Site icon Vistara News

ವಿಸ್ತಾರ ಅಂಕಣ: ರಾಜಕೀಯ ಕಲಿಸಲು ಶಾಲೆಯಲ್ಲ, ಬೇಕಿರುವುದು ಶಾಲಾ ದಿನಗಳಿಂದಲೇ ರಾಜಕೀಯ

student protest

ಕರ್ನಾಟಕ ವಿಧಾನಸಭೆಗೆ (Karnataka assembly) ಈ ಬಾರಿ ಹೊಸದಾಗಿ 70 ಶಾಸಕರು ಆಯ್ಕೆಯಾಗಿದ್ದಾರೆ. 224 ಜನರ ವಿಧಾನಸಭೆಯಲ್ಲಿ 70 ಹೊಸ ಶಾಸಕರು ಎಂದರೆ ಮೂರನೇ ಒಂದು ಭಾಗದಷ್ಟು ಹೊಸ ನೀರು ಹರಿದು ಬಂದಿದೆ ಎಂದು ಖುಷಿ ಪಡಬಹುದು. ಪ್ರಮುಖವಾಗಿ ಕಾಂಗ್ರೆಸ್ ಪಕ್ಷವು ಹೆಚ್ಚು ಹೊಸಬರಿಗೆ, ಅನೇಕ ಕಡೆಗಳಲ್ಲಿ ಬಿಜೆಪಿಯೂ ಹೊಸಬರಿಗೆ ಟಿಕೆಟ್ ನೀಡಿದ್ದು ಈ ಹರಿವಿಗೆ ಕಾರಣ. ಹೊಸಬರಿಗೆ ಟಿಕೆಟ್ ನೀಡಿದ್ದು ಕಾಂಗ್ರೆಸ್ಸಿಗೆ ಲಾಭ ತಂದಿದ್ದರೆ, ಬಿಜೆಪಿಗೆ ಸ್ವಲ್ಪ ನಷ್ಟವೇ ಆಗಿದೆ. ವಿಧಾನಸಭೆ ಚುನಾವಣೆ (Karnataka assembly election 2023) ಸಂದರ್ಭದಲ್ಲಿ ಹೊಸಬರಿಗೆ ಟಿಕೆಟ್ ನೀಡಬೇಕು ಎಂಬ ಧಾವಂತದಲ್ಲಿ ಪ್ರಕ್ರಿಯೆಗಳನ್ನು ಸರಿಯಾಗಿ ನಿರ್ವಹಿಸದೆ ಎಡವಿತು ಎನ್ನಬಹುದು. ಒಟ್ಟಾರೆ ಇಷ್ಟು ಸಂಖ್ಯೆಯಲ್ಲಿ ಹೊಸಬರು ವಿಧಾನಸಭೆ ಮೆಟ್ಟಿಲು ತುಳಿಯುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ.

ನೂತನ ಶಾಸಕರಿಗೆ ಸಭಾ ನಡಾವಳಿಗಳು, ಕಾಯ್ದೆ ಕಾನೂನುಗಳ ಪ್ರಾಥಮಿಕ ಪರಿಚಯ ನೀಡುವ ಸಲುವಾಗಿ ವಿಧಾನಸಭೆ ಸಚಿವಾಲಯವು ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ನಡೆಸಿದೆ. ಐದು ವರ್ಷಗಳಿಗೊಮ್ಮೆ ವಿಕಾಸಸೌಧದ ನಾಲ್ಕು ಗೋಡೆಗಳ ನಡುವೆ ಸರ್ಕಾರಿ ಕಾರ್ಯಕ್ರಮದಂತೆ ನಡೆಯುತ್ತಿದ್ದ ಕಾರ್ಯಾಗಾರವೂ ಈ ಬಾರಿ ಹೊಸತನಕ್ಕೆ ಸಾಕ್ಷಿಯಾಗಿದೆ. ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಬೆಂಗಳೂರಿನ ನೆಲಮಂಗಲದ ಬಳಿಯ ಕ್ಷೇಮವನದ ಪರಿಸರದಲ್ಲಿ ಆಯೋಜನೆ ಮಾಡಿದ್ದರು. ಯೋಗ, ಆಯುರ್ವೇದದಂಥ ಹಸಿರು ವಾತಾವರಣದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಾಧಕಿಯರು ನೈತಿಕ ಬದುಕಿನ ಕುರಿತು ನೂತನ ಶಾಸಕರೊಂದಿಗೆ ಚರ್ಚಿಸಿದ್ದಾರೆ. ಇದಕ್ಕಾಗಿ ಯು.ಟಿ. ಖಾದರ್ ಅವರು ಅಭಿನಂದನಾರ್ಹರು.

ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಸ್ವತಃ ಯು.ಟಿ. ಖಾದರ್ ಅವರು ಹೇಳಿದ ಮಾತು ಮುಖ್ಯವಾದದ್ದು ಹಾಗೂ ಇಂದಿನ ಲೇಖನಕ್ಕೆ ಅನುಗುಣವಾಗಿಯೂ ಇದೆ. “ರಾಜಕೀಯಕ್ಕೆ ಆಗಮಿಸುವವರಿಗೆ ಯಾವುದೇ ಶಿಕ್ಷಣ ಸಿಗುತ್ತಿಲ್ಲ. ಹಾಗಾಗಿ ವಿಧಾನಸಭೆ ಸಚಿವಾಲಯದಿಂದಲೇ ಒಂದು ವರ್ಷದ ರಾಜಕೀಯ ಕೋರ್ಸ್ ಮಾಡುವ ಆಲೋಚನೆಯಿದೆ” ಎಂದಿದ್ದಾರೆ. ಹಾಗೆಯೇ, “ಪುಣೆಯಲ್ಲಿ ಖಾಸಗಿ ಸಂಸ್ಥೆಯೊಂದು ಮಾತ್ರ ದೇಶದಲ್ಲಿ ರಾಜಕೀಯ ತರಬೇತಿ ನೀಡುತ್ತಿದೆ (ಬಹುಶಃ ʼರಾಮಭಾವೂ ಮಾಳಗಿ ಪ್ರಬೋಧಿನಿʼ ಸಂಸ್ಥೆಯನ್ನು ಕುರಿತು ಹೇಳಿರಬಹುದು), ಇನ್ನೆಲ್ಲೂ ಇಲ್ಲ. ಇಂತಹ ಕೋರ್ಸ್ ಆರಂಭಿಸುವ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೂ ಚರ್ಚಿಸಿದ್ದೇನೆ” ಎಂದಿದ್ದಾರೆ. ಇದು ಒಂದು ಉತ್ತಮ ಆಲೋಚನೆ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ ನಿಜವಾಗಲೂ ಇದರ ಅಗತ್ಯವಿದೆಯೇ? ಅಗತ್ಯವಿದೆ ಎನ್ನುವಂತೆ ಮಾಡಿದವರು ಯಾರು? ಹಿಂದೆಲ್ಲ ರಾಜಕೀಯಕ್ಕೆ ನಾಯಕರು ಎಲ್ಲಿಂದ ಲಭಿಸುತ್ತಿದ್ದರು? ಈ ಬಗ್ಗೆ ತುಸು ಆಲೋಚಿಸೋಣ.

ಭಾರತದ ಇತಿಹಾಸದಲ್ಲಿ ನೂರಾರು ಆಂದೋಲನಗಳು ನಡೆದಿವೆ. ಇವುಗಳಲ್ಲಿ ವಿದ್ಯಾರ್ಥಿ ಚಳವಳಿಗಳಿಗೆ ತನ್ನದೇ ಆದ ಇತಿಹಾಸವಿದೆ. 1965ರಲ್ಲಿ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿ ನಡೆದಾಗ, ಅದರ ಮುಂಚೂಣಿಯಲ್ಲಿದ್ದವರು ವಿದ್ಯಾರ್ಥಿಗಳು. ಶುಲ್ಕ ಹೆಚ್ಚಳದ ಕಾರಣಕ್ಕೆ ಗುಜರಾತ್ ವಿವಿಯಲ್ಲಿ 1974ರಲ್ಲಿ ಆರಂಭವಾದ ಪ್ರತಿಭಟನೆ ಕೊನೆಗೆ ಚಿಮನ್ ಬಾಯಿ ಪಟೇಲ್ ಸರ್ಕಾರದ ಪತನಕ್ಕೆ ಕಾರಣವಾಯಿತು. ಅದೇ ವರ್ಷ ನಡೆದ ಭ್ರಷ್ಟಾಚಾರ, ಸ್ವಜನಪಕ್ಷಪಾತದಂತಹ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಹಾರದಲ್ಲಿ ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಆರಂಭವಾದ ಛಾತ್ರ ಸಂಘರ್ಷ ಸಮಿತಿಯ ಆಂದೋಲನ ಶಾಂತಿಯುತವಾಗಿತ್ತು. ಆ ಆಂದೋಲನದಲ್ಲಿ ತೊಡಗಿಸಿಕೊಂಡ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಸೇರಿ ಅನೇಕರು ಭಾರತದ ರಾಜಕಾರಣವನ್ನು ಪ್ರಭಾವಿಸುವ ನಾಯಕರಾದರು. ನಂತರ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲೆ 1975ರ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಆಂದೋಲನ ನಡೆಯಿತು. ತುರ್ತು ಪರಿಸ್ಥಿತಿಯಲ್ಲಂತೂ ವಿದ್ಯಾರ್ಥಿಗಳು, ಯುವಜನರದ್ದೇ ಮೇಲುಗೈ. ಅಲ್ಲಿಂದ ಹೊರಬಂದ ನಾಯಕರುಗಳಿಗೆ ಲೆಕ್ಕವಿಲ್ಲ. ನಂತರ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸರ್ಕಾರವನ್ನೇ ಕೆಡವಿ, ದೇಶದ ಮೊದಲ ಕಾಂಗ್ರೆಸೇತರ ಸರ್ಕಾರ ರಚನೆಗೂ ಇದು ಕಾರಣವಾಯಿತು.

