Site icon Vistara News

ವಿಸ್ತಾರ ಅಂಕಣ: ಸರ್ಕಾರಿ ನೌಕರರ ಕುರಿತು ಸಮಾಜದಲ್ಲಿ ಇಷ್ಟೊಂದು ಆಕ್ರೋಶ ಮಡುಗಟ್ಟಿದೆ ಏಕೆ? ಇದಕ್ಕೆ ಪರಿಹಾರವೇನು?

govt workers

ಎರಡು ದಿನದಿಂದ  ವಾಟ್ಸಾಪಿನಲ್ಲಿ ಒಂದು ಪೋಸ್ಟರ್ ಹರಿದಾಡುತ್ತಿದೆ. ನನಗೂ ಲಭಿಸಿತು. ಅದರ ಶೀರ್ಷಿಕೆ ಹೀಗಿತ್ತು. “ಸರ್ಕಾರಿ ನೌಕರರ ಡೈಲಿ ರೊಟೀನ್ ವರ್ಕ್” ಅದರ ಕೆಳಗೆ- “ಬೆಳಗ್ಗೆ 10.30ಕ್ಕೆ ಕಚೇರಿಗೆ, 11ಕ್ಕೆ ಟೀಗೆ ಕ್ಯಾಂಟೀನ್ಗೆ, 12ಕ್ಕೆ ಟೀ ಕುಡಿದು ವಾಪಸ್, 1ಕ್ಕೆ ಊಟದ ಬ್ರೇಕ್, 3ಕ್ಕೆ ಕೆಲಸಕ್ಕೆ ವಾಪಸ್, 4.30ಕ್ಕೆ ಮನೆಗೆ ಓಟ. ಈ ಸಂಭ್ರಮಕ್ಕೆ  ಅವರಿಗೆ ಸರಕಾರ 17% ಸಂಬಳ ಜಾಸ್ತಿ ಮಾಡಿದೆ. ದುಡ್ಡು ಜನರದ್ದು, ಶೋಕಿ ನೌಕರರದ್ದು. ಇದ್ರ ಮೇಲೆ ಲಂಚನೂ ಕೇಳ್ತಾರೆ”. ಇವಿಷ್ಟೂ ವಾಟ್ಸ್ಅಪ್ನಲ್ಲಿ ಬಂದ ಸಂದೇಶದಲ್ಲಿದ್ದ ಅಂಶಗಳು.

ಸರ್ಕಾರಿ ನೌಕರರು ತಮಗೆ 7ನೇ ವೇತನ ಆಯೋಗದ ಅನ್ವಯ ಸಂಬಳ ಹೆಚ್ಚಳ ಮಾಡಬೇಕು ಎಂದು ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿಂತಾಗಿನಿಂದ ಸಾಮಾಜಿಕ ವಲಯದಲ್ಲಿ ಇಂತಹ ಸಂದೇಶಗಳು ಹರಿದಾಡುತ್ತಿವೆ. ಯಾವುದೇ ಉತ್ಪಾದಕತೆಯೇ ಕಣ್ಣಿಗೆ ಗೋಚರಿಸದ,  ಈ ವರ್ಗಕ್ಕೆ ಸಂಬಳ ಏಕೆ ಜಾಸ್ತಿ ಮಾಡಬೇಕು ಎಂದು ಅನೇಕರು ಪ್ರಶ್ನಿಸಿದ್ದಾರೆ. ಇವರಿಗೆ ಲಂಚವೇ ಲಕ್ಷಾಂತರ ರೂ. ಸಿಗುವಾಗ ಪುಡಿಗಾಸು ಸಂಬಳ ಹೆಚ್ಚಳ ಮಾಡುವುದೇಕೆ ಏಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಅರ್ಥದ ಸಂದೇಶಗಳು ಎಲ್ಲೆಲ್ಲೂ ಹರಿದಾಡುತ್ತಿವೆ ಮತ್ತು ಫಾರ್ವರ್ಡ್ ಆಗುತ್ತಿವೆ.  

 ಹಾಗಾದರೆ ಇಷ್ಟೊಂದು ಜನರು ಹೇಳುತ್ತಿರುವುದೆಲ್ಲ ನಿಜವೇ? ನಿಜವಾಗಲೂ ಸರ್ಕಾರಿ ನೌಕರರು ಅಷ್ಟೊಂದು ಆಲಸಿಗಳ? ಅವರಿಂದ ರಾಜ್ಯಕ್ಕೆ, ದೇಶಕ್ಕೆ ಎಳ್ಳಷ್ಟೂ ಉಪಯೋಗ ಆಗಿಲ್ಲವೇ ? ಅಲ್ಲಿ ಇರುವವರೆಲ್ಲರೂ ಲಂಚದ ಹಣದಲ್ಲೇ ಬದುಕುವರೇ ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ.

