ನೈತಿಕ ಪೊಲೀಸ್ ಗಿರಿಯ (moral policing) ಹೆಸರಿನಲ್ಲಿ ಕೇವಲ ಹಿಂದುತ್ವದ ಅಂದರೆ ಸನಾತನ ಧರ್ಮದ (Sanatana Dharma) ಕುರಿತ ವಿಚಾರಗಳಿಗಷ್ಟೆ ಮೂಲಭೂತವಾದ ಎಂದು ಬ್ರ್ಯಾಂಡ್ ಮಾಡುತ್ತಿರುವುದರ ಕುರಿತು ಕಳೆದ ಎರಡು ವಾರದ ಹಿಂದಿನ ಲೇಖನದಲ್ಲಿ ಚರ್ಚಿಸಿದ್ದೆವು. ಹಿಂದು ಗುಂಪು ಮಾಡುವುದು ಮಾತ್ರ ನೈತಿಕ ಪೊಲೀಸ್ ಗಿರಿ ಎಂದು ಬ್ರ್ಯಾಂಡ್ ಆಗುತ್ತದೆ. ಅದೇ ಮುಸ್ಲಿಂ ಯುವತಿಯೊಬ್ಬಳು ಹಿಂದು ಹುಡುಗನ ಜತೆಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಮುಸ್ಲಿಂ ಯುವಕರ ಗುಂಪು ದಾಳಿ ಮಾಡಿದರೆ ಅದು ಸ್ಥಳೀಯ, ಕೆಲ ಪುಂಡರು ಮಾಡಿದ ಕೃತ್ಯ ಎಂದು ಹೇಳಿ ಸುಮ್ಮನಾಗಲಾಗುತ್ತದೆ. ಸಂವಿಧಾನಬದ್ಧವಾಗಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅದರ ಚೌಕಟ್ಟಿನ ಒಳಗೇ ವ್ಯಕ್ತಪಡಿಸಲು ಯಾವುದೇ ಅಡೆತಡೆ ಇರಬಾರದು.
ಅದು ಇನ್ನೊಂದು ಸಂಸ್ಕೃತಿಗೆ ದೂರಗಾಮಿಯಾಗಿ ತೊಂದರೆಯಾಗುತ್ತಿದೆ ಎಂದರೆ ಆಯಾ ಸಮುದಾಯಗಳ ಮುಖಂಡರು, ಸ್ವಾಮೀಜಿಗಳು, ಮಠ ಮಾನ್ಯಗಳು ಆಲೋಚಿಸಬೇಕಾದ ವಿಚಾರ. ತಮ್ಮ ಆಚಾರ ವಿಚಾರಗಳಲ್ಲಿ ಯುವಜನರನ್ನು ತೊಡಗಿಸಿಕೊಳ್ಳುವುದು, ಕುರುಡು ಕಟ್ಟುಪಾಡುಗಳಲ್ಲದೆ ಈಗಿನ ಯುವಜನತೆಗೆ ಮನವರಿಕೆ ಮಾಡಿಕೊಡುವ ಕಾರ್ಯ ಮಾಡಬೇಕು. ಅದು ಹಿಂದುಗಳಲ್ಲಿರಲಿ, ಮುಸ್ಲಿಮರಲ್ಲೇ ಇರಲಿ, ಕ್ರೈಸ್ತರಲ್ಲೇ ಇರಲಿ. ಯುವಜನರು ತಮ್ಮ ಕೈಮೀರಿ ಹೋಗುತ್ತಿದ್ದಾರೆ ಎಂಬ ಆತಂಕ ಎಲ್ಲ ಮತ ಧರ್ಮಗಳಲ್ಲೂ, ಜಾತಿಗಳಲ್ಲೂ ಇದ್ದೇ ಇದೆ. ಇದು ಈಗಷ್ಟೆ ಅಲ್ಲ, ನಮ್ಮ ತಾತ ಮುತ್ತಾತರ ಕಾಲದಿಂದಲೂ ಇದೆ. ಅದಕ್ಕೆ ಪರಿಹಾರ ಎಂದರೆ ಯುವಜನರ ಮನವೊಲಿಕೆಯೇ ವಿನಃ ರಸ್ತೆಯಲ್ಲಿ ತಡೆದು ಹೊಡೆಯುವುದಲ್ಲ. ನೈತಿಕ ಪೊಲೀಸ್ ಗಿರಿ ಎನ್ನುವುದು ಡಿಜಿಟಲ್ ಯುಗದಲ್ಲಿ ಮತ್ತೊಂದು ರೂಪ ಪಡೆಯುತ್ತಿದೆ.
