Site icon Vistara News

ವಿಸ್ತಾರ ಅಂಕಣ: ಗ್ಯಾರಂಟಿ ಮರೆಮಾಚಲು ʼಗೋಹತ್ಯೆʼ ಗುರಾಣಿಯಾಗಬೇಕೆ?

karnataka congress govt oath taking

ತುರ್ಕಿಯ ಕುರಿತು ಬ್ರಿಟಿಷರ ಧೋರಣೆ ವಿರುದ್ಧ ಹಾಗೂ ಸುನ್ನಿ ಮುಸಲ್ಮಾನರ ಪರಮೋಚ್ಛ ನಾಯಕ ಎಂದು ಪರಿಗಣಿತನಾಗಿದ್ದ ಖಲೀಫನನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂಬ ವಿಚಾರ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಪ್ರಬಲವಾಗಿಯೇ ಪ್ರತಿಧ್ವನಿಸಿತು. ಅದರ‌ ಹೆಸರು ಖಿಲಾಫತ್ ಆಂದೋಲನ.

1919-24ರ ನಡುವಿನ ಈ ಅವಧಿಯಲ್ಲಿಯೇ ಭಾರತದಲ್ಲಿ ಮಹತ್ವದ ಹಾಗೂ ಘೋರ ಘಟನಾವಳಿಗಳು ನಡೆದವು. ಮುಸ್ಲಿಂ ಸಮುದಾಯವನ್ನು ಬೆಂಬಲಿಸಿ ಹಿಂದುಗಳು ಖಿಲಾಫತ್ ಆಂದೋಲನದಲ್ಲಿ ಭಾಗವಹಿಸಿ ಎಂದು ಮಹಾತ್ಮಾ ಗಾಂಧೀಜಿ ಕರೆ ನೀಡಿದರು. ಹೀಗಿದ್ದರೂ, ಕೇರಳದಲ್ಲಿ ಮಾಪಿಳ್ಳೆಗಳು ಹಿಂದುಗಳ ವಿರುದ್ಧವೇ ದೌರ್ಜನ್ಯವೆಸಗಿ ಅತ್ಯಾಚಾರ, ಅನಾಚಾರ ಮಾಡಿದರು.

ಇತಿಹಾಸದ ಗರ್ಭದಲ್ಲಿ ಅವಿತಿಟ್ಟಿದ್ದ ಈ ಸತ್ಯವನ್ನು ಮೋಪ್ಲಾ ದಂಗೆಗಳು ಎಂಬ ಹೆಸರಿನಲ್ಲಿ ಹೊರ ಜಗತ್ತಿಗೆ ಪರಿಚಯಿಸಿದವರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್. ಈ ವಾರದ ಅಂಕಣ ಬರಹ ಪ್ರಕಟವಾಗುವ ಮರುದಿನ, ಅಂದರೆ ಮೇ 28ರಂದು ಸಾವರ್ಕರ್ ಜಯಂತಿ. ಈ ಸಂದರ್ಭದಲ್ಲಿ ಅವರನ್ನು ನೆನೆಯೋಣ. ಆದರೆ ಈ ಲೇಖನ ಸಾವರ್ಕರರಿಗೆ ಸಂಬಂಧಿಸಿದ್ದಲ್ಲ. ಆದರೆ, ಹಿಂದೂಗಳ ಉದಾತ್ತ ಧೋರಣೆಗೆ ಸಂಬಂಧಿಸಿದ್ದು !

ಅಂದಹಾಗೆ, ಇಡೀ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ, ಅದ್ಯಾವುದೋ ದೇಶದ ಖಲೀಫನಿಗೆ ಸಂಬಂಧಿಸಿದ ಖಿಲಾಫತ್ ಹೋರಾಟ ಎದುರಾಯಿತು. ಹಿಂದೂಗಳು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮುಸ್ಲಿಂ ಸಮುದಾಯದ ನಾಯಕರುಗಳಾದ ಹಕೀಂ ಅಜಮಲ್ ಖಾನ್ ಹಾಗೂ ಆಸಫ್ ಅಲಿ ಮುಂತಾದವರು ಬಯಸಿದರು. ಇದಕ್ಕಾಗಿ ಸ್ವಾಮಿ ಶ್ರದ್ಧಾನಂದರ ಜತೆಗೆ ಮಹಾತ್ಮಾ ಗಾಂಧಿಯವರನ್ನೂ ಸಭೆಯೊಂದಕ್ಕೆ ಆಹ್ವಾನಿಸಲಾಯಿತು. ಮುಸ್ಲಿಮರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಹಿಂದೂಗಳು ಏಕೆ ಬೆಂಬಲ ಕೊಡುತ್ತಾರೆ? ಅವರಿಗೆ ಉಪಯೋಗ ಆಗುವ ಯಾವುದಾದರೂ ಸಾರ್ವಜನಿಕ ವಿಷಯವನ್ನೂ ಈ ಸಭೆಯಲ್ಲಿ ಸೇರಿಸಿ ಅವರನ್ನು ಸಂತೋಷಪಡಿಸೋಣ ಎಂದು ಸಭೆಯ ಆಯೋಜಕರಾದ ಮುಸ್ಲಿಂ ಮುಖಂಡರು ಆಲೋಚಿಸಿದರು. ಆಗ ಅವರಿಗೆ ಹೊಳೆದಿದ್ದೇ ಗೋ ಹತ್ಯೆ ನಿಷೇಧ. ಈ ವಿಷಯ ಹೇಳಿದರೆ ಹಿಂದುಗಳು ಖುಷಿಯಾಗುತ್ತಾರೆ ಎಂದು ಅವರು ಭಾವಿಸಿದ್ದರು.

ಇದಕ್ಕಾಗಿ ಮಹಾತ್ಮಾ ಗಾಂಧೀಜಿಯವರನ್ನು ಸಭೆಗೆ ಆಹ್ವಾನಿಸಲು ಬರೆದ ಪತ್ರದಲ್ಲಿ ಹೀಗೆ ಇತ್ತು; “ಈ ಸಮ್ಮೇಳನದಲ್ಲಿ ಖಿಲಾಫತ್ ಪ್ರಶ್ನೆ ಮಾತ್ರವಲ್ಲ, ಗೋರಕ್ಷಣೆಯ ಪ್ರಶ್ನೆಯೂ ಚರ್ಚಿಸಲ್ಪಡುವುದು. ಗೋವಿನ ಪ್ರಶ್ನೆಯನ್ನು ತೀರ್ಮಾನಿಸಲು ಇದು ಸುವರ್ಣ ಸಂಧಿ”

ಗೋ ಸಂರಕ್ಷಣೆ ಎನ್ನುವುದು ಗಾಂಧೀಜಿಯವರ ಹೃದಯಕ್ಕೆ ಹತ್ತಿರದ ವಿಚಾರ. ಈ ವಿಚಾರವನ್ನು ಪ್ರಸ್ತಾಪಿಸಿದರೆ ಅವರು ಒಪ್ಪಿ ಖಿಲಾಫತ್ ಆಂದೋಲನಕ್ಕೆ ಬೆಂಬಲ ನೀಡುತ್ತಾರೆ ಎನ್ನುವುದು ಮುಸ್ಲಿಮರ ಉದ್ದೇಶವಾಗಿತ್ತು. ಆದರೆ ಈ ಪ್ರಸ್ತಾಪವನ್ನು ಗಾಂಧೀಜಿ ಸ್ಪಷ್ಟ ಶಬ್ದಗಳಲ್ಲಿ ತಿರಸ್ಕರಿಸಿದರು. ಈ ಕುರಿತು ಮುಸ್ಲಿಂ ಮುಖಂಡರಿಗೆ ಪತ್ರ ಬರೆದರು. “ನಿಜಕ್ಕೂ ನಿಮಗೆ ಅನ್ಯಾಯ ಆಗಿದೆ ಎನ್ನುವುದಾದರೆ ಅದಕ್ಕೆ ಹಿಂದೂಗಳು ಬೆಂಬಲ ನೀಡುತ್ತಾರೆ. ಆದರೆ ಹಿಂದುಗಳು ಬೆಂಬಲ ಪಡೆಯಬೇಕು ಎಂಬ ಕಾರಣಕ್ಕೆ ಗೋ ಸಂರಕ್ಷಣೆಯ ವಿಚಾರವನ್ನು ಈ ಸಭೆಗೆ ತರುವುದು ಬೇಡ. ಖಿಲಾಫತ್ ಮತ್ತು ಗೋರಕ್ಷಣೆ ವಿಚಾರವನ್ನು ಬೆರೆಸಬಾರದು. ಎರಡೂ ಪ್ರಶ್ನೆಗಳ ಸಮಾಲೋಚನೆಯನ್ನು ವ್ಯಾಪಾರಿ ದೃಷ್ಟಿಯಿಂದ ನಡೆಸಬಾರದು. ಪ್ರತಿಯೊಂದು ಪ್ರಶ್ನೆಯನ್ನೂ ಅದರದರ ಯೋಗ್ಯತೆಯ ಮೇಲೆ ಬೇರೆಬೇರೆಯಾಗಿ ಪರಿಗಣಿಸಬೇಕು” ಎಂದು ಆಯೋಜಕರಿಗೆ ಪತ್ರದಲ್ಲಿ ತಿಳಿಹೇಳಿದರು.