ರಾಜ್ಯದಲ್ಲಿ ನೇರವಾಗಿ ಸರ್ಕಾರದ ಇಲಾಖೆಗಳು, ಹಾಗೂ ನಿಗಮಗಳನ್ನೂ ಸೇರಿ ಅಂದಾಜು 5 ಲಕ್ಷ ಸರ್ಕಾರಿ ನೌಕರರಿದ್ದಾರೆ.   ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಿ ನೌಕರರ ಬಗ್ಗೆ ಮಾತನಾಡುವವರೆಲ್ಲರೂ ಈ ಎಲ್ಲ 5 ಲಕ್ಷ ಜನರನ್ನೂ ಭೇಟಿ ಮಾಡಿ ಈ ಮಾತನ್ನು ಹೇಳುತ್ತಿರುವರೇ ? ಖಂಡಿತ ಇಲ್ಲ. ಸಾಮಾನ್ಯ ಜನರಲ್ಲಿ ಸರ್ಕಾರಿ ನೌಕರರ ಕುರಿತು ಇಂತಹ ಕೆಟ್ಟ ಅಭಿಪ್ರಾಯ ಮೂಡಲು ಕಾರಣರಾದವರು ಒಂದಿಷ್ಟು ನೌಕರರು ಮಾತ್ರ. ಅವರ ಪ್ರಮಾಣ  ಸುಮಾರು ಶೇಕಡ 4ರಿಂದ 5ರಷ್ಟಿರಬಹುದು.  ಇದು ಹೇಗೆ ಎಂದು ಯಾರಾದರೂ ಕೇಳಬಹುದು. ಸಾಮಾನ್ಯವಾಗಿ ಜನರಿಗೆ ಸರ್ಕಾರಿ ನೌಕರರ ನೇರಾನೇರ ಭೇಟಿಯಾಗುವುದು, ಅವರ ಕಾರ್ಯವೈಖರಿ ಅನುಭವಕ್ಕೆ  ಬರುವುದು  ಕಂದಾಯ ಇಲಾಖೆ, ಪಡಿತರ ಇಲಾಖೆ, ಆರೋಗ್ಯ ಇಲಾಖೆ, ಅಂಚೆ ಇಲಾಖೆ, ಪೊಲೀಸ್, ಸಚಿವಾಲಯ, ಎಸ್ಕಾಂಗಳು, ಸಾರಿಗೆ, ನಗರ ಪಾಲಿಕೆಗಳು, ಗ್ರಾಮ ಪಂಚಾಯಿತಿಗಳು… ಇತ್ಯಾದಿ ಬೆರಳೆಣಿಕೆ ಕಚೇರಿಗಳಲ್ಲಿ ಮಾತ್ರ. ಉಳಿದಂತೆ ಸರಕಾರದಲ್ಲಿ ನೂರಾರು ಇಲಾಖೆಗಳು ಇರುತ್ತವೆ. ಅಲ್ಲಿ ಜನರ ಒಡನಾಟವೇ ಇರುವುದಿಲ್ಲ.   ಅಲ್ಲಿಯೂ, ನೇಪಥ್ಯದಲ್ಲಿ ಇದ್ದುಕೊಂಡೆ  ದಿನಪೂರ್ತಿ ಅನಾಮಿಕರಂತೆ ಕೆಲಸ ಮಾಡಿ ಮನೆಗೆ ಹೋಗುವ ಶೇ.20 ನೌಕರರು ಜನರಿಗೆ ಗೊತ್ತೇ ಆಗುವುದಿಲ್ಲ. ಅಲ್ಲಿ ಜನರೊಂದಿಗೆ ಒಡನಾಡಲು ಫ್ರಂಟ್ ಡೆಸ್ಕ್‌ಗಳಲ್ಲಿ ಕುಳಿತಿರುವ ಕೇಸ್ ವರ್ಕರ್‌ಗಳು, ಸಹಿ ಹಾಕುವ ಅಧಿಕಾರವುಳ್ಳ ಅಧಿಕಾರಿಗಳು. ಇಂಥವರಲ್ಲಿ ಆಲಸಿಗಳೆನ್ನುವ, ಭ್ರಷ್ಟರನ್ನು ನೋಡುವ ಜನರು ಒಟ್ಟಾರೆ ಸರ್ಕಾರಿ ನೌಕರರೆಲ್ಲರೂ ಹೀಗೆಯೇ ಎಂದು ತೀರ್ಮಾನಿಸಿಬಿಡುತ್ತಾರೆ.

