Site icon Vistara News

ವಿಸ್ತಾರ ಅಂಕಣ: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆಯನ್ನು ಆಯೋಗಕ್ಕೆ ಮಾತ್ರ ಹೊರಿಸುವುದು ಹೊಣೆಗೇಡಿತನ

election

ಭಾರತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವುದೇ ಭಾರತೀಯ ಚುನಾವಣಾ ಆಯೋಗ (election commission) ಎಂಬ ಸಾಂವಿಧಾನಿಕ ಸಂಸ್ಥೆಯ ಪರಮ ಉದ್ದೇಶ. ಈ ಸಂಗತಿಯನ್ನು ಅದು ಮೊದಲಿನಿಂದಲೂ ಹೇಳುತ್ತಲೇ ಬಂದಿದೆ. ಆ ಕಾರಣದಿಂದಲೇ ಏನೋ ಚುನಾವಣೆ ಬಂದ ಕೂಡಲೆ, ಮುಕ್ತ ಮತ್ತು ನ್ಯಾಯಸಮ್ಮತ ಎಂಬ ಸುಂದರ ಶಕ್ತಶಾಲಿ ಪದಗಳು ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ. ಚುನಾವಣೆಯ ವೇಳಾಪಟ್ಟಿ ಘೋಷಣೆಯ ಬೆನ್ನಲ್ಲಿಯೇ ತನ್ನಿಂತಾನೆ ಶುರುವಾಗುವ ಮಾದರಿ ನೀತಿ ಸಂಹಿತೆಯ ಆಳ್ವಿಕೆಯಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತವೆ. ಅಲ್ಲಿಯವರೆಗೂ ಮೆರೆದಿದ್ದ ಜನಪ್ರತಿನಿಧಿಗಳೂ ಸಾಮಾನ್ಯರಾಗುತ್ತಾರೆ. ಜನಪ್ರತಿನಿಧಿಗಳು ಕರೆದಾಗ ಓಡಿಬಂದು, ಆತನ ಮುಂದೆ ಕೈ ಕಟ್ಟಿ ನಿಲ್ಲುತ್ತಿದ್ದ ಅದೇ ಅಧಿಕಾರಿ ರಾಜನಾಗುತ್ತಾನೆ. ಯಾರನ್ನು ಬೇಕಾದರೂ ತಪಾಸಣೆ ಮಾಡುವ, ಪ್ರಕರಣ ದಾಖಲಿಸುವ ಅಧಿಕಾರ ಹೊಂದುತ್ತಾನೆ. ಒಂದೊಂದು ಫ್ಲೆಕ್ಸ್ ಅಂಟಿಸಬೇಕಾದರೂ, ಪಾಂಪ್ಲೆಟ್ ಹಂಚಬೇಕಾದರೂ ಆಯೋಗದ ಅನುಮತಿ ಬೇಕು. ಪ್ರತಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಹಾಕಿಸಲಾಗಿದ್ದ ಪ್ರತಿ ಕುರ್ಚಿ, ಬೆಂಚು, ಶಾಮಿಯಾನಕ್ಕೆ ಮಾಡಲಾದ ಖರ್ಚಿನ ಲೆಕ್ಕ ಕೊಡಬೇಕು. ಇಂತಹ ಶಕ್ತಿಯನ್ನು ಚುನಾವಣಾ ಆಯೋಗ ಪ್ರತಿ ಚುನಾವಣೆಯಲ್ಲಿ ಹೊಂದುತ್ತದೆ. ಈ ಅಧಿಕಾರವನ್ನು ಬಳಸಿಕೊಂಡು ಒಂದಲ್ಲ ಒಂದು ಸುಧಾರಣೆಯನ್ನು ಆಯೋಗ ತರುತ್ತಲೇ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಗುರಿಯೆಡೆಗೆ ಸಾಗುತ್ತಲೇ ಇದೆ.

