ದೇಶದ್ರೋಹ ಕಾಯಿದೆ (Sedition Law) ಬಳಕೆ, ದುರ್ಬಳಕೆಯ ಕುರಿತಾದ ಚರ್ಚೆ ಇಂದು ನಿನ್ನೆಯದಲ್ಲ. ಯಾವುದು ದೇಶದ್ರೋಹ, ಯಾವುದು ಅಲ್ಲ ಎಂಬ ಬಗ್ಗೆ, ಅದು ವ್ಯಾಪಕವಾಗಿ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆ ಕೇಸ್‌ಗಳ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದವು. ಕೆಲವೊಮ್ಮೆ ದೇಶದ್ರೋಹ ಪ್ರಕರಣ ದಾಖಲು ಸಂಪೂರ್ಣವಾಗಿ ವ್ಯಾಖ್ಯಾನದ ಮೇಲೆಯೇ ನಿಂತಿರುತ್ತಿತ್ತು. ಬ್ರಿಟಿಷರ ಕಾಲದ ಈ ಕಾಯಿದೆಯ ಪೂರ್ಣ ಲಾಭ ಪಡೆದವರು ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದವರು. ನೈಜ ಪ್ರಕರಣಗಳೂ ಸಾಕಷ್ಟು ಇದ್ದವಾದರೂ, ಅದರ ದುರ್ಬಳಕೆಯೇ ಅದಕ್ಕೆ ಮುಳುವಾಗಿದೆ.
ಸೆಕ್ಷನ್ 124Aಯಲ್ಲಿ ಏನಿದೆ?
ಮಾತು ಅಥವಾ ಬರಹದಲ್ಲಿ ಅಥವಾ ಸನ್ನೆಗಳ ಮೂಲಕ, ಅಥವಾ ದೃಶ್ಯ ಪ್ರಾತಿನಿಧ್ಯದ ಮೂಲಕ, ಸರಕಾರದ ವಿರುದ್ಧ ದ್ವೇಷ ಅಥವಾ ತಿರಸ್ಕಾರವನ್ನು ಮೂಡಿಸಲು, ಅಥವಾ ಅಸಮಾಧಾನವನ್ನು ಪ್ರಚೋದಿಸಲು ಪ್ರಯತ್ನಿಸಿದರೆ, ಅಂಥವರಿಗೆ ಜೀವಾವಧಿ ಸೆರೆವಾಸ, ಮೂರು ವರ್ಷದ ಜೈಲುವಾಸ ಮತ್ತು ದಂಡವನ್ನು ವಿಧಿಸಬಹುದು.
ಕಾನೂನುಬದ್ಧ ಮಾಧ್ಯಮಗಳ ಮೂಲಕ ಸರಕಾರದ ಕ್ರಮಗಳ ಕುರಿತು ಅಸಾಮಾಧಾನ ವ್ಯಕ್ತಪಡಿಸುವುದು, ಯಾವುದೇ ದ್ವೇಷವನ್ನು ಪ್ರಚೋದಿಸದಂಥ ಟೀಕೆಗಳು, ಇದರ ವ್ಯಾಪ್ತಿಗೆ ಬರುವುದಿಲ್ಲ.
ಈ ಪ್ರಕರಣದಡಿ ಶಿಕ್ಷೆಯಾದದ್ದು ಬಹಳ ಕಡಿಮೆ. ಯಾಕೆಂದರೆ ಹಿಂಸೆಯನ್ನು ಪ್ರಚೋದಿಸುವ ಹೇಳಿಕೆ ಯಾವುದು, ಯಾವುದು ಅಲ್ಲ ಎಂಬುದನ್ನು ಸಾಕ್ಷ್ಯಾಧಾರ ಸಹಿತ ಸಾಬೀತುಪಡಿಸುವುದು ಕಷ್ಟವಾಗಿದೆ. ಹೀಗಾಗಿ ಬಹುತೇಕ ಪ್ರಕರಣಗಳು ಬಿದ್ದುಹೋಗುತ್ತಿವೆ.