ಪೊಲೀಸಿನವರು ಲಂಚ ಹೊಡೆಯುತ್ತಾರೆ, ಜನರಿಗೆ ಹಿಂಸೆ ಕೊಡುತ್ತಾರೆ ಎಂದು ಸಾರಾಸಗಟಾಗಿ ಹೇಳಿಬಿಡಬಹುದು. ಆದರೆ ನಾವೆಲ್ಲರೂ ಮನೆಯಲ್ಲಿ ಮಲಗಿದ್ದಾಗ ರಾತ್ರಿಯೆನ್ನದೆ ಗಸ್ತು ತಿರುಗುತ್ತ, ಕಳ್ಳಕಾಕರ ನಡುವೆಯೂ ಓಡಾಡುವ ಪೊಲೀಸಿನವರೇ ಹೆಚ್ಚಿನವರಿದ್ದಾರೆ ಎನ್ನುವುದು ಎಷ್ಟು ಜನರಿಗೆ ಗೊತ್ತು? ಯಾವುದೇ ಹಣಕಾಸಿನ ವಹಿವಾಟಿನ ಗಂಧ ಗಾಳಿಯೂ ಇಲ್ಲದೆ, ದಿನ ಬೆಳಗಾದರೆ ಮನೆಯಿಂದ ಊಟ ಕಟ್ಟಿಕೊಂಡು ದೂರದಲ್ಲಿರುವ ಶಾಲೆಗಳಿಗೆ ತೆರಳಿ ಸಂಜೆವರೆಗೆ ಪಾಠ ಪ್ರವಚನ ಮಾಡಿ ಮನೆಗೆ ಆಗಮಿಸುವ ಲಕ್ಷಾಂತರ ಶಿಕ್ಷಕರನ್ನು ಯಾರಾದರೂ ಸರ್ಕಾರಿ ನೌಕರರು ಎಂದು ಪರಿಗಣಿಸಿದ್ದಾರೆಯೇ? ಸರ್ಕಾರ ಪ್ರತಿ ವರ್ಷ ಬಜೆಟ್ ಗಾತ್ರವನ್ನು ಹೆಚ್ಚಳ ಮಾಡಿಕೊಂಡು ಹೆಚ್ಚಿನ ಗುರಿ ನೀಡುತ್ತಿರುತ್ತದೆ. ಈ ಗುರಿಯ ಬೆನ್ನತ್ತಿ, ತೆರಿಗೆ ಸೋರಿಕೆಯನ್ನು ತಡೆಗಟ್ಟಿ ಹೆಚ್ಚಿನ ತೆರಿಗೆ ಸಂಗ್ರಹಿಸುವ ತೆರಿಗೆ ಇಲಾಖೆ ಅಧಿಕಾರಿಗಳನ್ನು ಅನುತ್ಪಾದಕರು ಎಂದು ಹೇಳಬಹುದೆ? ಇದೇ ಅಧಿಕಾರಿಗಳು ಸಂಗ್ರಹಿಸುವ ತೆರಿಗೆಯಿಂದಲೇ ಅಲ್ಲವೇ ನಮ್ಮ ಮೂಲಸೌಕರ್ಯ ಯೋಜನೆಗಳು, ಸಹಾಯ ಧನಗಳು, ಸಾಮಾಜಿಕ ಪಿಂಚಣಿ, ಸರ್ಕಾರಿ ಶಾಲಾ ಮಕ್ಕಳಿಗೆ ಊಟದವರೆಗೆ ಎಲ್ಲವೂ ಬರುವುದು?

ಶಿಕ್ಷಣ ಇಲಾಖೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಆ ಇಲಾಖೆಗೆ ನೀಡುವ ಅನುದಾನದ ಬಹುದೊಡ್ಡ ಮೊತ್ತ ಶಿಕ್ಷಕರ ವೇತನಕ್ಕೆ ಹೋಗುತ್ತದೆ. ಶಿಕ್ಷಣ ಇಲಾಖೆಯಲ್ಲಿ ಯಾವ ಅಭಿವೃದ್ಧಿ ಮಾಡಲೂ ಹಣವೇ ಇಲ್ಲ, ಎಲ್ಲವೂ ಬರಿಯ ಶಿಕ್ಷಕರ ವೇತನಕ್ಕೇ ಹೋಗುತ್ತಿದೆ ಎಂದು ಅನೇಕರು ಮಾತನಾಡುವಾಗ ಹೇಳುವುದನ್ನು ಕೇಳಿದ್ದೇನೆ. ಹಾಗಾದರೆ ಶಿಕ್ಷಕರು ಪ್ರತಿನಿತ್ಯ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಅನುತ್ಪಾದಕತೆಯೇ? ಮುಂದಿನ ಪೀಳಿಗೆಗೆ ಕಲಿಸುವುದು, ಒಳ್ಳೆಯ ನಾಗರಿಕನನ್ನಾಗಿ ಮಾಡಲು ಪ್ರಯತ್ನಿಸುವುದು ಹೇಗೆ ವೇಸ್ಟ್ ಆಫ್ ರಿಸೋರ್ಸ್ ಆಗುತ್ತದೆ?