ಮೊದಲೆಲ್ಲಾ ಸಾಮಾನ್ಯ ಮತಪೆಟ್ಟಿಗೆಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಆಗ ಬೂತ್‌ಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದ ರೌಡಿಗಳು ಮತಪಟ್ಟಿಗಳನ್ನು ಪಡೆದು ತಮಗೆ ಬೇಕಾದವರಿಗೆ ಓಟ್ ಮಾಡುತ್ತಿದ್ದರು. ಬಿಹಾರದಂತಹ ಸ್ಥಳಗಳಲ್ಲಿ ಮತಪೆಟ್ಟಿಗೆಯನ್ನೇ ಅಪಹರಿಸಿ, ಅದರ ಜಾಗದಲ್ಲಿ, ತಮಗೆ ಬೇಕಾದವರಿಗೆ ಮತ ಹಾಕಲಾದ ನಕಲಿ ಮತಪೆಟ್ಟಿಗೆ ಇರಿಸುತ್ತಿದ್ದರು. ತಂತ್ರಜ್ಞಾನ ಈ ಹಾವಳಿಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಿತು. ತೋಳ್ಬಲದ ಮೇಲೆ ನಂಬಿಕೆ ಇಟ್ಟಿದ್ದ ರೌಡಿಗಳು ಬೌದ್ಧಿಕ ಬಲದ( ಎಲೆಕ್ಟ್ರಾನಿಕ್ ಮತಯಂತ್ರ) ಮತಪೆಟ್ಟಿಗೆ ಎದುರು ಸೋತರು. ಇನ್ನು, ಮತಗಟ್ಟೆಯ ಎದುರು ನಿಂತು ಜನರನ್ನು ಹೆದರಿಸುವ ಕೆಲಸ ನಡೆಯುತ್ತಿತ್ತು. ಅದನ್ನು ತಡೆಯಲು, ಸಾಮಾನ್ಯ, ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅದಕ್ಕೆ ಅನುಗುಣವಾಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಯಿತು.

ಮತಗಟ್ಟೆ ಬಳಿ ತಮ್ಮ ಆಟ ನಡೆಯುವುದಿಲ್ಲ ಎಂದರಿತ ರೌಡಿಗಳು, ತಮ್ಮ ವಿರೋಧಿಗಳಿಗೆ ಮತ ನೀಡಬಹುದು ಎಂದು ಭಾವಿಸಬಹುದಾದ ಏರಿಯಾಗಳಿಗೆ ಹೋಗುತ್ತಿದ್ದರು. ಅವರನ್ನು ಹೆದರಿಸಿ, ಬೆದರಿಸಿ, ಹಣದ ಆಮಿಷ ತೋರಿಸಿ, ಅವರಲ್ಲಿದ್ದ ಮತದಾರರ ಗುರುತಿನ ಚೀಟಿಯನ್ನು ಪಡೆಯುತ್ತಿದ್ದರು. ಇದರಿಂದಾಗಿ ಎದುರಾಳಿಗೆ ಮತಗಳು ಕಡಿಮೆ ಲಭಿಸಿ ಸೋಲುತ್ತಿದ್ದ. ಇದನ್ನು ತಡೆಯುವ ನಿಟ್ಟಿನಲ್ಲಿ, ಮತದಾನದ 48 ಗಂಟೆಗಳ ಅವಧಿಯಲ್ಲಿ ಕ್ಷೇತ್ರದಿಂದ ಹೊರಗಿನವರು ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವಂತಿಲ್ಲ ಎಂದು ಚುನಾವಣಾ ಆಯೋಗ, ರೌಡಿಗಳನ್ನು ಒಕ್ಕಲೆಬ್ಬಿಸುವ ಮಾರ್ಗ ಅನುಸರಿಸಿತು.ಈ ಎಲ್ಲವೂ ಸ್ವಲ್ಪಮಟ್ಟಿಗೆ ಫಲ ನೀಡಿವೆ.

