ಮೇ ಮಾಹೆ 13ರಂದು ಶನಿವಾರ ರಾಜ್ಯ ವಿಧಾನ ಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದು ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟ ಜನರ ಐತೀರ್ಪು ಬಹಿರಂಗವಾಗಿತ್ತು. ಮೂರೂವರೆ ದಶಕಾನಂತರ ಇಷ್ಟು ದೊಡ್ಡ ಜಯ ಕರ್ನಾಟಕದಲ್ಲಿ 137 ವರ್ಷ ಹಳೆಯದಾದ ಪಕ್ಷದ ಕೈ ಹಿಡಿದಿತ್ತು. ದೇಶದ ಅಲ್ಲಲ್ಲಿ ನಡೆದ ಚುನಾವಣೆಗಳಲ್ಲಿ ಸತತ ಎಂಬಂತೆ ಸೋಲನ್ನೇ ಕಾಣುತ್ತಿದ್ದ ಕಾಂಗ್ರೆಸ್‍ಗೆ ಸಂಜೀವಿನಿ ಆಗಿದ್ದು ರಾಜ್ಯದಲ್ಲಿ ಕೈಗೊಲಿದ ಜಯ. ಕರ್ನಾಟಕದವರೇ ಆದ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮರ್ಯಾದೆಯನ್ನೂ ಕಾಪಾಡಿದ ಜಯ ಇದು. ಸತತ ಸೋಲಿನಿಂದ ಬಸವಳಿದಿದ್ದ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ತ್ರಯರಿಗೆ ರಾಜಕೀಯ ಮಾಡಲು ಇನ್ನೂ ಅವಕಾಶವಿದೆ ಎಂಬ ನಂಬಿಕೆಯನ್ನು ಮೂಡಿಸಿದ ಜಯ ಕರ್ನಾಟಕದ್ದು. ಸಂಭ್ರಮಾಚರಣೆಗೆ ಏನೆಲ್ಲ ಬೇಕೋ ಅದೆಲ್ಲವನ್ನೂ ರಾಶಿವೊಡ್ಡಿದ್ದು ಕರ್ನಾಟಕದ ಜಯ.
ಈ ಸಂಭ್ರಮ ಒಮ್ಮಿಂದೊಮ್ಮೆಗೇ ಮುಗ್ಗರಿಸಿದ್ದು ಫಲಿತಾಂಶ ಪ್ರಕಟವಾದ 9-10 ದಿನ ನಂತರದ ಬೆಳವಣಿಗೆ. ಹೊಸ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ವಿಜಾಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ. ಪಾಟೀಲರು ಹಾಕಿದ ಬಾಂಬು ಆ ಪಕ್ಷದ ಚುನಾವಣಾ ಜಯದ ಸಂಭ್ರಮವೆಲ್ಲವಕ್ಕೂ ನಿಗಿನಿಗಿ ಉರಿಯುವ ಕೊಳ್ಳಿ ಇಟ್ಟಿದೆ. “ಸಿದ್ದರಾಮಯ್ಯ ಐದು ವರ್ಷ ಪೂರ್ತಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ” ಎಂಬ ಅವರ ಹೇಳಿಕೆ ಆ ಪಕ್ಷದೊಳಗಣ ಡಿ.ಕೆ.ಶಿವಕುಮಾರ್ ನೇತೃತ್ವದ ಬಣದಲ್ಲಿ ಅಡಿಯಿಂದ ಮುಡಿವರೆಗೂ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಐದು ವರ್ಷದ ಅಧಿಕಾರಾವಧಿಯನ್ನು ಸಮಸಮ ಎರಡೂವರೆ ವರ್ಷಕ್ಕೆ ವಿಭಜಿಸಿ ಮೊದಲ ಅವಧಿ ಸಿದ್ದರಾಮಯ್ಯ ನಂತರದ ಅವಧಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದಲ್ಲಿ ಇರುತ್ತಾರೆಂದು ಮಾಡಿಕೊಂಡ ಒಡಂಬಡಿಕೆಗೆ ತದ್ವಿರುದ್ಧವಾಗಿ ಪಾಟೀಲರ ಹೇಳಿಕೆ ಬಂದಿದ್ದು ಮುಖ್ಯವಾಗಿ ಡಿಕೆಶಿ ನೇತೃತ್ವದ ಒಕ್ಕಲಿಗ ಬಣದಲ್ಲಿ ಒಪ್ಪಿಕೊಳ್ಳಲಾಗದ ಸ್ಥಿತಿ ನಿರ್ಮಿಸಿದೆ. ಹಾಗಂತ ಹೇಳಬಾರದ್ದೇನನ್ನೋ ಹೇಳಿಬಿಟ್ಟೆ ಎಂದು ಪಾಟೀಲರಿಗೆ ಅನಿಸಿಲ್ಲ. ಮರುದಿನ ನೀಡಿದ ವಿವರಣೆಯಲ್ಲಿ ತಾವು ಹಾಗೆ ಹೇಳೇ ಇಲ್ಲ; ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂಬಿತ್ಯಾದಿ ಸಬೂಬನ್ನು ಅವರು ಕೊಟ್ಟಿಲ್ಲ. ತಮ್ಮ ಹೇಳಿಕೆಗೆ ತಾವು ಬದ್ಧರೆಂದೂ ಏಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಹೇಳಿದ್ದನ್ನು ತಾವು ಪುನರುಚ್ಚರಿಸಿದ್ದಾಗಿಯೂ ಅವರು ಸ್ಪಷ್ಟಪಡಿಸಿ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಒದ್ದಿದ್ದಾರೆ.
ತಥಾಕಥಿತ ಒಡಂಬಡಿಕೆ ನಡೆದ ಸಂದರ್ಭದಲ್ಲಿ ಹಾಜರಿದ್ದವರು ಸೋನಿಯಾ, ರಾಹುಲ್, ಖರ್ಗೆ ಮತ್ತು ವೇಣುಗೋಪಾಲ್ ಮಾತ್ರ. ಸತ್ಯ ಏನೆನ್ನುವುದು ಈ ನಾಲ್ವರಿಗೆ ಮಾತ್ರ ಗೊತ್ತಿದೆ. “ಮುಖ್ಯಮಂತ್ರಿ ಸ್ಥಾನದಲ್ಲಿ ಪವರ್ ಶೇರಿಂಗ್ ಎನ್ನುವುದೇನೂ ಇಲ್ಲ. ಅಂಥದ್ದೇನಾದರೂ ಇದ್ದರೆ ಅದು ಕರ್ನಾಟಕದ ಜನತೆಯೊಂದಿಗೆ ಮಾತ್ರ” ಎಂದು ಆ ಸಭೆಯಲ್ಲಿದ್ದ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಅಂದಮೇಲೆ ಪೂರ್ಣಾವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಎನ್ನುವುದರಲ್ಲಿ ಅನುಚಿತವಾದುದಾದರೂ ಏನಿದೆ ಎನ್ನುವುದು ಪಾಟೀಲರ ಪ್ರಶ್ನೆ.
ಈ ಹೇಳಿಕೆಯಿಂದ ತಳಮಳಗೊಂಡಿರುವ ಶಿವಕುಮಾರ್ ಅತ್ಯಂತ ಜಾಗರೂಕತೆಯಲ್ಲಿ ತಾಳ್ಮೆಯ ಗೆರೆಯನ್ನು ತಿಲಾಂಶವೂ ಉಲ್ಲಂಘಿಸದೆ ಪ್ರತಿಕ್ರಿಯಿಸಿದ್ದಾರೆ. ಪಾಟೀಲರ ಹೇಳಿಕೆಯನ್ನು ಪುಷ್ಟೀಕರಿಸುವ ಅಥವಾ ನಿರಾಕರಿಸುವ ಜವಾಬ್ದಾರಿಯನ್ನು ಅವರು ಹೈಕಮಾಂಡ್‍ಗೇ ಬಿಟ್ಟುಕೊಟ್ಟಿದ್ದಾರೆ. ಏತನ್ಮಧ್ಯೆ ರಾಜ್ಯ ಉಸ್ತುವಾರಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾರು “ಯಾರೂ ಅನಗತ್ಯ ಹೇಳಿಕೆ ನೀಡಕೂಡದು” ಎಂದು ಸಾರಾಸಗಟು ಫರ್ಮಾನು ಹೊರಡಿಸಿದ್ದಾರೆ. ತಪ್ಪಿಯೂ ಎಂ.ಬಿ. ಪಾಟೀಲರ ಹೆಸರನ್ನು ತಮ್ಮ ಹೇಳಿಕೆಯಲ್ಲಿ ಅವರು ತಂದಿಲ್ಲ ಎನ್ನುವುದು ಕೇವಲ ಆಕಸ್ಮಿಕವಿರಲಾರದು. ಇನ್ನು ಸುರ್ಜೇವಾಲಾರು ಬಳಸಿರುವ “ಅನಗತ್ಯ” ಪದದ ವಿಚಾರ. ಕಾಂಗ್ರೆಸ್‍ನೊಳಗೆ ಈ ವಿವಾದ ಕೆಲವರಿಗೆ “ಅನಗತ್ಯ” ಎನಿಸಿದರೆ ಮತ್ತೆ ಕೆಲವರಿಗೆ “ಅಗತ್ಯ” ಎನಿಸಿಬಿಟ್ಟಿದೆ. ಅಗತ್ಯವೆನಿಸಿರುವ ಎರಡನೇ ಗುಂಪಿನ ನಾಯಕತ್ವ ಸದ್ಯ ಪಾಟೀಲರ ಹಿಡಿತದಲ್ಲಿದೆ.
