ನಗರ ಮತದಾರರ ಆಲಸ್ಯ ಸವಾಲು; ಚುನಾವಣಾ ಆಯೋಗದ ಸೀಮೋಲ್ಲಂಘನೆಯೇ ಪರಿಹಾರ
ಚುನಾವಣೆಗಳನ್ನು ನಡೆಸುವುದೆಂದರೆ ಸವಾಲಿನ ಕೆಲಸವೇ. ಏಕೆಂದರೆ, ಚುನಾವಣೆಯ ಸೋಲು ಗೆಲುವು ಕ್ರಿಕೆಟ್ ಫಲಿತಾಂಶದಂತಲ್ಲ. ಅವು ರಾಜ್ಯಾಧಿಕಾರಕ್ಕೆ ಸಂಬಂಧಿಸಿದ ಮಹಾ ಕಾರ್ಯಾಚರಣೆ. ಸರಳವಾಗಿ ಹೇಳಬೇಕೆಂದರೆ- ಅಧಿಕಾರಕ್ಕಾಗಿ ಚುನಾವಣೆ ನಡೆಯುತ್ತದೆ. ಅಧಿಕಾರ ಇದ್ದ ಕಡೆ ದರ್ಪ ಇರುತ್ತದೆ, ಹಣ ಹರಿದಾಡುತ್ತದೆ. ಅಲ್ಲಿಗೆ, ಕಾನೂನನ್ನು ಗಾಳಿಗೆ ತೂರುವ ಪ್ರಯತ್ನ ನಿಶ್ಚಿತವಾಗಿ ನಡೆಯುತ್ತದೆ. ಅನೇಕ ದಶಕಗಳಿಂದಲೂ ಹೇಳುತ್ತಲೇ ಬಂದು ಈಗ ಕ್ಲೀಷೆಯಾಗಿರುವ ಹಣ ಬಲ, ತೋಳ್ಬಲವನ್ನು ನಿಯಂತ್ರಿಸಿ ಸ್ವಚ್ಛ, ಪಾರದರ್ಶಕ ಚುನಾವಣೆ ನಡೆಸುವುದು ಚುನಾವಣಾ ಆಯೋಗದ (Election commission) ಮುಂದಿರುವ ಸವಾಲು.
ಈ ಸವಾಲನ್ನು ಮಣಿಸಲು ಚುನಾವಣಾ ಆಯೋಗಕ್ಕೆ ಸಾಧ್ಯವಿಲ್ಲವೇ? ಇದೆ. ಚುನಾವಣಾ ಆಯೋಗಕ್ಕೆ ಇಂಥದ್ದೊಂದು ಶಕ್ತಿ ಇದೆ ಎಂಬುದನ್ನು ಟಿ.ಎನ್. ಶೇಷನ್ ಎಂಬ ಆಯುಕ್ತರು ತೋರಿಸಿಕೊಟ್ಟಿದ್ದಾರೆ. ಚುನಾವಣಾ ಆಯೋಗ ಎಂದರೆ ಮತಪೆಟ್ಟಿಗೆಗಳನ್ನು ಇಡುವುದು, ಅದನ್ನು ತೆಗೆದುಕೊಂಡು ಹೋಗುವುದು ಹಾಗೂ ಫಲಿತಾಂಶ ಘೋಷಿಸುವುದು- ಎಂಬ ಮೂರ್ನಾಲ್ಕು ಸಂಗತಿಗಳಿಗೆ ಸೀಮಿತ ಎಂದೇ ಶೇಷನ್ ಪೂರ್ವದಲ್ಲಿ ನಂಬಿದ್ದೆವು. ಆದರೆ ಸ್ವಚ್ಛ, ಪಾರದರ್ಶಕ ಚುನಾವಣೆ ನಡೆಯಬೇಕೆಂದರೆ ನಿಜವಾಗಿಯೂ ಏನೇನು ನಡೆಯಬೇಕೊ ಅದೆಲ್ಲವೂ ನಡೆಯುವಂತೆ ನೋಡಿಕೊಳ್ಳಬೇಕು ಎಂಬುದನ್ನು ಶೇಷನ್ ಕೃತಿಯ ಮೂಲಕ ತೋರಿಸಿಕೊಟ್ಟರು. ಅವರು ಸೀಮೋಲ್ಲಂಘನೆ ಮಾಡಿದರು!
