Site icon Vistara News

ಸಮರಾಂಕಣ | ವಿಮಾನದ ಚಕ್ರಗಳ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ

airplane tire

ವಿಮಾನದ ಚಕ್ರಗಳು ಸಾಮಾನ್ಯ ವಾಹನಗಳಾದ ಕಾರ್, ಬಸ್, ಟ್ರಕ್, ಬೈಸಿಕಲ್ ಇತ್ಯಾದಿಗಳ ಚಕ್ರಗಳಿಂದ ಅತ್ಯಂತ ವಿಭಿನ್ನವಾಗಿವೆ. ಹಾಗೆ ನೋಡಿದರೆ ವಿಮಾನದ ಚಕ್ರಗಳಿಗೂ, ಮಾಮೂಲಿ ವಾಹನಗಳ ಚಕ್ರಗಳಿಗೂ ಹೋಲಿಕೆ ಇದೆ. ಅವೆಲ್ಲವೂ ರಬ್ಬರ್‌ನಿಂದ ಮಾಡಲ್ಪಟ್ಟಿವೆ. ಅವುಗಳ ಒಳಗೆ ಗಾಳಿ ತುಂಬಲಾಗುತ್ತದೆ. ಅವೆಲ್ಲವೂ ತಮ್ಮ ಮೇಲಿರುವ ವಾಹನಗಳಿಗೆ ಬೆಂಬಲ ಹಾಗೂ ಮೆತ್ತನೆ ಒದಗಿಸುತ್ತವೆ. ಆದರೆ ಇಲ್ಲಿಗೆ ಅವುಗಳ ಮಧ್ಯ ಇರುವ ಹೋಲಿಕೆಗಳು ಮುಗಿದು ಹೋಗುತ್ತವೆ!

ವಿಮಾನದ ಚಕ್ರಗಳನ್ನು ಉತ್ಪಾದಿಸುವ ಕಂಪನಿಗಳು ಸಾಮಾನ್ಯವಾಗಿ ಮೂರು ವಿವಿಧ ರೀತಿಯ ಚಕ್ರಗಳನ್ನು ಉತ್ಪಾದಿಸುತ್ತವೆ. ಮೊದಲ ಮಾದರಿಯ ಚಕ್ರಗಳು ಸ್ಪೋರ್ಟ್ ಏವಿಯೇಷನ್‌ ಸೇರಿದಂತೆ ಸಾಮಾನ್ಯ ವಿಮಾನಗಳಲ್ಲಿ ಬಳಸಲ್ಪಡುತ್ತವೆ. ಎರಡನೆಯ ಮಾದರಿಯ ಚಕ್ರಗಳು ವಾಣಿಜ್ಯಿಕ ಬಳಕೆಯ ವಿಮಾನಗಳಾದ ಪ್ರಯಾಣಿಕ ವಿಮಾನಗಳು ಮತ್ತು ವಾಯು ಸರಕು ಸಾಗಾಣಿಕೆ ವಿಮಾನಗಳಲ್ಲಿ ಬಳಕೆಯಾಗುತ್ತವೆ. ಇನ್ನು ಮೂರನೇ ಮಾದರಿಯ ಚಕ್ರಗಳು ಮಿಲಿಟರಿ ಉದ್ದೇಶದ್ದಾಗಿವೆ. ಎಲ್ಲಾ ಮಾದರಿಯ ಚಕ್ರಗಳೂ ಒಂದರಿಂದ ಒಂದು ವಿಭಿನ್ನವಾಗಿದ್ದು, ಅವುಗಳಿಗೆ ಅವುಗಳದ್ದೇ ಆದ ಮಿತಿಗಳೂ ಇವೆ.

