Site icon Vistara News

Prerane | ಒಂದಾಗುವ ಹಾತೊರೆಯುವಿಕೆಯೇ ಪ್ರೀತಿ, ಒಂದಾಗುವುದೇ ಯೋಗ

Prerane

ಸದ್ಗುರು ಜಗ್ಗಿ ವಾಸುದೇವ್‌
ಪ್ರೀತಿ ಪ್ರೇಮದ ಬಗ್ಗೆ ಬಹಳಷ್ಟು ಮಾತುಕತೆಗಳು ನಡೆಯುತ್ತಿರುತ್ತವೆ. ನೀವು ನಿಜವಾಗಿಯೂ ಆನಂದಮಯವಾಗಿದ್ದರೆ, ನೀವು ಪ್ರೀತಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ಆನಂದವಾಗಿ ಇರಲು ಆಗದಿರುವುದರಿಂದಲೇ ಪ್ರೀತಿಯ ಪ್ರಾಮುಖ್ಯ ಹೆಚ್ಚಿದೆ. ಅದರಲ್ಲಿಯೇ ಅವರಿಗೆ ಸ್ವಲ್ಪ ಆನಂದ ಸಿಗುತ್ತದೆ. ಆನಂದದ ಬಗ್ಗೆ ಗೊತ್ತಿರದ ಜನರೇ ಯಾವಾಗಲೂ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ.

ಪ್ರೀತಿ ಒಂದು ಭಾವನೆ ಮತ್ತು ಭಾವನೆ ಒಂದು ಒಳ್ಳೆಯ ವಾಹನ. ಆದರೆ ನಿಮ್ಮನ್ನು ಗುರಿಗೆ ತಲುಪಿಸಿದರೆ ಮಾತ್ರವೇ ಅದೊಂದು ಒಳ್ಳೆಯ ವಾಹನ. ಇಲ್ಲದಿದ್ದರೆ ವಾಹನಕ್ಕೆ ಯಾವುದೇ ಉದ್ದೇಶವಿಲ್ಲ. ಚಲಿಸದೆ ಇರುವ ಬಸ್ ಇದ್ದರೆ ನಮಗೆ ಅದು ಬೇಕಿಲ್ಲ. ಅದು ಚಲಿಸುತ್ತಿದ್ದರೆ ಮಾತ್ರ ನಾವು ಅದರ ಶಬ್ದ, ಕುಲುಕಾಟ ಮತ್ತದರ ಅನಾನುಕೂಲಗಳನ್ನು ಸಹಿಸಿಕೊಳ್ಳಬಹುದು. ಏಕೆಂದರೆ ಅದು ನಮ್ಮನ್ನು ಎಲ್ಲಿಗಾದರೂ ಕೊಂಡೊಯ್ಯುತ್ತದೆ. ಇಲ್ಲವಾದರೆ ನಾವು ಆ ಬಸ್ಸಿನ ತಾಪತ್ರಯಗಳನ್ನು ಸಹಿಸುವುದಿಲ್ಲ. 

Prerane

ಪ್ರೀತಿಯ ವಾಹನ
ಹಾಗೆಯೇ ಪ್ರೀತಿಯೊಂದು ವಾಹನ. ಪ್ರೀತಿ ಎಂದರೆ ಯಾರದರೊಂದಿಗಾದರೂ ಅಥವಾ ಯಾವುದರೊಂದಿಗಾದರೂ ಒಂದಾಗುವ ಹಾತೊರೆಯುವಿಕೆ. ಆದರೆ ಇದನ್ನು ನೀವು ಅರ್ಥೈಸಿಕೊಂಡಿರುವ ಪ್ರಕಾರ, ಅದು ಶಾಶ್ವತವಾಗಿ ಉಳಿದುಬಿಡುವ, ಎಂದಿಗೂ ಆಗದಿರುವ ಮಿಲನ. ನೀವು ಒಂದಾಗಬಹುದು ಅನ್ನುವ ಹಾತೊರೆಯುವಿಕೆ ಮತ್ತು ಆಶಯವೇ ಸುಂದರ. ಆದರೆ ಸ್ವಲ್ಪ ಸಮಯದ ನಂತರ, ನೀವು ಒಂದಾಗಲು ಸಾಧ್ಯವಿಲ್ಲ ಎನ್ನುವ ಹತಾಶೆಯೇ ನಿರಂತರವಾದರೆ, ಜನರಿಗೆ ಅದೊಂದು ನೋವಿನ ಪ್ರಕ್ರಿಯೆ.