In the most of the cases RSS members are victims, not criminals: Says Supreme Court

ಮುಂದೆ ಅವರು ಸಮ್ಮೇಳನದಲ್ಲಿ ಭಾಗವಹಿಸಿದಾಗಲೂ ಇದೇ ಮಾತನ್ನು ಪುನರುಚ್ಛರಿಸಿದರು. “ಮುಸಲ್ಮಾನರಿಗೆ ಸಹಾಯ ಮಾಡುವ ಸಂದರ್ಭವನ್ನು ಉಪಯೋಗಿಸಿಕೊಂಡು ಗೋಹತ್ಯೆ ನಿಷೇಧ ಮಾಡುವುದು ಸರಿಯಲ್ಲ. ಇದರ ಬದಲು ಮುಸಲ್ಮಾನರು ಹಿಂದೂಗಳ ಭಾವನೆಯನ್ನು ಪ್ರಾಮಾಣಿಕವಾಗಿ ಗೌರವಿಸಬೇಕು. ನಾವೂ, ಹಿಂದುಗಳೂ ಒಂದೇ ನೆಲದ ಮಕ್ಕಳು. ಅವರು ಆರಾಧಿಸುವ ಗೋವನ್ನು ಹತ್ಯೆ ಮಾಡುವುದಿಲ್ಲ. ಇದು ನಮ್ಮ ಕರ್ತವ್ಯ ಎಂದು ಸ್ವಂತ ಇಚ್ಛೆಯಿಂದಲೇ ಗೋಹತ್ಯೆಯನ್ನು ನಿಲ್ಲಿಸಿದರೆ ಅದು ಉತ್ತಮ ವಿಚಾರ. ಇದು ಮುಸಲ್ಮಾನರಿಗೆ ಗೌರವವನ್ನುಂಟುಮಾಡುತ್ತದೆ. ಇದು ತಮ್ಮ ಕರ್ತವ್ಯ ಎಂದು ಮುಸಲ್ಮಾನರು ಭಾವಿಸಬೇಕು. ಹಿಂದುಗಳು ಖಿಲಾಫತ್‌ನಲ್ಲಿ ಸಹಾಯ ಮಾಡಲಿ ಬಿಡಲಿ ಅವರು ಗೋವಧೆಯನ್ನು ನಿಲ್ಲಿಸಬೇಕು. ಈ ವಿಷಯವನ್ನು ವ್ಯಾಪಾರಿ ಮನೋಭಾವನೆಯಿಂದ ನೋಡುವುದು ಬೇಡ” ಎಂದರು.