ವಿಮಾನಗಳು ಭೂಸ್ಪರ್ಶ ಮಾಡುವಾಗ ಅವುಗಳ ಚಕ್ರಗಳು ಅಪಾರ ಪ್ರಮಾಣದ ಒತ್ತಡವನ್ನು ಎದುರಿಸಬೇಕಾಗುತ್ತದೆ. ವಿಮಾನ ಭೂಸ್ಪರ್ಶ ಮಾಡುವಾಗ ಅದರ ಚಕ್ರಗಳು ಸಂಪೂರ್ಣ ವಿಮಾನ ಮತ್ತು ಅದರೊಳಗಿರುವ ಪ್ರಯಾಣಿಕರ ಭಾರವನ್ನು ಹೊರಬೇಕಾಗುತ್ತದೆ. ಅವುಗಳು ವಿಶೇಷವಾಗಿ ಘರ್ಷಣೆಯನ್ನು ಎದುರಿಸಬೇಕಾಗುತ್ತದೆ. ಎರಡು ಮೇಲ್ಮೈಗಳು ಒಂದರಿಂದ ಇನ್ನೊಂದು ವಿರುದ್ಧ ದಿಕ್ಕಿನಲ್ಲಿ ಚಲಿಸುವಾಗ ಘರ್ಷಣೆ ಉಂಟಾಗುತ್ತದೆ. ಉದಾಹರಣೆಯಾಗಿ ಕೈಗಳನ್ನು ಉಜ್ಜಿಕೊಳ್ಳುವುದನ್ನೂ ಗಮನಿಸಬಹುದು.

ವಿಮಾನದ ಚಕ್ರಗಳು ರನ್ ವೇಯನ್ನು ಸ್ಪರ್ಶಿಸಿದಾಗ ಈ ಒತ್ತಡವನ್ನು ಸೃಷ್ಟಿಸುತ್ತವೆ. ಈ ಒತ್ತಡ ಉಷ್ಣತೆಯನ್ನೂ ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ ಚಕ್ರದ ಹೊರ ಮೇಲ್ಮೈ ಸವೆಯತೊಡಗುತ್ತದೆ. ಈ ಕಾರಣಕ್ಕಾಗಿ ವಿಮಾನದ ಚಕ್ರಗಳನ್ನು ಅತ್ಯಂತ ಶಕ್ತಿಯುತವಾದ, ಹೊಂದಿಕೊಳ್ಳುವ ಉತ್ಪನ್ನಗಳನ್ನು ಬಳಸಿ ನಿರ್ಮಿಸಲಾಗುತ್ತದೆ. ಈ ಉತ್ಪನ್ನಗಳಲ್ಲಿ ಕೆವ್ಲಾರ್ ಎನ್ನುವ ಅತ್ಯಂತ ಬಲಿಷ್ಠ ಪ್ಲಾಸ್ಟಿಕ್‌ ಸಹ ಒಂದಾಗಿದೆ. ಕೆಲ್ವಾರ್ ಗಟ್ಟಿಮುಟ್ಟಾದ, ಹೊಂದಿಕೊಳ್ಳುವ, ಉಷ್ಣ ನಿರೋಧಕ ಗುಣ ಹೊಂದಿರುವ, ಮತ್ತು ಹಗುರವೂ ಆದ ಉತ್ಪನ್ನವಾಗಿದೆ. ವಿಮಾನದ ಚಕ್ರಗಳು ಹೊಂದಿಕೊಳ್ಳಬೇಕಾಗಿರುವುದು ಅತ್ಯಂತ ಮುಖ್ಯವಾಗಿರುತ್ತದೆ. ಈ‌ ಗುಣ ವಿಮಾನ ಭೂಸ್ಪರ್ಶ ಮಾಡಿದಾಗ ಚಕ್ರಗಳು ಆ ಒತ್ತಡವನ್ನು ಹೀರಿಕೊಳ್ಳಲು ಸಹಕರಿಸುತ್ತವೆ. ಈ ಹೊಂದಿಕೊಳ್ಳುವ ಗುಣ ಚಕ್ರದ ಸವೆತವನ್ನೂ ನಿಧಾನಗೊಳಿಸುತ್ತದೆ. ವಿಮಾನದ ಚಕ್ರಗಳು ಅಪಾರ ಭಾರವನ್ನು ಕಡಿಮೆ ಸಮಯದ ವರೆಗೆ, ಅತ್ಯಂತ ಹೆಚ್ಚಿನ ವೇಗದಲ್ಲಿ ಒಯ್ಯಲು ವಿನ್ಯಾಸಗೊಂಡಿವೆ. ಭೂಸ್ಪರ್ಶ ಮಾಡುವಾಗ ವಿಮಾನದ ಚಕ್ರಗಳು 130-150 ಡಿಗ್ರಿ ಸೆಲ್ಸಿಯಸ್ ತನಕ ಬಿಸಿಯಾಗುತ್ತವೆ. ಇಂತಹ ಅತಿಯಾದ ಉಷ್ಣತೆ ಮತ್ತು ಒತ್ತಡದಲ್ಲಿ ಚಕ್ರಗಳು ತಮ್ಮ ಮೂಲ ರೂಪ ಮತ್ತು ಗುಣಗಳನ್ನು ಉಳಿಸಿಕೊಳ್ಳಲೇಬೇಕಾಗುತ್ತದೆ. ಯಾಕೆಂದರೆ ಪ್ರಯಾಣಿಕರ ಜೀವವೂ ಅದರ ಮೇಲೆಯೇ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ | ಸಮರಾಂಕಣ | ಭಾರತೀಯ ಸೈನ್ಯದ ಆಧುನಿಕ ಯುದ್ಧ ತಂತ್ರಗಳಿಗೆ ನೆರವಾಗಲಿದೆಯಾ 5ಜಿ ತಂತ್ರಜ್ಞಾನ?