ಇದು ಸುದ್ದಿ: ದೇಶದ್ರೋಹ ಕಾಯ್ದೆ ಮರುಪರಿಶೀಲನೆ: ಉತ್ತರಿಸಲು ಕೇಂದ್ರ ಸರ್ಕಾರಕ್ಕೆ 24 ಗಂಟೆ ಗಡುವು ನೀಡಿದ ಸುಪ್ರೀಂ ಕೋರ್ಟ್
ಎಷ್ಟಿವೆ ಕೇಸ್?
ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 5 ವರ್ಷದಲ್ಲಿ 326 ದೇಶದ್ರೋಹ ಪ್ರಕರಣ ದಾಖಲಾಗಿವೆ. 141 ಪ್ರಕರಣಗಳ ಕುರಿತು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಆದರೆ ಇದರಲ್ಲಿ ಆರು ಜನ ಮಾತ್ರ ಅಪರಾಧಿಗಳು ಎಂಬುದು ಸಾಬೀತಾಗಿದೆ. ಅಸ್ಸಾಂನಲ್ಲಿ ಅತಿ ಹೆಚ್ಚು, ಅಂದರೆ 54 ಪ್ರಕರಣ ದಾಖಲಾಗಿವೆ. ಜಾರ್ಖಂಡ್‌ನಲ್ಲಿ 40, ಹರಿಯಾಣ 31, ಕೇರಳ, ಬಿಹಾರ, ಜಮ್ಮು-ಕಾಶ್ಮೀರದಲ್ಲಿ ತಲಾ 25 ಪ್ರಕರಣ ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ 17, ಪಶ್ಚಿಮ ಬಂಗಾಳದಲ್ಲಿ ಎಂಟು, ಮಹಾರಾಷ್ಟ್ರ, ಪಂಜಾಬ್ ಹಾಗೂ ಉತ್ತರಾಖಂಡದಲ್ಲಿ ತಲಾ ಒಂದು ಕೇಸ್ ದಾಖಲಾಗಿವೆ. ಸುಪ್ರೀಂ ಕೋರ್ಟ್‌ನಲ್ಲಿ ಕಕ್ಷಿದಾರರ ಪರ ವಕೀಲರಾದ ಕಪಿಲ್ ಸಿಬಲ್ ಅವರು ಮಾಹಿತಿ ನೀಡಿರುವ ಪ್ರಕಾರ, ಒಟ್ಟಾರೆ ದೇಶಾದ್ಯಂತ 800 ಪ್ರಕರಣಗಳು ಇವೆ ಹಾಗೂ ಇದಕ್ಕೆ ಸಂಬಂಧಿಸಿ 13,000 ಮಂದಿ ಜೈಲಲ್ಲಿದ್ದಾರೆ.
ಪುರಾತನ ಕಾಯಿದೆ
ದೇಶದ್ರೋಹವನ್ನು ಶಿಕ್ಷಾರ್ಹ ಎಂದು ಭಾರತೀಯ ದಂಡಸಂಹಿತೆಯ ಸೆಕ್ಷನ್ 124ಎ ಸಾರುತ್ತದೆ. ಇದು ದೇಶದ್ರೋಹ ಕಾಯಿದೆಯೆಂದೇ ಪ್ರಸಿದ್ಧವಾಗಿದೆ. 1860ರಲ್ಲಿ ಬ್ರಿಟಿಷರು ಭಾರತದಲ್ಲಿ ಭಾರತೀಯ ದಂಡಸಂಹಿತೆಯನ್ನು ಜಾರಿಗೆ ತಂದರು. ನ್ಯಾಯಾಲಯಗಳು ಆರಂಭವಾದವು. ಇದೇ ಕಾಲದಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಜನರ ಅಸಾಮಾಧನ ಹೆಚ್ಚತೊಡಗಿ, ಅಲ್ಲಲ್ಲಿ ಟೀಕೆ ಭಿನ್ನಾಭಿಪ್ರಾಯಗಳು ದಾಖಲಾಗತೊಡಗಿದವು. ಸ್ವಾತಂತ್ರ್ಯ ಹೋರಾಟದ ದನಿಗಳು ಹೆಚ್ಚತೊಡಗಿದವು. ಇದನ್ನು ಹತ್ತಿಕ್ಕಲು ಯೋಚಿಸಿದ ಬ್ರಿಟಿಷ್ ಸರಕಾರ, ದಂಡಸಂಹಿತೆಯಲ್ಲಿ 124ಎ ಸೆಕ್ಷನ್ ಸೇರಿಸಿದರು. ಇದನ್ನು ಬಳಸಿಯೇ ಬಾಲಗಂಗಾಧರ ತಿಲಕ್, ಮಹಾತ್ಮ ಗಾಂಧಿ, ವೀರ ಸಾವರ್ಕರ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಕಿರುಕುಳ ನೀಡಿದರು.