ಹೀಗೆಯೇ ಅಕ್ರಮ ಮತದಾನವನ್ನು ಕ್ರಮೇಣವಾಗಿ ಆಯೋಗ ತಡೆಯುತ್ತಲೆ ಇದೆ. ಈ ಸುಧಾರಣೆ ಒಂದೆಡೆಯಾದರೆ, ವಿವಿಧ ಕಾರಣಗಳಿಂದ ಮತಗಟ್ಟೆ ಕಡೆಗೆ ತಲೆಹಾಕದ ಮತದಾರರನ್ನು ಕರೆತರಲು ಚುನಾವಣಾ ಆಯೋಗ ಇನ್ನಿಲ್ಲದ ಕಸರತ್ತು ನಡೆಸಿದೆ. ಪ್ರಧಾನಿಯಿಂದ ಪಾಮರನವರೆಗೆ, ಅಂಬಾನಿಯಿಂದ ಅರಳಪ್ಪನವರೆಗೆ ಎಲ್ಲರ ಮತಕ್ಕೂ ಒಂದು ಬೆಲೆ, ಮತದ ಮೌಲ್ಯದ ದೊಡ್ಡದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಕ್ಕೆ ಆಯೋಗ ಇಳಿಯಿತು. ಇದಕ್ಕಾಗಿ ಕೆಲವು ವರ್ಷಗಳಿಂದ ಸ್ವೀಪ್ (Systematic Voters’ Education and Electoral Participation-SVEEP-ವ್ಯವಸ್ಥಿತ ಮತದಾರರ ಜಾಗೃತಿ ಹಾಗೂ ಮತದಾನದಲ್ಲಿ ಭಾಗವಹಿಸುವಿಕೆ) ಎಂಬ ಅಭಿಯಾನವನ್ನೇ ಶುರು ಮಾಡಿದೆ. ಅಂದರೆ- ಮತದಾರರಿಗೆ ವ್ಯವಸ್ಥಿತ ಶಿಕ್ಷಣ ನೀಡಿ,ಅವರನ್ನು ಮತದಾನದಲ್ಲಿ ಭಾಗವಹಿಸುವಂತೆ ಮಾಡುವ ವಿಧಾಯಕ ಕಾರ್ಯಕ್ರಮವಿದು. ಮತದಾನ ಎನ್ನುವುದು ಪ್ರತಿ ನಾಗರಿಕನ ಕರ್ತವ್ಯ ಎನ್ನುವುದನ್ನು ಮನದಟ್ಟು ಮಾಡಿಸುವುದರಿಂದ ಮೊದಲುಗೊಂಡು, ಹಣ ಹಾಗೂ ಬೆದರಿಕೆಗೆ ಜಗ್ಗದೆ ತಮ್ಮ ಮನಸ್ಸಿಗೆ ಅನುಗುಣವಾಗಿ ಮತ ಚಲಾಯಿಸುವಂತೆಯೂ ಅವರಿಗೆ ಶಿಕ್ಷಣ ನೀಡುತ್ತಿದೆ. ಪುರುಷ ಸಿಬ್ಬಂದಿಯೇ ಇರುವ ಮತಗಟ್ಟೆಯಲ್ಲಿ ಮತದಾನ ಮಹಿಳೆಯರಿಗೆ ಮುಜುಗರ ಎಂದಾಗ, ಅವರಿಗಾಗಿ ಪ್ರತ್ಯೇಕ ಪಿಂಕ್ ಮತಗಟ್ಟೆಗಳನ್ನೂ ಆರಂಭಿಸಿತು. ವಿಶೇಷ ಚೇತನರು, ಹಿರಿಯ ನಾಗರಿಕರನ್ನು ಮತಗಟ್ಟೆಗೆ ಕರೆತರಲು ಆಯೋಗ ನಡೆಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಬಾರಿಯಂತೂ ಟೆಕ್ನಾಲಜಿಯನ್ನು ಗರಿಷ್ಠ ಮಟ್ಟದಲ್ಲಿ ದುಡಿಸಿಕೊಳ್ಳುತ್ತಿದೆ.

ಈ ಎಲ್ಲದರ ಪರಿಣಾಮ ಎಂಬಂತೆ, ಭಾರತದಲ್ಲಿ ನಡೆಯುತ್ತಿರುವ ಚುನಾವಣೆಯ ವಿಧಿ ವಿಧಾನಗಳು ಸಾಕಷ್ಟು ಸುಧಾರಣೆ ಕಂಡಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬ ಕೊರಗನ್ನು ದಾಖಲಿಸಲೇ ಬೇಕಾಗುತ್ತದೆ. ಏಕೆಂದರೆ, ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಮಾರ್ಚ್ 29ರಂದು ದಿನಾಂಕ ಘೋಷಿಸಿದ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಏನು ಹೇಳಿದರು ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಅಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಎರಡು ಸಂಗತಿಗಳನ್ನು ಒತ್ತಿ ಹೇಳಿದರು.