ನಾವು ಆನಂದಮಯವಾಗಿಲ್ಲ ಎಂದೇ ಈ ವಾಹನವನ್ನು ಹತ್ತುತ್ತೇವೆ. ಕೆಲವೊಮ್ಮೆ, ವಾಹನ ಸರಿಯಾಗಿ ಕೆಲಸ ಮಾಡುತ್ತಿದ್ದಾಗ ಅದು ನಿಮ್ಮನ್ನು ಆನಂದದ ಗಡಿಯವರೆಗೂ ಒಯ್ಯುತ್ತದೆ. ಅದು ಒಮ್ಮೆ ಆ ರುಚಿಯನ್ನು ತೋರಿಸಿಬಿಟ್ಟರೆ, “ಇಷ್ಟೇ. ನಾನು ಈ ಬಸ್ ಹತ್ತಿಬಿಟ್ಟರೆ ಆನಂದದ ನಾಡಿನೊಳಗೆ ಹೋಗುತ್ತೇನೆ” ಎಂದು ಭಾವಿಸುತ್ತೀರಿ. ಆದರೆ ಅದು ಆಗಲಿಲ್ಲ. ಅದು ಎಂದಿಗೂ ಒಂದು ಆಶಯ ಮತ್ತು ಹಾತೊರೆಯುವಿಕೆಯಾಗಿ ಉಳಿಯಿತು. ಬಹಳ ಜನರಿಗೆ ಅದೊಂದು ದೊಡ್ಡ ಹತಾಶೆಯಾಯಿತು.

ಬಹಳ ಧರ್ಮಗಳು ಪ್ರೀತಿಯ ಬಗ್ಗೆ ಮಾತನಾಡುತ್ತವೆ, ಆನಂದದ ಬಗ್ಗೆಯಲ್ಲ. ಆನಂದವೆಂದರೆ ಹೇಗಿರುತ್ತದೆ ಎಂದು ಅರಿಯ ಹಲವು ಅಜ್ಞಾನಿಗಳೇ ಇದರ ಬಗ್ಗೆ ಮಾತನಾಡಿರುವುದು ಒಂದು ಕಾರಣವಿರಬಹುದು. ಮತ್ತೊಂದು ಕಾರಣವೆಂದರೆ ಯಾರೋ ಬಹಳ ಆಳವಾದ ತಿಳುವಳಿಕೆಯಿಂದ ನುಡಿದಿರಬಹುದು. ಯಾರೋ ಪ್ರೀತಿಯನ್ನು ಒಂದು ಸಾಧನವೆಂದು ಕಂಡಿರಬಹುದು. ಯಾರೋ ದೇವರನ್ನೇ ಒಂದು ಸಾಧನವೆಂದು ಕಂಡು, ದೇವರೇ ಪ್ರೀತಿ ಎಂದಿರಬಹುದು. ಅವರು ದೇವರೇ ಪ್ರೀತಿ ಎಂದಾಗ ಪ್ರೀತಿಯೇ ಅಂತಿಮ ಎಂದು ಅರ್ಥೈಸಿರಲಿಲ್ಲ. ಅವರು, ದೇವರೊಂದು ವಾಹನ; ಪ್ರೀತಿಯೂ ವಾಹನ ಎನ್ನುವಂತೆ ಹೇಳಿದ್ದರು.

ಆದರೆ ದೇವರೇ ಅಂತಿಮ ಎನ್ನುತ್ತಿರುವ ಜನರಿಗೆ, ಪ್ರೀತಿಯೇ ದೇವರು ಎಂದು ಹೇಳುವುದು ದೊಡ್ಡ ತಪ್ಪಾಗುತ್ತದೆ. ಏಕೆಂದರೆ ಯಾವಾಗಲೂ, ಪ್ರೀತಿಸುವುದು ಎಂದರೆ ಒಂದಾಗಲು ಹಾತೊರೆಯುವುದು ಎಂದೇ ಹೊರತು ನಿಜವಾಗಿಯೂ ಒಂದಾಗುವುದಲ್ಲ. ನೀವು ಒಂದಾದರೆ, ನಾವದನ್ನು ಯೋಗ ಎಂದು ಕರೆಯುತ್ತೇವೆ. ನೀವು ಒಂದಾಗಲು ಹಾತೊರೆಯುತ್ತಿದ್ದಾರೆ, ಅದನ್ನು ಪ್ರೀತಿ ಎನ್ನುತ್ತೇವೆ. 