ವಿಮಾನದ ಚಕ್ರಗಳ ಒಳಗಿರುವ ಅಂಶಗಳೂ ಅವುಗಳನ್ನು ರಕ್ಷಿಸಲು ಸಹಕರಿಸುತ್ತವೆ. ಸಾಮಾನ್ಯವಾಗಿ ಅವುಗಳೊಳಗೆ ಸಾರಜನಕ ತುಂಬಲಾಗಿರುತ್ತದೆ. ಸಾರಜನಕ ಒಂದು ದಹನಕಾರಿಯಲ್ಲದ ಅನಿಲ. ಅದು ವಿಮಾನದ ಲೋಹದ ಬಿಡಿ ಭಾಗಗಳಿಗೆ ತುಕ್ಕು ಹಿಡಿಯುವಂತೆಯೂ ಮಾಡುವುದಿಲ್ಲ. ಸಾರಜನಕ ಚಕ್ರಗಳಲ್ಲಿರುವ ರಬ್ಬರ್ ಅನ್ನು ಆಕ್ಸಿಡೈಸ್ ಸಹ ಮಾಡುವುದಿಲ್ಲ. ವಿಮಾನದ ಚಕ್ರಗಳು ಕನಿಷ್ಠ ಮೂರು ಪದರಗಳ ರಬ್ಬರ್ ಹೊಂದಿರುತ್ತವೆ. ಇದರಲ್ಲಿ ಪ್ರತಿಯೊಂದು ಪದರವನ್ನೂ ಸಹ ಬೇರೆ ಬೇರೆ ದಿಕ್ಕಿನಲ್ಲಿ ಅಳವಡಿಸಲಾಗಿರುತ್ತದೆ. ಇದು ಚಕ್ರವನ್ನು ಇನ್ನಷ್ಟು ಬಲಪಡಿಸಿ, ಭೂಸ್ಪರ್ಶ ಮಾಡುವಾಗ ಹೆಚ್ಚಿನ ಎಳೆತವನ್ನು ಒದಗಿಸುತ್ತದೆ.

ವಿಮಾನದ ಚಕ್ರಗಳು ಕಾರಿನ ಚಕ್ರಗಳಿಂದ ಆರು ಪಟ್ಟು ಹೆಚ್ಚು (200 ಪಿಎಸ್ಐ) ಒತ್ತಡ ಹೊಂದಿರುತ್ತವೆ. ಪ್ರತಿಯೊಂದು ಚಕ್ರದ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ವಿಮಾನದ ಒಟ್ಟು ಭಾರವನ್ನು ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿರುವ ಚಕ್ರಗಳ ಮೇಲೆ ಹಂಚಿಕೆ ಮಾಡಲಾಗುತ್ತದೆ. ಇದು ಒಂದೇ ಚಕ್ರ ಹೆಚ್ಚಿನ ಒತ್ತಡ ತೆಗೆದುಕೊಳ್ಳದಂತೆ ನೋಡಿಕೊಳ್ಳುತ್ತದೆ. ವಿಮಾನದಲ್ಲಿ ಸಾಮಾನ್ಯವಾಗಿ 2 ರಿಂದ 4 ಜೊತೆ ಮುಖ್ಯ ಲ್ಯಾಂಡಿಂಗ್ ಗೇರ್‌ಗಳಿದ್ದು, ಇವು ವಿಮಾನದ ಬಹುಪಾಲು ತೂಕವನ್ನು ಅದರ ಮುಂಭಾಗದ ಲ್ಯಾಂಡಿಂಗ್ ಗೇರ್‌ ಜೊತೆ ಹಂಚಿಕೊಳ್ಳುತ್ತವೆ. ಒಂದು ಬೋಯಿಂಗ್ 777 ವಿಮಾನ 14 ಚಕ್ರಗಳನ್ನು ಬಳಸಿಕೊಳ್ಳುತ್ತದೆ. ಏರ್‌ಬಸ್ ಎ380 ವಿಮಾನ 22 ಚಕ್ರಗಳನ್ನು ಹೊಂದಿರುತ್ತದೆ. ಬೃಹತ್ತಾದ ಆಂಟೊನೊವ್ ಎಎನ್-225 ವಿಮಾನವು 32 ಚಕ್ರಗಳನ್ನು ಹೊಂದಿದೆ.