“ಇತ್ತೀಚೆಗಷ್ಟೆ ನಡೆದ ಈಶಾನ್ಯ ಚುನಾವಣೆಗಳಲ್ಲಿ ಅನೇಕ ಸಮಸ್ಯೆಗಳಿದ್ದವು. ಗುಡ್ಡಗಾಡು ಪ್ರದೇಶಗಳಲ್ಲಿ ಹಾಗೂ ಕೆಲವೇ ಮನೆಗಳಿರುವ ಸ್ಥಳಗಳಿಗೆ ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿಯನ್ನು ರವಾನೆ ಮಾಡುವುದೇ ಸವಾಲಾಗಿತ್ತು. ಆದರೆ ಕರ್ನಾಟಕದಲ್ಲಿ ಚುನಾವಣೆ ನಡೆಸಲು ಎರಡು ಸವಾಲುಗಳಿವೆ ಎಂದರು. ಮೊದಲನೆಯದು ಯಥೇಚ್ಚವಾಗಿ ಹಣದ ಹೊಳೆ ಹರಿಯುವುದನ್ನು ತಡೆಯುವ ಸವಾಲು. ಎರಡನೆಯದು ನಗರ ಮತದಾರರು ಮತದಾನಕ್ಕೆ ಆಲಸ್ಯ ತೋರುತ್ತಿರುವುದು,” ಎಂಬುದು ನಾವೆಲ್ಲರೂ ಮರೆಯಬಾರದ ಎರಡು ಹೇಳಿಕೆಗಳು.

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಣ, ಮದ್ಯ, ವಿವಿಧ ಉಡುಗೊರೆಗಳು ಸೇರಿ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ 107 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 109 ಕೋಟಿ ರೂ. ಮೌಲ್ಯದ ವಸ್ತು ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಮಾರ್ಚ್ 29ರಂದು ನೀತಿ ಸಂಹಿತೆ ಆರಂಭವಾಗುವ ಮೊದಲೇ 100 ಕೋಟಿ ರೂ. ಗಡಿಯನ್ನು ದಾಟಿ ಹೋಗಿತ್ತು. ಇದೀಗ ಮಾದರಿ ನೀತಿ ಸಂಹಿತೆ ಜಾರಿಯಾದ 10 ದಿನಗಳಲ್ಲೇ 100 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ವಸ್ತು ಹಗೂ ನಗದನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯಲಾದ ಹಣ ಹಾಗೂ ವಸ್ತುಗಳು ಕೇವಲ ಪ್ರಾತಿನಿಧಿಕ ಅಷ್ಟೆ. ಇದಕ್ಕೂ ನೂರು ಪಟ್ಟು ಹಣ ನಿಜವಾಗಿ ಚುನಾವಣೆಯಲ್ಲಿ ಅಕ್ರಮವಾಗಿ ವೆಚ್ಚವಾಗುತ್ತದೆ. ವಶಕ್ಕೆ ಪಡೆದ ಹಣವನ್ನು, ವಸ್ತುಗಳನ್ನು ಚುನಾವಣಾ ಆಯೋಗ ಏನು ಮಾಡುತ್ತದೆ ಎನ್ನುವುದು ಬೇರೆ ಚರ್ಚೆಯ ವಿಚಾರ. ಆದರೆ ಇಲ್ಲಿ ಆಲೋಚಿಸಬೇಕಾಗಿರುವುದು, ಇಷ್ಟೊಂದು ಹಣದ ಹೊಳೆ ಹರಿವನ್ನು ತಡೆಯಲು ಚುನಾವಣೆ ಆಯೋಗಕ್ಕೆ ಸಾಧ್ಯವೇ ? ಕೇವಲ ಚುನಾವಣೆ ಸಮಯದಲ್ಲಿ ತನಗೆ ದೊರೆಯುವ ಆರು ವಾರಗಳ ಅಧಿಕಾರದಲ್ಲಿ ಇದೆಲ್ಲವನ್ನೂ ಆಯೋಗ ಮಾಡುತ್ತದೆ ಎಂಬುದನ್ನು ನಾವು ನಂಬುವುದಾದರೂ ಹೇಗೆ ? ಇದನ್ನು ಗಂಭೀರವಾಗಿ ಆಲೋಚಿಸಬೇಕಿದೆ.

