ಬೆಂಗಳೂರು: ವಿಶ್ವದ ಎಲ್ಲ ರಾಷ್ಟ್ರಗಳ ಮೇಲೆ ಕರೊನಾ ತಂದ ಸಂಕಷ್ಟ ಅಷ್ಟಿಷ್ಟಲ್ಲ. ಆಗರ್ಭ ಶ್ರೀಮಂತನಿಂದ ಕಡುಬಡವನವರೆಗೆ ಎಲ್ಲರನ್ನೂ ಕಾಡಿದ ಕರೊನಾ ಸಮಯದಲ್ಲೆ ಭಾರತದ ಆರ್ಥಿಕತೆ ಹೊಸ ದಾಖಲೆಯನ್ನು ಬರೆದಿದೆ. ಅತ್ಯಂತ ಸುಲಭವಾಗಿ ಹಣಕಾಸು ವಹಿವಾಟು ನಡೆಸಬಹುದಾದ ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ವೇದಿಕೆಯಲ್ಲಿ 2022ರ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೋಟಿ ಡಾಲರ್‌ಗೂ ಹೆಚ್ಚು ಮೊತ್ತದ ವಹಿವಾಟು ನಡೆದಿದೆ.
ಇಂಟರ್ನೆಟ್ ಬ್ಯಾಂಕಿಂಗ್‌ನಲ್ಲಿನ ಸಂಕಷ್ಟ
ಅತ್ಯಂತ ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಫೋನ್‌ಪೆ, ಜಿ ಪೇ ಮೂಲಕ ಇಂದು ಎಳನೀರು ಖರೀದಿಯಿಂದ ಹೋಟೆಲ್ ಬಿಲ್ ಪಾವತಿವರೆಗೆ ಬಳಸುತ್ತಿರುವ ವಿಧಾನವೇ ಯುಪಿಐ. ಈ ಹಿಂದೆ ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಬೇಕೆಂದರೆ ಮೊದಲಿಗೆ ಆ ಖಾತೆಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಚಾಲನೆಯಲ್ಲಿರಬೇಕಿತ್ತು. ಯಾವ ಖಾತೆಗೆ ಹಣ ವರ್ಗಾವಣೆ ಮಾಡಬೇಕೊ ಆ ಖಾತೆಯ ಸಂಖ್ಯೆ, ಖಾತೆದಾರರ ಹೆಸರು, ಬ್ಯಾಂಕ್ ಹೆಸರು, ಶಾಖೆ, ಐಎಫ್‌ಎಸ್‌ಸಿ ಕೋಡ್, ಸಿಐಎಫ್ ನಂಬರ್‌ನಂತಹ ವಿವರಗಳು ಬೇಕಿತ್ತು. ಈ ವಿವರಗಳೆಲ್ಲವನ್ನೂ, ಹಣ ಕಳಿಸುವವರು ತಮ್ಮ ಖಾತೆಯಲ್ಲಿ ನೋಂದಣಿ ಮಾಡಿದ ನಾಲ್ಕು ಗಂಟೆಯ ನಂತರ ಹಣ ವರ್ಗಾವಣೆ ಮಾಡಲು ಅವಕಾಶವಾಗುತ್ತಿತ್ತು. ಅದರಲ್ಲೂ ಐಎಂಪಿಎಸ್ ವ್ಯವಸ್ಥೆ ಮೂಲಕವಾದರೆ ತಕ್ಷಣವೇ ಹಣ ವರ್ಗಾವಣೆ ಆಗುತ್ತಿತ್ತು. ಆರ್‌ಟಿಜಿಎಸ್ ಮೂಲಕ ಸಾಕಷ್ಟು ಸಮಯ ತಗಲುತ್ತಿತ್ತು. ಇಷ್ಟೆಲ್ಲ ತಲೆಬಿಸಿಯ ಕಾರಣಕ್ಕೆ ಸಾಕಷ್ಟು ಜನರು ಸಣ್ಣಪುಟ್ಟ ವ್ಯವಹಾರಗಳಿಗೆ ಆನ್‌ಲೈನ್ ವಹಿವಾಟಿನತ್ತ ಚಿತ್ತ ಹರಿಸುತ್ತಿರಲಿಲ್ಲ. ದೊಡ್ಡ ಮಟ್ಟದ ಖರೀದಿ, ಉದ್ಯಮ, ವ್ಯಾಪಾರಗಳಲ್ಲಿ ಮಾತ್ರ ಬಳಕೆಯಲ್ಲಿತ್ತು. ಈ ವ್ಯವಸ್ಥೆ ಈಗಲೂ ಇದೆಯಾದರೂ ಪರ್ಯಾಯವಾಗಿ ಯುಪಿಐ ವೇದಿಕೆ ಕಾರ್ಯನಿರ್ವಹಿಸುತ್ತಿದೆ.
