1991ರಲ್ಲಿ ಬೆಳಕಿಗೆ ಬಂದಿದ್ದ ʼಜೈನ್ ಹವಾಲಾʼ ಹಗರಣದಲ್ಲಿ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರ ವಿರುದ್ಧ 1996ರಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಜನವರಿ 16ರಂದು ಬೆಳಗ್ಗೆ ಆಡ್ವಾಣಿ ಬಿಜೆಪಿ ಕಚೇರಿಯಲ್ಲಿದ್ದಾಗ ಅಲ್ಲಿಗೆ ಬಂದ ಸುಷ್ಮಾ ಸ್ವರಾಜ್ ಈ ವಿಷಯ ತಿಳಿಸಿದರು. ಆಡ್ವಾಣಿ ಹಾಗೂ ಪಕ್ಷದ ಇತರ ರಾಜಕೀಯ ನಾಯಕರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಪ್ರಕರಣ ದಾಖಲಿಸಿದ ವಿಷಯವನ್ನು ವಕೀಲರಾಗಿರುವ ತಮ್ಮ ಪತಿ ಸ್ವರಾಜ್ ಕೌಶಲ್ ತಿಳಿಸಿದ್ದಾಗಿ ಹೇಳಿದರು.
ರಾವ್ ಸರ್ಕಾರದ ಹಲವು ಸಚಿವರು ಸೇರಿದಂತೆ ವಿವಿಧ ಪಕ್ಷಗಳ ಹಲವು ನಾಯಕರು ಹವಾಲಾ ಹಗರಣ ಎಂದು ಕರೆಯಲಾದ ಈ ಪ್ರಕರಣದಲ್ಲಿ ಸಿಲುಕಿದ್ದರು. ಇವರೆಲ್ಲರೂ ಹವಾಲಾ ದಲ್ಲಾಳಿಗಳಿಂದ ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ಇದಕ್ಕೆ ಪುರಾವೆಯಾಗಿ ಸಿಬಿಐ ಭೋಪಾಲ್ ಮೂಲದ ಇಬ್ಬರು ವ್ಯಾಪಾರಿಗಳಾದ ಎಸ್.ಕೆ. ಜೈನ್ ಮತ್ತು ಜೆ.ಕೆ. ಜೈನ್ ಬರೆದಿದ್ದ ದಿನಚರಿ ಪುಸ್ತಕಗಳನ್ನು ಒದಗಿಸಿತ್ತು. ಈ ಹವಾಲಾ ಮಾರ್ಗವನ್ನು ಜಮ್ಮು ಮತ್ತು ಕಾಶ್ಮೀರದ ಉಗ್ರರಿಗೆ ಧನ ಸಹಾಯಕ್ಕೆ ಬಳಸಿಕೊಳ್ಳಲಾಗಿದೆ ಎಂದೂ ಆರೋಪಿಸಲಾಗಿತ್ತು.
ಆಡ್ವಾಣಿ ಸಂಸದರಾಗಿದ್ದಾಗ ಅಕ್ರಮವಾಗಿ 25 ಲಕ್ಷ ರೂ. ಲಂಚ ಪಡೆದ ಹಾಗೂ ಸಂಸದರಾಗಿಲ್ಲದಾಗ ಮತ್ತೆ 35 ಲಕ್ಷರೂ. ಲಂಚ ಪಡೆದ ಆರೋಪವನ್ನು ಆಡ್ವಾಣಿ ವಿರುದ್ಧ ಹೊರಿಸಲಾಗಿತ್ತು. ಈ ಭ್ರಷ್ಟಾಚಾರ ಆರೋಪವಷ್ಟೇ ಅಲ್ಲದೆ, ಈ ಇಬ್ಬರು ಜೈನ್ ಮತ್ತು ಇತರರ ಜತೆ ಸೇರಿ ಕ್ರಿಮಿನಲ್ ಸಂಚು ರೂಪಿಸಿರುವ ಆರೋಪವನ್ನೂ ಆಡ್ವಾಣಿ ಮೇಲೆ ಮೇಲೆ ಹೊರಿಸಲಾಗಿತ್ತು.
