Site icon Vistara News

ಮೊಗಸಾಲೆ ಅಂಕಣ | ಸಡಿಲವಾಗುತ್ತಿರುವ ರಾಜ್ಯ-ಕೇಂದ್ರ ಸಂಬಂಧ: ಜ್ವಾಲಾಮುಖಿ ಸ್ಫೋಟ?

governors

ಕೇಂದ್ರ ರಾಜ್ಯ ಸಂಬಂಧ ದೇಶದಲ್ಲಿ ಮತ್ತೊಮ್ಮೆ ಬಿಗಡಾಯಿಸುವ ಹಂತ ಮುಟ್ಟುತ್ತಿರುವುದರ ಲಕ್ಷಣ ದಿನದಿನವೂ ಒಡೆದು ಕಾಣಲಾರಂಭವಾಗಿದೆ. ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ನೇತೃತ್ವದ ಸರ್ಕಾರವಿರುವ ಕೇರಳ, ಡಿಎಂಕೆ/ಕಾಂಗ್ರೆಸ್ ಆಡಳಿತವಿರುವ ತಮಿಳುನಾಡು, ಟಿಆರ್‍ಎಸ್ ಅಧಿಕಾರದಲ್ಲಿರುವ ತೆಲಂಗಾಣ, ತೃಣಮೂಲ ಕಾಂಗ್ರೆಸ್ ಸರ್ಕಾರವಿರುವ ಪಶ್ಚಿಮ ಬಂಗಾಳದಲ್ಲಿ ಆಯಾ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ನಡೆಯುತ್ತಿರುವ ಬಹಿರಂಗ ಕಾದಾಟ ಈ ಲಕ್ಷಣದ ಮುಖ್ಯ ಕುರುಹಾಗಿದೆ.

ಈ ನಾಲ್ಕೂ ರಾಜ್ಯಗಳಲ್ಲಿರುವುದು ಕೇಂದ್ರವನ್ನು ಆಳುತ್ತಿರುವ ಬಿಜೆಪಿ/ಎನ್‍ಡಿಎ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿರುವ ವಿರೋಧ ಪಕ್ಷಗಳು ಎನ್ನುವುದು ಗಮನಿಸಬೇಕಾದ ಸಂಗತಿ. ಈ ರಾಜ್ಯಗಳಿಂದ ವರದಿಯಾಗುತ್ತಿರುವ ಸುದ್ದಿಯನ್ನು ಅವಲೋಕಿಸಿದರೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ನಡುವಣ ಸಂಘರ್ಷಕ್ಕೆ ಮತ್ತೆ ಭಾರತ ಅಣಿ ಆಗುತ್ತಿರುವ ಸೂಚನೆ ನಿಚ್ಚಳವಾಗುತ್ತದೆ. ಇಂದಿರಾ ಗಾಂಧಿಯವರ “ದಮನಕಾರಿ ಆಡಳಿತ” ಕೇಂದ್ರ ರಾಜ್ಯಗಳ ಪರಸ್ಪರ ಸೌಹಾರ್ದ ಸಹಕಾರದ ಆಡಳಿತಕ್ಕೆ ಮಾರಕವಾಗಿದೆ; ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುತ್ತಿದೆ ಎಂಬ ಕೂಗು ಭಾರೀ ಸದ್ದನ್ನು ಮಾಡಿದ್ದು ಎಂಬತ್ತರ ದಶಕದ ವಿದ್ಯಮಾನ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ರೀತಿಯಲ್ಲಿ ಕೇಂದ್ರ ವರ್ತಿಸುತ್ತಿದೆ ಎನ್ನುವುದು ಮತ್ತು ಆ ದಿಸೆಯಲ್ಲಿ ರಾಜ ಭವನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವುದು ಇಂದಿರಾ ವಿರುದ್ಧದ ಪ್ರಮುಖ ಆರೋಪವಾಗಿತ್ತು. ರಾಜಭವನವನ್ನು ಕೇಂದ್ರ ಸರ್ಕಾರದ ಶಾಖಾ ಕಚೇರಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆಯೆಂಬ ದೂರಂತೂ ಜನ ಸಾಮಾನ್ಯರಲ್ಲೂ ಚರ್ಚೆಯ ವಸ್ತುವಾಗಿತ್ತು.