1979-1985ರವರೆಗೆ ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಹೊರಹಾಕುವಂತೆ ಹೋರಾಟ ನಡೆಯಿತು. ಅಂದು ಮುಂಚೂಣಿಯಲ್ಲಿದ್ದ ವಿದ್ಯಾರ್ಥಿ ನಾಯಕ ಪ್ರಫುಲ್ಲ ಮಹಂತಾ, ನಂತರ ಅಸ್ಸಾಂನ ಅತಿ ಕಿರಿಯ ಮುಖ್ಯಮಂತ್ರಿಯೂ ಆದರು. ನಂತರ 1990ರಲ್ಲಿ ಮಂಡಲ್ ವಿರೋಧಿ ಆಂದೋಲನ, 2011ರ ಆಸುಪಾಸಿನಲ್ಲಿ ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಆಂದೋಲನದಲ್ಲೂ ಮುಂಚೂಣಿಯಲ್ಲಿದ್ದವರು ಕೂಡ ವಿದ್ಯಾರ್ಥಿಗಳು ಮತ್ತು ಯುವಜನರೆ. ಅಣ್ಣಾ ಹಜಾರೆ ಆಂದೋಲನದಿಂದಲೇ ನಾಯಕರಾದ ಅರವಿಂದ ಕೇಜ್ರಿವಾಲ್ ಈಗ ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲೂ 1973ರಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪನವರು ʼಕನ್ನಡ ಸಾಹಿತ್ಯದಲ್ಲಿ ಇರುವುದೆಲ್ಲ ದಲಿತರ ಪಾಲಿಗೆ ಬೂಸ (ದನಗಳ ಮೇವು) ಇದ್ದಂತೆʼ ಎಂದು ಹೇಳಿದ್ದು ವಿವಾದವಾಯಿತು. ಇದು ಸಾಹಿತ್ಯಕ್ಕೆ ಸೀಮಿತವಾಗದೆ ಕೊನೆಗೆ ದಲಿತ, ದಲಿತೇತರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಳವಳಿಯಾಗಿ, ಬೂಸಾ ಚಳವಳಿ ಎಂದೇ ನಡೆದು, ಕೊನೆಗೆ ದಲಿತ ಸಾಹಿತ್ಯ ಸೃಷ್ಟಿಗೂ ಕಾರಣವಾಯಿತು. ಇದರಲ್ಲೂ ಮುಂಚೂಣಿಯಲ್ಲಿದ್ದವರು ವಿದ್ಯಾರ್ಥಿಗಳೆ, ಯುವಜನರೆ. ಹೀಗೆ, ದೇಶದಲ್ಲಿ ನಡೆದ ಅನೇಕ ಹಾಗೂ ಬಹುತೇಕ ಚಳವಳಿಗಳಲ್ಲಿ ವಿದ್ಯಾರ್ಥಿಗಳ ಪಾತ್ರವಿದೆ.