ಪ್ರೀತಿ ಇನ್ನೂ ಒಂದು ಭಾವನೆ. ನಿಮ್ಮ ಯೋಚನೆ, ದೇಹ, ದೈಹಿಕ ಶಕ್ತಿಗಳಂತೆ ಪ್ರೀತಿಯೂ ಮತ್ತೊಂದು ವಾಹನ. ಜನರು ಪ್ರೀತಿಯ ಬಗ್ಗೆ ಏಕೆ ಅಷ್ಟೊಂದು ಮಾತನಾಡುತ್ತಾರೆ ಎಂದರೆ, ಅವರಲ್ಲಿ ಬಹುತೇಕರು ತಮ್ಮ ಜೀವನದಲ್ಲಿ ಅರಿತಿರುವ ಅತಿ ತೀವ್ರವಾದ ಅನಿಸಿಕೆಯೇ ಭಾವನೆ. ಬಹುತೇಕರು ತಮ್ಮಲ್ಲಿ ಅತ್ಯಂತ ತೀವ್ರವಾದ ಯೋಚನೆಯನ್ನು ಹುಟ್ಟಿಸಲು ಅಸಮರ್ಥರು. ತೊಂಭತ್ತೈದು ಪ್ರತಿಶತ ಜನರು ತಮ್ಮ ಜೀವನದಲ್ಲಿ ಮೂರು ಹಂತಗಳಿಗಿಂತ ಹೆಚ್ಚು ಆಲೋಚಿಸ ಲಾರರು.

ಬಹುತೇಕ ಜನರು ತಮ್ಮ ದೇಹದಿಂದಲೂ ತೀವ್ರವಾಗಿರುವುದಿಲ್ಲ. ಅತ್ಯಂತ ಕೆಲವರು ಮಾತ್ರವೇ ತಮ್ಮ ದೇಹವನ್ನು ಬಹಳ ತೀವ್ರವಾಗಿ ಅನುಭವಿಸಿರುತ್ತಾರೆ. ಅವರಿಗೆ ತಮ್ಮ ಶಕ್ತಿಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಆದರೆ ಅವರ ಭಾವನೆಗಳು ಯಾವಾಗಲೂ ತೀವ್ರವಾಗಿರುತ್ತವೆ. ಅದು ಪ್ರೀತಿಯದೇ ಆಗಿರಬಹುದು, ಹಾತೊರೆಯುವಿಕೆ, ಭಯ, ದ್ವೇಷ ಅಥವಾ ಸಿಟ್ಟಿನವಾಗಿರಬಹುದು. ಬಹುತೇಕರು ತಮ್ಮ ಜೀವನದಲ್ಲಿ ತಿಳಿದಂತಹ ಅತ್ಯಂತ ತೀವ್ರ ಆಯಾಮ ವೆಂದರೆ ಭಾವನೆ. ಹೀಗಾಗಿ, ಕಾಲಾಂತರದಲ್ಲಿ ಹಲವು ಗುರುಗಳು ಬಂದಾಗ ಅವರು ಭಾವನೆಯನ್ನೇ ಬಳಸಲು ಪ್ರಯತ್ನಿಸಿದರು. ಏಕೆಂದರೆ ಜನರಲ್ಲಿ ಅದುವೇ ತೀವ್ರವಾಗಿತ್ತು.

Prerane

ಭಾವನೆಯೇ ಆವರಿಸಿಕೊಂಡಾಗ 
ಆದರೀಗ ಆಧುನಿಕ ಶಿಕ್ಷಣ ಬಂದು ವಿಜ್ಞಾನವು ಎಲ್ಲರ ಜೀವನವನ್ನು ಪ್ರವೇಶಿಸಿದೆ. ಅದು ಶಾಲೆಯ ಮಗುವಾಗಿ ರಬಹದು ಅಥವಾ ಗೃಹಿಣಿಯಾಗಿರಬಹುದು. ಹಾಗಾಗಿ ಕಳೆದ ಶತಮಾನಗಳಿಗಿಂತಲೂ ಹೆಚ್ಚಾಗಿ ಇಂದು ಆಲೋಚನೆ ಮತ್ತು ಯೋಚನಾ ಪ್ರಕ್ರಿಯೆಯು ಜನರ ಜೀವನದಲ್ಲಿ ಹೆಚ್ಚು ಮಹತ್ವದ್ದಾಗಿದೆ.