ಕೂಡಲೆ ಆಡ್ವಾಣಿ ಎರಡು ನಿರ್ಧಾರ ಮಾಡಿದರು. ತಮ್ಮ ಲೋಕಸಭಾ ಸದಸ್ಯತ್ವಕ್ಕೆ ಕೂಡಲೇ ರಾಜೀನಾಮೆ ಕೊಡುವುದು. ಎರಡನೆಯದು, ತಮ್ಮ ವಿರುದ್ಧದ ಆರೋಪಗಳಿಂದ ನ್ಯಾಯಾಲಯದಲ್ಲಿ ವಿಮುಕ್ತಿ ಹೊಂದುವವರೆಗೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿಸುವುದು. ಈ ವಿಷಯವನ್ನು ದೂರವಾಣಿ ಮೂಲಕ ಅಟಲ್ ಅವರಿಗೆ ತಿಳಿಸಿದರು. ತಕ್ಷಣವೇ ಅವರು ಮತ್ತು ಇತರ ಸಹೋದ್ಯೋಗಿಗಳು ಪಕ್ಷದ ಕಚೇರಿಗೆ ಬಂದು ಸೇರಿದರು. ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇದ್ದುದರಿಂದ ಕೆಲವರು ಈ ನಿರ್ಧಾರವನ್ನು ತುಂಬಾ ಕಠಿಣ ಹೆಜ್ಜೆ ಎಂದು ಅಭಿಪ್ರಾಯಪಟ್ಟರು. ಅದಕ್ಕೆ ಆಡ್ವಾಣಿ ಉತ್ತರಿಸುತ್ತ ‘ನಾನು ಬಚ್ಚಿಡುವಂಥದ್ದು ಏನೂ ಇಲ್ಲ ಮತ್ತು ವಿಚಾರಣೆ ಎದುರಿಸಲು ಸಿದ್ಧನಿದ್ದೇನೆ ಎಂದು ಜನರಿಗೆ ಮನದಟ್ಟು ಮಾಡಲು ನಾನು ಕೈಗೊಳ್ಳಬೇಕಾದ ಸೂಕ್ತ ಕ್ರಮ ಇದು’ ಎಂದರು.
ನಂತರದ ಒಂದೆರಡು ಗಂಟೆಯಲ್ಲೇ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಮೇಲಿನ ಎರಡೂ ತೀರ್ಮಾನಗಳನ್ನು ಘೋಷಿಸಿದರು. ಈ ಪ್ರಕರಣದ ವಿಚಾರಣೆ ಹದಿನಾರು ತಿಂಗಳು ನಡೆಯಿತು. 1997ರ ಏಪ್ರಿಲ್ 8ರಂದು ನ್ಯಾಯಮೂತಿ ಮಹಮದ್ ಶಮೀಮ್ ಅವರು 70 ಪುಟಗಳ ತೀರ್ಪು ಪ್ರಕಟಿಸಿದರು. 1991ರಲ್ಲಿ ಜೈನರಿಂದ ಸಿಬಿಐ ವಶಪಡಿಸಿಕೊಂಡಿದ್ದ ದಿನನಿತ್ಯದ ಲೆಕ್ಕದ ಪುಸ್ತಕ, ಮಾಸಿಕ ದಿನಚರಿ, ಲೆಡ್ಜರ್ಗಳು, ಕೊನೆಗೆ ʼಮದರ್ ಡೈರಿʼಯಲ್ಲೂ ಆಡ್ವಾಣಿ ಹೆಸರು ಇರಲಿಲ್ಲ. ಮಧ್ಯದಲ್ಲಿ ಸೇರಿಸಿದ ಬಿಡಿ ಹಾಳೆಯೊಂದರಲ್ಲಿ ಎಲ್.ಕೆ.ಎ. ಎಂದು ನಮೂದಿಸಲಾಗಿತ್ತು ಅಷ್ಟೆ.