ಯುಪಿಐ ಆಧರಿತ ಪೇಮೆಂಟ್
ಹಣಕಾಸು ವಹಿವಾಟು ನಡೆಸುವುದು ಕಷ್ಟವಾದ್ಧರಿಂದ ಸಾಮಾನ್ಯರು ಇಂಟರ್ನೆಟ್ ಬ್ಯಾಂಕಿಂಗ್‌ನಿಂದ ದೂರವೇ ಉಳಿದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ ಕನಸನ್ನು ಹೊತ್ತಿದ್ದರಾದರೂ ಇಂಟರ್ನೆಟ್ ಬ್ಯಾಂಕಿಂಗ್‌ನ ಸಂಕೀರ್ಣತೆಯಿಂದಾಗಿ ಎಲ್ಲರನ್ನೂ ಡಿಜಿಟಲ್ ಆರ್ಥಿಕತೆಯೊಳಗೆ ತರಲು ಕಷ್ಟವಾಗುತ್ತಿತ್ತು. ಇದೇ ಕಾರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ 2016ರ ಏಪ್ರಿಲ್ 11ರಂದು ಪ್ರಾಯೋಗಿಕವಾಗಿ ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಿತು. ಸಾಮಾನ್ಯ ಹಣದ ವಹಿವಾಟುಗಳೆಲ್ಲವನ್ನೂ ನಿಗಾ ವಹಿಸಲು ಆರ್‌ಬಿಐ ವತಿಯಿಂದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್‌ಸಿಪಿಐ) ಸ್ಥಾಪಿಸಲಾಯಿತು. ಅದರ ಅಡಿಯಲ್ಲೆ ಆರಂಭಿಸಲಾದ ಯುಪಿಐ ವ್ಯವಸ್ಥೆಗೆ 21 ಬ್ಯಾಂಕುಗಳನ್ನು ಸೇರಿಸಿ 2016ರ ಆಗಸ್ಟ್ 25ರಂದು ಅಂದಿನ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಚಾಲನೆ ನೀಡಿದರು.
ಹೆಚ್ಚಿನ ಓದು: ಸರಿಯಲಿಲ್ಲ ಕ್ರಿಪ್ಟೊ ಕರೆನ್ಸಿ ಮೇಲಿನ ತೂಗುಗತ್ತಿ!: ಕ್ರಿಪ್ಟೊ ಬಗ್ಗೆ ನಿಮಗೆಷ್ಟು ಗೊತ್ತು?
ಯುಪಿಐ ಎನ್ನುವುದು ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ನೇರವಾಗಿ ಹಾಗೂ ತಕ್ಷಣವೇ ಹಣ ವರ್ಗಾವಣೆ ಮಾಡುವ ವ್ಯವಸ್ಥೆ. ಈ ವಹವಾಟು ನಡೆಸಲು ಬ್ಯಾಂಕ್ ಖಾತೆ ವಿವರ, ಖಾತೆದಾರರ ಹೆಸರಿನಂತಹ ಅನೇಕ ಮಾಹಿತಿ ಬೇಕಿಲ್ಲ. ಖಾತೆದಾರರ ಯುಪಿಐ ವಿಳಾಸ (ಹೆಚ್ಚಿನ ಸಂದರ್ಭದಲ್ಲಿ ಫೋನ್ ನಂಬರ್ ಆಗಿರುತ್ತದೆ) ಇದ್ದರೆ ಸಾಕು. ಈ ವಿಳಾಸವನ್ನು ಬಳಸಿ ನೇರವಾಗಿ ಹಣ ವರ್ಗಾವಣೆ ಮಾಡಬಹುದು. ಇಂತಹ ವ್ಯವಸ್ಥೆಯು ಸಾಕಷ್ಟು ಜನರನ್ನು ಆಕರ್ಷಿಸಿತು.