ಕಾಂಗ್ರೆಸ್ ಜಯದ ಬೆನ್ನೇರಿ ಬಂದುದು ಸಿಎಂ ಯಾರೆಂಬ ಚರ್ಚೆ. ಸಿದ್ದರಾಮಯ್ಯ, ಡಿಕೆಶಿಯವರಿಬ್ಬರೂ ಆ ಕುರ್ಚಿ ಮೇಲೆ ಟವೆಲ್ ಹಾಕಿ, ತಮ್ಮ ಕೈಲಾದಷ್ಟೂ ಒತ್ತಡ ಹೇರಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಚಾತಕ ಪಕ್ಷಿಯಂತೆ ಕಾದಿದ್ದರು. ಹಗ್ಗ ಜಗ್ಗಾಟ, ಗುದಮುರಗಿಗಳೆಲ್ಲವೂ ಮುಗಿದು ಅಂತಿಮವಾಗಿ ತಥಾಕಥಿತ ಒಡಂಬಡಿಕೆಗೆ ಡಿಕೆಶಿ ಮಣಿದು ಉಪಮುಖ್ಯಮಂತ್ರಿ ಹುದ್ದೆ ಒಪ್ಪಿ ಸಹಕರಿಸುವ ಭರವಸೆ ನೀಡುವುದರೊಂದಿಗೆ ಕಥೆ “ಸುಖಾಂತ್ಯ” ಆಯಿತೆಂದು ಭಾವಿಸಲಾಗಿತ್ತು. ಈಗ ಪಾಟೀಲರು ಸಿಡಿಸಿರುವ ಬಾಂಬ್‍ನ ಶಕ್ತಿ ಸಾಮರ್ಥ್ಯ ನೋಡಿದರೆ ಸುಖಾಂತ್ಯದ ಮಾತು ಒತ್ತಟ್ಟಿಗೆ ಇರಲಿ, ಕಥೆ ಮುಕ್ತಾಯ ಕಾಣುವುದೂ ಕಷ್ಟವಾಗಿದ್ದು ಈಗ ಕಥೆ ಹೊಸ ತಿರುವಿನೊಂದಿಗೆ ಮತ್ತೆ ಶುರುವಾಗುತ್ತಿದೆ ಎನ್ನುವುದು ಪಾಟೀಲ್ ಬಣದ ನಿಲುವು.