ಗಾಂಧೀಜಿ ತಮ್ಮ ಹೃದಯಕ್ಕೆ ಹತ್ತಿರವಾಗಿದ್ದ ವಿಷಯದಲ್ಲೂ ಇಂತಹ ಕಠಿಣ ನಿಲುವನ್ನು ತಳೆದರು. ಮುಸಲ್ಮಾನರ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಬಲವಂತವಾಗಿ ಗೋಹತ್ಯೆ ನಿಷೇಧದ ವಾಗ್ದಾನ ಪಡೆಯಬಹುದಾಗಿತ್ತು. ಆದರೆ ಸನಾತನಿ ಗಾಂಧೀಜಿ ಹಾಗೆ ಮಾಡಲಿಲ್ಲ. ಮುಸಲ್ಮಾನದ ಮೇಲೆ ಮಾತ್ರವಲ್ಲ, ಒಟ್ಟಾರೆ ದೇಶದ ಮೇಲೆಯೂ ಗೋಹತ್ಯಾ ನಿಷೇಧವನ್ನು ಹೇರಲಿಲ್ಲ. ಗೋಹತ್ಯೆ ತಡೆಯುವುದು ಹಾಗೂ ಗೋಸಂರಕ್ಷಣೆಯನ್ನು ಸಂವಿಧಾನದ ಮುಖ್ಯಭಾಗದಲ್ಲೇ ಸೇರಿಸಬೇಕು ಎಂದಿದ್ದರೂ, ಇನ್ನೂ ದೇಶದಲ್ಲಿ ಈ ಕುರಿತು ಒಮ್ಮತ ಮೂಡಲಿ ಎಂಬ ಕಾರಣಕ್ಕೆ ನಿರ್ದೇಶಕ ತತ್ವಗಳಲ್ಲಿ ಇದನ್ನು ಸೇರಿಸಲಾಯಿತು. ತಳಿಗಳನ್ನು ಸಂರಕ್ಷಿಸುವ ಸಲುವಾಗಿ ಹಸುಗಳ ಮತ್ತು ಕರುಗಳ ಹಾಗೂ ಇತರ ಹಾಲು ಕೊಡುವ ಮತ್ತು ಭಾರ ಎಳೆಯುವ ಜಾನುವಾರುಗಳ ವಧೆಯನ್ನು ನಿಷೇಧಿಸುವುದಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳತಕ್ಕದ್ದು ಎಂದು ತಿಳಿಸಲಾಯಿತು.

ಇಷ್ಟೆಲ್ಲ ದೀರ್ಘ ಪೀಠಿಕೆ ಏಕೆ ಬೇಕಾಯಿತು ಎಂದರೆ ಇಂದಿನ ಅಜ್ಞಾನದ ಕಾರಣಕ್ಕೆ. ಈಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬದಲಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೇ 13ರಂದು ಫಲಿತಾಂಶ ಹೊರಬಂದು ಮೇ 20ರಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ 8 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ, ಇನ್ನೂ ಯಾರಿಗೂ ಖಾತೆಗಳ ಹಂಚಿಕೆಯೂ ಆಗಿಲ್ಲ. ಆದರೆ ಸರ್ಕಾರದ ಭಾಗವಾದ ಸಚಿವರುಗಳು ಪುಂಖಾನುಪುಂಖವಾಗಿ ನಾಲಗೆಯನ್ನು ಹರಿಬಿಡುತ್ತಿದ್ದಾರೆ. ಬಿಜೆಪಿ ಸರ್ಕಾರ ಮಾಡಿದ ಪಠ್ಯಪುಸ್ತಕ ಪರಿಷ್ಕರಣೆ, ಗೋಹತ್ಯೆ ನಿಷೇಧ ಸೇರಿದಂತೆ ಎಲ್ಲವನ್ನೂ ಹಿಂಪಡೆಯಲಾಗುತ್ತದೆ. ಆಗತ್ಯಬಿದ್ದರೆ ಬಜರಂಗದಳವನ್ನಷ್ಟೆ ಅಲ್ಲ, ಆರ್‌ಎಸ್ಎಸ್ ಅನ್ನೂ ನಿಷೇಧಿಸಲಾಗುವುದು ಎಂದು ಸಚಿವರೊಬ್ಬರು ಪದೇಪದೆ ಹೇಳುತ್ತಿದ್ದಾರೆ.

ಇಲ್ಲಿ ಅಜ್ಞಾನದ ವಿಚಾರ ಎಂದರೆ, ಗೋಹತ್ಯೆ ನಿಷೇಧ ಎನ್ನುವುದು ತನ್ನ ಚುನಾವಣಾ ವಿಷಯ, ವೋಟು ತಂದುಕೊಡುವ ಅಜೆಂಡಾ ಎಂದು ಬಿಜೆಪಿಯ ಕೆಲ ನಾಯಕರು ಭಾವಿಸಿದ್ದಾರೆ. ಅದೇ ರೀತಿ, ಗೋಹತ್ಯೆ ನಿಷೇಧ ಎನ್ನುವುದು ಬಿಜೆಪಿಯ ಅಜೆಂಡಾ ಎಂದು ಭಾವಿಸಿರುವ ಕಾಂಗ್ರೆಸ್ ಸಹ, ತಾನು ಅಧಿಕಾರಕ್ಕೆ ಬಂದರೆ ಈ ಕಾನೂನನ್ನು ಹಿಂಪಡೆಯುವೆ ಎನ್ನುತ್ತಿದೆ. ಬಿಜೆಪಿಯಲ್ಲಿ ಕೆಲವರಿಗೆ ಮಾತ್ರ ಅಜ್ಞಾನವಿದ್ದರೆ, ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಇದೆ.