ಸಾಮಾಜಿಕ ಜಾಲತಾಣಗಳು ನಮ್ಮ ಸಂವಹನ ವಿಧಾನವನ್ನೇ ಬದಲಿಸಿಬಿಟ್ಟಿವೆ. ಡಿಜಿಟಲ್ ಮಾಧ್ಯಮವು ವಿಕಸನವಾಗುತ್ತಲೂ, ಹಿಂದಿನ ಅನೇಕ ಮಾಧ್ಯಮಗಳಲ್ಲಿ ಅವಕಾಶ ದೊರಕದಿದ್ದವರಿಗೆ ಧ್ವನಿಯಾಗುತ್ತಿವೆ. ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ, ತಮ್ಮ ಪಕ್ಷವನ್ನು, ಸಿದ್ಧಾಂತವನ್ನು ಬಲವಾಗಿ ಸಮರ್ಥನೆ ಮಾಡಿಕೊಳ್ಳುವ, ರಾಜಕೀಯ ಚರ್ಚೆಗಳನ್ನು ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ನಡೆಸಲು ಅವಕಾಶ ಸಿಕ್ಕಂತಾಗಿದೆ. ಡಿಜಿಟಲ್ ಮಾಧ್ಯಮದ ಯುಗವನ್ನು ಇಂಗ್ಲಿಷ್ನಲ್ಲಿ Democratization of Media ಎಂಬ ಸುಂದರ ಪದಪುಂಜದಿಂದ ಕರೆಯಲಾಗುತ್ತದೆ.
ಅಂದರೆ ಇಲ್ಲಿವರೆಗೆ ಇದ್ದ ಮಾಧ್ಯಮಗಳು ಪ್ರಜಾತಾಂತ್ರಿಕವಾಗಿ ಅಲ್ಲದೆ, ಪೂರ್ವಾಗ್ರಹಪೀಡಿವಾಗಿ, ಸರ್ವಾಧಿಕಾರ ಧೋರಣೆಯಿಂದ ನಡೆಯುತ್ತಿದ್ದವು ಎನ್ನುವುದನ್ನೂ ಪರೋಕ್ಷವಾಗಿ ಹೇಳಲಾಗುತ್ತದೆ. ಇದು ಅರ್ಧ ಸತ್ಯ. ಕೆಲವೊಂದು ಮಾಧ್ಯಮಗಳು ನಿಜವಾದ ಸಮಾಜದ ಭಾವನೆಗೆ ಒತ್ತು ನೀಡದೆ ಇದ್ದಿರಬಹುದು. ಆದರೆ ಆಗಿನ ತಂತ್ರಜ್ಞಾನ, ಮುದ್ರಣ ಸಮಯ, ಸ್ಥಳಾವಕಾಶದ ಕೊರತೆಯೇ ಎಲ್ಲಕ್ಕಿಂತ ಮುಖ್ಯ ಕಾರಣವಾಗಿರುತ್ತಿತ್ತು. ಆದರೆ ಸುಂದರ ಪದಪುಂಜದಷ್ಟು ಸಾಮಾಜಿಕ ಜಾಲತಾಣ ಅಥವಾ ಡಿಜಿಟಲ್ ಮಾಧ್ಯಮ ಪ್ರಜಾತಾಂತ್ರಿಕವಾಗಿ ಇಲ್ಲ ಎನ್ನುವುದು ಈಗೀಗ ಬಲವಾಗಿ ತಿಳಿಯುತ್ತಿದೆ.