ಈ ಪ್ರಕರಣದಲ್ಲಿ ಆಡ್ವಾಣಿ ಪಾತ್ರ ಏನೇನೂ ಇಲ್ಲ ಎಂದು ನ್ಯಾಯಾಲಯ ಖುಲಾಸೆಗೊಳಿಸಿತು. ಈ ತೀರ್ಪನ್ನು ಸಿಬಿಐ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತು, ಅಲ್ಲಿಯೂ ಅರ್ಜಿ ತಿರಸ್ಕೃತವಾಯಿತು. ಈ ಘಟನೆ ಕುರಿತು ಆಡ್ವಾಣಿಯವರು ತಮ್ಮ ʼನನ್ನ ದೇಶ ನನ್ನ ಜೀವನʼ ಪುಸ್ತಕದಲ್ಲಿ ಹೀಗೆ ಬರೆದುಕೊಂಡಿದ್ದಾರೆ: “ಅಸಂಖ್ಯ ಪ್ರತಿಭಟನೆಗಳಲ್ಲಿ ಪಾಲ್ಗೊಂಡ ಒಬ್ಬ ರಾಜಕೀಯ ಕಾರ್ಯಕರ್ತನಾಗಿ ಕ್ರಿಮಿನಲ್ ಆರೋಪವನ್ನು ಎದುರಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಪದೇಪದೆ ಸೆಕ್ಷನ್ 144ನ್ನು ಉಲ್ಲಂಘನೆ ಮಾಡಿದ್ದೀರಾ ಎಂದು, ಶಾಂತಿಗೆ ಭಂಗ ತಂದಿದ್ದೀರಾ ಎಂದು ಆರೋಪ ಹೊರಿಸಿ ನನ್ನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತಿತ್ತು. ಅಯೋಧ್ಯೆ ಚಳವಳಿ ಸಂದರ್ಭದಲ್ಲಂತೂ ನನ್ನ ಮೇಲೆ ತೀರಾ ಗಂಭೀರ ಆರೋಪಗಳನ್ನು ಹೊರಿಸಿ ಇದೇ ಕ್ರಮ ಜರುಗಿಸಲಾಗಿತ್ತು. ಆದರೆ ಭ್ರಷ್ಟಾಚಾರದ ಆರೋಪ, ಮನಸ್ಸನ್ನು ಗಲಿಬಿಲಿಗೊಳಿಸಿದ ಹೊಸ ಅನುಭವವಾಗಿತ್ತು. ಇಡೀ ನನ್ನ ರಾಜಕೀಯ ಜೀವನದಲ್ಲಿ ನನ್ನ ಎದುರಾಳಿಗಳೂ ಸಹ ಎಂದೂ ನನ್ನ ವಿರುದ್ಧ ಭ್ರಷ್ಟಾಚಾರ ಅಥವಾ ಆರ್ಥಿಕ ವಂಚನೆ ಆರೋಪ ಮಾಡಿರಲಿಲ್ಲ”.
ಆಡ್ವಾಣಿಯವರ ತತ್ವ, ಸಿದ್ಧಾಂತವನ್ನು ಯಾರೂ ಒಪ್ಪಬಹುದು ಅಥವಾ ಒಪ್ಪದೆಯೂ ಇರಬಹುದು. ಆದರೆ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಮನದಾಳವನ್ನು ಇಲ್ಲಿ ಕೇಳಬಹುದು. ಅವರಿಗೆ ಜೈಲಿಗೆ ಹೋಗುವುದು ಹೊಸತೇನಲ್ಲ. ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರಿನ ಜೈಲಿನಲ್ಲೇ ಇದ್ದವರು. ರಾಜಕೀಯ ಕಾರ್ಯಕರ್ತನಾಗಿ ರಾಜಕೀಯ, ಸಾಮಾಜಿಕ ಹೋರಾಟಗಳಲ್ಲಿ ಬಂಧನಕ್ಕೊಳಪಟ್ಟಿದ್ದಕ್ಕೂ ಅವರಿಗೆ ಅಳುಕು ಇರಲಿಲ್ಲ. ಹಾಗೆ ನೋಡಿದರೆ ಅವೆಲ್ಲವನ್ನೂ ಹೆಮ್ಮೆಯಿಂದಲೇ ಹೇಳಿಕೊಳ್ಳುವಂಥವರು. ಆದರೆ ಭ್ರಷ್ಟಾಚಾರದ ಆರೋಪದ ಒಂದೇ ಒಂದು ಪ್ರಕರಣ, ಆಡ್ವಾಣಿ ಅವರ ಅಂತಃಸತ್ವವನ್ನೇ ಅಲುಗಾಡಿಸಿತ್ತು ಎನ್ನುವುದು ತೀರಾ ಸಣ್ಣ ಮಾತು. ಆಡ್ವಾಣಿ ಅವರಿಗೆ ಅದಕ್ಕಿಂತಲೂ ದೊಡ್ಡ ಆಘಾತವಾಗಿತ್ತು.