ಸೀಮೋಲ್ಲಂಘನೆ ಎನ್ನುವುದು ಭಾರತೀಯ ಸಂಸ್ಕೃತಿಯ ಅದ್ಭುತ ಪರಿಕಲ್ಪನೆ. ದಸರಾ ಸಮಯದಲ್ಲಿ ಊರಿನ ಗಡಿಯನ್ನು ಒಮ್ಮೆ ದಾಟಿ ಸೀಮೋಲ್ಲಂಘನೆ ಮಾಡಲಾಗುತ್ತದೆ. ಎಲ್ಲರೂ ತಮ್ಮ ತಮ್ಮ ಸೀಮೆಯಲ್ಲೇ (Comfort Zone) ಇದ್ದುಕೊಂಡರೆ ಬೆಳವಣಿಗೆ ಆಗುವುದೇ ಇಲ್ಲ. ಸೀಮೆಯನ್ನು ಉಲ್ಲಂಘಿಸಿದರೆ ಸವಾಲು, ಅಪಾಯ ಎದುರಾಗುವುದು ಖಚಿತ. ಆದರೆ ಅದರಿಂದಲೇ ಬೆಳವಣಿಗೆ ನಿಶ್ಚಿತ. ಬೀಜವೊಂದು ತನ್ನ ಪಾಡಿಗೆ ತಾನು ಮಣ್ಣಿನಲ್ಲಿ ಇದ್ದರೆ ಮರವಾಗುವುದಾದರೂ ಹೇಗೆ? ಹಾರಲು ಹೋದಾಗ ಕೆಳಗೆ ಬಿದ್ದರೆ ಹೇಗೆ ಎಂದು ಹಕ್ಕಿಯೊಂದು ಗೂಡು ಬಿಡದೇ ಇದ್ದರೆ ಹೇಗೆ? ಹಾಗೆಯೇ ಶೇಷನ್ ಮಾಡಿದ ಸೀಮೋಲ್ಲಂಘನೆಯು ಭಾರತದ ಚುನಾವಣಾ ಪ್ರಕ್ರಿಯೆಯ ದಿಕ್ಕನ್ನೇ ಬದಲಾಯಿಸಿತು.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳನ್ನು ಘೋಷಣೆ ಮಾಡುವ ಸಲುವಾಗಿ ಮಾರ್ಚ್ 29ರಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಚುನಾವಣೆ ದಿನಾಂಕಗಳನ್ನು ಘೋಷಣೆ ಮಾಡುವುದಕ್ಕೂ ಮುನ್ನ ಅವರು ಕರ್ನಾಟಕದ ಚುನಾವಣೆ ಬಗ್ಗೆ ಎರಡು ವಿಷಯ ಹೇಳಿದರು.
