಪಕ್ಕದ ವೈನಾಡು, ರಾಹುಲ್ ಗಾಂಧಿಯವರು ಆಯ್ಕೆಯಾಗಿರುವ ಕ್ಷೇತ್ರ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ, ಖರ್ಗೆಯವರಿಗೆ ಬೆಂಬಲ ಸೂಚಿಸಿ ನಿರ್ಣಯ ಅಂಗೀಕರಿಸಿದಾಗ “ಶಶಿ ನಮ್ಮವರು” ಎನ್ನುವುದು ಅದಕ್ಕೆ ಮರೆತು ಹೋಗಿದ್ದೊಂದು ಕಾಕತಾಳೀಯ. ದೇಶದ 12 ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಗಳು ಖರ್ಗೆ ಪರವಾಗಿ ನಿರ್ಣಯ ಅಂಗೀಕರಿಸಿದ್ದು “ಏಐಸಿಸಿ ಚುನಾವಣಾ ನಿಯಮಗಳಿಗೆ ವಿರುದ್ಧವಾದ ನಡವಳಿಕೆ” ಎನ್ನಲಾಗಿದೆ. ಆದರೆ ಖರ್ಗೆಯವರ ಆಯ್ಕೆ ಘೋಷಣೆಯಾಗುವುದರೊಂದಿಗೆ ಇದೆಲ್ಲ ಮುಚ್ಚಿ ಹೋಗಲಿದೆ.

ಇದೆಲ್ಲ ಏನೇ ಇದ್ದರೂ ಖರ್ಗೆಯವರು ಕಾಂಗ್ರೆಸ್ ಕಟ್ಟುವ ಕೆಲಸದಲ್ಲಿ ಕ್ರಿಯಾಶೀಲರಾಗಬೇಕಿದೆ. ಇದುವರೆಗೆ ಹಂಗಾಮಿಯಾಗಿಯಾದರೂ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ. ಖರ್ಗೆಯವರ ಸಾಮಾನ್ಯ ಆರೋಗ್ಯವೇನೋ ಚೆನ್ನಾಗಿಯೇ ಇರುವಂತಿದೆ. ಆದರೆ ಅವರ ವಯಸ್ಸು ಎಂಬತ್ತನ್ನು ದಾಟುತ್ತಿದೆ. ಕೆಲವು ವರ್ಷ ಹಿಂದೆ ಅವರ ಎರಡೂ ಮಂಡಿ ಚಿಪ್ಪಿನ ಶಸ್ತ್ರ ಚಿಕಿತ್ಸೆ ಆದ ಬಳಿಕ ಸಹಜ ಓಡಾಟ ಅವರಿಂದ ಆಗುತ್ತಿಲ್ಲ. ಕೂತಲ್ಲೇ ಕೆಲಸ ಮಾಡುವ ಆರಾಮ್ ಖುರ್ಚಿ ಕೆಲಸ ಏಐಸಿಸಿ ಅಧ್ಯಕ್ಷರದಲ್ಲ. ತಮ್ಮನ್ನು ಭೇಟಿ ಮಾಡಲೆಂದು ದೆಹಲಿಗೆ ಬರುತ್ತಿದ್ದ ಪಕ್ಷದ ಮುಖಂಡರಿಗೆ ಸೋನಿಯಾ ದರ್ಶನ ಕಷ್ಟವಾಗಿದ್ದ ದಿನಗಳನ್ನು ಕಾಂಗ್ರೆಸ್ ಮುಖಂಡರು ಖರ್ಗೆ ವಿಚಾರದಲ್ಲಿ ಸಹಿಸಿಕೊಳ್ಳಲಾರರು. ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲರನ್ನು ಸೋನಿಯಾ ಗಾಂಧಿ ಅತಿಯಾಗಿ ಅವಲಂಬಿಸಿದ್ದರು. ಪಕ್ಷದ ಮುಖ್ಯಮಂತ್ರಿಗಳು ಅಧ್ಯಕ್ಷರ ಭೇಟಿಗೆ ಬಂದರೆ ಆಪ್ತ ಕಾರ್ಯದರ್ಶಿಯನ್ನು ನೋಡಿರೆಂಬ ಸೂಚನೆ ಹೋಗುತ್ತಿತ್ತು. ಅದು ಸೋನಿಯಾ ದರ್ಬಾರು, ನಡೆದು ಹೋಯಿತು. ಆ ರೀತಿಯ ದರ್ಬಾರಿನ ರಾಜಕಾರಣವನ್ನು ಖರ್ಗೆ ಮಾಡಲಾಗದು; ಮಾಡಬಾರದು. ಎಂದರೆ ಅವರು ದೆಹಲಿಯಲ್ಲಿದ್ದಾಗ ಅವರ ನಿತ್ಯ ದರ್ಶನಕ್ಕೆ ಏಐಸಿಸಿ ಕಚೇರಿಯಲ್ಲಿ ಸೂಕ್ತ ವ್ಯವಸ್ಥೆ ಆಗಬೇಕು.