ಭಾರತದ ಚುನಾವಣಾ ಆಯುಕ್ತರಾಗಿ ಕೆಲಸ ಮಾಡಿದವರಲ್ಲಿ ನವೀನ್ ಚಾವ್ಲಾ ಕೂಡ ಒಬ್ಬರು (21 ಏಪ್ರಿಲ್ 2009-29 ಜುಲೈ 2010). ಈ ಸಮಯದಲ್ಲಿ ಅವರು ಅನೇಕ ಕಾಲೇಜುಗಳಲ್ಲಿ ಚುನಾವಣೆ ಕುರಿತು ಉಪನ್ಯಾಸ ಹಾಗೂ ಸಂವಾದಕ್ಕೆ ತೆರಳುತ್ತಿದ್ದರು. ಬಹಳಷ್ಟು ಕಡೆಗಳಲ್ಲಿ ವಿದ್ಯಾರ್ಥಿಗಳು ಕೇಳುತ್ತಿದ್ದ ಪ್ರಶ್ನೆಯೆಂದರೆ, ʼಕ್ರಿಮಿನಲ್‌ಗಳು ರಾಜಕೀಯ ಪ್ರವೇಶಿಸುತ್ತಿರುವುದನ್ನು ತಡೆಯಲು ಚುನಾವಣಾ ಆಯೋಗ ಏಕೆ ಏನೂ ಮಾಡುತ್ತಿಲ್ಲ? ಕಾನೂನನ್ನು ಮುರಿಯುವವರೇ ಅದು ಹೇಗೆ ಕಾನೂನು ರೂಪಿಸುವ ಮಹನೀಯರಾಗಲು ಹೇಗೆ ಸಾಧ್ಯ? ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿರುವುದನ್ನು ಏಕೆ ತಡೆಯುತ್ತಿಲ್ಲ?” ಇದಕ್ಕೆ ಉತ್ತರಿಸುವ ಹೊತ್ತಿಗೆ ನವೀನ್ ಚಾವ್ಲಾ ಅವರಿಗೆ ಸಾಕುಬೇಕಾಗಿ ಹೋಗುತ್ತಿತ್ತು. ಚುನಾವಣಾ ಆಯೋಗಕ್ಕೆ ಸಾಕಷ್ಟು ಬೇರೆ ಅಧಿಕಾರಗಳಿವೆ, ಅವುಗಳನ್ನು ಚಲಾಯಿಸುತ್ತದೆ. ಆದರೆ ಕ್ರಿಮಿನಲ್‌ಗಳು ರಾಜಕೀಯ ಪ್ರವೇಶ ತಡೆಯಲು, ಪ್ರಜಾ ಪ್ರತಿನಿಧಿ ಕಾಯಿದೆಗೆ ತಿದ್ದುಪಡಿ ಆಗಬೇಕು, ಅದು ಮತ್ತೆ ಅದೇ ಜನಪ್ರಿನಿಧಿಗಳಿಂದ ಆಗಬೇಕು ಎಂದು ಹೇಳಿದರೆ ವಿದ್ಯಾರ್ಥಿಗಳಿಗೆ ಅದು ಅರ್ಥವಾಗುತ್ತಿರಲಿಲ್ಲ. ಕೆಲವೊಮ್ಮೆ ಅದು ಅರ್ಥವಾದರೂ ಅವರಿಗೆ ಈ ಉತ್ತರ ಸಮಾಧಾನ ನೀಡುತ್ತಿರಲಿಲ್ಲ. ಒಟ್ಟಾರೆ ಈ ವ್ಯವಸ್ಥೆ ಬಗ್ಗೆ ಅವರಲ್ಲಿ ಒಂದು ರೀತಿಯ ಆಕ್ರೋಶ ಮಡುಗಟ್ಟುತ್ತಿದ್ದದ್ದು ಕಾಣುತ್ತಿತ್ತು.

ಒಟ್ಟಾರೆ ಯುವ ಮನಸ್ಸುಗಳ ಸಂದೇಹ- “ನಮ್ಮ ಚುನಾವಣಾ ಆಯೋಗ ಒಂದು ರೀತಿಯಲ್ಲಿ ‘ಏಕ್ ದಿನ್ ಕಾ ಸುಲ್ತಾನ್’ ಅಷ್ಟೆ ?!

ಆಳದಲ್ಲಿ ಯುವ ಮನಸ್ಸುಗಳಲ್ಲಿ ಬಿತ್ತನೆಯಾಗಿರುವ ಈ ಪ್ರಶ್ನೆ ಮತ್ತು ಸಂದೇಹ, ಸತ್ಯಕ್ಕೆ ಸಮೀಪವೇ ಆಗಿವೆ. ಚುನಾವಣೆ ಸಮಯದಲ್ಲಿ ಆಯೋಗ ನಡೆಸುವ ದಾಳಿಗಳು, ಹಣವನ್ನು ವಶಕ್ಕೆ ಪಡೆಯುವುದರಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗುವುದಿಲ್ಲ ಹಾಗೂ ಇದರಿಂದ ಇಡೀ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತ ಆಗುವುದಿಲ್ಲ ಎನ್ನುವುದು ಗೊತ್ತಿರುವ ಸಂಗತಿಯೇ !