ಕರೊನಾ ಸಮಯದಲ್ಲಿ ಸವಾಲು
ಭಾರತದಲ್ಲಿ ಮೊದಲಿಗೆ ಡಿಜಿಟಲ್ ಆರ್ಥಿಕತೆಗೆ ಒತ್ತು ಸಿಕ್ಕಿದ್ದು 2016ರಲ್ಲಿ ಘೋಷಣೆಯಾದ ನೋಟು ಅಮಾನ್ಯೀಕರಣ ನಿರ್ಧಾರದ ನಂತರ. ನೋಟು ಅಮಾನ್ಯೀಕರಣದಿಂದ ಸಾಕಷ್ಟು ಜನರು ಸಂಕಷ್ಟ ಅನುಭವಿಸಿದರು. ಆದರೆ ಪರಸ್ಪರ ನೀಡಲು ನೋಟುಗಳು ಲಭ್ಯವಿಲ್ಲದಿದ್ದ ಕಾರಣಕ್ಕೆ ಹೆಚ್ಚಿನ ಜನರು ಆನ್‌ಲೈನ್ ಪೇಮೆಂಟ್‌ಗಳತ್ತ ಗಮನಹರಿಸಿದರು. ಅಷ್ಟರವೇಳೆಗೆ ಚಾಲನೆಯಲ್ಲಿದ್ದ ಯುಪಿಐ ವಹಿವಾಟು ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿತ್ತು. ಮೂರ್ನಾಲ್ಕು ತಿಂಗಳಲ್ಲೆ ಶೇಕಡಾ ಐವತ್ತಕ್ಕೂ ಹೆಚ್ಚು ಬಳವಣಿಗೆ ದಾಖಲಿಸಿತು. ನಂತರವೂ ಇದೇ ವೇಗದಲ್ಲಿ ಮಂದುವರಿಯುತ್ತಿದ್ದ ಯುಪಿಐ ಪೇಮೆಂಟ್ಸ್ ವ್ಯವಸ್ಥೆಗೆ ಕೇಂದ್ರ ಸರ್ಕಾರ ಪುಷ್ಠಿ ನೀಡಲು ವಿಶಿಷ್ಠ ಆಪ್ ರೂಪಿಸಿ ಅದಕ್ಕೆ ಭೀಮ್ ಎಂದು ಹೆಸರಿಟ್ಟಿತು.
ಅದಾಗಲೇ ಏರಿಕೆ ಹಂತದಲ್ಲಿದ್ದ ಡಿಜಿಟಲ್ ಪೇಮೆಂಟ್ ಕ್ಷೇತ್ರಕ್ಕೆ ಪೇಟಿಎಂ, ಫೋನ್‌ಪೆ, ಗೂಗಲ್ ಪೇ(ಜಿ ಪೇ) ಸೇರಿ ಅನೇಕ ಕಂಪನಿಗಳು ಪಾದಾರ್ಪಣೆ ಮಾಡಿದವು. ಪ್ರಾರಂಭದಲ್ಲಿ ಪ್ರತಿ ಆಪ್‌ಗೂ ಪ್ರತ್ಯೇಕ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಬೇಕಿತ್ತು. ನಂತರದಲ್ಲಿ ತಂತ್ರಜ್ಞಾನ ಸುಧಾರಣೆಯಿಂದಾಗಿ ಎಲ್ಲ ಯುಪಿಐ ಆಪ್‌ಗಳಿಗೂ ಒಂದೇ ಕ್ಯೂಆರ್ ಕೋಡ್ ಸಾಕಾಯಿತು. ಇದೇ ವೇಳೆಗೆ ಆವರಿಸಿದ ಕರೊನಾ ಸಂಕಷ್ಟವು ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಮನೆಮನೆಗೂ, ಬೀದಿ ಗಾಡಿಗಳವರೆಗೂ ತಂದು ನಿಲ್ಲಿಸಿತು. ಇಂದು ರಸ್ತೆಯಲ್ಲಿ ಎಳನೀರು ಮಾರುವವರು. ಸೊಪ್ಪು ಮಾರುವವರೂ ಯುಪಿಐ ಪೇಮೆಂಟ್ ಸ್ವೀಕರಿಸುತ್ತಾರೆ. ಅತ್ಯಂತ ಸಾಮಾನ್ಯ ಜನರನ್ನು ಆರ್ಥಿಕತೆಯೊಳಕ್ಕೆ ಸೇರಿಸಿಕೊಳ್ಳುವಲ್ಲಿ ಸಾಕಷ್ಟು ಯಶಸ್ಸು ಸಿಕ್ಕಂತಾಗಿದೆ.
