ಮಾರ್ಚ್ ತಿಂಗಳಲ್ಲಿ ಗುಜರಾತ್‌ನ ವಡೋದರಾದ ಮಯೂರ್ ಪಟೇಲ್ ಎಂಬ ಉದ್ಯಮಿ ತಮ್ಮ ಪ್ರೇಯಸಿಗೆ ಚಂದ್ರಗ್ರಹದಲ್ಲಿ ಒಂದು ತುಣುಕು ಭೂಮಿಯನ್ನು (land in moon) ಗಿಫ್ಟ್ ಆಗಿ ಕೊಟ್ಟರು. ಫೆಬ್ರವರಿಯಲ್ಲಿ ತ್ರಿಪುರಾದ ಒಂದು ಗ್ರಾಮದ ಗಣಿತ ಟೀಚರ್ ಚಂದ್ರನಲ್ಲಿ ಜಮೀನು ಕೊಂಡುಕೊಂಡರು. ಕಳೆದ ವರ್ಷ ಜೂನ್‌ನಲ್ಲಿ ರಾಂಚಿಯ 33 ವರ್ಷದ ವೆಡ್ಡಿಂಗ್ ಪ್ಲಾನರ್ ಒಬ್ಬರು ಒಂದೆಕರೆ ಜಾಗವನ್ನು ಕೊಂಡು ತಾಯಿಗೆ ನೀಡಿದರು. 2020 ಡಿಸೆಂಬರ್‌ನಲ್ಲಿ ಅಜ್ಮೇರ್‌ನ ಒಬ್ಬ ವ್ಯಕ್ತಿ ತಮ್ಮ ಪತ್ನಿಗೆ ಆನಿವರ್ಸರಿ ಗಿಫ್ಟ್ ಆಗಿ ಚಂದ್ರನಲ್ಲಿ ಒಂದಿಷ್ಟಯ ಜಮೀನು ಖರೀದಿಸಿ ಕೊಟ್ಟಿದ್ದರು. 2003ರಲ್ಲಿ ಹೈದರಾಬಾದ್‌ನ ಭವಿಷ್ಯಕಾರ ಕಮ್ ಷೇರು ಮಾರುಕಟ್ಟೆ ತಜ್ಞರು ಕೆಲವು ಎಕರೆ ಭೂಮಿಯನ್ನು ಚಂದ್ರನಲ್ಲಿ ಕೊಂಡಿದ್ದರು.
ಅದೆಲ್ಲ ಸರಿ. ಇವರೆಲ್ಲ ಚಂದ್ರ ಗ್ರಹದ ಮೇಲೆ ಜಮೀನನ್ನು ಹೊಂದಿ ಸಾಧಿಸುವುದಾದರೂ ಏನು? ಅಲ್ಲಿಗೆ ಇವರು ಎಂದಾದರೂ ಹೋಗಲು ಸಾಧ್ಯವೇ? ಬಹುಶಃ ಅದೆಂದಿಗೂ ಸಾಧ್ಯವಾಗದು. ಹಾಗಿದ್ದರೆ ಇವರ ಹಕೀಕತ್ತು ಏನು?
ಮೊದಲು ಇವರು ಏನು ಹೇಳುತ್ತಾರೆ ಕೇಳೋಣ.
ʼʼನಾನು ಎಂದಿಗೂ ಅಲ್ಲಿಗೆ ಹೋಗಲಾರೆ ಎಂಬುದು ನನಗೆ ಗೊತ್ತಿದೆ. ನನಗೆ ಇದರಿಂದ ಯಾವ ಆರ್ಥಿಕ ಲಾಭವೂ ಇಲ್ಲ ಎಂಬುದೂ ಗೊತ್ತಿದೆ. ಆದರೆ ಈ ಜಗತ್ತಿನಲ್ಲಿ ಕೆಲವು ಸಂಗತಿಗಳಿವೆ- ಲಾಭ ಅಥವಾ ನಷ್ಟದ ದೃಷ್ಟಿಯಿಂದ ಅವನ್ನು ಅಳೆಯಲಾಗುವುದಿಲ್ಲ. ಸುಶಾಂತ್ ಸಿಂಗ್ ರಜಪೂತ್, ಶಾರುಕ್ ಖಾನ್ ಅವರಂಥ ಬಾಲಿವುಡ್ ಸ್ಟಾರ್‌ಗಳು ಅಲ್ಲಿ ಜಮೀನು ತಗೊಂಡಿದ್ದಾರೆ. ಅದು ದುಬಾರಿ ಇರಬಹುದು ಅಂತ ನಾನು ಮೊದಲು ಭಾವಿಸಿದ್ದೆ. ಆದ್ರೆ ನಾನೂ ತಗೋಬಹುದು ಅಮತ ಪರಿಶೀಲಿಸಿದಾಗ ತಿಳೀತುʼʼ ಎನ್ನುತ್ತಾರೆ ಜಮೀನು ಖರೀದಿಸಿದ ತ್ರಿಪುರಾದ ಸುಮನ್ ದೇವನಾಥ್. ಅವರು ಎಕರೆಗೆ ₹ 6000 ನೀಡಿದ್ದಾರೆ.