ಸಂವಿಧಾನದ 356ನೇ ವಿಧಿಯನ್ನು ಬಳಸಿ ವಿರೋಧ ಪಕ್ಷಗಳ ಸರ್ಕಾರವನ್ನು ಹಣಿಯುವುದಕ್ಕೆ ರಾಜ್ಯಪಾಲರ ವರದಿ ಅಗತ್ಯ. ಕೇಂದ್ರದಲ್ಲಿರುವ ಸರ್ಕಾರ ತನ್ನ ಪಕ್ಷದವರಿಗೆ ರಾಜ್ಯಪಾಲರ ಹುದ್ದೆ ಕರುಣಿಸಿ ಅವರನ್ನು ಬೇಕಾದಂತೆ ಬಳಸಿಕೊಳ್ಳುವ ಚಾಳಿ ಮುಗಿಲು ಮುಟ್ಟಿದ್ದು ಇಂದಿರಾ ಯುಗದಲ್ಲಿ. ಸಂವಿಧಾನ ರಾಜ್ಯಪಾಲರಿಗೆ ಇರುವ ಹಕ್ಕುಗಳನ್ನಷ್ಟೇ ಹೇಳದೆ ಹೊಣೆಗಾರಿಕೆಯನ್ನೂ ವಿಧಿಸಿದೆ. ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ಅಧಿಕಾರಕ್ಕೆ ಬಂದ ಸರ್ಕಾರದ ಆಡಳಿತದಲ್ಲಿ ರಾಜ್ಯಪಾಲರು ವಹಿಸಬೇಕಿರುವ ಪಾತ್ರ ಮತ್ತು ಅದರ ವ್ಯಾಪ್ತಿ ಕುರಿತೂ ಹೇಳುತ್ತದೆ. ರಾಜ್ಯದಲ್ಲಿ ಸಂವಿಧಾನ ಮುಖ್ಯಸ್ಥರಾಗಿರುವ ಅವರು ರಾಷ್ಟ್ರಪತಿಯ ಪ್ರತಿನಿಧಿ. ರಾಷ್ಟ್ರಪತಿಗೆ ಇರುವ ಇತಿಮಿತಿ ರಾಜ್ಯಪಾಲರದೂ ಕೂಡಾ. ಮಂತ್ರಿ ಮಂಡಲ ಕಾಲಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿರೋಧ ಸೂಚಿಸಲು ಸಂವಿಧಾನದ ರೀತ್ಯ ರಾಜ್ಯಪಾಲರಿಗೆ ಅಧಿಕಾರವೂ ಇಲ್ಲ; ಅವಕಾಶವೂ ಇಲ್ಲ. ಒಂದಿಷ್ಟು ಸಲಹೆ ಸೂಚನೆ ಕೊಡಬಹುದು; ಆದರೆ ಅದನ್ನು ಪಾಲಿಸಲೇಬೇಕೆಂದು ಕಡ್ಡಾಯ ಮಾಡುವ ಅಧಿಕಾರ ಅವರಿಗೆ ಇಲ್ಲವೇ ಇಲ್ಲ. ಕಾಯ್ದೆ ವಿಚಾರ ಬಂದಾಗ ಕಾನೂನು ತಜ್ಞರ ಸಲಹೆ ಪಡೆಯುವ ಅವಕಾಶವನ್ನು ಸಂವಿಧಾನ ಅವರಿಗೆ ಕಲ್ಪಿಸಿದೆ. ಅದರ ಹೊರತಾಗಿ ಸರ್ಕಾರದ ದಿನನಿತ್ಯದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವ- ಲೋಕಾರೂಢಿಯಲ್ಲಿರುವ ಮಾತನ್ನು ಹೇಳಬಹುದಾದರೆ ಮೂಗು ತೂರಿಸುವ- ಅವಕಾಶ ರಾಜ್ಯಪಾಲರ ಅಧಿಕಾರದಲ್ಲಿಲ್ಲ. ಕಾರ್ಯಾಂಗ ತೆಗೆದುಕೊಳ್ಳುವ ನಿರ್ಣಯಗಳಿಗೆ ಅಧಿಕೃತ ಮುದ್ರೆ ಒತ್ತುವುದರ ಆಚೆಗೆ ಅವರಿಗೆ ಇರುವ ಅಧಿಕಾರ ಅಕ್ಷರಶಃ ಮಿತಿಯ ಚೌಕಟ್ಟಿನಲ್ಲಿ ಇರುವಂಥದು.