ಕರ್ನಾಟಕದಲ್ಲಿ ಚುನಾವಣೆ (Karnataka election) ನಡೆಸಲು ಎರಡು ಸವಾಲುಗಳಿವೆ. ಮೊದಲನೆಯದು ಯಥೇಚ್ಚವಾಗಿ ಹಣದ ಹೊಳೆ ಹರಿಯುವುದನ್ನು ತಡೆಯುವ ಸವಾಲು. ಎರಡನೆಯದು ನಗರವಾಸಿಗಳು ಮತದಾನಕ್ಕೆ ತೋರಿಸುತ್ತಿರುವ ಆಲಸ್ಯ. ಇದರ ಸಮರ್ಥನೆಗಾಗಿ ಅವರು ಅನೇಕ ಅಂಕಿ ಅಂಶಗಳನ್ನೂ ನೀಡಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಆಂಧ್ರ ಪ್ರದೇಶದಲ್ಲಿ ಶೇ.62.77 ಮತದಾನವಾಗಿದ್ದರೆ ಹೈದರಾಬಾದಿನಲ್ಲಿ ಶೇ.44.84 ಮತದಾನವಾಗಿತ್ತು. ಅದೇ ರೀತಿ ಮಹಾರಾಷ್ಟ್ರದಲ್ಲಿ ಶೇ.61.02 ಮತದಾನವಾಗಿದ್ದರೆ ಪುಣೆಯಲ್ಲಿ ಶೇ.49.89 ಆಗಿತ್ತು. ಇತ್ತೀಚೆಗೆ 2022ರ ಗುಜರಾತ್ ಚುನಾವಣೆಯಲ್ಲಿ ಶೇ.64.33 ಮತದಾನವಾಗಿದ್ದರೆ ರಾಜಕೋಟದಲ್ಲಿ ಶೇ.57.12 ಆಗಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟು ಸರಾಸರಿ ಶೇ.72.44 ಮತದಾನವಾಗಿತ್ತು. 2013ರ ಶೇ.71.83 ಪ್ರಮಾಣವನ್ನು ಮೀರಿತ್ತು. ಆದರೆ ಬೆಂಗಳೂರಿನಲ್ಲಿ ಸ್ಥಿತಿ ಬೇರೆಯೇ ಇತ್ತು. ಬೆಂಗಳೂರಿನಲ್ಲಿ 2018ರ ಚುನಾವಣೆಯಲ್ಲಿ ಕೇವಲ ಶೇ.57 ಮತದಾನವಾಗಿತ್ತು. 2013ರಲ್ಲಿ ಶೇ.62 ಮತಪ್ರಮಾಣಕ್ಕಿಂತಲೂ ಕಡಿಮೆಯಾಗಿತ್ತು. ಈ ರೀತಿ ನಗರ ಪ್ರದೇಶದಲ್ಲಿ ಮತದಾರರ ಆಲಸ್ಯ ಕಂಡುಬರುತ್ತಿದ್ದು, ಅದನ್ನು ನಿವಾರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ರಾಜೀವ್ ಕುಮಾರ್ ವಿವರಿಸಿದರು.
ಅಂದರೆ, ನಗರವಾಸಿಗಳನ್ನು ಮತಗಟ್ಟೆಗೆ ಕರೆತರುವಲ್ಲಿ ಆಯೋಗ ನಡೆಸುತ್ತಿರುವ ಪ್ರಯತ್ನಗಳು ಸಾಲುತ್ತಿಲ್ಲ ಎಂದಾಯಿತು. ಜತೆಗೆ, ಮತದಾನ ಪ್ರಮಾಣ ಕುಸಿತಕ್ಕೆ ನಗರವಾಸಿಗಳ ಅಲಸ್ಯವೇ ಕಾರಣ ಎಂಬ ಆಯೋಗ ನೀಡಿರುವ ಕಾರಣ ಸರಿಯಲ್ಲ. ಎಲ್ಲವನ್ನೂ ಮತದಾರರ ಮೇಲೆ ಹಾಕಿ ಕೈತೊಳೆದುಕೊಳ್ಳುವುದು ಜವಾಬ್ದಾರಿಯುತ ಕ್ರಮವಲ್ಲ. ಮತದಾನ ಪ್ರಮಾಣ ಕುಸಿತಕ್ಕೆ ಮತದಾರರು ಎಷ್ಟು ಕಾರಣವೋ, ಚುನಾವಣಾ ಆಯೋಗವು ಅಷ್ಟೇ ಕಾರಣ. ನಗರ ಪ್ರದೇಶಗಳಿಗೆ ಜನರು ಎಲ್ಲಿಂದ ಬರುತ್ತಾರೆ? ಗ್ರಾಮೀಣ ಪ್ರದೇಶಗಳಿಂದಲೇ ಅಲ್ಲವೇ? ಬೆಂಗಳೂರು ನಗರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಇದು ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾದ ನಗರ. ಇಲ್ಲಿ ವಾಸಿಸುತ್ತಿರುವವರಲ್ಲಿ ಇಲ್ಲಿನ ಬೇರುಗಳನ್ನು ಹೊಂದಿರುವವರು ಎಷ್ಟು ಜನರಿರಬಹುದು? ಬಹುತೇಕ ಎಲ್ಲರಿಗೂ ಹಳ್ಳಿಯ ನಂಟು ಇದ್ದೇ ಇರುತ್ತದೆ. ಇನ್ನು ಅನೇಕ ಸಮುದಾಯಗಳಿಗೆ ಬೇರೆ ರಾಜ್ಯದ ನಂಟು, ಬೇರೆ ದೇಶದ ನಂಟೂ ಇದೆ. ಅವರೆಲ್ಲರೂ ಶತಮಾನಗಳಿಂದ ಇಲ್ಲೇ ಇದ್ದಾರೆ. ಪ್ರತಿ ದಿನವೂ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಹಳ್ಳಿಗಳಿಂದ, ಇತರೆ ನಗರಗಳಿಂದ ಆಗಮಿಸುತ್ತಿದ್ದಾರೆ. ಅವರ ಮೂಲ ಬೇರು ಅವರವರ ಊರಿನಲ್ಲಿಯೇ ಇದೆ, ಅಲ್ಲಿನ ಮತದಾರರ ಪಟ್ಟಿಯಲ್ಲೂ ಹೆಸರಿದೆ.
ಬೆಂಗಳೂರಿನಲ್ಲಿ ಅನೇಕ ವರ್ಷ ಇರುವುದರಿಂದ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಮತದಾರರಾಗಿಯೂ ನೋಂದಣಿ ಮಾಡಿಕೊಂಡಿದ್ದಾರೆ. ಎರಡೂ ಕಡೆ ಮತದಾರರ ಚೀಟಿ ಹೊಂದಿದ್ದಾರೆ. ಇಂತಹ ಮತದಾರರು ಚುನಾವಣೆ ಎದುರಾದ ಕೂಡಲೆ ತಮ್ಮ ಮೂಲ ಸ್ಥಾನದಲ್ಲೇ ಮತ ಚಲಾಯಿಸುತ್ತಾರೆ. ಅಲ್ಲಿನ ರಾಜಕಾರಣಿಗಳ ಆತ್ಮೀಯತೆ, ಅವರ ಒತ್ತಡದ ಕಾರಣಕ್ಕೆ ಅನಿವಾರ್ಯವಾಗಿ ತೆರಳುತ್ತಾರೆ. ಹೀಗಾಗಿ ಮತದಾನದ ಪ್ರಮಾಣ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತದೆ, ನಗರದಲ್ಲಿ ಕುಸಿಯುತ್ತದೆ. ಎರಡೂ ಕಡೆ ಮತಪತ್ರದಲ್ಲಿ ಹೆಸರನ್ನು ಹೊಂದುವುದು ತಪ್ಪು ಎನ್ನುವ ವಿಚಾರ ಸರಿ. ಆದರೆ, ವಾಸ್ತವವಾಗಿ ಹೀಗೆ ಇರುವುದು ಸತ್ಯ. ಅದನ್ನು ನಿವಾರಿಸಲು ಆಯೋಗ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ ಎನ್ನುವುದು ಅಷ್ಟೇ ಸತ್ಯ. ಈಗಿನ ತಂತ್ರಜ್ಞಾನ ಯುಗದಲ್ಲಿ, ಆಧಾರ್ ಪಾನ್ ಕಾರ್ಡ್‌ನಂತಹ ವಿಶಿಷ್ಟ ಗುರುತಿನ ಚೀಟಿಗಳಿರುವಾಗ ಒಬ್ಬನೇ ಮತದಾರರ ಒಂದಕ್ಕಿಂತ ಹೆಚ್ಚು ಕಡೆ ಮತದಾನದ ಹಕ್ಕು ಹೊಂದಿದ್ದಾನೆ ಎನ್ನುವುದು ವ್ಯವಸ್ಥೆಯ ಲೋಪವನ್ನೇ ತೋರುತ್ತದೆ.