ಆದರೆ ಕರ್ನಾಟಕದ ಮಟ್ಟಿಗೆ ಹಾಗೂ ದೇಶದಲ್ಲೂ ಬಹಳ ಕಡೆ ಈಗ ಏನಾಗಿದೆ? ವಿದ್ಯಾರ್ಥಿಗಳು ನಾಯಕರಾಗುವ ಅವಕಾಶವನ್ನೇ ವ್ಯವಸ್ಥಿತವಾಗಿ ಚಿವುಟಲಾಗಿದೆ. ವಿದ್ಯಾರ್ಥಿಗಳ ಆಯ್ಕೆಯಾಗಿ ಶಾಲೆಗಳ ಮಟ್ಟದಲ್ಲೇ ಚುನಾವಣೆಗಳನ್ನು ನಡೆಸಲಾಗುತ್ತಿತ್ತು. ಪದವಿಪೂರ್ವ ಕಾಲೇಜುಗಳಲ್ಲೂ ಇಂತಹ ಪದ್ಧತಿಗಳಿದ್ದವು. ಇನ್ನು ಪದವಿ ಹಂತದಲ್ಲಂತೂ ಯೂನಿವರ್ಸಿಟಿ ಎಲೆಕ್ಷನ್ ಎನ್ನುವುದು ಜನರಲ್ ಎಲೆಕ್ಷನ್ನಷ್ಟೆ ಕ್ರೇಜ್ ಇದ್ದಂತಹ ಒಂದು ವಿದ್ಯಮಾನವಾಗಿತ್ತು. ಎಬಿವಿಪಿ, ಎನ್ಎಸ್ಯುಐ, ಎಸ್ ಎಫ್ಐನಂಥ ವಿವಿಧ ವಿದ್ಯಾರ್ಥಿ ಸಂಘಟನೆಗಳ ಮೂಲಕ ರಾಜಕೀಯ ಕ್ಷೇತ್ರಕ್ಕೆ ನಾಯಕರು ಲಭಿಸುತ್ತಿದ್ದರು. ವಿದ್ಯಾರ್ಥಿಗಳ ಪರವಾದ ಅನೇಕ ಹೋರಾಟಗಳನ್ನು ನಡೆಸಿ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದವರೂ ನಾಯಕರಾಗುತ್ತಿದ್ದರು. ಆದರೆ, ವಿದ್ಯಾರ್ಥಿ ಚುನಾವಣೆಗಳಲ್ಲಿ ಅಲ್ಲಲ್ಲಿ ನಡೆದ ಹಿಂಸಾಚಾರಗಳನ್ನು ನೆಪವಾಗಿಸಿಕೊಂಡು ಅದನ್ನು ಹತ್ತಿಕ್ಕಲಾಯಿತು. ವಿದ್ಯಾರ್ಥಿಗಳು ಚುನಾವಣೆ ಬದಲಿಗೆ ಓದಿನಲ್ಲಿ ಗಮನಹರಿಸಲಿ ಎಂದು ಕೆಲವರು ಹೇಳಿದರು. ವಿದ್ಯಾರ್ಥಿ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದದ್ದರಿಂದ ಹೀಗೆ ಮಾಡಲಾಯಿತು ಎಂದರು. ಹಾಗಾದರೆ, ಈಗ ನಡೆಯುತ್ತಿರುವ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಚುನಾವಣೆಗಳು ಶುದ್ಧವಾಗಿ ನಡೆಯುತ್ತಿವೆಯೇ? ಅಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ಅದನ್ನೂ ಏಕೆ ರದ್ದುಪಡಿಸಿ ರಾಷ್ಟ್ರಪತಿ ಆಳ್ವಿಕೆ ತರಬಾರದು? ಎಂದು ಕೇಳಬಹುದಲ್ಲವೇ? ಹಾಗಾಗಿ, ಚುನಾವಣೆ ಹಿಂಸಾಚಾರ, ಭ್ರಷ್ಟಾಚಾರಗಳೆಲ್ಲವೂ ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕುವ ಕೆಲ ರಾಜಕೀಯ ನಾಯಕರ ಹುನ್ನಾರ ಅಷ್ಟೆ.

ಇಷ್ಟರ ನಂತರವೂ ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅದನ್ನೂ ಹತ್ತಿಕ್ಕಲು ಸೆಮಿಸ್ಟರ್ ಪದ್ಧತಿ ತರಲಾಯಿತು. ವರ್ಷದಲ್ಲಿ ಆರೇಳು ತಿಂಗಳು ಕಾಲೇಜಿನ ಜತೆಗೆ ಸಾಮಾಜಿಕ ಚಟುವಟಿಕೆ, ಹೋರಾಟ, ಹವ್ಯಾಸ, ಕ್ರೀಡೆಯಲ್ಲಿ ತೊಡಗುತ್ತಿದ್ದ ವಿದ್ಯಾರ್ಥಿಗಳು ನಾಲ್ಕು ತಿಂಗಳಿಗೇ ಪರೀಕ್ಷೆ ಬರೆಯುವಂತೆ ಮಾಡಲಾಯಿತು. ಹೀಗೆ, ಸತತವಾಗಿ ವಿದ್ಯಾರ್ಥಿ ಹೋರಾಟವನ್ನು ವ್ಯವಸ್ಥಿತವಾಗಿ ಇಲ್ಲವಾಗಿಸಲು ಎಲ್ಲ ರಾಜಕೀಯ ಪಕ್ಷಗಳ ಪ್ರಯತ್ನವೂ ಇದೆ. ವಿದ್ಯಾರ್ಥಿ ನಾಯಕತ್ವ ರೂಪುಗೊಂಡರೆ ತಮ್ಮ ನಿರಂಕುಶ ಹಾಗೂ ಕುಟುಂಬ ಆಧಾರಿತ ರಾಜಕಾರಣಕ್ಕೆ ಕುಂದುಂಟಾಗುತ್ತದೆ ಎನ್ನುವುದು ರಾಜಕಾರಣಿಗಳ ಮೊದಲ ಭಯ. ಯೂನಿವರ್ಸಿಟಿ ಚುನಾವಣೆಗಳನ್ನು ರದ್ದುಪಡಿಸಿದ್ದರಿಂದ ವಿದ್ಯಾರ್ಥಿ ಆಂದೋಲನಗಳಷ್ಟೆ ಅಲ್ಲ, ಯುವಕರನ್ನು ಒಳಗೊಂಡ ಎಲ್ಲ ಆಂದೋಲನಗಳೂ ಮೇಲೆ ಏಳದಂತಾದವು. ವಿದ್ಯಾರ್ಥಿ ಹಂತದಲ್ಲೇ ನಾಯಕತ್ವವನ್ನು ಚಿವುಟಿದ ನಂತರ ಮುಂದಿನ ಹಂತದಲ್ಲೂ ಇದು ಕಾಣಲಿಲ್ಲ.