ಅವರು ಹೇಳುವ ಕಥೆಗೆ ಮುನ್ನುಡಿ ಬರೆದುದು ಫಲಿತಾಂಶ ನಿಚ್ಚಳಗೊಂಡ ಮೇ 13ರ ಇಳಿಸಂಜೆ ಹೊತ್ತು. ಗೋಧೂಳಿ ಮುಹೂರ್ತ. ಬಬಲೇಶ್ವರದ ಮತ ಎಣಿಕೆ ಕೇಂದ್ರದ ಆಜೂಬಾಜಿನಲ್ಲಿ. ಪಾಟೀಲರು ಗೆಲ್ಲುವುದರಲ್ಲಿ ಯಾರಿಗೂ ಅನುಮಾನ ಇರಲಿಲ್ಲ. ಲಿಂಗಾಯತ ಕೋಟಾದಲ್ಲಿ ಅವರು ಉಪ ಮುಖ್ಯಮಂತ್ರಿ ಆಗುತ್ತಾರೆಂಬ ಸುದ್ದಿ ಆ ಹೊತ್ತಿಗೆ ಢಾಳಾಗಿ ಹರಡಿತ್ತು. ಹೈಕಮಾಂಡ್ ಹಂತದಲ್ಲಾದ ತೀರ್ಮಾನದ ರೀತ್ಯ ಸಿದ್ದರಾಮಯ್ಯ ಮೊದಲ ಎರಡೂವರೆ ವರ್ಷದ ಅವಧಿಗೆ ಮುಖ್ಯಮಂತ್ರಿ, ಒಕ್ಕಲಿಗ ಡಿಕೆಶಿ, ಲಿಂಗಾಯತ ಎಂ.ಬಿ.ಪಾಟೀಲ, ದಲಿತ ಸಮುದಾಯದಿಂದ ಡಾ.ಜಿ.ಪರಮೇಶ್ವರ ಇಲ್ಲವೇ ಕೆ.ಎಚ್.ಮುನಿಯಪ್ಪ ಹೀಗೆ ಮೂವರು ಡಿಸಿಎಂ ಆಗುತ್ತಾರೆಂಬ ಸುದ್ದಿ ಹರಡಿತ್ತು. ಇದನ್ನು ಹರಡಿದ್ದು ಸ್ವತಃ ಪಕ್ಷದ ದೆಹಲಿ ವರಿಷ್ಟ ಮಂಡಳಿಯೇ.
ಬಬಲೇಶ್ವರದಲ್ಲಿ ನಡೆದ ಸಂಭ್ರಮ, ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಿದ್ದಕ್ಕೆ ದೊಡ್ಡ ಕಾರಣ ನಮ್ಮ ಪಾಟೀಲರು ಡಿಸಿಎಂ ಆಗ್ತಾರೆ ಎನ್ನುವುದೇ ಆಗಿತ್ತು. ಆದರೆ ಅತ್ತ ದೆಹಲಿಯಲ್ಲಿ ಡಿಕೆಶಿ ಹಾಕಿದ ಒತ್ತಡ ಕಾರಣವಾಗಿ ಅವರೊಬ್ಬರಿಗೆ ಮಾತ್ರವೇ ಡಿಸಿಎಂ ಹುದ್ದೆ ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಸುದ್ದಿ ಹರಡುತ್ತಿದ್ದಂತೆ ಸಂಕಟದ ಸರಮಾಲೆಯೇ ಸಂಭವಿಸಿತು. ಇತ್ತ ಕೊರಟಗೆರೆಯಲ್ಲಿ ಗೆದ್ದ ಜಿ.ಪರಮೇಶ್ವರ, ದೇವನಹಳ್ಳಿಯಲ್ಲಿ ಗೆದ್ದ ಕೆ.ಎಚ್. ಮುನಿಯಪ್ಪ, ಬಬಲೇಶ್ವರದ ಎಂ.ಬಿ. ಪಾಟೀಲರು “ನಾಟ್ ಅಟ್ ಆಲ್ ಹ್ಯಾಪಿ” ಎಂದು ಉದ್ಗರಿಸಿದ್ದು ಈ ಬೆಳವಣಿಗೆಯ ಕ್ಲೈಮ್ಯಾಕ್ಸ್. ಪರಮೇಶ್ವರ ಮತ್ತು ಮುನಿಯಪ್ಪ ಮೇಲ್ನೋಟಕ್ಕಾದರೂ ಡಿಸಿಎಂ ಪಟ್ಟದಿಂದ ವಂಚಿತರಾದ ದುಃಖವನ್ನು ಬಲವಂತದಿಂದ ನುಂಗಿಕೊಂಡರು.