ಮತಗಟ್ಟೆಗಳನ್ನು ವಿಂಗಡಿಸುವ ಕಾರ್ಯವನ್ನು ಆಯೋಗ ಮಾಡುತ್ತದೆ. ಅಂದರೆ, ಒಂದು ಮತಗಟ್ಟೆಗೆ ಸರಾಸರಿ 800 ಜನರಿರುವಂತೆ ನೋಡಿಕೊಳ್ಳುತ್ತದೆ. ಹೀಗೆ ಒಂದು ಮತಗಟ್ಟೆಯಲ್ಲಿ ಸರಾಸರಿಗಿಂತ ಹೆಚ್ಚು ಮತದಾರರು ಆದರೆ ಮತಗಟ್ಟೆಯನ್ನು ವಿಭಜನೆ ಮಾಡಲಾಗುತ್ತದೆ. ಇಂತಹ ಸಮಯದಲ್ಲಿ ಅದೇ ಮತಕೇಂದ್ರದ ಬದಲಿಗೆ ದೂರದ ಮತ್ತೊಂದು ಮತಕೇಂದ್ರಕ್ಕೆ ವರ್ಗಾವಣೆ ಆದ ಉದಾಹರಣೆಗಳನ್ನೂ ನಮ್ಮ ವರದಿಗಾರಿಕೆ ಸಂದರ್ಭದಲ್ಲಿ ಕಂಡಿದ್ದೇವೆ. ಒಂದೇ ಕುಟುಂಬದ ಒಬ್ಬ ಒಂದು ಮತಗಟ್ಟೆಯಲ್ಲಿದ್ದರೆ ಮತ್ತೊಬ್ಬ ದೂರದ ಮತಗಟ್ಟೆಗೆ ವರ್ಗಾವಣೆ ಆಗಿರುತ್ತಾನೆ. ಇಂತಹ ಸಂದರ್ಭದಲ್ಲಿ ಮತದಾರರು ಹಾಗೆಯೇ ಮನೆಗೆ ತೆರಳುತ್ತಾರೆ.
ಮತಗಟ್ಟೆಗಳನ್ನು ಮತದಾರರ ಸ್ನೇಹಿಯಾಗಿಸುವ ಅನೇಕ ಕ್ರಮಗಳನ್ನು ಆಯೋಗ ಕೈಗೊಳ್ಳುತ್ತಿದೆ, ಅದು ಶ್ಲಾಘನೀಯ. ಶುದ್ಧ ಕುಡಿಯುವ ನೀರು, ಶೌಚಾಲಯ, ಅಂಗವಿಕಲರಿಗೆ Ramp ಸೌಲಭ್ಯ ನೀಡಲಾಗುತ್ತಿದೆ. ಪೂರ್ಣ ಮಹಿಳಾ ಅಧಿಕಾರಿಗಳೇ ನಿರ್ವಹಣೆ ಮಾಡುವ ಮತಗಟ್ಟೆಗಳನ್ನು ಈ ಹಿಂದಿನಿಂದಲೇ ಸ್ಥಾಪಿಸಲಾಗುತ್ತಿದೆ. ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ವಿಶೇಷ ಚೇತನ ಸಿಬ್ಬಂದಿಯೇ ನಿರ್ವಹಣೆ ಮಾಡುವ ಮತಗಟ್ಟೆಗಳನ್ನೂ ಸ್ಥಾಪಿಸುತ್ತಿದೆ. ಇದು ಚುನಾವಣಾ ಆಯೋಗದ ಗುಣಮಟ್ಟ ಹೆಚ್ಚಳವನ್ನು ತೋರಿಸುತ್ತದೆ. ಆದರೆ ಈ ಕ್ರಮಗಳು ಕೂಡ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯಾಗಿಲ್ಲ.