ಹೀಗೆ, ಕೆಲವೇ ಸರ್ಕಾರಿ ನೌಕರರ ಕಾರಣಕ್ಕೆ ಒಟ್ಟಾರೆ ನೌಕರ ವರ್ಗವನ್ನೇ ದೂರುವ ಕಾರ್ಯ ನಡೆದೇ ಇದೆ. 6ನೇ ವೇತನ ಆಯೋಗದಲ್ಲಿ ವೇತನ ಹೆಚ್ಚಳವಾಗಿ ಐದು ವರ್ಷವಾಯಿತು. ಹಾಗಾದರೆ ಐದು ವರ್ಷದ ನಂತರವಾದರೂ ವೇತನ ಹೆಚ್ಚಳ ಮಾಡಿ ಎಂದು ಕೇಳುವುದು ಹೇಗೆ ಮಹಾಪರಾಧವಾಗುತ್ತದೆ? ಸಾಮಾನ್ಯವಾಗಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರೂ ವರ್ಷಕ್ಕೆ 5-10% ವರೆಗೆ ವೇತನವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಾರೆ. ಪ್ರತಿ ವರ್ಷ ಹಣದುಬ್ಬರೂ ಬಹುತೇಕ ಇದೇ ಪ್ರಮಾಣದಲ್ಲಿ ಏರಿಕೆ ಆಗುವುದರಿಂದ ಈ ವೇತನ ಹೆಚ್ಚಳದಿಂದ ಆತನ ಜೀವನದಲ್ಲಿ ಏನೂ ಸುಧಾರಣೆ ಆಗುವುದಿಲ್ಲ. ಇದ್ದಲ್ಲಿಯೇ ಓಡಲು ಈ ವೇತನ ಹೆಚ್ಚಳ ಅನುಕೂಲವಾಗುತ್ತದೆ ಅಷ್ಟೆ. ಇದೀಗ ಸರ್ಕಾರಿ ನೌಕರರು ಕೇಳುತ್ತಿರುವ ವೇತನ ಹೆಚ್ಚಳ ಪ್ರಮಾಣವೂ ಬಹುತೇಕ ಅಷ್ಟೇ ಇರುತ್ತದೆ. ಹೌದು, ಕೆಲವರಿಗೆ ಈ ವೇತನ ಲೆಕ್ಕಕ್ಕೇ ಇರುವುದಿಲ್ಲ. ಅವರಿಗೆ ಲಂಚದಿಂದಲೇ ಸಾಕಷ್ಟು ಹಣ ಸಿಗುತ್ತದೆ. ವೇತನ ಸುಮ್ಮನೆ ಖಾತೆಯಲ್ಲಿ ಬಿದ್ದಿರುತ್ತದೆ. ಅಂಥವರನೇಕರನ್ನು ಜನರು ಲೋಕಾಯುಕ್ತ ದಾಳಿ ವೇಳೆ ಮಾಧ್ಯಮಗಳಲ್ಲಿ ನೋಡಿರುತ್ತಾರೆ. ಇಂಥ ನೌಕರರಿಂದಲೇ ಇತರೆ ನೌಕರರಿಗೂ ಕಳಂಕ ಬಂದುಬಿಟ್ಟಿದೆ.

ಸರ್ಕಾರಿ ನೌಕರಿಗೆ ಸೇರುವುದು ಅನೇಕ ಬಾರಿ ಸುಲಭ. ಈಗಂತೂ ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶನದ ಭಾಗವನ್ನು ಕಡಿಮೆ ಮಾಡಿರುವುದರಿಂದ ನೇಮಕಾತಿ ಪ್ರಕ್ರಿಯೆ ಸಾಕ‍‍ಷ್ಟು  ಸುಧಾರಿಸಿದೆ. ಪಿಎಸ್ಐನಂತಹ ಹಗರಣಗಳು ಇನ್ನೂ ಕಣ್ಣಮುಂದೆಯೇ ಇರುವಾಗ, ಎಲ್ಲ ಸುಧಾರಿಸಿಬಿಟ್ಟಿದೆ ಎಂದು ಹೇಳುವ ಧೈರ್ಯ ಯಾರಿಗೂ ಇರುವುದಿಲ್ಲ. ಆದರೆ ಈ ಹಿಂದಿನದ್ದಕ್ಕಿಂತ ಒಂದಷ್ಟು ಸುಧಾರಣೆ ಕಂಡಿದೆ ಎಂದು ಹೇಳಬಹುದು. ಆದರೆ ಒಮ್ಮೆ ಸರ್ಕಾರಿ ನೌಕರಿಗೆ ಸೇರಿದ ನಂತರ ಆತನನ್ನು ಕೆಲಸದಿಂದ ವಜಾ ಮಾಡಬೇಕೆಂದರೆ ಅದು ನಿಜವಾಗಲೂ ಹರಸಾಹಸವೇ ಸರಿ.