ರಾಹುಲ್ ಗಾಂಧಿ ಯಾವ ಸಮಯದಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ; ಯಾವ ರೀತಿ ವರ್ತಿಸುತ್ತಾರೆಂದು ಹೇಳುವ ಜ್ಯೋತಿಷಿ ಇನ್ನೂ ಹುಟ್ಟಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿ ಅಮೆರಿಕಾ ಪ್ರವಾಸ ಕಾಲದಲ್ಲಿ ಅಧ್ಯಕ್ಷ ಒಬಾಮಾರನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಇಲ್ಲಿ ದೆಹಲಿ ಪ್ರೆಸ್‍ಕ್ಲಬ್‍ನಲ್ಲಿ ಕಾಂಗ್ರೆಸ್ ಮಾಧ್ಯಮಗೋಷ್ಠಿ. ಸರ್ಕಾರ ಹೊರಡಿಸಲಿದ್ದ ಸುಗ್ರೀವಾಜ್ಞೆ ಕುರಿತ ಮಾಹಿತಿ ಹಂಚಿಕೊಳ್ಳುವ ಗೋಷ್ಠಿಗೆ ಒಂಟೆಯಂತೆ ನುಗ್ಗಿದ್ದ ರಾಹುಲ್ ಸುಗ್ರೀವಾಜ್ಞೆಯ ಕರಡನ್ನು ಪರಪರ ಹರಿದು ಸೀನ್ ಕ್ರಿಯೇಟ್ ಮಾಡಿದ್ದರು. ಅಲ್ಲಿ ಅಮೆರಿಕಾದಲ್ಲೂ ಇದು ಸುದ್ದಿಯಾಗಿ ಪ್ರಧಾನಿ ತೀವ್ರ ಮುಜುಗರ ಅನುಭವಿಸಿದ್ದರು. ಸೋನಿಯಾ ಗಾಂಧಿ ಮಗ ಎಂಬ ಏಕೈಕ ಕಾರಣಕ್ಕಾಗಿ ಯಾವುದೇ ಬಗೆಯ ಶಿಸ್ತುಕ್ರಮಕ್ಕೂ ಅವರು ಒಳಪಡಲಿಲ್ಲ. ರಾಹುಲ್ ಈಗ ಹಾಗೆಲ್ಲ ಮಾಡುವವರಲ್ಲ, ಮಾಗಿದ್ದಾರೆ ಎಂದು ನಂಬಲು ಸಣ್ಣ ಆಧಾರವೂ ಇಲ್ಲ.

ಇದನ್ನೂ ಓದಿ | ಬಿಜೆಪಿಯ SCST ಮೀಸಲಾತಿ ಮಾಸ್ಟರ್‌ ಸ್ಟ್ರೋಕ್‌ಗೆ ಕಾಂಗ್ರೆಸ್‌ ಉತ್ತರ ಮಲ್ಲಿಕಾರ್ಜುನ ಖರ್ಗೆ?