ವಿದ್ಯಾರ್ಥಿ ಚಳವಳಿ, ಯುವಕರ ಚಳವಳಿಗಳಿಂದ ಬಂದವರೆಲ್ಲರೂ ಶುಭ್ರವಾಗಿದ್ದಾರೆಯೇ? ಅವರೇ ಭ್ರಷ್ಟಾಚಾರ, ಅನಾಚಾರ, ಜಾತಿ ರಾಜಕಾರಣ, ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಅಲ್ಲವೇ? ಎಂದು ಪ್ರಶ್ನೆ ಕೇಳಬಹುದು. ಅದು ಹೌದು. ಜಯಪ್ರಕಾಶ ನಾರಾಯಣ್ ಬೆಂಬಲಿಗರು ಸೇರಿಕೊಂಡು ರಚಿಸಿದ ಸರ್ಕಾರ ಹಾಗೂ ಪ್ರಫುಲ್ಲ ಮಹಂತಾ ಅವರ ಅಸ್ಸಾಂ ಸರ್ಕಾರ- ಎರಡೂ ಮೊದಲ ಬಾರಿಗೇ ಜನರಲ್ಲಿ ಭ್ರಮನಿರಸನ ಉಂಟುಮಾಡಿ ಪತನವಾದವು. ಆದರೆ ಇದೆಲ್ಲ ರಾಜಕೀಯ ಲೆಕ್ಕಾಚಾರಗಳು. ಹೋರಾಟದ ಮೂಲಕ ನಾಯಕನು ರೂಪುಗೊಂಡ, ಆತನನ್ನು ಜನರು ಬೆಂಬಲಿಸಿ ಅಧಿಕಾರಕ್ಕೆ ತಂದರು. ಅಧಿಕಾರಕ್ಕೆ ಬಂದ ನಂತರ ಆತ ಸ್ವಾರ್ಥಿಯೋ, ನಿಷ್ಕ್ರಿಯನೋ ಆಗುವ ಸಾಧ್ಯತೆಯೂ ಇರುತ್ತದೆ. ಇಲ್ಲಿ ಅನೇಕ ನಾಯಕರಲ್ಲಿ ಆಗಿರುವುದು ಹಾಗೆಯೇ. ಆದರೆ ಅವರಲ್ಲಿಯೇ ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್ ಅವರಂಥವರಿದ್ದರು. ತಮ್ಮ 18-19ನೇ ವಯಸ್ಸಿನಲ್ಲೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ, 20ನೇ ವಯಸ್ಸಿನಲ್ಲೇ ರೈತ ಚಳವಳಿ ರೂಪಿಸಿದ, 1975ರಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ರಾಮಕೃಷ್ಣ ಹೆಗಡೆಯವರಂಥವರೂ ಇಂಥದ್ದೇ ಹೋರಾಟಗಳಿಂದ ಬಂದವರು ಎನ್ನುವುದನ್ನು ನಾವು ಮರೆಯಬಾರದು. ಹೋರಾಟಗಳಿಂದ ನಾಯಕರು ರೂಪುಗೊಳ್ಳದ ಪರಿಣಾಮ, ದೊಡ್ಡ ನಾಯಕರ ಚೇಲಾಗಳು, ಅವರು ಹೇಳಿದಂತೆ ತಲೆಯಾಡಿಸುವ ಜೀ ಹುಜೂರ್ಗಳು, ವ್ಯವಹಾರಗಳನ್ನು ರಕ್ಷಿಸಿಕೊಳ್ಳಲು ಆಗಮಿಸುವ ಉದ್ಯಮಿಗಳು ನೀತಿ ನಿರೂಪಕರಾಗುತ್ತಿದ್ದಾರೆ.

ಹೋರಾಟಗಳಿಂದಲೇ ಬಂದ ರಾಜಕೀಯ ನಾಯಕರು ಒಂದೆಡೆ ಯುವ ಸಮೂಹದಿಂದ, ಶಾಲಾ ಕಾಲೇಜುಗಳಿಂದ ನಾಯಕತ್ವ ಹೊರಹೊಮ್ಮುವುದನ್ನು ತಡೆಯುತ್ತಿದ್ದಾರೆ. ಇನ್ನೊಂದೆಡೆ ಸಾಮಾಜಿಕ ವಲಯದಿಂದಲೂ ನಾಯಕತ್ವ ತಲೆಯೆತ್ತದಂತೆ ನೋಡಿಕೊಳ್ಳುತ್ತಿದ್ದಾರೆ.

