ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಏಪ್ರಿಲ್ ತಿಂಗಳಲ್ಲಿ ₹ 1.68 ಲಕ್ಷ ಕೋಟಿ ಆಗಿದೆ. ಇದುವರೆಗಿನ ದಾಖಲೆಯಿದು. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾದ ಜಿಎಸ್‌ಟಿಗಿಂತ ಇದು 20% ಅಧಿಕ. ಈ ವರ್ಷದ ಇದುವರೆಗಿನ ದಾಖಲೆ ಎಂದರೆ ಮಾರ್ಚ್‌ನಲ್ಲಿ ಆದ ₹ 1.42 ಲಕ್ಷ ಕೋಟಿ ರೂ.
ಕಳೆದ ವರ್ಷ ಇದೇ ಅವಧಿಯಲ್ಲಿ ಆದ ಜಿಎಸ್‌ಟಿ ಸಂಗ್ರಹ ಇದಕ್ಕಿಂತ ಹತ್ತಾರು ಪಟ್ಟು ಕಡಿಮೆ ಇತ್ತು. ಅದಕ್ಕೆ ಕೊರೊನಾ ವೈರಸ್‌ನ ಎರಡು- ಮೂರನೇ ಅಲೆಗಳು, ಲಾಕ್‌ಡೌನ್ ಇತ್ಯಾದಿ ಕಾರಣಗಳನ್ನು ನೀಡಬಹುದು.
ಜಿಎಸ್‌ಟಿ ಸಂಗ್ರಹ ಉತ್ತಮಗೊಂಡರೆ ಬಜೆಟ್‌ನಲ್ಲಿ ಪ್ರಸ್ತಾವಿತ ಯೋಜನೆಗಳಿಗೂ ಅಭಿವೃದ್ಧಿ ಕಾರ್ಯಗಳಿಗೂ ವಿತ್ತೀಯ ಕೊರತೆಯಾಗದು. ಅಷ್ಟರ ಮಟ್ಟಿಗೆ ಅದು ವಿತ್ತ ಸಚಿವಾಲಯಕ್ಕೆ ಸಂತೋಷದ ವಿಷಯವೇ. ಆದರೆ ಇಷ್ಟೊಂದು ತೆರಿಗೆ ಸಂಗ್ರಹ ಆಗುವುದಕ್ಕೆ ಕಾರಣಗಳೇನು?
ವಿತ್ತ ಇಲಾಖೆ ನೀಡಿದ ಕಾರಣಗಳು ಇಲ್ಲಿವೆ:
- ವಾಣಿಜ್ಯ ಚಟುವಟಿಕೆಗಳು ಲಾಕ್‌ಡೌನ್ ಎಫೆಕ್ಟ್ನಿಂದ ತೀವ್ರಗತಿಯಲ್ಲಿ ವೃದ್ಧಿಸುತ್ತಿವೆ. ಬಳಕೆದಾರ ಮಾರುಕಟ್ಟೆಯಲ್ಲಿ ಆಶಾವಾದ ತಲೆದೋರಿದ್ದು, ಆಟೊಮೊಬೈಲ್ ಮುಂತಾದ ಮಾರುಕಟ್ಟೆಗಳು ಚೇತರಿಕೆ ಕಂಡಿವೆ.
- ತೆರಿಗೆ ಕಳವು ತಡೆಯಲು ಡೇಟಾ ಅನಾಲಿಟಿಕ್ಸ್ ಹಾಗೂ ಎಐ ಮೂಲಕ ಕಠಿಣ ಕ್ರಮಗಳನ್ನು ಜಾರಿ ಮಾಡಲಾಗಿದೆ. ಈಗ ಮೊದಲಿನಂತೆ ತೆರಿಗೆ ವಂಚಿಸುವುದು ಸಾಧ್ಯವಿಲ್ಲ.
GST Revenue collection for April 2022 highest ever at Rs 1.68 lakh crore
— Ministry of Finance (@FinMinIndia) May 1, 2022
Gross GST collection in April 2022 is all time high, Rs 25,000 crore more that the next highest collection of Rs. 1,42,095 crore, just last month
Read more ➡️ https://t.co/rXElYMTUSB pic.twitter.com/lTbjqa3wvz
ಆದರೆ ತಜ್ಞರು ಹೇಳುವುದೇ ಬೇರೆ. ಮಾರುಕಟ್ಟೆಯಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಿರುವುದೊಂದೇ ಇದಕ್ಕೆ ಕಾರಣವಲ್ಲ.
