ಅಪಿ ಸ್ವರ್ಣಮಯಿ ಲಂಕಾ ನ ಮೇ ಲಕ್ಷ್ಮಣ ರೋಚತೇ,
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ||
ರಾವಣನ ಜತೆಗಿನ ಯುದ್ಧದಲ್ಲಿ ಗೆದ್ದ ನಂತರ ಲಂಕೆಯ ನೆಲದಲ್ಲಿ ನಿಂತು ಶ್ರೀರಾಮ ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ ಎಂಬ ಮಾತಿದೆ. ಇದು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಎಂದೂ ಕೆಲವರು ಹೇಳುತ್ತಾರೆ. ಅದಿರಲಿ, ಇದರ ಅರ್ಥ ಮಾತ್ರ ರಾಮನ ಸ್ವಭಾವಕ್ಕೆ ಸಹಜವಾಗಿಯೇ ಅನುಗುಣವಾಗಿದೆ. ಈ ಲಂಕೆಯು ಚಿನ್ನದಿಂದ ನಿರ್ಮಾಣ ಆಗಿರಬಹುದು, ಆದರೆ ತಾಯಿ ಮತ್ತು ತಾಯಿ ಭೂಮಿಯು ಸ್ವರ್ಗಕ್ಕಿಂತ ಹಿರಿದಾದದ್ದು ಎನ್ನುವುದು ಈ ಸಂಸ್ಕೃತ ಶ್ಲೋಕದ ಅರ್ಥ. ಶ್ರೀರಾಮನು ಎರಡು ವಿಚಾರಗಳನ್ನು ಇಲ್ಲಿ ಉಲ್ಲೇಖಿಸಿದ್ದಾನೆ. ಮೊದಲನೆಯದು ತಾಯಿ, ಎರಡನೆಯದು ತಾಯಿಭೂಮಿ.
ಲಕ್ಷ್ಮಣದ ಆಶಯದಂತೆ ಲಂಕೆಯಲ್ಲೇ ಇರಬೇಕೆಂದು ಶ್ರೀರಾಮ ನಿರ್ಧಾರ ಮಾಡಿದ್ದೇ ಆಗಿದ್ದರೆ ತಾಯಿ ಕೌಸಲ್ಯೆಯನ್ನು ಇಲ್ಲಿಗೇ ಕರೆತಂದು ವಾಸ ಮಾಡುವುದು ಕಷ್ಟವೇನೂ ಆಗಿರುತ್ತಿರಲಿಲ್ಲ. ಆದರೆ ಎರಡನೆಯದು ತಾಯಿಭೂಮಿ. ತಾಯಿಭೂಮಿ ಬೇಕೆಂದರೆ ಶ್ರೀರಾಮ ಮತ್ತೆ ಅಯೋಧ್ಯೆಗೇ ಮರಳಲೇಬೇಕು. ಅದು ಮಾತೃಭೂಮಿಯ ವಿಶೇಷತೆ. ಮಾತೃಭೂಮಿ ಎಂದರೆ ಏನು? ಅಲ್ಲಿನ ಅರಮನೆಯೇ? ಅಲ್ಲಿರುವ ಸ್ನೇಹಿತರೇ? ಅಲ್ಲಿರುವ ಬಂಧು ಬಳಗವೇ? ಅಲ್ಲಿರುವ ಸೇವಕರೇ? ಅಲ್ಲಿರುವ ಆಸ್ತಿಪಾಸ್ತಿಯೇ? ಇವೆಲ್ಲವೂ ಚಲಿಸುವಂತಹವು ಹಾಗೂ ಜಗತ್ತಿನಲ್ಲಿ ಎಲ್ಲಿಬೇಕಾದರೂ ನಿರ್ಮಾಣ ಮಾಡಿಕೊಳ್ಳಬಹುದಾದ ಸಂಗತಿಗಳು. ಆದರೆ, ಮಾತೃಭೂಮಿಯಲ್ಲಿ ಮಾತ್ರವೇ ಇರುವ ಏಕೈಕ ಅಂಶವೆಂದರೆ ಮಣ್ಣು. ನನ್ನ ಊರಿನ ಮಣ್ಣು, ಅದರ ವಾಸನೆ, ಅದರೊಂದಿಗಿನ ಒಡನಾಟ ಇಡೀ ವಿಶ್ವದ ಇನ್ನಾವ ಮಣ್ಣಿನಲ್ಲೂ ಸಿಗುವುದಿಲ್ಲ. ಅದು ಭಾರತೀಯರಿಗೆ ಮಣ್ಣಿನೊಂದಿಗಿರುವ ಸಂಬಂಧ.