ಅದನ್ನು ಕಾಂಪೌಂಡ್ ಎಂದು ಹೇಳಬಹುದು. ಸುತ್ತ ಕಾಂಪೌಂಡ್ ಇರುವ ಜಾಗದಲ್ಲಿ ಅಗತ್ಯದಷ್ಟಿರುವ ಅಧಿಕಾರವನ್ನು ಮೀರದಂತೆ ಕರ್ತವ್ಯ ನಿರ್ವಹಿಸಬೇಕಾಗಿರುವ ರಾಜ್ಯಪಾಲರಿಗೆ ಅವರು ಹೊಂದಿರಬಹುದಾದ ಪೂರ್ವಾಶ್ರಮದ (ರಾಜಕೀಯ) ವಾಸನೆ ಇರತಕ್ಕದ್ದಲ್ಲ ಎಂದು ಹೇಳುತ್ತದೆ ಸಂವಿಧಾನ. ವಾಸನಾಮುಕ್ತರು ರಾಜ್ಯಪಾಲರಾಗಿ ನೇಮಕಗೊಂಡ ಉದಾಹರಣೆ ಇಲ್ಲವೇ ಇಲ್ಲ ಎಂದೇನೂ ಇಲ್ಲ. ಆದರೆ ಸಿಂಹಪಾಲು ಪ್ರಕರಣಗಳಲ್ಲಿ ರಾಜಕಾರಣಿಯೇ ಪೂರ್ವಾಶ್ರಮದ ಸಂಬಂಧ ಉಳಿಸಿಕೊಂಡು ರಾಜಭವನದ ಸೀಟು ಹಿಡಿಯುತ್ತಾರೆ ಎನ್ನುವುದಕ್ಕೆ ದೇಶ ಸ್ವತಂತ್ರವಾದಂದಿನಿಂದಲೂ ಸಾಕಷ್ಟು ಉದಾಹರಣೆಗಳಿವೆ. ಎಷ್ಟೋ ಸಂದರ್ಭಗಳಲ್ಲಿ ಆಡಳಿತ ಪಕ್ಷದ ಮುಖಂಡರ ಪುನರ್ವಸತಿಗಾಗಿ ರಾಜ್ಯಪಾಲರ ಹುದ್ದೆ ನೀಡಿ ಮನಸ್ಸು ಗೆದ್ದ ಪ್ರಕರಣಗಳೂ ಇವೆ.

ಕೇರಳದ ರಾಜ್ಯಪಾಲ ಮಹಮದ್ ಅರೀಫ್ ಖಾನ್ ಮೇಲೆ ಪ್ರಸ್ತಾಪಿಸಿದ ಕೆಟಗರಿಗೆ ಸೇರಿದವರಲ್ಲ. ಇತಿಹಾಸ, ಭೂಗೋಳ, ಸಮಾಜ ವಿಜ್ಞಾನ, ಬಹುತೇಕ ಎಲ್ಲ ಧರ್ಮಗಳ ತುಲನತ್ಮಕ ಅಧ್ಯಯನ ಮುಂತಾದವು ಅರೀಫ್‍ರ ಶಕ್ತಿ. ವಿ.ಪಿ ಸಿಂಗ್ ಪ್ರಧಾನಿಯಾಗಿದ್ದಾಗ ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಶಾಬಾನೂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನ ತೀರ್ಪಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಪ್ರಧಾನಿ ರಾಜೀವ್ ಗಾಂಧಿಯವರ ನಿರ್ಧಾರ ಪ್ರತಿಭಟಿಸಿ ಅವರ ಸಂಪುಟದ ಸಚಿವ ಸ್ಥಾನಕ್ಕೆ ರಜೀನಾಮೆ ಬಿಸುಟಿ ಬಂದವರು. ಶಾಬಾನೂ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಅಲಕ್ಷಿಸುವುದಕ್ಕೆ ಸರ್ಕಾರಕ್ಕೆ ಕಾರಣಗಳಿರಲಿಲ್ಲ. ಮುಲ್ಲಾಗಳ ಮಾತನ್ನು ಪ್ರಧಾನಿ ಕೇಳಿದರು ಎಂಬುದು ಅರೀಫ್ ಮಾಡಿದ್ದ ಬಹುದೊಡ್ಡ ಆರೋಪ. ಬದಲಾದ ರಾಜಕೀಯದಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಂಡವರು. ರಾಷ್ಟ್ರಪತಿ ಸ್ಥಾನಕ್ಕೆ ದ್ರೌಪದಿ ಮುರ್ಮು ಹೆಸರು ಪ್ರಸ್ತಾಪಕ್ಕೆ ಬರುವ ಮುನ್ನ ಆ ಹುದ್ದೆಗೆ ಪರಿಗಣಿಸಲಾಗಿದ್ದ ಕೆಲವು ಹೆಸರುಗಳಲ್ಲಿ ಅರೀಫರದೂ ಇತ್ತು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಬಿಜೆಪಿ ಚುನಾವಣಾ ಜಯಕ್ಕೆ ʻತಾರಾಬಲʼ

