ಈ ಅಂಕಣವನ್ನು ಇಲ್ಲಿ ಆಲಿಸಿ:
ನನ್ನ ದೇಶ ನನ್ನ ದನಿ ಅಂಕಣ: ನಮ್ಮ ದೇಶದ ಗತ-ಇತಿಹಾಸವೇ (History of India) ಹಾಗೆ. ನಂಬಲು ಅಸಾಧ್ಯವಾದ ಸಂಗತಿಗಳೇ ಅಧಿಕಾಧಿಕ. ಗೋವಾ (Goa) ಎಂದರೆ ಭೂಮಿಯ ಮೇಲಿನ ಸ್ವರ್ಗ ಎಂಬ ಅಪವ್ಯಾಖ್ಯಾನವಿದೆ. ಮದ್ಯಪಾನ (Liquor consuming) ಇತ್ಯಾದಿಗಳನ್ನು ವೈಭವೀಕರಿಸಿ, ಪ್ರವಾಸಿಗರನ್ನು (Tourists) ಆಕರ್ಷಿಸುವ ದೋಚುವ ಹುನ್ನಾರ ನಡೆದೇ ಇದೆ. ತತ್ಸಂಬಂಧೀ ಆದಾಯವೇ ಪ್ರಮುಖವಾಗಿ ಹೋಗಿ ಆ ರಾಜ್ಯಕ್ಕೆ ಮುಕ್ತಿಯೇ ಇಲ್ಲವಾಗಿದೆ. ಹಿಂದಿನ ಗೋಮಾಂತಕದ (Gomanthaka) ದೇವಾಲಯಗಳ (Temples) ಬಗೆಗೆ, ವಿಭಿನ್ನ-ವಿಶಿಷ್ಟ ಸಂಸ್ಕೃತಿಯ ಬಗೆಗೆ ಕೇಳುವವರೇ ಇಲ್ಲ. ಮತಾಂತರೀ ಕ್ರೈಸ್ತರ (Conversion) ಭಯಂಕರ ಹಿಂಸಾಪರ್ವಕ್ಕೆ (Violence) ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತುತ್ತಾದವರು ಗೋವಾದ ಹಿಂದೂಗಳು.
ಆದರೂ, ಸೇಂಟ್ (ಖಂಡಿತಾ ಆತ ಸಂತನೂ ಅಲ್ಲ, ಸಜ್ಜನನೂ ಅಲ್ಲ) ಫ್ರಾನ್ಸಿಸ್ ಕ್ಸಾವಿಯರ್ (ಸಾಮಾನ್ಯ ಯುಗದ 16ನೆಯ ಶತಮಾನ)ನನ್ನೇ ಸಾಲಾಗಿ ನಿಂತು ನಮಸ್ಕರಿಸಿ ಬರುವ ಮೂರ್ಖ ಹಿಂದೂಗಳು ನಾವಾಗಿದ್ದೇವೆ. ಈತ ತನ್ನ ಕಿಂಗ್-ಗೆ ಪತ್ರ ಬರೆದು ಗೋವಾದಲ್ಲಿ Inquisition ಅತ್ಯಂತ ಆವಶ್ಯಕ ಎಂದು ಒತ್ತಾಯಿಸಿದ್ದ. ಈ ಹಿಂಸೆಗೆ ಬಲಿಯಾದವರ ಅಧಿಕೃತ ಸಂಖ್ಯೆಯೇ 16202. ಇದರಲ್ಲಿ 4012 ಮಂದಿ ಮಹಿಳೆಯರೇ ಇದ್ದರು. ಪೋರ್ತುಗೀಸರ ಎಲ್ಲ ವಸಾಹತುಗಳಲ್ಲಿಯೂ ಯಾತನಾ ಶಿಬಿರಗಳಿದ್ದವು (Concentration Camps). ಹಿಂದೂಗಳ ಮೇಲೆ ಇವರದ್ದು “ಅಚ್ಚುಕಟ್ಟಾದ ಹಿಂಸಾವಿಧಾನ”. ಜರ್ಮನಿಯ ನಾಜಿಗಳನ್ನು ನೆನಪಿಸುವಂತಹುದು. ವಿಚಾರಣೆಯ ಅವಧಿಯಲ್ಲಿ ದುರದೃಷ್ಟಶಾಲಿ ಹಿಂದೂಗಳು ಮಾಡುವ ಚೀತ್ಕಾರ, ವಿಸರ್ಜನೆಗಳ ಬಗೆಗೆ ಗುಮಾಸ್ತರು ವಿವರವಾಗಿ ಬರೆದಿಡುತ್ತಿದ್ದರು. ಕಾಲಿಗೆ ಭಾರ ಕಟ್ಟಿ ಹಿಂಭಾಗದಿಂದ ಕೈಗಳಿಗೆ ಹಗ್ಗ ಕಟ್ಟಿ ಆಪಾದಿತನನ್ನು ಮೇಲೆಳೆಯುತ್ತಿದ್ದರು. ಹೆಬ್ಬೆರಳಿನ ಉಗುರಿನ ಕಣ್ಣುಗಳಿಗೆ ಸೂಜಿಗಳಿಂದ ಚುಚ್ಚುತ್ತಿದ್ದರು. ಬಿಸಿ ಎಣ್ಣೆ, ಸುಣ್ಣದ ನೀರು, ಉರಿಯುವ ಗಂಧಕ ಇವೆಲ್ಲವನ್ನೂ ಹಿಂಸೆಗೆ ಧಾರಾಳವಾಗಿ ಬಳಸುತ್ತಿದ್ದರು. ಉರಿಯುವ ಕೊಳ್ಳಿಗಳಿಂದ ಕಂಕುಳಿಗೆ ತಿವಿಯುತ್ತಿದ್ದರು. ದೊಡ್ಡ ರಾಟೆಯ ಮೇಲೆ ಆಪಾದಿತರನ್ನು ಹಿಗ್ಗಿಸಿ ಸಾಯಿಸುತ್ತಿದ್ದರು. ಹಿಂದೂ ಸಂಪ್ರದಾಯ, ಆಚರಣೆಗಳನ್ನು ಅನುಸರಿಸಿಕೊಂಡು ಬಂದುದೇ ಇವರ ಅಪರಾಧ!
ಪೋರ್ತುಗೀಸರ ದುರಾಡಳಿತದ ಗೋವಾದ್ದು ಭಯಂಕರ ಇತಿಹಾಸ. ಇವರ ಅಮಾನುಷ ಹಿಂಸಾಚಾರದ ಘಟನಾವಳಿ ಬಹಳ ದೊಡ್ಡದೇ ಇದೆ. ಕೆಲವಂತೂ ತೀರ ವಿಚಿತ್ರ ಎನ್ನಿಸುವಂತಿವೆ. ಇಸ್ಲಾಮೀ ಆಕ್ರಮಣಕಾರಿಗಳ ದುರಾಡಳಿತ ಕಾಲದ “ಜಿಜಿಯಾ” ತೆರಿಗೆಯನ್ನು ಹೋಲುವ ಈ ಪೋರ್ತುಗೀಸ್ ಕ್ರೂರಿಗಳ ಅನೇಕ ತೆರಿಗೆಗಳು ಮಾನವ ಸಮಾಜವೇ ತಲೆ ತಗ್ಗಿಸುವಂತಹುವು. ಅದರಲ್ಲೊಂದು ಈ ಜುಟ್ಟಿನ ತೆರಿಗೆ. ಹೀಗೊಂದು ತೆರಿಗೆಯಿತ್ತೆಂಬುದೇ ನಮ್ಮಲ್ಲಿ ಬಹಳ ಜನರಿಗೆ ತಿಳಿಯದು.