ದೇಶದ ಉದ್ದಗಲಕ್ಕೆ ಖರ್ಗೆಯವರು ಮುಂದಿನ ದಿನಗಳಲ್ಲಾದರೂ ವ್ಯಾಪಕವಾಗಿ ಸಂಚರಿಸಬೇಕು. 2014ರಿಂದ 2019ರವರೆಗೆ ಐದು ವರ್ಷ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕರಾಗಿದ್ದರು. ಆ ಅವಧಿಯಲ್ಲಿ ಎಂದೂ ಪಕ್ಷ ಸಂಘಟನೆಗಾಗಿ ಅವರು ದೇಶ ಸುತ್ತಲಿಲ್ಲ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಬಳಿಕವೂ ಈ ದಿಸೆಯಲ್ಲಿ ಯೋಚನೆ ಮಾಡಲಿಲ್ಲ. ಅವರದೇನಿದ್ದರೂ ದೆಹಲಿ-ಹೈದರಾಬಾದ್-ಕಲಬುರಗಿ. ಬಿಡುವು ಇದ್ದಲ್ಲಿ ಬೆಂಗಳೂರು ಭೇಟಿ. ಅಲ್ಲಿಂದ ಸೀದಾ ದಹಲಿ. ಇನ್ನಾದರೂ ತಮ್ಮನ್ನು ತಾವು ರಾಷ್ಟ್ರನಾಯಕ ಎಂದು ಬಿಂಬಿಸಿಕೊಳ್ಳುವ ಯತ್ನಕ್ಕೆ ಅವರು ಮುಂದಾಗಬೇಕಿರುವ ಜರೂರತು ಇದೆ.

kharge

ಖರ್ಗೆ ಮುಂದಿರುವ ಸವಾಲುಗಳು ಇಂಥಿಂಥವು ಎಂಬ ಪಟ್ಟಿ ಮಾಧ್ಯಮದಲ್ಲಿ ಬರಲಾರಂಭವಾಗಿದೆ. ಹಿಮಾಚಲ ಪ್ರದೇಶ ಚುನಾವಣೆ ಘೋಷಣೆಯಾಗಿದೆ. ಅಲ್ಲಿ ಬಿಜೆಪಿಯನ್ನು ಮಣಿಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಬೇಕಿದೆ. ಗುಜರಾತ್‍ನಲ್ಲಿ ಇಷ್ಟರಲ್ಲೇ ಚುನಾವಣೆ ಘೋಷಣೆಯಾಗಲಿದೆ. ಅಲ್ಲಿ ಕಾಂಗ್ರೆಸ್ ಹೊಂದಿರುವ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೆ ಎದುರಾಗಿರುವ ಆಮ್ ಆದ್ಮಿ ಪಾರ್ಟಿಯ ಪ್ರಬಲ ಅಡ್ಡಿಯನ್ನು ನಿವರಿಸಿಕೊಳ್ಳಬೇಕಿದೆ. ಗುಜರಾತದಲ್ಲಿ ಎರಡೂವರೆ ದಶಕದಿಂದ ಗೂಟ ಹೊಡೆದು ಕೂತಿರುವ ಬಿಜೆಪಿಯನ್ನು ಮಣಿಸಿದರೆ ನರೇಂದ್ರ ಮೋದಿಯವರನ್ನು ಮಣಿಸಿದಂತೆ. ಖರ್ಗೆ ನಾಯಕತ್ವ “ಮೋದಿ-ಶಾ ನಾಡಿನಲ್ಲಿ” ಮಾಡಲಿರುವ ಮೋಡಿ ವಿಚಾರದಲ್ಲಿ ಎಲ್ಲರಲ್ಲೂ ಕುತೂಹಲವಿದೆ. ಅಲ್ಲಿ ಕಾಂಗ್ರೆಸ್ ಗೆದ್ದರೆ ರಾಹುಲ್, ಸೋನಿಯಾರಿಗೆ ಜೈಕಾರ ಹೋಗುತ್ತದೆ. ಸೋತರೆ ಅದರ ಹೊಣೆಗಾರಿಕೆಯನ್ನು ಖರ್ಗೆ ತಲೆಗೆ ಕಟ್ಟುತ್ತಾರೆ. ಖರ್ಗೆಯವರಿಗೆ ಇದು ಗೊತ್ತಿಲ್ಲ ಎಂದಲ್ಲ; ಆ ಅಸಹಾಯಕತೆಗೆ ಅವರು ಮುಖಾಮುಖಿಯಾಗಬೇಕಿದೆ, ಅನ್ಯ ಮಾರ್ಗವಿಲ್ಲ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಸೋನಿಯಾರನ್ನು ತತ್ತರಗೊಳಿಸಿದ ಅನಿರೀಕ್ಷಿತ ಬಂಡಾಯ

