ಆತ ಗೆದ್ದಿರುವುದು ಬರೋಬ್ಬರಿ 30 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು!
ರಾಜಮಾರ್ಗ ಅಂಕಣ: ಗ್ರಾನ್‌ಸ್ಲಾಂ ಟೆನ್ನಿಸ್ ಕೂಟಗಳಲ್ಲಿ ವಿಂಬಲ್ಡನ್ನಿಗೆ ಅದರದ್ದೇ ಆದ ಘನತೆಯು ಇದೆ. ಜಗತ್ತಿನ ಮಹಾ ಟೆನ್ನಿಸ್ ದೈತ್ಯರು ಸೆಣಸುವ ಮಹತ್ವದ ಕೂಟ ಅದು. ಆ ಟೆನಿಸ್ ಕೂಟದ ಸೆಂಟರ್ ಕೋರ್ಟಿನಲ್ಲಿ ನಡೆಯುವ ಪ್ರತೀ ಪಂದ್ಯವೂ ರೋಚಕವೇ ಹೌದು. ಅದೇ ಹೊತ್ತಿಗೆ ಬೇರೆ ಬೇರೆ ಸಮಾನಾಂತರ ಕೋರ್ಟುಗಳಲ್ಲಿ, ಬೇರೆ ಬೇರೆ ಹೊತ್ತಲ್ಲಿ ನಡೆಯುವ ಇನ್ನೂ ಹಲವು ಸ್ಪರ್ಧೆಗಳು ಅಷ್ಟಾಗಿ ಪ್ರಚಾರ ಪಡೆಯುವುದಿಲ್ಲ. ಮಾಧ್ಯಮಗಳೂ ಆ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಅಲ್ಲಿನ ಸ್ಪರ್ಧೆಯು ಜೋರಾಗಿಯೇ ಇರುತ್ತದೆ. ಅವುಗಳಲ್ಲಿ ಒಂದು ವಿಭಾಗವೆಂದರೆ ವೀಲ್ ಚೇರ್ ಟೆನ್ನಿಸ್ ಕೂಟ! ಜಗತ್ತಿನ ಮೂಲೆ ಮೂಲೆಯಿಂದ ಬರುವ ನೂರಾರು ವೀಲ್ ಚೇರ್ ಟೆನ್ನಿಸ್ ಆಟಗಾರರು ಅಲ್ಲಿ ಪ್ರಶಸ್ತಿಗಾಗಿ ಗುದ್ದಾಡುತ್ತಾರೆ!
ಈ ಬಾರಿ ವಿಂಬಲ್ಡನ್ ಕೂಟದ ವೀಲ್ ಚೇರ್ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಇದೇ ಆಲ್ಫಿ ಹೆವೆಟ್ಟ್ (ALFI HEVETT).
ಆಲ್ಫಿ ಹೆವೆಟ್ಟ್ – ಈಗ ವಿಶ್ವದ ನಂಬರ್ 1 ಆಟಗಾರ!
ಜಗತ್ತು ಅವನನ್ನು ‘ವೀಲ್ ಚೇರ್ ಮೇಲಿನ ಕೋಲ್ಮಿಂಚು’ ಎಂದೇ ಕರೆಯುತ್ತದೆ. ಆತನು ಇಂಗ್ಲೆಂಡ್ ದೇಶದವನು. 2015ರಿಂದ ವೀಲ್ ಚೇರ್ ಮೇಲೆ ಕುಳಿತು ಟೆನ್ನಿಸ್ ಆಡುವ ಆತನ ಆಟಕ್ಕೆ ಆತನೇ ಸಾಟಿ. ಕೋರ್ಟ್ ಇಡೀ ಜಿಂಕೆಯಂತೆ ಓಡಾಡುವ, ಅಷ್ಟೇ ವೇಗವಾಗಿ ರಾಕೆಟ್ ಬೀಸುವ ಆಲ್ಫಿ ಸೋತ ಉದಾಹರಣೆಯೇ ನಮಗೆ ಸಿಗುವುದಿಲ್ಲ. ಇಂದು ಅವನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗಗಳಲ್ಲಿ ವಿಶ್ವದ ನಂಬರ್ 1 ಆಟಗಾರ ಎಂದರೆ ನಾವು, ನೀವು ನಂಬಲೇ ಬೇಕು. ಕಾಲುಗಳಲ್ಲಿ ಇಲ್ಲದ ತ್ರಾಣವನ್ನು ಆತನು ತನ್ನ ಅಗಲವಾದ ಭುಜಗಳಲ್ಲಿ ಬಸಿದು ರಾಕೆಟ್ ಬೀಸುವ ಆತನ ದೈತ್ಯ ಶಕ್ತಿಗೆ ನೀವು ಖಂಡಿತವಾಗಿ ಬೆರಗಾಗುತ್ತೀರಿ!