ʼʼನನ್ನ ಪ್ರೇಯಸಿಗೆ ಅಮೂಲ್ಯವಾದುದು, ತುಂಬಾ ವಿಶಿಷ್ಟವಾದುದು ಏನನ್ನಾದರೂ ನೀಡಬೇಕು ಎಂದು ನನಗೆ ಅನಿಸುತ್ತಿತ್ತು. ಇದೊಂದು ಕುತೂಹಲಕಾರಿ ಐಡಿಯಾ ಅನಿಸಿತು. ಕೊಂಡುಕೊಂಡು ಗಿಫ್ಟ್ ಆಗಿ ನೀಡಿದೆʼʼ ಎನ್ನುತ್ತಾರೆ ವಡೋದರಾದ ಮಯೂರ್ ಪಟೇಲ್. ಇವರಿಗೆ 24 ವರ್ಷ. ಪೆಟ್‌ಶಾಪ್ ಮಾಲಿಕ. ಕೊಂಡದ್ದು ಎಕರೆಗೆ ₹ 9000ದಂತೆ. ʼʼಚಂದ್ರನನ್ನೇ ಕೊಡುವೆ ಎಂದು ಹೆಣ್ಣಿಗೆ ಭರವಸೆ ನೀಡುವ ಗಂಡಸರು ಪ್ರಪಂಚದಲ್ಲಿದ್ದಾರೆ. ಆದರೆ ನನಗೆ ನಿಜವಾಗಿಯೂ ಚಂದ್ರನನ್ನೇ ಕೊಟ್ಟಿದ್ದಾನೆ ನನ್ನ ಗೆಳೆಯʼʼ ಎಂದು ನಗುತ್ತಾಳೆ ಆತನ ಭಾವಿ ಪತ್ನಿ ಹಿಮಾಲಿ.
ಇದನ್ನೂ ಓದಿ: National Technology Day ಪೋಖ್ರಾನ್ ಅಣು ಪರೀಕ್ಷೆ ಯಶಸ್ವಿಯಾಗಿ ನಡೆದ ಹೆಮ್ಮೆಯ ದಿನ
ಸುಶಾಂತ್, ಶಾರುಕ್ ಹೊಂದಿದ್ದರು
ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್, ಚಂದ್ರನ ಮೇಲೆ ಜಮೀನು ಹೊಂದಿದ್ದ. ಇವನು ಹೊಂದಿದ್ದ ಜಾಗವಿದ್ದ ಪ್ರಾಂತ್ಯದ ಹೆಸರು Mare Muscoviense. ಈತ ತೀರಿಕೊಂಡಾಗ, ಈತ ಚಂದ್ರನ ಮೇಲೆ ಜಮೀನು ಹೊಂದಿದ್ದ ವಿಚಾರ ಜನಪ್ರಿಯವಾಯಿತು. ಈತನನ್ನು ಮಾದರಿಯಾಗಿ ಅನುಸರಿಸಿ ಹಲವರು ಖರೀದಿಗೆ ಮುಂದಾದರು. ಬಾಲಿವುಡ್ ಬಾದ್‌ಶಾ ಶಾರುಕ್ ಖಾನ್ ಕೂಡ ಒಂದಿಷ್ಟು ಚಂದ್ರಭೂಮಿ ಹೊಂದಿದ್ದಾನೆ- ಆಸ್ಟ್ರೇಲಿಯಾದ ಅಭಿಮಾನಿಯೊಬ್ಬಳು ಇದನ್ನು ಖರೀದಿಸಿ ಶಾರುಕ್‌ಗೆ ಗಿಫ್ಟ್ ಆಗಿ ಕೊಟ್ಟಿದ್ದಳಂತೆ.
