Site icon Vistara News

Explainer: ಭಾರತೀಯರ ಫೇವರಿಟ್‌ ಆಗುವತ್ತ ಯುಎಇ, ಏನಿದರ ವಿಶೇಷ?

ಮೊದಲೊಂದು ಕಾಲವಿತ್ತು. ಕೇರಳದ ಹೆಚ್ಚಿನ ಯುವಜನತೆ ಉದ್ಯೋಗ ಅನ್ವೇಷಿಸಿ ಗಲ್ಫ್‌ ರಾಷ್ಟ್ರಗಳಿಗೆ, ಅದರಲ್ಲೂ ಮುಖ್ಯವಾಗಿ ಯುಎಇಗೆ ಧಾವಿಸುತ್ತಿದ್ದರು. ಈಗಲೂ ಕೇರಳದ ಉದ್ಯೋಗಾನ್ವೇಷಿಗಳಿಗೆ ಯುಎಇ ಫೇವರಿಟ್‌ ಸ್ಪಾಟ್.‌ ಆದರೆ ಭಾರತದಾದ್ಯಂತ ಯುಎಇ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತಿದೆ. ಅಮೆರಿಕ, ಕೆನಡಾಗಳಂತೆಯೇ ಭಾರತೀಯರ ಇನ್ನೊಂದು ವಲಸೆ ತಾಣವಾಗುವತ್ತ ಯುಎಇ ಹೆಜ್ಜೆ ಇಡುತ್ತಿದೆ.

ಗೋಲ್ಡನ್‌ ವೀಸಾ

ಕಳೆದ ಒಂದೆರಡು ವರ್ಷಗಳಿಂದ ಯುಎಇ ದೇಶ ಅನ್ಯ ದೇಶಗಳ ಪ್ರಮುಖ ಉದ್ಯಮಿಗಳಿಗೆ, ತಾರೆಯರಿಗೆ ಗೋಲ್ಡನ್‌ ವೀಸಾಗಳನ್ನು ಕೊಡುತ್ತಿದೆ. ಈಗ ಅದನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ಹಿಂದಿ ನಟರಾದ ಶಾರುಕ್‌ ಖಾನ್‌, ಸಂಜಯ್‌ ದತ್‌, ಮಲಯಾಳಂ ನಟ ದುಲ್ಖರ್‌ ಸಲ್ಮಾನ್‌ ಮೊದಲಾದವರು ಈಗಾಗಲೇ ಗೋಲ್ಡನ್‌ ವೀಸಾ ಪಡೆದಿದ್ದಾರೆ. ಗೋಲ್ಡನ್‌ ವೀಸಾ ಪಡೆಯುತ್ತಿರುವವರಲ್ಲಿ ಭಾರತೀಯರೇ ಹೆಚ್ಚು. ಇದನ್ನು ಪಡೆದವರು ಯುಎಇಯಲ್ಲಿ ಶಾಶ್ವತ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. ಉದ್ಯಮಗಳನ್ನು ಸ್ಥಾಪಿಸಬಹುದು. ತಮ್ಮ ಕುಟುಂಬದವರನ್ನೂ ಕರೆಸಿಕೊಳ್ಳಬಹುದು. ಈ ವೀಸಾದ ಅವಧಿ ಹತ್ತು ವರ್ಷ. ಪ್ರತಿ ವರ್ಷ ನವೀಕರಿಸಿಕೊಳ್ಳುವ ತಲೆಬಿಸಿ ಇಲ್ಲ. ಡಾಕ್ಟರ್‌ಗಳು, ಅಧ್ಯಯನಾಸಕ್ತರು, ವಿಜ್ಞಾನಿಗಳು, ಕಲಾವಿದರು ಕೂಡ ಈ ವೀಸಾಗೆ ಅಪ್ಲೈ ಮಾಡಬಹುದು.

ಭಾರತಕ್ಕೆ ಹತ್ತಿರ

ಯುರೋಪ್‌, ಅಮೆರಿಕಗಳಿಗೆ ಹೋಲಿಸಿದರೆ ಯುಎಇ ಭಾರತಕ್ಕೆ ಸನಿಹ. ಬಹುತೇಕ ಇಲ್ಲಿನ ಎಲ್ಲ ದೊಡ್ಡ ನಗರಗಳಿಂದಲೂ ನೇರ ವಿಮಾನಗಳಿವೆ. ಭಾರತದ ದೊಡ್ಡ ಉದ್ಯಮಿಗಳು ಯುಎಇ ಜೊತೆ ಉದ್ಯಮ ಸಹಭಾಗಿತ್ವ ಹೊಂದಿದ್ದಾರೆ. ಇಲ್ಲಿನ ಉದ್ಯಮಶೀಲತೆಯ ವಾತಾವರಣ ಚೆನ್ನಾಗಿದೆ. ಉದ್ಯಮಿಗಳಿಗೆ ಇಲ್ಲಿ ವೀಸಾ, ಪೌರತ್ವ ಸಿಗುವುದು ಬೇಗ.