ರಾಜ್ಯಪಾಲರಾಗಿ ಅವರ ನೇಮಕವನ್ನು ರಾಜಕೀಯ ಪುನರ್ವಸತಿ ಪಟ್ಟಿಯಡಿ ತರುವುದು ಯಾವ ದೃಷ್ಟಿಯಿಂದಲೂ ತರವಲ್ಲ. ರಾಜ್ಯಪಾಲರಾಗುವುದಕ್ಕೆ ಅಗತ್ಯವಿರುವ ಎಲ್ಲಾ ಅರ್ಹತೆಯನ್ನೂ ಉಳ್ಳ ಅವರು ಆ ಸ್ಥಾನಕ್ಕೆ ಬಂದ ನಂತರದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಮಾತ್ರ ಅಚ್ಚರಿ ಮೂಡಿಸಿದೆ. ಕೇರಳದ ಚುನಾಯಿತ ಸರ್ಕಾರದ ವಿರುದ್ಧ ಅವರು ಬಹಿರಂಗ ಸಮರವನ್ನೇ ಸಾರಿದ್ದಾರೆ. ರಾಜ್ಯಪಾಲರು ಮತ್ತು ಸರ್ಕಾರದ ನಡುವಣ ಸೌಹಾರ್ದ ಸಂಬಂಧ ಅಲ್ಲಿ ಪೂರ್ತಿಯಾಗಿ ಹಳಸಿ ಹೋಗಿರುವುದಕ್ಕೆ ಪಿಣರಾಯಿ ವಿಜಯನ್ ಸರ್ಕಾರದ ಕೊಡುಗೆಯೂ ಇದೆ. ಆದರೆ ದೊಡ್ಡ ಕೊಡುಗೆ ರಾಜಭವನದಿಂದ ಬರುತ್ತಿದೆ. ಫ್ಯಾಕ್ಟ್ ಫೈಂಡಿಂಗ್ ಬೇರೆ, ಫಾಲ್ಟ್ ಫೈಂಡಿಂಗ್ ಬೇರೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುತ್ತಾರಲ್ಲ ಹಾಗೆ. ಸರ್ಕಾರದ ಪ್ರತಿ ಹೆಜ್ಜೆಯಲ್ಲೂ ಅರೀಫ್ ಸಾಹೇಬರು ದೋಷ ಕಾಣುತ್ತಿರುವುದಕ್ಕೆ ಕಾರಣ ಕೇರಳ ಸರ್ಕಾರ ಕಮ್ಯೂನಿಸ್ಟರ ಕೈಯಲ್ಲಿರುವುದು ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ. ರಾಜ್ಯಪಾಲರು ಈ ಬಗೆಯ ಕಿರಿಕಿರಿ ಮಾಡಲು ಕೇಂದ್ರದ ಒತ್ತಡವೂ ಕಾರಣವೆಂಬ ಮಾತೂ ಗಾಳಿಯಲ್ಲಿ ತೇಲಾಡುತ್ತಿದೆ.