ಬಾಲ್ಯದಲ್ಲಿ ಕಾಡಿದ ವಿಚಿತ್ರ ಹೆಸರಿನ ಕಾಯಿಲೆ
1997ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದ ಆಲ್ಫಿ ಆಗ ಆರೋಗ್ಯಪೂರ್ಣವಾಗಿ ಇದ್ದವನು. ಮುಂದೆ ಆರು ವರ್ಷ ಪ್ರಾಯದಲ್ಲಿ Congential Heart defect ಎಂಬ ವಿಚಿತ್ರ ಕಾಯಿಲೆಯು ಆತನ ಉತ್ಸಾಹವನ್ನು ಖಾಲಿ ಮಾಡಿತು. ಆರು ತಿಂಗಳ ನಂತರ ಸರ್ಜರಿ ಕೂಡ ನಡೆಯಿತು. ಪರಿಣಾಮವಾಗಿ ಆತನ ಎರಡೂ ಕಾಲುಗಳ ಶಕ್ತಿ ಉಡುಗಿ ಹೋಗಿ ಆತನು ವೀಲ್ ಚೇರ್ ಮೇಲೆ ಓಡಾಡಬೇಕಾಯಿತು. ಆರಂಭದಲ್ಲಿ ಆಲ್ಫಿ ಸ್ವಲ್ಪ ಮಟ್ಟದಲ್ಲಿ ವಿಚಲಿತರಾದನು. ಆದರೆ ಅದಮ್ಯವಾದ ಜೀವನೋತ್ಸಾಹ ಅವನನ್ನು ಟೆನ್ನಿಸ್ ಕೋರ್ಟಿಗೆ ಎಳೆದು ತಂದಿತು. ವೀಲ್ ಚೇರ್ ಮೇಲೆ ಇಡೀ ಕೋರ್ಟ್ ಓಡಾಡುತ್ತಾ ರಾಕೆಟ್ ಬೀಸುವುದು ಸುಲಭ ಅಲ್ಲ. ಅದಕ್ಕೆ ತುಂಬಾ ಏಕಾಗ್ರತೆ, ದೇಹದ ಬ್ಯಾಲೆನ್ಸ್, ರಟ್ಟೆಗಳ ತ್ರಾಣ, ಆತ್ಮವಿಶ್ವಾಸ ಎಲ್ಲವೂ ಬೇಕು. ಸತತವಾದ ಪರಿಶ್ರಮದಿಂದ ಆಲ್ಫಿ ಈ ಎಲ್ಲ ಸವಾಲುಗಳನ್ನು ಗೆಲ್ಲುತ್ತಾ ಹೋದರು.
ಗೆದ್ದದ್ದು 30 ಗ್ರಾನ್‌ಸ್ಲಾಮ್ ಟ್ರೋಫಿಗಳನ್ನು!
2015ರಿಂದ ಇಂದಿನವರೆಗೂ ತಾನು ಆಡಿದ ಪ್ರತೀಯೊಂದು ಗ್ರಾನಸ್ಲಾಮ್ ಕೂಟಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ 30 ವಿಶ್ವಮಟ್ಟದ ಪ್ರಶಸ್ತಿಗಳನ್ನು ಆತ ಗೆದ್ದಿದ್ದಾನೆ ಎಂದರೆ ನೀವು ಮೂಗಿನ ಮೇಲೆ ಬೆರಳು ಇಡುತ್ತೀರಿ! ಅದರಲ್ಲಿ 9 ಸಿಂಗಲ್ಸ್ ಪ್ರಶಸ್ತಿಗಳು. 21 ಡಬಲ್ಸ್ ಪ್ರಶಸ್ತಿಗಳು!