ಭಾರತೀಯ ಸೆಲೆಬ್ರಿಟಿಗಳು

ಯುಎಇ ಮೊದಲು ಭಾರತೀಯ ದೊಡ್ಡ ಉದ್ಯಮಿಗಳಿಗೆ, ಸೆಲೆಬ್ರಟಿಗಳಿಗೆ ಬಲೆ ಹಾಕಿತು. ಅದು 2019ರಲ್ಲಿ ಗೋಲ್ಡನ್‌ ವೀಸಾ ಆರಂಭಿಸಿದಾಗ, ಮೊದಲ ವೀಸಾ ನೀಡಿದ್ದೇ ಲುಲು ಗ್ರೂಪ್‌ನ ಚೇರ್‌ಮನ್‌ ಯೂಸುಫಾಲಿ ಎಂಬ ಭಾರತೀಯರಿಗೆ. ಕೇರಳದ ಮೂಲದ ಯೂಸುಫಾಲಿ ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ರಿಟೇಲ್‌ ಮತ್ತು ಹೋಟೆಲ್‌ ಬ್ಯುಸಿನೆಸ್‌ ನಡೆಸುತ್ತಿದ್ದಾರೆ. ಹೀಗೆ ಗೋಲ್ಡನ್‌ ವೀಸಾ ಪಡೆದ ಸೆಲೆಬ್ರಿಟಿಗಳ ಮೂಲಕ ಯುಎಇಯ ಹೆಗ್ಗಳಿಕೆಯ ಪ್ರಚಾರ ನಡೆಯಿತು.

ಮೂಲಸೌಕರ್ಯ

ಯುಎಇಯ ಮೂಲಸೌಕರ್ಯ ತುಂಬಾ ಅದ್ಭುತವಾಗಿದೆ. ಆತಿಥ್ಯ ವಲಯ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಆಡಳಿತಾತ್ಮಕ ಕಾರ್ಯಗಳು ವಿಳಂಬವಾಗದಂತೆ ನೋಡಿಕೊಳ್ಳಲಾಗುತ್ತದೆ. ಪರವಾನಗಿಗಳು ತಡವಾಗುವುದಿಲ್ಲ. ತಾವು ಕಟ್ಟುತ್ತಿರುವ ತೆರಿಗೆ ಪೋಲಾಗುತ್ತಿದೆ ಎಂದು ಚಿಂತಿಸುವ ಅವಕಾಶವೇ ಇಲ್ಲ.

ಎರಡನೇ, ಮೂರನೇ ಹಂತದ ಉದ್ಯೋಗಗಳು

ಯುಎಇಯಲ್ಲಿ ವಿವಿಧ ಅಕಾಡೆಮಿಕ್‌ ಅರ್ಹತೆ, ಔದ್ಯಮಿಕ- ಶೈಕ್ಷಣಿಕ ಅರ್ಹತೆಯುಳ್ಳವರಿಗೆ ತಕ್ಕಂಥ ಉದ್ಯೋಗಗಳು ಲಭ್ಯವಿವೆ. ಬಹುಕೋಟಿ ಉದ್ಯಮ ನಡೆಸುವ ವ್ಯಕ್ತಿ ಇಲ್ಲಿಗೆ ಹೋಗುವಂತೆ, ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡಿದವನೂ ಇಲ್ಲಿಗೆ ಹೋಗಿ ಮಾಡಬಹುದಾದಂಥ ಕೆಲಸಗಳು ಸಾಕಷ್ಟಿವೆ. ಹೀಗೆ ಎಲ್ಲ ಬಗೆಯವರನ್ನು ಈ ದೇಶ ಸೆಳೆಯುತ್ತಿದೆ.

ಇದನ್ನೂ ಓದಿ: Explainer: ಅಮೆರಿಕದ ರೇʼಗನ್‌ʼಗಳ ಕತೆ ಇದು!

ಮಹತ್ವದ ಭಾಗೀದಾರ

2021ರಲ್ಲಿ ಒಂದು ಒಪ್ಪಂದವನ್ನು ಭಾರತ ಹಾಗೂ ಯುಎಇ ಮಾಡಿಕೊಂಡವು. ಸಮಗ್ರ ವಾಣಿಜ್ಯ ಸಹಭಾಗಿತ್ವ ಒಪ್ಪಂದ (ಸಿಇಪಿಎ) ಎಂಬ ಹೆಸರಿನ ಈ ಒಪ್ಪಂದದ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ನಮ್ಮ ವ್ಯಾಪಾರ ವ್ಯವಹಾರದ ಮಟ್ಟ 100 ಶತಕೋಟಿ ಡಾಲರ್‌ ಮುಟ್ಟಬೇಕು. ಭಾರತದ ಪೆಟ್ರೋಲಿಯಂ ರಿಸರ್ವ್‌ನಲ್ಲಿ ಯುಎಇಯ ಪಾತ್ರ ಪ್ರಮುಖ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ ಭಾರತದ ಹೂಡಿಕೆ ಇಲ್ಲಿ ಸಾಕಷ್ಟಿದೆ. ಮಧ್ಯ ಪ್ರಾಚ್ಯಕ್ಕೆ ಭಾರತದ ಹೆಬ್ಬಾಗಿಲಿನಂತೆ ಯುಎಇ ಕಾರ್ಯ ನಿರ್ವಹಿಸುತ್ತದೆ.

Exit mobile version