ಆದರೆ ಜನರೀಗ ಎಷ್ಟು ಬೆಳೆದಿದ್ದಾರೆಂದರೆ, ಭಾವನೆ ಅಷ್ಟು ಒಳ್ಳೆ ಸಾಧನವಾಗಿಲ್ಲ.  ಭಾವನೆಗಳು ಎಷ್ಟೇ ಬಲಶಾಲಿಯಾಗಿದ್ದರೂ ನಿಮ್ಮ ಯೋಚನೆ ಅವನ್ನು ಅಪಹಾಸ್ಯ ಮಾಡುತ್ತದೆ. ನೀವು ಭಾವೋದ್ರೇಕದಿಂದ ವರ್ತಿಸಿದಾಗ, ಆ ಕ್ಷಣಕ್ಕೆ ಸುಂದರ ಎನಿಸುತ್ತದೆ. ಮರುಕ್ಷಣ ನಿಮ್ಮ ಯೋಚನೆ ಬಂದು, ಅದನ್ನು ಪ್ರಶ್ನಿಸಿ, ಅದು ಪೂರ್ತಿ ಕ್ಷುಲ್ಲಕ ಮತ್ತು ಮೂರ್ಖತನವಾಗಿ ಕಾಣುವಂತೆ ಮಾಡುತ್ತದೆ. 

ಒಮ್ಮೆ ಯೋಚನೆಯು ಬೆಳೆದಾಗ, ಅದನ್ನು ಉದ್ದೇಶಿಸಿ ನೋಡಬೇಕಾಗುತ್ತದೆ. ಅದನ್ನು ನಿರ್ಲಕ್ಷಿಸಿ ನೀವು ಮುಂದೆ ಹೋಗಲಾರಿರಿ. ಅದು ನಿಮ್ಮನ್ನು ಬದುಕಲು ಬಿಡುವುದೇ ಇಲ್ಲ. ಒಂದೋ ನೀವು ಅತ್ಯಂತ ತೀವ್ರವಾದ ಯೋಚನೆಯ ಆಯಾಮಕ್ಕೆ ಹೋಗಬೇಕು, ಇಲ್ಲವೇ ಕನಿಷ್ಟ ಪಕ್ಷ ನಿಮ್ಮ ಬಾಳಿನಲ್ಲಿ ನಿಮಗಿರುವ ಯೋಚನೆಯ ಮಟ್ಟದಲ್ಲಿ ಅದನ್ನು ಉದ್ದೇಶಿಸಬೇಕು. ಉದ್ದೇಶಿಸದೆ ಇದ್ದರೆ, ಕೇವಲ ಭಾವನೆಯ ಬಲದಿಂದ ನೀವು ಮುಂದೆ ಬೆಳೆಯಲಾರಿರಿ. 

ಜನರ ಯೋಚನಾ ಪ್ರಕ್ರಿಯೆಯು ಸರಳವಾಗಿದ್ದಾಗ, ಭಾವನೆಯು ಒಂದು ಉತ್ತಮ ಸಾಧನವಾಗಿತ್ತು. ಆದರೆ ಈಗಿಲ್ಲ. ಅನೇಕ ರೀತಿಗಳಲ್ಲಿ ಇಂದಿನ ಮನುಷ್ಯರು ನಿಧಾನವಾಗಿ ಪ್ರೀತಿಸಲು ಅಸಮರ್ಥರಾಗುತ್ತಿದ್ದರೆ, ದುರಾದೃಷ್ಟವಶಾತ್. ಬುದ್ಧಿವಂತರು ಎಂದು ಹೇಳಿಕೊಳ್ಳುತ್ತಿರುವ ಜನರು ಪ್ರೀತಿಸಲು ಅಸಮರ್ಥರಾಗುತ್ತಿದ್ದರೆ. ಇದು ಬುದ್ಧಿವಂತಿಕೆಯಲ್ಲ, ಪ್ರೀತಿಯಲ್ಲಿ ಅಸಮರ್ಥರಾಗುವುದು ಮೂರ್ಖತನ. ಆದರೆ ತಮ್ಮನ್ನು ತಾವು ಬುದ್ಧಿವಂತರು ಅಂದುಕೊಳ್ಳುವ ಬಹತೇಕ ಜನರು ನಿಧಾನವಾಗಿ ಪ್ರೀತಿಸಲು ಅಸಮರ್ಥರಾಗುತ್ತಿದ್ದಾರೆ. ಏಕೆಂದರೆ ಅವರ ಯೋಚನೆಗಳು ಎಲ್ಲದಕ್ಕೂ ನುಗ್ಗಿ, ಪ್ರಶ್ನಿಸಿ, ಅಪಹಾಸ್ಯ ಮಾಡುತ್ತವೆ. ಅದು ಇನ್ನು ಸುಂದರವಾಗಿ ಉಳಿದಿಲ್ಲ. 