ಹಿಂದೆಲ್ಲ ರಾಜಕೀಯ ನಾಯಕರಾದವರು, ನಿಜವಾಗಿ ರಾಜಕೀಯ ನಾಯಕರೇ ಆಗಿರಲಿಲ್ಲ. ಅವರು ಸಾಮಾಜಿಕ ನಾಯಕರಾಗಿದ್ದರು ಮೊದಲು, ನಂತರವೂ. ಯಾವುದಾದರೂ ಒಂದು ಹೋರಾಟದಲ್ಲಿ ತೊಡಗಿಸಿಕೊಂಡು, ಯಾವುದಾದರೂ ಸಾಮಾಜಿಕ ಸೇವೆಯಲ್ಲಿ ಜನಮನ್ನಣೆ ಗಳಿಸಿರುತ್ತಿದ್ದರು. ಒಬ್ಬ ಜನಪ್ರತಿನಿಧಿಗೆ ವಯಸ್ಸಾಗಿಯೊ, ಮತ್ತೊಂದು ಕಾರಣಕ್ಕೊ ಬದಲಾಯಿಸಬೇಕು ಎಂದಾಗ ಈ ಸಾಮಾಜಿಕ ನಾಯಕತ್ವ ಕಣ್ಣಿಗೆ ಬೀಳುತ್ತಿತ್ತು. ಆ ನಾಯಕನೂ ಅಷ್ಟೆ, ತನಗೆ ಸಿಕ್ಕ ಅಧಿಕಾರ ತನಗೆ ಮಾತ್ರ ಸಿಕ್ಕಿದ್ದು ಎಂದು ಸ್ಪಷ್ಟವಾಗಿ ತಿಳಿದಿರುತ್ತಿದ್ದ. ಮದುವೆಯಾಗದ ಅಟಲ್ ಬಿಹಾರಿ ವಾಜಪೇಯಿ ಅವರಷ್ಟೆ ಅಲ್ಲ. ಮದುವೆಯಾದ, ಮಕ್ಕಳಿರುವ ಜಾರ್ಜ್ ಫರ್ನಾಂಡೀಸ್, ಲಾಲಕೃಷ್ಣ ಆಡ್ವಾಣಿ, ಲಾಲ್ ಬಹದ್ದೂರ್ ಶಾಸ್ತ್ರಿಯವರಂಥವರೂ ಹಾಗೆಯೇ ಭಾವಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಗೆ ವಿದ್ಯಾರ್ಥಿ ವೇತನ ನೀಡಲು, ಅಗತ್ಯವಿರುವವರಿಗೆ ಸಾಲವನ್ನೊ ಅಥವಾ ಧನಸಹಾಯವನ್ನೋ ನೀಡಲು ಸಾಮಾಜಿಕ ದುರ್ಬಲ ಸಮುದಾಯಗಳಿಗೆ ನಿಗಮ, ಮಂಡಳಿಗಂತಹ ವ್ಯವಸ್ಥೆಯಿದೆ. ಆದರೆ ಒಂದು ಸಮುದಾಯವಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿಯೂ ಸದೃಢವಾಗಿರುವ ಸಮುದಾಯಗಳೂ ಅಂತಹ ಸೌಲಭ್ಯಗಳನ್ನು ಕೇಳುವಂತೆ ಮಾಡಲಾಗುತ್ತಿದೆ. ತನ್ನ ಸಮುದಾಯದಲ್ಲಿರುವವರ ಅವಶ್ಯಕತೆಗಳನ್ನು ವಿದ್ಯಾರ್ಥಿ ವೇತನದ ಮೂಲಕವೊ, ಧನಸಹಾಯದ ರೂಪದಲ್ಲೊ, ಸಾಲವಾಗಿಯೊ ಪೂರೈಸಲು ಆ ಸಮುದಾಯದಿಂದ ಸಾಧ್ಯವಿಲ್ಲವೇ? ಆ ಸಮುದಾಯದಲ್ಲೇ ಇರುವ ಕೋಟ್ಯಧೀಶರು, ಉದ್ಯಮಿಗಳು, ಉನ್ನತ ಹುದ್ದೆಯಲ್ಲಿರುವವರು, ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು, ಸಹಕಾರ ಸಂಸ್ಥೆ ನೇತೃತ್ವ ವಹಿಸಿರುವವರು ಅನುಕೂಲ ಮಾಡಿಕೊಡಲು ಆಗುವುದಿಲ್ಲವೇ? ಈಗಿನ ರಾಜಕೀಯ ಸನ್ನಿವೇಶ ಇಂತಹ ಸಾಧ್ಯತೆಗಳನ್ನು ಇಲ್ಲವಾಗಿಸುವತ್ತ ಸಾಗಿದೆ.