ಸ್ವಾತಂತ್ರ್ಯ ಪ್ರಾಪ್ತಿಯ ಮಾರ್ಗದಲ್ಲಿ ದೇಶದಿಂದ ಬ್ರಿಟನ್ನಿನ ಕಡೆಗೆ ಸಾಗಿದವರು ವೀರ ಸಾವರ್ಕರ್. ಬ್ರಿಟಿಷರ ಗುಹೆಯೊಳಗೇ ನುಗ್ಗಿ ಬೆದರಿಸಿಬರುತ್ತೇನೆ ಎಂದೇನೊ ಸಾವರ್ಕರ್ ಹೊರಡುತ್ತಾರೆ. ಆ ಕಾರ್ಯದಲ್ಲಿ ಸಾಕಷ್ಟು ಯಶವನ್ನೂ ಕಾಣುತ್ತಾರೆ. ಆದರೆ ಅಲ್ಲಿಗೆ ತೆರಳಿದ ನಂತರ ಮಾತೃಭೂಮಿಯ ಮೇಲಿನ ಉತ್ಕಟ ಪ್ರೇಮವನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಅಲ್ಲಿನ ಸಮುದ್ರದ ಬಳಿ ನಿಂತು ಭಾರತದ ಕಡೆಗೆ ತಿರುಗಿ ಕಣ್ಣೀರು ಹಾಕುತ್ತಾರೆ. ಓ ಮಾತೃಭೂಮಿ, ನಿನಗಾಗಿ ತ್ಯಾಗ ಮಾಡುವುದೇ ಜೀವನ, ನಿನ್ನ ಹೊರತಾಗಿ ಜೀವಿಸುವುದೇ ಮರಣ ಎಂದು ಹೇಳಿದವರು ಸ್ವಾತಂತ್ರ್ಯ ವೀರ ಸಾವರ್ಕರ್. ಸಮುದ್ರದ ಬಳಿ ನಿಂತು ʼಸಾಗರಾ ಪ್ರಾಣ ತಳಮಳಲಾ…” ಎಂದು ಹೇಳಿದ್ದು, “ಓ ಮಾತೃಭೂಮಿ…” ಎಂದು ಉಲ್ಲೇಖಿಸುವಾಗಲೂ ಸಾವರ್ಕರ್ ಕಣ್ಣಿನಲ್ಲಿ ಇದ್ದದ್ದು ಇಲ್ಲಿನ ಭೂಭಾಗ, ಅಂದರೆ ಮಣ್ಣೇ ಅಲ್ಲವೇ.