ಬೆಲೆಗಳು ಏರಿವೆ
ಹಣದುಬ್ಬರ ಜಿಎಸ್‌ಟಿ ಸಂಗ್ರಹಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. 2022-23ರ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರ ದರ 6.3ರಲ್ಲಿದೆ. ಎಲ್ಲ ದೈನಂದಿನ ಬಳಕೆ ಸಾಮಗ್ರಿಗಳು, ಅವಶ್ಯಕ ವಸ್ತುಗಳ ಬೆಲೆಗಳು ಕನಿಷ್ಠ 20- 30% ಏರಿವೆ. ಹೋಟೆಲ್ ತಿಂಡಿಗಳ ಬೆಲೆಯಲ್ಲೂ 15% ಏರಿಕೆಯಾಗಿದೆ. ವೈದ್ಯಕೀಯ ಸಾಮಗ್ರಿಗಳು, ಔಷಧಗಳ ಮೌಲ್ಯ ಕಳೆದ ವರ್ಷಕ್ಕಿಂತ 40%ನಷ್ಟು ಏರಿವೆ. ಹೀಗಾಗಿ, ಇವುಗಳಿಂದ ಬರುತ್ತಿರುವ ಜಿಎಸ್‌ಟಿ ಪ್ರಮಾಣವೂ ಅಷ್ಟೇ ಮಟ್ಟದಲ್ಲಿ ಹೆಚ್ಚಿದೆ.
ಆಮದು ಏರಿಕೆ
ದೇಶದೊಳಕ್ಕೆ ಆಮದು ಹೆಚ್ಚಿದಂತೆ ಜಿಎಸ್‌ಟಿ ಹೆಚ್ಚುತ್ತದೆ. ಆಮದು ಸಾಮಗ್ರಿಗಳ ಮೇಲೆ ಐಜಿಎಸ್‌ಟಿ ವಿಧಿಸಲಾಗುತ್ತದೆ. ಕಳೆದ ವರ್ಷ ನಾವು ಆಮದು ಮಾಡಿಕೊಂಡ ಪ್ರಮಾಣ ಹಿಂದಿನ ಎಲ್ಲ ವರ್ಷಗಳಿಗಿಂತ ದಾಖಲೆ ಪ್ರಮಾಣದಲ್ಲಿದೆ- ಸುಮಾರು 60.74 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ.
ಹೆಚ್ಚಿನ ಓದಿಗೆ: ಅಮೇಜಾನ್, ಫ್ಲಿಪ್‌ಕಾರ್ಟ್ ʼಅಂಗಡಿʼ ಬಂದ್ ಮಾಡಲಿದೆಯೇ ONDC?
ಶ್ರೀಮಂತರ ಬಳಕೆ
ಕಳೆದೆರಡು ತಿಂಗಳಲ್ಲಿ ಶ್ರೀಮಂತರ ವೆಚ್ಚಗಳು ವಿಸ್ಮಯಕಾರಿ ರೀತಿಯಲ್ಲಿ ಏರಿವೆ. ಅಂತಾರಾಷ್ಟ್ರೀಯ ಪ್ರವಾಸಗಳು, ದುಬಾರಿ ಕಾರುಗಳ ಕೊಳ್ಳುವಿಕೆ, ಐಷಾರಾಮಿ ವಸ್ತುಗಳು ಹಾಗೂ ಪಾರ್ಟಿಗಳ ಮೇಲೆ ವೆಚ್ಚ ಮಾಡುವಿಕೆ ಹೆಚ್ಚಿದೆ. ಇದು ಕೊರೊನಾ ನಿರ್ಬಂಧಗಳ ಎತ್ತುಗಡೆಯಿಂದ ಆದ ಪರಿಣಾಮ ಇರಬಹುದು. ಹೀಗಾಗಿ ಜಿಎಸ್‌ಟಿ ಸಂಗ್ರಹವೂ ಏರಿದೆ. ಶ್ರೀಮಂತರ ವೆಚ್ಚದ ಮೇಲೆ ಹೆಚ್ಚಿನ ತೆರಿಗೆ ಪ್ರಯೋಗಿಸಲು ತಜ್ಞರು ಸೂಚಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆಗೆ ಬರಲಿದೆ ಟಾಟಾ ‘ಅವಿನ್ಯ’ EV