ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ (International Monetary Fund) ಮತ್ತು ಪಾಕಿಸ್ತಾನ ಸೋಮವಾರ ವರ್ಚುವಲ್ ಮಾತುಕತೆಗೆ ಚಾಲನೆ ನೀಡಲಿವೆ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಐಎಂಎಫ್‌ನಿಂದ ನೆರವನ್ನು ಯಾಚಿಸಿದೆ. ಇದು ಪಾಕ್‌ಗೆ ನಿರ್ಣಾಯಕವೂ ಆಗಿದೆ. 10 ದಿನಗಳ ಮಾತುಕತೆಯ ಬಳಿಕ ಕಳೆದ ವಾರ ಉಭಯ ಬಣಗಳು ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿತ್ತು. ಆದರೆ ಇದೀಗ ಮಾತುಕತೆ ಮತ್ತೆ ಮುಂದುವರಿಯಲಿದೆ. ದಿವಾಳಿಯಂಚಿನಲ್ಲಿರುವ ಪಾಕಿಸ್ತಾನವು ಐಎಂಎಫ್‌ನಿಂದ ನೆರವನ್ನು ಶತಾಯಗತಾಯ ಪಡೆಯಲು ಯತ್ನಿಸುತ್ತಿದೆ.
ಮಾತುಕತೆಯನ್ನು ಆದಷ್ಟು ಶೀಘ್ರ ಅಂತ್ಯಗೊಳಿಸುವ ಇಂಗಿತ ಇದೆ ಎಂದು ಪಾಕಿಸ್ತಾನದ ಹಣಕಾಸು ಕಾರ್ಯದರ್ಶಿ ಹಮೀದ್ ಯಾಕೂಬ್ ಶೇಖ್ ತಿಳಿಸಿದ್ದಾರೆ. ಐಎಂಎಫ್ 2019ರಲ್ಲಿ ಪಾಕಿಸ್ತಾನಕ್ಕೆ 6.5 ಶತಕೋಟಿ ಡಾಲರ್ ನೆರವು ನೀಡುವ ಯೋಜನೆಯನ್ನು ಘೋಷಿಸಿತ್ತು. (53,950 ಕೋಟಿ ರೂ.) ಕಳೆದ ವರ್ಷ ಇದನ್ನು 7 ಶತಕೋಟಿ ಡಾಲರ್‌ಗೆ (೫೮,೧೦೦ ಕೋಟಿ ರೂ.) ವಿಸ್ತರಿಸಲಾಗಿತ್ತು. ಈಗ ಈ ಪ್ಯಾಕೇಜ್‌ನಡಿಯಲ್ಲಿ ಕನಿಷ್ಠ 1.1 ಶತಕೋಟಿ ಡಾಲರ್ (9,130 ಕೋಟಿ ರೂ.) ಪಡೆಯಲು ಪಾಕಿಸ್ತಾನ ಶತಾಯ ಗತಾಯ ಯತ್ನಿಸುತ್ತಿದೆ. ಪಾಕಿಸ್ತಾನ 2019ರಲ್ಲಿ ಹೆಚ್ಚುವರಿ ಸಾಲಕ್ಕೆ ಐಎಂಎಫ್‌ಗೆ (Extended fund facility) ಮೊರೆ ಹೋಗಿತ್ತು. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದೇಶಗಳಿಗೆ ಐಎಂಎಫ್ ಹೆಚ್ಚುವರಿ ಸಾಲವನ್ನು ಇಎಫ್‌ಎಫ್ ಅಡಿಯಲ್ಲಿ ನೀಡುತ್ತದೆ. 1990ರಿಂದೀಚೆಗೆ ಐಎಂಎಫ್‌ನಿಂದ ೧೩ನೇ ಸಲ ನೆರವನ್ನು ಪಾಕಿಸ್ತಾನ ಪಡೆಯಲು ಮುಂದಾಗಿದೆ.
ಪಾಕಿಸ್ತಾನಕ್ಕೆ ಐಎಂಎಫ್ ನೆರವು ಏಕೆ ಬೇಕು?
ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ 2.9 ಶತಕೋಟಿ ಡಾಲರ್‌ಗೆ (23,490 ಕೋಟಿ ರೂ.) ಕುಸಿದಿದೆ. ಇದು ಮೂರು ವಾರಗಳ ಆಮದಿಗೆ ಮಾತ್ರ ಸಾಕಾಗಲಿದೆ. ಐಎಂಎಫ್ ನೆರವು ಲಭಿಸಿದರೆ ಮಾತ್ರ ಪಾಕಿಸ್ತಾನಕ್ಕೆ ಹಣಕಾಸು ಬಿಕ್ಕಟ್ಟು ಎದುರಿಸಲು ಒಂದು ದಾರಿ ತೆರೆದಂತಾಗಲಿದೆ. 2019ರಲ್ಲಿ ಪಾಕಿಸ್ತಾನವು ಐಎಂಎಫ್ ಅನ್ನು ಸಂಪರ್ಕಿಸಿದಾಗಲೇ ಆ ದೇಶ ಅಧಿಕ ಹಣದುಬ್ಬರಕ್ಕೆ ಜರ್ಜರಿತವಾಗಿತ್ತು. ಪಾಕಿಸ್ತಾನದ ರೂಪಾಯಿ ಕರೆನ್ಸಿ ಮೌಲ್ಯ ಗಣನೀಯ ಕುಸಿದಿತ್ತು. ಆರ್ಥಿಕತೆ ಸಂಪೂರ್ಣ ಪತನವಾಗುವುದನ್ನು ತಪ್ಪಿಸಲು ಐಎಂಎಫ್ ನೆರವು ಅತ್ಯವಶ್ಯಕವಾಗಿದೆ.