ಪಾಟೀಲರು ಮಾತ್ರ ಸಿಡಿದೆದ್ದರು. ಮೈಸೂರಿನ ಸುತ್ತೂರು ಮಠಕ್ಕೆ ತೆರಳಿ ಸ್ವಾಮಿಗಳ ದರ್ಶನ ಪಡೆಯುವುದಕ್ಕೆ ಮುನ್ನಾ ದಿವಸ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯೊಂದರಲ್ಲಿ ಡಿಕೆಶಿ ದರ್ಪದರ್ಶನಕ್ಕೆ ಪಾಟೀಲರು ಮುಖಾಮುಖಿಯಾಗಿದ್ದರು. ಆ ಸಭೆಯಲ್ಲಿ ಸಿದ್ದರಾಮಯ್ಯ, ಪಾಟೀಲರು ಏನೋ ಹರಟುತ್ತಿದ್ದುದು ಮೈಕ್ ಹಿಡಿದು ಭಾಷಣಕ್ಕೆ ಸಜ್ಜಾಗಿದ್ದ ಡಿಕೆಶಿಗೆ ಸರಿ ಬರಲಿಲ್ಲ. ಮಧ್ಯ ಮಾತಾಡಬೇಡಿರೆಂದು (ಡೋಂಟ್ ಡಿಸ್ಟರ್ಬ್) ಅವರು ಮಾಡಿದ ತಾಕೀತನ್ನು ಜೀರ್ಣಿಸಿಕೊಳ್ಳುವುದು ಪಾಟೀಲರಿಗೆ ಕಷ್ಟವಾಗಿತ್ತು. “ಎಲಾ ಇವನಾ, ಡಿಸಿಎಂ ಆದಾಕ್ಷಣ ಕೋಡು ಮೂಡಿತೇನು” ಎಂದು ಮನಸ್ಸಿನಲ್ಲಿ ಅಂದುಕೊಂಡಿರಬಹುದಾಗಿದ್ದ ಪಾಟೀಲರು ಸೇಡು ತೀರಿಸಿಕೊಳ್ಳಲು ಕಾದಿದ್ದ ಮುಹೂರ್ತ ಸುತ್ತೂರಿನಲ್ಲಿ ಎದುರಾಗಿತ್ತು.
ಸ್ವಾಮಿಗಳು ಮತ್ತು ಪಾಟೀಲರ ನಡುವೆ ನಡೆದ ಮಾತುಕತೆ ಏನೋ ಗೊತ್ತಿಲ್ಲ. ಆದರೆ ಅಲ್ಲಿ ಸೇರಿದ್ದ ಲಿಂಗಾಯತ ಸಮುದಾಯದ ಮುಖಂಡರಿಗೆ ಸ್ಥಾನ ವಂಚಿತ ಅವಮಾನವನ್ನು ನುಂಗಿಕೊಂಡು ಮೌನ ತಾಳುವುದು ಕಷ್ಟವಾಗಿತ್ತು. ಕಾಂಗ್ರೆಸ್‍ನಲ್ಲಿ ಲಿಂಗಾಯತ ಶಾಸಕರು 39 ಜನ, ಒಕ್ಕಲಿಗ ಶಾಸಕರು 31 ಜನ. ಅವರಿಗೆ ಡಿಸಿಎಂ ಪಟ್ಟ, ನಿಮಗೆ…? ಎಂಬ ಪ್ರಶ್ನೆಯ ಬೆನ್ನೇರಿ ಬಂದುದು ಸುಮ್ಮನೆ ಒಪ್ಪಿಕೊಳ್ಳಬಾರದೆಂಬ ಖಡಕ್ ಸಂದೇಶ. ಒಪ್ಪಿಕೊಳ್ಳದೇ ಇರುವ ಮಾರ್ಗ ಪಾಟೀಲರ ಮುಂದೆ ಇರಲಿಲ್ಲ. ಆ ಕ್ಷಣದಲ್ಲಿ ಅವರಿಗೆ ವರ ಪ್ರಸಾದ ರೂಪದಲ್ಲಿ ನೆನಪಿಗೆ ಬಂದಿದ್ದು ಕೆ.ಸಿ. ವೇಣುಗೋಪಾಲರು ಆಡಿದರೆಂದು ಅವರೇ ಹೇಳಿದ ಮಾತು. “ಬ್ರೇಕಿಂಗ್ ನ್ಯೂಸ್”ಗೆ ಮಾಧ್ಯಮದವರು ಕಾದಿದ್ದಕ್ಕೂ ಪಾಟೀಲರ ನೆನಪಿನಲ್ಲಿ ವೇಣುಗೋಪಾಲ್ ಬಂದುದಕ್ಕೂ ತಾಳೆಯಾಗಿತ್ತು. ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಕಾಂಗ್ರೆಸ್ ಪಕ್ಷ ಕೋಲಾಹಲದ ಮಡುವಾಗಿತ್ತು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮುಖ್ಯಮಂತ್ರಿಗಿರಿಗೆ ಡಿಕೆಶಿ ಪಟ್ಟು ಸಡಿಲಿಕೆಯ ಹಿಂದೆ ಏನೇನಿದೆ?