ಕರ್ನಾಟಕದಲ್ಲಿ ಎಚ್.ಆರ್ ಭಾರದ್ವಾಜ್ ಐದು ವರ್ಷ (2009-14) ರಾಜ್ಯಪಾಲರಾಗಿದ್ದರು. ಅವರ ನೇಮಕವಾದಾಗ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಭಾರದ್ವಾಜರನ್ನು ರಾಜ್ಯಪಲರಾಗಿ ನೇಮಿಸಿರುವ ಸುದ್ದಿ ಮುಖ್ಯಮಂತ್ರಿ ಗಮನಕ್ಕೆ ಬಂದುದು ಮಾಧ್ಯಮಗಳ ಮೂಲಕ. ಕೇಂದ್ರ ರಾಜ್ಯ ಸಂಬಂಧ ಸುಧಾರಣೆ ಕುರಿತಂತೆ 1983ರಲ್ಲಿ ರಚನೆಯಾದ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ರಣಜಿತ್ ಸಿಂಗ್ ಸರ್ಕಾರಿಯಾ ಆಯೋಗ 1600 ಪುಟಗಳ ವರದಿಯನ್ನು 1988ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸಲ್ಲಿಸಿತು. ಮಹತ್ವದವು ಎಂದು ಬಿಂಬಿತವಾದ 247 ಶಿಫಾರಸುಗಳನ್ನು ವರದಿ ಒಳಗೊಂಡಿತ್ತು. ರಾಜ್ಯಪಾಲರ ನೇಮಕ ಪೂರ್ವದಲ್ಲಿ ಉಪರಾಷ್ಟ್ರಪತಿ, ಲೋಕಸಭಾ ಸ್ಪೀಕರ್ ಹಾಗೂ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಕೇಂದ್ರ ಸರ್ಕಾರ ಚರ್ಚಿಸಿ ನೇಮಕ ಮಾಡಬೇಕು ಎನ್ನುವುದು ಸರ್ಕಾರಿಯಾ ಆಯೋಗದ ಒಂದು ಶಿಫಾರಸು. ಮನಮೋಹನ್ ಸಿಂಗ್ ಸರ್ಕಾರ ಇತರ ಸರ್ಕಾರಗಳಿಗಿಂತ ಎಷ್ಟೇ ಭಿನ್ನ ಎಂದು ಹೇಳಿಕೊಂಡರೂ ಚಿಲ್ಲರೆ ರಾಜಕಾರಣ ಮಾಡುವುದರಿಂದ ಅದು ಮುಕ್ತವಾಗಿರಲಿಲ್ಲ. ಮೂರನೆ ದರ್ಜೆ ರಾಜಕೀಯ ಎಲ್ಲ ಕಾಲದಲ್ಲೂ ಯಥಾಸ್ಥಿತಿಯಲ್ಲಿ ಮುಂದುವರಿದಿದೆ ಎನ್ನುವುದು ಕಟು ವಾಸ್ತವ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಚರ್ಚಿಲ್ ಕುಳಿತಿದ್ದ ಆಸನದಲ್ಲಿ ರಿಷಿ‌