In the most of the cases RSS members are victims, not criminals: Says Supreme Court

ಗೋಹತ್ಯೆ ನಿಷೇಧ ಎನ್ನುವುದು ಭಾರತೀಯ ಸಂವಿಧಾನದ ನಿರ್ದೇಶಕ ತತ್ವಗಳಲ್ಲೇ ಅಡಕವಾಗಿದೆ. ಕೃಷಿಗೆ ಪೂರಕವಾದ ಜಾನುವಾರಾದ್ದರಿಂದ ಗೋವನ್ನು ಹತ್ಯೆ ಮಾಡಬಾರದು ಎಂದು ಬ್ರಿಟಿಷ್ ಕಾಲದಿಂದಲೂ ವಿವಿಧ ಕಾನೂನುಗಳಿವೆ. ಆದರೆ ತಾನು ಈ ದೇಶದ ಅತ್ಯಂತ ಹಳೆಯ ಪಕ್ಷ, ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್‌ಗೆ ತನ್ನ ಇತಿಹಾಸವೇ ಮರೆತುಹೋಗಿದೆ. ತನ್ನದೇ ಪಕ್ಷ ಜಾರಿಗೆ ತಂದ ಯೋಜನೆಗಳನ್ನು, ನೀತಿಗಳನ್ನು, ಬಿಜೆಪಿ ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುತ್ತದೆ ಎಂಬ ಒಂದೇ ಕಾರಣಕ್ಕೆ ವಿರೋಧಿಸಲು ಮುಂದಾಗಿದೆ. ಇದರಲ್ಲಿ ಗೋಹತ್ಯೆ ನಿಷೇಧವೂ ಒಂದು. ಕಾಂಗ್ರೆಸ್ ಈಗ ದೇಶದ ಮಟ್ಟದಲ್ಲಿ ಹೊಂದಿರುವ ಅಧಃಪತನಕ್ಕೆ ಈ ಅಜ್ಞಾನವೂ ಒಂದು ಕಾರಣ.

ಗೋಹತ್ಯೆ ನಿಷೇಧವೇ ಇರಲಿ, ಪಠ್ಯ ಪರಿಷ್ಕರಣೆಯೇ ಇರಲಿ. ಎಲ್ಲವನ್ನೂ ವ್ಯಾಪಾರಿ ದೃಷ್ಟಿಕೋನದಲ್ಲಿ ಏಕೆ ನೋಡಬೇಕು? ಮುಸ್ಲಿಂ ಸಮುದಾಯ ಈ ಬಾರಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿದೆ ಎನ್ನುವುದು ನಿರ್ವಿವಾದ. ಆದರೆ ಆ ಸಮುದಾಯದ ಏಳಿಗೆಗೆ ಏನು ಮಾಡಿದರೆ ಆ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರುತ್ತದೆ ಎಂದು ಆಲೋಚಿಸುವುದು ಕಾಂಗ್ರೆಸ್ ಕರ್ತವ್ಯ. ತನಗೆ ಮತ ನೀಡಿರುವ ಮತದಾರರನ್ನು ಉದ್ಧಾರ ಮಾಡಬೇಕಾಗಿರುವುದು ಕಾಂಗ್ರೆಸ್ ಪಕ್ಷದ ಆದ್ಯತೆಯಾಗಬೇಕು. ಆದರೆ ಆ ಸಮುದಾಯವನ್ನು ಓಲೈಸಿ, ಮತ್ತಷ್ಟು ಹಿಂದಕ್ಕೆ ತಳ್ಳುವ ಹೆಜ್ಜೆಗಳನ್ನು ಇಡುವಂತೆ ಕಾಣುತ್ತಿದೆ ಸರ್ಕಾರ. ಮುಸ್ಲಿಂ ಸಮುದಾಯದಲ್ಲಿ ಕೆಲವರು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಗೋಹತ್ಯೆ ನಿಷೇಧವನ್ನು ಹಿಂಪಡೆಯುವುದಾದರೆ ಸಂವಿಧಾನದ ನಿರ್ದೇಶಕ ತತ್ವಕ್ಕೆ, ಮಹಾತ್ಮ ಗಾಂಧೀಜಿಗೆ ಏನು ಬೆಲೆ ನೀಡುತ್ತಿದೆ ಕಾಂಗ್ರೆಸ್?