ಈ ಅಂಕಣ ಬರಹ ಸಿದ್ಧವಾಗುತ್ತಿದ್ದ ಗುರುವಾರ ಮಧ್ಯಾಹ್ನದವರೆಗೂ ಕೆ.ಸಿ. ವೇಣುಗೋಪಾಲರು ಹರಶಿವ ಎಂದಿಲ್ಲ. ಅವರ ಮೌನದ ಕಾರಣ ಸ್ಪಷ್ಟವಾಗಿಲ್ಲ. ಏಐಸಿಸಿ ಅಧ್ಯಕ್ಷ ಖರ್ಗೆಯವರೂ ಮಾತಾಡುತ್ತಿಲ್ಲ. ಪಕ್ಷದ ವರ್ಚಸ್ಸಿಗೆ ಇಷ್ಟೆಲ್ಲ ಹಾನಿಯಾಗುತ್ತಿದ್ದರೂ ಸೋನಿಯಾ ಗಾಂಧಿ, ರಾಹುಲ್‍ಗಾಂಧಿ ತುಟಿಪಿಟಿಕ್ ಎಂದಿಲ್ಲ. ಇದರರ್ಥ ಪಾಟೀಲರು ಹೇಳಿದ್ದರಲ್ಲಿ ತಪ್ಪಿಲ್ಲ ಎಂದಲ್ಲದೆ ಮತ್ತೇನೂ ಅಲ್ಲ. ಇದಕ್ಕೆ ಇನ್ನೊಂದು ಆಯಾಮವೂ ಇದೆ. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕೆಂಬ ಷರತ್ತು ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನ, ಚತ್ತೀಸ್‍ಘಡದಲ್ಲೂ ಇತ್ತು. ಅದನ್ನು ಸಿಎಂ ಸ್ಥಾನಕ್ಕೆ ಬಂದ ಅಶೋಕ್ ಗೆಹ್ಲೋಟ್ ಮತ್ತು ಬಘೇಲರಿಬ್ಬರೂ ಮರೆತರು. ಹೈಕಮಾಂಡ್ ಆದೇಶವನ್ನು ಕಸದ ಬುಟ್ಟಿಗೆ ಎಸೆದು ಸವಾಲಾದರು. ಪಕ್ಷಕ್ಕೆ ಭಾರೀ ಮುಜುಗರ ತಂದರು. ಅದೇ ಸ್ಥಿತಿ ಕರ್ನಾಟಕದಲ್ಲೂ ಆಗಬಹುದಲ್ಲವೆ ಎಂದು ಡಿಸಿಎಂ ಸ್ಥಾನ ಒಪ್ಪಿಕೊಳ್ಳುವ ಮುನ್ನ ಡಿಕೆಶಿ ಕೇಳಿದ್ದರು. ಹಾಗೇನೂ ಇಲ್ಲ ಎಂಬ ಸೋನಿಯಾ ಮಾತನ್ನು ನಂಬಿದರೆ ಇಲ್ಲಿ ಪಾಟೀಲರು ಬಾಂಬ್ ಸಿಡಿಸಿದ್ದಾರೆ. ತನ್ನ ಅನುಮಾನ ಇಷ್ಟು ಬೇಗ ನಿಜವಾಯಿತೇ ಎಂಬ ಆತಂಕ ಡಿಕೆಶಿ ಬಾಯನ್ನು ಕಟ್ಟಿದೆ.