ಬೆಂಗಳೂರು ರಾಜಭವನಕ್ಕೆ ಬಂದಿಳಿದ ಭಾರದ್ವಾಜ್ ಸಮಯವನ್ನು ವ್ಯರ್ಥಮಾಡದೆ, ಬಿಜೆಪಿ ಸರ್ಕಾರಕ್ಕೆ ಹೇಗೆಲ್ಲ ಕಿರಿಕಿರಿ ಉಂಟುಮಾಡಬಹುದೆಂದು ಯೋಚಿಸಿದರು. “ನಾನು ಹುಟ್ಟಾ ಕಾಂಗ್ರೆಸ್ಸಿಗ, ಈಗಲೂ ಕಾಂಗ್ರೆಸ್ಸಿಗ, ಮುಂದೆಯೂ ಕಾಂಗ್ರೆಸ್ಸಿಗ” ಎಂದು ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಹೇಳಿದ್ದರು. ಪೂರ್ವಾಶ್ರಮದ ವಾಸನೆಯಿಂದ ರಾಜ್ಯಪಾಲರಾದವರು ಮುಕ್ತರಾಗಬೇಕೆಂಬ ಸರ್ಕಾರಿಯಾ ಆಯೋಗದ ಆಶಯಗಳು ಮಣ್ಣುಗೂಡಿದ್ದು ಇಂಥ ಪ್ರಸಂಗಗಳಿಂದ. ಇದೀಗ ಕೇರಳ ರಾಜ್ಯಪಾಲರ ಸರದಿ. ಅವರು ನಿಂತಿರುವ ಸಾಲಿನಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ, ತೆಲಂಗಾಣ ರಾಜ್ಯಪಾಲ ತಮಿಳಸಾಯಿ ಸೌಂದರರಾಜನ್, ಪಶ್ಚಿಮ ಬಂಗಾಳ ರಾಜ್ಯಪಾಲ ಲ. ಗಣೇಶನ್ ಕೂಡಾ ಇದ್ದಾರೆ. ಡಿಎಂಕೆಯಂತೂ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಿರೆಂದು ರಾಷ್ಟ್ರಪತಿಗೇ ಮನವಿ ಮಾಡುವ ನಿರ್ಧಾರಕ್ಕೆ ಬಂದಿದೆ. ಪಶ್ಚಿಮ ಬಂಗಾಳಾದಲ್ಲಿ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಈಗ ಉಪರಾಷ್ಟ್ರಪತಿ. ಅವರು ಕೋಲ್ಕೋತ್ತಾ ರಾಜಭವನದಲ್ಲಿದ್ದಷ್ಟು ಕಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಜಗದೀಪ್ ನಡುವೆ ನಿತ್ಯ ಜಟಾಪಟಿ ಅಸಹ್ಯದ ಪರಾಕಾಷ್ಟೆ ಮುಟ್ಟಿತ್ತು. ಈಗ ಬಂದಿರುವ ರಾಜ್ಯಪಾಲ ಲ.ಗಣೇಶನ್, ಜಗದೀಪ್ ಮಾರ್ಗದಲ್ಲೇ ಹೆಜ್ಜೆ ಹಾಕುತ್ತಿದ್ದಾರೆಂಬ ಆರೋಪ ಟಿಎಂಸಿಯದು.

ತಾವು ರಾಜಕೀಯ ಮಾಡುತ್ತಿಲ್ಲ, ದೋಷವನ್ನಷ್ಟೇ ಎತ್ತಿ ತೋರಿಸುತ್ತಿರುವುದಾಗಿ ಅರೀಫ್ ಹೇಳುತ್ತಿದ್ದಾರೆ. ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದವರು ತಮ್ಮ ವಿರುದ್ಧ ಸಲ್ಲದ ಆರೋಪ ಮಾಡುತ್ತಾರೆ ಎಂಬ ಅವರ ಮಾತುಗಳನ್ನು ನಂಬುವುದಕ್ಕೆ ಅಗತ್ಯವಿರುವ ಆಧಾರಗಳು ಸಿಗುತ್ತಿಲ್ಲ. ತಮ್ಮ ವಿರುದ್ಧ ಕೇರಳದ ಕೆಲವು ಮಾಧ್ಯಮಗಳು ಸುಳ್ಳು ಪ್ರಚಾರದ ಅಭಿಯಾನವನ್ನೇ ನಡೆಸಿವೆ ಎಂಬ ಆಕ್ರೋಶ ಅವರಿಂದ ಬಂದಿದೆ. ಇತ್ತೀಚಿನ ಅವರ ಮಾಧ್ಯಮ ಗೋಷ್ಠಿಯಿಂದ ಎರಡು ಟಿವಿ ವಾಹಿನಿಗಳ ವರದಿಗಾರರು, ಕ್ಯಾಮೆರಾಮನ್‍ಗಳನ್ನು ಹೊರಕ್ಕೆ ಕಳಿಸಿರುವುದು ರಾಜ್ಯಪಾಲರ ನಡವಳಿಕೆಯ ವಿಚಾರದಲ್ಲಿ ಅನುಮಾನ ಮೂಡಿಸಿದೆ.