ಮುಂದುವರಿದು ಅದೇ ಪುಸ್ತಕದಲ್ಲಿ ಆಡ್ವಾಣಿ ಬರೆಯುತ್ತಾರೆ: “ಹಿಂತಿರುಗಿ ನೋಡಿದಾಗ, ನನಗೆ ನನ್ನ ನಿರ್ಧಾರದ ಬಗ್ಗೆ (ರಾಜೀನಾಮೆ ನೀಡುವ ನಿರ್ಧಾರ) ತುಂಬಾ ತೃಪ್ತಿಯಿದೆ. ನನ್ನ ವಿರುದ್ಧದ ಭ್ರಷ್ಟಾಚಾರದ ಆರೋಪಕ್ಕೆ ಅದೊಂದು ಸೂಕ್ತ ನೈತಿಕ ಪ್ರತಿಕ್ರಿಯೆಯಷ್ಟೆ ಆಗಿರದೆ, ಜನರ ದೃಷ್ಟಿಯಲ್ಲಿ ಬಿಜೆಪಿಯ ಘನತೆಯನ್ನು ಹೆಚ್ಚಿಸಿತು” ಎಂದಿದ್ದಾರೆ. ಅಂದರೆ ಅವರ ಮೇಲಿನ ಭ್ರಷ್ಟಾಚಾರದ ಆರೋಪದಿಂದ ಮುಕ್ತವಾಗಿ ಹೊರಬರುವುದು, ಪಕ್ಷದ ಘನತೆಯನ್ನು ಕಾಪಾಡಲು ಬಹುಮುಖ್ಯವಾಗಿತ್ತು. ಇದು ಅಂದಿನ ಬಿಜೆಪಿ ನಾಯಕರೊಬ್ಬರ ಕಥೆ.
ಇದೀಗ ಕರ್ನಾಟಕದಲ್ಲಿ ಮತ್ತೊಬ್ಬ ಬಿಜೆಪಿ ನಾಯಕನ ಕುರಿತು ಚರ್ಚೆ ನಡೆದಿದೆ. ಇವರು ಬಿಜೆಪಿಯ ಶಾಸಕರೂ ಹೌದು. ಇವರ ಪುತ್ರನ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಆತನೂ ಸರ್ಕಾರಿ ನೌಕರ, ಆದರೆ ತಂದೆಯು ಆಗ ನಿರ್ವಹಣೆ ಮಾಡುತ್ತಿದ್ದ ನಿಗಮವೊಂದಕ್ಕೆ ಕಚ್ಚಾ ವಸ್ತು ಪೂರೈಸಲು 40 ಲಕ್ಷ ರೂ. ಲಂಚ ಪಡೆಯಲಾಗುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಬಂಧಿಸಲಾಯಿತು ಎನ್ನುವುದು ಲೋಕಾಯುಕ್ತ ಆರೋಪ. ಆನಂತರ ಇವರ ಮನೆಯಲ್ಲಿ ಸುಮಾರು 6 ಕೋಟಿ ರೂ. ಸಿಕ್ಕಿದೆ. ಇದೆಲ್ಲದರ ನಂತರ ಶಾಸಕರು ತಲೆಮರೆಸಿಕೊಂಡರು. ನ್ಯಾಯಾಲಯದಲ್ಲಿ ನಡೆದ ಅತ್ಯಂತ ತ್ವರಿತ ಪ್ರಕ್ರಿಯೆಯಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿತು. ಅಲ್ಲಿವರೆಗೆ ಪೊಲೀಸರಿಗೂ ಸಿಗದಿದ್ದ ಶಾಸಕರು ಇದ್ದಕ್ಕಿದ್ದಂತೆ ತಮ್ಮ ಗ್ರಾಮದಲ್ಲಿ ಪ್ರತ್ಯಕ್ಷವಾಗಿಬಿಟ್ಟರು.
ಅಲ್ಲಿನ ಜನರೋ ಇವರನ್ನು ತಲೆ ಮೇಲೆ ಹೊತ್ತು ಮೆರೆಸಿದರು, ಹೂವಿನ ಮಳೆ ಸುರಿಸಿದರು. ದುರಂತ ಎಂದರೆ ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕೂಗಿದರು!!