ಆದರೆ ವಿಮಾನದ ಚಕ್ರಗಳು ಬರಿಯ ರಬ್ಬರ್ ಮತ್ತು ಕೆವ್ಲರ್ ಮಾತ್ರವೇ ಅಲ್ಲ. ಅವುಗಳಲ್ಲಿ ಒಟ್ಟು 14 ವಿವಿಧ ಭಾಗಗಳಿರುತ್ತವೆ. ಅವುಗಳಲ್ಲಿ ಪ್ರತಿಯೊಂದು ಬಿಡಿಭಾಗವೂ ಅದರದ್ದೇ ಆದ ಪಾತ್ರವನ್ನು ನಿರ್ವಹಿಸಿ, ವಿಮಾನದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಅನ್ನು ಸುರಕ್ಷಿತ ಮತ್ತು ಸುಲಭವಾಗಿಸುತ್ತವೆ.

ಇದನ್ನೂ ಓದಿ | ಸಮರಾಂಕಣ | ಅಗ್ನಿ 5 ಕ್ಷಿಪಣಿ: ಭಾರತದ ಬತ್ತಳಿಕೆಯಲ್ಲಿದೆ ಐಸಿಬಿಎಂ ಅಸ್ತ್ರ

ಸಾಮಾನ್ಯವಾಗಿ ವಿಮಾನದ ಚಕ್ರಗಳು ರಿಪೇರಿಗೆ ಬರುವ ಮೊದಲು ಅಂದಾಜು 500 ಭೂಸ್ಪರ್ಶ ನಡೆಸಬಲ್ಲವು. ಸಾಮಾನ್ಯವಾಗಿ ವಿಮಾನದ ಚಕ್ರಗಳ ಮೇಲಿನ ಪದರವನ್ನು ಸುಲಭವಾಗಿ ಕಿತ್ತು ತೆಗೆದು, ಹೊಸ ಪದರವನ್ನು ಹಾಕಲಾಗುತ್ತದೆ. ಆ ಮೂಲಕ ಇತರ ಬಿಡಿಭಾಗಗಳನ್ನು ಬದಲಾಯಿಸುವ ಅವಶ್ಯಕತೆ ಎದುರಾಗುವುದಿಲ್ಲ. ಇದು ಒಂದು ರೀತಿಯಲ್ಲಿ ಉತ್ತಮವಾಗಿದೆ. ಏಕೆಂದರೆ ಇತರ ಬಿಡಿಭಾಗಗಳು ಅಪಾರ ಬೆಲೆಬಾಳುತ್ತವೆ.

ಇಂದಿನ ಮಾರುಕಟ್ಟೆಯಲ್ಲಿ ನಾಲ್ಕು ಪ್ರಮುಖ ಕಂಪನಿಗಳು ವಿಮಾನದ ಚಕ್ರ ಉತ್ಪಾದನಾ ಉದ್ಯಮದಲ್ಲಿ ಮೇಲುಗೈ ಸಾಧಿಸಿವೆ‌. ಅವೆಂದರೆ ಅಮೆರಿಕಾದ ಗುಡ್ ಇಯರ್, ಫ್ರಾನ್ಸಿನ ಮಿಷೆಲಿನ್, ಜಪಾನಿನ ಬ್ರಿಜ್ ಸ್ಟೋನ್, ಹಾಗೂ ಯುನೈಟೆಡ್ ಕಿಂಗ್‌ಡಮ್‌ನ ಡನ್‌ಲಪ್ ಏರ್ ಕ್ರಾಫ್ಟ್ ಟಯರ್ಸ್. ಈ ನಾಲ್ಕು ಕಂಪನಿಗಳು ಜಾಗತಿಕ ವಿಮಾನ ಚಕ್ರ ಉದ್ಯಮದ 85%ಕ್ಕೂ ಹೆಚ್ಚು ವಹಿವಾಟು ನಡೆಸುತ್ತವೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Exit mobile version