ಇದನ್ನೂ ಓದಿ: ವಿಸ್ತಾರ ಅಂಕಣ: ಮತದಾರರು ʼದೇವರ’ ರೀತಿ ಹಕ್ಕು ಚಲಾಯಿಸುತ್ತಾರ? ʼದೇವರʼ ರೀತಿ ಸುಮ್ಮನೆ ಕೂರುತ್ತಾರ?
ಈಗಾಗಲೆ ಹೇಳಿದಂತೆ, ಚುನಾವಣಾ ಆಯೋಗ ತನ್ನ ಕಾರ್ಯ ವ್ಯಾಪ್ತಿಯನ್ನು ಮೀರುವುದು ಹೇಗೆ ಎಂಬುದನ್ನು ಶೇಷನ್ ತೋರಿಸಿಕೊಟ್ಟಿದ್ದಾರೆ. ಅಂತಹ ಕ್ರಮಗಳಿಗೆ ಆಯೋಗ ಮುಂದಾಗಬೇಕಿದೆ. ಕೇವಲ ಮತಗಟ್ಟೆ ಸುತ್ತಮುತ್ತ ಮಾತ್ರ ನಿಯಂತ್ರಣ ಮಾಡುವುದಲ್ಲ. ಮತದಾರನ ಮನೆಯ ಬಳಿ ಆಮಿಷ ಒಡ್ಡಿದರೂ ಅದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ, ಯಾವುದೋ ಕಾಡಿನಲ್ಲಿ ಚುನಾವಣೆ ಕಾರಣಕ್ಕೆ ಪಾರ್ಟಿ ಮಾಡಿದರೂ ಅದರ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬಹುದು. ಈ ನಿಯಮಾವಳಿಗಳ ಚುಂಗು ಹಿಡಿದು, ಆಯೋಗ ಜಿಗಿಯಬೇಕಷ್ಟೆ!
ಈ ನಡುವೆ ಸಾಕಷ್ಟು ಸುಧಾರಣೆಗಳು ಆಗಿವೆ. ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಘೋಷಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ವರ್ಷವಂತೂ ಚುನಾವಣಾ ಆಯೋಗ ಒಂದು ಹೆಜ್ಜೆ ಮುಂದೆ ಹೋಗಿದೆ.
ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನವೇ ಕಾರ್ಯಾಚರಣೆಗೆ ಇಳಿದಿದೆ. ಮತದಾರರಿಗೆ ಆಮಿಷವೊಡ್ಡಲು ಶೇಖರಿಸಿದ್ದ ವಸ್ತುಗಳ ಮೇಲೆ ದಾಳಿ ನಡೆಸಿದೆ. ಚುನಾವಣಾ ದಿನಾಂಕ ಘೋಷಣೆ ಸುದ್ದಿಗೋಷ್ಠಿಯಲ್ಲಿ ರಾಜೀವ್ ಕುಮಾರ್ ಅವರೇ ಹೇಳಿದಂತೆ, 2018ರ ಇಡೀ ಚುನಾವಣಾ ಸಮಯದಲ್ಲಿ ವಶಪಡಿಸಿಕೊಂಡಿದ್ದಕ್ಕಿಂತಲೂ ಹೆಚ್ಚಿನ ಮೌಲ್ಯದ ವಸ್ತು ಹಾಗೂ ಹಣವನ್ನು ಈ ಬಾರಿ ಮಾದರಿ ನೀತಿಸಂಹಿತೆ ಜಾರಿಗೆ ಮುನ್ನವೇ ವಶಪಡಿಸಿಕೊಳ್ಳಲಾಗಿದೆ. ಅಂದರೆ ಮಾದರಿ ನೀತಿ ಸಂಹಿತೆ ಜಾರಿಗೆ ಮುನ್ನವೇ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ.