ಭಾರತದ ಇತಿಹಾಸದಲ್ಲಿ ಇದೇನೂ ಹೊಸದು ಎಂದು ನಾನೇನು ಹೇಳುತ್ತಿಲ್ಲ. ಈ ಹಿಂದೆ ಲಾಲು ಪ್ರಸಾದ್ ಯಾದವ್, ಜೆ. ಜಯಲಲಿತಾ, ಡಿ.ಕೆ. ಶಿವಕುಮಾರ್ ಅವರುಗಳು ಜೈಲಿನಿಂದ ಹೊರಬಂದಾಗಲೂ ಜನರು ಸ್ವಾಗತಿಸಿದ್ದಾರೆ, ಅದನ್ನು ನಾಡು ನೋಡಿದೆ. ಯಾರು ಆರೋಪಕ್ಕೆ ಗುರಿಯಾಗಿದ್ದಾರೆಯೋ ಅವರು ಆಡ್ವಾಣಿಯವರ ರೀತಿಯಲ್ಲಿ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಲಿಲ್ಲ. ಕನಿಷ್ಠ ಪಕ್ಷ ಬಿಜೆಪಿಯೂ ಈ ವಿಷಯದಲ್ಲಿ ಆಡ್ವಾಣಿ ಅವರಂಥ ಕ್ರಮಕ್ಕೆ ಮುಂದಾಗಲಿಲ್ಲ.
ಆಡ್ವಾಣಿ ವಿರುದ್ಧ ಹವಾಲಾ ಪ್ರಕರಣ ದಾಖಲಿಸಿದಾಗ, ಅವರ ವಿರುದ್ಧ ಸಿದ್ಧಾಂತದ ಪಿ. ವಿ. ನರಸಿಂಹರಾವ್ ಸರ್ಕಾರ ಅಧಿಕಾರದಲ್ಲಿತ್ತು, ಅದನ್ನು ದ್ವೇಷದ ರಾಜಕಾರಣ ಎಂದು ಹೇಳಿ ಸುಮ್ಮನಾಗಬಹುದಿತ್ತು. ಆದರೆ ಅವರು ರಾಜೀನಾಮೆ ನೀಡಿದರು. ಇಲ್ಲಿ ಶಾಸಕನ ಮೇಲೆ ದಾಳಿ ನಡೆದಾಗ ಅಧಿಕಾರದಲ್ಲಿರುವುದು ಅವರದ್ದೇ ಪಕ್ಷ. ಯಾರ ಮೇಲೆ ಆರೋಪ ಹೊರಿಸುತ್ತಾರೆ? ಈಗ ಶಾಸಕನ ಮೇಲೆ ಕ್ರಮ ಕೈಗೊಂಡರೆ ಸದ್ಯದಲ್ಲೆ ಎದುರಾಗುವ ಚುನಾವಣೆಯಲ್ಲಿ ಮತಗಳು ಕೈತಪ್ಪುತ್ತವೆ ಎಂಬ ಆತಂಕವೇ? ಯಾವುದಾದರೂ ನಿರ್ದಿಷ್ಟ ಸಮುದಾಯ ಮುನಿಸಿಕೊಳ್ಳುತ್ತದೆ ಎಂಬ ಅಳುಕೆ? ಯಾರಾದರೂ ನಾಯಕರು ಬೇಸರಪಟ್ಟುಕೊಳ್ಳುತ್ತಾರೆ ಎಂಬ ಭಯವೇ? ಇದರಿಂದಾಗಿ ಮುಂದೆ ಮತ್ತೆ ಅಧಿಕಾರಕ್ಕೆ ಬರಲು ಆಗುವುದಿಲ್ಲ ಎಂಬ ಚಿಂತೆಯೇ? ಇದೆಲ್ಲದರ ನಂತರ ಮತ್ತೊಂದು ಪ್ರಶ್ನೆಯನ್ನು ಬಿಜೆಪಿ ಕೇಳಿಕೊಳ್ಳಬೇಕು; ನೈತಿಕತೆಗಿಂತಲೂ ಅಧಿಕಾರವೇ ಮುಖ್ಯವೇ?
ಇದನ್ನೂ ಓದಿ: ವಿಸ್ತಾರ ಅಂಕಣ: ಸರ್ಕಾರಿ ನೌಕರರ ಕುರಿತು ಸಮಾಜದಲ್ಲಿ ಇಷ್ಟೊಂದು ಆಕ್ರೋಶ ಮಡುಗಟ್ಟಿದೆ ಏಕೆ? ಇದಕ್ಕೆ ಪರಿಹಾರವೇನು?