ಮಹಾತ್ಮ ಗಾಂಧಿ ಅವರು ಈ ಕಾಯಿದೆಯನ್ನು ʼʼಜನತೆಯ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಭಾರತೀಯ ದಂಡಸಂಹಿತೆಯ ಕಾನೂನುಗಳಲ್ಲಿ ಈ ಕಾಯಿದೆಗೆ ರಾಜನ ಸ್ಥಾನʼʼ ಎಂದು ಟೀಕಿಸಿದರು. ಬ್ರಿಟಿಷ್ ಆಡಳಿತದಿಂದ ದೇಶ ಮುಕ್ತಿಗೊಂಡು ನಮ್ಮದೇ ಸರಕಾರ ಬಂದ ನಂತರವೂ ಇದು ಮುಂದುವರಿಯಿತು. ಹಲವಾರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ವಿರುದ್ಧ ಟೀಕೆಯನ್ನು ದಾಖಲಿಸಿದ, ಭಾಷಣ ಮಾಡಿದ, ಪತ್ರಿಕೆಗಳಲ್ಲಿ ಬರೆದವರ ಮೇಲೆ ಈ ಕೇಸುಗಳನ್ನು ಜಡಿದರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧ ಮತ ಹಾಕಿದ ಭಾರತದ ನ್ಯಾಯಾಧೀಶ
ಎಲ್ಲವೂ ದೇಶದ್ರೋಹವಲ್ಲ
ದೇಶದ್ರೋಹ ಕಾಯಿದೆಯಡಿ ದಾಖಲಾದ ಹೆಚ್ಚಿನ ಪ್ರಕರಣಗಳು ನಿಜಕ್ಕೂ ದೇಶದ್ರೋಹವಲ್ಲ ಎಂದು ಸಾಧಿಸಲು ಹೆಚ್ಚಿನ ಕಾನೂನು ಜ್ಞಾನ ಬೇಕಿಲ್ಲ. ʼಕೇದಾರ್‌ನಾಥ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ್ 1962′ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ಐತಿಹಾಸಿಕ ನಿರ್ಣಯ ನೀಡಿತು. ಸರಕಾರದ ಕುರಿತು ಟೀಕೆ ಮಾಡುವುದು ದೇಶದ್ರೋಹವಲ್ಲ. ಹಿಂಸೆಗೆ ಪ್ರಚೋದನೆ ನೀಡುವಂತೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವಂತೆ ಇಲ್ಲದಿದ್ದರೆ ಅದನ್ನು ದೇಶದ್ರೋಹ ಎಂದು ಹೇಳಲಾಗದು ಎಂದು ಐವರು ಸದಸ್ಯರ ನ್ಯಾಯಪೀಠ ಹೇಳಿತು.