ಬಿಜೆಪಿ ಅವಧಿಯಲ್ಲಿ ನಡೆಸಿದ ಪಠ್ಯಪುಸ್ತಕ ಪರಿಷ್ಕರಣೆಯನ್ನು ರದ್ದುಪಡಿಸಲಾಗುತ್ತದೆ ಎಂದೂ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಇದಕ್ಕೆ ಶಿಕ್ಷಣ ತಜ್ಞರು ಎನ್ನಿಸಿಕೊಂಡ ಕೆಲವರೂ ಒತ್ತಾಯ ಮಾಡುತ್ತಿದ್ದಾರೆ. ಈಗಾಗಲೆ ಅನೇಕ ಕಡೆಗಳಲ್ಲಿ ಶಾಲೆ ಆರಂಭವಾಗಿದೆ. ಇನ್ನು ನಾಲ್ಕೈದು ದಿನದಲ್ಲಿ ಸಂಪೂರ್ಣ ಶಾಲೆಗಳು ಆರಂಭವಾಗುತ್ತವೆ. ಈ ಸಮಯದಲ್ಲಿ ಪಠ್ಯ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳುವುದು ಸರಿಯೆ? ಹಿಜಾಬ್ ವಿಚಾರವನ್ನು ಮುಸ್ಲಿಂ ಸಮಾಜದ ಕೆಲವರು ಇಷ್ಟಪಡುತ್ತಿರುವಂತೆ ನಿರ್ಧಾರ ಮಾಡಬೇಕೆ? ಅಥವಾ ನಿಜವಾಗಿಯೂ ಈಗಿನ ಜಗತ್ತಿನ ಅವಶ್ಯಕತೆಗೆ ತಕ್ಕಂತೆ ನಿರ್ಧಾರ ಮಾಡಬೇಕೆ ಎಂಬ ಕುರಿತೂ ಸರ್ಕಾರದಲ್ಲಿ ಸ್ಪಷ್ಟತೆ ಇದ್ದಂತಿಲ್ಲ. ಇನ್ನು, ಅನವಶ್ಯಕವಾಗಿ ಬಜರಂಗದಳ ಹಾಗೂ ಆರ್‌ಎಸ್ಎಸ್ ನಿಷೇಧದ ಮಾತನ್ನು ಆಡುತ್ತಿರುವುದಾದರೂ ಏತಕ್ಕೆ?

In the most of the cases RSS members are victims, not criminals: Says Supreme Court