ಚುನಾವಣೆ ಹತ್ತಿರವಾದಂತೆ ಅನೇಕ ಜನರು ಕೆಲಸವನ್ನೇ ಮಾಡುವುದಿಲ್ಲ. ಊರಿಂದ ದೂರದಲ್ಲಿ ಕೂಲಿ ನಾಲಿ ಮಾಡುತ್ತಿದ್ದವರೆಲ್ಲ ವಾಪಸ್ ಊರಿಗೆ ಆಗಮಿಸಿ ತಮ್ಮ ವೋಟರ್ ಐಡಿಯನ್ನು ಸ್ವಚ್ಛಗೊಳಿಸಿ ಮಾರಾಟಕ್ಕೆ ಸಿದ್ಧರಾಗುತ್ತಾರೆ. ಯಾವ್ಯಾವ ರಾಜಕೀಯ ಪಕ್ಷಗಳು ಎಷ್ಟೆಷ್ಟು ಕೊಡುತ್ತವೆ ಎನ್ನುವುದನ್ನು ಕಾಯುತ್ತ, ಅವರು ನೀಡುವ ಊಟ, ಮದ್ಯಕ್ಕೆ ಬಾಯಿಬಿಟ್ಟು ಕೂರುತ್ತಾರೆ. ಹೌದು, ಎಲ್ಲ ಜನರೂ ಈ ರೀತಿ ಅಲ್ಲ. ಆದರೆ ಇಂತಹ ಲಕ್ಷಾಂತರ ಜನರಿದ್ದಾರೆ ಎನ್ನುವುದು ಬಹಿರಂಗ ಸತ್ಯ. ಹಾಗಾದರೆ ಬಿಜೆಪಿಯೂ ಇಂತಹ ಜನರ ಮಟ್ಟಕ್ಕೇ ಇಳಿದು ರಾಜಕಾರಣ ಮಾಡಬೇಕೆ? ನಿಜವಾಗಲೂ ಅದರ ಸ್ಥಾಪನೆಯ ಉದ್ದೇಶ ಅಧಿಕಾರ ಹಿಡಿಯುವುದು ಮಾತ್ರವೇ ಅಥವಾ ಸರಿಯಾದ ಮಾರ್ಗದಿಂದ ಅಧಿಕಾರ ಹಿಡಿಯುವುದೇ? ಎಂದು ಆ ಪಕ್ಷದ ನಾಯಕರು ಆಲೋಚಿಸಬೇಕು. ಸಾಮಾಜಿಕ ನಡವಳಿಕೆ ಕೆಳಕ್ಕೆ ಇಳಿದಿದೆ ಎಂದರೆ ಅದನ್ನು ನಿಧಾನವಾಗಿ ಎತ್ತರಿಸುತ್ತ ಹೋಗಬೇಕು.
ಅದು ಬಿಟ್ಟು, ಅಧೋಗತಿಯಲ್ಲಿರುವ ಸಮಾಜದ ಮಟ್ಟಕ್ಕೇ ಇಳಿದು ಅಧಿಕಾರ ಹಿಡಿಯುವುದಾದರೆ ಜನರು ಪರ್ಯಾಯ ರಾಜಕಾರಣವನ್ನು ಬಿಜೆಪಿಯಿಂದ ಬಯಸುವುದು ಏತಕ್ಕೆ ಎಂಬ ಪ್ರಶ್ನೆ ಮೂಡುತ್ತದೆ.
ಇತ್ತೀಚೆಗೆ ಈ ವಿಚಾರದಲ್ಲಿ ಚರ್ಚೆ ಮಾಡುತ್ತಿದ್ದಾಗ ಒಬ್ಬ ಬಿಜೆಪಿ ನಾಯಕರು, ಅಧಿಕಾರಕ್ಕೆ ಹೇಗಾದರೂ ಬಂದುಬಿಡಬೇಕು. ಆನಂತರ ಒಳ್ಳೆಯ ಕೆಲಸಗಳನ್ನು ಮಾಡಬಹುದು ಅಲ್ಲವೇ ಎಂದು ಹೇಳಿದರು. ಇಂತಹವರ ಪ್ರಕಾರ, ಗುರಿ ಮಾತ್ರ ಮುಖ್ಯ, ದಾರಿಯಲ್ಲ. ಯಾವ ಕೆಟ್ಟ ದಾರಿಯಲ್ಲಾದರೂ ಅಧಿಕಾರಕ್ಕೆ ಬಂದುಬಿಡಬೇಕು. ಆನಂತರ ಒಳ್ಳೆಯ ಕೆಲಸ ಮಾಡಬಹುದು ಎಂಬ ಭ್ರಮೆ. ಬೇವನ್ನು ಬಿತ್ತು ಮಾವು ಫಲವನ್ನು ಅಪೇಕ್ಷಿಸಲು ಎಂದಿಗೂ ಸಾಧ್ಯವಿಲ್ಲ.