ಈ ವ್ಯಾಪ್ತಿಯನ್ನು ಆಯೋಗ ಮತ್ತಷ್ಟು ಏಕೆ ವಿಸ್ತರಿಸಿಕೊಳ್ಳಬಾರದು? ಜನರಿಗೆ ಸರ್ಕಾರದ ಆಡಳಿತದ ಮೇಲೆ ಗೌರವ ಬರುವ ರೀತಿ ಮಾಡಿದರೆ ಮಾತ್ರ ಜಾಗೃತ ಮತದಾರರು ಮತಗಟ್ಟೆಗೆ ಬರುತ್ತಾರೆ. ಸರ್ಕಾರದ ಆಡಳಿತದಲ್ಲಿ ನಡೆಯುವ ಭ್ರಷ್ಟಾಚಾರ, ಅನಾಚಾರಗಳ ಮೇಲೆ ಆಯೋಗ ಕಣ್ಣಿಡಬೇಕು. ಮುಖ್ಯವಾಗಿ ಸ್ಥಳೀಯ ಆಡಳಿತಗಳು ಮೂಲಸೌಕರ್ಯಕ್ಕೆ ತೋರುವ ಅಸಡ್ಡೆಯನ್ನು ತಡೆಯಬೇಕು. ರಸ್ತೆ, ಚರಂಡಿ, ಸ್ತ್ರೀ ಸುರಕ್ಷತೆ, ಬಾಡಿಗೆ ವಾಹನ ಚಾಲಕರ ಸುಲಿಗೆ, ಶುದ್ಧ ಕುಡಿಯುವ ನೀರು… ಹೀಗೆ ಮೂಲಸೌಕರ್ಯ ವಿಚಾರದಲ್ಲಾದರೂ ಜನರ ನಿರೀಕ್ಷೆಗೆ ಸರಿಯಾಗಿ ಕೆಲಸಗಳಾಗಬೇಕು.
ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
ಮತದಾನವನ್ನು ಕಡ್ಡಾಯ ಮಾಡಿಬಿಟ್ಟರೆ ಎಲ್ಲ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ವಾದಿಸುವವರು ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭು. ಪ್ರಭುವನ್ನೇ ಬಲವಂತವಾಗಿ ಕರೆತರುವುದು ಸಮಂಜಸವೇ? ಆಲೋಚಿಸಬೇಕು. ಒಂದು ಒಳ್ಳೆಯ ಸಿನಿಮಾ ಬಿಡುಗಡೆಯಾದಾಗ ಸರತಿ ಸಾಲಿನಲ್ಲಿ ನಿಲ್ಲುವ ಜನರು ಮತದಾನ ಕೇಂದ್ರಕ್ಕೆ ಆಗಮಿಸುತ್ತಿಲ್ಲ ಎಂದರೆ ಅವರಿಗೆ ಸಮಯ ಇಲ್ಲವೆಂದಲ್ಲ, ಮನಸ್ಸಿಲ್ಲ ಎಂದರ್ಥ.