ನಿಜಕ್ಕೂ ರಾಜ್ಯ ಸರ್ಕಾರಕ್ಕೆ ಈ ಅಧಿಕಾರವಾದರೂ ಇದೆಯೇ? ಇದನ್ನಾದರೂ ಆಲೋಚನೆ ಮಾಡಬೇಕಲ್ಲವೇ? ಆರ್‌ಎಸ್ಎಸ್ 1925ರಲ್ಲಿ ಆರಂಭವಾಗಿ ಇನ್ನು 2 ವರ್ಷದಲ್ಲಿ ಶತಮಾನೋತ್ಸವ ಆಚರಿಸುವ ಸಂಘಟನೆ. ಭಾರತವಷ್ಟೆ ಅಲ್ಲದೆ ವಿದೇಶಗಳಲ್ಲೂ ವಿವಿಧ ರೂಪಗಳಲ್ಲಿ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಈ ಹಿಂದೆ ಮೊದಲಿಗೆ ಗಾಂಧಿ ಹತ್ಯೆ ಸಂದರ್ಭದಲ್ಲಿ, ನಿಷೇಧ, ನಿರ್ಬಂಧಕ್ಕೆ ಒಳಗಾಗಿದ್ದರೂ ನಂತರ ಕಾನೂನಾತ್ಮಕವಾಗಿ ಹೋರಾಡಿ ನಡೆಯುತ್ತಿರುವ ಸಂಘಟನೆ. ಹಾಗೆಂದು ಈ ಸಂಘಟನೆಯ ಸಿದ್ಧಾಂತವನ್ನು ಎಲ್ಲರೂ ಒಪ್ಪಲೇಬೇಕು, ಅದನ್ನು ಪ್ರಶ್ನೆಯೇ ಮಾಡಬಾರದು ಎಂದು ಹೇಳುತ್ತಿಲ್ಲ. ಆದರೆ ನಮಗೆ ಆ ಸಿದ್ಧಾಂತ ಇಷ್ಟವಿಲ್ಲ ಎಂಬ ಕಾರಣಕ್ಕೆ ನಿಷೇಧವನ್ನೇ ಮಾಡಬೇಕು ಎನ್ನುವುದು ಸರಿಯೇ? ಗಾಂಧೀ ವಿಚಾರಗಳು ತನಗೆ ಹಿಡಿಸಲಿಲ್ಲ, ಅದು ದೇಶಕ್ಕೆ ಮಾರಕ ಎಂದು ತಾನು ಭಾವಿಸಿದ ಕೂಡಲೆ ಅವರನ್ನು ಕೊಂದುಬಿಡಬೇಕೆಂಬ ಆಲೋಚನೆ ಮಾಡಿದ ನಾಥೂರಾಮ್ ಗೋಡ್ಸೆಗೂ ಈ ಆಲೋಚನೆಗೂ ಏನು ವ್ಯತ್ಯಾಸ ಉಳಿಯುತ್ತದೆ?

ಪೊಲೀಸರು ಆಯುಧ ಪೂಜೆಯ ದಿನ ಕೇಸರಿ ಶಲ್ಯ ಅಥವಾ ಅಂಗಿಯನ್ನು ಧರಿಸಿದ್ದು ಹೇಗೆ ಸಂವಿಧಾನಕ್ಕೆ ವಿರುದ್ಧವಾಗುತ್ತದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು. ದೇಶದ ತ್ರಿವರ್ಣ ಧ್ವಜದಲ್ಲಿ ಕೇಸರಿ ಬಣ್ಣವಿದೆ. ಹಾಗೆ ಬಟ್ಟೆ ಧರಿಸಿದ ಪೊಲೀಸರು ಯಾರ ಮೇಲಾದರೂ ದಾಳಿ ಮಾಡಿದ್ದಾರೆಯೇ? ತಮ್ಮ ಪಾಡಿಗೆ ಕುಟುಂಬದೊಂದಿಗೆ ಸಂತಸಪಟ್ಟಿದ್ದರು. ಇದೊಂದೇ ವಿಷಯ ಇಟ್ಟುಕೊಂಡು, ʼಕೇಸರೀಕರಣಕ್ಕೆ ಅವಕಾಶ ನೀಡುವುದಿಲ್ಲʼ ಎಂದು ಅವರನ್ನೇ ಬೆದರಿಸಲು ಹೋಗುವುದು ಜನಪ್ರತಿನಿಧಿಗಳಿಗೆ ಶೋಭಿಸುವುದಿಲ್ಲ. ಶಾಸಕಾಂಗವು ಕಾರ್ಯಾಂಗವನ್ನು ವಿಶ್ವಾಸಕ್ಕೆ ತಂದುಕೊಂಡು ಕೆಲಸವನ್ನು ಸಾಧಿಸಿಕೊಳ್ಳಬೇಕು. ಅದು ಬಿಟ್ಟು ಧಮ್ಕಿ ಹಾಕಿದರೆ ಅವರು ಕೇಳುತ್ತಾರೆಯೇ?