ರಸ್ತೆಯಲ್ಲಿ, ಪ್ರದೇಶಗಳಲ್ಲಿ ಹಿಂದುಗಳ ಮೇಲೆ ನೈತಿಕ ಪೊಲೀಸ್ ಗಿರಿಯ ಆರೋಪ ಹೊರಿಸಲಾಗುತ್ತಿದೆ. ಈಗ ಡಿಜಿಟಲ್ ವೇದಿಕೆಗಳಲ್ಲೂ ಹಿಂದುಗಳ ಮೇಲೆಯೇ ನೈತಿಕ ಪೊಲೀಸ್ ಗಿರಿಯ ಆರೋಪ ಹೊರಿಸಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲೇ ಉದಾಹರಣೆಯಾಗಿ ಅನೇಕ ಘಟನೆಗಳು ಸಿಗುತ್ತವೆ.
ಸರ್ಕಾರವನ್ನು ಪ್ರಶ್ನೆ ಮಾಡಿದ್ದಕ್ಕೆ ಅನೇಕರನ್ನು ರಾತ್ರೋರಾತ್ರಿ ಬಂಧಿಸಿ ಕರೆದೊಯ್ಯಲಾಗುತ್ತದೆ. ಇಷ್ಟೆ ಅಲ್ಲದೆ, ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಮಾಸ್ ರಿಪೋರ್ಟಿಂಗ್ ಮಾಡಿ ಎದುರಾಳಿಗಳ ಅಕೌಂಟ್ ಗಳನ್ನು ಬ್ಲಾಕ್ ಮಾಡಿಸುವ ಹೊಸ ಯುದ್ಧ ಆರಂಭವಾಗಿದೆ. ಇದು ಹೇಗೆ ಕೆಲಸ ಮಾಡುತ್ತದೆ? ಯಾರದ್ದಾದರೂ ಒಂದು ಸಾಮಾಜಿಕ ಜಾಲತಾಣ ಪೋಸ್ಟ್ ತಮಗೆ ಇಷ್ಟವಿಲ್ಲ ಎಂದರೆ ಅದಕ್ಕೆ ಆಕ್ರೋಶ ವ್ಯಕ್ತಪಡಿಸಲು ಅವಕಾಶ ಇದ್ದೇ ಇರುತ್ತದೆ. ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ಹೀಗೆ ಆಗುತ್ತಿಲ್ಲ. ಒಂದು ಸಾಮಾಜಿಕ ಜಾಲತಾಣ ಖಾತೆ ಅಥವಾ ಒಂದು ಪೋಸ್ಟ್ ಕುರಿತು ಸಾವಿರಾರು ಸಂಖ್ಯೆಯಲ್ಲಿ ಡಿಜಿಟಲ್ ಕಂಪನಿಗೆ (ಅಂದರೆ ಫೇಸ್ಬುಕ್, ಟ್ವಿಟರ್) ದೂರು ನೀಡಲಾಗುತ್ತದೆ. ಇದನ್ನು ಡಿಜಿಟಲ್ ಭಾಷೆಯಲ್ಲಿ ರಿಪೋರ್ಟ್ ಎನ್ನಲಾಗುತ್ತದೆ. ಒಂದು