ಏಕೆಂದರೆ, ಇಡೀ ಚುನಾವಣೆಯಲ್ಲಿ ಹಣದ ಹೊಳೆ ಹರಿಯಲು ಕಾರಣ, ರಾಜಕೀಯದ ಅಪರಾಧೀಕರಣ ಹಾಗೂ ರಾಜಕೀಯದ ಬಂಡವಾಳೀಕರಣ. ಚುನಾವಣೆಗೂ ಮುನ್ನ ಕ್ರಿಮಿನಲ್‌ಗಳನ್ನು, ಬಂಡವಾಳಶಾಹಿಗಳನ್ನು ಅಧಿಕಾರದ ಮೊಗಸಾಲೆಗೆ ರೆಡ್ ಕಾರ್ಪೆಟ್ ಹಾಕಿ ಬರಮಾಡಿಕೊಳ್ಳಲಾಗುತ್ತಿದೆ. ಇಂಥವರು ಅಧಿಕಾರಕ್ಕೆ ಬಂದರೆ, ನಮ್ಮ ವ್ಯವಸ್ಥೆ ಹೇಗಿರಬೇಕು ಎಂಬ ನೀತಿ ನಿರೂಪಣೆಯನ್ನು ಅವರೇ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಾರೆ, ಮನಬಂದಂತೆ ರೂಪಿಸಿಕೊಳ್ಳುತ್ತಾರೆ. ಹಾಗಾಗಿಯೇ, ಹಣದ ಹೊಳೆ ಹರಿಯುತ್ತದೆ.

ಈ ರೀತಿ ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ಮಟ್ಟ ಹಾಕಲು ನ್ಯಾಯಾಲಯಗಳಿವೆ, ಜನಪ್ರತಿನಿಧಿಗಳದ್ದೇ ಅಪರಾಧ ಪ್ರಕರಣಗಳನ್ನು ತನಿಖೆ ನಡೆಸಲು ವಿಶೇಷ ನ್ಯಾಯಾಲಯಗಳಿವೆ, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರ ಭ್ರಷ್ಟಾಚಾರ ತಡೆಯಲು ಲೋಕಾಯುಕ್ತವಿದೆ. ಆದರೆ ಮಾರ್ಚ್ 2021ರವರೆಗಿನ ಅಂಕಿ ಅಂಶಗಳ ಪ್ರಕಾರ ಲೋಕಾಯುಕ್ತದಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿದ್ದವು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಸಂಸ್ಥೆಯನ್ನೇ ಬಹುತೇಕ ಮುಚ್ಚಿ, ತನ್ನ ಮೂಗಿನ ನೇರಕ್ಕೆ ಕೆಲಸ ಮಾಡುವಂತಹ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಯನ್ನು(ಎಸಿಬಿ) ಸ್ಥಾಪಿಸಲಾಯಿತು. ಇದನ್ನು ವಿರೋಧಿಸಿದ್ದ ಬಿಜೆಪಿ, ತಾನು ಅಧಿಕಾರಕ್ಕೆ ಬಂದ ಕೂಡಲೆ ಲೋಕಾಯುಕ್ತವನ್ನು ಮರುಜೀವಗೊಳಿಸುವುದಾಗಿ ಭರವಸೆ ನೀಡಿತು. ಆದರೆ ಅಧಿಕಾರಕ್ಕೆ ಬಂದ ನಂತರ ಅತ್ತ ಕಣ್ಣು ಹಾಯಿಸಲಿಲ್ಲ. ಕೊನೆಗೆ ನ್ಯಾಯಾಲಯವೇ ಎಸಿಬಿಯನ್ನು ರದ್ದು ಮಾಡಿ, ಲೋಕಾಯುಕ್ತಕ್ಕೆ ಅಧಿಕಾರ ನೀಡಿ ಎಂದು ಚಾಟಿ ಬೀಸಿದಾಗ ಲೋಕಾಯುಕ್ತ ಮತ್ತೆ ಜೀವ ಪಡೆಯಿತು.

ಇದನ್ನೂ ಓದಿ: ವಿಸ್ತಾರ ಅಂಕಣ: ಸಿಟಿ ಜನರೇಕೆ ಹೆಚ್ಚು ವೋಟ್ ಹಾಕ್ತಾ ಇಲ್ಲ? ಆನ್‌ಲೈನ್ ವೋಟಿಂಗ್ ಬಗ್ಗೆ ಆಲೋಚಿಸಲು ಇದು ಸಕಾಲ!

ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ಮುಚ್ಚಿತ್ತು, ನಾವು ಮರುಜೀವಗೊಳಿಸಿದ್ದೇವೆ ಎಂದು ಈಗಿನ ಸರ್ಕಾರ ಬಢಾಯಿ ಕೊಚ್ಚಿಕೊಳ್ಳುತ್ತದೆ. ಲೋಕಾಯುಕ್ತಕ್ಕೆ ಬಲ ನೀಡಿದ ಕೆಲವೇ ತಿಂಗಳಲ್ಲಿ ಬಿಜೆಪಿಯ ಶಾಸಕ ಹಾಗೂ ಆತನ ಪುತ್ರನೇ ಕೋಟಿ ಕೋಟಿ ಭ್ರಷ್ಟಾಚಾರದ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಲೋಕಾಯುಕ್ತವನ್ನು ನಿರ್ಬಲಗೊಳಿಸದೇ ಇದ್ದರೆ ಆಗಲೂ ಇಂತಹ ಅನೇಕ ಮಾಡಾಳ್ ವಿರೂಪಾಕ್ಷಪ್ಪಗಳು ಸಿಕ್ಕಿ ಬೀಳುತ್ತಿದ್ದರೇನೊ.

ಹೀಗೆ ಕ್ರಿಮಿನಲ್‌ಗಳು, ಭ್ರಷ್ಟರನ್ನು ಐದು ವರ್ಷ ರಕ್ಷಣೆ ನೀಡಿ, ಕೇವಲ 45 ದಿನ ಅಧಿಕಾರದಲ್ಲಿರುವ ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಹೇಗೆ ಸಾಧ್ಯ? 20018 ಹಾಗೂ 2019ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ತಲಾ ಅಂದಾಜು 4 ಸಾವಿರ ಚುನಾವಣಾ ಅಕ್ರಮಗಳ ಪ್ರಕರಣಗಳು ದಾಖಲಾದವು. ಚುನಾವಣಾ ಆಯೋಗವೂ ಎಫ್ಐಆರ್ ದಾಖಲಿಸುತ್ತದೆ, ಚುನಾವಣೆ ನಡೆಸುತ್ತದೆ. ಚುನಾವಣಾ ಆಯೋಗದಲ್ಲಿ ಶಾಶ್ವತ ನೌಕರರಿರುವುದು ಬೆರಳೆಣಿಕೆಯಷ್ಟು. ಚುನಾವಣೆ ನಡೆಸುವ ಸಮಯದಲ್ಲಿ ಪೊಲೀಸ್, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಮೂಲಕ ಗುತ್ತಿಗೆಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತದೆ. ಅವರೆಲ್ಲರೂ ಚುನಾವಣೆ ನಡೆಸುತ್ತಾರೆ, ಪ್ರಕರಣ ದಾಖಲಿಸುತ್ತಾರೆ. ಚುನಾವಣೆ ನಂತರ ಮತ್ತೆ ತಮ್ಮ ಇಲಾಖೆಗೆ ಮರಳುತ್ತಾರೆ. ಅಲ್ಲಿಗೆ ಚುನಾವಣೆ ಸಮಯದಲ್ಲಿ ದಾಖಲಾಗಿದ್ದ ಪ್ರಕರಣಗಳೂ ಸಾಮಾನ್ಯ ಪೊಲೀಸ್ ವ್ಯವಸ್ಥೆಗೆ ಬಂದು ನಿಲ್ಲುತ್ತದೆ, ಯಥಾ ಪ್ರಕಾರ ಅಲ್ಲಿಯೂ ನ್ಯಾಯದಾನ ವಿಳಂಬವಾಗುತ್ತದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಮತದಾರರು ʼದೇವರ’ ರೀತಿ ಹಕ್ಕು ಚಲಾಯಿಸುತ್ತಾರ? ʼದೇವರʼ ರೀತಿ ಸುಮ್ಮನೆ ಕೂರುತ್ತಾರ?