ಇಂಥದ್ದೊಂದು ಸುರಕ್ಷತೆಯನ್ನು ಸಂವಿಧಾನ, ಕಾನೂನು ನೀಡಿದೆ. ಇದರ ಹಿಂದಿನ ಉದ್ದೇಶ ಸರಿಯಾಗಿಯೇ ಇದೆ. ಸರ್ಕಾರಿ ನೌಕರರು ಅನೇಕ ಬಾರಿ ರಾಜಕಾರಣಿಗಳ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಕಾಯ್ದೆ, ಕಾನೂನುಗಳಿಗೆ ಬೆಲೆ ಇಲ್ಲದಂತೆ ತಾವು ಹೇಳಿದ್ದನ್ನು ಮಾಡಬೇಕು ಎಂದು ಮೌಖಿಕ ಆದೇಶ ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ಒತ್ತಾಯಕ್ಕೆ ಮಣಿಯದಿದ್ದರೆ ಸುಲಭವಾಗಿ ಕೆಲಸದಿಂದ ತೆಗೆದುಹಾಕಬಹುದು. ಯಾವುದೇ ಭಯವಿಲ್ಲದೆ, ಅಂಜಿಕೆಯಿಲ್ಲದೆ, ಕೆಲಸ ಕಳೆದುಕೊಳ್ಳುವ ಆತಂಕವಿಲ್ಲದೆ ಸರ್ಕಾರಿ ನೌಕರರು ಕೆಲಸ ಮಾಡುವಂತಾಗಲಿ ಎಂದು ಈ ರಕ್ಷಣೆ ನೀಡಲಾಗಿದೆ. ಆದರೆ ಇದೇ ರಕ್ಷಣೆಯನ್ನು ಅನೇಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೆಚ್ಚೆಂದರೆ ಅಮಾನತು ಮಾಡಬಹುದು, ನಂತರ ಸೇರಿಸಿಕೊಳ್ಳಲೇಬೇಕು. ಹೀಗಾಗಿ ಏನು ಬೇಕಾದರೂ ಮಾಡಬಹುದು, ಏನೂ ಮಾಡದೆಯೂ ಇರಬಹುದು ಎಂಬ ಮನಃಸ್ಥಿತಿಯ ದೊಡ್ಡ ಸಂಖ್ಯೆಯೂ ಸರ್ಕಾರಿ ನೌಕರರಲ್ಲಿದೆ.

ಭ್ರಷ್ಟಾಚಾರ ಎನ್ನುವುದು ಸರ್ಕಾರಿ ಕಚೇರಿಯಲ್ಲಿ ತುಂಬಿ ತುಳುಕುತ್ತಿದೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಈ ಭ್ರಷ್ಟಾಚಾರಕ್ಕೆ ನೇರವಾಗಿ ರಾಜಕಾರಣಿಗಳೇ ಹೊಣೆ. ರಾಜಕಾರಣಿಗಳು ಭ್ರಷ್ಟರಾಗದೇ ಇದ್ದರೆ ಈ ಅಧಿಕಾರಿಗಳ ಮೇಲೆ ನಿಯಂತ್ರಣ ಹೇರಬಹುದು. ಒಂದೋ ಅವರೇ ಭ್ರಷ್ಟರಾಗಿರುವುದರಿಂದ ಅಧಿಕಾರಿಗಳ ಭ್ರಷ್ಟಾಚಾರವನ್ನು ನೋಡಿಯೂ ನೋಡದಂತೆ ಸುಮ್ಮನಿರುತ್ತಾರೆ. ಅಥವಾ ಅವರೇ ಭ್ರಷ್ಟಾಚಾರದಲ್ಲಿ ನಿರತರಾಗಿ, ಭ್ರಷ್ಟಾಚಾರದ ಹಣವನ್ನು ಅಧಿಕಾರಿಗಳ ಮೂಲಕವೇ ಸಂಗ್ರಹಿಸುತ್ತ ಅವರಿಗೂ ಒಂದಷ್ಟು ಪಾಲು ಕೊಡುತ್ತಿರುತ್ತಾರೆ. ಇದೇ ಕಾರಣಕ್ಕೆ ಭ್ರಷ್ಟ ಅಧಿಕಾರಿಗಳು ಲಂಗು ಲಗಾಮಿಲ್ಲದೆ ಲಂಚ ಹೊಡೆಯುತ್ತಿರುತ್ತಾರೆ.