ಎಲ್ಲವನ್ನೂ ಜನರ ಮೇಲೆ, ಅದರಲ್ಲೂ ನಗರ ಮತದಾರರ ಮೇಲೆ, ನಿರ್ದಿಷ್ಟವಾಗಿ ಯುವ ಜನರ ಮೇಲೆ ಆರೋಪ ಮಾಡಿ ಕೈತೊಳೆದುಕೊಳ್ಳುವುದನ್ನು ಬಿಡಬೇಕು. ಮತಪತ್ರ ಶುದ್ಧೀಕರಣದಂತಹ ತೀರಾ ತಾಂತ್ರಿಕ ವ್ಯವಹಾರಕ್ಕಷ್ಟೆ ಸೀಮಿತವಾಗದೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಗೆ ಆಸಕ್ತಿ, ಜವಾಬ್ದಾರಿ ಮೂಡಿಸುವಂತಹ ಕಾರ್ಯವನ್ನೂ ಮಾಡಬೇಕು. ನಾವೀಗ 6ಜಿ ಯುಗದ ಹೊಸ್ತಿಲಿನಲ್ಲಿ ಇದ್ದೇವೆ. ದೇಶದ ಯಾವುದೇ ಮೂಲೆಯಲ್ಲಿ ಕುಳಿತು, ಯಾವುದೇ ಮೂಲೆಗೂ ರೈಲು-ಬಸ್-ವಿಮಾನದ ರಿಜರ್ವೇಶನ್ ಮಾಡಿಸಬಹುದು. ಒಮ್ಮೆಲೆ ಲಕ್ಷಾಂತರ ಜನ ಆನ್ ಲೈನ್ ಚಟುವಟಿಕೆಗೆ ಇಳಿದರೂ, ತಾಳುವಷ್ಟು ಅಗಾಧ ಸಾಮರ್ಥ್ಯದ ಸರ್ವರ್‌ಗಳು ಬಂದಿವೆ. ಆಯೋಗ ಈ ಟೆಕ್ನಾಲಜಿಯನ್ನು ಮತದಾನಕ್ಕೆ ಬಳಸಿಕೊಳ್ಳಬಾರದೇಕೆ?
ಗುಜರಾತ್ ಹಾಗೂ ಪಂಚರಾಜ್ಯ ಚುನಾವಣೆಗಳ ಹೊತ್ತಲ್ಲಿ ಅಭ್ಯರ್ಥಿಗಳು ಆನ್‌ಲೈನಿನಲ್ಲಿಯೇ ನಾಮಪತ್ರ ಸಲ್ಲಿಸುವ ವ್ಯವಸ್ಥೆ ಜಾರಿಗೆ ಬಂದಿದೆ. ಇದಕ್ಕಾಗಿ ಆ್ಯಪ್‌ಗಳು ಸಿದ್ಧಗೊಂಡಿವೆ. ಅಂತೆಯೇ, ಆನ್‌ಲೈನ್ ಮೂಲಕವೂ ಮತದಾನ ಮಾಡಲು ಆಯೋಗ ವ್ಯವಸ್ಥೆ ಮಾಡಬಾರದೇಕೆ? ಜನ ಮತದಾನದ ದಿನ ತಾವಿದ್ದಲ್ಲಿಂದಲೇ ತಮಗೆ ಬೇಕಾದ ಜನರಿಗೆ ಆನ್‌ಲೈನಿನಲ್ಲಿ ವೋಟಿಂಗ್ ಮಾಡಲು ಅವಕಾಶ ನೀಡಿದರೆ, ಮತದಾನದ ಪ್ರಮಾಣ ಹೆಚ್ಚ ಬಹುದೇ?
ಆಯೋಗ ಚಿಂತಿಸಬಹುದು. ಏಕೆಂದರೆ, ಚುನಾವಣಾ ಆಯೋಗದ ಸೂಚನೆಯಂತೆ ಐಸಾಕ್ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ, ನಗರವಾಸಿಗಳು ಬಿಸಿಲಿನಲ್ಲಿ ಕ್ಯೂ ನಿಲ್ಲಬೇಕೆಂದು ಮತದಾನಕ್ಕೆ ಬರುತ್ತಿಲ್ಲವಂತೆ. ಮತದಾನ ಆಲಸ್ಯಕ್ಕೆ ಇದೂ ಒಂದು ಕಾರಣವಂತೆ. ಚುನಾವಣಾ ಆಯೋಗ ಮತ್ತೊಮ್ಮೆ ಸೀಮೋಲ್ಲಂಘನೆಗೆ ಸಿದ್ಧವಾಗಬೇಕು.
ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದ ಬಹುತ್ವ ಕಾಪಾಡಲು ಹಿಂದು ರಾಷ್ಟ್ರವಲ್ಲದೆ ಮತ್ಯಾವ ಹಾದಿ?!