ಚುನಾವಣಾ ಆಯೋಗ ಹಲ್ಲು ಕಿತ್ತ ಹಾವಾಗಿದೆ, ಶೇಷನ್ ರೀತಿ ಮತ್ತೊಬ್ಬ ಚುನಾವಣಾ ಆಯುಕ್ತ ಭಾರತದಲ್ಲಿ ಬರಬೇಕು ಎಂಬ ಹಳಹಳಿಕೆಗಳನ್ನು ಮೊದಲ ಬಿಡಬೇಕು. ಯಾರೋ ಒಬ್ಬ ಮಹಾಪುರುಷ ಅವತಾರವೆತ್ತಿ ಬಂದು ನಮ್ಮನ್ನು ರಕ್ಷಣೆ ಮಾಡುತ್ತಾನೆ ಎಂದು ಕಾಯುತ್ತಾ ಕೂರುವ ಅಸಹಾಯಕತೆ ಸರಿಯಲ್ಲ. ಚುನಾವಣೆಗೆ ಐದು ವರ್ಷ ಮೊದಲಿನಿಂದಲೂ ನಡೆಯುವ ಭ್ರಷ್ಟಾಚಾರ, ಅನಾಚಾರಗಳನ್ನು ಲೋಕಾಯುಕ್ತದಂತಹ ಸಂಸ್ಥೆಗಳು ತಡೆಯಬೇಕು.

ಜನರೇ ಭ್ರಷ್ಟರಾಗಿ ಹಣ ತೆಗೆದುಕೊಂಡು ಮತ ನೀಡಿದರೆ ನಾವೇನು ಮಾಡುವುದು? ಜನರು ಹಣವನ್ನೇ ತೆಗೆದುಕೊಳ್ಳದಿದ್ದರೆ ಎಲ್ಲವೂ ತನ್ನಿಂತಾನೆ ನಿಂತು ಹೋಗುತ್ತದೆ ಎಂದು ಉಪದೇಶ ಮಾಡಬಾರದು. ಸಮಾಜದಲ್ಲಿ ಒಳಿತಿನ ಜತೆಗೆ ಕೆಡುಕು ಇದ್ದೇ ಇರುತ್ತದೆ. ಇದೇ ಕಾರಣಕ್ಕೆ ಶಾಶ್ವತವಾದ ಪೊಲೀಸ್ ವ್ಯವಸ್ಥೆ ಇದೆ. ಎಲ್ಲವನ್ನೂ ಜನರ ಮೇಲೆ ಹಾಕಿ ತಮ್ಮ ಹೊಣೆಯನ್ನು ಮರೆಯದೇ ಕಾರ್ಯನಿರ್ವಹಿಸಿದರೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಸಾಧ್ಯ ಎನ್ನುವುದನ್ನು ಅರಿಯಬೇಕು. ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ತ್ವರಿತವಾಗಿ ನ್ಯಾಯದಾನ ಮಾಡುವ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ ಮಾತ್ರ ಭಾರತದ ಪ್ರಜಾಪ್ರಭುತ್ವದ ಆತ್ಮ ಎನ್ನಬಹುದಾದ ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗುತ್ತವೆ.

ಹರುಷದ ಕೂಳಿಗೆ ವರುಷದ ಕೂಳನ್ನು ಮರೆತರು ಎಂದು ನಮ್ಮ ಕಡೆ ಒಂದು ನಾಣ್ಣುಡಿ ಇದೆ. ನಾವು ಚುನಾವಣೆಯ ಹೊಸ್ತಿಲಲ್ಲಿ ರಾಜಕಾರಣಿಗಳ ಮಾತು, ನೀಡುವ ಭರವಸೆ, ಕೊಡುವ ಕೊಡುಗೆಗೆ ಮೈ ಮರೆತರು, ಮುಂದಿನ ಐದೂ ವರುಷ ಸಂಕಷ್ಟ ಕಟ್ಟಿಟ್ಟ ಬುತ್ತಿಯಷ್ಟೇ. ರಾಜಕೀಯ ಅಪರಾಧೀಕರಣ ಮಾತ್ರವಲ್ಲ, ರಾಜಕೀಯದ ಬಂಡವಾಳೀಕರಣವೂ ಅಪಾಯದ ಗಂಟೆಯೆ. ಶಾಸನ ರೂಪಿಸುವ ಮನೆಗಳಿಗೆ ಸಿರಿವಂತರು ಬೇಕಿಲ್ಲ. ಜನಸಾಮಾನ್ಯರ ಬವಣೆಯನ್ನು ಅರಿತವರು ಬೇಕು. ಜನರೂ ಯೋಚಿಸಬೇಕು.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ

Exit mobile version