ಪೋಸ್ಟ್ ಕುರಿತು ಒಂದೇ ಊರಿನ ಅಥವಾ ಒಂದೇ ಕಂಪ್ಯೂಟರಿನಿಂದ ನೂರು ಜನರು ರಿಪೋರ್ಟ್ ಮಾಡಿದರೆ ಫೇಸ್ಬುಕ್ ಆಗಲಿ ಟ್ವಿಟರ್ ಆಗಲಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದನ್ನೇ, ರಾಜ್ಯ ಹಾಗೂ ದೇಶದ ನೂರು ಸ್ಥಳಗಳಿಂದ, ಬೇರೆ ಬೇರೆ ಕಂಪ್ಯೂಟರ್ ಗಳಿಂದ ರಿಪೋರ್ಟ್ ಮಾಡಿಸಿದರೆ ಅದನ್ನು ಸಾಫ್ಟ್ವೇರ್ (ಅಲ್ಗಾರಿದಂ) ಗಂಭೀರವಾಗಿ ಪರಿಗಣಿಸುತ್ತದೆ. ನಿಮ್ಮ ಬರಹವು ಫೇಸ್ಬುಕ್ ಅಥವಾ ಎಕ್ಸ್(ಹಿಂದಿನ ಟ್ವೀಟ್) ಕಮ್ಯುನಿಟಿ ಗೈಡ್ಲೈನ್ಸ್ ಉಲ್ಲಂಘನೆ ಮಾಡಿದೆ ಎಂದು ತಿಳಿಸಲಾಗುತ್ತದೆ. ನಂತರದ 15-20 ದಿನದವರೆಗೆ ಖಾತೆಯನ್ನು ಬ್ಲಾಕ್ ಮಾಡಬಹುದು, ಮತ್ತೆ ಮತ್ತೆ ಇದೇ ಪುನರಾವೃತ್ತಿಯಾದರೆ ಖಾತೆಯನ್ನು ಶಾಶ್ವತವಾಗಿ ಮುಚ್ಚಲೂ ಅವಕಾಶವಿದೆ.
ರಾಷ್ಟ್ರೀಯವಾದಿಗಳು ಅಂದರೆ ಬಲಪಂಥೀಯರು ಎಂದು ಕರೆಸಿಕೊಳ್ಳುವವರು ಅಲ್ಪಸಂಖ್ಯಾತರ ಧ್ವನಿಯನ್ನು ಅಡಗಿಸುತ್ತಿದ್ದಾರೆ ಎಂದು ಆಗಾಗ್ಗೆ ಬೊಬ್ಬೆ ಹೊಡೆಯಲಾಗುತ್ತದೆ. ಆದರೆ ನಿಜವಾಗಿ ಹಿಂದುಗಳ, ಸನಾತನ ಧರ್ಮದ ಕುರಿತು ಮಾಡಿದ ಸಂದೇಶ ಹಾಗೂ ಖಾತೆಗಳೇ ಹೆಚ್ಚು ಬ್ಲಾಕ್ ಆಗಿವೆ. ಯಾವ ವಿಚಾರದಲ್ಲಿ ಹೇಗೆ ಮಾತನಾಡಬೇಕು, ಯಾವ ಫೋಟೊ ಹಾಕಬೇಕು ಎನ್ನುವುದನ್ನು ಎದುರಾಳಿಗಳು ನಿರ್ಧಾರ ಮಾಡುವ ಸ್ಥಿತಿ ಬಂದಿದೆ.