ಪಾಕಿಸ್ತಾನ 274 ಶತಕೋಟಿ ಡಾಲರ್ ಸಾಲದ ಹೊರೆಯನ್ನು ಹೊಂದಿದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 22 ಲಕ್ಷ ಕೋಟಿ ರೂ.ಗಳಾಗಿದೆ. ಜಿಡಿಪಿಯ 79%ರಷ್ಟಾಗುತ್ತದೆ. ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ತನ್ನ ದೂತಾವಾಸ ಕಚೇರಿ ಕಟ್ಟಡವನ್ನೂ ಮಾರಾಟಕ್ಕಿಟ್ಟಿತ್ತು. ಶಾಪಿಂಗ್ ಮಾಲ್, ರೆಸ್ಟೊರೆಂಟ್‌ಗಳನ್ನು ಹಾಗೂ ಮಾರುಕಟ್ಟೆಗಳಲ್ಲಿ ವಿದ್ಯುತ್ ಉಳಿಸಲು ಬೇಗ ಮುಚ್ಚಬೇಕು ಎಂದು ಸೂಚಿಸಲಾಗಿದೆ.
ಆರ್ಥಿಕ ಪರಿಸ್ಥಿತಿ ಗಂಭೀರ: ಪಾಕ್ ಪ್ರಧಾನಿ ಹೇಳಿಕೆ
ದೇಶದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಸಂಪನ್ಮೂಲಗಳು ಬರಿದಾಗುತ್ತಿವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹ್ಬಾಜ್ ಷರೀಫ್ ಹೇಳಿದ್ದಾರೆ. ಇನ್ನೊಂದು ತಿಂಗಳೊಳಗೆ ಐಎಂಎಫ್‌ನಿಂದ ಸಾಲದ ನೆರವು ಸಿಗದಿದ್ದರೆ, ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ ಬರಿದಾಗುವ ಅಪಾಯ ಇದೆ.
ಐಎಂಎಫ್ ಷರತ್ತುಗಳೇನು?
ಐಎಂಎಫ್ ಪಾಕಿಸ್ತಾನಕ್ಕೆ ಮಾರುಕಟ್ಟೆ ಆಧರಿತ ವಿನಿಮಯ ದರ, ಮಾರುಕಟ್ಟೆ ಆಧರಿಸಿ ಅಧಿಕ ತೈಲ ದರ ಏರಿಕೆ, ವಿತ್ತೀಯ ನಿಯಂತ್ರಕ ಕ್ರಮಗಳನ್ನು ಜಾರಿಗೊಳಿಸಲು ಷರತ್ತುಗಳನ್ನು ವಿಧಿಸಿದೆ. ಐಎಂಎಫ್ ಪ್ರಕಾರ ಹೊಸ ತೆರಿಗೆಗಳನ್ನು ವಿಧಿಸಲು ಸರ್ಕಾರ ಒಪ್ಪಿದೆ ಎಂದು ಅಲ್ಲಿನ ಹಣಕಾಸು ಸಚಿವರು ತಿಳಿಸಿದ್ದಾರೆ. ಹೀಗಿದ್ದರೂ, ಇತ್ತೀಚೆಗೆ ಪ್ರಧಾನಿ ಶೆಹ್ಬಾಜ್ ಅವರು, ಐಎಂಎಫ್ ಷರತ್ತುಗಳು ಕಲ್ಪನೆಗೂ ನಿಲುಕುತ್ತಿಲ್ಲ. ಅಷ್ಟೊಂದು ಕಠಿಣವಾಗಿದೆ ಎಂದು ದೂರಿದ್ದರು.
ಅಕ್ಟೋಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ:
ಪಾಕಿಸ್ತಾನದಲ್ಲಿ 2023ರ ಅಕ್ಟೋಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ ಸರ್ಕಾರಕ್ಕೆ ಐಎಂಎಫ್‌ನ ಷರತ್ತು ಪ್ರಕಾರ ತೆರಿಗೆ ಏರಿಸಲು ಮನಸ್ಸಿಲ್ಲದಿದ್ದರೂ, ಅನಿವಾರ್ಯವಾಗಿ ಸಮ್ಮತಿಸಿದೆ.