ಮಾತೆತ್ತಿದರೆ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರದತ್ತ ಬೊಟ್ಟು ಮಾಡಲಾಗುತ್ತದೆ. ಹೌದು. ನರೇಂದ್ರ ಮೋದಿ ವಿರುದ್ಧ, ಗುಜರಾತ್ ಪ್ರಧಾನಿಯಾಗಿದ್ದಾಗಿನಿಂದಲೂ ಒಂದೇ ಒಂದು ಭ್ರಷ್ಟಾಚಾರದ ಆರೋಪವನ್ನು ಹೊರಿಸಲಾಗಿಲ್ಲ ಅಥವಾ ಸಾಬೀತುಪಡಿಸಲಾಗಿಲ್ಲ. ಅಷ್ಟರಮಟ್ಟಿಗೆ ಅವರು ತಮ್ಮ ಸಾರ್ವಜನಿಕ ಜೀವನದಲ್ಲಿ ಶುಭ್ರತೆ ಕಾಪಾಡಿಕೊಂಡು ಬಂದಿದ್ದಾರೆ. ಅಂಥ ಮೋದಿ ಅವರ ಮುಖ ತೋರಿಸಿ ಗೆದ್ದು ಬಂದವರು, ಯಾಕೆ ಭ್ರಷ್ಟಾರಾಗುತ್ತಿದ್ದಾರೆ ?
ಕಾಂಗ್ರೆಸ್ ವಿರುದ್ಧ ಬಿಜೆಪಿ ಮಾಡುವ ಮತ್ತೊಂದು ಆರೋಪ ಕುಟುಂಬ ರಾಜಕಾರಣದ್ದು. ಐದು-ಆರು ಬಾರಿ ಗೆದ್ದು ಬಂದರೂ ಇನ್ನೂ ಅವರಿಗೇ ಟಿಕೆಟ್ ಕೊಟ್ಟುಕೊಂಡು ಬರಲಾಗುತ್ತಿದೆ ಎಂದರೆ ಸುಮಾರು 30-35 ವರ್ಷದಿಂದ ಅವರೊಬ್ಬರದ್ದೇ ಅಧಿಕಾರ. ಹಾಗಾದರೆ ಆ ಕ್ಷೇತ್ರದಲ್ಲಿರುವ ಕಾರ್ಯಕರ್ತರು ಯಾವ ನಿರೀಕ್ಷೆ ಇಟ್ಟುಕೊಳ್ಳಬೇಕು? ಒಬ್ಬ ಕಾರ್ಯಕರ್ತ ತನ್ನ ಯೌವನದಲ್ಲಿ ಬಿಜೆಪಿಯನ್ನು ಸೇರಿದ್ದರೆ ಈಗ 35 ವರ್ಷದ ನಂತರ ಆತನಿಗೆ 55-60 ವರ್ಷವಾಗಿರುತ್ತದೆ. ಅಂದರೆ ಇನ್ನೊಬ್ಬರಿಗೆ ದುಡಿಯುವುದರಲ್ಲೇ ಆತನ ಜೀವನ ಮುಗಿದುಹೋಗುತ್ತದೆ. 2-3 ಬಾರಿ ಗೆದ್ದ ನಂತರ ಬೇರೆ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಏಕೆ ನಿರ್ಧಾರ ಮಾಡಬಾರದು? ಕಡೆಯ ಪಕ್ಷ ಈ ನಾಯಕ ಬೇರೆ ಕ್ಷೇತ್ರಕ್ಕೆ ತೆರಳಿ ಅಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬಹುದಲ್ಲ?
ಇದನ್ನೂ ಓದಿ: ವಿಸ್ತಾರ ಅಂಕಣ: ಮಸೂರಿಯಲ್ಲಿ ಕಲಿತ ಪಾಠವನ್ನು ಈ ಅಧಿಕಾರಿಗಳಿಗೆ ಮತ್ತೆ ನೆನಪಿಸುವವರು ಯಾರು?