ಆ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿತ್ತು, ಈ ಸರ್ಕಾರ ಉತ್ತಮ ಸೇವೆ ಮಾಡಿತು, ಇನ್ನೊಂದು ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿತ್ತು ಎಂದು ಮಾತನಾಡುತ್ತೇವೆ. ಹಾಗಾದರೆ ಒಂದು ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗಲೂ, ಇನ್ನೊಂದು ಸರ್ಕಾರ ಭ್ರಷ್ಟಚಾರದಲ್ಲಿ ನಿರತವಾಗಿದ್ದಾಗಲೂ ಇದ್ದದ್ದು ಅದೇ ಅಧಿಕಾರಿ ವ್ಯವಸ್ಥೆ ಅಲ್ಲವೇ? ಬದಲಾಗಿದ್ದು ಏನು? ರಾಜಕಾರಣಿಗಳು ಮಾತ್ರ. ಹಾಗಾಗಿ ರಾಜಕಾರಣಿಗಳು ಭ್ರಷ್ಟವಾಗಿರುವುದೇ ನೌಕರ ವರ್ಗ ಭ್ರಷ್ಟವಾಗಲು ನೇರ ಕಾರಣ. ಭ್ರಷ್ಟ ರಾಜಕಾರಣಿಗಳನ್ನು ಆಯ್ಕೆ ಮಾಡಿದ್ದು ಯಾರು? ಕೇವಲ 5 ಲಕ್ಷ ಸಂಖ್ಯೆಯಿರುವ ನೌಕರರು ಮತ್ತು ಅವರ ಕುಟುಂಬದವರೇ? ಇಡೀ ರಾಜ್ಯದ ಕೋಟ್ಯಂತರ ಜನರಿಂದಲೇ ಆಯ್ಕೆಯಾದವರು ಈ ಭ್ರಷ್ಟ ರಾಜಕಾರಣಿಗಳು. ಹಾಗಾಗಿ ವ್ಯವಸ್ಥೆ ಸರಿಯಾಗಬೇಕೆಂದರೆ ಮೊದಲಿಗೆ ಸರಿಯಾದವರನ್ನು ಆಯ್ಕೆ ಮಾಡಿ ಕಳಿಸುವ ಹೊಣೆ ನಮ್ಮೆಲ್ಲ ಮತದಾರರ ಮೇಲಿದೆ. ಅದನ್ನು ಬಿಟ್ಟು ಇನ್ನೊಬ್ಬರತ್ತ ಬೊಟ್ಟು ಮಾಡುವದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎನ್ನುವುದನ್ನು ವಿನಮ್ರವಾಗಿಯೇ ಹೇಳಬೇಕಾಗುತ್ತದೆ.

ಹೀಗೆ ಆಯ್ಕೆಯಾಗಿ ಬಂದ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡರೆ, ಕೇವಲ 6 ತಿಂಗಳಲ್ಲಿ ಇಡೀ ಸರ್ಕಾರಿ ವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತದೆ ಎಂದು ಇತರೆ ಅನೇಕ ರಾಜ್ಯಗಳನ್ನು ನೋಡಿದ ಅನುಭವದಲ್ಲಿ ಹೇಳಬಹುದು. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರಿಂದ, ಡಿಬಿಟಿ ಮುಖಾಂತರ ಸರ್ಕಾರದ ಅನೇಕ ಸೌಲಭ್ಯಗಳ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುತ್ತಿದೆ. ಇಲ್ಲಿ ಭ್ರಷ್ಟಾಚಾರ ಇಲ್ಲವಾಯಿತು ಅಲ್ಲವೇ? ಹಾಗೆಯೇ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕು ಅವಕಾಶವಿದೆ. ಆದರೆ ಶಾಸಕಾಂಗವು ಇದನ್ನು ಮಾಡಬೇಕು ಅಷ್ಟೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಮಸೂರಿಯಲ್ಲಿ ಕಲಿತ ಪಾಠವನ್ನು ಈ ಅಧಿಕಾರಿಗಳಿಗೆ ಮತ್ತೆ ನೆನಪಿಸುವವರು ಯಾರು?