ಮೂರು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ, ಒಂದು ಬಾರಿ ಆಸ್ಟ್ರೇಲಿಯನ್ ಒಪನ್, ಒಂದು ಬಾರಿ ವಿಂಬಲ್ಡನ್, ನಾಲ್ಕು ಬಾರಿ ಯು ಎಸ್ ಓಪನ್, ಮೂರು ಬಾರಿ ಮಾಸ್ಟರ್ಸ್ ಓಪನ್ ಸಿಂಗಲ್ಸ್ ಪ್ರಶಸ್ತಿ ಆತನು ಗೆದ್ದಾಗಿದೆ.
ಡಬಲ್ಸ್ ಸ್ಪರ್ಧೆಯಲ್ಲಿ ಆತನಿಗೆ ಆತನೇ ಉಪಮೆ!
ಡಬಲ್ಸನಲ್ಲಿ ಐದು ಬಾರಿ ಆಸ್ಟ್ರೇಲಿಯನ್ ಓಪನ್, ಐದು ಬಾರಿ ಫ್ರೆಂಚ್ ಓಪನ್, ಆರು ಬಾರಿ ವಿಂಬಲ್ಡನ್, ಐದು ಬಾರಿ ಯು. ಎಸ್. ಓಪನ್ ಪ್ರಶಸ್ತಿಗಳನ್ನು ಆಲ್ಫಿ ಗೆದ್ದಿರುವುದು ಬಹಳ ದೊಡ್ಡ ಸಾಧನೆ. ಜಗತ್ತಿನ ಬೇರೆ ಯಾವ ಟೆನ್ನಿಸ್ ಆಟಗಾರ ಕೂಡ ಇಷ್ಟೊಂದು ಪ್ರಶಸ್ತಿಗಳ ಗೊಂಚಲು ಗೆದ್ದಿರುವ ನಿದರ್ಶನ ಇಲ್ಲ! ಪಾರಾ ಒಲಿಂಪಿಕ್ ಕೂಟದಲ್ಲಿ ಕೂಡ ಆತ ಬೆಳ್ಳಿಯ ಪದಕ ಗೆದ್ದಿದ್ದಾನೆ.
2024ರ ವಿಂಬಲ್ಡನ್ ಕೂಟದಲ್ಲಿ ಆತನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಕೂಡ ದಾಖಲೆಯೇ ಆಗಿದೆ. ಆತನ ಸರ್ವ್, ವಾಲಿ, ಏಸ್, ಮಿಂಚಿನ ಚಲನೆ ಮತ್ತು ಹಿಂಗೈ ಹೊಡೆತಗಳು ತುಂಬಾ ಬಲಿಷ್ಟವಾಗಿವೆ.
ಆರು ವರ್ಷದ ಪ್ರಾಯದಿಂದ ವೀಲ್ ಚೇರ್ ಮೇಲೆ ಅವಲಂಬಿತವಾಗಿರುವ ಆಲ್ಫಿ ಹೆವೆಟ್ಟ್ ನಾರ್ವಿಚ್ ನಗರದ ಸಿಟಿ ಕಾಲೇಜಿನಿಂದ ಪದವಿ ಕೂಡ ಪಡೆದಿದ್ದಾರೆ. 1.67 ಮೀಟರ್ ಎತ್ತರದ, ಇನ್ನೂ 27 ವರ್ಷ ಪ್ರಾಯದ ಆಲ್ಫಿ ರಟ್ಟೆಯಲ್ಲಿ ತ್ರಾಣ ಇರುವಷ್ಟು ವರ್ಷ ಟೆನ್ನಿಸ್ ಆಡುತ್ತೇನೆ ಎಂದು ಹೇಳಿದ್ದಾರೆ!
ಆತನ ದಾಖಲೆಗಳ ಎತ್ತರ ಎಲ್ಲಿಗೆ ತಲುಪುವುದೋ ಯಾರಿಗೆ ಗೊತ್ತು?
ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