ಚಂದ್ರನಲ್ಲಿ ಭೂಮಿ ಖರೀದಿಸುವುದು ಹೇಗೆ?
- ಮೊದಲು lunarregistry.comಗೆ ಲಾಗಿನ್ ಆಗಿರಿ.
- ಮೂನ್ ಪ್ರಾಪರ್ಟಿ ಐಕಾನ್ ಒತ್ತಿ.
- ಎಲ್ಲಿ ಭೂಮಿ ಖರೀದಿಸಬೇಕು ಎಂಬುದನ್ನು ಫಿಕ್ಸ್ ಮಾಡಿ.
- ಖರೀದಿಸಬೇಕಾದ ಜಮೀನಿನ ಅಳತೆ ನಿರ್ಧರಿಸಿ. ಒಬ್ಬರಿಗೆ ಗರಿಷ್ಠ 10 ಎಕರೆ ಮಾತ್ರ.
- ಇದು ಗಿಫ್ಟ್ ಎಂದಾದರೆ ಅದಕ್ಕೆ ತಕ್ಕಂತೆ ಸಂದೇಶ ಬರೆಯಿರಿ.
- ನಿಮ್ಮ ದೇಶ, ವಿಳಾಸ, ಫೋನ್ ನಂಬರ್, ಇಮೇಲ್ ವಿಳಾಸಗಳನ್ನೆಲ್ಲ ನಮೂದಿಸಿ.
- ಆನ್ಲೈನ್ ಮೂಲಕ ಪೇಮೆಂಟ್ ಮಾಡಿ.
- ಮುದ್ರಿತ ದಾಖಲೆಗಳು ನಿಮಗೆ ಅಂಚೆಯ ಮೂಲಕ ಬರುತ್ತವೆ. ಪಿಡಿಎಫ್ ದಾಖಲೆಗಳು ಇಮೇಲ್ನಲ್ಲಿ ಬರುತ್ತವೆ.
- ಈ ಜಮೀನನ್ನು ನೀವು ಬೇರೆ ಯಾರಿಗಾದರೂ ಮಾರಬಹುದು ಅಥವಾ ವರ್ಗಾಯಿಸಬಹುದು.
ಯಾರು ಮಾರುವವರು?
ಚಂದ್ರನಲ್ಲಿನ ಜಮೀನಿನ ತುಣುಕುಗಳನ್ನು ಮಾರುವ ಹಲವು ಸಂಸ್ಥೆಗಳಿವೆ- ಲ್ಯೂನಾ ಸೊಸೈಟಿ ಇಂಟರ್‌ನ್ಯಾಷನಲ್ (LSI), ಇಂಟರ್‌ನ್ಯಾಷನಲ್ ಲ್ಯೂನಾರ್ ಲ್ಯಾಂಡ್ಸ್ ಅಥಾರಿಟಿ, ಸೀ ಆಫ್ ಟ್ರಾಂಕ್ವಿಲಿಟಿ, ಲ್ಯೂನಾರ್ ಲ್ಯಾಂಡ್ಸ್ ರಿಜಿಸ್ಟ್ರಿ ಇತ್ಯಾದಿ. LSI ವೆಬ್‌ಸೈಟ್‌ನಲ್ಲಿ ಈಗಾಗಲೇ 53,000 ಮಂದಿ ಜಮೀನು ಖರೀದಿಸಿದ್ದಾರೆ. ಈ ಸಂಸ್ಥೆಗಳಿಗೆ ಚಂದ್ರನ ಮೇಲಿನ ಹಕ್ಕುಸ್ವಾಮ್ಯ ಕೊಟ್ಟವರಾರು? ಗೊತ್ತಿಲ್ಲ. ಆದರೆ ಇದರಿಂದ ಬಂದ ಹಣವನ್ನು ತಾವು ಖಾಸಗಿ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಬಳಸುತ್ತೇವೆ ಎನ್ನುತ್ತವೆ.