ಇದನ್ನೂ ಓದಿ: ವಿಸ್ತಾರ ಅಂಕಣ: ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾಧ್ಯಮವನ್ನು ಕೈಗೊಂಬೆ ಮಾಡಿಕೊಂಡಿದೆ, ಖರೀದಿಸಿದೆ ಎಂದು ಬೊಬ್ಬೆ ಹಾಕಲಾಗುತ್ತದೆ. ಮೋದಿಯನ್ನು ಓಲೈಸುತ್ತವೆ ಎಂಬುದನ್ನು ಸೂಚಿಸಲು ಗೋದಿ (ಮಡಿಲು) ಮೀಡಿಯಾ ಎಂಬ ಪದಪುಂಜವನ್ನೇ ಹುಟ್ಟುಹಾಕಲಾಗಿದೆ. ಆದರೆ ಇದೀಗ ಅದೇ ಹುಯಿಲೆಬ್ಬಿಸುವ I.N.D.I.A ರಾಜಕೀಯ ಗುಂಪು ಪತ್ರಕರ್ತರನ್ನು ನಿರ್ಬಂಧಿಸಿದೆ. 14 ಪತ್ರಕರ್ತರ ಟಿವಿ ಶೋಗಳಿಗೆ ಹೋಗುವುದಿಲ್ಲ ಎಂದು ಬಾಯ್ಕಾಟ್ ಮಾಡಿದೆ. ಕರ್ನಾಟಕದಲ್ಲೂ ಅಷ್ಟೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಅನೇಕರ ಅಕೌಂಟ್ ಬಂದ್ ಮಾಡಲಾಗುತ್ತಿದೆ. ಎಫ್ಐಆರ್ ದಾಖಲು ಮಾಡಲಾಗುತ್ತಿದೆ. ಆದರೆ ಹಿಂದುತ್ವ, ಮೋದಿ, ಭಾರತೀಯ ಸೇನೆ, ಒಂದು ಜಾತಿ, ಸಮುದಾಯದ ವಿರುದ್ಧ ಯದ್ವಾತದ್ವಾ ಮಾತನಾಡುವವರ ವಿರುದ್ಧ ಯಾವುದೇ ಕ್ರಮ ಆಗುವುದಿಲ್ಲ. ರಾಜ್ಯ ಸರ್ಕಾರವು, ಡಿಜಿಟಲ್ ವೇದಿಕೆಯಲ್ಲಿ ಸುಳ್ಳು ಸುದ್ದಿ ತಡೆಗಟ್ಟಲು ತಂಡವನ್ನೇ ರಚಿಸಿದೆ. ಇದು ಅತ್ಯಂತ ಸ್ವಾಗತಾರ್ಹ ಕ್ರಮ ಎಂದು ತೋರುತ್ತದೆ. ಆದರೆ ನಿಜವಾಗಿಯೂ ಆಗುತ್ತಿರುವುದು ಬೇರೆಯ ರೀತಿಯೇ ಕಾಣುತ್ತಿದೆ. ತಮ್ಮ ವಿರೋಧಿಗಳನ್ನು ಕಟ್ಟಿಹಾಕಲು ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ.
ರಸ್ತೆಯಲ್ಲಿ, ಪ್ರದೇಶದಲ್ಲಿ ನಡೆಯುತ್ತಿದ್ದ ನೈತಿಕ ಪೊಲೀಸ್ ಗಿರಿಯು ಡಿಜಿಟಲ್ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟು, ಅಲ್ಲಿಯೂ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿ ಮಾಡುತ್ತಿದೆ. ಇಂತಹ ಟ್ರೋಲ್ ಗುಂಪುಗಳ ಜತೆಗೆ, ಮಾಸ್ ರಿಪೋರ್ಟ್ ಮಾಡಿಸುವ ಸಂಸ್ಥೆಗಳೊಂದಿಗೆ ಸರ್ಕಾರಗಳೂ ಸೇರಿಕೊಂಡಿರುವುದು ಅಪಾಯದ ಮುನ್ಸೂಚನೆ. ಜನರ ಕೈಗೆ ಸಿಕ್ಕಿರುವ ಅತ್ಯುತ್ತಮ ವಾಕ್ ಸ್ವಾತಂತ್ರ್ಯದ ಉಪಕರಣವನ್ನು ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ. ದೇಶದಲ್ಲಿ ಮತ್ತೊಮ್ಮೆ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿ, ತುರ್ತು ಪರಿಸ್ಥಿತಿ ಬಾರದಂತೆ ತಡೆಯುವ ಹೊಣೆ ನಮ್ಮೆಲ್ಲರ ಮೇಲಿದೆ.
ಇದನ್ನೂ ಓದಿ: ವಿಸ್ತಾರ ಅಂಕಣ: ನೈತಿಕ ಪೊಲೀಸ್‌ಗಿರಿಯ ಕುರಿತು ಅನೈತಿಕ ದೃಷ್ಟಿಕೋನ ಯಾಕಪ್ಪ??!!