ಇದೇನು ಇಷ್ಟು ಮಹಾನ್ ವಿಚಾರ? ಎಂದು ಯಾರಾದರೂ ಕೇಳಬಹುದು. ಮಣ್ಣಿನ ಕುರಿತು ಈ ಮಟ್ಟಿಗಿನ ಉತ್ಕಟ ಪ್ರೇಮವನ್ನು ಹೊಂದಿರುವ ನಾಗರಿಕತೆಗಳು ಹೆಚ್ಚಿಲ್ಲ. ಜೀವನ ಎಲ್ಲಿದ್ದರೂ ನಡೆಯುತ್ತದೆಯಲ್ಲವೇ? ಮನುಷ್ಯನಿಗೆ ಬೇಕಿರುವುದು ರೋಟಿ, ಕಪಡಾ, ಮಕಾನ್ ತಾನೇ? ಎನ್ನುವವರಿಗೆ ಮಣ್ಣಿನ ಮಹತ್ವ ತಿಳಿಯುವುದಿಲ್ಲ. ಹಾಗೆ ನೋಡಿದರೆ, ಹುಟ್ಟಿದ ಮಣ್ಣಲ್ಲೇ ಮಣ್ಣಾಗಬೇಕು ಎಂಬುದು ಭಾರತದ ಅತಿದೊಡ್ಡ ನಂಬಿಕೆ. ಸತ್ತರೆ ತಮ್ಮ ದೇಹ ಹುಟ್ಟೂರಿನ ಮಣ್ಣಲ್ಲಿ ಸಮಾಧಿಯಾಗಬೇಕು ಇಲ್ಲವೇ ಸುಟ್ಟು ಭಸ್ಮವಾಗಬೇಕು ಎಂಬುದು ಎಲ್ಲರ ಅಂತಿಮ ಬಯಕೆಯೇ ಆಗಿರುತ್ತದೆ. ಹಾಗಾಗಿಯೇ ದೊಡ್ಡ ದೊಡ್ಡ ಸಾಧಕರು, ಮಹಾ ವ್ಯಕ್ತಿಗಳು ನಿಧನರಾದ ಬಳಿಕ, ಅವರ ದೇಹವನ್ನು ತಾಯ್ನೆಲದಲ್ಲಿಯೇ ಮಣ್ಣು ಮಾಡಲಾಗುತ್ತದೆ. ಏಕೆಂದರೆ, ಅವರೆಲ್ಲರೂ ಆ ಮಣ್ಣಿನ ಮಕ್ಕಳೇ ಆಗಿರುತ್ತಾರೆ.
ಮಣ್ಣಿನ ಮಗ ಎನಿಸಿಕೊಳ್ಳುವುದು ಶ್ರೀಸಾಮಾನ್ಯನಿಂದ ಅಸಾಮಾನ್ಯರವರೆಗೆ- ಎಲ್ಲರಿಗೂ ಅಭಿಮಾನದ ಸಂಗತಿ ಇಲ್ಲಿ.
ಈಗ ಪ್ರಧಾನಿ ನರೇಂದ್ರ ಮೋದಿಯವರು ಮೇರೀ ಮಾಠಿ-ಮೇರಾ ದೇಶ್ ಅಭಿಯಾನಕ್ಕೆ ಕರೆ ನೀಡಿದ್ದಾರೆ. ದೇಶಾದ್ಯಂತ ಈಗ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚಣೆ ನಡೆಯುತ್ತಿದೆ. ಈ ಸಂಭ್ರಮಾಚರಣೆಯ ಸಮಾರೋಪಕ್ಕೆ ಮೇರೀ ಮಾಠಿ-ಮೇರಾ ದೇಶ್ ಅಂದರೆ ನನ್ನ ಮಣ್ಣು-ನನ್ನ ದೇಶ ಎಂಬ ಅಭಿಯಾನ. ಈ ಅಭಿಯಾನಕ್ಕೆ ಟ್ಯಾಗ್‌ಲೈನ್ ಎಂದರೆ ಮಿಟ್ಟೀ ಕೊ ನಮನ್-ವೀರೋಂ ಕಾ ವಂದನ್ ಎನ್ನುವುದು.