ಸಾಮಾನ್ಯ ಯುಗದ 17ನೆಯ ಶತಮಾನದ ಆದ್ಯಂತ ಗೋವಾದ ಪೋರ್ತುಗೀಸ್ ಆಳರಸರಿಗೆ ಹಣದ ಅಭಾವವಿತ್ತು, ಭ್ರಷ್ಟಾಚಾರ ಮಿತಿ ಮೀರಿತ್ತು. ಹೇಗೆಲ್ಲಾ ಜನರ ತಲೆ ಒಡೆದು ಹಣ – ತೆರಿಗೆ ದೋಚಬಹುದು, ಎಂದೇ ಯೋಚಿಸುತ್ತಿದ್ದರು. ಚರ್ಚಿನ ದಂಡಾಧಿಕಾರದ ಮತ್ತು ಪರಮತ ಹಿಂಸೆಯ ಉದ್ದೇಶದ (Inquisition) ವಿಕೃತ ಶಿಕ್ಷಾವಿಧಾನಗಳು ಅಲ್ಲಿದ್ದ ಹಿಂದುಗಳಲ್ಲಿ ಅಸುರಕ್ಷತೆಯನ್ನು ಹುಟ್ಟುಹಾಕಿದ್ದವು. ವ್ಯಾಪಾರ, ವ್ಯವಹಾರ, ಕೃಷಿ ಇತ್ಯಾದಿಗಳು ಅತಂತ್ರವಾಗಿದ್ದವು. 1704ರ ಅಕ್ಟೋಬರ್ ತಿಂಗಳ 12ರಂದು ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಸಭೆಯಲ್ಲಿ ಹೇಗೆಲ್ಲಾ ಗೋವಾದ ಹಿಂದುಗಳನ್ನು ದೋಚಬಹುದು, ತೆರಿಗೆ ಹೆಸರಿನಲ್ಲಿ ಲೂಟಿ ಮಾಡಬಹುದು ಎಂದು ಸಮಾಲೋಚಿಸಲಾಯಿತು. ಪಕ್ಕದಲ್ಲಿದ್ದ ಬಿಜಾಪುರದ ಆದಿಲ್ ಶಾಹೀ ಮತ್ತು ಮೊಘಲರ ಆಡಳಿತದ ಜಿಜಿಯಾ ರೀತಿಯ ತೆರಿಗೆಯನ್ನು ಯಾವ ರೀತಿ ವಿಧಿಸಬಹುದು, ಎಂಬ ಚರ್ಚೆಯೂ ಆಯಿತು.
ಪಣಜಿಯಲ್ಲಿ 1972ರಲ್ಲಿ ಪ್ರಕಟವಾದ ವಿ.ಟಿ.ಗುಣೆ ಅವರ “a Detailed Subject-Index and a Table of Contents in Brief” ಕೃತಿಯು ವಿಶದಪಡಿಸುವಂತೆ, ಬಹುಪಾಲು ಹಿಂದೂಗಳು ಜುಟ್ಟು ಬಿಡುವುದರಿಂದ ಈ “ಜುಟ್ಟಿನ ತೆರಿಗೆ” ವಿಧಿಸಲು ತೀರ್ಮಾನಿಸಲಾಯಿತು. ಕ್ರೈಸ್ತೇತರರು ಮಾತ್ರ ಈ ತೆರಿಗೆಯನ್ನು ತೆರಬೇಕಾಗಿತ್ತು. ಸಣ್ಣ ವ್ಯಾಪಾರಿಗಳು, ಅಕ್ಕಸಾಲಿಗರು ಮೂರು ಕ್ಸೆರಾಫಿನ್ (ಗೋವಾ ಪೋರ್ತುಗೀಸರ ನಾಣ್ಯ) ತೆರಬೇಕು; ಸಗಟು ವ್ಯಾಪಾರಿಗಳು ಐದು ಕ್ಸೆರಾಫಿನ್ ಮತ್ತು ಉಳಿದವರು ಎರಡು ಕ್ಸೆರಾಫಿನ್ ತೆರಿಗೆ ಕಟ್ಟಬೇಕು, ಎಂದು ತೀರ್ಮಾನಿಸಲಾಯಿತು. ಈ ಜುಟ್ಟಿನ ತೆರಿಗೆ ದೋಚಲು ನಿಗದಿತವಾದ ಪಡೆಯು, ತೆರಿಗೆದಾರರ ಪಟ್ಟಿ ಸಿದ್ಧಪಡಿಸಿಕೊಂಡು ಗೋವಾದ ಹಿಂದೂಗಳ ಭರ್ತ್ಸನೆಯಲ್ಲಿ ಹಿಂಸೆಯಲ್ಲಿ ನಿರತವಾಯಿತು. ಅಕ್ಷರಶಃ ನಿಯಂತ್ರಣವೇ ಇರಲಿಲ್ಲ. ಕೆಲವೆಡೆ ಐವತ್ತು, ನೂರು ಕ್ಸೆರಾಫಿನ್ ಗಳಷ್ಟು ಹಣ ಕಿತ್ತುಕೊಂಡ ಉದಾಹರಣೆಗಳೂ ಇದ್ದವು.