ಇದನ್ನೂ ಓದಿ: ವಿಸ್ತಾರ ಅಂಕಣ: ಜನಕಲ್ಯಾಣದ ಕನಸಿಗೆ ಕಾರ್ಯಾಂಗವೂ ಕೈ ಜೋಡಿಸಲಿ

ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ, ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ ಧನ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎನ್ನುವ ಸ್ಪಷ್ಟ ಘೋಷಣೆಗಳನ್ನು ಕಾಂಗ್ರೆಸ್ ಮಾಡಿತ್ತು. ಬೆಲೆಯೇರಿಕೆಯ ಬಿಸಿಲಿಗೆ ಬಳಲಿರುವ ಬಡವರು, ಕೆಳ ಮಧ್ಯಮ ವರ್ಗದವರು, ಮಧ್ಯಮವರ್ಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಯೋಜನೆ ಯಾವಾಗ ಜಾರಿ ಎಂದು ಕೇಳಿದರೆ, “ಹಾದಿ ಬೀದಿಯಲ್ಲಿ ಹೋಗುವವರಿಗೆ ಕೊಡುವುದಕ್ಕೆ ಆಗುತ್ತದೆಯೇ?” ಎಂಬ ಮಾತನ್ನು ಕಾಂಗ್ರೆಸ್ ಆಡುತ್ತಿದೆ.

ಅಂದು ಮತ ಕೇಳುವಾಗ ಇದ್ದ ಬದ್ಧತೆ, ವಿಶ್ವಾಸ, ಆತ್ಮೀಯತೆ ಕೇವಲ ಒಂದೇ ವಾರಕ್ಕೆ ಕಾಣೆಯಾಗುವಂತೆ ಕಾಣುವುದು ಒಳ್ಳೆಯ ಲಕ್ಷಣವಲ್ಲ. ಹಾದಿಬೀದಿಯಲ್ಲಿ ಹೋಗುವವರಿಗೆ ಯೋಜನೆ ನೀಡಲಾಗುವುದಿಲ್ಲ ಎನ್ನುವ ಸರ್ಕಾರದ್ದೇ ಭಾಗವಾಗಿರುವವರು, ಗೋಹತ್ಯೆ ನಿಷೇಧ ವಾಪಸ್, ಪಠ್ಯ ಪರಿಷ್ಕರಣೆ ವಾಪಸ್, ಬಜರಂಗ ದಳ ನಿಷೇಧ, ಆರ್‌ಎಸ್ಎಸ್ ನಿಷೇಧದಂತಹ ವಿಚಾರಗಳನ್ನು ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಬಹುಶಃ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಹೆಣಗಾಡುತ್ತಿರುವ ಸರ್ಕಾರ ಹೇಗಾದರೂ ಮಾಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿರಬಹುದು. ಇದರ ಭಾಗವಾಗಿ ಇಂತಹ ಅನೇಕ ವಿಚಾರಗಳನ್ನು ಹರಿಯಬಿಟ್ಟು ತಮಾಷೆ ನೋಡುತ್ತಿರಬಹುದು. ಅದು ರಾಜಕೀಯ ತಂತ್ರಗಾರಿಕೆಯ ಭಾಗ.

ಆದರೆ ಭಾರತದ ಸಂವಿಧಾನದಲ್ಲೇ ಅಡಕವಾಗಿರುವ ವಿಚಾರದ ಕುರಿತು, ದೇಶದ ಮುಂದಿನ ಭವಿಷ್ಯವಾದ ಮಕ್ಕಳ ಪಠ್ಯದ ಕುರಿತು, ಸಮಾಜದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ವ್ಯಕ್ತಿ ಹಾಗೂ ಸಂಘಟನೆಗಳ ಕುರಿತು ಹಾದಿಬೀದಿಯಲ್ಲಿ ಮಾತನಾಡುವುದನ್ನು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಬಳಸುವುದು ಸರಿಯಲ್ಲ. ಇಂತಹ ತಂತ್ರಗಾರಿಕೆಗಳನ್ನು ಕೈಬಿಟ್ಟು, ನಿಜವಾಗಿಯೂ ತಾವು ನೀಡಿರುವ ಘೋಷಣೆಗಳನ್ನು ಈಡೇರಿಸುವತ್ತ ಸರ್ಕಾರ ಗಮನಹರಿಸುವುದು ಒಳಿತಲ್ಲವೇ?

ಇದನ್ನೂ ಓದಿ: ವಿಸ್ತಾರ ಅಂಕಣ: ಅಮೃತ ಕಾಲದ ಶಾಸಕರು ಯಾವ ಮನಸ್ಸಿನಿಂದ ವಿಧಾನಸೌಧ ಪ್ರವೇಶಿಸಬೇಕು?

Exit mobile version