ನಮ್ಮ ದೇಶವನ್ನು ರಕ್ಷಣೆ ಮಾಡುವ ಸೈನಿಕರನ್ನು ಗೌರವಿಸುವುದು, ದೇಶದ ಸಾಧನೆಗಳನ್ನು ಸ್ಮರಿಸುವುದು. ಈ ಕಾರ್ಯಕ್ರಮಗಳನ್ನು ದೇಶದ ಹಳ್ಳಿ ಹಳ್ಳಿಗಳಲ್ಲೂ, ಜಿಲ್ಲಾ ಮಟ್ಟದಲ್ಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಆಚರಿಸಲು ಕರೆ ನೀಡಿದ್ದಾರೆ. ಈ ಅಭಿಯಾನದಡಿ, ಗ್ರಾಮದಲ್ಲಿ ದೇಸಿ ಸಸಿಗಳನ್ನು ನೆಡುವುದು ಸೇರಿ ಅನೇಕ ಕಾರ್ಯಕ್ರಮಗಳಿವೆ. ದೇಶಕ್ಕೆ ಪ್ರಾಣತ್ಯಾಗ ಮಾಡಿದ ವೀರ ಸೈನಿಕರು, ಪೊಲೀಸರು, ಸ್ವಾತಂತ್ರ್ಯ ಹೋರಾಟಗಾರರ ಹೆಸರಿರುವ ಶಿಲಾಫಲಕವನ್ನು ಗ್ರಾಮ, ಗ್ರಾಮ ಪಂಚಾಯಿತಿಯಲ್ಲಿ ಸ್ಥಾಪಿಸುವುದೂ ಈ ಕಾರ್ಯದಲ್ಲಿ ಒಂದು. ಪಂಚ ಪ್ರಾಣ ಸಂಕಲ್ಪ, ಅಂದರೆ 1. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ಸಂಕಲ್ಪ, 2. ವಸಾಹತುಶಾಹಿ ಮಾನಸಿಕತೆಯ ಕುರುಹುಗಳನ್ನು ಕಿತ್ತೊಗೆಯುವುದು, 3. ನಮ್ಮ ಪರಂಪರೆಯಲ್ಲಿ ಹೆಮ್ಮೆ ಕಾಣುವುದು, 4. ನಮ್ಮ ಏಕತೆಯೇ ನಮ್ಮ ಶಕ್ತಿ ಎಂದು ತಿಳಿಯುವುದು, 5. ನಾಗರಿಕರಾಗಿ ಪ್ರಾಮಾಣಿಕತೆಯಿಂದ ನಮ್ಮ ಕರ್ತವ್ಯ ನಿರ್ವಹಿಸುವುದು. ಈ ಸಂಕಲ್ಪಗಳನ್ನು ಮಾಡುತ್ತ ಪ್ರತಿ ಗ್ರಾಮದಿಂದಲೂ ಮಣ್ಣನ್ನು ಸಂಗ್ರಹಿಸಿ ನವದೆಹಲಿಗೆ ಕಳಿಸಬೇಕು.
ನವದೆಹಲಿಯಲ್ಲಿ ಸೈನಿಕರ ನೆನಪಿನಲ್ಲಿ ಸ್ಥಾಪನೆಯಾಗಲಿರುವ ವನದಲ್ಲಿ, ದೇಶದ ವಿವಿಧೆಡೆಯಿಂದ ಬಂದ ಈ ಮಣ್ಣನ್ನು ಹಾಕಲಾಗುತ್ತದೆ. ಅಲ್ಲಿ ಸೈನಿಕರಿಗೆ ವಂದನೆ ಸಲ್ಲಿಸುವ ಗುರುತು, ವನ ನಿರ್ಮಾಣ ಮಾಡಲಾಗುತ್ತದೆ. ಪ್ರತಿ ಸೈನಿಕನೂ ಗಡಿಯಲ್ಲಿ ಕಾಯುವುದು ಮಣ್ಣನ್ನೇ. ದೇಶದ ಜನರಿಗೆ ಆಹಾರ ನೀಡುವ ರೈತನೂ, ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕನೂ ತಾಯಿಯ ಸಂಬಂಧವನ್ನು ಹೊಂದುವುದು ಕೊನೆಗೆ ಮಣ್ಣಿನೊಂದಿಗೆ.
ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರು ಹೇಳುವುದು, ಈ ಮಣ್ಣಿಗಾಗಿ ಹೋರಾಡುವೆ ಎಂದು. ಸೈನಿಕರು ಹೇಳುವುದು, ಈ ಮಣ್ಣಿಗಾಗಿ ಪ್ರಾಣ ಕೊಡುವೆ ಎಂದು. ಆದರೆ ಮಣ್ಣು ಎನ್ನುವುದು ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ವಸ್ತುವಾಗಿದೆ, ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾದದ್ದು. ಇಂದು ಹಣ ಎನ್ನುವುದು ಮನುಷ್ಯನನ್ನು ಎಷ್ಟು ಆವರಿಸಿಕೊಂಡಿದೆ ಎಂದರೆ, ಅವನಿಗೆ ಮಣ್ಣಿನ ಮೇಲಿನ ಮಾತೃ ಸಂಬಂಧ ಕಡಿಮೆಯಾಗುತ್ತಿದೆ. ರಿಯಲ್ ಎಸ್ಟೇಟ್ ಎನ್ನುವುದು ಒಂದು ಮಾಫಿಯಾವಾಗಿ ದಿನದಿನವೂ ಸಾವಿರಾರು ಎಕರೆ ಹೊಲ, ಗದ್ದೆಗಳನ್ನು ಲೇಔಟ್‌ಗಳಾಗಿ ಪರಿವರ್ತನೆ ಮಾಡುತ್ತಿದೆ. ಇದು ಕೇವಲ ಬೆಂಗಳೂರಿನ ಮಾತಲ್ಲ. ಜಿಲ್ಲಾ ಕೇಂದ್ರಗಳ ಸುತ್ತಮುತ್ತ, ತಾಲೂಕು ಕೇಂದ್ರದ ಆಸುಪಾಸಿನಲ್ಲೂ ಇದು ಹರಡಿಕೊಳ್ಳುತ್ತಿದೆ. ತಮ್ಮ ಜಮೀನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಸಣ್ಣ ಅಳುಕೂ ಇಲ್ಲದೆ ರೈತರು ಕೋಟಿ ಕೋಟಿ ಹಣಕ್ಕೆ ಸಂತೋಷದಿಂದ ಭೂಮಿಯನ್ನು ಮಾರುವುದನ್ನು ಕಂಡರೆ ಬೇಸರವಾಗುತ್ತದೆ. ಇದೇ ಮಾನಸಿಕತೆ ನಿಧಾನವಾಗಿ ದೇಶದ ಕುರಿತೂ ಮೂಡುತ್ತದೆ.
ಈ ಹಿಂದೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರತಿ ಗ್ರಾಮದಿಂದ ಇಟ್ಟಿಗೆಯನ್ನು ಪೂಜಿಸಿ ಕಳಿಸಿಕೊಡಲಾಗಿತ್ತು. ಕನ್ಯಾಕುಮಾರಿಯಲ್ಲಿ ನಿರ್ಮಾಣವಾದ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕಕ್ಕೆ ದೇಶದ ಎಲ್ಲ ಸರ್ಕಾರಗಳಿಂದಲೂ ಹಣ ಸಂಗ್ರಹ ಮಾಡಲಾಗಿತ್ತು. ಗುಜರಾತ್‌ನಲ್ಲಿ ಇತ್ತೀಚೆಗೆ ನಿರ್ಮಿಸಿರುವ ಸರ್ದಾರ್ ಪಟೇಲರ ಪ್ರತಿಮೆಗೆ (ಏಕತೆಯ ಪ್ರತಿಮೆ) ದೇಶದ ಪ್ರತಿ ಗ್ರಾಮದಿಂದ, ಕೃಷಿಯಲ್ಲಿ ಬಳಸಿದ ಕಬ್ಬಿಣದ ತುಂಡನ್ನು ಸಂಗ್ರಹಿಸಲಾಗಿತ್ತು. ಈಗ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿ ಪ್ರಜೆಯೂ ಹಣದ ದೇಣಿಗೆ ನೀಡುವ ಮೂಲಕ ತನ್ನ ಕರ್ತವ್ಯ ಮೆರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಿರ್ಮಾಣವಾದ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೂ ಪ್ರತಿ ಗ್ರಾಮದಿಂದ ಮಣ್ಣು ಸಂಗ್ರಹ ಮಾಡಲಾಗಿತ್ತು.