ಸಾಮಾಜಿಕ ನೇತೃತ್ವವನ್ನು ಹಾಳುಗೆಡವಿ, ಎಲ್ಲವೂ ತನ್ನ ಸುತ್ತಲೇ ಸುತ್ತಬೇಕು ಎಂದು ರಾಜಕೀಯ ಬಯಸುತ್ತಿದೆ. ಯಾವುದೇ ಸಮುದಾಯದ ಸಾಮಾಜಿಕ ನಾಯಕತ್ವ ಗಟ್ಟಿಯಾಗಿದ್ದರೆ ನಾಳೆ ಅದೇ ತನ್ನನ್ನು ನಿಯಂತ್ರಿಸಬಹುದು. ತನ್ನ ಮಗನನ್ನೋ, ಮಗಳನ್ನೋ ಎಂಎಲ್ಎ ಮಾಡುತ್ತೇನೆ ಎಂದು ಹೇಳಿದಾಗ, ಸಮುದಾಯದಿಂದ ಇನ್ಯಾರಾದರೂ ಆದರೆ ಒಳ್ಳೆಯದಲ್ಲವೇ ಎಂದು ಹೇಳಬಹುದು. ಅದಕ್ಕಾಗಿ ಎಲ್ಲರಿಗೂ ಹಣದ, ಅಧಿಕಾರದ ರುಚಿಯನ್ನು ಹತ್ತಿಸಿ ತನ್ನ ಸುತ್ತಲೇ ಸುತ್ತುವಂತೆ ಮಾಡಲಾಗುತ್ತದೆ. ಎರಡು-ಮೂರು-ನಾಲ್ಕು-ಐದು ಬಾರಿ ಶಾಸಕ, ಸಂಸದನಾದರೂ ತನ್ನನ್ನು ಬಿಟ್ಟು ಬೇರೆ ಯಾರನ್ನೂ ಬೆಳೆಯಲೂ ಬಿಟ್ಟಿರುವುದಿಲ್ಲ. ಕೊನೆಗೆ, ಇವರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎನ್ನುವ ವಾತಾವರಣ ನಿರ್ಮಿಸಿ, ತಾನು ಅಥವಾ ತನ್ನ ಕುಟುಂಬವೇ ಅಧಿಕಾರ ಮುಂದುವರಿಸಿಕೊಂಡು ಹೋಗುವಂತೆ ಮಾಡಿಕೊಂಡಿರುತ್ತಾರೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತವು ವಿಶ್ವ ಗುರು ಪಟ್ಟ ಉಳಿಸಿಕೊಳ್ಳಬೇಕಾ, ಇಲ್ಲ ಸೂಪರ್ ಪವರ್ ಆಗಬೇಕಾ?

ಇಂದು ಒಂದು ವಿಧಾನಸಭೆ ಚುನಾವಣೆ ಸೋತ ತಕ್ಷಣವೇ ಬಿಜೆಪಿಯಲ್ಲಿ ನಾಯಕರೇ ಇಲ್ಲದಂತಾಗಿದ್ದಾರೆ. 66 ಶಾಸಕರು ಗೆದ್ದಿದ್ದಾರಾದರೂ ಒಬ್ಬ ವಿಧಾನಸಭೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ, ರಾಜ್ಯ ಘಟಕಕ್ಕೆ ಒಬ್ಬ ಸಮರ್ಥರು ಅವರಿಗೆ ಸಿಗುತ್ತಿಲ್ಲ. ಒಬ್ಬೊಬ್ಬರಲ್ಲಿಯೂ ಹತ್ತಾರು ಹುಳುಕು, ದೌರ್ಬಲ್ಯಗಳ ಆಗರವೇ ಆಗಿದ್ದಾರೆ. ಅವರಲ್ಲಿಯೇ ʼಉತ್ತಮʼರನ್ನು ಆಯ್ಕೆ ಮಾಡಿಕೊಳ್ಳುವ ಪ್ರಯತ್ನ ಕಳೆದ ಒಂದು ತಿಂಗಳಿಂದ ನಡೆದಿದೆ. ಇನ್ನು ಕಾಮಗ್ರೆಸ್ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಈಗಿನ ಸರ್ಕಾರದಲ್ಲಿರುವ ಮೊದಲ ಹಂತದ ನಾಯಕರನ್ನು ಬಿಟ್ಟರೆ ನಂತರ ಇರುವವರಿಗೆ ಜನಸಂಪರ್ಕವೇ ಇಲ್ಲ. ಯಾವ್ಯಾವುದೋ ಮಾರ್ಗದಲ್ಲಿ ಆಗಮಿಸಿ ಒಟ್ಟು ಶಾಸಕರಾಗಿ ಆಯ್ಕೆಯಾಗಿರುತ್ತಾರೆ. ಲೋಕಸಭೆ ಚುನಾವಣೆ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕಾದಾಗ ಬಿಜೆಪಿ ಸ್ಥಿತಿಯೇ ಕಾಂಗ್ರೆಸ್‌ಗೂ ಎದುರಾಗಲಿದೆ. ಜೆಪಿ ಚಳವಳಿಯಿಂದಾಗಿಯೇ ಮೇಲೆ ಬಂದ ಎಚ್.ಡಿ. ದೇವೇಗೌಡರ ಪಕ್ಷದಲ್ಲೂ ತಮ್ಮ ಕುಟುಂಬದವರನ್ನು ಬಿಟ್ಟರೆ ಬೇರೆ ನಾಯಕರೇ ಇಲ್ಲ ಎನ್ನುವ ಮಟ್ಟಿನ ಸ್ಥಿತಿ ಇದೆ.