ತುಂಬಾ ಹಿಂದೆ ಅಂದರೆ, 1567ರಲ್ಲಿಯೇ ಗೋವಾದಲ್ಲಿ ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಮೊದಲ ಸಭೆಯಲ್ಲಿ ಹಿಂದೂಗಳ ವಿಗ್ರಹಾರಾಧನೆ, ಸಂಪ್ರದಾಯಗಳು, ಪೂಜೆಗಳು, ಆಚಾರ ವಿಚಾರಗಳು, ಮೈಮೇಲೆ ಗಂಧವನ್ನು ಲೇಪಿಸಿಕೊಳ್ಳುವುದು, ತುಳಸೀ ಪೂಜೆ ಮಾಡುವುದು ಇತ್ಯಾದಿ ಎಲ್ಲವನ್ನೂ ಟೀಕಿಸಲಾಯಿತು, ನಿಷೇಧಿಸಲಾಯಿತು. ಜನಿವಾರ ಹಾಕುವ ಸಮುದಾಯಗಳು ಜನಿವಾರವನ್ನು ಅಡಗಿಸಿಕೊಳ್ಳಬೇಕಿತ್ತು. ಜುಟ್ಟು ಬಿಟ್ಟವರ ಮೇಲೆಯೂ ದಾಳಿ ಹೆಚ್ಚಾಗುತ್ತಹೋಯಿತು. 1868ರಲ್ಲಿ ಲಿಸ್ಬೋವಾದಲ್ಲಿ ಪ್ರಕಟವಾದ ಪೋರ್ತುಗೀಸ್ ಭಾಷೆಯ “Subsidios para a Historia da India Portuguesa” (ಲೇಖಕ: ಆರ್.ಜೆ.ಡೇ ಲಿಮಾ ಫೆಲ್ನರ್ : ಪುಟಗಳು 58, 62 ಇತ್ಯಾದಿ) ಗ್ರಂಥದಲ್ಲಿ ಗೋವಾ ಹಿಂದೂಗಳ ಮೇಲಾಗುತ್ತಿದ್ದ ಬೀಭತ್ಸ ಹಿಂಸೆಯ ವಿವರಗಳಿವೆ.
ಎಸ್.ಜೆ.ಸೆಬಾಸ್ಟಿಯೋ ಫರ್ನಾಂಡಿಸ್ ಎಂಬವನು ಬರೆದ ಪತ್ರವೊಂದರಲ್ಲಿ ಕೆಲವು ಭಯಾನಕ ವಿವರಗಳಿವೆ: “ಹಿಂಸೆ ತಾಳಲಾರದೆ ಹಿಂದೂವೊಬ್ಬ ಕೊನೆಗೊಮ್ಮೆ ಬಲವಂತದ ಮತಾಂತರಕ್ಕೆ ಒಪ್ಪಿದರೆ, ಬ್ಯಾಪ್ಟೈಸಾಗಲು ಸಿದ್ಧನಾದರೆ ಜೆಸ್ಯೂಟ್ ಬ್ರದರ್ ಒಬ್ಬ ತಕ್ಷಣವೇ ಅವನ ಜುಟ್ಟು ಕತ್ತರಿಸುತ್ತಾನೆ. ಮರವೊಂದಕ್ಕೆ ಆ ಜುಟ್ಟನ್ನು ನೇತುಹಾಕಲಾಗುತ್ತದೆ. ಅಲ್ಲಿ ಸೇರಿದ ಕ್ರೈಸ್ತ ಯುವಕರೆಲ್ಲಾ ಆ ಜುಟ್ಟಿಗೆ ಉಗಿಯುತ್ತಾರೆ, ಆ ಮರಕ್ಕೆ ಕಲ್ಲುಗಳನ್ನು ಎಸೆಯುತ್ತಾರೆ, ಕುಣಿದು ಸಂಭ್ರಮಿಸುತ್ತಾರೆ. ಎಲ್ಲ ಸೇರಿ ಹಿಂದೂ ದೇವತೆಗಳಿಗೆ ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಾರೆ, ಬೈಯುತ್ತಾರೆ. ಮುಗ್ಧರಾದ ನಾವು ಇಂತಹುದನ್ನು ನಂಬುವುದು ಕಷ್ಟ. ಪೋರ್ತುಗಲ್ ನ ಕಿಂಗ್-ಗೆ, ಅಂದಿನ ಗೋವಾದ ಚೀಫ್ ರೆವಿನ್ಯೂ ಕಮ್ ಟ್ರೋಲರ್ (Comptroller) ಆಗಿದ್ದ ಸಿಮಾವ್ ಬೊಟೆಲ್ಹೋ ಬರೆದ ಪತ್ರದಲ್ಲಿಯೂ ಇಂತಹ ಅಮಾನುಷ ರಾಕ್ಷಸೀ ವ್ಯವಹಾರಗಳ ಚಿತ್ರಣವಿದೆ. “ಅವಹೇಳನ, ಶಿಕ್ಷೆ, ಹಿಂಸೆಗಳಿಗೆ ಸಾಕಾಗಿಹೋದ ಹಿಂದೂಗಳು ಬ್ಯಾಪ್ಟೈಸಾಗಲು ಒಪ್ಪಿದ ಕೂಡಲೇ, ಅವರೆಲ್ಲರ ತಲೆಯನ್ನು ಬೋಳಿಸಲಾಗುತ್ತದೆ. ವಿಗ್ರಹಾರಾಧನೆಯ ಅಪರಾಧಕ್ಕೆ ಆ ಎಲ್ಲ ಹಿಂದೂಗಳಿಗೆ ಗೋಮಾಂಸವನ್ನು ಒತ್ತಾಯಪೂರ್ವಕವಾಗಿ ತಿನ್ನಿಸಲಾಗುತ್ತದೆ” ಎಂಬ ವಿವರಗಳು ಈ ಪತ್ರದಲ್ಲಿವೆ.
ನಮ್ಮ ಪಠ್ಯಪುಸ್ತಕಗಳಲ್ಲಿ “ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ” ಎಂಬ ಸಾಲುಗಳನ್ನೇ ನಾವೆಲ್ಲಾ ಹಿಂದೆ ಓದಿದ್ದುಂಟು. ಹತ್ತಾರು ಸಾವಿರ ವರ್ಷಗಳ ಸಮೃದ್ಧ ಇತಿಹಾಸದ ಭಾರತವನ್ನು ಈತ ಕಂಡುಹಿಡಿದನಂತೆ! ಆತ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1498ರಲ್ಲಿ. ಕ್ರೈಸ್ತ ಕ್ರೌರ್ಯ ಪರಂಪರೆಯ ಅವನ ಮತ್ತು ಪೋರ್ತುಗೀಸರ ಅನ್ಯಾಯ, ಅತ್ಯಾಚಾರಗಳಿಗೆ ಅಂಕೆಯೇ ಇರಲಿಲ್ಲ. ಹೀಗಿದ್ದೂ ನಮ್ಮಲ್ಲಿ ಎಂತಹ ದೇಶದ್ರೋಹಿಗಳು, ವಂಚಕರು, ಸಮಯಸಾಧಕರು ಇದ್ದಾರೆ ಎಂದರೆ, 1998ರಲ್ಲಿ ಈ ವಾಸ್ಕೋ ಡ ಗಾಮಾನ ಭಾರತ ಭೇಟಿಯ 500 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿತ್ತು. ಜನರು ಥೂ ಎಂದು ಹೀನಾಮಾನವಾಗಿ ಉಗಿದ ಮೇಲೆ, ಈ “ಆಚರಣೆ” ರದ್ದಾಯಿತು. ನಾವು ಸ್ವಾಭಿಮಾನ ಶೂನ್ಯರಾದರೆ, ನಮ್ಮ ಅಸ್ಮಿತೆಯನ್ನೇ ಮರೆತರೆ, ಶತ್ರುಗಳನ್ನು – ಆಕ್ರಮಣಕಾರಿ ರಿಲಿಜನ್ನಿನವರನ್ನೇ ಆರಾಧಿಸಲು ತೊಡಗಿದರೆ, ಭಾರತ-ಶತ್ರುಗಳನ್ನು ಅರ್ಥ ಮಾಡಿಕೊಳ್ಳದೇಹೋದರೆ, ಮತ್ತೆ ಪರಾಕ್ರಾಂತರಾಗುತ್ತೇವೆ. ಎಚ್ಚೆತ್ತುಕೊಳ್ಳದೇ ಹೋದರೆ ಈ ಬಾರಿ ಹೇಳಹೆಸರಿಲ್ಲದಂತಾಗುತ್ತೇವೆ.
ಎಚ್ಚರ, ಜಾಗೃತಿ, ಸ್ವರಕ್ಷಣೆಗಳು ನಮ್ಮ ಕಣ್ಣು ತೆರೆಸಲಿ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