1 ಲಕ್ಷ ಕೋಟಿ ಡಾಲರ್ ಮೊತ್ತ
2022ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 1.09 ಲಕ್ಷ ಕೋಟಿ ಡಾಲರ್ ಮೊತ್ತದ ಯುಪಿಐ ವಹಿವಾಟು ದಾಖಲಾಗಿದೆ. ಇದೇ ಮೊತ್ತವನ್ನು ಭಾರತದ ರೂಪಾಯಿಯಲ್ಲಿ ಹೇಳುವುದಾದರೆ 83.45 ಲಕ್ಷ ಕೋಟಿ ರೂ.ನಷ್ಟು ವಹಿವಾಟು. ಇದರ ಗಾತ್ರ ಎಷ್ಟು ಎಂದು ತಿಳಿಯಬೇಕೆಂದರೆ, ಕರ್ನಾಟಕ 2020-21ರಲ್ಲಿ 20.49 ಲಕ್ಷ ಕೋಟಿ ರೂ. ಒಟ್ಟು ದೇಶೀಯ ನಿವ್ವಳ ಉತ್ಪನ್ನ(ಜಿಎಸ್‌ಡಿಪಿ) ಹೊಂದುವ ನಿರೀಕ್ಷೆಯಿದೆ. ಇದೀಗ ಒಂದು ವರ್ಷದಲ್ಲಿ ದಾಖಲಾಗಿರುವ ಯುಪಿಐ ವಹಿವಾಟು ಕರ್ನಾಟಕದ ಜಿಎಸ್‌ಡಿಪಿಯ ನಾಲ್ಕು ಪಟ್ಟು ದೊಡ್ಡದಾಗಿದೆ ಎಂದರೆ ಇದರ ವಹಿವಾಟಿನ ಗಾತ್ರವನ್ನು ಅಂದಾಜಿಸಬಹುದು.
ಯುಪಿಐ ವಹಿವಾಟಿನ ಅಂಕಿಅಂಶಗಳ ಪ್ರಕಾರ ಅರ್ಧದಷ್ಟು ವಹಿವಾಟು ತಲಾ 200 ರೂ.ಗಿಂತ ಕಡಿಮೆ ಮೊತ್ತ ಹೊಂದಿವೆ. ಕಡಿಮೆ ಮೊತ್ತದ ಹಾಗೂ ಹೆಚ್ಚಿನ ಸಂಖ್ಯೆಯ ಈ ವಹಿವಾಟುಗಳ ಕಾರಣದಿಂದಾಗಿ, ಸದ್ಯ ಇರುವ ಡಿಜಿಟಲ್ ಮೂಲಸೌಕರ್ಯ ಒತ್ತಡಕ್ಕೊಳಗಾಗಿ ಕೆಲವೊಮ್ಮೆ ಸ್ಥಗಿತವಾದ ಉದಾಹರಣೆಗಳೂ ಇವೆ. ಇವುಗಳನ್ನು ಸರಿಪಡಿಸಿಕೊಂಡೇ, ಈ ಆರ್ಥಿಕ ವರ್ಷದಲ್ಲಿ ಒಟ್ಟು ನಾಲ್ಕುಸ ಆವಿರ ಕೋಟಿ ವಹಿವಾಟನ್ನು ಯುಪಿಐ ವೇದಿಕೆ ಮುಟ್ಟಿದೆ. ಈ ಕುರಿತು ಇತ್ತೀಚೆಗೆ ಟ್ವೀಟ್ ಮಾಡಿದ್ದ ಹಣಕಾಸು ಸಚಿವೆ ನರ್ಮಲಾ ಸೀತಾರಾಮನ್, ಸಂತೋಷ ವ್ಯಕ್ತಪಡಿಸಿದ್ದರು. ಆದರೆ ಅತ್ಯಂತ ಸಾಮಾನ್ಯ ಜನರು, ಸಣ್ಣ ಪುಟ್ಟ ವ್ಯವಹಾರಗಳಿಗೂ ಯುಪಿಐ ಬಳಸುತ್ತಿದ್ದಾರೆ ಎನ್ನುವುದು ಸಂತಸ ವಿಚಾರ.