ಖರ್ಗೆಯವರ ತೌರು ರಾಜ್ಯ ಕರ್ನಾಟಕ ವಿಧಾನ ಸಭೆ ಚುನಾವಣೆ ಬಹಳ ದೂರದಲ್ಲಿಲ್ಲ. ಮುಂದಿನ ಜುಲೈ ಮೂರನೇ ವಾರದ ಹೊತ್ತಿಗೆ ಹೊಸ ವಿಧಾನ ಸಭೆ ರಚನೆಯಾಗಬೇಕು. ಈಗಿನ ರಾಜಕೀಯ ಲಕ್ಷಣ ನೋಡಿದರೆ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಿದೆ. ಬಿಜೆಪಿ ಅಧಿಕಾರ ಬಿಟ್ಟು ಕೊಡಲು ಚುನಾವಣೆಗೆ ಕಾಯುತ್ತಿದೆಯಲ್ಲದೆ ಗೆಲ್ಲುವುದಕ್ಕಲ್ಲ. ಅದರ ನಡವಳಿಕೆಯಲ್ಲಿ ಇದು ಸ್ಪಷ್ಟ. ಆದರೆ ಆ ಅವಕಾಶ ತನಗೆ ಒಲಿಯುವಂತೆ ಮಾಡಿಕೊಳ್ಳಲು ಕಾಂಗ್ರೆಸ್ ನಡೆಸಿರುವ ಸಿದ್ಧತೆ ಏನು ಎತ್ತ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಪಷ್ಟವಾಗಿರುವ ಏಕೈಕ ಸಂಗತಿ ಎಂದರೆ “ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇಲ್ಲ” ಎಂದು ಕ್ಯಾಮೆರಾ ಮುಂದೆ ತೋರಿಸಿಕೊಳ್ಳುತ್ತಿರುವ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ಮತ್ತು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಬಹಿರಂಗ ನಡವಳಿಕೆ. ಅಂತರಂಗದಲ್ಲಿ ಅವರಿಬ್ಬರೂ ಪರಸ್ಪರ ಚೂರಿ ಹಿಡಿದು ನಿಂತಿರುವುದು ಎಲ್ಲ ಬಲ್ಲ ಗುಟ್ಟು. ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ 21 ದಿವಸದ್ದು. ಇವರಿಬ್ಬರನ್ನೂ ಜೊತೆಯಲ್ಲಿ ಹೆಜ್ಜೆ ಹಾಕುವಂತೆ ಮಾಡಿದ್ದೇ ರಾಹುಲ್ ಗಾಂಧಿಯವರ ದೊಡ್ಡ ಸಾಧನೆ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಹೇಳಿಕೊಳ್ಳುತ್ತಾರೆ. ಖರ್ಗೆ ಮುಂದಿರುವ ಸವಾಲುಗಳಲ್ಲಿ ಈ ಎರಡು ಬಣಗಳ ನಡುವೆ ಸಾಮರಸ್ಯ ತರುವುದು. ಅದು ಹೇಳಿದಷ್ಟು ಸುಲಭವಲ್ಲ.