ಕೇರಳದಲ್ಲಿ ಎಡ ಪಕ್ಷಗಳ ಸರ್ಕಾರವನ್ನು ಬೆಂಬಲಿಸುವ ಈ ಚಾನೆಲ್‍ಗಳ ವರದಿಗಾರರು ಕಿರಿಕಿರಿ ಎನಿಸುವ ಪ್ರಶ್ನೆಗಳನ್ನು ಕೇಳಿರಬಹುದು. ನುರಿತ ರಾಜಕಾರಣಿಯೂ, ಯಥೇಚ್ಛ ಆಡಳಿತಾನುಭವವೂ ಇರುವ ರಾಜ್ಯಪಾಲರಿಗೆ ಆ ಪ್ರಶ್ನೆಗಳು ಮುಜುಗರವನ್ನೂ ಉಂಟು ಮಾಡಿರಬಹುದು. ಆದರೆ ಅದನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿರುವುದು ಸುಳ್ಳೇನೂ ಅಲ್ಲ. ಎಂಥ ಪ್ರಶ್ನೆಗಳಿಗೂ ಚಾಣಾಕ್ಷ ಉತ್ತರ ಕೊಡುವ ಸಾಮರ್ಥ್ಯವಿರುವವರಲ್ಲಿ ಆರೀಫರೂ ಒಬ್ಬರು. ಆದರೆ ಆ ಶಕ್ತಿಯನ್ನು ತೋರದೆ ವರದಿಗಾರರಿಗೆ ಜಾಗ ಬಿಟ್ಟು ಹೋಗಲು “ಗೇಟ್ ತೋರಿಸಿದ್ದು” ಅವರು ಹೊಂದಿರುವ ಸ್ಥಾನದ ಘನತೆಗೆ ತಕ್ಕುದಲ್ಲದ ನಡೆ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಏಳು ಸುತ್ತಿನ ಕೋಟೆಯೊಳಗೆ ಮಲ್ಲಿಕಾರ್ಜುನ ಖರ್ಗೆ

ಪಕ್ಷ ರಾಜಕಾರಣಿಯಂತೆ ಹೇಳಿಕೆ ನೀಡುತ್ತಿರುವ ರಾಜ್ಯಪಾಲ ರವಿಯವರು ಕೇಂದ್ರ-ರಾಜ್ಯ ಸಂಬಂಧಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುತ್ತಿದ್ದು ಅವರನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕರೆಸಿಕೊಳ್ಳಬೇಕೆನ್ನುವುದು ಡಿಎಂಕೆ ಆಗ್ರಹ. ಈ ಸಂಬಂಧ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ತೀರ್ಮಾನಿಸಿರುವ ಡಿಎಂಕೆ ಮತ್ತು ಮಿತ್ರ ಪಕ್ಷಗಳ ನಡೆಯನ್ನು ಸಂವಿಧಾನ ತಜ್ಞರು “ಸೂಕ್ತವಲ್ಲದ ನಡವಳಿಕೆ” ಎಂದಿದ್ದಾರೆ. ರಾಜ್ಯಪಾಲರಾದವರನ್ನು ಅವಧಿ ಪೂರ್ವ ಹಿಂದಕ್ಕೆ ಕರೆಸಿಕೊಂಡ ನಿದರ್ಶನ ದೇಶದಲ್ಲಿ ಇಲ್ಲವೇ ಇಲ್ಲ. ಅವರನ್ನು ನೇಮಿಸಿರುವ ರಾಷ್ಟ್ರಪತಿ ತಮ್ಮದೇ ನೇಮಕವನ್ನು ರದ್ದುಗೊಳಿಸಬೇಕೆಂದು ಬಯಸುವುದು ಹೇಗೆ ಒಪ್ಪಿತ ಎನ್ನುವುದು ಅವರ ವಾದ. ರಾಷ್ಟ್ರಪತಿ ಭವನದ ಕದ ತಟ್ಟುವ ಬದಲಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೇರಿ ಇಂಥ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಸೂಕ್ತ ಎಂದು ಅವರು ಹೇಳುತ್ತಿದ್ದಾರೆ.