ಇದೆಲ್ಲ ಏನನ್ನು ಸಚಿಸುತ್ತದೆ? ದೇಶದ ನಿರ್ಮಾಣದಲ್ಲಿ ನಮ್ಮ ಪಾತ್ರವೂ ಇದೆ ಎನ್ನುವುದನ್ನು ಇದು ಜನಮಾನಸದಲ್ಲಿ ಮೂಡಿಸುತ್ತದೆ. ಈ ಪ್ರತಿಮೆ, ಮಂದಿರ ನಿರ್ಮಾಣದಲ್ಲಿ ನನ್ನ ಹಣ, ನನ್ನ ಊರಿನ ಮಣ್ಣು ಇದೆ ಎನ್ನುವುದೇ ಅದು ಸ್ವಂತದ ಅನುಭವ ನೀಡುತ್ತದೆ. ಈಗ ಮೇರಾ ಮಾಠಿ-ಮೇರಾ ದೇಶ್ ಅಭಿಯಾನವೂ ಪ್ರತಿ ಭಾರತೀಯನಲ್ಲಿ ಏಕತೆಯ ಭಾವನೆ ಮೂಡಿಸುತ್ತದೆ.
ಇದೆಲ್ಲ ಭಾವನಾತ್ಮಕ ವಿಚಾರಗಳು. ಈಗೇಕೆ? ಅಭಿವೃದ್ಧಿ ಕಡೆಗೆ ಗಮನ ನೀಡಬೇಕಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಈಗ ದೇಶದಲ್ಲಿ ಎಲ್ಲ ಸಂಪನ್ಮೂಲ ಇದೆ, ಮೂಲಸೌಕರ್ಯಗಳೂ ಎಂದಿಗಿಂತ ವೇಗವಾಗಿ ಬೆಳೆಯುತ್ತಿವೆ. ವಿಮಾನಗಳು ಇಳಿಯಬಹುದಾದಂತಹ ರಸ್ತೆಗಳನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಆದರೆ ದೇಶದ ಜನರಲ್ಲಿ ಜಾತಿ, ಲಿಂಗ, ಉಪಾಸನೆ ಆಧಾರದಲ್ಲಿ ಭಿನ್ನತೆ ಮೂಡಿಸುವ ಪ್ರಯತ್ನವೂ ಅಷ್ಟೇ ವೇಗದಿಂದ ಸಾಗಿದೆ. ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಎನ್ನುವುದರಿಂದ, ಪ್ರತ್ಯೇಕ ಜಾತಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳೂ ಆತಂಕ ಮೂಡಿಸುವಂತಹವು. ಇಂತಹ ಒಡಕನ್ನು ಮೀರಿ ನಿಲ್ಲಲು ಬೇಕಿರುವುದು ಒಮ್ಮತ. ಹಾಗಾಗಿ ಭಾವ ಜಾಗರಣೆಯೇ ಇಂದಿನ ಅಗತ್ಯ.