ಹಾಗಾದರೆ ಸರ್ಕಾರಿ ನೌಕರರದ್ದು ಏನೂ ತಪ್ಪೇ ಇಲ್ಲವೇ ಎಂದು ನೀವು ಕೇಳಬಹುದು.  ಖಂಡಿತ ಇದೆ. ಉದಾಹರಣೆಗೆ, ಈಗ ಕಂಪ್ಯೂಟರನ್ನು ಚಿಕ್ಕ ಮಕ್ಕಳೂ ಬಳಸುತ್ತಾರೆ. ಅದೊಂದು ಶಿಕ್ಷಣ ಪಡೆದು ಮಾಡಬೇಕಾದ ಕೆಲಸ ಎನ್ನುವ ಹಂತವನ್ನು ದಾಟಿದೆ. ಬೆಳಗ್ಗೆ ಎದ್ದು ಹಲ್ಲುಜ್ಜುವ ಹಾಗೆ, ಸ್ನಾನ ಮಾಡುವ ಹಾಗೆ ಸಹಜವಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಕಂಪ್ಯೂಟರ್ ಬಳಕೆಯನ್ನು ಆರಂಭಿಸಿ ಕನಿಷ್ಠ ಎರಡು ದಶಕ ಆಗಿದೆ. ಕಳೆದ ವರ್ಷ ಸರ್ಕಾರದ ಸುತ್ತೋಲೆಯೊಂದು ಬಂದಿತ್ತು. ಕಂಪ್ಯೂಟರ್ ಬಳಕೆಯನ್ನು ಕಡ್ಡಾಯ ಮಾಡುವುದಕ್ಕೂ ಮುಂಚೆ ಸರ್ಕಾರಿ ಕೆಲಸಕ್ಕೆ ಸೇರಿದವರು ಕಡ್ಡಾಯವಾಗಿ ಒಂದು ತರಬೇತಿ ಪಡೆದು ಕಂಪ್ಯೂಟರ್ ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕು ಎಂದು ಸರ್ಕಾರ ನಿಯಮ ಮಾಡಿದೆ. ಈ ರೀತಿ  2.6 ಲಕ್ಷ ಅಧಿಕಾರಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಸುಮಾರು 83 ಸಾವಿರ ನೌಕರರು ಅನುತ್ತೀರ್ಣರಾಗಿದ್ದಾರೆ. ಮಜಾ ಏನು ಎಂದರೆ ಇಲ್ಲಿವರೆಗೂ 3.5 ಲಕ್ಷ ಸರ್ಕಾರಿ ನೌಕರರು ಪರೀಕ್ಷೆಯನ್ನೇ ತೆಗೆದುಕೊಂಡಿಲ್ಲ. ಇವರೆಲ್ಲರೂ ಕಡ್ಡಾಯ ಪರೀಕ್ಷೆ ತೆಗೆದುಕೊಂಡು ತೇರ್ಗಡೆ ಆಗದಿದ್ದರೆ ಮುಂಬಡ್ತಿ ಪಡೆಯಲು, ವಾರ್ಷಿಕ ವೇತನ ಬಡ್ತಿಗೆ ಅರ್ಹರಾಗಿರುವುದಿಲ್ಲ ಎಂದು ಇಂತಹ ಸುತ್ತೋಲೆಗಳನ್ನು ಸರ್ಕಾರ ಹೊರಡಿಸುತ್ತಲೇ ಇರುತ್ತದೆ. ಆದರೆ ಸರ್ಕಾರಿ ನೌಕರರು ಇದಕ್ಕೆ ಕ್ಯಾರೆ ಎನ್ನುವುದಿಲ್ಲ. ಹಾಗಾದರೆ ಇದನ್ನು ಸರ್ಕಾರಿ ನೌಕರರ ಆಲಸ್ಯ ಎನ್ನದೇ ಇನ್ನೇನು ಕರೆಯಬೇಕು? ಸರ್ಕಾರದ ಆದೇಶ ಹೊರಡಿಸುವುದೂ ಅದೇ ಅಧಿಕಾರಿಗಳು, ಆದರೆ ಪಾಲನೆ ಮಾಡದೇ ಇದ್ದರೆ ಜನರಿಗೆ ಯಾವ ಸಂದೇಶ ರವಾನೆ ಆಗುತ್ತದೆ? ನೌಕರರಿಗೆ ವೇತನ ಹೆಚ್ಚಳಕ್ಕೆ ಪ್ರತಿಭಟನೆ ಮಾಡುವ ಸರ್ಕಾರಿ ನೌಕರರ ಸಂಘಗಳು, ಅದರ ಪದಾಧಿಕಾರಿಗಳು ನೌಕರರ ಇಂತಹ ವರ್ತನೆಗಳನ್ನು ಸರಿಪಡಿಸುವತ್ತಲೂ ಗಮನ ಹರಿಸಬೇಕಲ್ಲವೇ? ಇಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಸಹಜವಾಗಿಯೇ ನೌಕರರ ಕುರಿತು ಸಮಾಜದಲ್ಲಿ ಉತ್ತಮ ಭಾವನೆ ಮೂಡುತ್ತದೆ. ಸರ್ಕಾರಿ ನೌಕರರ ಕುರಿತು ಜನರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುವುದು ಎಷ್ಟು ಮುಖ್ಯವೋ, ಅದಕ್ಕಿಂತಲೂ ಹೆಚ್ಚು ಮುಖ್ಯ ಹಾಗೂ ಹೊಣೆಗಾರಿಕೆ ಸ್ವತಃ ಸರ್ಕಾರಿ ನೌಕರರ ಮೇಲಿದೆ ಎನ್ನದೇ ವಿಧಿಯಿಲ್ಲ.

ಇದನ್ನೂ ಓದಿ: ವಿಸ್ತಾರ ಅಂಕಣ: ಪ್ರಜಾಪ್ರಭುತ್ವವನ್ನು ಮರಳಿ ಹಳಿಗೆ ತರುವ ಹೊಣೆಯನ್ನು ಪ್ರಜೆಗಳೇ ಹೊರಬೇಕು