ಕರ್ನಾಟಕದಲ್ಲಿ ಮತ್ತೊಂದು ಸಮಸ್ಯೆ ಖರ್ಗೆಯವರನ್ನು ಅಮರಿಕೊಳ್ಳಲಿದೆ. ದಲಿತ ಸಮುದಾಯಕ್ಕೆ ಸೇರಿದವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸುವ ಅವಕಾಶ ಖರ್ಗೆಯವರ ಮುಂದಿದೆ ಎಂಬ ಒತ್ತಾಯ ದಿನಗಳೆದಂತೆ ಏಐಸಿಸಿಯ ಮಂಡೆ ಬಿಸಿ ಹೆಚ್ಚಿಸಲಿದೆ. ಇದುವರೆಗೆ ಈ ಬೇಡಿಕೆ ಇರಲಿಲ್ಲ ಎಂದಲ್ಲ. ಆದರೆ ಖರ್ಗೆ ಸ್ವತಃ ದಲಿತ ಸಮುದಾಯದಿಂದ ಬಂದಿರುವ ನಾಯಕರಾದ ಕಾರಣ “ಕರ್ನಾಟಕಕ್ಕೆ ಮೊದಲ ದಲಿತ ಮುಖ್ಯಮಂತ್ರಿ ಕೊಡುಗೆ ನೀಡಿದ ಹಿರಿಮೆ” ಅವರದಾಗುವುದಕ್ಕೆ ಒತ್ತಡ ತನ್ನೆಲ್ಲ ಶ್ರಮಶಕ್ತಿಯನ್ನು ವಿನಿಯೋಗ ಮಾಡಲಿದೆ. ಕರ್ನಾಟಕದಲ್ಲಿ ದಲಿತ ಸಮುದಾಯ ಪ್ರತಿಶತ 20ರಷ್ಟಿದ್ದು ಅದರ ಬೇಡಿಕೆಯನ್ನು ಸುಲಭದಲ್ಲಿ ತಳ್ಳಿ ಹಾಕುವುದು ಖರ್ಗೆಯವರಿಗೂ ಸಾಧ್ಯವಾಗುವುದಿಲ್ಲ. ಈ ಹಿಂದೆ ಇಂಥ ಬೇಡಿಕೆ ಬಂದಾಗ “ಅದೆಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ” ಎಂದು ಖರ್ಗೆಯವರು ತಿಪ್ಪೆ ಸಾರಿಸಿ ಬಚಾವ್ ಆಗುತ್ತಿದ್ದರು. ಈಗ ಅವರೇ ಹೈಕಮಾಂಡ್ ಆಗಿರುವುದರಿಂದ ಬೇರೆಯವರತ್ತ ಬೆರಳು ಮಾಡಲು ಅವಕಾಶವೇ ಇಲ್ಲ. 1962ರಲ್ಲಿ ಕೆಲವು ತಿಂಗಳ ಮಟ್ಟಿಗಾದರೂ ಏಐಸಿಸಿಗೆ ಮೊದಲ ದಲಿತ ಅಧ್ಯಕ್ಷರಾದವರು ಆಂಧ್ರ ಪ್ರದೇಶದ ದಾಮೋದರಂ ಸಂಜೀವಯ್ಯ.(ಈ ಹೆಸರು ಮಾಧ್ಯಮದವರ ನೆನಪಲ್ಲಿದ್ದಂತಿಲ್ಲ ಎನ್ನುವುದು ಹಿರಿಯ ಪತ್ರಕರ್ತ, ಹುಬ್ಬಳ್ಳಿ ನಿವಾಸಿ ಮತ್ತೀಹಳ್ಳಿ ಮದನಮೋಹನ್ ಅಭಿಮತ). ನಂತರ 70-71ರ ಅವಧಿಯಲ್ಲಿ ಆ ಸ್ಥಾನಕ್ಕೇರಿದ ಮತ್ತೊಬ್ಬ ದಲಿತ ನಾಯಕ ಬಾಬು ಜಗಜೀವನರಾಂ. ಮೂರನೆಯವರಾಗಿ ಖರ್ಗೆ ಅಲ್ಲಿ ಈಗ ಆಸೀನರಾಗಿದ್ದಾರೆ. ಮೊದಲ ಇಬ್ಬರೂ ಅವಧಿಯನ್ನು ಪೂರೈಸಲಿಲ್ಲ. ಖರ್ಗೆಯವರಿಗೆ ಅವಧಿ ಪೂರೈಸಲು ಸೋನಿಯಾ ಪರಿವಾರ ಬಿಡುತ್ತದೆಯೇ ಎನ್ನುವುದು ಪ್ರಶ್ನೆ.