2011ರಲ್ಲಿ ಇಂದ್ರಾದಾಸ್ ವರ್ಸಸ್ ಅಸ್ಸಾಂ ಸರಕಾರ ಹಾಗೂ ಅರುಣಾಚಲ ಪ್ರದೇಶ ಸರಕಾರ ಪ್ರಕರಣದಲ್ಲಿಯೂ ʼʼಸಾರ್ವಜನಿಕ ಶಾಂತಿಗೆ ಭಂಗ ತರುವ ಕ್ರಿಯೆ ಮಾತ್ರವೇ ದೇಶದ್ರೋಹʼʼ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು. ಆದರೆ ನಾಗರಿಕ ಹಕ್ಕು ಹೋರಾಟಗಾರ ವಿನಾಯಕ ಸೇನ್, ಲೇಖಕಿ ಆರುಂಧತಿ ರಾಯ್, ಕಾರ್ಟೂನಿಸ್ಟ್ ಅಸೀಮ್ ತ್ರಿವೇದಿ, ಹೋರಾಟಗಾರ ಹಾರ್ದಿಕ್ ಪಟೇಲ್ ಮುಂತಾದವರ ಮೇಲೆಲ್ಲ ದೇಶದ್ರೋಹ ಕೇಸುಗಳಿವೆ.
ಕಕ್ಷಿದಾರರು ಯಾರು?
ದೇಶದ್ರೋಹ ಕಾಯಿದೆ ದೊಡ್ಡ ಪ್ರಮಾಣದಲ್ಲಿ ದುರ್ಬಳಕೆಯಾಗುತ್ತಿದೆ ಎಂದು ಆಕ್ಷೇಪಿಸಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಮಾಜಿ ಕೇಂದ್ರ ಸಚಿವ ಹಾಗೂ ಪತ್ರಕರ್ತ ಅರುಣ್ ಶೌರಿ, ಕರ್ನಾಟಕ ಮೂಲದ ನಿವೃತ್ತ ಮೇಜರ್ ಜನರಲ್ ಎಸ್.ಜಿ.ವೊಂಬತ್ಕೆರೆ, ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಮುಂತಾದವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕಾಯ್ದೆ ರದ್ದುಪಡಿಸಬೇಕು ಮತ್ತು ಇದರ ಸಾಂವಿಧಾನಿಕತೆಯನ್ನು ಪರಿಶೀಲಿಸಬೇಕು ಎಂದು ಕೋರಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ವಿಭಾಗೀಯ ಪೀಠ, ಈ ಕುರಿತು ಕೇಂದ್ರ ಸರಕಾರದ ಅಭಿಪ್ರಾಯ ಕೇಳಿತ್ತು.
ವಿಚಾರಣೆಯ ವೇಳೆ ಕೆಲ ತೀಕ್ಷ್ಣ ಅಭಿಪ್ರಾಯಗಳನ್ನು ನ್ಯಾಯಪೀಠ ವ್ಯಕ್ತಪಡಿಸಿತ್ತು. ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ ಜಾಮೀನು ಸಿಗುವುದಿಲ್ಲ. ಇದು ಸರಕಾರದ ವಿರುದ್ಧದ ಯಾವುದೇ ಭಿನ್ನಾಭಿಪ್ರಾಯ ಅಥವಾ ಅಸಮಾಧಾನ ವ್ಯಕ್ತಪಡಿಸುವವರನ್ನು ಕೂಡ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಆರೋಪದಡಿ ಬಂಧಿಸಲು ಅವಕಾಶ ನೀಡುತ್ತದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು ಬ್ರಿಟಿಷ್ ಅಧಿಕಾರಿಗಳು ಇದೇ ಕಾಯಿದೆ ಬಳಸುತ್ತಿದ್ದರು. ಸ್ವಾತಂತ್ರ್ಯ ಬಂದು 75 ವರ್ಷದ ನಂತರವೂ ಈ ಕಾಯಿದೆಯ ಅಗತ್ಯವಿದೆಯೇ? ಕೇಂದ್ರ ಸರಕಾರ ಏಕೆ ಈ ಕಾಯ್ದೆಯನ್ನು ರದ್ದುಪಡಿಸುತ್ತಿಲ್ಲ ಎಂದು ಪ್ರಶ್ನಿಸಿತ್ತು.