ಹತ್ತಿರದಿಂದ ನೋಡಿ!
ನೀವು ಆನಂದದ ಬಗ್ಗೆ ಮಾತನಾಡುವಾಗ, ಅದು ನಿಮಗೇ ತಿಳಿದಿರದಿದ್ದರೆ ನಾನು ಹೇಗೆ ಹೇಳಲಿ, ಹೇಗೆ ತಿಳಿಸಲಿ? ನನ್ನನ್ನು ಹತ್ತಿರದಿಂದ ನೋಡಿದರೆ ನನಗೆ ಬೇಕಾದಾಗ, ನನ್ನ ಮುಖ ಬಹುಮಟ್ಟಿಗೆ ಗಂಭೀರ ಮತ್ತು ಉಗ್ರವಾಗಿದೆ. ಆದರೆ ನೀವು ಬಹಳ ಹತ್ತಿರದಿಂದ ನೋಡಿದಾಗ ಅಲ್ಲಿ ಆನಂದವಿದೆ. ಕೆಲವೇ ಜನರು ಅದನ್ನು ನೋಡುತ್ತಾರೆ. ಉಳಿದವರೆಲ್ಲರೂ ಬರಿ ಒಬ್ಬ ಅತ್ಯಂತ ಉಗ್ರ ಮನುಷ್ಯನನ್ನು ನೋಡುತ್ತಾರೆ. ಆನಂದವು ನಾನು ಮಾಡುವ ಹಾಸ್ಯ, ವಿನೋದದಲ್ಲಿಲ್ಲ. ನಾನು ನಿಶ್ಚಲವಾಗಿ ಕುಳಿತಾಗ, ಸಂಪೂರ್ಣವಾಗಿ ಆನಂದಮಯವಾಗಿರುತ್ತೇನೆ. ಹಾಗೂ ನಾನು ಯಾವಾಗಲೂ ನಿಶ್ಚಲವಾಗಿರುತ್ತೇನೆ.

ನಾನು ನನ್ನ ಸುತ್ತ ಬೃಹತ್ ಪ್ರಮಾಣದ ಚಟುವಟಿಕೆಯನ್ನು ನಡೆಸುತ್ತೇನೆ. ನನ್ನ ಸುತ್ತ ನಡೆಸುತ್ತಿರುವ ಚಟುವಟಿಕೆಗಳು ಎಂದೂ ನಾನಲ್ಲ. ಅದೊಂದು ಬಹು ದೊಡ್ಡ ಕ್ರಿಯೆಯಷ್ಟೇ. ಜನರು ಅದನ್ನು ಇಷ್ಟ ಪಡುತ್ತಾರೆ ಮತ್ತು ಅದೊಂದೇ ಅವರಿಗೆ ಅರ್ಥವಾಗುವುದು. ಹಾಗಾಗಿ, ನಾನು ಅವರಿಗೆ ಇಷ್ಟವಾದ ರೀತಿಯ ಚಟುವಟಿಕೆ ನಡೆಸುತ್ತೇನೆ. 

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ | Prerane | ನಿಮ್ಮ ಸ್ವಂತಿಕೆ ನಿಮಗಿರಲಿ, ಅದುವೇ ನಿಮಗೆ ದಾರಿಯಾಗಲಿ

Exit mobile version