ಇದನ್ನೂ ಓದಿ: ತಂತ್ರಜ್ಞಾನ: ಕಾರು ಖರೀದಿಗೆ ಪರಿಗಣಿಸುವ 3 ಹೊಸ ಅಂಶಗಳು ನಿಮಗೆ ಗೊತ್ತೆ?
ಇದು ಸಾಧ್ಯವೇ?
ಬಾಹ್ಯಾಕಾಶವನ್ನು ಬಳಸುವ ಎಲ್ಲ ದೇಶಗಳ ನಡುವೆ ʼಭೂಮಿಯಾಚೆಗಿನ ಬಾಹ್ಯಾಕಾಶ ಒಪ್ಪಂದʼ ಜಾರಿಯಲ್ಲಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕಾನೂನುಗಳು ಇಲ್ಲಿ ಅನ್ವಯ ಆಗುತ್ತವೆ. ಇದರ ಪ್ರಕಾರ, ʼʼಭೂಮಿಯ ಆಚೆಗಿನ ಬಾಹ್ಯಾಕಾಶವು ಯಾವುದೇ ದೇಶದ ಸಾರ್ವಭೌಮತೆಗೆ ಬಳಕೆ, ಸ್ವಾಧೀನ, ಇನ್ಯಾವುದೇ ರೀತಿಯಲ್ಲಿ ಒಳಪಡುವುದಿಲ್ಲʼʼ ಎಂದು ಈ ಒಪ್ಪಂದಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 1967ರಲ್ಲಿ ಬ್ರಿಟನ್, ಅಮೆರಿಕ, ರಷ್ಯಾ, ಭಾರತ ಸೇರಿದಂತೆ 109 ದೇಶಗಳು ಇದಕ್ಕೆ ಸಹಿ ಹಾಕಿವೆ.
ʼʼಆಯಾ ದೇಶದ ಸರಕಾರಗಳ ಅನುಮತಿಯಿಲ್ಲದೆ ಯಾವುದೇ ಸಂಘಟನೆ ಸ್ವತಂತ್ರ ಸಂಶೋಧನೆ, ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ಎತ್ತಿಕೊಳ್ಳುವಂತಿಲ್ಲʼʼ ಎಂಬುದು ಕೂಡ ಈ ಒಪ್ಪಂದದ ಆರ್ಟಿಕಲ್ 6ರಲ್ಲಿ ಇದೆ.
ಹಾಗಿದ್ದರೆ ಈ ಜಮೀನು ಖರೀದಿಗಳು ನಿಜಕ್ಕೂ ಏನು? ಇವುಗಳಿಗೆ ಏನಾದರೂ ಅರ್ಥ ಇದೆಯೇ?
ಸದ್ಯಕ್ಕಂತೂ ಇಲ್ಲ. ಈ ಖರೀದಿಗಳನ್ನು ಯಾವ ಸರಕಾರವೂ ಮಾನ್ಯ ಮಾಡುವುದಿಲ್ಲ. ಮುದ್ರಿತ ದಾಖಲೆಗಳಿಗೂ ಮಾನ್ಯತೆಯಿಲ್ಲ.
ಹಾಗಿದ್ದರೆ ಈಗಾಗಲೇ ಖರೀದಿಸಿದವರು, ಇನ್ನೂ ಖರೀದಿಸುತ್ತಿರುವವರ ಸಂಗತಿ ಏನು?
ಇದಕ್ಕೆ ನೇರ ಉತ್ತರವಿಲ್ಲ. ಕೆಲವು ವರ್ಷಗಳ ಹಿಂದೆ, ಕ್ರಿಪ್ಟೋಕರೆನ್ಸಿ ಕೂಡ ಇಂಥದೇ ಒಂದು ʼಗಾಳಿಯಲ್ಲಿ ನಡೆಯುವ ವ್ಯವಹಾರʼ ಎನಿಸಿಕೊಂಡಿತ್ತು. ಮುಂದೆ ಚಂದ್ರನ ಜಮೀನು ಖರೀದಿಯೂ ಹೀಗೆ ಆಗಬಹುದೇ? ಕಾಲವೇ ಹೇಳಬೇಕು.
ಅಲ್ಲಿಯ ವರೆಗೆ? ಇಂಥ ಖರೀದಿಗಳಿಗೆ ಭಾವನಾತ್ಮಕ ಮೌಲ್ಯ ಮಾತ್ರವೇ ಇರುತ್ತದೆ.