ಡಿಕೆಶಿ ಮತ್ತು ಅವರ ಸಂಸದ ಸಹೋದರ ಡಿ.ಕೆ. ಸುರೇಶ್ ಸಮಯಕ್ಕೆ ಕಾದಿದ್ದಾರೆ. ಸಂಪುಟ ವಿಸ್ತರಣೆ ಕಸರತ್ತು ನಡೆದಿರುವ ಈ ಸಮಯದಲ್ಲಿ ಭರ್ಜರಿ ಖಾತೆಗಳನ್ನು ಕೈವಶ ಮಾಡಿಕೊಂಡ ಬಳಿಕ ಮುಂದಿನ ಅಧ್ಯಾಯವಾಗಿ ಪಾಟೀಲರ ಹೇಳಿಕೆ ಮತ್ತು ಹೈಕಮಾಂಡ್‍ನ ಮೌನವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಡಿಕೆಶಿ ಸಿಎಂ ಆಗುತ್ತಾರೆಂದು ಅಖಂಡ ಬೆಂಬಲ ನೀಡಿದ ಒಕ್ಕಲಿಗ ಸಮುದಾಯಕ್ಕೆ ತಾಳ್ಮೆಯಿಂದಿರುವಂತೆ ಸಂದೇಶ ರವಾನೆಯಾಗಿದೆ. ನಗುವಿನ ಮುಖವಾಡ ಧರಿಸಿರುವ ಡಿಕೆಶಿ ಸರಬರ ಓಡಾಡುತ್ತಿದ್ದಾರೆ. ಪಾಟೀಲರ ಹೇಳಿಕೆ ಹೊರಬಿದ್ದಂದಿನಿಂದಲೂ ಖರ್ಗೆ, ವೇಣುಗೋಪಾಲರಾದಿಯಾಗಿ ಹೈಕಮಾಂಡ್ ಮುಖಂಡರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿಲ್ಲ. ದಿನದ 24 ತಾಸೂ ಮಾಧ್ಯಮದವರಿಗಾಗಿ ಕಾಯುತ್ತಿದ್ದ ಮುಖಂಡರು ಸದ್ಯಕ್ಕೆ ತೆನಾಲಿ ರಾಮನಂತೆ ಮುಖಕ್ಕೆ ಮಡಿಕೆ ಕವುಚಿಕೊಂಡು ಅಡ್ಡಾಡುತ್ತಿದ್ದಾರೆನಿಸುತ್ತಿದೆ.
ಡಿಕೆಶಿ ಕ್ಯಾಂಪಿನ ಮುಖಂಡರೊಬ್ಬರು ಆಡಿದ ಮಾತನ್ನು ಕೇಳಿಸಿಕೊಂಡರೆ ಹೀಗೂ ಉಂಟೆ ಅನಿಸುತ್ತದೆ. ನಾನು ಕೇಳಿಸಿಕೊಂಡಿದ್ದನ್ನು ನೀವೂ ಓದಿ: ಸಂಪುಟ ರಚನೆಯನ್ನು ಇಡಿಯಾಗಿ ರಚಿಸುವುದರ ಪೌರೋಹಿತ್ಯ ವಹಿಸಬೇಕಿದ್ದ ಏಐಸಿಸಿ ಅಧ್ಯಕ್ಷ ಖರ್ಗೆಯವರು ತಮ್ಮ ಕುಟುಂಬದ ಬೇಕು ಬೇಡವೆಂಬ ಮಟ್ಟಕ್ಕೆ ಪಕ್ಷವನ್ನು ಇಳಿಸಿ ದೆಹಲಿಗೆ ಹೊರಟುಬಿಟ್ಟರು. ಅವರು ಮರೆಯದೆ ಮಾಡಿದ ಕೆಲಸವೆಂದರೆ ಸಂಪುಟದ ಮೊದಲ ಪಟ್ಟಿಯಲ್ಲಿ ತಮ್ಮ ಮಗ ಪ್ರಿಯಾಂಕ್ ಖರ್ಗೆ ಹೆಸರು ಸೇರುವಂತೆ ನೋಡಿಕೊಂಡಿದ್ದು. ಅಧ್ಯಕ್ಷರಾಗಿ ಅವರು ಮಾಡಿದ ಸಾರ್ಥಕ ಕೆಲಸ ಇದೊಂದೇ!
ಇದನ್ನೂ ಓದಿ: ಮೊಗಸಾಲೆ ಅಂಕಣ: ನಿನ್ನೆವರೆಗೂ ಮತದಾರರೇ ಗತಿ, ಇಂದು ದೇವರೇ ಗತಿ