ಇದನ್ನೂ ಓದಿ: ವಿಸ್ತಾರ ಅಂಕಣ: ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ
ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ. ಮನಸ್ಸೊಂದಿದ್ದರೆ ಮಾರ್ಗ ಇರುತ್ತದೆ ಎನ್ನುವುದನ್ನು ಕೋವಿಡ್ ಸಮಯದಲ್ಲಿ ಭಾರತ ನಿರೂಪಿಸಿದೆ. ಒಂದೂ ಪಿಪಿಇ ಕಿಟ್ ತಯಾರಾಗದಿದ್ದ ಭಾರತವು ಕೆಲವೇ ತಿಂಗಳಲ್ಲಿ ಪಿಪಿಇ ಕಿಟ್ ರಫ್ತುದಾರ ದೇಶವಾಯಿತು. ತನ್ನ ನೂರ ನಲವತ್ತು ಕೋಟಿ ಜನರಿಗೆ ಲಸಿಕೆ ಅಷ್ಟೆ ಅಲ್ಲದೆ, ವಿಶ್ವದ ಅನೇಕ ದೇಶಗಳಿಗೂ ಲಸಿಕೆಯನ್ನು ಸರಬರಾಜು ಮಾಡಿತು. ಹಾಗಾಗಿ ಇಂದು ಬೇಕಾಗಿರುವುದು ಭಾವಜಾಗೃತಿಯ ಕೆಲಸ. ನಮ್ಮೆಲ್ಲರ ಮೈಯಲ್ಲಿ ಹರಿಯುವ ರಕ್ತವೊಂದೆ, ನಮ್ಮೆಲ್ಲ ನೆಲದಲ್ಲಿನ ಮಣ್ಣು ಒಂದೆ, ನಾವೆಲ್ಲ ಭಾರತೀಯರು ಎಂಬ ಭಾವನೆ ಇಂದು ಬಲವಾಗಿ ಬೇರೂರಬೇಕು. ಈ ಮಂತ್ರವೊಂದೇ ಸಾಕು ನಮ್ಮನ್ನು ವಿಶ್ವಗುರು ಆಗಿಸಲು. ಸದ್ಯ ದೇಶದ ಪ್ರತಿ ಹೃದಯವನ್ನೂ ತಲುಪಬಲ್ಲ ವ್ಯಕ್ತಿ ಎಂದು ಯಾರಾದರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ. ಮೇರಿ ಮಾಠಿ-ಮೇರಾ ದೇಶ್ ರೀತಿಯ ಅಭಿಯಾನದ ಮೂಲಕ ದೇಶದಲ್ಲಿ ಭಾವಜಾಗರಣವನ್ನು ಮೋದಿಯವರಿಗಿಂತ ಉತ್ತಮವಾಗಿ ಬೇರೆ ಯಾರಿಂದ ಮೂಡಿಸಲು ಸಾಧ್ಯ? ನಾವೂ ಈ ಅಭಿಯಾನದಲ್ಲಿ ಭಾಗವಹಿಸೋಣ. ನಮ್ಮ ನೆಲ, ಮಣ್ಣಿನ ಮೇಲಿನ ಪ್ರೇಮವನ್ನು ನೈಜವಾಗಿಸಿಕೊಳ್ಳುವ ಮೂಲಕ ದೇಶಸೇವೆಗೆ ಅಳಿಲು ಸೇವೆ ಸಲ್ಲಿಸೋಣ ಅಲ್ಲವೇ?
ಕೊನೆ ಮಾತು: ಅಭಿಯಾನಕ್ಕಾಗಿಯೇ ವೆಬ್‌ಸೈಟ್ www.merimaatimeradesh.gov.inಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕಾರ್ಯಕ್ರಮದ ಸಂಪೂರ್ಣ ವಿವರ ಅಲ್ಲಿದೆ. ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಪ್ರತಿಜ್ಞೆಯನ್ನು ಓದುವ ಜತೆಗೆ ಮಣ್ಣಿನ ಜತೆಗೆ ಫೋಟೊ ತೆಗೆದುಕೊಂಡು ಅಪ್‌ಲೋಡ್ ಕೂಡ ಮಾಡಬಹುದು. ಈ ಮೂಲಕ ದೇಶದಲ್ಲಿ ಈ ಕಾರ್ಯ ಕೈಗೊಂಡಿರುವ ಕೋಟ್ಯಂತರ ಜನರ ಜತೆಯಾಗಬಹುದು.
ಇದನ್ನೂ ಓದಿ: ವಿಸ್ತಾರ ಅಂಕಣ: ತಮಿಳುನಾಡಿನ ರಾಜಕಾರಣಿಗಳು ಜನರನ್ನು ನಿರಂತರವಾಗಿ ಹೇಗೆ ವಂಚಿಸುತ್ತಿದ್ದಾರೆ ಗೊತ್ತೇ?