ವಿದ್ಯಾರ್ಥಿ ನಾಯಕತ್ವ, ಯುವ ನಾಯಕತ್ವ ಹಾಗೂ ಸಾಮಾಜಿಕ ನಾಯಕತ್ವವನ್ನು ಮೆಟ್ಟಿ ನಿಂತು, ರಾಜಕಾರಣಕ್ಕೆ ಯೋಗ್ಯರು ಆಗಮಿಸುತ್ತಿಲ್ಲ ಎಂದು ಆಳುವುದರಲ್ಲಿ ಅರ್ಥವಿಲ್ಲ. ವಿದ್ಯಾರ್ಥಿ ಚುನಾವಣೆ, ಸಾಮಾಜಿಕ ಆಂದೋಲನಗಳನ್ನು ಹತ್ತಿಕ್ಕುವ ಬದಲು ಪ್ರಜಾತಾಂತ್ರಿಕ ವ್ಯವಸ್ಥೆಗೆ ಅನುಗುಣವಾಗಿ ಸಂವಾದ, ಚರ್ಚೆಗಳನ್ನು ನಡೆಸುವುದನ್ನು ರೂಢಿಸಿಕೊಂಡರೆ ಕರ್ನಾಟಕದಲ್ಲಿ ನಾಯಕತ್ವಕ್ಕೆ ಕೊರತೆ ಆಗುವುದಿಲ್ಲ. ವಿಧಾನಸಭೆ ಸಚಿವಾಲಯದಿಂದ ಕೋರ್ಸ್ ನಡೆಸುವುದಕ್ಕಿಂತಲೂ ನೂರು ಪಟ್ಟು ನಾಯಕರು ರಾಜ್ಯಕ್ಕೆ ಸಿಗುತ್ತಾರೆ. ಈ ನಿಟ್ಟಿನಲ್ಲಿ ಸಮಾಜ ಯೋಚಿಸುವುದು ಒಳಿತು.

ಇಂಗ್ಲಿಷಿನಲ್ಲಿ ಯುವಶಕ್ತಿ ಕುರಿತು ಒಂದು ಪ್ರಸಿದ್ಧ ಮಾತಿದೆ.

The battle of waterloo is fought at Eton and Oxford and it was lost in the hotels of Paris.

1915ರಲ್ಲಿ ವಾಟರ್ಲೂ ಎಂಬ ಪ್ರದೇಶದಲ್ಲಿ ಫ್ರಾನ್ಸಿನ ನೆಪೋಲಿಯನ್ ಮತ್ತು ಇಂಗ್ಲೆಂಡ್ ನೇತೃತ್ವದ ಏಳನೇ ಒಕ್ಕೂಟದ ಸೇನೆಗಳ ನಡುವೆ ನಡೆದ ನಿರ್ಣಾಯಕ ಸಮರದಲ್ಲಿ ನೆಪೋಲಿಯನ್ ಸೋಲುತ್ತಾನೆ. ಆ ಯುದ್ಧದ ಮೂಲಕ ಫ್ರಾನ್ಸ್‌ನ ಚಕ್ರಾಧಿಪತ್ಯ ನೆಲಕಚ್ಚಿತು. ಆದರೆ, ಈ ಯುದ್ಧ ನಿಜವಾಗಿಯೂ ನಡೆದಿದ್ದು ವಾಟರ್ಲೂ ಎಂಬಲ್ಲಿ ಅಲ್ಲ. ಅದು ನಡೆದಿದ್ದು ಇಂಗ್ಲೆಂಡಿನ ಈಟನ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ !
ಯುದ್ಧ ಗೆದ್ದ ಮೈತ್ರಿ ದೇಶಗಳು ತಮ್ಮ ದೇಶದ ಯುವಜನತೆಯನ್ನು ವಿವಿಗಳಲ್ಲಿ, ಶಾಲೆಗಳಲ್ಲಿ ಸಜ್ಜುಗೊಳಿಸಿದ್ದರು. (ನೆಪೋಲಿಯನ್ ಕಡೆಯ ಯುವಜನರು ಫ್ರಾನ್ಸಿನ ಹೋಟೆಲ್‌ಗಳಲ್ಲಿ ಕಾಲ ಕಳೆದು ಸಮರವನ್ನು ಅಲ್ಲಿ ಸೋತರು)

ನಾವು ನಮ್ಮ ವಿದ್ಯಾರ್ಥಿಗಳನ್ನು, ಯುವಜನತೆಯನ್ನು ಭವಿಷ್ಯದ ರಾಜಕೀಯಕ್ಕೆ ಸಜ್ಜು ಮಾಡಬೇಕಿರುವುದು ಅವರ ವಿದ್ಯಾರ್ಥಿ ಜೀವನದಲ್ಲಿ, ವಿವಿಗಳಲ್ಲಿ !

ಇದನ್ನೂ ಓದಿ: ವಿಸ್ತಾರ ಅಂಕಣ: ದೇಶವನ್ನು ಹರಾಜು ಹಾಕಲು ಈ ರಾಜಕೀಯ ಪಕ್ಷಗಳಿಗೆ ಯಾರೂ ಅಧಿಕಾರ ಕೊಟ್ಟಿಲ್ಲ

Exit mobile version