ಎಂಬತ್ತರ ದಶಕದಲ್ಲಿ ಕರ್ನಾಟಕದಲ್ಲಿದ್ದ ಎಸ್.ಆರ್ ಬೊಮ್ಮಾಯಿ ಸರ್ಕಾರವನ್ನು ಸಂವಿಧಾನದ 356ನೇ ವಿಧಿ ಬಳಸಿ ವಜಾಗೊಳಿಸಿರುವ ಪ್ರಕರಣ ಈ ಸಂದರ್ಭದಲ್ಲಿ ಮತ್ತೆ ನೆನಪಿಗೆ ಬರುತ್ತಿದೆ. ವಜಾ ವಿರುದ್ಧ ಮತ್ತು ಅದನ್ನು ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಬೊಮ್ಮಾಯಿಯವರು ಸುಪ್ರೀಂ ಕೋರ್ಟ್‍ನ ಮೊರೆ ಹೋದರು. ಸುದೀರ್ಘ ಕಾಲ ಚಿಂತನ ಮಂಥನ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪಿತ್ತು “ಸರ್ಕಾರಕ್ಕೆ ಬಹುಮತ ಇದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸಬೇಕಾಗಿರುವುದು ಶಾಸನ ಸಭೆಯೇ ಹೊರತೂ ರಾಜಭವನದ ಆವರಣವಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿತು. ಅದುವರೆಗೆ ನಿರ್ಲಜ್ಜವಾಗಿ ನಡೆಯುತ್ತಿದ್ದ ಸಂವಿಧಾನದ 356ನೇ ವಿಧಿಯ ದುರುಪಯೋಗ ಮತ್ತು ರಾಜಭವನದ ದುರ್ಬಳಕೆಗೆ ಒಂದಿಷ್ಟು ನಿಯಂತ್ರಣ ಬಂದಿದ್ದು ಇತಿಹಾಸ. ರಾಜ್ಯಪಾಲರ ಹಾವಳಿಯನ್ನು ವಿರೋಧ ಪಕ್ಷಗಳು ಹೋರಾಟಕ್ಕೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತವೆ. ಹಿಂದೆ ಬಿಜೆಪಿಯೂ ಇಂಥ ಹೋರಾಟ ಮಾಡಿತ್ತು. ರಾಜ್ಯಪಾಲರನ್ನು ಕೇಂದ್ರದ ಏಜೆಂಟ್ ಎಂದು ಕರೆದಿತ್ತು. ನಮ್ಮ ಜನತಂತ್ರದ ವಿಪರ್ಯಾಸವೆಂದರೆ ಆಡಳಿತಕ್ಕೆ ಬರುವ ಎಲ್ಲ ಪಕ್ಷಗಳೂ ನಿರ್ಲಜ್ಜವಾಗಿ ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುವುದನ್ನು ಪರಂಪರೆಯಾಗಿ ಒಪ್ಪಿಕೊಂಡಿರುವುದು.

ಒಡಿಶಾ, ಆಂಧ್ರಪ್ರದೇಶದಲ್ಲಿ ವಿರೋಧ ಪಕ್ಷಗಳ ಸರ್ಕಾರವಿದ್ದರೂ ಅಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯ ನಡುವೆ ಸಾಮರಸ್ಯವಿದೆ. ಆಪ್ ಆಡಳಿತವಿರುವ ಪಂಜಾಬ್‍ನಲ್ಲಿ ರಾಜ್ಯಪಾಲ- ಮುಖ್ಯಮಂತ್ರಿ ಸಂಬಂಧ ಹಳಸಿಲ್ಲ. ಆದರೆ ದೆಹಲಿಯಲ್ಲಿರುವ ಆಪ್ ಸರ್ಕಾರಕ್ಕೆ ರಾಜ್ಯಪಾಲರಿಂದ ನಿತ್ಯ ಕಿರಿಕಿರಿ. ರಾಜಸ್ತಾನದಲ್ಲಿ ರಾಜ್ಯಪಾಲರ ವಿರುದ್ಧ ಒಮ್ಮೆಯೂ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಸಮಾಧಾನ ವ್ಯಕ್ತಪಡಿಸಿದ್ದು ವರದಿಯಾಗಿಲ್ಲ. ಇದೊಂದು ರೀತಿಯಲ್ಲಿ ರಾಜಕೀಯ ವಿಸ್ಮಯ.

Exit mobile version