ಇದನ್ನೂ ಓದಿ | ವಿಸ್ತಾರ ವಿಶ್ಲೇಷಣೆ | ಮೂರನೇ ಶಕ್ತಿಕೇಂದ್ರ ಆಗಲಿದ್ದಾರ ಮಲ್ಲಿಕಾರ್ಜುನ ಖರ್ಗೆ?: ಯಾವ ಬಣಕ್ಕೆ ಲಾಭ, ಯಾರಿಗೆ ನಷ್ಟ?

ಯಾವುದೇ ರಾಜ್ಯದ ವಿಧಾನ ಸಭೆಗೆ ಚುನಾವಣೆ ಎದುರಾದಾಗಲೆಲ್ಲ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಸಾಮಾನ್ಯ. ಕರ್ನಾಟಕದಲ್ಲೂ ಅದು ನಡೆಯುತ್ತಿರುತ್ತದೆ. ಇಲ್ಲಿ ಈಗಾಗಲೇ ಸಿದ್ದರಾಮಯ್ಯ ಬಣ, ಡಿ.ಕೆ. ಶಿವಕುಮಾರ್ ಬಣದ ನಡುವೆ ಸಿಎಂ ಕುರ್ಚಿಗೆ ಗುದಮುರಗಿ ನಡೆದಿದೆ. 2013ರ ಚುನಾವಣೆ ಸಮಯದಲ್ಲಿ ಸಿಎಂ ಸ್ಥಾನಕ್ಕೆ ದಲಿತ ನಾಯಕ ಡಾ.ಜಿ.ಪರಮೇಶ್ವರರ ಹೆಸರು ಮುಂಚೂಣಿಗೆ ಬಂದಿತ್ತು. ದಲಿತ ಸಂಘಟನೆಗಳು ಅದಕ್ಕಾಗಿ ಒಂದು ಬಗೆಯ ಆಂದೋಳನವನ್ನೇ ನಡೆಸಿದ್ದವು. ಅದೇ ಕಾಲಕ್ಕೆ ಸಿದ್ದರಾಮಯ್ಯ ಬಣ, ಪರಮೇಶ್ವರರ ಸೋಲಿಗೆ ಪಣ ತೊಟ್ಟಿದೆಯೆಂಬ ಆರೋಪವೂ ಕೇಳಿಬಂದಿತ್ತು. ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಸೋಲಿಸುವುದಕ್ಕೆ ಷಡ್ಯಂತ್ರವೇ ನಡೆದುಹೋಯಿತು. ಅವರು ಸೋತಿದ್ದೇ ಮುಖ್ಯ ಕಾರಣವಾಗಿ ಸಿಎಂ ಸ್ಥಾನ ಅವರ ಕೈಗೆಟುಕದೇ ಹೋಯಿತು. ಕರ್ನಾಟಕದ ಕೆಪಿಸಿಸಿ ಇತಿಹಾಸದಲ್ಲಿ ಎಂಟು ವರ್ಷ ಕಾಲ ಅಧ್ಯಕ್ಷರಾಗಿದ್ದವರು ಎಂಬುದಷ್ಟೆ ಪರಮೇಶ್ವರರಿಗೆ ಉಳಿಯಿತು. “ಮತ್ತೆ ಮಳೆ ಹುಯ್ಯುತಿದೆ, ಎಲ್ಲ ನೆನಪಾಗುತಿದೆ” ಎಂಬಂತೆ ಪರಮೇಶ್ವರ ಬಣ ತೋಳೇರಿಸಿದೆ. ದಲಿತ ಸಮುದಾಯದ ಕೂಗನ್ನು ಕೇಳಿಸಿಕೊಳ್ಳಲಾರೆ ಎಂದು ಖರ್ಗೆ ಹೇಳಲಾರರು; ಹೇಳಲಾಗದು. ಇದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರ ಪಾಲಿಗೂ ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪವಾದರೆ ಅದರಲ್ಲಿ ಅಚ್ಚರಿ ಪಡುವಂಥದ್ದು ಏನೂ ಇರುವುದಿಲ್ಲ.

(ಲೇಖಕರು ಹಿರಿಯ ಪತ್ರಕರ್ತ, ಅಂಕಣಕಾರ, ರಾಜಕೀಯ ವಿಶ್ಲೇಷಕರು)

Exit mobile version