ಇದಕ್ಕಿಂತ ಪ್ರಮುಖವಾಗಿ ಸರಕಾರಿ ನೌಕರರು ಅರಿತುಕೊಳ್ಳಲೇಬೇಕಾದ ಎರಡು ಸಂಗತಿಗಳಿವೆ: ಮೊದಲನೆಯದು-ಸರಕಾರ ಈ ವೇತನ ಹೆಚ್ಚಳವನ್ನು ಜಾರಿ ಮಾಡುತ್ತಿರುವ ಸಮಯ ಸನ್ನಿವೇಶವನ್ನು ಸ್ವಲ್ಪ ಗಮನಿಸಿ. ಇಡೀ ವಿಶ್ವವೇ ಅರ್ಥಿಕ ಹಿಂಜರಿತಕ್ಕೆ ಸಿಕ್ಕಿ ನಲುಗಿದೆ. ದೊಡ್ಡ ದೊಡ್ಡ ಎಂಎನ್‌ಸಿಗಳೇ ಈ ಸವಾಲು ಎದುರಿಸಲು ಸ್ಯಾಲರಿ ಕಡಿತ ಮಾಡಿ, ನೌಕರರನ್ನು ಮನೆಗೆ ಕಳುಹಿಸುತ್ತಿವೆ. ಆದರೆ, ಸರಕಾರಿ ನೌಕರರಿಗೆ ಮಾತ್ರ ಸಂಬಳ ಹೆಚ್ಚಳವಾಗುತ್ತಿದೆ. ಅಂದರೆ, ನಿಮ್ಮನ್ನು ಸರಕಾರ ವಿಶೇಷವಾಗಿ ಪರಿಗಣಿಸಿದೆ ಎಂದೇ ಅರ್ಥ. ಅದಕ್ಕೆ ತಕ್ಕಂತೆ ನೀವು ಸೇವಾ ಸೌಲಭ್ಯ ನೀಡಬೇಕು. 

ಜತೆಗೆ, ಇಂಥಾ ಕ್ಲಿಷ್ಟ ಸಮಯದಲ್ಲಿ  ಸರಕಾರ ಸಂಬಳ ಹೆಚ್ಚಿಸಿರುವ ಕ್ರಮವನ್ನೂ ಯಾರೇನೂ ಸಿನಿಕತನದಲ್ಲಿ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ, ಸರಕಾರ ಎಂಬುದು ಖಾಸಗಿ ಕಂಪೆನಿಯಲ್ಲ. ಅದೊಂದು ಬೃಹತ್ತಾದ ವ್ಯವಸ್ಥೆ. ಎಂಥಾ ಕ್ಲಿಷ್ಟಕರ ಸನ್ನಿವೇಶದಲ್ಲೂ ಸರಕಾರಿ ವ್ಯವಸ್ಥೆ ತನ್ನ ನೌಕರರ ಪರ ನಿಲ್ಲಬೇಕು ಮತ್ತು ಅದು ಇತರೆ ಖಾಸಗಿ ಕಂಪೆನಿಗಳಿಗೆ ಆದರ್ಶವಾಗಿರಬೇಕು. ಅದಕ್ಕಾದರೂ ಅದು ಸಂಬಳ ಹೆಚ್ಚಿಸಿರುವುದು ಸೂಕ್ತವೇ. ಆದರೆ, ಖಾಸಗಿ ಕಂಪನಿಗಳಿಗೆ ಸರಕಾರ ಮಾತ್ರವಲ್ಲ, ಸರಕಾರಿ ನೌಕರರು ಆದರ್ಶವಾಗಿರಬೇಕು.  

ಎರಡನೆಯ ಸಂಗತಿ: ಈ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ನೌಕರರಾಗುವುದು ಎಂದರೆ, ಅದು ತಮಾಶೆಯ ಮಾತಲ್ಲ. ಅವರು ಸಹಜವಾಗಿ ಮಜ್ಜಿಗೆ ಕಡೆದ ಬಳಿಕ ಸಿಗುವ ಬೆಣ್ಣೆಯೇ ! ಅಂದರೆ, ಪ್ರತಿಭಾವಂತರೇ ಆಗಿರುತ್ತಾರೆ. ಹಾಗಾಗಿ, ಅಲ್ಲಿ ನೌಕರಿ ಸಿಗದವರು ಸಹಜವಾಗಿಯೇ, ಆ ನೌಕರಿ ಬಗ್ಗೆ ವಿಪರೀತ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನನಗೆ ಸಿಕ್ಕಿದ್ದಿದ್ದರೆ… ಎಂಬ ರೇ ಜಗತ್ತಿನಲ್ಲೂ ಇರುತ್ತಾರೆ. ಇದಲ್ಲದೇ, ಇಡೀ ಸಮಾಜ ಖಾಸಗಿ ವಲಯದ ಪುನಶ್ಚೇತನದಿಂದ ಆರ್ಥಿಕವಾಗಿ ಸದೃಢವಾಗಲಾರಂಭಿಸಿದೆ. ಇಂಥಾ ಜನ ಒಳ್ಳೆಯ ಸೇವೆ ಬಯಸುವುದು ತಪ್ಪಲ್ಲ. ಅದು ಅವರ ಹಕ್ಕು ಕೂಡ. ಇದನ್ನು ಸರಕಾರಿ ನೌಕರರು ಮರೆಯಬಾರದು.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದಲ್ಲೇಕೆ ಮಿಲಿಟರಿ ಆಡಳಿತ ಸಾಧ್ಯವಿಲ್ಲ ಎಂದರೆ…

Exit mobile version