ಬಿಜೆಪಿ ಸಿದ್ಧಾಂತಕ್ಕೆ ತದ್ವಿರುದ್ಧವಾದ ಸಿಪಿಐಎಂ ಕೇರಳದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ 31 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತು. ಅವರಲ್ಲಿ ಐವರು ಸಚಿವರೂ ಇದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಸ್ವತಃ ಸಿಎಂ ಪಿಣರಾಯಿ ವಿಜಯನ್‌ಗಿಂತಲೂ ಪ್ರಸಿದ್ಧರಾಗಿದ್ದ ಕೆ.ಕೆ. ಶೈಲಜಾ ಸಹ ಇದ್ದರು. 10 ವರ್ಷಕ್ಕಿಂತ ಹೆಚ್ಚು ನಿರಂತರವಾಗಿ ಶಾಸಕರಾಗಿದ್ದವರಿಗೆ ಟಿಕೆಟ್ ಇಲ್ಲ ಎಂಬ ನಿಯಮದಡಿ ಇವರಿಗೆ ಟಿಕೆಟ್ ತಪ್ಪಿಸಲಾಯಿತು ಎಂದು ಸಿಪಿಐಎಂ ಹೇಳಿತು. (ಶೈಲಜಾ ಅವರು ಸ್ವತಃ ಸಿಎಂಗಿಂತಲೂ ಜನಪ್ರಿಯರಾಗಿದ್ದರಿಂದ ಟಿಕೆಟ್ ತಪ್ಪಿಸಲಾಯಿತು ಎಂಬ ವಾದವಿದೆ, ಆದರೆ ಉಳಿದವರದ್ದು ಆ ರೀತಿ ಇರಲಿಲ್ಲ.). ಸಿಪಿಐಎಂನಿಂದಲಾದರೂ ಬಿಜೆಪಿ ಕಲಿಯದಿದ್ದರೆ ಅದ್ಯಾವ ನೈತಿಕತೆಯಿಂದ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತದೆ?
ಯುವಕರಿಗೆ ಆದ್ಯತೆ, ಸಾಮಾನ್ಯ ಕಾರ್ಯಕರ್ತನಿಗೆ ಅತ್ಯುನ್ನತ ಹುದ್ದೆಯನ್ನು ಹೆಚ್ಚು ನಿರೀಕ್ಷಿಸಬಹುದಾಗಿರುವುದು ಬಿಜೆಪಿಯಿಂದಲೇ. ಆ ಪಕ್ಷದ ಕಡೆಗೇ ಅನೇಕ ಯುವಕರು ಆಶಾಭಾವನೆಯಿಂದ ನೋಡುತ್ತಿದ್ದಾರೆ. ಭಾರತದ ರಾಜಕಾರಣವನ್ನು ಶುದ್ಧ ಮಾಡುತ್ತದೆ ಎಂಬ ನಿರೀಕ್ಷೆ ಇನ್ನೂ ಇದೆ. ಮೋದಿ ಸರ್ಕಾರವನ್ನು ತೋರಿಸಿ ಇನ್ನೆಷ್ಟು ದಿನ ತಮ್ಮ ತಪ್ಪುಗಳನ್ನು ರಾಜ್ಯ ಬಿಜೆಪಿ ಘಟಕಗಳು ಮುಚ್ಚಿಕೊಳ್ಳಲು ಸಾಧ್ಯ? ಮೇಲಿನಿಂದ ಒಳ್ಳೆಯ ತನ ಕೆಳಕ್ಕೆ ಹರಿಯುತ್ತಿರುವುದು ಜನಸಾಮಾನ್ಯರಿಗೆ ಅರಿವಿಗೆ ಬರಬೇಕು.
ಆಗ ಮಾತ್ರ ಮತದಾರರಿಗೆ ಬಿಜೆಪಿ ಮೇಲೆ ನಂಬಿಕೆ ಬರುತ್ತದೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೆಚ್ಚುತ್ತದೆ. ಇಲ್ಲದಿದ್ದರೆ ಮೂರರಲ್ಲಿ ಇದೂ ಒಂದು ಪಕ್ಷವಾಗಿ, ಕೊನೆಗೆ ಜನರಿಂದ ತಿರಸ್ಕೃತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಡ್ವಾಣಿಯವರ ಆದರ್ಶಗಳನ್ನು ಬಿಜೆಪಿ ಒಮ್ಮೆ ಅನುಸರಿಸುವುದು ಒಳಿತು.
ಇದನ್ನೂ ಓದಿ: ವಿಸ್ತಾರ ಅಂಕಣ: ಪ್ರಜಾಪ್ರಭುತ್ವವನ್ನು ಮರಳಿ ಹಳಿಗೆ ತರುವ ಹೊಣೆಯನ್ನು ಪ್ರಜೆಗಳೇ ಹೊರಬೇಕು